ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shashidhara Halady Column: ಘಮಘಮಿಸುವ ಆ ವ್ಯಂಜನವನ್ನು ತಯಾರಿಸುವ ಕಾಲ !

ತುಸು ಜರ್ಜರಿತವಾಗಿದ್ದರೂ, ತನ್ನ ಮೂಲ ಸ್ವರೂಪವನ್ನು ಸ್ವಲ್ಪಮಟ್ಟಿಗೆ ಉಳಿಸಿಕೊಂಡು, ಇಂದಿಗೂ ಜೀವ ಹಿಡಿದುಕೊಂಡಿರುವ ಒಂದು ಮಾವಿನ ತೋಪನ್ನು ನೋಡುವ ಅವಕಾಶ ಕಳೆದ ವಾರ ದೊರಕಿತು. ಟಿ.ನರಸೀಪುರಕ್ಕೆ ಹೋಗುವ ದಾರಿಯಲ್ಲಿ, ರಸ್ತೆಯಿಂದ ತುಸು ದೂರ ದಲ್ಲಿರುವ ಈ ಮಾವಿನ ತೋಪನ್ನ ಕಂಡು, ನಿಜಕ್ಕೂ ಆಶ್ಚರ್ಯವಾಯಿತು!

ಶಶಾಂಕಣ

ನಮ್ಮ ರಾಜ್ಯದಲ್ಲಿ ಸ್ವತಂತ್ರ ಪೂರ್ವದಲ್ಲಿ ಹೆಚ್ಚಿನ ಎಲ್ಲಾ ಊರುಗಳಲ್ಲೂ ‘ತೋಪು’ ಅಥವಾ ‘ಮಾವಿನ ತೋಪು’ ಇರುತ್ತಿತ್ತಂತೆ; ಹಿರಿಯ ತಲೆಮಾರಿನ ಕಾದಂಬರಿಕಾರರು, ಹಳ್ಳಿಯ ಪರಿಸರವನ್ನು ವರ್ಣಿಸುವಾಗ, ಊರಿನಿಂದಾಚೆ ಇರುವ ತೋಪು, ಅದರಲ್ಲಿನ ಮರಗಳು, ಅವುಗಳನ್ನು ಊರಿನವರು ಕಾಪಾಡುವ ರೀತಿ, ಆ ಮರಗಳಿಂದ ಸಿಗುವ ಕಾಯಿ ಗಳು, ಹಣ್ಣುಗಳ ಕುರಿತು ಬರೆಯುತ್ತಿದ್ದುದುಂಟು. ಸ್ವಾತಂತ್ರ್ಯ ಬಂದ ನಂತರ, ಹಳ್ಳಿ ಮಟ್ಟದ ಪುಡಿ ರಾಜಕಾರಣಿಗಳು, ಗೂಂಡಾ ಮನಸ್ಥಿತಿಯ ಜನರು ಮೊದಲು ಕೈ ಹಾಕಿದ್ದೇ ಈ ತೋಪುಗಳಿಗೆ!

ಅಂದರೆ, ಸಾಮೂಹಿಕ ಒಡೆತನದ, ದಾಖಲೆಗಳಲ್ಲಿ ಸರಕಾರಕ್ಕೆ ಸೇರಿದ ಜಾಗಗಳಲ್ಲಿದ್ದ ಮರಗಳನ್ನು ಅನಧಿಕೃತವಾಗಿ ಕಡಿತಲೆ ಮಾಡಿ, ಕಳ್ಳ ಸಾಗಾಣಿಕೆ ಮಾಡಿ ಮಾರುವುದು! ಅದರಿಂದ ಬಂದ ದುಡ್ಡನ್ನು ಸ್ವಂತಕ್ಕೆ ಅಥವಾ ರಾಜಕೀಯಕ್ಕೆ ಬೆಳೆಸಿಕೊಂಡು, ಹಂತ ಹಂತವಾಗಿ ಮೇಲ್ಮಟ್ಟಕ್ಕೆ ಏರುವುದು - ಇದು ಕೆಲವು ಪುಡಿ ರಾಜಕಾರಣಿಗಳ, ಸ್ಥಳೀಯ ನಾಯಕರ ‘ಹವ್ಯಾಸ’ವೇ ಆಗಿತ್ತು.

ಜತೆಗೆ, ಊರಿನ ಹೊರವಲಯದಲ್ಲಿದ್ದಿರಬಹುದಾದ ಇಂತಹ ತೋಪುಗಳ ನಾಶಕ್ಕೆ, ಊರಿನಲ್ಲಿ ಸಡಿಲಗೊಂಡ ಪರಸ್ಪರ ವಿಶ್ವಾಸ, ಸಾಮೂಹಿಕ ಕಟ್ಟಲೆಗಳೂ ಕಾರಣವಿರ ಬಹುದು. ಹಲವು ದಶಕಗಳಿಂದ ರಕ್ಷಿಸಿಕೊಂಡು ಬಂದಿದ್ದ ಪುರಾತನ ಮರಗಳನ್ನು ಯಾವ್ಯಾವುದೋ ಉದ್ದೇಶಕ್ಕೆ ಕಡಿಯವುದು, ಅಂತಹ ಜಾಗಗಳಲ್ಲಿ ಮತ್ತೆ ಮರಗಿಡಗಳನ್ನು ಬೆಳೆಸದೇ ಇರುವುದು, ಮೇಕೆಗಳಿಗೆ ಆ ಮರಗಳ ಕೊಂಬೆಗಳನ್ನು ಕಡಿದು ತಿನ್ನಿಸುವುದು, ಹಳ್ಳಿಯ ಸಾರ್ವಜನಿಕ ಉದ್ದೇಶಕ್ಕೆ ಅಧಿಕೃತವಾಗಿಯೇ ತೋಪುಗಳಿದ್ದ ಜಾಗಗಳನ್ನು ಬಳಸುವುದು - ಇಂತಹ ಚಟುವಟಿಕೆಗಳಿಂದಲೂ ಹಲವು ಊರುಗಳಲ್ಲಿದ್ದ ತೋಪುಗಳು ನಾಶವಾಗಿ ಹೋಗಿವೆ.

ತುಸು ಜರ್ಜರಿತವಾಗಿದ್ದರೂ, ತನ್ನ ಮೂಲ ಸ್ವರೂಪವನ್ನು ಸ್ವಲ್ಪಮಟ್ಟಿಗೆ ಉಳಿಸಿ ಕೊಂಡು, ಇಂದಿಗೂ ಜೀವ ಹಿಡಿದುಕೊಂಡಿರುವ ಒಂದು ಮಾವಿನ ತೋಪನ್ನು ನೋಡುವ ಅವಕಾಶ ಕಳೆದ ವಾರ ದೊರಕಿತು. ಟಿ.ನರಸೀಪುರಕ್ಕೆ ಹೋಗುವ ದಾರಿಯಲ್ಲಿ, ರಸ್ತೆಯಿಂದ ತುಸು ದೂರದಲ್ಲಿರುವ ಈ ಮಾವಿನ ತೋಪನ್ನ ಕಂಡು, ನಿಜಕ್ಕೂ ಆಶ್ಚರ್ಯವಾಯಿತು!

ಇದನ್ನೂ ಓದಿ: Shashidhara Halady Column: ಸುದ್ದಿಯೊಂದು ವೈರಲ್ ಆಗಲು ಏನೇನು ಬೇಕು ?

ಇಪ್ಪತ್ತೊಂದನೆಯ ಶತಮಾನದ ಎರಡು ದಶಕಗಳ ಕಳೆದ ನಂತರವೂ, ಅಭಿವೃದ್ಧಿಯ ಕಾಮಗಾರಿಗಳಿಗಾಗಿ ಬಲಿಯಾಗದೇ, ಕಳ್ಳತನದಿಂದ ಮರಕಡಿತಕ್ಕೆ ಒಳಗಾಗದೇ ಇಂತಹ ದೊಂದು ತೋಪು ಮತ್ತು ಅದರಲ್ಲಿನ ಮರಗಳು ಇಂದಿಗೂ ಉಳಿದು ಬಂದಿರುವುದು, ನಿಜಕ್ಕೂ ವಿಶೇಷ.

ಹತ್ತಾರು ಪುರಾತನ ಮರಗಳನ್ನು, ಅವುಗಳಲ್ಲಿ ಕೆಲವು ಮಾವಿನ ಮರಗಳನ್ನೂ ರಕ್ಷಿಸಿ, ಊರಿನ ಸಮಸ್ತ ಜನರ ಸಾಮೂಹಿಕ ಒಡೆತನದ ಆ ತೋಪನ್ನು ಉಳಿಸಿಕೊಂಡು ಬಂದಿರುವುದಕ್ಕಾಗಿ, ಆ ಹಳ್ಳಿಯವರನ್ನು ಅಭಿನಂದಿಸಲೇಬೇಕು. ಅಲ್ಲಿರುವ ಭಾರೀಗಾತ್ರದ ಮರಗಳನ್ನು ರಕ್ಷಿಸುವ ಮೂಲಕ, ಹಕ್ಕಿಗಳಿಗೆ, ಇತರ ಜೀವಿಗಳಿಗೆ ಆಶ್ರಯ ನೀಡಿವುರ ಮೂಲಕ ಅವರು ಸಣ್ಣಮಟ್ಟದ ಪರಿಸರ ರಕ್ಷಣೆಯನ್ನೇ ಮಾಡುತ್ತಿದ್ದಾರೆ.

ಅಪರೂಪದ ತೋಪು ಮತ್ತು ಮರಗಳನ್ನು ಉಳಿಸಿಕೊಂಡಿರುವ ಆ ಹಳ್ಳಿಯ ಹೆಸರನ್ನು ನಾನಿಲ್ಲಿ ಹೇಳುವುದಿಲ್ಲ; ಅದಕ್ಕೊಂದು ಕಾರಣವೂ ಇದೆ. ಅಲ್ಲಿನ ಅಮೂಲ್ಯ ಎನಿಸುವ ಮರ ಇರುವ ಜಾಗವನ್ನು ಈ ಅಂಕಣದಲ್ಲಿ ಬರೆಯುವದರಿಂದಾಗಿ, ಆ ತೋಪಿನ ಮೌಲ್ಯ ವನ್ನು ಪರಿಚಯ ಮಾಡಿಕೊಟ್ಟಂತಾಗಿ, ಯಾರಾದರೂ ಮರಗಳ್ಳರ ಕಣ್ಣಿಗೆ ಬಿದ್ದು, ಅವರು ತಮ್ಮ ಕರಾಮತ್ತು ತೋರಿಸಿಯಾರು, ಅಲ್ಲಿರುವ ಆ ಒಂದು ಬೃಹತ್ ಮರದ ಖ್ಯಾತಿಯೇ ಅದಕ್ಕೆ ಮುಳುವಾಗಬಾರದು ಎಂಬುದೇ ಇದಕ್ಕೆ ಕಾರಣ.

ಆ ತೋಪಿನ ಹತ್ತಾರು ಮರಗಳ ಪೈಕಿ, ಅಮೂಲ್ಯ ಮತ್ತು ಅತಿ ಅಪರೂಪವೆಂದರೆ, ಅಲ್ಲಿರುವ ಒಂದು ಬೃಹತ್ ಮಾವಿನ ಮರ. ಸರಳವಾಗಿ ಹೇಳಬೇಕೆಂದರೆ, ಆ ಮಾವಿನ ಮರದಷ್ಟು ವಿಶಾಲವಾದ, ಎತ್ತರವಾದ, ದಪ್ಪವಾದ ಇನ್ನೊಂದು ಮಾವಿನ ಮರವನ್ನು ನಾನು ಇದುವರೆಗೆ ಕಂಡಿಲ್ಲ!

Tree ok

ಸುಮಾರು ಹದಿನೈದು ಅಡಿ ಅಗಲದ ಕಾಂಡ, ಎಪ್ಪತ್ತರಿಂದ ನೂರು ಅಡಿ ಎತ್ತರದ ಆ ಮರವು, ವಿಶಾಲವಾದ ಕ್ಯಾನೊಪಿಯನ್ನೂ ಹೊಂದಿದೆ. ಅದರ ಕಾಂಡ ಎಷ್ಟು ದಪ್ಪವೆಂದರೆ, ಮೂರು ಜನರು ಅದನ್ನು ಬಳಸಿ ಹಿಡಿಯಬಹುದು!

ಈ ಬೃಹತ್ ಮಾವಿನ ಮರದ ರೆಂಬೆ ಕೊಂಬೆಗಳಲ್ಲಿವೆ, ಸಾವಿರಾರು ಮಾವಿನ ಕಾಯಿಗಳು! ರೆಂಬೆ ಕೊಂಬೆಯ ಟಿಸಿಲುಗಳಲ್ಲಿ, ಮೂಲೆಮೂಲೆಗಳಲ್ಲಿ ಪುಟ್ಟ ಪುಟ್ಟ ಸಾವಿರಾರು ಮಾವಿನಕಾಯಿಗಳ ಗೊಂಚಲುಗಳು ನೇತಾಡುತ್ತಿವೆ. ಮಾವಿನ ಕಾಯಿಯ ಗಾತ್ರ ತುಸು ಚಿಕ್ಕದು; ಕೆಲವು ಲಿಂಬೆ ಗಾತ್ರದಲ್ಲಿದ್ದವು, ಇನ್ನು ಕೆಲವು ನೆಲ್ಲಿ ಕಾಯಿಯ ಗಾತ್ರದಲ್ಲಿದ್ದವು. ಆದರೆ ಅವುಗಳ ಸಂಖ್ಯೆ ಮಾತ್ರ ಬೆರಗು ಹುಟ್ಟಿಸುವಷ್ಟು. ಮೇಲ್ನೋಟಕ್ಕೆ ಮಲೆನಾಡಿನ ಮಾವಿನ ಮಿಡಿಯನ್ನೇ ಹೋಲುತ್ತಿದ್ದ ಆ ಮಾವಿನ ಕಾಯಿಗಳನ್ನು ಕಂಡಾಕ್ಷಣ, ಸಂಗ್ರಹಿಸಿ, ಉಪ್ಪಿನಕಾಯಿ ಮಾಡಬೇಕು ಎನಿಸಿತು!

ಆ ಬೃಹತ್ ಮಾವಿನ ಮರದ ಆಕಾರವನ್ನು ಕಂಡು ಬೆರಗಿನಿಂದ ನೋಡುತ್ತಿರುವಾಗ, ಸ್ಥಳೀಯರಾದ ಒಬ್ಬ ಹಿರಿಯ ವ್ಯಕ್ತಿ ಬೈಕ್‌ನಲ್ಲಿ ಬಂದರು : ‘ಸಾರ್, ಮಾವಿನ ಕಾಯಿ ಬೇಕಿದ್ದರೆ ಕಿತ್ಕೊಳಿ ಸಾರ್’ ಎಂದರು. ಸುಮಾರು ಎಪ್ಪತ್ತು ವರ್ಷ, ಪ್ಯಾಂಟು ಅಂಗಿ ಧರಿಸಿದ ದಢೂತಿ ಗ್ರಾಮೀಣ ವ್ಯಕ್ತಿ. ಬೈಕ್‌ನಲ್ಲಿ ಹೋಗುತ್ತಿದ್ದವರು, ನಮ್ಮನ್ನು ಕಂಡು ಕುತೂಹಲ ದಿಂದ ಮಾತನಾಡಿಸಿದ್ದರು.

‘ನಿಮ್ಮ ಊರಿನ ಮರಗಳು, ನಾವು ಹೊರಗಿನಿಂದ ಬಂದವರು ಕೊಯ್ದರೆ ಯಾರೂ ಕೇಳೊಲ್ಲವಾ?’ ಎಂದೆ. ಹಾಗೇನಿಲ್ಲ ಸರ್, ನಾನೇ ಇದೀನಲ್ಲ. ನಾಲ್ಕಾರು ಮಾವಿನ ಕಾಯಿ ಕೊಯ್ಕಳಿ. ಅದಕ್ಕೇನಂತೆ. ಸಾವಿರಾರು ಮಾವಿನ ಕಾಯಿಗಳಿವೆ’ ಎಂದರು ಅವರು.

‘ಇಂತಹ ಎಷ್ಟು ಮರ ಇವೆ?’ ‘ಇದು ನಮ್ಮ ಹಳ್ಳಿಯ ಮಾವಿನ ತೋಪು. ಈಗ ಇಲ್ಲಿ ಹತ್ತು ಹನ್ನೆರಡು ಮರಗಳಿವೆ. ಹಿಂದೆ ಇನ್ನೂ ಜಾಸ್ತಿ ಮರಗಳಿದ್ದವು. ಇವುಗಳಲ್ಲಿ ಈಗ ನಾಲ್ಕಾರು ಮಾವಿನ ಮರ ಇವೆ. .’ ಎಂದ ಅವರು, ಆ ಹಳ್ಳಿಯ ಮಾವಿನ ತೋಪಿನ ವಿವರಗಳನ್ನು ನೀಡುತ್ತಾ ಹೋದರು.

ಇಲ್ಲಿ ಹಲವು ಮಾವಿನ ಮರಗಳಿದ್ದವಂತೆ. ಈಗ ಕೆಲವೇ ಉಳಿದಿವೆ. ಇದರ ಕಾಯಿಗಳನ್ನು ಸ್ಥಳೀಯರು ಉಪ್ಪಿನಕಾಯಿಗೆ ಬಳಸುವುದಿಲ್ಲವಂತೆ; ಏಕೆಂದರೆ, ಆ ಪುಟಾಣಿ ಮಾವಿನ ಕಾಯಿಗಳನ್ನು ಉಪ್ಪಿಗೆ ಹಾಕಿ, ಮಿಡಿ ಉಪ್ಪಿನ ಕಾಯಿ ಮಾಡುವ ಸಂಪ್ರದಾಯ ಆ ಪ್ರದೇಶದಲ್ಲಿಲ್ಲ. ಅಲ್ಲಿ ಏನಿದ್ದರೂ, ದೊಡ್ಡ ದೊಡ್ಡ ಮಾವಿನ ಕಾಯಿಗಳಿಂದ ಉಪ್ಪಿನ ಕಾಯಿ ಮಾಡುವ ಪದ್ಧತಿ. ಆದ್ದರಿಂದ, ಚಿಕ್ಕ ಗಾತ್ರದ ಈ ಮಾವಿನ ಕಾಯಿಗಳು ಹಾಗೆಯೇ ಉಳಿದಿದ್ದವು.

‘ಲಿಂಬೆ ಕಾಯಿಯಷ್ಟು ಬೆಳೆದ ನಂತರ, ಹಣ್ಣಾಗಿ ಬೀಳುತ್ತವೆ. ಹುಳಿ ಹಣ್ಣು’ ಎಂದರು ಆ ಹಿರಿಯರು. ಅಷ್ಟು ದೊಡ್ಡ ಮರದಿಂದ ಕಾಯಿಗಳನ್ನು ನಾವು ಕೊಯ್ಯುವುದಾದರೂ ಹೇಗೆ ಎಂಬುದಕ್ಕೆ ಅವರಲ್ಲಿ ಉತ್ತರವಿರಲಿಲ್ಲ. ಒಂದೆರಡು ಕಲ್ಲು ಹೊಡೆದೆ; ಕಾಯಿ ಉದುರ ಲಿಲ್ಲ. ಆ ಮರವನ್ನು ಹತ್ತಲು ನಮ್ಮಂತಹವರಿಂದ ಖಂಡಿತಾ ಸಾಧ್ಯವಿರಲಿಲ್ಲ. ಅಷ್ಟು ದೊಡ್ಡ ಮಾವಿನ ಮರ ಈ ಬಯಲು ಸೀಮೆಯಲ್ಲಿ ಉಳಿದಿರುವುದೇ ವಿಶೇಷ,

ಆಶ್ಚರ್ಯ. ಮಾತನಾಡಲು ಸಿಕ್ಕಿದ ಆ ಹಿರಿಯರು ಬಾಲಕನಾಗಿದ್ದಾಗಲೂ, ಈ ಮಾವಿನ ಮರವು ಅಷ್ಟೇ ಎತ್ತರವಾಗಿತ್ತಂತೆ! ಅಂದರೆ, ಆ ಅಪರೂಪದ ಮಾವಿನ ಮರಕ್ಕೆ ಕನಿಷ್ಟ ಇನ್ನೂರು ವರ್ಷ ಆಗಿರಲೇಬೇಕು. ಆ ಮರದ ಅಡಿ ಬಿದ್ದಿದ್ದ ಆರೆಂಟು ಪುಟಾಣಿ ಮಾವಿನ ಕಾಯಿಗಳನ್ನು ಮನೆಗೆ ತಂದು ಚಟ್ನಿ ಮಾಡಿದಾಗ, ರುಚಿಕರವಾಗಿತ್ತು.

ಬಯಲುಸೀಮೆಯ ಆ ಅಪರೂಪದ ಬೃಹತ್ ಮಾವಿನ ಮರವನ್ನು, ಮಾವಿನ ತೋಪನ್ನು ಕಂಡಾಗ, ನಮ್ಮ ಹಳ್ಳಿಯ ‘ಮಾವಿನ ಮಿಡಿ’ ಯ ನೆನಪು ಮಾಡಿಕೊಂಡೆ. ನಮ್ಮ ರಾಜ್ಯದ ಕರಾವಳಿ ಮತ್ತು ಮಲೆನಾಡಿನವರಿಗೆ ಮಾತ್ರ ಪರಿಚಿತವಾಗಿದ್ದ ‘ಮಾವಿನ ಮಿಡಿ’ ಮತ್ತು ‘ಮಿಡಿ ಉಪ್ಪಿನ ಕಾಯಿ’ ಈಗ, ಬಹುಪಾಲು ಎಲ್ಲರಿಗೂ ಪರಿಚಿತ.

ಆನ್‌ಲೈನ್‌ನಲ್ಲೂ ಈಗ ಮಾವಿನ ಮಿಡಿ ಉಪ್ಪಿನ ಕಾಯಿಯನ್ನು ಖರೀದಿಸುವ ಅವಕಾಶ ವಿರುವುದರಿಂದ, ಉಪ್ಪಿನಕಾಯಿ ಪ್ರಿಯರೆಲ್ಲರೂ ಒಂದು ಬಾರಿಯಾದರೂ ಮಿಡಿ ಉಪ್ಪಿನ ಕಾಯಿಯ ರುಚಿಯನ್ನು ನೋಡಿರುತ್ತಾರೆ. ನಮ್ಮ ಹಳ್ಳಿಯಲ್ಲಿ ಪುರಾತನ ಕಾಲದಿಂದಲೂ ತಯಾರಿಸಿಕೊಂಡು ಬಂದಿರುವ ಮಾವಿನ ಮಿಡಿ ಉಪ್ಪಿನಕಾಯಿಯು, ಅಪರೂಪದ ಔಷಧಿಯ ಗುಣವನ್ನೂ (ಪ್ರೊಬಯೊಟಿಕ್ಸ್) ಹೊಂದಿದೆ ಎಂದು ಇತ್ತೀಚೆಗೆ ನನಗೆ ಗೊತ್ತಾ ದಾಗ, ಸಣ್ಣಗೆ ಅಚ್ಚರಿಯೂ ಆಯಿತು.

ನಮ್ಮ ಹಳ್ಳಿಯ ಸುತ್ತಮುತ್ತಲೂ ಮಾವಿನ ಮಿಡಿಗಳು ಕೈಗೆ ಸಿಗುವುದು ಇದೇ ಸೀಸನ್‌ನಲ್ಲಿ, ಮಾರ್ಚ್ - ಏಪ್ರಿಲ್ ಸಮಯದಲ್ಲಿ. (ಒಂದೊಂದು ವರ್ಷ ಇನ್ನೂ ಬೇಗನೆ ಮಿಡಿ ಬಿಡಿವು ದುಂಟು). ಗಾತ್ರದಲ್ಲಿ ಸಣ್ಣದಾದರೂ, ನಮ್ಮ ಹಳ್ಳಿಯ ಸುತ್ತ ಮುತ್ತ ಸಿಗುತ್ತಿದ್ದ ಕಾಟು ಮಾವಿನ ಮಿಡಿಗಳ ಪರಿಮಳ ಮತ್ತು ರುಚಿವೈವಿಧ್ಯಕ್ಕೆ ಸಾಟಿಯೇ ಇಲ್ಲ!

ಈ ಮಿಡಿಗಳು ಎಳೆಯದಾಗಿದ್ದಾಗ, ಅವುಗಳನ್ನು ಕೊಯ್ದು ಉಪ್ಪಿನ ಕಾಯಿ ಮಾಡುವ ಪರಿಪಾಠ ಇಂದಿಗೂ ಉಳಿದುಬಂದಿದೆ. ಕೆಲವು ಮರಗಳ ಮಿಡಿಯ ಉಪ್ಪಿನಕಾಯಿ ಬಹಳ ರುಚಿ; ಅಪ್ಪೆ ಮಿಡಿ, ಜೀರಿಗೆ ಮಿಡಿ ಎಂದು ವಿವಿಧ ಹೆಸರುಗಳಿಂದ ಮಿಡಿಗಳನ್ನು ಗುರುತಿಸು ವುದುಂಟು.

ಜೀರಿಗೆ ಮಿಡಿ ಇನ್ನಷ್ಟು ರುಚಿಕರ. ಜತೆಗೆ, ವರ್ಷಗಟ್ಟಲೆ (ಮೂರರಿಂದ ಐದು ವರ್ಷ) ಆ ಮಿಡಿಯ ಉಪ್ಪಿನ ಕಾಯಿ ಬಾಳಿಕೆ ಬರುತ್ತದೆ ಎಂಬುದು ನಮ್ಮೂರ ಅಜ್ಜಿಯರ ಅನುಭವ. ಆರು ತಿಂಗಳೋ, ವರ್ಷವೋ ಭದ್ರವಾಗಿದ್ದ ಉಪ್ಪಿನ ಕಾಯಿಯ ಜಾಲಿಯ ಬಾಯಿಗೆ ಕಟ್ಟಿದ ಬಟ್ಟೆಯನ್ನು ಬಿಚ್ಚಿ, ಒಳಗೆ ನೋಡಿದರೆ, ಸಣ್ಣದಾದ ಒಂದು ಬೂಸ್ಟಿನಂತಹ ಪದರ ಇರುತ್ತದೆ; ಅದನ್ನು ಬದಿಗೆ ಸರಿಸಿ ಉಪ್ಪಿನ ಕಾಯಿಯನ್ನು ಸ್ವಲ್ಪ ತೆಗೆದುಕೊಂಡು, ಪುನಃ ಅದೇ ರೀತಿ ಬಟ್ಟೆ ಕಟ್ಟಿಟ್ಟು, ಜಾಲಿಯನ್ನು ಅಟ್ಟದ ಮೇಲೆ ಇಡುತ್ತಿದ್ದರು. ಆಗ ಕಾಣಿಸುವ ಬೂಸ್ಟ್‌ನಂತಹ ಪದರದಿಂದ ಆರೋಗ್ಯಕ್ಕೆ ಹಾನಿಯಿಲ್ಲ.

ಹಲವು ತಿಂಗಳುಗಳ ಕಾಲ ಹೀಗೆ ಇಟ್ಟ ಉಪ್ಪಿನಕಾಯಿಯ ರಸದಲ್ಲಿ, ನಿಧಾನವಾಗಿ ನಡೆಯುವ ಜೈವಿಕ ಬದಲಾವಣೆಯಿಂದಾಗಿ, ಪ್ರೊಬಯೊಟಿಕ್ಸ್ ಎನಿಸುವ ಅಂಶ ಉತ್ಪತ್ತಿ ಯಾಗುತ್ತದೆ ಎಂದು ಈಚಿನ ವಿಜ್ಞಾನ ಕಂಡುಕೊಂಡಿದೆ! ಅದಿರಲಿ. ಒಳ್ಳೆಯ ಮಿಡಿ ಮಾವಿನಕಾಯಿಯನ್ನು ಸರಿಯಾಗಿ ಉಪ್ಪು ಹಾಕಿ ನೆನೆಸಿ, ಚಿರುಟಿಸಿ, ನೀರಿನ ಪಸೆ ತಾಗದಂತೆ ನೋಡಿಕೊಂಡು, ಜಾಗ್ರತೆಯಿಂದ ಉಪ್ಪಿನ ಕಾಯಿ ಮಾಡಿ, ಜಾಲಿಯಲ್ಲಿ ಹಾಕಿಟ್ಟರೆ ಮೂರು ವರ್ಷ ಆರಾಮಾಗಿ ಬಳಸಬಹುದು.

ಮೂರು ವರ್ಷ ಮಿಡಿಯನ್ನು ಜಾಲಿಯಲ್ಲಿಟ್ಟು, ತೆಗೆದು ಉಪಯೋಗಿಸಿದಾಗ, ಅದರ ರುಚಿ ಮೂಲದಲ್ಲಿದ್ದಂತೆಯೇ ಇರುವುದನ್ನು ನಮ್ಮ ಮನೆಯಲ್ಲೇ ನೋಡಿದ್ದೇನೆ. ಈ ಅನುಭವದ ಮೇಲೆ ಹೇಳುವುದಾದರೆ, ಮಿಡಿ ಉಪ್ಪಿನ ಕಾಯಿಯನ್ನು ಇನ್ನೂ ಕೆಲವು ವರ್ಷ ಇಡಬಹುದು ಎಂದು ನನ್ನ ಅನುಮಾನ.

ಒಂದೊಂದು ಮರದ ಮಿಡಿಯೂ ವಿಭಿನ್ನ ರುಚಿಯಾಗಿದ್ದರಿಂದಾಗಿ, ನಮ್ಮ ಊರಿನ ಅಜ್ಜಿಯರಿಗೆ ಪ್ರತಿ ವರ್ಷ ಹಲವು ಬಾರಿ ಉಪ್ಪಿನ ಕಾಯಿ ಮಾಡುವ ಉಮೇದು, ಉತ್ಸಾಹ. ಒಣ ಮೆಣಸಿನ ಕಾಯಿ ಮನೆಯಲ್ಲಿ ಸಾಕಷ್ಟು ಇದ್ದರೆ, ಬೇರೆ ಬೇರೆ ಮರಗಳ ಮಿಡಿಯನ್ನು ತರಿಸಿ, ಉಪ್ಪಿನಲ್ಲಿ ನೆನಸಿ, ಚಿರುಟಿಸಿ ಉಪ್ಪಿನ ಕಾಯಿ ಮಾಡಿಯಾರು ನಮ್ಮ ಹಳ್ಳಿಯ ಅಜ್ಜಿಯಂದಿರು. ನಮ್ಮ ಮನೆಯಲ್ಲಿ ಪಡಸಾಲೆಯ ತುಂಬಾ ಚಿರುಟಿಸಿದ ಮಿಡಿಯನ್ನು ಆರಲು, ಒಣಗಿಸಲು ಹರಡುವ ಪದ್ಧತಿ ಇತ್ತು.

ಆದರೆ, ಮಿಡಿ ಉಪ್ಪಿನಕಾಯಿಯ ಸಂಸ್ಕೃತಿ ನಿಧಾನವಾಗಿ ಕಣ್ಮರೆಯಾಗುತ್ತಿದೆ! ನಮ್ಮ ಹಳ್ಳಿಯ ಅನುಭವದಲ್ಲೇ ಹೇಳುವುದಾದರೆ, ಒಳ್ಳೆಯ ಮಿಡಿ ನೀಡುವ ಮಾವಿನ ಮರಗಳೇ ಕ್ರಮೇಣ ಕಣ್ಮರೆಯಾಗುತ್ತಿವೆ. ದೊಡ್ಡ ದೊಡ್ಡ ಮರಗಳೇ ಅಪರೂಪವಾಗುತ್ತಿವೆ.

ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಇಂತಹದೊಂದು ಕಳವಳವು ಮಲೆನಾಡು ಮತ್ತು ಕರಾವಳಿಯ ಜನರಲ್ಲಿ ವ್ಯಕ್ತವಾಗಿತ್ತು - ಹಳೆಯ ಕಾಟು ಮಾವಿನ ಮರಗಳು ಸಾಯು ತ್ತಿವೆ, ಕಡಿದು ಮಾರಲಾಗುತ್ತಿದೆ, ಆ ಜಾಗದಲ್ಲಿ ಹೊಸದಾಗಿ ಕಾಟು ಮಾವಿನ ಮರಗಳು ಬೆಳೆಯಲು ಅವಕಾಶವಾಗುತ್ತಿಲ್ಲ ಎಂದು.

ಆ ಕಳವಳವು ಇಂದು ಪುಟ್ಟದೊಂದು ದುರಂತದ ಸ್ಥಿತಿಯನ್ನು ತಲುಪಿದೆ; ನಮ್ಮ ಸುತ್ತಲಿನ ಎಷ್ಟೋ ಹಾಡಿಗಳಲ್ಲಿ ಇಂದು ಹಳೆಯಾದ, ಉತ್ತಮ ರುಚಿ ನೀಡುವ ಕಾಯಿ ಬಿಡುವ ಮಾವಿನ ಮರಗಳೇ ಇಲ್ಲ! ಹಿಂದೆ ಮಾವಿನಮರಗಳನ್ನೂ ಒಳಗೊಂಡಂತೆ, ನಾನಾ ಜೀವ ವೈವಿಧ್ಯ ಹೊಂದಿದ್ದ ಕಾಡುಗಳಿದ್ದ ಹಲವು ಪ್ರದೇಶಗಳಲ್ಲಿ ಇಂದು ಅಕೇಶಿಯಾ ಕಾಡು ಇದೆ ಅಥವಾ ಬೋಳು ಜಾಗವಿದೆ ಅಥವಾ ಸೈಟುಗಳಿವೆ.

ಈಚಿನ ಒಂದೆರಡು ದಶಕಗಳಲ್ಲಿ ಕಂಡ ‘ಅಭಿವೃದ್ಧಿ’ಯ ಕಾಮಗಾರಿಗಳಿಂದಾಗಿ, ಕೆಲವು ಬಾರಿ ಜನರ ಅವಜ್ಞೆಯಿಂದಾಗಿ, ಹಣದ ಆಸೆಗಾಗಿ ಮಾವಿನ ಮರಗಳನ್ನು ಕಡಿದು ಮಾರು ವಂತಹ ಅನಿವಾರ್ಯತೆಗೆ ಸಿಲುಕಿದ್ದರಿಂದಾಗಿ, ಅಪರೂಪದ ರುಚಿಕರ ಕಾಟು ಮಾವಿನ ಮರಗಳೇ ಬಹುತೇಕ ಕಣ್ಮರೆಯಾಗಿ ಹೋಗಿವೆ.

ಆದ್ದರಿಂದ ವೈವಿಧ್ಯಮಯ ರುಚಿಯ ಮಿಡಿ ಉಪ್ಪಿನ ಕಾಯಿಯೂ ಕಡಿಮೆಯಾಗಿದೆ ಎನ್ನಬಹುದು. ಕಾಡಿನ ಅಂಚಿನಲ್ಲಿ ತಮ್ಮಷ್ಟಕ್ಕೇ ತಾವು ಬೆಳೆಯುವ ಕಾಟು ಮಾವಿನ ಮರಗಳು ಸಾಕಷ್ಟು ಕಡಿಮೆಯಾಗಿವೆ. ಒಂದು ಕಾಟು ಮಾವಿನ ಮರವು ಬೆಳೆದು, ವಿಶಾಲ ವಾದ ಕ್ಯಾನೊಪಿಯನ್ನು ರೂಪಿಸಿಕೊಂಡು, ಸಾವಿರಾರು ಮಾವಿನ ಮಿಡಿಗಳನ್ನು ಕೊಡಲು ಹತ್ತಿಪ್ಪತ್ತು ವರ್ಷ ಬೇಕು.

ಅಷ್ಟು ಕಾಲ ಕಾಯುವ ತಾಳ್ಮೆ ಈಗಿನವರಿಗೆ ಇಲ್ಲ; ಬೇಕೆನಿಸಿದರೆ, ಅಂಗಡಿಯಿಂದಲೋ, ದೂರದೂರಿನಿಂದಲೋ ದುಡ್ಡು ಕೊಟ್ಟು ಉಪ್ಪಿನ ಕಾಯಿಯನ್ನೋ, ಮಿಡಿಯನ್ನೋ ಖರೀದಿಸಿದರಾಯ್ತು ಎಂಬ ಭಾವ.

ಮೊದಲೆಲ್ಲಾ, ವರ್ಷದ ಈ ತಿಂಗಳುಗಳಲ್ಲಿ ಮಾವಿನಕಾಯಿ ಉಪ್ಪಿನಕಾಯಿ ಮಾಡು ತ್ತಿದ್ದರು; ಈಗ ಪೇಟೆಯ ಸಂಪರ್ಕ ಇರುವ ಹಲವು ಕುಟುಂಬಗಳು ಮನೆಯಲ್ಲೇ ಉಪ್ಪಿನ ಕಾಯಿ ಮಾಡುವ ಸಂಪ್ರದಾಯವನ್ನು ಕೈಬಿಟ್ಟಿದ್ದಾರೆ. ಅದಕ್ಕೆ, ಪ್ರಾಮಾಣಿಕ ಕಾರಣಗಳೂ ಇರಬಹುದು. ನಮ್ಮ ಮನೆಯಲ್ಲಿ ಈ ವರ್ಷ 4 ಕಿಲೋ ಅಪ್ಪೆ ಮಿಡಿ ತರಿಸಿ, ಮಿಡಿ ಉಪ್ಪಿನಕಾಯಿ ಮಾಡಿದ್ದೇವೆ; ನಿಮ್ಮ ಮನೆಯಲ್ಲಿ?

ಶಶಿಧರ ಹಾಲಾಡಿ

View all posts by this author