ಇದೇ ಅಂತರಂಗ ಸುದ್ದಿ
ಸಂಜೆಯ ಹೊತ್ತಿಗೆ ರಸ್ತೆಯಂಚಿನ ಟೀ ಅಂಗಡಿಯ ಬೆಂಚಿನ ಮೇಲೆ ಕುಳಿತಾಗ, ಗಾಜಿನ ಲೋಟಕ್ಕೆ ಬೀಳುವ ಚುರುಕು ಚಹಾದ ಜತೆಗೇ ಎದುರಿನ ಮಾತುಗಳೂ ಕಿವಿಗೆ ಬೀಳುತ್ತವೆ. ಬ್ರದರ್, ಸ್ವಲ್ಪ ಲೇಟ್ ಆಯ್ತು, ಟ್ರಾಫಿಕ್ ಜಾಮ್ ಇತ್ತು. ಇವತ್ತು ಆಫೀಸ್‌ನಲ್ಲಿ ಫೈಲ್ ಟೆನ್ಷನ್, ಬಾಸ್ ಸರಿಯಾಗಿ ಮೂಡ್ ಔಟ್ ಮಾಡಿದ...’ ಇಂಥ ಮಾತುಗಳು ಈಗ ಯಾವ ಆಶ್ಚರ್ಯವನ್ನೂ ಹುಟ್ಟಿಸುವುದಿಲ್ಲ.
ಆದರೆ, ಅದೇ ಅಂಗಡಿಯ ಮರದ ಬೆಂಚಿನ ಮೇಲೆ ಇಪ್ಪತ್ತೈದು-ಮೂವತ್ತು ವರ್ಷಗಳ ಹಿಂದೆ ಇದೇ ಸಂಜೆ ಹೇಗಿತ್ತೆಂದು ಕಣ್ಣು ಮುಚ್ಚಿ ನೋಡಿದರೆ, ಇಡೀ ಚಿತ್ರಣವೇ ಬದಲಾಗುತ್ತದೆ. ಅಲ್ಲಿ ‘ತಡವಾಯ್ತು’, ‘ಗಡಿಬಿಡಿ’, ‘ಬೇಸರ’ ಎಂಬ ಪದಗಳು ಮಳೆಯ ಹನಿಯಂತೆ ಸಹಜವಾಗಿ ನೆಲಕ್ಕೆ ಬೀಳುತ್ತಿದ್ದವು. ಈಗ ಆ ಹಳೆಯ ಮಣ್ಣಿನ ವಾಸನೆ ಕಡಿಮೆಯಾಗಿ, ಮಾತಿನ ನಡುವೆ ಪ್ಲಾಸ್ಟಿಕ್ ಹೊದಿಕೆಯಂಥ ಇಂಗ್ಲಿಷ್ ಶಬ್ದಗಳು ಬಂದು ಜಾಗ ಆಕ್ರಮಿಸಿಕೊಂಡಿವೆ.
ಇಪ್ಪತ್ತು ವರ್ಷಗಳ ಹಿಂದೆ ಬದುಕು ಇಷ್ಟೊಂದು ಅವಸರದ ಮೆಟ್ರೋ ರೈಲು ಹತ್ತಿರಲಿಲ್ಲ. ಆಗ ದಿನದ ಆರಂಭಕ್ಕೆ ’ಬೆಳಗಿನ ಜಾವ’ವಿತ್ತು, ಕೆಲಸಕ್ಕೆ ಹೋಗುವಾಗ ’ಹೊರಡುತ್ತೇನೆ’ ಎಂಬ ಬೀಳ್ಕೊಡುಗೆಯಿತ್ತು, ವಾಪಸ್ ಬಂದಾಗ ‘ದಣಿವು’ ಇತ್ತು. ಈಗ ಆ ಎಲ್ಲ ಭಾವಗಳ ಜಾಗದಲ್ಲಿ ಕೇವಲ ’ಮಾರ್ನಿಂಗ್’, ’ಬೈ’, ’ಟೈಯರ್ಡ್’ ಎಂಬ ಪುಟ್ಟ ಬಿಡಿಭಾಗಗಳು ಬಂದು ಕುಳಿತಿವೆ. ಅಡುಗೆ ಮನೆಯ ಕಿಟಕಿಯಿಂದ ತೇಲಿ ಬರುತ್ತಿದ್ದ ‘ಘಮಘಮ’ ಸುವಾಸನೆ ಈಗ ಕೇವಲ ‘ಸ್ಮೆಲ್’ ಆಗಿದೆ, ನಾಲಗೆಗೆ ಹಿತ ಕೊಡುವ ‘ರುಚಿ’ ಕೇವಲ ’ಟೇಸ್ಟ್’ ಆಗಿದೆ, ಅಮ್ಮ ಮಾಡುತ್ತಿದ್ದ ‘ಚಿತ್ರಾನ್ನ’ ಈಗ ಕಲರ್ಡ್ ರೈಸ್’ ಆಗಿದೆ, ಅಜ್ಜಿ ಹೆಪ್ಪು ಹಾಕಿ ಕೊಡುತ್ತಿದ್ದ ಮೊಸರು’ ಈಗ ಕರ್ಡ್ಸ್’ ಆಗಿದೆ.
ಯಾವ ನಿಘಂಟಿನ ನಿಯಮಗಳೂ ಇಲ್ಲದೇ, ಯಾವ ಮುನ್ಸೂಚನೆಯೂ ಇಲ್ಲದೇ, ನಮ್ಮ ನಾಲಗೆಯ ತುದಿಯ ಇಂಗ್ಲಿಷ್ ಪದಗಳು ತಂತಾನೇ ಮನೆ ಕಟ್ಟಿಕೊಂಡಿರುವ ಪರಿಗೆ ಆಶ್ಚರ್ಯವಾಗುತ್ತದೆ. ಹಾಗೆ ನೋಡಿದರೆ, ನಾವ್ಯಾರೂ ಇಂಗ್ಲಿಷನ್ನು ಬಲವಂತವಾಗಿ ಕಲಿತು ಮಾತಿಗಿಳಿಸಿದವರಲ್ಲ. ಅದು ನಮ್ಮ ನಡುವೆ ಹೇಗೆ ನುಸುಳಿತು ಎಂದರೆ, ಮನೆಯ ಹಿಂಬಾಗಿಲು ತೆರೆದಿಟ್ಟಾಗ ಅಂಗಳದೊಳಗೆ ಸದ್ದಿಲ್ಲದೆ ನುಸುಳಿ ಬರುವ ಕಳ್ಳ ಬೆಕ್ಕಿನಂತೆ.
ಇದನ್ನೂ ಓದಿ: Vishweshwar Bhat Column: ಕೊಟ್ಟು ಕಿತ್ತುಕೊಂಡ ಸರಕಾರ, ನೈಜ ಸಾಧಕನಿಗೆ ರಾಜ್ಯೋತ್ಸವ ಪ್ರಶಸ್ತಿ ʼಅಪಚಾರ!
ಬೆಳಗ್ಗೆ ಕಣ್ಣು ಬಿಟ್ಟ ತಕ್ಷಣ ‘ಅಲಾರಾಂ ಆಫ್ ’ ಮಾಡುವುದರಿಂದ ಹಿಡಿದು, ರಾತ್ರಿ ಕಣ್ಣು ಮುಚ್ಚುವ ಮುನ್ನ ‘ಲೈಟ್ ಆಫ್’ ಮಾಡುವವರೆಗೆ ನೂರಾರು ಇಂಗ್ಲಿಷ್ ಶಬ್ದಗಳು ನಮ್ಮ ದಿನಚರಿಯ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ನಾವು ಕನ್ನಡದ ಯೋಚಿಸುತ್ತೇವೆ ಎಂದು ಕೊಂಡರೂ, ಆ ಯೋಚನೆಗೆ ಸಿಗುವ ಬಣ್ಣ ಮಾತ್ರ ಇಂಗ್ಲಿಷಿನದ್ದಾಗಿರುತ್ತದೆ. ಬಸ್ಸಿಗೆ ಕಾಯುವಾಗ ‘ಬಸ್ಸು ಬಂತಾ?’ ಎನ್ನುವುದಕ್ಕಿಂತ ‘ ಬಸ್ ಬಂತಾ?’ ಎಂದೇ ನಾಲಗೆ ಮೊದಲಿಗೆ ಉಲಿಯುತ್ತದೆ.
ನಮ್ಮೂರಿನ ಹಳೆಯ ಬಟ್ಟೆ ಅಂಗಡಿಯ ಮಾಲೀಕ ಮುಖ ನೋಡಿ ನಗುತ್ತಾ, ಏನ್ ಸಾರ್, ಆರಾಮಾ? ಮನೆ ಕಡೆ ಎಲ್ಲ ಕ್ಷೇಮವಾ?’ ಎಂದು ಕೇಳುತ್ತಿದ್ದ ಕಾಲವೊಂದಿತ್ತು. ಆ ‘ಆರಾಮ’ ಮತ್ತು ‘ಕ್ಷೇಮ’ ಎಂಬ ಎರಡು ಮಾತುಗಳ ಮನುಷ್ಯನ ಇಡೀ ಅಸ್ತಿತ್ವಕ್ಕೆ ತಂಗುದಾಣ ಸಿಕ್ಕಂತಾಗುತ್ತಿತ್ತು. ಈಗ ಅದೇ ಅಂಗಡಿ ಹೈಟೆಕ್ ಶೋರೂಂ ಆಗಿ ಬದಲಾಗಿದೆ, ಅಲ್ಲೀಗ ಬಟ್ಟೆ ಕೊಡುವ ಹುಡುಗ ಸರ್, ನಿಮಗೆ ಯಾವ ಸೈಜ್ ಬೇಕು? ಫಿಟ್ಟಿಂಗ್ ಓಕೆನಾ? ಅಲ್ಟರೇಷನ್ ಮಾಡಬೇಕಾ?’ ಎಂದು ಕೇಳುತ್ತಾನೆ.
‘ಅಳತೆ’ ಮತ್ತು ‘ಹೊಂದಿಕೆ’ ಎಂಬ ಪದಗಳು ಎಲ್ಲಿ ಕಳೆದುಹೋದವು ಎಂದು ಹುಡುಕಿದರೆ, ನಮಗೆ ನಾವೇ ಮ್ಯೂಸಿಯಂನಲ್ಲಿ ನಿಂತ ಹಳೆಯ ಪ್ರತಿಮೆಯಂತೆ ಕಾಣುತ್ತೇವೆ. ಆಸ್ಪತ್ರೆಯ ಕಾರಿಡಾರ್‌ನಲ್ಲಿ ನಿಂತಾಗ ಈ ಬದಲಾವಣೆ ಇನ್ನಷ್ಟು ತೀವ್ರವಾಗಿ ಎದೆ ತಟ್ಟುತ್ತದೆ. ಹಿಂದೆಲ್ಲ ಹಳ್ಳಿಯ ಅಜ್ಜಿಯೊಬ್ಬಳು ವೈದ್ಯರ ಮುಂದೆ ಕುಳಿತು, ‘ಡಾಕ್ಟ್ರೇ, ಎದೆಯಲ್ಲಿ ಏನೋ ತಳಮಳ, ಕಣ್ಣು ಕತ್ತಲೆ ಬರ್ತಿದೆ, ಕೈಕಾಲೆಲ್ಲ ಝುಂ ಅನ್ನುತ್ತೆ’ ಎಂದು ತನ್ನ ನೋವನ್ನು ಅಪ್ಪಟ ಕಾವ್ಯದಂತೆ ಬಿಚ್ಚಿಡುತ್ತಿದ್ದಳು. ಆದರೆ ಈಗ ನಾವೇ ಡಾಕ್ಟರ್ ಮುಂದೆ ಹೋಗಿ, ನನಗೆ ಗ್ಯಾಸ್ಟ್ರಿಕ್ ಆಗಿದೆ, ಬಿಪಿ ಜಾಸ್ತಿಯಾದ ಹಾಗೆ ಫೀಲ್ ಆಗ್ತಿದೆ, ಸ್ವಲ್ಪ ವೀಕ್‌ನೆಸ್ ಇದೆ, ಶುಗರ್ ಲೆವಲ್ ಹೆಚ್ಚಾಗಿದೆಯಾ’ ಎಂದು ರೋಗದ ಲಕ್ಷಣಗಳಿಗೂ ಇಂಗ್ಲಿಷ್ ಹೆಸರನ್ನೇ ಅಂಟಿಸುತ್ತೇವೆ.
ನಮ್ಮ ನೋವನ್ನು, ಅಸಹಾಯಕತೆಯನ್ನು ಕೂಡ ನಮ್ಮ ತಾಯ್ನುಡಿಯಲ್ಲಿ ಕಟ್ಟಿಕೊಡಲು ಬಾರದಷ್ಟು ಇಂಗ್ಲಿಷ್ ನಮ್ಮ ನರನಾಡಿಗಳನ್ನು ಆವರಿಸಿಬಿಟ್ಟಿದೆ. ಇನ್ನು ಪ್ರೀತಿ, ಪ್ರೇಮ, ಸ್ನೇಹದ ಜಗತ್ತಿನ ಕಥೆಯಂತೂ ಇನ್ನೂ ವಿಚಿತ್ರ. ಪ್ರೇಮಪತ್ರಗಳಲ್ಲಿ ‘ನಿನ್ನ ನೆನಪು ಕಾಡುತ್ತಿದೆ’ ಎಂದು ಬರೆದು, ಆ ಕಾಗದದ ಮಡಿಕೆಯೊಳಗೆ ಜೀವವನ್ನೇ ಇಡುತ್ತಿದ್ದ ತಲೆಮಾರು ನಿಧಾನವಾಗಿ ಮರೆಯಾಗಿದೆ. ಈಗ ಎಲ್ಲವೂ ಮೊಬೈಲ್ ಪರದೆಯ ಮೇಲಿನ ‘ಮಿಸ್ ಯು’, ’ಲವ್ ಯು’, ’ಟೇಕ್ ಕೇರ್’, ಸೀ ಯು’ ಎಂಬ ನಾಲ್ಕೇ ನಾಲ್ಕು ರೆಡಿಮೇಡ್ ಶಬ್ದಗಳಲ್ಲಿ ಮುಗಿದು ಹೋಗುತ್ತದೆ.
ಆ ಇಂಗ್ಲಿಷ್ ಶಬ್ದಗಳಲ್ಲಿ ಒಂದು ಸುಲಭವೇನೋ ಇದೆ, ನಿಜ. ಆದರೆ ಎದೆಯಾಳದಿಂದ ಉಕ್ಕಿ ಬರುವ ಆ ಹಳೆಯ ಕನ್ನಡದ ತೇವ ಎಲ್ಲಾ ಮಾಯವಾಗಿದೆ. ಸಂಬಂಧಗಳೂ ಕೂಡ ‘ಕನೆಕ್ಷನ್’ ಮತ್ತು ‘ನೆಟ್‌ವರ್ಕ್’ಗಳಾಗಿ ಬದಲಾದ ಮೇಲೆ, ಮಾತಿನ ಸೊಗಡು ಕಳೆದುಹೋಗದೆ ಇನ್ನೇನಾದೀತು? ವಿಚಿತ್ರವೆಂದರೆ, ಇಂಗ್ಲಿಷ್ ಪದಗಳನ್ನು ಬಳಸದಿದ್ದರೆ ನಮ್ಮ ದಿನನಿತ್ಯದ ಮಾತುಕತೆಯೇ ಮುಂದೆ ಸಾಗುವುದಿಲ್ಲವೇನೋ ಎಂಬಂಥ ಪರಿಸ್ಥಿತಿಯನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ.
ಯಾರಾದರೂ ಶುದ್ಧವಾಗಿ, ನಾಳೆ ನಿನ್ನನ್ನು ಭೇಟಿಯಾಗಲು ಸಮಯ ನಿಗದಿಪಡಿಸಬಹುದೇ?’ ಎಂದು ಕೇಳಿದರೆ, ಎದುರಿನವನು ಒಂದು ಕ್ಷಣ ದಂಗಾಗಿ, ಯಾಕೋ ಇವನು ಇಷ್ಟೊಂದು ಫಾರ್ಮಲ್ ಆಗಿ ಮಾತಾಡ್ತಿದ್ದಾನೆ?’ ಎಂದು ಅನುಮಾನದಿಂದ ನೋಡುತ್ತಾನೆ. ಅದೇ ನಾಳೆ ಮೀಟ್ ಆಗೋಣ್ವಾ? ಟೈಮ್ ಫಿಕ್ಸ್ ಮಾಡು’ ಎಂದರೆ ಎಲ್ಲವೂ ತೀರಾ ಸಹಜ, ತೀರಾ ಸರಳ! ಈ ಸರಳತೆಯೇ ನಮ್ಮ ಭಾಷೆಯ ಸೂಕ್ಷ್ಮ ಪದಗಳನ್ನು ನಮ್ಮಿಂದ ಕಸಿದುಕೊಂಡಿದೆ. ಈಗಿನ ಮಕ್ಕಳನ್ನು ನೋಡಿದರೆ ಈ ಕಳೆದುಕೊಳ್ಳುವಿಕೆಯ ಆಳ ಇನ್ನಷ್ಟು ಗಾಢವಾಗಿ ಕಾಣಿಸುತ್ತದೆ.
ಅವರಿಗೆ ಮಳೆಯೆಂದರೆ ಕೇವಲ ‘ರೈನ್’, ಗಾಳಿಯೆಂದರೆ ’ವಿಂಡ್’, ಮೋಡವೆಂದರೆ ‘ಕ್ಲೌಡ್’. ಜಿಟಿಜಿಟಿ ಮಳೆ, ಬಿರುಗಾಳಿ, ಕಾರ್ಮೋಡ ಎಂಬ ಆಯಾ ಋತುವಿನ ಜೀವಂತಿಕೆಯನ್ನು ಹೊತ್ತ ಪದಗಳು ಅವರ ಆಟದ ಲೋಕದಿಂದ ಕಳಚಿಕೊಂಡಿವೆ.
ಆಟವಾಡಲು ಹೋಗುವ ಮಕ್ಕಳಿಗೆ ‘ಜೋಪಾನ’ ಎನ್ನುವ ಬದಲು ‘ಕೇರ್ ಫುಲ್’ ಎನ್ನುತ್ತೇವೆ, ಸುಸ್ತಾದಾಗ ‘ಕುಡಿ’ ಎನ್ನುವ ಬದಲು ‘ಡ್ರಿಂಕ್’ ಎನ್ನುತ್ತೇವೆ. ಹೀಗೆ ಮಕ್ಕಳ ತೊದಲು ನುಡಿಯ ಹಂತದ ನಾವು ಇಂಗ್ಲಿಷಿನ ತಂತಿಗಳನ್ನು ಬಿಗಿದು ಬಿಟ್ಟಿದ್ದೇವೆ. ಹಾಗಂತ ಇದು ಕೇವಲ ಇಂಗ್ಲಿಷ್ ಭಾಷೆಯ ಮೇಲಿನ ಮೋಹವಲ್ಲ, ನಮ್ಮ ಬದುಕಿನ ವೇಗ ತಂದಿಟ್ಟ ಅನಿವಾರ್ಯತೆ ಕೂಡ ಹೌದು. ಆಧುನಿಕ ತಂತ್ರಜ್ಞಾನ, ಕಚೇರಿಯ ಕೆಲಸಗಳು, ಕಂಪ್ಯೂಟರ್ ನ ಕೀಬೋರ್ಡ್‌ಗಳು ಎಲ್ಲವೂ ನಮ್ಮನ್ನು ಇಂಗ್ಲಿಷಿನ ವ್ಯವಹರಿಸುವಂತೆ ತಳ್ಳುತ್ತಿವೆ. ಆದರೆ, ನಾವಿಲ್ಲಿ ಗಮನಿಸಬೇಕಾದ್ದು ಇಂಗ್ಲಿಷಿನ ವಿರೋಧವನ್ನಲ್ಲ, ನಮ್ಮ ನಾಲಗೆಯಿಂದ ನಮ್ಮದೇ ನುಡಿಯ ರುಚಿ ಕಳೆದುಹೋಗು ತ್ತಿರುವುದನ್ನು.
ಬೇರೆ ಭಾಷೆಯ ಉಡುಪು ತೊಡುವುದು ತಪ್ಪಲ್ಲ, ಆದರೆ ಆ ಉಡುಪಿನ ಒಳಗಿರುವ ನಮ್ಮತನದ ಚರ್ಮವನ್ನೇ ಮರೆತು ಬಿಡುವುದು ವಿಷಾದದ ಸಂಗತಿ. ನಮ್ಮ ಹಿರಿಯರು ಮಾತನಾಡುತ್ತಿದ್ದಾಗ ಆ ಮಾತುಗಳಲ್ಲಿ ಒಂದು ಲಯವಿರುತ್ತಿತ್ತು, ಒಂದು ಕತೆ ಹೇಳುವ ಮುಗ್ಧತೆ ಇರುತ್ತಿತ್ತು. ಈಗ ಆ ಲಯ ಮುರಿದುಹೋಗಿ, ಕೇವಲ ಶಾರ್ಟ್‌ಕಟ್‌ಗಳ ಸದ್ದಷ್ಟೇ ಉಳಿದುಕೊಂಡಿದೆ. ಇಪ್ಪತ್ತು ವರ್ಷಗಳ ಈ ಕಾಲಘಟ್ಟದಲ್ಲಿ ನಾವು ಜಾಗತಿಕವಾಗಿ ಬೆಳೆದಿದ್ದೇವೆ, ಸ್ಮಾರ್ಟ್ ಫೋನ್ ಹಿಡಿದಿದ್ದೇವೆ, ಜಗತ್ತಿನ ಎಡೆಯ ಜನರಿಗೆ ಹತ್ತಿರವಾಗಿದ್ದೇವೆ ನಿಜ. ಆದರೆ, ಅದೇ ಹೊತ್ತಿನಲ್ಲಿ ನಮ್ಮ ಪಕ್ಕದ ಕುಳಿತ ಅಮ್ಮನ ಜತೆ, ಅಕ್ಕಪಕ್ಕದ ಮನೆಯವರ ಜತೆ ಆಪ್ತವಾಗಿ ಎರಡು ಮಾತು ಹಂಚಿಕೊಳ್ಳಲು ಬೇಕಾದ ಸ್ವಂತ ಪದಗಳಿಗಾಗಿ ಪರದಾಡುತ್ತಿದ್ದೇವೆ.
ಇಷ್ಟೆಲ್ಲ ಆದ ಮೇಲೂ, ಹಳ್ಳಿಯ ಸಂತೆಗೋ ಅಥವಾ ಹಳೆಯ ಪರಿಚಿತರ ಮನೆಗೋ ಹೋದಾಗ, ಯಾರೋ ಒಬ್ಬರು ಬಾ ಮಾರಾಯ, ಎಷ್ಟ್ ದಿನ ಆಯ್ತು ನಿನ್ನ ಮುಖ ನೋಡಿ, ಕಾಫಿ ಕುಡಿದು ಹೋಗು’ ಎಂದು ಪ್ರೀತಿಯಿಂದ ಕರೆದಾಗ, ಎದೆಯೊಳಗೆ ಸಣ್ಣದೊಂದು ಸಮಾಧಾನ ಮೂಡುತ್ತದೆ. ಆ ‘ಮಾರಾಯ’ ಎಂಬ ಕರೆಯೊಳಗೆ, ‘ಕಾಫಿ ಕುಡಿದು ಹೋಗು’ ಎಂಬ ಆತಿಥ್ಯದೊಳಗೆ ನಮ್ಮದೇ ನೆಲದ ಜೀವಂತ ಧ್ವನಿಯೊಂದು ಇನ್ನೂ ಉಸಿರಾಡುತ್ತಿರುವುದು ತಿಳಿಯುತ್ತದೆ.
ಇಂಗ್ಲಿಷ್ ನಮ್ಮ ತಲೆಯೊಳಗೆ ಎಷ್ಟೇ ಆಳವಾಗಿ ಬೇರೂರಿದರೂ, ನಮ್ಮ ಎದೆಯ ಬಡಿತಕ್ಕೆ ತಾಯ್ನುಡಿಯೇ ಬೇಕು. ಆ ಬಡಿತ ನಿಲ್ಲದಂತೆ ನಮ್ಮ ನಾಲಗೆಯನ್ನು ನಾವೇ ಎಚ್ಚರದಿಂದ ಕಾಪಾಡಿಕೊಳ್ಳಬೇಕಿದೆ.
ಯಂತ್ರಗಳು ಕನ್ನಡ ಕಲಿಯುತ್ತಿರುವಾಗ
ನಮ್ಮ ಕಣ್ಣೆದುರೇ ಸಾವಿರಾರು ವರ್ಷಗಳ ಅಕ್ಕರೆಯ ಕನ್ನಡ ಪದಗಳು ಕೈಬೀಸಿ ಕರೆಯುತ್ತಿದ್ದರೂ, ನಾವು ಬೇಕೆಂದೇ ನಾಲಗೆಯನ್ನು ಇಂಗ್ಲಿಷಿನ ಕಡೆಗೆ ತಿರುಗಿಸುತ್ತಿದ್ದೇವೆ. ಇದು ತಿಳಿಯದೇ ಆಗುತ್ತಿರುವ ತಪ್ಪಲ್ಲ, ನಮ್ಮತನವನ್ನೇ ನಾವೇ ಮರೆಮಾಚಿಕೊಳ್ಳುತ್ತಿರುವ ಒಂದು ವಿಲಕ್ಷಣ ಹಮ್ಮು.
ನಮ್ಮ ಗೆಳೆಯ ಪಕ್ಕಕ್ಕೆ ಬಂದು ಬೆನ್ನುತಟ್ಟಿ, ‘ನಿನಗೆ ಆತ್ಮವಿಶ್ವಾಸ ಇರಲಿ ಮಾರಾಯ, ಎಂದಿಗೂ ಅದನ್ನು ಮಾತ್ರ ಕಳೆದುಕೊಳ್ಳಬೇಡ’ ಎಂದರೆ ಆ ‘ಆತ್ಮವಿಶ್ವಾಸ’ ಎಂಬ ಪದದೊಳಗೆ ಇಡೀ ಜೀವಕ್ಕೆ ಆಸರೆ ಕೊಡುವ ಒಂದು ತಾಯ್ತನವಿದೆ. ಎದೆಯ ಬಡಿತವನ್ನು ಹತೋಟಿಗೆ ತರುವ ಒಂದು ನಿಗೂಢ ಶಕ್ತಿಯಿದೆ. ಆದರೆ ನಾವದನ್ನು ತಕ್ಷಣವೇ ಬಿಸಾಕಿ, ‘ಸ್ವಲ್ಪ ಕಾನ್ಫಿಡೆನ್ಸ್ ಇರಲಿ ಬ್ರೋ’ ಎಂದು ಕೃತಕವಾಗಿ ನಗುತ್ತೇವೆ.
‘ಕಾನ್ಫಿಡೆನ್ಸ್ ’ ಎನ್ನುವಾಗ ಅದು ಕಾರ್ಪೊರೇಟ್ ಕೋಣೆಯ ಕೋಟು-ಸೂಟಿನ ಶಬ್ದದಂತೆ ಕಿವಿಗೆ ಅಪ್ಪಳಿಸುತ್ತದೆ. ಆದರೆ ‘ಆತ್ಮವಿಶ್ವಾಸ’ ಎನ್ನುವಾಗ ಒಳಗೆ ಎಲ್ಲೋ ಅಡಗಿದ್ದ ಮನುಷ್ಯ ಜಾಗೃತನಾಗುತ್ತಾನೆ. ಆದರೂ ನಾವು ಆ ತೇವವಿರುವ ಪದವನ್ನು ಬಿಟ್ಟು, ಒಣಗಿದ ಇಂಗ್ಲಿಷ್ ಶಬ್ದದ ಬೆನ್ನುಬೀಳುತ್ತೇವೆ. ಕಾರಣ, ನಮಗೆ ಪರಕೀಯತೆಯೇ ಪ್ರತಿಷ್ಠೆಯಾಗಿಬಿಟ್ಟಿದೆ.
ವಿಚಿತ್ರವೆಂದರೆ, ನಮ್ಮ ಮೇಜಿನ ಮೇಲಿರುವ ತಣ್ಣನೆಯ ಗಾಜು-ಪ್ಲಾಸ್ಟಿಕ್‌ನ ಕಂಪ್ಯೂಟರಿಗೆ ಕನ್ನಡ ಗೊತ್ತು. ನಾವು ಅಂಗೈಯಲ್ಲಿ ಹಿಡಿದು ಸದಾ ಸವರುತ್ತಿರುವ ವಾಟ್ಸಪ್, ಫೇಸ್ ಬುಕ್, ಇನ್ ಸ್ಟಾಗ್ರಾಂಗಳು ನಮ್ಮ ಕನ್ನಡದ ಅಕ್ಷರಗಳನ್ನು ಮುದ್ದುಮುದ್ದಾಗಿ ಮೂಡಿಸುತ್ತವೆ. ಕೃತಕ ಬುದ್ಧಿಮತ್ತೆಯೆಂಬ ಆ ಆಧುನಿಕ ಲೋಕದ ‘ಎಐ’ ಕೂಡ ನಾವು ಕನ್ನಡದಲ್ಲಿ ಕೇಳಿದರೆ, ಯಾವ ಸಂಕೋಚವೂ ಇಲ್ಲದೆ ಅಷ್ಟೇ ವಿನಮ್ರವಾಗಿ, ಅಷ್ಟೇ ಸುಂದರವಾಗಿ ಕನ್ನಡದ ಮರು ಮಾತಾಡುತ್ತದೆ.
ಲೋಹದ ಯಂತ್ರಗಳೂ, ಸಿಲಿಕಾನ್ ಚಿಪ್ ಗಳೂ ಕನ್ನಡವನ್ನು ತಮ್ಮ ಒಡಲೊಳಗೆ ಇಳಿಸಿಕೊಂಡು ಉಸಿರಾಡುತ್ತಿರುವಾಗ, ಜೀವಂತ ರಕ್ತಮಾಂಸಗಳಿರುವ, ಕನ್ನಡದ ಅನ್ನ ತಿಂದು ಬೆಳೆದ ನಾವು ಮಾತ್ರ ಅದೇ ಕಂಪ್ಯೂಟರ್ ಮುಂದೆ ಕುಳಿತು ಕನ್ನಡದ ಪದಗಳಿಗಾಗಿ ಪರದಾಡುತ್ತೇವೆ. ಯಂತ್ರಗಳು ಕಲಿಯುತ್ತಿರುವ ಭಾಷೆಯನ್ನು ಮನುಷ್ಯರು ಮರೆಯುತ್ತಿರುವುದಕ್ಕಿಂತ ದೊಡ್ಡ ವ್ಯಂಗ್ಯ, ದುರಂತ ಇನ್ನೇನಿದೆ? ನಾವು ಮೆಲ್ಲನೆ ಇಂಗ್ಲಿಷಿನ ಅತಿಥಿ ಸತ್ಕಾರಕ್ಕೆ ಮರುಳಾಗಿ, ಕೊನೆಗೆ ಅದರ ಕತ್ತಲ ಕೋಣೆಯ ಸ್ವಯಂಪ್ರೇರಿತ ಗುಲಾಮರಾಗಿ ಕುಳಿತುಬಿಟ್ಟಿದ್ದೇವೆ. ಈ ಗುಲಾಮಗಿರಿಗೆ ಯಾರೂ ಸಂಕೋಲೆ ತೊಡಿಸಲಿಲ್ಲ, ನಾವೇ ಸ್ವತಃ ಇಷ್ಟಪಟ್ಟು ಆ ಸರಪಳಿಗಳನ್ನು ಕೊರಳಿಗೆ ಸುತ್ತಿಕೊಂಡಿ ದ್ದೇವೆ.
ಇಂಗ್ಲಿಷ್‌ನಲ್ಲಿ ನಾಲ್ಕು ಪದ ಎಸೆಯದಿದ್ದರೆ ಜಗತ್ತು ನಮ್ಮನ್ನು ದಡ್ಡರೆಂದು ಭಾವಿಸಿ ಬಿಡುತ್ತದೆಯೋ, ನಮ್ಮ ಬೆಲೆ ಕಡಿಮೆಯಾಗಿಬಿಡುತ್ತದೆಯೋ ಎಂಬ ನಿರಂತರ ಕೀಳರಿಮೆ ನಮ್ಮ ಸುಪ್ತಮನಸ್ಸಿನಲ್ಲಿ ಕುಳಿತು ನಮ್ಮನ್ನು ನಿಯಂತ್ರಿಸುತ್ತಿದೆ.
ಸ್ವಂತ ಮನೆಯ ಊಟವನ್ನು ಮುಚ್ಚಿಟ್ಟು, ಪಕ್ಕದ ಮನೆಯ ಬ್ರೆಡ್ಡು-ಜಾಮ್ ತೋರಿಸಿ ಸಂಭ್ರಮಿ ಸುವ ಮುಗ್ಧವಲ್ಲದ, ಬದಲಿಗೆ ಅತಿಯಾದ ಜಾಣತನದ ತಲೆಮಾರು ನಮ್ಮದಾಗಿದೆ. ಇವತ್ತು ಇಂಗ್ಲಿಷ್ ಪದಗಳ ಆಸರೆಯಿಲ್ಲದೆ ಕೇವಲ ಐದು ನಿಮಿಷಗಳ ಕಾಲ ನಿರರ್ಗಳವಾಗಿ, ಸರಳವಾಗಿ ಕನ್ನಡದ ಮಾತನಾಡಿ ನೋಡಿ, ಎಷ್ಟೋ ಜನರಿಗೆ ಉಸಿರುಗಟ್ಟಿದಂತಾಗುತ್ತದೆ.
‘ನಾನು ಇವತ್ತು ತುಂಬಾ ಖುಷಿಯಾಗಿದ್ದೇನೆ’ ಎನ್ನುವ ಬದಲು ‘ಟುಡೇ ಐ ಆಮ್ ವೆರಿ ಹ್ಯಾಪಿ’ ಎನ್ನದಿದ್ದರೆ ಆ ಖುಷಿಗೆ ಅಧಿಕೃತ ಮುದ್ರೆಯೇ ಬೀಳುವುದಿಲ್ಲವೇನೋ ಎಂಬಂಥ ಸ್ಥಿತಿ. ಕೃತಜ್ಞತೆ, ನೆಮ್ಮದಿ, ಕಾಳಜಿ, ಪ್ರೀತಿ, ಆತಂಕ, ನಿರೀಕ್ಷೆ ಹೀಗೆ ಮನಸ್ಸಿನ ನೂರಾರು ಗರಿಗಳಿಗೆ, ಬಣ್ಣಗಳಿಗೆ ನಮ್ಮಲ್ಲಿ ಅದ್ಭುತ ಪದಗಳ ಸಾಲೇ ಇದೆ. ಆದರೆ ನಾವೆಲ್ಲವನ್ನೂ ಥ್ಯಾಂಕ್ಸ್ , ರಿಲ್ಯಾಕ್ಸ್, ಕೇರ್, ಲವ್, ಟೆನ್ಷನ್, ಹೋಪ್ ಎಂಬ ಸಿದ್ಧ ಉಡುಪುಗಳೊಳಗೆ ತುರುಕಿ, ಭಾಷೆಯ ಹರಿಯುವ ನೀರನ್ನು ಇಕ್ಕಟ್ಟಾದ ಪೈಪಿನೊಳಗೆ ಬಂಧಿಸಿಬಿಟ್ಟಿದ್ದೇವೆ.
ನಮ್ಮ ಹಳೆಯ ದಿನಗಳ ಊರುಗಳನ್ನು ನೆನಪಿಸಿಕೊಳ್ಳಿ. ಸಾಯಂಕಾಲದ ಸೂರ್ಯ ಪಶ್ಚಿಮಕ್ಕೆ ಜಾರುವಾಗ, ಆಕಾಶದಲ್ಲಿ ಮೂಡುವ ಆ ಬಣ್ಣಕ್ಕೆ ನಮ್ಮ ಹಿರಿಯರು ‘ಮುಸ್ಸಂಜೆ’ ಎನ್ನುತ್ತಿದ್ದರು. ಆ ‘ಮುಸ್ಸಂಜೆ’ ಎಂಬ ಕರೆಯ ದೀಪ ಹಚ್ಚುವ ಮುಗ್ಧತೆ ಇತ್ತು, ಮನೆಗೆ ಮರಳುವ ಹಕ್ಕಿಗಳ ರೆಕ್ಕೆಗಳ ಸದ್ದಿತ್ತು. ಈಗ ನಮಗೆ ಅದು ಕೇವಲ ‘ಈವ್ನಿಂಗ್’. ಹೂವಿನ ಮೃದುತ್ವಕ್ಕೆ ‘ಕೋಮಲ’ ಎನ್ನುವ ಬದಲು ‘ಸಾಫ್ಟ್ ’ ಎನ್ನುತ್ತೇವೆ, ಮನಸ್ಸಿನ ಒಳಗಿನ ಆಳವಾದ ನೋವಿಗೆ ‘ವೇದನೆ’ ಎನ್ನುವ ಬದಲು ‘ಡಿಪ್ರೆಶನ್’ ಎಂದು ಹಣೆಪಟ್ಟಿ ಹಚ್ಚುತ್ತೇವೆ.
ಪ್ರತಿಯೊಂದು ಅನುಭವವನ್ನೂ ಇಂಗ್ಲಿಷಿನ ಪೆಟ್ಟಿಗೆಯೊಳಗೆ ಹಾಕಿ ಮುಚ್ಚಿಬಿಟ್ಟರೆ, ಆ ಭಾವನೆಗಳ ಮೂಲ ಸ್ಪರ್ಶವೇ ನಮಗೆ ದಕ್ಕದಂತಾಗುತ್ತದೆ. ಇದು ಕೇವಲ ಕಚೇರಿಯ, ಸಂದರ್ಶನದ ನಡೆಯು ತ್ತಿದ್ದರೆ ಒಂದು ರೀತಿಯ ಸಮರ್ಥನೆ ಇರುತ್ತಿತ್ತು. ಆದರೆ ಇದು ನಮ್ಮ ಮನೆಯ ಡೈನಿಂಗ್ ಟೇಬಲ್ ಮೇಲೆ, ಬೆಡ್‌ರೂಮಿನ ರಹಸ್ಯ ಮಾತುಕತೆಗಳಲ್ಲಿ, ಕಡೆಗೆ ದೇವರ ಕೋಣೆಯ ಪ್ರಾರ್ಥನೆಯಲ್ಲೂ ನುಸುಳಿಬಿಟ್ಟಿದೆ.
ತಾಯಿಯೊಬ್ಬಳು ಮಗುವನ್ನು ಎದೆಗಪ್ಪಿಕೊಂಡು ‘ನನ್ನ ಜೀವ, ನನ್ನ ಪ್ರಾಣ, ನನ್ನ ಕಂದ’ ಎನ್ನುವ ಬದಲು ‘ಮೈ ಕ್ಯೂಟ್ ಬೇಬಿ’ ಎಂದಾಗ, ಆ ಕರೆಯೊಳಗೆ ಶಬ್ದವಿರುತ್ತದೆ ನಿಜ, ಆದರೆ ಹೊಕ್ಕಳು ಬಳ್ಳಿಯ ಆ ಪುರಾತನ ನಾದ ಎಲ್ಲಾ ಕಳೆದುಹೋಗಿರುತ್ತದೆ. ನಾವೀಗ ಭಾವನೆಗಳನ್ನು ಹಂಚಿಕೊಳ್ಳು ತ್ತಿಲ್ಲ, ಬದಲಿಗೆ ಭಾಷಾಂತರಗೊಂಡ ಅನುಕರಣೆಗಳನ್ನು ಪ್ರದರ್ಶಿಸುತ್ತಿದ್ದೇವೆ.
ಬೇರೆ ಭಾಷೆಯನ್ನು ಕಲಿಯುವುದು ತಪ್ಪಲ್ಲ, ಅದು ಜಗತ್ತಿನ ಕಿಟಕಿಯಿದ್ದಂತೆ. ಕಿಟಕಿಯಿಂದ ಬರುವ ತಂಗಾಳಿಯನ್ನು ಆಸ್ವಾದಿಸಬೇಕು ನಿಜ, ಆದರೆ ಆ ಗಾಳಿಯ ಭರಾಟೆಗೆ ಮನೆಯೊಳಗಿನ ನೆಲೆಯೇ ಕಿತ್ತುಹೋಗಬಾರದು. ನಾವು ಮಾಡುತ್ತಿರುವುದು ಅದೇ ತಪ್ಪನ್ನು. ಕಿಟಕಿಯನ್ನು ನೋಡುವ ಭರದಲ್ಲಿ ನಾವು ನಿಂತಿರುವ ಮನೆಯ ಗೋಡೆಗಳನ್ನೇ ಕೆಡವಿ ಹಾಕುತ್ತಿದ್ದೇವೆ.
ಇಂಗ್ಲಿಷ್ ನಮ್ಮ ನಾಲಗೆಯ ಮೇಲೆ ಕುಳಿತು ನಮ್ಮ ದವಡೆಯನ್ನೇ ಮರಗಟ್ಟಿಸಿದೆ. ನಮಗೆ ನಮ್ಮದೇ ಅಮ್ಮನ ಮುಖವನ್ನು ಕನ್ನಡಿಯಿಲ್ಲದೇ ನೋಡಲು ಬಾರದಂಥ ಪರಾವಲಂಬನೆ ಆವರಿಸಿದೆ. ಹಾಗೆ ನೋಡಿದರೆ, ಕನ್ನಡವೆಂಬುದು ಬದುಕಿನ ಕಣಕಣದಲ್ಲೂ ಅಡಗಿರುವ ರಸವಿದ್ಯೆ. ಒಂದು ಸಣ್ಣ ನಗೆಗೆ, ಒಂದು ಮೌನಕ್ಕೆ, ಒಂದು ನೋವಿನ ನಿಟ್ಟುಸಿರಿಗೆ ನಮ್ಮ ಭಾಷೆಯಲ್ಲಿರುವಷ್ಟು ಆರ್ದ್ರತೆ ಬೇರೆಲ್ಲೂ ಸಿಗುವುದಿಲ್ಲ.
ಮಳೆಯ ಶಬ್ದವನ್ನು ‘ಹನಿ ಹನಿ’, ‘ಜೋರು’, ‘ಬಿರುಸು’ ಎಂದು ವಿವರಿಸುವ ಆ ನಾದ ಇಂಗ್ಲಿಷಿನ ‘ರೈನಿಂಗ್’ನಲ್ಲಿ ಸಿಗಲು ಸಾಧ್ಯವೇ? ಅಡುಗೆಯ ಒಗ್ಗರಣೆಯ ‘ಚಟಪಟ’ ನಾದಕ್ಕೆ, ನದಿಯ ನೀರಿನ ‘ಜುಳುಜುಳು’ ಹರಿವಿಗೆ ನಮ್ಮ ನೆಲದ ಪದಗಳೇ ಸಾಕ್ಷಿಯಾಗಬೇಕು. ಆ ಪದಗಳನ್ನು ಕೈಬಿಟ್ಟು ನಾವು ಪೇಟೆಯ ಶಬ್ದಗಳ ಬೆನ್ನುಹತ್ತಿದರೆ, ಕೊನೆಗೆ ನಮ್ಮ ಕೈಲಿ ಉಳಿಯುವುದು ಕೇವಲ ಬರಿದಾದ ಅಕ್ಷರಗಳ ಸದ್ದು ಮಾತ್ರ!
ಈ ಸಂಜೆಯ ಮಬ್ಬಿನಲ್ಲಿ ನಿಂತು ನಾವೆಲ್ಲರೂ ನಮ್ಮೊಳಗೆ ಒಂದು ಸಣ್ಣ ತಪಾಸಣೆ ಮಾಡಿಕೊಳ್ಳ ಬೇಕಿದೆ. ಪರಭಾಷೆಯ ಬಣ್ಣಗಳಿಗೆ ಮಾರುಹೋಗಿ ನಮ್ಮ ಮನೆಯ ಅಂಗಳದ ಮಲ್ಲಿಗೆಯನ್ನು ಕಡೆಗಣಿಸುವುದು ಯಾವ ಸೀಮೆಯ ಜಾಣ್ಮೆ? ನಮ್ಮ ಕಿಸೆಯೊಳಗಿನ ಮೊಬೈಲ್ ಪೋನಿಗೆ, ಕಣ್ಣೆದುರಿನ ಕಂಪ್ಯೂಟರಿಗೆ ಕನ್ನಡ ಅರ್ಥವಾಗುವಾಗ, ನಮ್ಮ ಎದೆಯೊಳಗಿನ ರಕ್ತಕ್ಕೆ ಕನ್ನಡದ ಮಾತು ಮರೆತುಹೋಗುವುದು ಹೇಗೆ ಸಾಧ್ಯ? ಇನ್ನಾದರೂ ಆ ಇಂಗ್ಲಿಷಿನ ಆಡಂಬರದ ಮುಸುಕನ್ನು ಕಳಚಿ, ನಮ್ಮದೇ ‘ಆತ್ಮವಿಶ್ವಾಸ’ದಿಂದ, ನಮ್ಮದೇ ನೆಲದ ಬೆಚ್ಚನೆಯ ಕನ್ನಡ ಪದಗಳನ್ನು ಎದೆಯುಬ್ಬಿಸಿ ನಾಲಗೆಯ ಮೇಲೆ ನಲಿಸಬೇಕಿದೆ; ಆಗಲೇ ನಮ್ಮ ಬದುಕಿನ ಮಾತಿಗೊಂದು ನಿಜವಾದ ಅರ್ಥ, ಒಂದು ಆಪ್ತವಾದ ಲಯ ದಕ್ಕುವುದು. ಕನ್ನಡ ಬೆಳೆಸುವುದು ಅಂದರೆ, ಕನ್ನಡವನ್ನು ಬಳಸುವುದು. ಬಳಸದೇ ಬೆಳೆಸಲು ಸಾಧ್ಯವಿಲ್ಲ.
ತುಳುವರು ಸ್ಪೂರ್ತಿಯಾಗಲಿ
ಭಾಷೆ ಎಂಬುದು ಕೇವಲ ಸಂವಹನದ ಮಾಧ್ಯಮವಲ್ಲ. ಅದು ಒಂದು ಸಮುದಾಯದ ಸಂಸ್ಕೃತಿ, ಆಚಾರ-ವಿಚಾರ, ಸಂವೇದನೆ ಹಾಗೂ ಅಸ್ಮಿತೆಯ ಜೀವನಾಡಿ. ಜಗತ್ತಿನ ಎಷ್ಟೋ ಭಾಷೆಗಳು ಜಾಗತೀಕರಣದ ಬಿರುಗಾಳಿಗೆ ಸಿಲುಕಿ ತಮ್ಮತನವನ್ನು ಕಳೆದುಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ, ಕರಾವಳಿ ಕರ್ನಾಟಕದ ತುಳು ಭಾಷಿಕರ ಭಾಷಾ ಪ್ರೇಮ ಪ್ರತಿಯೊಬ್ಬರಿಗೂ ಮಾದರಿಯೇ ಸರಿ.
ತುಳುನಾಡಿನ ಜನರು ತಮ್ಮ ಮಾತೃಭಾಷೆಯನ್ನು ಪ್ರೀತಿಸುವ, ಬಳಸುವ ಮತ್ತು ಉಳಿಸಿಕೊಳ್ಳುವ ಪರಿ ಅನನ್ಯವಾದುದು. ಕನ್ನಡಿಗರಾದ ನಾವು ಭಾಷಾಭಿಮಾನದ ಬಗೆಗೆ ಭಾಷಣಗಳನ್ನು ಮಾಡುವುದಕ್ಕಿಂತ ಹೆಚ್ಚಾಗಿ, ತುಳುವರ ಈ ಸಹಜ ಮತ್ತು ನಿಷ್ಠಾವಂತ ಭಾಷಾ ಪ್ರೇಮವನ್ನು ನಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಂಡರೆ ಸಾಕು, ಕನ್ನಡವು ಎಂದಿಗೂ ಸೊರಗುವುದಿಲ್ಲ.
ತುಳು ಭಾಷಿಕರ ಭಾಷಾ ನಿಷ್ಠೆಯ ಅತ್ಯಂತ ಆಕರ್ಷಕ ಗುಣವೆಂದರೆ ಅವರ ಸಹಜ ಹೊಂದಾಣಿಕೆ ಮತ್ತು ಅನ್ಯೋನ್ಯತೆ. ಎದುರಿಗಿರುವ ವ್ಯಕ್ತಿಗೆ ತುಳು ಅರ್ಥವಾಗುತ್ತದೆ ಅಥವಾ ಮಾತನಾಡಲು ಬರುತ್ತದೆ ಎಂದು ತಿಳಿದ ತಕ್ಷಣ, ಅವರು ಬೇರೆ ಯಾವುದೇ ಭಾಷೆಯ ಹಂಗಿಲ್ಲದೆ ನೇರವಾಗಿ ತುಳು ವಿನ ಮಾತು ಆರಂಭಿಸುತ್ತಾರೆ.
ಅಲ್ಲಿ ಯಾವುದೇ ಕೃತಕ ಮುಜುಗರ, ಬಿಗುಮಾನ ಅಥವಾ ಪರಕೀಯತೆಯ ಭಾವವಿರುವುದಿಲ್ಲ. ಅಪರಿಚಿತರಾಗಿದ್ದರೂ ಭಾಷೆಯ ಮೂಲಕ ಕ್ಷಣಾರ್ಧದಲ್ಲಿ ಆಪ್ತತೆ ಬೆಳೆದುಬಿಡುತ್ತದೆ. ಬೆಂಗಳೂರು, ಮುಂಬೈ, ಅಮೆರಿಕ ಅಥವಾ ಗಲ್ಫ್ ದೇಶಗಳು ಸೇರಿದಂತೆ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಇಬ್ಬರು ತುಳುವರು ಭೇಟಿಯಾದರೆ, ಅಲ್ಲಿ ತುಳುವ ಮಾತುಕತೆ ನಡೆದು ಬಿಡುತ್ತದೆ.
ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದ ಕನ್ನಡಿಗರಲ್ಲಿ ಕಂಡುಬರುವ ಒಂದು ದೊಡ್ಡ ನ್ಯೂನತೆ ಯೆಂದರೆ ಭಾಷಿಕ ಹಿಂಜರಿಕೆ. ಎದುರಿನವರು ಯಾರೆಂದು ತಿಳಿಯುವ ಮುನ್ನವೇ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತು ಆರಂಭಿಸುವ ಪ್ರವೃತ್ತಿ ಬೆಳೆದುಬಿಟ್ಟಿದೆ. ಕನ್ನಡಿಗರ ನಡುವೆಯೇ ಇಂಗ್ಲಿಷ್ ನಲ್ಲಿ ಸಂಭಾಷಣೆ ನಡೆಸುವುದನ್ನು ಒಂದು ಪ್ರತಿಷ್ಠೆಯ ಸಂಕೇತವೆಂದು ತಪ್ಪಾಗಿ ಭಾವಿಸುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ತುಳು ಭಾಷಿಕರಲ್ಲಿ ಈ ಕೀಳರಿಮೆ ಕಾಣುವುದಿಲ್ಲ.
ಕಾರ್ಪೊರೇಟ್ ಕಚೇರಿಯ ಉನ್ನತ ಅಧಿಕಾರಿಯಾಗಿರಲಿ ಅಥವಾ ಸಣ್ಣ ವ್ಯಾಪಾರಿಯಾಗಿರಲಿ, ಎದುರಿನ ವ್ಯಕ್ತಿ ತುಳುವನೆಂದು ತಿಳಿದರೆ ಅಲ್ಲಿ ಇಂಗ್ಲಿಷಿನ ಜಾಗವನ್ನು ಅಚ್ಚ ತುಳು ಆಕ್ರಮಿಸಿ ಕೊಳ್ಳುತ್ತದೆ. ಇದನ್ನು ಕನ್ನಡಿಗರು ಕಲಿಯಬೇಕಿದೆ. ತುಳು ಭಾಷಿಕರ ಇನ್ನೊಂದು ಗಮನಾರ್ಹ ವೈಶಿಷ್ಟ್ಯವೆಂದರೆ, ಮಾತನಾಡುವಾಗ ಅನಗತ್ಯವಾಗಿ ಇಂಗ್ಲಿಷ್ ಶಬ್ದಗಳನ್ನು ತೂರಿಸದಿರುವುದು.
ಇಂದಿನ ಕನ್ನಡ ಸಂಭಾಷಣೆಗಳಲ್ಲಿ ‘ಕಂಗ್ಲಿಷ್’ ಎಂಬ ಮಿಶ್ರಣ ಹೆಚ್ಚಾಗಿ, ವಾಕ್ಯದ ಬಹುತೇಕ ಪದಗಳು ಇಂಗ್ಲಿಷ್ ಆಗಿದ್ದರೆ, ತುಳುವಿನಲ್ಲಿ ಹರಟೆ ಹೊಡೆಯುವಾಗ, ತಮ್ಮದೇ ಆದ ಸೊಗಸಾದ ನುಡಿಗಟ್ಟುಗಳು, ಗಾದೆಗಳು ಮತ್ತು ದೇಸಿ ಶಬ್ದಗಳನ್ನು ಬಳಸಿ ಭಾವನೆಗಳನ್ನು ಸಮರ್ಥವಾಗಿ ವ್ಯಕ್ತಪಡಿಸುತ್ತಾರೆ. ತಾಂತ್ರಿಕ ಅಥವಾ ಆಧುನಿಕ ಪರಿಕಲ್ಪನೆಗಳಿದ್ದರೂ ಸಹ, ತಮ್ಮ ಭಾಷೆಯ ಧಾಟಿಯ ಅದನ್ನು ವಿವರಿಸಿ ಹೇಳುವ ಕಲೆ ಅವರಿಗೆ ಕರಗತವಾಗಿದೆ.
ಮಾತಿನಲ್ಲಿ ಕೃತಕತೆಯಿಲ್ಲದ ಈ ಶೈಲಿಯು ಭಾಷೆಗೆ ಸಹಜ ಲಾವಣ್ಯವನ್ನು ತಂದುಕೊಡುತ್ತದೆ. ತುಳು ಭಾಷೆಗೆ ಅಧಿಕೃತ ಲಿಪಿಯಿದ್ದರೂ, ಅದು ಪ್ರಮುಖವಾಗಿ ಉಳಿದು ಬೆಳೆದು ಬಂದಿರುವುದು ಜನರ ನಾಲಿಗೆಯ ಮೇಲಿನ ಮೌಖಿಕ ಪರಂಪರೆಯಿಂದ. ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳುವ ಹೋರಾಟ ಒಂದು ಕಡೆ ನಡೆಯುತ್ತಿದ್ದರೂ, ಸಾಮಾನ್ಯ ತುಳುವ ಆ ಕಾನೂನು ಮಾನ್ಯತೆಗಳಿಗಾಗಿ ಕಾಯದೆ ದಿನನಿತ್ಯದ ಉಸಿರಾಗಿ ಭಾಷೆಯನ್ನು ಕಾಪಾಡಿದ್ದಾನೆ.
ಪಾಡ್ಡನಗಳು, ಯಕ್ಷಗಾನ, ಕಂಬಳ, ಭೂತಾರಾಧನೆಯಂಥ ಜಾನಪದ ಆಚರಣೆಗಳಲ್ಲಿ ಭಾಷೆ ಯನ್ನು ಹಾಸು ಹೊಕ್ಕಾಗಿ ಬೆಳೆಸಿರುವುದು ಅವರ ಸಂಸ್ಕೃತಿ ಪ್ರೇಮಕ್ಕೆ ಸಾಕ್ಷಿ. ಭಾಷೆಯನ್ನು ಕೇವಲ ಪುಸ್ತಕಗಳಲ್ಲಿ ಬಂಧಿಸದೇ, ಜೀವಂತ ಸಂಸ್ಕೃತಿಯಾಗಿಸುವುದು ಹೇಗೆ ಎಂಬುದಕ್ಕೆ ತುಳುವರೇ ಶ್ರೇಷ್ಠ ಉದಾಹರಣೆ. ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ ನಮಗೆ ಶ್ರೀಮಂತ ಸಾಹಿತ್ಯ ಚರಿತ್ರೆ, ಶಾ ಸ್ತ್ರೀಯ ಭಾಷೆಯ ಸ್ಥಾನಮಾನ ಮತ್ತು ಅಗಾಧವಾದ ಶಬ್ದಭಂಡಾರವಿದೆ. ಆದರೂ, ಮಾರುಕಟ್ಟೆ, ಮಾಲ, ರೆಸ್ಟೋರೆಂಟ್ ಅಥವಾ ಆನ್‌ಲೈನ್ ವೇದಿಕೆಗಳಲ್ಲಿ ಕನ್ನಡವನ್ನು ಬಳಸಲು ನಾವು ಹಲವು ಬಾರಿ ಹಿಂಜರಿಯುತ್ತೇವೆ.
ಎದುರಿನವರು ಇಂಗ್ಲಿಷ್‌ನಲ್ಲಿ ಮಾತನಾಡಿದರೆ ನಾವೇನೋ ಕಮ್ಮಿ ಎಂಬ ಭ್ರಮೆಯಿಂದ ಪರಭಾಷೆಗೆ ಮೊರೆಹೋಗುತ್ತೇವೆ. ತುಳು ಭಾಷಿಕರು ತಮ್ಮ ಭಾಷೆಯ ಬಗ್ಗೆ ಹೊಂದಿರುವ ಹೆಮ್ಮೆ ಮತ್ತು ಸಹಜತೆಯನ್ನು ನಾವು ಮನಸಾ ಅಳವಡಿಸಿಕೊಂಡರೆ, ಕನ್ನಡಿಗರ ಪರಭಾಷಾ ವ್ಯಾಮೋಹ ಮತ್ತು ಕೀಳರಿಮೆಗಳು ತಾವಾಗಿಯೇ ಕರಗಿ ಹೋಗುತ್ತವೆ.
ಪ್ರತಿಯೊಬ್ಬ ಕನ್ನಡಿಗನೂ ತನ್ನ ದೈನಂದಿನ ಸಂಭಾಷಣೆಯಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡುವ ಸಂಕಲ್ಪ ಮಾಡಬೇಕಿದೆ. ಕನ್ನಡಿಗರು ಪರಸ್ಪರ ಭೇಟಿಯಾದಾಗ ಯಾವುದೇ ಅಳುಕಿಲ್ಲದೆ ಅಪ್ಪಟ ಕನ್ನಡದ ವ್ಯವಹರಿಸಬೇಕು. ಮಾತಿನ ಮಧ್ಯೆ ಅನಗತ್ಯವಾಗಿ ಇಂಗ್ಲಿಷ್ ಪದಗಳನ್ನು ಬೆರೆಸದೇ, ನಮ್ಮ ಸುಂದರ ಕನ್ನಡ ಪದಗಳನ್ನೇ ಬಳಸುವ ಪ್ರeಪೂರ್ವಕ ಅಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕು. ಪರಭಾಷೆಯ ಜ್ಞಾನ ಅಗತ್ಯವಿದ್ದರೂ, ಮಾತೃಭಾಷೆಯನ್ನು ಕಡೆಗಣಿಸ ಬಾರದು ಎಂಬ ವಿವೇಕ ತುಳು ಸಮಾಜದಿಂದ ನಮಗೆ ದೊರೆಯುವ ಅತ್ಯಂತ ಪ್ರಮುಖ ಪಾಠವಾಗಿದೆ.