ಪದಸಾಗರ
ಅದೆಷ್ಟೋ ವರ್ಷಗಳ ನಂತರ ಕ್ರಿಕೆಟ್ ಪಂದ್ಯವೊಂದು ಹೃದಯದ ಬಡಿತವನ್ನು ಏರುಪೇರಾಗು ವಂತೆ ಮಾಡಿತು. ಏಷ್ಯಾ ಕಪ್ ಫೈನಲ್ ಪಂದ್ಯ ಅಷ್ಟು ರಣರೋಚಕವಾಗಿತ್ತಾ? ಇತ್ತೀಚಿನ ದಿನಗಳಲ್ಲಿ ಇಂಥ ಬಿಗಿಯಾದ ಪಂದ್ಯ ನಡೆದೇ ಇಲ್ವಾ? ಹೀಗೆ ಕೇಳಿದರೆ ಸಾಕಷ್ಟು ಪಂದ್ಯಗಳನ್ನು ಉಲ್ಲೇಖಿಸಬಹುದು. ಪ್ರತಿ ಐಪಿಎಲ್ ಟೂರ್ನಿಯಲ್ಲಿ ಸಾಕಷ್ಟು ಪಂದ್ಯಗಳು ಕೊನೆಯ ಎಸೆತದ ತನಕ ರೋಚಕತೆ ಉಳಿಸಿಕೊಳ್ಳುತ್ತವೆ. ಸೂಪರ್ ಓವರ್‌ನಲ್ಲಿ ಡಿಸೈಡ್ ಆಗುತ್ತವೆ. ರನ್ ಹೊಳೆಯೇ ಹರಿಯುತ್ತದೆ.
ಕೊನೆಯ ಓವರ್‌ನಲ್ಲಿ ಇಪ್ಪತ್ತೈರು ರನ್ಸ್ ಅಗತ್ಯ ಇದ್ದಾಗಲೂ ಚೇಸ್ ಮಾಡುವ ತಂಡ ಪಂದ್ಯ ಗೆಲ್ಲುತ್ತದೆ. ಹೀಗೆ ರೋಮಾಂಚಕ ಪಂದ್ಯಗಳು ಲೆಕ್ಕವಿಲ್ಲದಷ್ಟು ನಡೆದಿವೆ. ಅಂಥ ಪಂದ್ಯಗಳ ಎದುರು ಏಷ್ಯಾ ಕಪ್ ನ ನಿನ್ನೆಯ ಫೈನಲ್ ಪಂದ್ಯ ಏನೇನೂ ಅಲ್ಲ. ಇದೊಂದು ಬಿಗ್ ಸ್ಕೋರ್ ಥ್ರಿಲ್ಲರೂ ಅಲ್ಲ.. ಲೋ ಸ್ಕೋರ್ ಥ್ರಿಲ್ಲರೂ ಅಲ್ಲ. ಅಂಕಿಅಂಶ ತೆರೆದು ನೋಡಿದರೆ ಅಥವಾ ಅಂತಿಮ ಸ್ಕೋರ್ ಕಾರ್ಡ್ ತೆಗೆದು ನೋಡಿದರೆ ಬಹಳ ಸರ್ವೇ ಸಾಮಾನ್ಯ ಪಂದ್ಯ. ಆದರೆ ಇದು ಎದೆಬಡಿತ ಅಲ್ಲೋಲ ಕಲ್ಲೋಲ ಮಾಡಿಸಿದ್ದು ಯಾಕೆ? ಮೊದಲ ಕಾರಣ, ಈ ಪಂದ್ಯ ನಡೆದದ್ದು ಭಾರತ ಮತ್ತು ಪಾಕಿಸ್ತಾನ ನಡುವೆ. ಎರಡನೇ ಕಾರಣ, ಈ ಪಂದ್ಯದ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆಯೊಂದು ಮಿನಿ ಯುದ್ಧ ನಡೆದು ಹೋಗಿದೆ.
ಪಾಕ್ ವಿರುದ್ಧ ಪಂದ್ಯ ಆಡಬೇಕೋ, ಆಡಬಾರದೋ ಎಂಬ ಕುರಿತು ಗಂಭೀರ ಚರ್ಚೆಗಳೇ ನಡೆದು ಹೋಗಿವೆ. ಇಷ್ಟೆಲ್ಲದರ ನಂತರ ಪಾಕ್ ವಿರುದ್ಧ ಭಾರತ ಲೀಗ್ ಮತ್ತು ನಾಕೌಟ್ ಹಂತದಲ್ಲಿ ಎರಡು ಬಾರಿ ಎದುರಿಸಿ ಎರಡೂ ಪಂದ್ಯ ಗೆದ್ದಾಗಿದೆ. ಕೇವಲ ಗೆದ್ದಿರುವುದು ಮಾತ್ರವಲ್ಲ, ಪಂದ್ಯದುದ್ದಕ್ಕೂ ಎದುರಾಳಿಯನ್ನು ಇನ್ನಿಲ್ಲದ ಮುಜುಗರಕ್ಕೆ ಒಳಪಡಿಸಿದೆ.
ಪಾಕಿಸ್ತಾನ ಹಿಂದೆಂದೂ ಅನುಭವಿಸದ ಅವಮಾನವನ್ನು ಈ ಬಾರಿ ಮೈದಾನದಲ್ಲಿ ಮೈದಾನ ದಾಚೆಗೆ ಅನುಭವಿಸಿದೆ. ಇಷ್ಟೆಲ್ಲಾ ಆಗಿ ಒಂದು ವೇಳೆ ಭಾರತ ಫೈನಲ್ ಪಂದ್ಯದಲ್ಲಿ ಸೋತು ಬಿಟ್ಟಿದ್ದರೆ? ಉಹೂಂ, ಅದರ ಪರಿಣಾಮವನ್ನು ಊಹಿಸೋಕೂ ಆಗುತ್ತಿಲ್ಲ. ಕೇವಲ ಭಾರತ ತಂಡ ಮಾತ್ರವಲ್ಲ, ಪ್ರಧಾನಿ ಮೋದಿ ಕೂಡ ಇನ್ನಿಲ್ಲದ ಟೀಕೆ ಅವಮಾನಗಳನ್ನು ಎದುರಿಸಬೇಕಾಗುತ್ತಿತ್ತು. ಹಾಗಾಗಲಿ ಎಂದು ನಮ್ಮದೇ ದೇಶದ ಒಂದು ದೊಡ್ಡ ಸಮೂಹ ಕಾಯುತ್ತಲೂ ಇತ್ತು! ಹೀಗಾಗಿ ಈ ಪಂದ್ಯದ ಪ್ರತಿ ಎಸೆತ, ಪ್ರತಿ ರನ್, ಪ್ರತಿ ವಿಕೆಟ್ ಕೂಡ ಹೃದಯಸಮುದ್ರವನ್ನು ಕಲಕಿ ಹಾಕುತ್ತಿತ್ತು.
ಇದನ್ನೂ ಓದಿ: Naveen Sagar Column: ಪಾಕಿಸ್ತಾನವನ್ನು ಸೋಲಿಸಲು ಸ್ಮೃತಿ ಮಂಧನ ತಂಡವೇ ಸಾಕು !
ಪಾಕ್ ವಿರುದ್ಧ ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದು ಲೆಕ್ಕಕ್ಕೆ ಬರುತ್ತಲೇ ಇರಲಿಲ್ಲ. ಫೈನಲ್‌ನ ಸೋಲೇ ದೊಡ್ಡದಾಗಿ ಬಿಡುತ್ತಿತ್ತು. ಪಾಕಿಸ್ತಾನದವರ ಮೆರೆತವನ್ನಂತೂ ತಡೆಯೋದು ಸಾಧ್ಯವೇ ಇರ್ತಿರಲಿಲ್ಲ. ಇಂಥ ಸಂದರ್ಭದಲ್ಲಿ ಭಾರತ ಒತ್ತಡ ಮೆಟ್ಟಿ ನಿಂತು ಫೈನಲ್ ಗೆದ್ದಿದೆ, ಚಾಂಪಿಯನ್ ಆಗಿದೆ.
ಪಾಕಿಸ್ತಾನವನ್ನು ಬಗ್ಗುಬಡಿದದ್ದು ಒಂದು ತೂಕವಾದರೆ, ಆ ನಂತರ ಪಾಕಿಸ್ತಾನವನ್ನು ಅವಮಾನಿಸಿದ ರೀತಿ ಇದೆಯಲ್ಲ, ಆ ತೂಕವೇ ಇನ್ನೊಂದು! ಇದು ಬದಲಾದ ಭಾರತದ ಹೊಸ ವರಸೆ. ಬಲಿಷ್ಟ ಭಾರತದ ಅಸಲಿ ಬಾಡಿ ಲಾಂಗ್ವೇಜ್. ಗುಸ್ ಕೆ ಮಾರೇಂಗೆ ಎಂಬ ಮಾತಿಗೆ ತಕ್ಕಂತೆ ನುಗ್ಗಿ ಹೊಡೆಯುವ, ಹೊಡೆದಿದ್ದೇವೆ ಎಂದು ನೇರವಾಗಿ ಹೇಳಿಕೊಳ್ಳುವ, ನಿಮ್ಮೊಂದಿಗೆ ಸ್ನೇಹ ಬೇಕಾಗಿಲ್ಲ ಎಂದು ಮುಲಾಜಿಲ್ಲದೇ ತೋರಿಸ್ಕೊಳ್ಳುವ ಹೊಸ ಭಾರತವಿದು.
ಕ್ರಿಕೆಟ್ ವಿಷಯಕ್ಕೆ ಬಂದರೆ, ಮೊದಲೆಲ್ಲ ಪಾಕ್ ವಿರುದ್ಧ ಭಾರತ ತಂಡ ಹೀಗೆ ಧೈರ್ಯದಿಂದ ಇರುತ್ತಲೇ ಇರಲಿಲ್ಲ. ಪಂದ್ಯ ಆಡಲು ಕಣಕ್ಕಿಳಿಯುವ ಮುನ್ನವೇ ಸೋಲೊಪ್ಪಿಕೊಂಡಂತೆ ಇರುತ್ತಿತ್ತು. ಪಾಕ್ ವಿರುದ್ಧ ಪಂದ್ಯ ಆಡುವ ಸಂದರ್ಭ ಬಾರದಿರಲಿ ಎಂದು ಪ್ರಾರ್ಥಿಸುತ್ತಿತ್ತು. ಶುಕ್ರವಾರವಂತೂ ಪಂದ್ಯವೇ ನಿಗದಿಯಾಗದಿರಲಿ ಎಂದು ಬೇಡಿಕೊಳ್ಳುತ್ತಿರುತ್ತಿತ್ತು. ಅದಕ್ಕೆ ಸರಿಯಾಗಿ ಅಜರ್ ಥರದ ನಾಯಕರು, ಭಾರತದ ಅರ್ಧ ಮನೋಬಲ ಕುಗ್ಗಲು ಕಾರಣರಾಗಿ ಬಿಡುತ್ತಿದ್ದರು.

ಶಾರ್ಜಾದಲ್ಲಿ 1986ರಲ್ಲಿ ನಡೆದ ಆಸ್ಟ್ರೇಲೇಷಿಯಾ ಕಪ್‌ನ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತ ಸೋತದ್ದು ಯಾರು ತಾನೇ ಮರೆಯಲು ಸಾಧ್ಯ? ಚೇತನ್ ಶರ್ಮಾ ಎಸೆದ ಕೊನೆಯ ಎಸೆತವನ್ನು ಸಿಕ್ಸರ್ ಎತ್ತಿದ ಜಾವೆದ್ ಮಿಯಂದಾದ್ ಅಂದು ಭಾರತವನ್ನು ಕೇವಲ ಆ ಒಂದು ಪಂದ್ಯದಲ್ಲಿ ಸೋಲಿಸಿರಲಿಲ್ಲ, ಮುಂದಿನ ಹತ್ತು ವರ್ಷಗಳ ಮಟ್ಟಿಗೆ ಭಾರತದ ಆತ್ಮವಿಶ್ವಾಸವನ್ನೇ ಕೊಂದು ಹಾಕಿದ್ದ. ಆ ಪಂದ್ಯದ ಬಗ್ಗೆ ಬರೆದರೆ ಅದೇ ಒಂದು ಅದ್ಭುತ ಕತೆಯಾದೀತು.
ಗೆಲ್ಲಲು ಕೊನೆಯ ಎಸೆತದಲ್ಲಿ ನಾಲ್ಕು ರನ್ ಬೇಕಿದ್ದಾಗ ಚೇತನ್ ಶರ್ಮಾ ಯಾರ್ಕರ್ ಹಾಕೋಕೆ ಹೋಗಿ ಲೋ ಫುಲ್‌ಟಾಸ್ ಎಸೆದುಬಿಡುತ್ತಾನೆ. ಜಾವೆದ್ ಮಿಯಂದಾದ್ ಅದನ್ನು ಮಿಡ್ ವಿಕೆಟ್ ನತ್ತ ಸಿಕ್ಸರ್ ಬಾರಿಸಿ ಬಿಡುತ್ತಾನೆ. ಭಾರತ ಅಂದಿನಿಂದ ಮುಂದಿನ ಹತ್ತು ವರ್ಷಗಳ ಕಾಲ ಆಘಾತ ದಿಂದ ಹೊರಬರೋದೇ ಇಲ್ಲ. ಶಾರ್ಜಾದಲ್ಲಿ ಟೂರ್ನಮೆಂಟ್ ಬಂತು ಅಂದರೆ ಭಾರತದ ಕ್ರಿಕೆಟ್ ಅಭಿಮಾನಿಗಳು ಆಸೆಯನ್ನೇ ಬಿಟ್ಟುಬಿಡುತ್ತಿದ್ದರು.
ಪಾಕಿಸ್ತಾನ ವಿರುದ್ಧದ ಪಂದ್ಯ ಶುಕ್ರವಾರವೇ ನಡೆಯುತ್ತಿತ್ತು. ಸ್ಟೇಡಿಯಮ್ಮಿನಲ್ಲೇ ಅಲ್ಲಾಹ್ ಹೋ ಅಕ್ಬರ್ ಮೊಳಗುತ್ತಿರುತ್ತಿತ್ತು. ಇಡೀ ಸ್ಟೇಡಿಯಮ್ಮಿನ ತೊಂಬತ್ತು ಭಾಗ ಪಾಕ್ ಬೆಂಬಲಿಗರಿಂದ ತುಂಬಿ ತುಳುಕುತ್ತಿರುತ್ತಿತ್ತು. ಭಾರತದಿಂದ ಹೋಗುವ ಬಾಲಿವುಡ್ ನಟನಟಿಯರೂ ಪರೋಕ್ಷವಾಗಿ ಅಥವಾ ಅನಿವಾರ್ಯಕ್ಕೊಳಗಾಗಿ ಪಾಕಿಸ್ತಾನದ ಪರ ನಿಂತಿರುತ್ತಿದ್ದರು. ಬಾಲಿವುಡ್ಡಿಗರ ನಾಯಕ ನಾಗಿ ದಾವೂದ್ ಇಬ್ರಾಹಿಂ ಸ್ಟೇಡಿಯಮ್ಮಲ್ಲಿ ವಿರಾಜಮಾನನಾಗಿರುತ್ತಿದ್ದ. ಇಂಥ ವಾತಾವರಣ ದಲ್ಲಿ ಪಾಕ್ ವಿರುದ್ಧ ಭಾರತ ಆಡಬೇಕಿರುತ್ತಿತ್ತು.
ಇಷ್ಟೆಲ್ಲದರ ಜೊತೆ ಪಾಕ್ ತಂಡ ಅದ್ಭುತವಾಗಿತ್ತು. ಇಮ್ರಾನ್ ಖಾನ್, ಮಿಯಂದಾದ್, ಇಜಾಜ್ ಅಹ್ಮದ್, ಸಲೀಂ ಮಲಿಕ್, ಅಕ್ರಂ, ಖಾದಿರ್, ತೌಸಿಫ್ ಹೀಗೆ ಘಟಾನುಘಟಿಗಳಿಂದ ತುಂಬಿರುತ್ತಿತ್ತು. ತೊಂಬತ್ತರ ದಶಕದಲ್ಲಂತೂ ವಕಾರ್ ಯೂನಸ್, ಇಂಜುಮಾಮ್, ಆಫ್ರಿದಿ, ಸಯೀದ್ ಅನ್ವರ್, ಆಮಿರ್ ಸೋಹೆಲ್, ಮುಷ್ತಾಕ್, ಆಕಿಬ್ ಜಾವೆದ್, ಮೊಹಮ್ಮದ್ ಆಮೀರ್, ಒಬ್ಬರನ್ನೊಬ್ಬರು ಮೀರಿಸೋ ಪ್ರತಿಭೆಗಳು, ಛಲವಾದಿಗಳು, ಕಿರಿಕ್ ಪಾರ್ಟಿಗಳು ಎಲ್ಲ ಸೇರಿ ಭಾರತದ ಕಾನ್ಫಿಡೆನ್ಸನ್ನೇ ಬಡಿದು ಹಾಕುತ್ತಿದ್ದರು.
ಭಾರತದ ಕ್ರಿಕೆಟ್ ಬೋರ್ಡ್, ಸರಕಾರ ಎಲ್ಲವೂ ಅಂದಿಗೆ ಬಡಕಲೆಂಬಂತೇ ಇದ್ದವು. ಹೀಗಾಗಿ ಭಾರತ ಒಂದೋ ಪಾಕ್ ವಿರುದ್ಧ ಪಂದ್ಯವನ್ನು ಅವಾಯ್ಡ್ ಮಾಡುತ್ತಿತ್ತು, ಇಲ್ಲವೇ ಆಡಿ ಸೋಲುತ್ತಿತ್ತು. ಹೀಗಿದ್ದ ಭಾರತ ಬದಲಾಗಿದ್ದು ಹೇಗೆ? ಯಾವಾಗ? 1975ರಲ್ಲಿ ವಿಶ್ವಕಪ್ ಪಂದ್ಯಾ ವಳಿ ಪ್ರಾರಂಭವಾದರೂ ಭಾರತ ಪಾಕ್ ಒಬ್ಬರನ್ನೊಬ್ಬರು ಮೊದಲ ಬಾರಿ ಎದುರಿಸಿದ್ದು 1992 ರಲ್ಲೇ.
1987ರಲ್ಲಿ ಭಾರತ-ಪಾಕ್ ಜಂಟಿಯಾಗಿ ವಿಶ್ವಕಪ್ ಆತಿಥ್ಯ ವಹಿಸಿದ್ದಾಗ, ಪಾಕ್ ವಿರುದ್ಧ ಸೆಮಿಸ್ ಆಡುವಂತಾಗಬಾರದು ಎಂದು ಭಾರತ ಎಷ್ಟೆಲ್ಲ ಸರ್ಕಸ್ ಮಾಡಿತ್ತು. ಆದರೆ 1992ರ ಹೊತ್ತಿಗೆ ಅದಾಗಲೇ ಸಚಿನ್ ತೆಂಡೂಲ್ಕರ್ ಎಂಬ ಕ್ರಿಕೆಟ್ ದೇವರ ಉದಯವಾಗಿತ್ತು. ಭಾರತದ ಕ್ರಿಕೆಟ್ ನಲ್ಲಿ ಬದಲಾವಣೆ ಪರ್ವವೂ ಶುರುವಾಗಿತ್ತು. ತೊಂಬತ್ತೆರಡರ ವಿಶ್ವಕಪ್ ಪಂದ್ಯದಲ್ಲಿ ಭಾರತ ಪಾಕಿಸ್ತಾನ ವನ್ನು ಹೊಸಕಿ ಹಾಕಿತ್ತು. ಆ ವರ್ಷ ಪಾಕಿಸ್ತಾನ ಕಪ್ ಗೆದ್ದಿದ್ದೇನೋ ಹೌದು, ಆದರೆ ಭಾರತದೆದುರು ಸೋತಿತ್ತು.
ಭಾರತ ಅಂದಿನಿಂದ ಇಂದಿನ ತನಕ ವಿಶ್ವಕಪ್‌ನಲ್ಲಿ ಪಾಕ್ ಎದುರು ಅಜೇಯವಾಗಿಯೇ ಉಳಿದಿದೆ. ಭಾರತದ ಆತ್ಮವಿಶ್ವಾಸ ಚೂರೇ ಚೂರು ಗಟ್ಟಿಯಾದದ್ದು 1992ರಲ್ಲಿ. ತೊಂಬತ್ತಾರರಲ್ಲಿ ಮುಖಾ ಮುಖಿಯಾದಾಗ ಆಮೀರ್ ಸೋಹೇಲ್ ಮತ್ತು ವೆಂಕಟೇಶ್ ಪ್ರಸಾದ್ ನಡುವಣ ಸಮರ ನಮಗೆ ಸೆನ್ಸೇಷನಲ್ ಅನಿಸಿದ್ದು ಅದೇ ಕಾರಣಕ್ಕೆ. ಎರಡು ದಶಕಗಳಿಂದ ಯಾವತ್ತೂ ಭಾರತ ಪಾಕ್ ಎದುರು ಹೀಗೆ ಕೌಂಟರ್ ಕೊಟ್ಟಿರಲೇ ಇಲ್ಲ.
ಭಾರತೀಯರ ಪಾಲಿಗೆ ಅವಿಸ್ಮರಣೀಯ ಘಟನೆ ಅದು. ಅಲ್ಲಿಂದ ಹಂತಹಂತವಾಗಿ ಭಾರತವು, ಪಾಕಿಸ್ತಾನದ ವಿರುದ್ಧ ಗಟ್ಟಿ ಆಗುತ್ತಲೇ ಹೋಯ್ತು. ಅಲ್ಲೊಂದು ಇಲ್ಲೊಂದು ಸೋಲು ಬಂದಿದೆ. ಆದರೆ ಗೆಲುವೇ ಜಾಸ್ತಿ. ಮ್ಯಾಚ್ ಫಿಕ್ಸಿಂಗ್ ಪ್ರಕರಣದ ನಂತರ ಭಾರತ ತಂಡ ಸ್ವಚ್ಛವಾಯ್ತು. ಪಾಕಿಸ್ತಾನಕ್ಕಾಗಿ ಆಡುತ್ತಿದ್ದ, ಪಾಕಿಸ್ತಾನಿಗಳಿಗೆ ಹೆದರುತ್ತಿದ್ದ, ಪಾಕಿಸ್ತಾನವನ್ನು ಗುಪ್ತವಾಗಿ ಪ್ರೀತಿಸು ತ್ತಿದ್ದ ಆಟಗಾರರನ್ನೆಲ್ಲ ಗುಡಿಸಿ ಹೊರ ಹಾಕಲಾಯ್ತು.
ಗಂಗೂಲಿ ಎಂಬ ದಾದಾ ಆಗಮನವಾಯ್ತು. ಕೇವಲ ಪಾಕ್ ಮಾತ್ರವಲ್ಲ ಜಗತ್ತಿನ ಯಾವುದೇ ತಂಡವನ್ನೂ ನಾವು ಚಚ್ಚಿ ಬಿಸಾಕಬಲ್ಲೆವು ಎಂಬ ಗಟ್ಟಿತನ ಭಾರತ ತಂಡದಲ್ಲಿ ಕಾಣಿಸಲು ಶುರುವಾಯ್ತು. ಆದರೆ ಆಗ ತಂಡದಲ್ಲಿದ್ದ ಕಿಚ್ಚು ಮತ್ತು ಕೆಚ್ಚು ದೇಶವಾಳುವ ಸರಕಾರಕ್ಕೆ ಇರಲಿಲ್ಲ. ಅದು ಎಷ್ಟು ಮ್ಯಾಟರ್ ಆಗುತ್ತದೆ ಎಂಬುದು ಗೊತ್ತಾಗ್ತಾ ಇರೋದು ಈಗ.
ಅರ್ಥಾತ್ ಮೋದಿ ಯುಗದಲ್ಲಿ. ಸರಕಾರ ಮತ್ತು ಕ್ರಿಕೆಟ್ ಮಂಡಳಿ ಇಬ್ಬರೂ ಗಟ್ಟಿ ಬೆಂಬಲಕ್ಕೆ ನಿಲ್ಲಬಲ್ಲವರಾದಲ್ಲಿ, ಆಟಗಾರರ ಆಟಿಟ್ಯೂಡ್‌ಗೆ ಪ್ರೋತ್ಸಾಹ ನೀಡುವಂತಿದ್ದಲ್ಲಿ, ಅದು ಎಂಥ ಬದಲಾವಣೆ ತರಬಲ್ಲದು ಎಂಬುದಕ್ಕೆ ಇಂದಿನ ಕ್ರಿಕೆಟ್ ತಂಡ ಸಾಕ್ಷಿ. ಕ್ರಿಕೆಟ್ ಮಾತ್ರವಲ್ಲ ಬೇರೆ ಕ್ರೀಡೆಗಳಲ್ಲೂ ಭಾರತ ಇಂದು ತಲೆ ಎತ್ತಿ ನಿಲ್ಲುವಂತಾಗಿದೆ.
ಭಾರತ-ಪಾಕ್ ನಡುವಣ ಪಂದ್ಯ ಅಂದರೆ ಈಗ ಒನ್ ಸೈಡೆಡ್ ಪಂದ್ಯಗಳಾಂತಾಗಿವೆ. ನಮಗೆ ಸ್ಪರ್ಧೆಯೇ ಅಲ್ಲ ಎಂದು ಓಪನ್ನಾಗಿ ಸೂರ್ಯಕುಮಾರ್ ಯಾದವ್ ಹೇಳುತ್ತಿದ್ದಾನೆ. ಆ ಮೂಲಕ ಪಾಕ್ ಗಾಯಕ್ಕೆ ಉಪ್ಪು ಸವರುತ್ತಿದ್ದಾನೆ. ಮೈದಾನದಲ್ಲಿ ಪಾಕಿಗಳನ್ನು ಚಲ್ ಹಟ್ ಅಂತ ಹ್ಯಾಂಡ್ ಶೇಕ್ ಕೂಡ ಮಾಡದೇ ಓಡಿಸುತ್ತಿದ್ದಾರೆ. ಅವರ ಚಿಲ್ಲರೆ ಶೋಕಿಗಳಿಗೆ ಅಪ್ಪನಂಥ ಕೌಂಟರ್ ಕೊಟ್ಟು ಆಟದ ಮೂಲಕವೂ ಉತ್ತರ ಕೊಟ್ಟು ಉರಿಸುತ್ತಿದ್ದಾರೆ.
ಬೈಲ್ಯಾಟರಲ್ ಸರಣಿ ಬೇಕಿಲ್ಲ, ಐಪಿಎಲ್‌ಗೆ ನಿಮಗೆ ಎಂಟ್ರಿ ಇಲ್ಲ, ನಿಮ್ಮೊಂದಿಗೆ ನ್ಯೂಟ್ರಲ್ ಜಾಗಗಳಲ್ಲೊ ಸರಣಿ ಆಡಲ್ಲ ಎಂದು ಸ್ಪಷ್ಟವಾಗಿ ದೂರವಿಟ್ಟಿರೋ ಭಾರತ, ಟೂರ್ನಮೆಂಟ್ ಅಂತ ಬಂದಾಗ ಮೈ ಗೇಮ್ ಮೈ ರೂಲ್ ಎಂಬಷ್ಟು ಸ್ಟ್ರಾಂಗ್ ಆಗಿದೆ. ಶಾರ್ಜಾ ಪಕ್ಕದ ದುಬೈ ಯಲ್ಲೇ ಆಡಿದರೂ ಈಗ ಭಾರತಕ್ಕೆ ಭಯವೇ ಇಲ್ಲ. ಹೇಳಿ ಹೇಳಿ ಪಾಕಿಸ್ತಾನವನ್ನ್ ಸೋಲಿಸು ತ್ತಿದ್ದಾರೆ. ಅಂದಿನ ಆ ಬಾಲಿವುಡ್ಡಿಗರು, ದಾವೂದ್ ಯಾರೂ ಕಾಣುತ್ತಿಲ್ಲ.
ಖುದ್ದು ನರೇಂದ್ರ ಮೋದಿ ಟ್ವೀಟ್ ಮಾಡಿ ಆಟಗಾರರ ಮನೋಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡ್ತಿದ್ದಾರೆ. ಪಾಕ್ ವಿರುದ್ಧ ಗೆದ್ದ ಪಂದ್ಯವನ್ನು ಸೇನೆಗೆ ಅರ್ಪಿಸೋದಕ್ಕೆ, ಪಂದ್ಯದ ಹಣವನ್ನು ಸೇನೆಗೆ, ಪಹಲ್ಗಾಮ್ ಸಂತ್ರಸ್ತರಿಗೆ ನೀಡುವುದಕ್ಕೆ ತಂಡ ಮುಂದಾದರೆ, ಅತ್ತ ಬಿಸಿಸಿಐ, ಗೆದ್ದಿರುವ ಏಷ್ಯಾಕಪ್ ಟ್ರೋಫಿಯನ್ನು ಆ ಪಾಕಿಯ ಕೈಯಿಂದ ಪಡೆಯೋದು ಬೇಡ, ಅಲ್ಲೇ ಬಿಟ್ಟು ಬನ್ನಿ ಎಂದು ಹೇಳಿ, ಪ್ರೈಜ್ ಮನಿಯ ಹತ್ತು ಪಟ್ಟು ಹಣ ಘೋಷಣೆ ಮಾಡುತ್ತೆ. ಪಾಕಿಸ್ತಾನವನ್ನು ಇನ್ನಿಲ್ಲದಂತೆ ಮುಜುಗರಕ್ಕೆ ಒಳಪಡಿಸಲಾಗುತ್ತೆ. ಇದು ಬದಲಾದ ಭಾರತ!
ಭಾರತ ಪಾಕ್ ಮೇಲೆ ಪ್ರತಿದಾಳಿ ಮಾಡಬಾರದಿತ್ತು ಎನ್ನುವವರೇ, ಪಾಕ್ ವಿರುದ್ಧ ಪಂದ್ಯ ಆಡಬಾರದು ಎಂದು ಹೊಸ ವರಸೆ ತೋರಿದರು. ಗೆದ್ದು ಹ್ಯಾಂಡ್‌ಶೇಕ್ ಮಾಡದೇ ಇದ್ದಾಗ, ಭಾರತ ಕ್ರೀಡೆಯಲ್ಲಿ ರಾಜಕೀಯ ಬೆರೆಸುತ್ತಿದೆ ಎಂದು ಗೋಳಾಡಿದರೆ, ಈಗ ಸೋತಿದ್ದಿದ್ದರೆ ಅವರದ್ದು ಇನ್ನೊಂದು ರಾಗವಿರುತ್ತಿತ್ತು. ಆದರೆ ಯಾವುದಕ್ಕೂ ಭಾರತ ತಂಡ ಅವಕಾಶ ನೀಡಲೇ ಇಲ್ಲ. ಪಾಕಿಸ್ತಾನವನ್ನು ಮೂರು ಬಾರಿ ಸೋಲಿಸಿ ಚಾಂಪಿಯನ್ ಆದದ್ದಷ್ಟೇ ಅಲ್ಲ, ಸರಕಾರ ಹಾಗೂ ಮೋದಿಯನ್ನೂ ಕಾಪಾಡಿಬಿಟ್ಟಿತು.
ಯುದ್ಧಭೂಮಿಯೇ ಆಗಲಿ, ಕ್ರಿಕೆಟ್ಟೇ ಆಗಲಿ ಪಾಕಿಸ್ತಾನ ಯಾವತ್ತಿಗೂ ಭಾರತದ ಎದುರು ನಿಲ್ಲಲಾಗದು ಎಂಬುದು ಸಾಬೀತಾಗಿದೆ. ಸದ್ಯದ ಒಂದೇ ಕೊರಗು ಏನೆಂದರೆ, ಲೈವ್ ಟೆಲಿಕಾಸ್ಟ್ ನಲ್ಲಿ ಕ್ರೀಡೆ ನೋಡಬಹುದು, ಯುದ್ಧ ನೋಡಲಾಗುವುದಿಲ್ಲ. ಸಾಕ್ಷಿ ಕೇಳುವವರ ಬಾಯಿ ಮುಚ್ಚಿಸೋದಕ್ಕೆ ಮೋದಿ ಅದೊಂದು ಸೌಲಭ್ಯ ತರಬೇಕಿತ್ತು, ಏನಂತೀರಿ?