ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ganesh Bhat Column: ಇಂದಿನ ಭಾರತ ಎಂದಿಗೂ ನೇಪಾಳ-ಬಾಂಗ್ಲಾ ಆಗದು

ನೆರೆದೇಶಗಳಲ್ಲಿ ಕ್ಷಿಪ್ರಕ್ರಾಂತಿಗಳಾಗುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೂ ಅಂಥ ಸ್ಥಿತಿ ಒದಗುವ ಸಾಧ್ಯತೆ ಯಿದೆಯೇ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಿರಬಹುದು. ಭಾರತದಲ್ಲೂ ಹೀಗೊಂದು ಕ್ರಾಂತಿಯಾಗಿ ಈಗಿನ ಸರಕಾರ ಬಿದ್ದು ಹೋಗಲಿ ಎಂದು ವಿಪಕ್ಷಗಳೂ ಸೇರಿದಂತೆ ಕೆಲವಷ್ಟು ಸ್ಥಾಪಿತ ಹಿತಾಸಕ್ತಿಗಳು ಆಶಿಸುತ್ತಿವೆ.

ಚರ್ಚಾ ವೇದಿಕೆ

ಗಣೇಶ್‌ ಭಟ್‌, ವಾರಣಾಸಿ

ಭಾರತದಲ್ಲೂ ಸರಕಾರದ ವಿರುದ್ಧ ಜನರು ತಿರುಗಿ ಬಿದ್ದು ಆಡಳಿತಾರೂಢರನ್ನು ಕಿತ್ತೊಗೆದ ಉದಾಹರಣೆಗಳಿವೆ; ಆದರೆ ಹಿಂಸಾತ್ಮಕವಾಗಿ ಅಲ್ಲ. ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಯನ್ನು ಹೇರಿ, ವಿಪಕ್ಷಗಳ ನಾಯಕರನ್ನು ಜೈಲಿಗಟ್ಟಿದಾಗಲೂ ಅಹಿಂಸಾ ತ್ಮಕವಾಗಿ ಪ್ರತಿಭಟಿಸಿದ ಜನರು, 1977ರ ಚುನಾವಣೆಯಲ್ಲಿ ಇಂದಿರಾರನ್ನು ಸೋಲಿಸಿ ಆಡಳಿತ ವ್ಯವಸ್ಥೆಯನ್ನು ಬದಲಿಸಿದರು.

ಭಾರತದ ನೆರೆರಾಷ್ಟ್ರಗಳ ರಾಜಕೀಯ ಪರಿಸ್ಥಿತಿ ಸರಿಯಾಗಿಲ್ಲ. ಪಾಕಿಸ್ತಾನವಂತೂ ಪೂರ್ಣ ಪ್ರಮಾಣದ ಪ್ರಜಾಪ್ರಭುತ್ವ ದೇಶವಾಗಲೇ ಇಲ್ಲ. ಅಲ್ಲಿ ಮಿಲಿಟರಿಯು ಅಧಿಕೃತವಾಗಿ 4 ಬಾರಿ ಆಡಳಿತವನ್ನು ನೇರವಾಗಿ ಕೈಗೆ ತೆಗೆದುಕೊಂಡಿದೆ. ಸುಮಾರು 33 ವರ್ಷಗಳಷ್ಟು ಕಾಲ ಅಲ್ಲಿ ಸೇನಾಡಳಿತವಿತ್ತು. ಇಂದು ಪಾಕಿಸ್ತಾನದ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಶೆಹಬಾಜ್ ಷರೀಫ್ ಅವರು ಸೇನಾ ಮುಖ್ಯಸ್ಥ ಅಸಿಮ್ ಮುನೀರ್‌ನ‌ ಕೈಗೊಂಬೆಯಾಗಿರುವುದು ಜಗಜ್ಜಾಹೀರಾಗಿರುವ ಸಂಗತಿ.

2022ರಲ್ಲಿ ಆರ್ಥಿಕ ದಿವಾಳಿತನಕ್ಕೆ ಸಿಲುಕಿದ್ದ ಶ್ರೀಲಂಕಾದಲ್ಲೂ ಕ್ಷಿಪ್ರಕ್ರಾಂತಿಯಾಗಿ ಪ್ರಭುತ್ವದ ಬದಲಾವಣೆಯಾಗಿತ್ತು. ಕಳೆದ ವರ್ಷ ಬಾಂಗ್ಲಾದೇಶದಲ್ಲಿ ದಂಗೆ ನಡೆದು, ಪ್ರಧಾನಿ ಶೇಖ್ ಹಸೀನಾರ ಪದಚ್ಯುತಿಯಾದಾಗ, ಮಧ್ಯಸ್ಥಿಕೆ ವಹಿಸಿ ಮೊಹಮ್ಮದ್ ಯೂನುಸ್‌ರನ್ನು ಮಧ್ಯಂತರ ಆಡಳಿತ ಗಾರರನ್ನಾಗಿ ನೇಮಿಸಿದ್ದು ಅಲ್ಲಿನ ಮಿಲಿಟರಿಯೇ! ಬಾಂಗ್ಲಾದಲ್ಲಿ ಶೀಘ್ರದಲ್ಲೇ ಸಾರ್ವತ್ರಿಕ ಚುನಾವಣೆ ನಡೆಸುವ ಭರವಸೆ ನೀಡಿದ್ದ ಯೂನುಸ್, 2026ರ ಏಪ್ರಿಲ್‌ವರೆಗೆ ಅದನ್ನು ಮುಂದೂಡಿ ದ್ದಾರೆ.

ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳ ಮೇಲೆ, ಶೇಖ್ ಹಸೀನಾರ ‘ಅವಾಮಿ ಲೀಗ್’ ಪಕ್ಷದ ಸದಸ್ಯರ ಮೇಲೆ ಕೊಲೆ-ಅತ್ಯಾಚಾರಗಳಂಥ ದೌರ್ಜನ್ಯಗಳು ಇಂದಿಗೂ ಮುಂದುವರಿದಿವೆ. ನೇಪಾಳದಲ್ಲಿ ‘ಜೆನ್ ಝೀ’ (1990ರ ನಂತರ ಹಾಗೂ 2010ರ ಮೊದಲು ಜನಿಸಿದ ಯುವಜನರನ್ನು ‘ಜೆನರೇಷನ್ ಝೆಡ್’ ಅಥವಾ ‘ಜೆನ್ ಝೆಡ್ ಅಥವಾ ಜೆನ್ ಝೀ’ ಎನ್ನುವುದುಂಟು) ನಡೆಸಿದ ದಂಗೆ ಮತ್ತು ಹಿಂಸಾಚಾರ ದಿಂದಾಗಿ, ಕೆ.ಪಿ.ಶರ್ಮಾ ಓಲಿ ನೇತೃತ್ವದ ಸರಕಾರ ಪತನಗೊಂಡು, ಇದೀಗ ಸುಶೀಲಾ ಕರ್ಕಿಯವರು ಮಧ್ಯಂತರ ಸರಕಾರದ ಪ್ರಧಾನಿಯಾಗಿ ನಿಯುಕ್ತರಾಗಿದ್ದಾರೆ.

ಇದನ್ನೂ ಓದಿ: Ganesh Bhat Column: ಜಾಗತಿಕವಾಗಿ ವಿಫಲವಾಗಿರುವ ಸೋಷಿಯಲಿಸಂ ಭಾರತಕ್ಕೆ ಬೇಕೇ ?

2008ರಲ್ಲಿ, ಮಾವೋವಾದಿ ಕಮ್ಯುನಿಸ್ಟ್ ಸಂಘಟನೆಗಳ ಹೋರಾಟಕ್ಕೆ ಮಣಿದು, ನೇಪಾಳದ ಅರಸ ಗ್ಯಾನೇಂದ್ರ ಶಾ ಸಿಂಹಾಸನದಿಂದ ಇಳಿದ ನಂತರ ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಆರಂಭವಾಯಿತು. ಕಮ್ಯುನಿಸ್ಟ್ ಪಕ್ಷಗಳೇ ಅಧಿಕಾರ ಹಿಡಿದವು. ಆದರೆ ನೇಪಾಳದ ಪ್ರಜಪ್ರಭುತ್ವ ವ್ಯವಸ್ಥೆ ಎಷ್ಟು ಅಸ್ಥಿರವಾಗಿತ್ತೆಂದರೆ, ಕಳೆದ 17 ವರ್ಷಗಳಲ್ಲಿ ಅಲ್ಲಿ 13 ಬಾರಿ ಪ್ರಧಾನಿಗಳು ಬದಲಾದರು.

ಒಳಜಗಳ, ಗುಂಪುಗಾರಿಕೆಗಳಿಂದಾಗಿ ರಾಜಕೀಯ ನಾಯಕರುಗಳು ನಿರಂತರವಾಗಿ ಒಕ್ಕೂಟಗಳನ್ನು ಬದಲಾಯಿಸುತ್ತಾ ಹೋದರು. ಇದರಿಂದಾಗಿ ಆಗಾಗ ಸರಕಾರಗಳು ಬೀಳುತ್ತಾ ಹೋದವು. ಯಾವೊಂದು ಸರಕಾರವೂ ಅಲ್ಲಿ 5 ವರ್ಷಗಳನ್ನು ಪೂರೈಸಲೇ ಇಲ್ಲ. ರಾಜಕೀಯ ಅಸ್ಥಿರತೆ ಯಿಂದಾಗಿ ನೇಪಾಳದ ಆರ್ಥಿಕತೆಯೂ ಕುಸಿಯಿತು, ಭ್ರಷ್ಟಾಚಾರ ಮಿತಿಮೀರಿತು.

ಪ್ರಾದೇಶಿಕ ಅಸಮಾನತೆಯು ಜನರ ಅಸಮಾಧಾನವನ್ನು ಹೆಚ್ಚಿಸುತ್ತಾ ಹೋಯಿತು. ಹಣದುಬ್ಬರದ ಹೆಚ್ಚಳದಿಂದಾಗಿ ಆಹಾರಧಾನ್ಯಗಳ ಮತ್ತು ಜೀವನಾವಶ್ಯಕ ವಸ್ತುಗಳ ಬೆಲೆಯೇರಿ ಜನಸಾಮಾನ್ಯರು ಬದುಕು ಸಾಗಿಸುವುದು ದುಸ್ತರವಾಯಿತು. ನಿರುದ್ಯೋಗ ಪ್ರಮಾಣವು ಶೇ.20 ಕ್ಕೇರಿದ್ದು ಯುವಜನರು ಸರಕಾರದ ವಿರುದ್ಧ ಬಂಡೇಳಲು ಕಾರಣವಾಯಿತು. ಸರಕಾರವು ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಿದ್ದು ಯುವಜನರು ಬಂಡೇಳಲು ಒಂದು ನೆಪವಾಯಿ ತಷ್ಟೇ.

modi

ಉದ್ರಿಕ್ತರ ಅಬ್ಬರಕ್ಕೆ ನೇಪಾಳದ ಸಂಸತ್ತು, ಪ್ರಧಾನಿ ನಿವಾಸ ಮುಂತಾದ ಸರಕಾರಿ ಸ್ವತ್ತುಗಳು ನಾಶವಾದವು. ಪ್ರಜಾಪ್ರಭುತ್ವಕ್ಕಾಗಿ ಹೋರಾಡಿ ರಾಜಪ್ರಭುತ್ವವನ್ನು ಕೊನೆಗೊಳಿಸಿದ ಕಮ್ಯುನಿ ಸ್ಟರೇ ನೇಪಾಳವನ್ನು ಆಳುವಲ್ಲಿ ಸಂಪೂರ್ಣ ವಿಫಲರಾದರು. ಭಾರತದಲ್ಲೂ ಸರಕಾರದ ವಿರುದ್ಧ ಜನರು ತಿರುಗಿಬಿದ್ದು ಆಡಳಿತ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆದ ಉದಾಹರಣೆಗಳಿವೆ; ಆದರೆ ನಮ್ಮ ಜನರು ಆಡಳಿತಾರೂಢರ ವಿರುದ್ಧ ಚುನಾವಣೆಗಳಲ್ಲಿ ಮತ ಚಲಾಯಿಸಿ, ಸರಕಾರ ವನ್ನು ವಿಧ್ಯುಕ್ತವಾಗಿಯೇ ಬದಲಾಯಿಸಿದ್ದಾರೆಯೇ ವಿನಾ ಹಿಂಸಾತ್ಮಕವಾಗಿ ಅಲ್ಲ.

ಇಂದಿರಾ ಗಾಂಧಿ ಸರಕಾರವು ತುರ್ತು ಪರಿಸ್ಥಿತಿಯನ್ನು ಹೇರಿ, ವಿಪಕ್ಷಗಳ ನಾಯಕರನ್ನು ಜೈಲಿಗಟ್ಟಿ ದಾಗಲೂ, ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ಅಹಿಂಸಾತ್ಮಕವಾಗಿ ಪ್ರತಿಭಟಿಸಿದ ಜನರು, ಕೊನೆಗೆ 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾರನ್ನು ಸೋಲಿಸಿ ಆಡಳಿತ ವ್ಯವಸ್ಥೆಯನ್ನು ಬದಲಿಸಿದರು.

2004-2014ರ ಅವಧಿಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರಕಾರದ ಪತನಕ್ಕೂ ಅಹಿಂಸಾತ್ಮಕ ಜನಾಂದೋಲನವೇ ಕಾರಣವಾಯಿತು. ಯುಪಿಎ ಸರಕಾರದ ಅವಧಿಯಲ್ಲಿ ನಡೆದ ವಿವಿಧ ಭ್ರಷ್ಟಾಚಾರ ಪ್ರಕರಣಗಳನ್ನು ವಿರೋಧಿಸಿ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಹೋರಾಟಗಳು, ಯುಪಿಎ ಸರಕಾರವನ್ನು ಸೋಲಿಸಿದ್ದು ಮಾತ್ರವಲ್ಲದೆ, ಕಾಂಗ್ರೆಸ್ ಪಕ್ಷಕ್ಕೆ ಅತಿ ಕಡಿಮೆ ಸ್ಥಾನಗಳು ಲಭಿಸುವಂತಾಗುವುದಕ್ಕೆ ಪರೋಕ್ಷ ಕಾರಣಗಳಾಗಿದ್ದವು.

ನೆರೆದೇಶಗಳಲ್ಲಿ ಕ್ಷಿಪ್ರಕ್ರಾಂತಿಗಳಾಗುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೂ ಅಂಥ ಸ್ಥಿತಿ ಒದಗುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಿರಬಹುದು. ಭಾರತದಲ್ಲೂ ಹೀಗೊಂದು ಕ್ರಾಂತಿಯಾಗಿ ಈಗಿನ ಸರಕಾರ ಬಿದ್ದು ಹೋಗಲಿ ಎಂದು ವಿಪಕ್ಷಗಳೂ ಸೇರಿದಂತೆ ಕೆಲವಷ್ಟು ಸ್ಥಾಪಿತ ಹಿತಾಸಕ್ತಿಗಳು ಆಶಿಸುತ್ತಿವೆ.

‘ಸೊರೋಸ್ ಗ್ಯಾಂಗ್’, ‘ಡೀಪ್ ಸ್ಟೇಟ್’ಗಳೂ ಮೋದಿ ಸರಕಾರವನ್ನು ಬೀಳಿಸಲು ಇನ್ನಿಲ್ಲದಂತೆ ಯತ್ನಿಸುತ್ತಿವೆ. ತಮ್ಮ ತಾಳಕ್ಕೆ ಕುಣಿಯದ, ಭಾರತವನ್ನು ಸ್ವಾಯತ್ತ ರಾಷ್ಟ್ರವನ್ನಾಗಿ, ಪ್ರಬಲ ಜಾಗತಿಕ ಶಕ್ತಿಯಾಗಿ ರೂಪಿಸುತ್ತಿರುವ ಮೋದಿಯವರನ್ನು ಕೆಳಗಿಳಿಸಲೇಬೇಕೆಂದು ಅಮೆರಿಕ, ಯುರೋಪ್ ಪಣತೊಟ್ಟಂತೆ ಕೆಲಸ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಆದರೆ, 64ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಭುತ್ವಗಳನ್ನು ಬದಲಾಯಿಸಿದ ಅನುಭವವಿರುವ ಅಮೆರಿಕಕ್ಕೆ, ಭಾರತವು ಮಾತ್ರ ಕಗ್ಗಂಟಾಗಿದೆ! ಆದರೂ, ಸರಕಾರವನ್ನು ಪತನಗೊಳಿಸುವ ‘ಟೂಲ್‌ ಕಿಟ್’ಗಳು ವಿದೇಶಗಳಲ್ಲಿ ಸಿದ್ಧಗೊಂಡು ಬೇರೆ ಬೇರೆ ರೂಪಗಳಲ್ಲಿ ಭಾರತಕ್ಕೆ ಬರುತ್ತಲೇ ಇವೆ... ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಇಂಥ ಯಾವ ಕ್ರಾಂತಿಯೂ ಭಾರತದಲ್ಲಿ ಯಶಸ್ವಿಯಾಗುವ ಸಾಧ್ಯತೆಯಿಲ್ಲ.

ಹೊಸ ಕೃಷಿ ಕಾಯಿದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ತಿಂಗಳುಗಟ್ಟಲೆ ಪ್ರತಿಭಟನೆ ನಡೆಸಿದರೂ, ಅದನ್ನು ಸರಕಾರದ ವಿರುದ್ಧದ ಜನಾಭಿಪ್ರಾಯವಾಗಿ ಪರಿವರ್ತಿಸಲು ಸಾಧ್ಯ ವಾಗಲಿಲ್ಲ. ಕೊನೆಗೆ ಇದು, ಪಂಜಾಬ್ ಮತ್ತು ಹರಿಯಾಣಗಳ ಕೃಷಿ ದಳ್ಳಾಳಿಗಳ ಪ್ರತಿಭಟನೆ ಎನ್ನುವ ಮಟ್ಟಕ್ಕೆ ಸೀಮಿತವಾಯಿತು.

ಖಲಿಸ್ತಾನ್ ಉಗ್ರರು ಈ ಪ್ರತಿಭಟನೆಯ ಮೂಲಕ ದೇಶದೊಳಗೆ ನುಸುಳಲು ಯತ್ನಿಸುತ್ತಿದ್ದಾರೆ ಎಂಬುದನ್ನರಿತ ಕೇಂದ್ರ ಸರಕಾರವು ಈ ಕಾಯಿದೆಯನ್ನು ಹಿಂತೆಗೆದುಕೊಂಡಾಗ ಪ್ರತಿಭಟನೆಯು ಸಂಪೂರ್ಣ ‘ಠುಸ್’ ಆಯಿತು. ‘ಪೌರತ್ವ ತಿದ್ದುಪಡಿ ಕಾಯಿದೆ’ (ಸಿಎಎ) ವಿರುದ್ಧ ನಡೆದ ಪ್ರತಿಭಟನೆ ಯೂ ‘ನಿರ್ದಿಷ್ಟ ಸಮುದಾಯದ’ ಪ್ರತಿಭಟನೆಗೆ ಸೀಮಿತವಾಗಿ ತನ್ನ ಕಾವನ್ನು ಕಳೆದುಕೊಂಡಿತು.

ಮೋದಿ ಸರಕಾರವು ಸಂವಿಧಾನವನ್ನು ಬದಲಿಸಲು ಯತ್ನಿಸಲಿದೆ ಎಂದು ನಡೆದ ಅಪಪ್ರಚಾರ ಗಳಿಂದಲೂ ಯಾವ ಪರಿಣಾಮವಾಗಲಿಲ್ಲ. ಇದೀಗ ಮತಗಳ್ಳತನದ ಆರೋಪ ಹೊರಿಸಿ ಸರಕಾರದ ವಿರುದ್ಧ ಜನರನ್ನು ಎತ್ತಿಕಟ್ಟುವ ವಿಫಲ ಯತ್ನಗಳಾಗುತ್ತಿವೆ.

ಭ್ರಷ್ಟಾಚಾರ, ಬೆಲೆಯೇರಿಕೆ, ನಿರುದ್ಯೋಗ, ಆರ್ಥಿಕ ಕುಸಿತ, ಬಡತನ, ಕಾನೂನು-ಸುವ್ಯವಸ್ಥೆಯ ಕುಸಿತ, ಮೂಲಭೂತ ಸೌಕರ್ಯಗಳ ಕೊರತೆ, ಸ್ವಜನ ಪಕ್ಷಪಾತ ಮೊದಲಾದ ಸಮಸ್ಯೆಗಳಿದ್ದರೆ ಜನರು ಸರಕಾರದ ವಿರುದ್ಧ ಬಂಡೇಳುವ ಸಾಧ್ಯತೆ ಹೆಚ್ಚು. ಆದರೆ, ಭಾರತ ಸರಕಾರವಿಂದು ಆಡಳಿತ ವ್ಯವಸ್ಥೆಯಲ್ಲಿದ್ದ ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ಸಫಲವಾಗಿದೆ.

ಕೇಂದ್ರದ ಯೋಜನೆಗಳು ಜನರನ್ನು ಸಂಪೂರ್ಣವಾಗಿ ತಲುಪುತ್ತಿವೆ. ಅಂದರೆ, ಸರಕಾರವು ಜನರಿಗೆ ಒದಗಿಸುವ ಸಬ್ಸಿಡಿ, ಪಿಂಚಣಿ, ವಿದ್ಯಾರ್ಥಿವೇತನ, ಪ್ರೋತ್ಸಾಹಕ ಧನ ಮುಂತಾದ ಆರ್ಥಿಕ ನೆರವು ಗಳು, ಗ್ರಾಹಕರ ಜನಧನ್ ಬ್ಯಾಂಕ್‌ಖಾತೆ, ಆಧಾರ್ ಕಾರ್ಡ್, ಮೊಬೈಲ್ ನಂಬರ್‌ಗಳನ್ನು ಬೆಸೆದ (‘ಜ್ಯಾಮ್’) ವ್ಯವಸ್ಥೆಯಡಿ, ಡಿಜಿಟಲ್ ಮಾಧ್ಯಮದ ಮೂಲಕ ಫಲಾನುಭವಿಗಳಿಗೆ ನೇರವಾಗಿ ತಲುಪುತ್ತಿವೆ.

‘ಡಿಜಿಟಲ್ ಇಂಡಿಯಾ’ ಉಪಕ್ರಮದಿಂದಾಗಿ ಭ್ರಷ್ಟಾಚಾರವು ಗಣನೀಯವಾಗಿ ತಗ್ಗಿದೆ. ಬ್ಯಾಂಕು ಗಳಿಂದ ಸಾಲ ಪಡೆದು ವಂಚಿಸಿ ಓಡಿ ಹೋದವರ ಮೇಲೆ ‘Insolvency and Bankruptcy Code', Fugitive Economic Offenders Act ಮುಂತಾದ ಕಾನೂನುಗಳ ಮೂಲಕ ಕ್ರಮ ಕೈಗೊಂಡು 10 ಲಕ್ಷ ಕೋಟಿ ರುಪಾಯಿಗಳಷ್ಟು ‘ಕೆಟ್ಟ ಸಾಲ’ಗಳನ್ನು ವಸೂಲು ಮಾಡಲಾಗಿದೆ.

ಹೀಗಾಗಿ ಭ್ರಷ್ಟಾಚಾರದ ವಿಚಾರವಾಗಿ ಕೇಂದ್ರವನ್ನು ಟೀಕಿಸಲು ವಿಪಕ್ಷಗಳಿಗೆ ಸಾಧ್ಯವಾಗುತ್ತಿಲ್ಲ. ಭಾರತದ ನಿರುದ್ಯೋಗ ಸಮಸ್ಯೆಯ ಪ್ರಮಾಣವು ಶೇ.2ಕ್ಕಿಂತಲೂ ಕೆಳಗಿಳಿದಿದೆ. ಮುದ್ರಾ ಸಾಲ, ಸ್ಟಾರ್ಟ್ ಅಪ್ ಇಂಡಿಯಾ, ಮೇಕ್ ಇನ್ ಇಂಡಿಯಾದಂಥ ಉಪಕ್ರಮಗಳು ಉದ್ಯೋಗ ಮತ್ತು ಸ್ವ-ಉದ್ಯೋಗಗಳ ಅವಕಾಶಗಳನ್ನು ಹೆಚ್ಚಿಸಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುತ್ತಿವೆ.

ಹೀಗಾಗಿ ಯುವಜನರು ಸರಕಾರದ ವಿಚಾರದಲ್ಲಿ ಫುಲ್ ಖುಷ್! ದೇಶದಲ್ಲಿಂದು ಬೆಲೆಯೇರಿಕೆ ನಿಯಂತ್ರಣದಲ್ಲಿದ್ದು, ಹಣದುಬ್ಬರದ ಪ್ರಮಾಣ ಶೇ.2ಕ್ಕಿಂತಲೂ ಕಮ್ಮಿಯಿದೆ. ಇದೀಗ ಜಿಎಸ್‌ಟಿ ಯಲ್ಲೂ ಇಳಿಕೆಯಾಗಿರುವುದರಿಂದ ಶ್ರೀಸಾಮಾನ್ಯರ ಬದುಕು ಹೆಚ್ಚು ಸಹನೀಯವಾಗಲಿದೆ. 12 ಲಕ್ಷ ರುಪಾಯಿವರೆಗಿನ ಆದಾಯವನ್ನು ತೆರಿಗೆಮುಕ್ತಗೊಳಿಸಿರುವುದರಿಂದ ಮಧ್ಯಮ ವರ್ಗದ ಉದ್ಯೋಗಸ್ಥರು ಸಂತುಷ್ಟರಾಗಿದ್ದಾರೆ.

2014ರಲ್ಲಿ, ‘ದುರ್ಬಲ ಆರ್ಥಿಕತೆಯುಳ್ಳ 5 ದೇಶಗಳ ಪಟ್ಟಿ’ಯಲ್ಲಿದ್ದ ಭಾರತವಿಂದು ಜಾಗತಿಕವಾಗಿ 4ನೇ ಅತಿದೊಡ್ಡ ಆರ್ಥಿಕತೆ ಯುಳ್ಳ ದೇಶವಾಗಿ ಬೆಳೆದು ನಿಂತಿದೆ. ದೇಶದ 2.8 ಕೋಟಿ ಬಡವರ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಒದಗಿಸುವ ಮೂಲಕ, ಸಂಪೂರ್ಣ ವಿದ್ಯುದೀಕರಣ ವನ್ನು ಸಾಧಿಸಲಾಗಿದೆ, 10 ಕೋಟಿ ಬಡಮಹಿಳೆಯರಿಗೆ ಉಚಿತ ಅಡುಗೆ ಅನಿಲದ ಸಂಪರ್ಕವನ್ನು ಒದಗಿಸಲಾಗಿದೆ, 10 ಕೋಟಿ ಮನೆಗಳಿಗೆ ಉಚಿತ ಶೌಚಾಲಯಗಳನ್ನು ಕಟ್ಟಿಸಿಕೊಟ್ಟು ಬಯಲು ಶೌಚದ ಸಮಸ್ಯೆಯನ್ನು ನಿವಾರಿಸಲಾಗಿದೆ. ದೇಶದ ಮೂಲಭೂತ ಸೌಕರ್ಯ ವ್ಯವಸ್ಥೆಯಲ್ಲಿ ಭಾರಿ ಸುಧಾರಣೆಯಾಗಿದ್ದು, ಗ್ರಾಮೀಣ ರಸ್ತೆ, ಷಟ್ಪಥ-ದಶಪಥ ಹೆದ್ದಾರಿಗಳು ನಿರ್ಮಾಣವಾಗುತ್ತಿವೆ.

‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲುಗಳ ಸೇರ್ಪಡೆ ಸೇರಿದಂತೆ ಭಾರತೀಯ ರೇಲ್ವೆಯು ವಿವಿಧ ಬಗೆಗಳಲ್ಲಿ ಆಧುನೀಕರಣಗೊಂಡು ಆರಾಮದಾಯಕವೂ ಸುರಕ್ಷಿತವೂ ಆಗಿದೆ. ಕಳೆದ 10 ವರ್ಷ ಗಳಲ್ಲಿ ದೇಶದ ವಿಮಾನ ನಿಲ್ದಾಣಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ದೇಶದ ಪ್ರಜೆಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಸುರಕ್ಷಿತರಾಗಿ ದ್ದಾರೆ. ಭಯೋತ್ಪಾದಕರಿಗೆ ಕಾಶ್ಮೀರದ ಗಡಿ ಯನ್ನು ದಾಟಿ ಭಾರತದೊಳಗೆ ಬರಲಾಗುತ್ತಿಲ್ಲ.

2014ರ ಮುಂಚೆ ಇದ್ದ ಪರಿಸ್ಥಿತಿಗೆ ಹೋಲಿಸಿದರೆ ದೇಶದಲ್ಲಿಂದು ಭಯೋತ್ಪಾದನಾ ಚಟುವಟಿಕೆಗಳು ಗಣನೀಯವಾಗಿ ಕಮ್ಮಿಯಾಗಿವೆ. ನಕ್ಸಲರನ್ನೂ ಭಾರಿ ಪ್ರಮಾಣದಲ್ಲಿ ಹತ್ತಿಕ್ಕಲಾಗುತ್ತಿದೆ. ಒಟ್ಟಾರೆ ಹೇಳುವುದಾದರೆ, ಮೋದಿ ಸರಕಾರದ ಕಾರ್ಯವೈಖರಿಯ ಬಗ್ಗೆ ಜನರು ಸಾಕಷ್ಟು ಸಂತೃಪ್ತರಾಗಿ ದ್ದಾರೆ. ಜನರ ಸುರಕ್ಷತೆಯ ಬಗ್ಗೆ ಈ ಸರಕಾರವು ಹೆಚ್ಚಿನ ಕಾಳಜಿಯನ್ನು ವಹಿಸುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ, ಸಮೀಕ್ಷೆಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಜನರು ಶೇ.75ರಷ್ಟು ‘ಅನುಮೋದನಾ ಮೌಲ್ಯಾಂಕನ’ವನ್ನು (ಅಪ್ರೂವಲ್ ರೇಟಿಂಗ್) ನೀಡಿದ್ದಾರೆ. ಜಾಗತಿಕವಾಗಿ ಅತಿಹೆಚ್ಚು ಜನಪ್ರಿಯರಾಗಿರುವ ನಾಯಕ ನಮ್ಮ ಪ್ರಧಾನಿ.

ಇದೀಗ ದಂಗೆಯೆದ್ದಿರುವ ನೇಪಾಳದ ಯುವಜನರು ಕೂಡ, ‘ನಮಗೆ ನರೇಂದ್ರ ಮೋದಿಯವರಂಥ ನಿರ್ಣಾಯಕ ನಿಲುವಿನ ನಾಯಕ ಬೇಕು’ ಎಂದು ಹೇಳುತ್ತಿರುವುದು ಮೋದಿಯವರ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಹೀಗಿರುವಾಗ, ಭಾರತದಲ್ಲೂ ಕ್ಷಿಪ್ರಕ್ರಾಂತಿ ಸಂಭವಿಸಿ, ಮೋದಿಯವರು ಪದಚ್ಯುತಗೊಳ್ಳಬೇಕು ಎಂದು ಆಶಿಸುವುದು ಹಗಲುಗನಸೇ ಸರಿ!

(ಲೇಖಕರು ಹವ್ಯಾಸಿ ಬರಹಗಾರರು)