ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಬಯಸಿದ್ದು ದೊರೆಯಬೇಕಾದರೆ ನಾವು ಅರ್ಹರಾಗಬೇಕು

ನಮಗೆ ಜೀವನದಲ್ಲಿ ಏನು ಬೇಕು ಎಂದು ನಾವು ಒಮ್ಮೆ ಮನಸ್ಸು ಮಾಡಿದರೆ, ಅದಕ್ಕಾಗಿ ಪರಿಶ್ರಮ ವಹಿಸತೊಡಗಿದರೆ ಅದರ ಬಗೆಗಿನ ಸಂಪೂರ್ಣ ಮಾಹಿತಿ ನಮ್ಮ ಕಣ್ಣ ಮುಂದೆ ಬರಲು ಪ್ರಾರಂಭ ವಾಗುತ್ತದೆ. ನಾವು ಮಾನಸಿಕವಾಗಿ ದೈಹಿಕವಾಗಿ ಸಿದ್ಧವಾದಾಗ ಮಾತ್ರ ನಮಗೆ ಏನು ಬೇಕೋ ಅದು ಲಭಿಸಲು ಸಾಧ್ಯ. ಎಲ್ಲವೂ ನಮ್ಮೊಳಗೇ ಇದೆ. ಏನು ಬೇಕು? ಏಕೆ ಬೇಕು? ಎಂದು ನಿರ್ಧರಿಸುವ ಮನಸ್ಸನ್ನು ನಾವು ಮಾಡಬೇಕು ಅಷ್ಟೇ...

ಒಂದೊಳ್ಳೆ ಮಾತು

ಒಬ್ಬ ತರುಣನಿಗೆ, ತಾನು ಪರಿಪೂರ್ಣ ಜ್ಞಾನಿಯೊಬ್ಬನ ಶಿಷ್ಯನಾಗಿ ಸಾಧನೆ ನಡೆಸಿದಂತೆ ಕನಸು ಬಿತ್ತು. ಆ ಕನಸನ್ನು ನನಸು ಮಾಡಿಕೊಳ್ಳುವ ಉತ್ಕಟ ಬಯಕೆ ಅವನಲ್ಲಿ ಉಂಟಾಯಿತು. ತಾನು ಜ್ಞಾನ ಪಡೆದರೆ, ಕನಸಿನಲ್ಲಿ ಕಂಡಂತೆ ಪರಿಪೂರ್ಣ ಗುರುವಿನ ಬಳಿಯೇ ಎಂದು ದೃಢ ನಿಶ್ಚಯ ಮಾಡಿಕೊಂಡ. ಹಾಗೆ ನಿರ್ಧರಿಸಿದ ದಿನವೇ ಅವನು ಮನೆ ಬಿಟ್ಟು ಹೊರಟ. ಊರೂರು ಅಲೆದ.

‘ಅಂಥ ಗುರುವನ್ನು ನೋಡಿದ್ದೀರಾ?’ ಎಂದು ಸಿಕ್ಕವರ ಬಳಿಯೆಲ್ಲ ವಿಚಾರಿಸಿದ. ನಿರಾಶಾದಾಯಕ ಉತ್ತರವೇ ದೊರೆಯುತ್ತಿದ್ದರೂ ತನ್ನ ನಿರ್ಧಾರ ದಲ್ಲಿ ಅಚಲನಾಗಿದ್ದ. ಹೀಗೆ ಅಲೆಯುತ್ತ ತರುಣ ಒಂದು ಕೊಳದ ಬಳಿ ಬಂದ. ಅಂದು ಮರ, ಅದರ ಕೆಳಗೊಬ್ಬ ಅಲೆಮಾರಿ ಮುದುಕ. ತರುಣ ಅವನನ್ನು ಉದ್ದೇಶಿಸಿ, “ನಿಮ್ಮನ್ನು ನೋಡಿದರೆ ಸಾಕಷ್ಟು ವಯಸ್ಸಾದಂತೆ ತೋರುತ್ತಿದೆ.

ದಯವಿಟ್ಟು ನಿಮ್ಮ ಬಗ್ಗೆ ಹೇಳಿ" ಅಂದ. ಮುದುಕ ತಾನೊಬ್ಬ ಅಲೆಮಾರಿಯೆಂದೂ ದೇಶ ದೇಶಗಳನ್ನು ಸುತ್ತಾಡಿ ಬಂದಿರುವೆ ನೆಂದೂ ಹೇಳಿದ.

ಇದನ್ನೂ ಓದಿ: Roopa Gururaj Column: ಉದ್ಧವನಿಗೆ ಜೀವನದ ಪಾಠವನ್ನು ಹೇಳಿದ ಕೃಷ್ಣ

“ನಾನು ಪರಿಪೂರ್ಣ ಗುರುವಿನ ಹುಡುಕಾಟದಲ್ಲಿದ್ದೇನೆ. ನೀವು ಎಡೆ ತಿರುಗಾಡಿ ಬಂದಿದ್ದೀರಿ. ಅಂಥ ಗುರು ಎಲ್ಲಿ ಸಿಗುವರೆಂದು ಹೇಳಬಹುದೇ?" ಎಂದು ತರುಣ ಕೇಳಿಕೊಂಡ. ಮುದುಕ ಒಂದಷ್ಟು ವಿಳಾಸಗಳನ್ನು ಕೊಟ್ಟು, ಅವರನ್ನು ಭೇಟಿ ಮಾಡುವಂತೆ ತಿಳಿಸಿದ. ತರುಣ ಸಂತೋಷದಿಂದ ಹೊರಟುಹೋದ. ಹೀಗೆ 12 ವರ್ಷಗಳು ಉರುಳಿದವು.

ಮುದುಕ ಮರದ ಕೆಳಗೆ ಕುಳಿತೇ ಇದ್ದ. ತರುಣನೀಗ ಪ್ರಬುದ್ಧನಾಗಿದ್ದ. ಮರದಡಿಯ ಮುದುಕನ ಬಳಿ ಬಂದವನೇ ನಮಸ್ಕರಿಸಿ ಕಾಲ ಬುಡದಲ್ಲಿ ಕುಳಿತು, “ನಾನು ಹುಡುಕುತ್ತಿದ್ದ ಪರಿಪೂರ್ಣ ಗುರು ನೀವೇ ಆಗಿದ್ದಿರಿ ಅಂತ ಅವತ್ತೇ ಯಾಕೆ ಹೇಳಲಿಲ್ಲ?" ಎಂದು ಹುಸಿಮುನಿಸಿನ ದನಿಯಲ್ಲಿ ಕೇಳಿದ. ನಂತರ ಆತ ತಲೆ ಎತ್ತಿ ನೋಡಿದಾಗ ಕನಸಲ್ಲಿ ಕಂಡ ಮರವೇ ಅದಾಗಿತ್ತು.

“ಅರೆ! ಅಂದು ನಾನು ಈ ಮರವನ್ನೂ ನೋಡಲಿಲ್ಲ; ನೋಡಿದ್ದರೆ ಆಗಲೇ ಗೊತ್ತಾಗಿ ಬಿಡುತ್ತಿತ್ತು" ಎಂದು ತರುಣ ತನ್ನನ್ನು ಬೈದುಕೊಂಡ. “ನಾನು ಅವತ್ತೇ ಯಾಕೆ ಹೇಳಲಿಲ್ಲ ಗೊತ್ತಾ?" ಎಂದು ಕೇಳಿದ ಮುದುಕ, “ನಾನೇನೋ ನಿನಗೆ ಗುರುವಾಗಲು ತಯಾರಿದ್ದೆ. ನೀನು ಶಿಷ್ಯನಾಗಲು ಇನ್ನೂ ಸಿದ್ಧವಿರಲಿಲ್ಲ. ನಿನಗೆ ಅನುಭವ- ಪ್ರಬುದ್ಧತೆಗಳ ಕೊರತೆಯಿತ್ತು. ಇಲ್ಲಿ ನಾನಿದ್ದೆ, ನಿನ್ನ ಕನಸಿನ ಮರವೂ ಇತ್ತು. ಆದರೂ ನೀನು ಗುರುತಿಸಲು ಸೋತೆ. ನಿನ್ನ ಕಣ್ಣುಗಳು ಹೊರ ಜಗತ್ತನ್ನು ಮಾತ್ರ ನೋಡುತ್ತಿದ್ದವು. ಅವು ಏನನ್ನೂ ಗುರುತಿಸಲಾಗದಷ್ಟು ಎಳಸಾಗಿದ್ದವು. ಈಗ ನೀನು ಮಾಗಿದ್ದೀಯ. ನಾನು ಬದುಕಿರುವಷ್ಟು ದಿನ ನೀನು ನನ್ನ ಶಿಷ್ಯನಾಗಿರುತ್ತೀಯ" ಎಂದ.

ಆ ಮಾತು ಕೇಳಿ ಶಿಷ್ಯ ಕಣ್ಣೀರು ಸುರಿಸಿದ. ಅದಾಗಲೇ ಅವರಿಂದ, ‘ಹುಡುಕಾಟಕ್ಕೆ ಒಳಗಣ್ಣು ತೆರೆಯುವುದು ಮುಖ್ಯ, ಅದು ಮುಚ್ಚಿಕೊಂಡಿದ್ದರೆ ಏನೂ ದೊರೆಯುವುದಿಲ್ಲ’ ಅನ್ನುವ ಮೊದಲ ಪಾಠ ಕಲಿತಿದ್ದ. ನೀವು ಗಮನಿಸಿದ್ದೀರಾ? ನಮಗೆ ಯಾವುದಾದರೂ ವಸ್ತುವಿನ/ವಿಷಯದ ಬಗ್ಗೆ ಆಸಕ್ತಿ ಮೂಡಿದಾಗ, ಅದೇ ವಸ್ತು ಅಥವಾ ವಿಷಯದ ಬಗ್ಗೆ ನಮಗೆ ಸಾಕಷ್ಟು ಮಾಹಿತಿ ಕಣ್ಣ ಮುಂದೆ ಬರುತ್ತಾ ಹೋಗುತ್ತದೆ. ಇದು ಕಾಕತಾಳೀಯ ಎನಿಸುವುದೂ ಉಂಟು.

ಇಷ್ಟು ದಿನ ಈ ವಿಷಯದ ಬಗ್ಗೆ ನಮಗೆ ಏಕೆ ಗೊತ್ತಿರಲಿಲ್ಲ ಅಥವಾ ಅಂಥ ವಿಷಯ ನಮ್ಮ ಕಣ್ಣ ಮುಂದೆ ಏಕೆ ಬರಲಿಲ್ಲ? ಎಂದು ನಾವು ಯೋಚಿಸುವಂತಾಗುತ್ತದೆ. ಆದರೆ ತಮಾಷೆ ಏನು ಗೊತ್ತಾ? ಅಂಥ ವಿಷಯಗಳು ಸದಾ ನಮ್ಮ ಕಣ್ಣ ಮುಂದೆ ಸುಳಿದಾಡುತ್ತಿರುತ್ತವೆ. ಆದರೆ ನಮಗೆ ಬೇಕು ಎಂದಾಗ ಮಾತ್ರ ನಾವು ಅದನ್ನು ಹೆಚ್ಚು ಗಮನಿಸುತ್ತಾ ಹೋಗುತ್ತೇವೆ. ಆದ್ದರಿಂದಲೇ ನಮಗೆ ಜೀವನದಲ್ಲಿ ಏನು ಬೇಕು ಎಂದು ನಾವು ಒಮ್ಮೆ ಮನಸ್ಸು ಮಾಡಿದರೆ, ಅದಕ್ಕಾಗಿ ಪರಿಶ್ರಮ ವಹಿಸತೊಡಗಿದರೆ ಅದರ ಬಗೆಗಿನ ಸಂಪೂರ್ಣ ಮಾಹಿತಿ ನಮ್ಮ ಕಣ್ಣ ಮುಂದೆ ಬರಲು ಪ್ರಾರಂಭ ವಾಗುತ್ತದೆ. ನಾವು ಮಾನಸಿಕವಾಗಿ ದೈಹಿಕವಾಗಿ ಸಿದ್ಧವಾದಾಗ ಮಾತ್ರ ನಮಗೆ ಏನು ಬೇಕೋ ಅದು ಲಭಿಸಲು ಸಾಧ್ಯ. ಎಲ್ಲವೂ ನಮ್ಮೊಳಗೇ ಇದೆ. ಏನು ಬೇಕು? ಏಕೆ ಬೇಕು? ಎಂದು ನಿರ್ಧರಿಸುವ ಮನಸ್ಸನ್ನು ನಾವು ಮಾಡಬೇಕು ಅಷ್ಟೇ...

ರೂಪಾ ಗುರುರಾಜ್

View all posts by this author