ಜನಹಿತ
ನಿರ್ಮಲಾ ಸೀತಾರಾಮನ್
ಒಂದು ವರ್ಷದ ಹಿಂದೆ, ನಾಗಾಲ್ಯಾಂಡ್ನ ದೂರದ ಬೆಟ್ಟ ಪ್ರದೇಶದಲ್ಲಿರುವ ಮಹತ್ವಾಕಾಂಕ್ಷೆಯ ಜಿಲ್ಲೆ ಕಿಫಿರೆಗೆ ಭೇಟಿ ನೀಡಿದ್ದಾಗ, ಅಲ್ಲಿನ ಸ್ವಸಹಾಯ ಗುಂಪುಗಳ ಬುಡಕಟ್ಟು ಸಮುದಾಯದ ಮಹಿಳೆಯರೊಂದಿಗೆ ಸಂವಾದ ನಡೆಸಿದ್ದೆ. ಅವರಲ್ಲಿ ಎಸ್ತರ್ ಎಂಬ ಮಹಿಳೆಯೂ ಇದ್ದರು. ಅವರು ‘ಲಕ್ಷಾಧಿಪತಿ ದೀದಿ’ಯಾಗಿದ್ದು, ತಾವು ತಯಾರಿಸಿದ ಸಿರಿಧಾನ್ಯ ಆಧಾರಿತ ಉತ್ಪನ್ನಗಳು ಆನ್ಲೈನ್ ಮೂಲಕ ನಾಗಾಲ್ಯಾಂಡ್ನ ಗಡಿಗಳನ್ನು ದಾಟಿ ಗ್ರಾಹಕರನ್ನೂ ತಲುಪುತ್ತಿರುವ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು.
ಅವರಲ್ಲಿ ಕಂಡ ಉತ್ತಮ ಭವಿಷ್ಯದ ಕುರಿತ ಆತ್ಮವಿಶ್ವಾಸ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಿತು. ಇನ್ನೂ ದೊಡ್ಡ ಕನಸುಗಳನ್ನು ಕಾಣುವಂತೆ ಮತ್ತು ‘ಕೋಟ್ಯಧಿಪತಿ ದೀದಿ’ಯಾಗು ವಂತೆ ನಾನು ಅವರನ್ನು ಪ್ರೋತ್ಸಾಹಿಸಿದೆ. ಅವರ ಕಥೆಗಳು ಭಾರತದ ಅತ್ಯಂತ ದೂರದ ಪ್ರದೇಶಗಳಲ್ಲೂ ಆಗುತ್ತಿರುವ ಬದಲಾವಣೆಯನ್ನು ಪ್ರತಿಬಿಂಬಿಸುತ್ತವೆ. ಭೌಗೋಳಿಕ ಮತ್ತು ಆರ್ಥಿಕ ಸವಾಲುಗಳಿಂದಾಗಿ ದೀರ್ಘಕಾಲದಿಂದ ಅವಕಾಶಗಳು ಸೀಮಿತವಾಗಿದ್ದ ಈ ಪ್ರದೇಶಗಳಲ್ಲೂ ಉತ್ತಮ ಭವಿಷ್ಯದ ನಿರೀಕ್ಷೆಗಳು ಈಗ ಹೆಚ್ಚುತ್ತಿವೆ.
ಕಳೆದ ತಿಂಗಳು ವಿಶ್ವ ಬ್ಯಾಂಕ್ ಭಾರತದ ಕುರಿತು ತನ್ನ ‘ಬಡತನ ಮತ್ತು ಸಮಾನತೆ ವರದಿ’ (ಪಾವರ್ಟಿ ಆಂಡ್ ಇಕ್ವಿಟಿ ಬ್ರೀಫ್) ಯನ್ನು ಬಿಡುಗಡೆ ಮಾಡಿದಾಗ, ಕಿಫಿರೆಯಲ್ಲಿ ನಾನು ನಡೆಸಿದ ಸಂವಾದ ನೆನಪಿಗೆ ಬಂತು. 2011ರಿಂದ 2023ರ ಅವಧಿಯಲ್ಲಿ ಸುಮಾರು 50 ಕೋಟಿ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ ಮತ್ತು ಕಡುಬಡತನವು ಬಹುತೇಕ ನಿರ್ಮೂಲನೆಯಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: Kiran Upadhyay Column: ಮುನಿಸು ತರವೇ...? ಮಲೇಶಿಯಾ...?
ಈ ಅಂಕಿಅಂಶಗಳು ನಾನು ಸ್ವತಃ ಕಂಡ ಬದಲಾವಣೆಯನ್ನೇ ಪ್ರತಿಬಿಂಬಿಸಿದ್ದವು. ಆದರೆ ಪರಿಸ್ಥಿತಿ ಯಾವಾಗಲೂ ಹೀಗಿರಲಿಲ್ಲ. ಸ್ವಾತಂತ್ರ್ಯ ದೊರೆತ ನಂತರದ ಆರು ದಶಕಗಳಿಗೂ ಹೆಚ್ಚು ಕಾಲ ಬಡತನವನ್ನು ನಿರ್ಮೂಲನೆ ಮಾಡುವ ಭರವಸೆ ಈಡೇರಿರಲಿಲ್ಲ. 2010ರ ದಶಕದ ಆರಂಭದಲ್ಲಿಯೂ ವಿದೇಶಗಳಲ್ಲಿ ಭಾರತವನ್ನು ದೀರ್ಘಕಾಲದ ಬಡತನದಿಂದ ಬಳಲುತ್ತಿರುವ ದೇಶವೆಂದು ಬಿಂಬಿಸಲಾಗುತ್ತಿತ್ತು. ನೈರ್ಮಲ್ಯ, ಪೌಷ್ಟಿಕಾಂಶ, ಶುದ್ಧ ಅಡುಗೆ ಇಂಧನ ಮತ್ತು ಬ್ಯಾಂಕಿಂಗ್ ಸೌಲಭ್ಯಗಳ ವಿಷಯದಲ್ಲಿ ಭಾರತ ಹಿಂದುಳಿದಿದೆ ಎಂಬ ಅಭಿಪ್ರಾಯವಿತ್ತು.
ಬಡವರ ಕೈಗೆ ಹಣ ನೀಡಿದರೆ ಬಡತನ ತಾನಾಗಿಯೇ ನಿವಾರಣೆಯಾಗುತ್ತದೆ ಎಂಬುದೇ ಆಗಿನ ಸಾಮಾನ್ಯ ಪರಿಹಾರದ ಮಾರ್ಗವಾಗಿತ್ತು. ಕಳೆದ ಒಂದು ದಶಕದಲ್ಲಿ ಈ ನಂಬಿಕೆ ಸಂಪೂರ್ಣವಾಗಿ ಬದಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ತಾತ್ಕಾಲಿಕ ಪರಿಹಾರ ಗಳನ್ನು ಒದಗಿಸುವುದರಿಂದ ಬಡತನ ಮುಂದುವರಿಯಲು ಕಾರಣವಾಗಿರುವ ಅಡೆತಡೆಗಳನ್ನು ನಿವಾರಿಸುವತ್ತ ಭಾರತ ಮಹತ್ವದ ಹೆಜ್ಜೆ ಇಟ್ಟಿದೆ.
ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣವನ್ನು ಖಚಿತಪಡಿಸುವ ‘ಅಂತ್ಯೋದಯ’ ತತ್ವದ ಮಾರ್ಗ ದರ್ಶನದಲ್ಲಿ, ನಮ್ಮ ಸರ್ಕಾರವು ಪ್ರತಿ ಕುಟುಂಬದ ಸಮಸ್ಯೆಗಳನ್ನು ಒಂದೊಂದಾಗಿ ಪರಿಹರಿಸುವ ಕಠಿಣ ಮಾರ್ಗವನ್ನು ಆಯ್ಕೆ ಮಾಡಿಕೊಂಡಿತು. ಅಭಿವೃದ್ಧಿಯ ಫಲಗಳು ಅತ್ಯಂತ ಅಗತ್ಯವಿರುವ ಜನರನ್ನು ತಲುಪುವಂತೆ ನೋಡಿಕೊಂಡಿತು.
ಗುರಿ ಆಧಾರಿತ, ಫಲಿತಾಂಶ ಕೇಂದ್ರಿತ ಮತ್ತು ಅಗತ್ಯಕ್ಕೆ ತಕ್ಕ ಯೋಜನೆಗಳು: ಬಡತನವೆಂದರೆ ಕೇವಲ ಆದಾಯ ಅಥವಾ ವೇತನದ ಕೊರತೆಯಲ್ಲ. ಸುರಕ್ಷಿತ ಮನೆ, ಶುದ್ಧ ಕುಡಿಯುವ ನೀರು, ನೈರ್ಮಲ್ಯ ಅಥವಾ ಆರೋಗ್ಯ ಸೇವೆಗಳು ಇಲ್ಲದ ಕುಟುಂಬದ ಆದಾಯ ಹೆಚ್ಚಾದರೂ ಆ ಕುಟುಂಬ ಸಂಕಷ್ಟಕ್ಕೆ ಸಿಲುಕುವ ಅಪಾಯ ಇದ್ದೇ ಇರುತ್ತದೆ. ಒಂದು ಕಾಯಿಲೆ ಇಡೀ ಕುಟುಂಬದ ಉಳಿತಾಯ ವನ್ನು ಖಾಲಿ ಮಾಡಿ, ಮತ್ತೆ ಅದನ್ನು ಬಡತನಕ್ಕೆ ತಳ್ಳಬಹುದು.
ಆದ್ದರಿಂದ, ನಮ್ಮ ಸರ್ಕಾರವು ಪ್ರತಿಯೊಂದು ಯೋಜನೆಯನ್ನೂ ಅಗತ್ಯವಿರುವ ಜನರನ್ನು ತಲುಪುವಂತೆ ಗುರಿ ಆಧಾರಿತವಾಗಿ, ಅಳೆಯಬಹುದಾದ ಫಲಿತಾಂಶಗಳನ್ನು ಸಾಧಿಸುವತ್ತ ಕೇಂದ್ರಿತವಾಗಿ ಮತ್ತು ನಿವಾರಿಸಬೇಕಾದ ನಿರ್ದಿಷ್ಟ ಕೊರತೆಗಳಿಗೆ ತಕ್ಕಂತೆ ರೂಪಿಸುವ ಮೂಲಕ ಅನುಷ್ಠಾನಗೊಳಿಸಿತು. ಇದಕ್ಕೆ ಯಾವುದೇ ಮಂತ್ರದಂಡವಿರಲಿಲ್ಲ. ಪ್ರತಿಯೊಂದು ಯೋಜನೆ ಯಲ್ಲೂ ಫಲಾನುಭವಿಗಳನ್ನು ಎಚ್ಚರಿಕೆಯಿಂದ ಗುರುತಿಸುವುದು, ಯೋಜನೆಯ ಪ್ರಯೋಜನ ಗಳನ್ನು ಪರಿಣಾಮಕಾರಿಯಾಗಿ ತಲುಪಿಸುವುದು ಮತ್ತು ಕೊನೆಯ ಕುಟುಂಬವನ್ನೂ ತಲುಪುವವ ರೆಗೆ ನಿರಂತರವಾಗಿ ಮೇಲ್ವಿಚಾರಣೆ ನಡೆಸುವುದು ಅಗತ್ಯವಾಗಿತ್ತು.
ಪ್ರಧಾನಮಂತ್ರಿ ಮೋದಿ ಅವರು ಯೋಜನೆಗಳ ಅನುಷ್ಠಾನವನ್ನು ವೈಯಕ್ತಿಕವಾಗಿ ಮತ್ತು ಅತ್ಯಂತ ಕಾಳಜಿಯಿಂದ ಮೇಲ್ವಿಚಾರಣೆ ಮಾಡಿದ್ದಾರೆ. ನಿರ್ಣಾಯಕ ಸಂದರ್ಭಗಳಲ್ಲಿ ಮಧ್ಯಪ್ರವೇಶಿಸಿ ಅನುಷ್ಠಾನಕ್ಕೆ ಅಡ್ಡಿಯಾಗಿದ್ದ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಯೋಜನೆಗಳ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಿದ್ದಾರೆ ಮತ್ತು ಸೌಲಭ್ಯಗಳ ವಿತರಣೆಯನ್ನು ಗಮನಿಸಲು ತಂತ್ರಜ್ಞಾನದ ಬಳಕೆಯನ್ನು ಪ್ರೋತ್ಸಾಹಿಸಿದ್ದಾರೆ. ಈ ನಿರಂತರ ಗಮನ ಮತ್ತು ಕಾಳಜಿಯಿಂದಾಗಿ ಸರ್ಕಾರದ ನೀತಿಗಳು ಜನರ ಬದುಕಿನಲ್ಲಿ ನೈಜ ಬದಲಾವಣೆ ತರಲು ಸಾಧ್ಯವಾಗಿದೆ.
ಆರೋಗ್ಯ ಮತ್ತು ಗೌರವಯುತ ಬದುಕು ಮನೆಯಿಂದಲೇ ಆರಂಭ: ಅನಾರೋಗ್ಯ ಮತ್ತು ಪ್ರತಿದಿನ ನೀರು ತರಲು ಎದುರಿಸಬೇಕಾದ ಕಷ್ಟಗಳು ಒಂದು ಕುಟುಂಬವನ್ನು ಮತ್ತೆ ಮತ್ತೆ ಹಿಂದುಳಿಯು ವಂತೆ ಮಾಡುತ್ತಿದ್ದರೆ, ಆ ಕುಟುಂಬ ಬಡತನದಿಂದ ಹೊರಬರಲು ಸಾಧ್ಯವಿಲ್ಲ. ಸ್ವಚ್ಛ ಭಾರತ್ ಅಭಿಯಾನದಡಿ ಮನೆಗಳಲ್ಲಿ ಶೌಚಾಲಯಗಳ ಸೌಲಭ್ಯ ಹೆಚ್ಚಾಗಿರುವುದರಿಂದ ನೈರ್ಮಲ್ಯ ಸುಧಾರಿಸಿದೆ. ಇದರಿಂದ ಪ್ರತಿ ವರ್ಷ ಅಂದಾಜು 60000 ದಿಂದ 70000 ಶಿಶುಗಳ ಸಾವುಗಳನ್ನು ತಡೆಗಟ್ಟಲು ಸಾಧ್ಯವಾಗಿದೆ.
ಜಲ ಜೀವನ್ ಮಿಷನ್ ಅಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಕೊಳವೆ ನೀರಿನ ಸಂಪರ್ಕ ಹೊಂದಿರುವ ಮನೆಗಳ ಸಂಖ್ಯೆ 2019ರಲ್ಲಿ ಸುಮಾರು 3 ಕೋಟಿಯಷ್ಟಿದ್ದದ್ದು ಈಗ ಸುಮಾರು 16 ಕೋಟಿಗೆ ಏರಿಕೆಯಾಗಿದೆ. ಇದರಿಂದ ಮಹಿಳೆಯರು ಮತ್ತು ಹೆಣ್ಣುಮಕ್ಕಳು ನೀರು ತರಲು ದೂರದವರೆಗೆ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಕಡಿಮೆಯಾಗಿದೆ. ಜೊತೆಗೆ, ಕಲುಷಿತ ನೀರಿನಿಂದ ಹರಡುವ ರೋಗಗಳ ಅಪಾಯವೂ ತಗ್ಗಿದೆ.
ಉಜ್ವಲ ಯೋಜನೆಯು ಹೊಗೆರಹಿತ ಮತ್ತು ಸ್ವಚ್ಛ ಅಡುಗೆ ವ್ಯವಸ್ಥೆಯನ್ನು ಒದಗಿಸಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯು ಜನರಿಗೆ ಭದ್ರತೆ ಮತ್ತು ಗೌರವಯುತ ಬದುಕು ನೀಡುವ ಪಕ್ಕಾ ಮನೆಗಳನ್ನು ಒದಗಿಸಿದೆ. ನಗದುರಹಿತ ಆಸ್ಪತ್ರೆ ಚಿಕಿತ್ಸೆಯ ಸೌಲಭ್ಯ ನೀಡುವ ಆಯುಷ್ಮಾನ್ ಭಾರತ್ ಯೋಜನೆಯು ವೈದ್ಯಕೀಯ ವೆಚ್ಚಗಳಿಂದ ಕುಟುಂಬಗಳ ಮೇಲೆ ಬೀಳುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ. ಈ ಎಲ್ಲ ಯೋಜನೆಗಳು ಒಟ್ಟಾಗಿ, ಹಿಂದೆ ಕುಟುಂಬಗಳನ್ನು ಮತ್ತೆ ಬಡತನಕ್ಕೆ ತಳ್ಳುತ್ತಿದ್ದ ಅನಿರೀಕ್ಷಿತ ಸಂಕಷ್ಟಗಳಿಂದ ರಕ್ಷಣೆ ನೀಡುವ ಭದ್ರತಾ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿವೆ. ಅದೇ ಸಮಯದಲ್ಲಿ, ಕುಟುಂಬಗಳ ಖರ್ಚು ಕಡಿಮೆ ಮಾಡಿ, ಕೆಲಸ ಮಾಡಲು ಮತ್ತು ಆದಾಯ ಗಳಿಸಲು ಹೆಚ್ಚು ಸಮಯ ದೊರೆಯುವಂತೆ ಮಾಡಿವೆ.
ಬ್ಯಾಂಕ್ ಖಾತೆಯಿಂದ ಸ್ವಂತ ಉದ್ಯಮದವರೆಗೆ: ಸರ್ಕಾರದ ರಕ್ಷಣಾತ್ಮಕ ಕ್ರಮಗಳು ಕುಟುಂಬಗಳು ಮತ್ತೆ ಬಡತನಕ್ಕೆ ಜಾರುವುದನ್ನು ತಡೆಯುತ್ತವೆ. ಆದರೆ ಆರ್ಥಿಕವಾಗಿ ಇನ್ನಷ್ಟು ಬೆಳೆಯಲು ಅವರಿಗೆ ಆದಾಯ ಗಳಿಸುವ ಅವಕಾಶಗಳು ಬೇಕು. ಕೋಟ್ಯಂತರ ಜನರ ಪಾಲಿಗೆ ಈ ಪ್ರಯಾಣ ಆರಂಭವಾಗಿದ್ದು ಒಂದು ಬ್ಯಾಂಕ್ ಖಾತೆಯಿಂದ. ಹಿಂದೆ, ಸಾರ್ವಜನಿಕ ಬೊಕ್ಕಸದಿಂದ ಒಂದು ರೂಪಾಯಿ ಬಿಡುಗಡೆ ಮಾಡಿದರೆ, ಅದರಲ್ಲಿ ಕೇವಲ 15 ಪೈಸೆ ಮಾತ್ರ ಉದ್ದೇಶಿತ ಫಲಾನುಭವಿ ಯನ್ನು ತಲುಪುತ್ತದೆ ಎಂಬ ಮಾತು ಚಾಲ್ತಿಯಲ್ಲಿತ್ತು. ನೇರ ನಗದು ವರ್ಗಾವಣೆ (ಡಿಬಿಟಿ) ವ್ಯವಸ್ಥೆಯು ಈ ಪರಿಸ್ಥಿತಿಯನ್ನು ಬದಲಿಸಿದೆ. 59 ಕೋಟಿಗೂ ಹೆಚ್ಚು ಜನಧನ್ ಬ್ಯಾಂಕ್ ಖಾತೆಗಳ ಮೂಲಕ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಸರ್ಕಾರದ ಸೌಲಭ್ಯಗಳು ನೇರವಾಗಿ ಫಲಾನುಭವಿ ಗಳನ್ನು ತಲುಪುತ್ತಿವೆ.
ಅಭೂತಪೂರ್ವ ಪ್ರಮಾಣದಲ್ಲಿ ಈ ವ್ಯವಸ್ಥೆಯನ್ನು ಸಾಧ್ಯವಾಗಿಸಿದ್ದು ತಂತ್ರಜ್ಞಾನ. ಬ್ಯಾಂಕ್ ಖಾತೆಯು ಉಳಿತಾಯದ ಹಣವನ್ನು ಸುರಕ್ಷಿತವಾಗಿಡಲು ಸಹಾಯ ಮಾಡುವುದಲ್ಲದೆ, ವ್ಯಕ್ತಿಯ ಆರ್ಥಿಕ ವಹಿವಾಟಿನ ದಾಖಲೆಯನ್ನೂ ರೂಪಿಸುತ್ತದೆ. ಇದರಿಂದ ಅಧಿಕೃತ ಹಣಕಾಸು ವ್ಯವಸ್ಥೆಯ ಮೂಲಕ ಸಾಲ ಪಡೆಯುವ ಅವಕಾಶಗಳು ತೆರೆದುಕೊಳ್ಳುತ್ತವೆ. ಆಸ್ತಿಯಿಲ್ಲದವರಿಗೆ ಮೊದಲ ಸಾಲ ದೊರೆಯುವುದು ಅವರ ಬದುಕನ್ನೇ ಬದಲಾಯಿಸಬಲ್ಲದು. ಎರಡು ತಿಂಗಳ ಹಿಂದೆ, ಮುದ್ರಾ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸುವಾಗ ಪಶ್ಚಿಮ ಬಂಗಾಳದ ಸುಷ್ಮಿತಾ ಘರಾಯ್ ಅವರನ್ನು ಭೇಟಿಯಾಗಿದ್ದೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಅವರು ತಮ್ಮ ತಂದೆಯನ್ನು ಕಳೆದುಕೊಂಡರು. ಆ ಬಳಿಕ ಅವರ ಕುಟುಂಬ ನಡೆಸುತ್ತಿದ್ದ ಮುದ್ರಣ ಉದ್ಯಮವೂ ಕುಸಿದು ಬಿತ್ತು. ಸಾಲ ಪಡೆಯಲು ಅಡಮಾನ ಇಡಲು ಅವರ ಬಳಿ ಜಮೀನು ಅಥವಾ ಚಿನ್ನ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಯಾವುದೇ ಅಡಮಾನವಿಲ್ಲದೆ ಮುದ್ರಾ ಯೋಜನೆಯಡಿ ದೊರೆತ ಸಾಲವು ಅವರಿಗೆ ಮುದ್ರಣಾಲಯವನ್ನು ಮತ್ತೆ ಆರಂಭಿಸಲು ನೆರವಾಯಿತು. ಇಂದು ಅವರು ಎಂಟು ಜನರಿಗೆ ಉದ್ಯೋಗ ನೀಡಿದ್ದಾರೆ.
ಆರಂಭದಲ್ಲಿ ಅವರ ಬಳಿ ಇದ್ದ ಉದ್ಯೋಗಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಅಲ್ಲದೆ, ಡಿಜಿಟಲ್ ಮುದ್ರಣ ಕ್ಷೇತ್ರಕ್ಕೂ ವಿಸ್ತರಿಸುವ ಯೋಜನೆ ಹೊಂದಿದ್ದಾರೆ. ಎಲ್ಲವನ್ನೂ ಮತ್ತೆ ಕಟ್ಟಿಕೊಂಡು ಬೆಳೆಯಬೇಕೆಂಬ ಅವರ ದೃಢಸಂಕಲ್ಪ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಿತು. ಆರ್ಥಿಕ ಸಾಮರ್ಥ್ಯಕ್ಕಿಂತ ಹೆಚ್ಚಿನ ಕನಸು ಮತ್ತು ಮಹತ್ವಾಕಾಂಕ್ಷೆ ಹೊಂದಿರುವ ಅಸಂಖ್ಯಾತ ಯುವ ಭಾರತೀಯರ ಆಶಯಗಳನ್ನು ಅವರ ಕಥೆ ಪ್ರತಿಬಿಂಬಿಸುತ್ತದೆ. ಮುದ್ರಾ ಯೋಜನೆಯಡಿ ಇದುವರೆಗೆ 60 ಕೋಟಿ ಸಾಲ ಖಾತೆಗಳಿಗೆ ಸಾಲ ಮಂಜೂರಾಗಿದೆ. ಇವುಗಳಲ್ಲಿ ಸುಮಾರು ಮೂರನೇ ಎರಡರಷ್ಟು ಸಾಲಗಳು ಮಹಿಳೆಯರಿಗೆ ಮಂಜೂರಾಗಿವೆ.
ಪಿಎಂ ಸ್ವನಿಧಿ ಮತ್ತು ಪಿಎಂ ವಿಶ್ವಕರ್ಮ ಯೋಜನೆಗಳು ಬೀದಿಬದಿ ವ್ಯಾಪಾರಿಗಳು ಹಾಗೂ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ನೆರವಾಗುತ್ತಿವೆ. ಈ ಬದಲಾವಣೆಯಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಗ್ರಾಮೀಣ ಪ್ರದೇಶಗಳ 10 ಕೋಟಿ ಮಹಿಳೆಯರು ಸ್ವಸಹಾಯ ಗುಂಪು ಗಳಲ್ಲಿ ಭಾಗವಹಿಸುತ್ತಿದ್ದಾರೆ. ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ-ಎನ್ಆರ್ಎಲಎಂ) ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಈ ಗುಂಪುಗಳು ಉಳಿತಾಯ, ಕೌಶಲ್ಯಾಭಿವೃದ್ಧಿ, ಸಾಲ ಸೌಲಭ್ಯ ಮತ್ತು ಉದ್ಯಮಶೀಲತೆಗೆ ವೇದಿಕೆಗಳಾಗಿವೆ.
3.7 ಕೋಟಿಗೂ ಹೆಚ್ಚು ಮಹಿಳೆಯರು ‘ಲಕ್ಷಾಧಿಪತಿ ದೀದಿ’ಗಳಾಗಿದ್ದಾರೆ. ಅವರಲ್ಲಿ ಕೆಲವರು ಮುಂದೆ ಸಾಗಿ ‘ಕೋಟ್ಯಧಿಪತಿ ದೀದಿ’ಗಳಾಗುತ್ತಿದ್ದಾರೆ. ಇನ್ನು ಕೆಲವರು ‘ನಮೋ ಡ್ರೋನ್ ದೀದಿ’ಗಳಾಗಿ ತರಬೇತಿ ಪಡೆದು ಈಗ ರೈತರಿಗೆ ಡ್ರೋನ್ ಮೂಲಕ ಕೀಟನಾಶಕ ಸಿಂಪಡಿಸುವ ಸೇವೆ ಒದಗಿಸುತ್ತಿದ್ದಾರೆ. ಹಿಂದೆ ಆರ್ಥಿಕ ಅವಕಾಶಗಳಿಂದ ವಂಚಿತರಾಗಿದ್ದ ಮಹಿಳೆಯರು ಈಗ ಸ್ವಂತ ಉದ್ಯಮಗಳನ್ನು ಆರಂಭಿಸಿ, ತಮ್ಮದೇ ಆದ ಜೀವನೋಪಾಯವನ್ನು ರೂಪಿಸಿಕೊಳ್ಳುತ್ತಿದ್ದಾರೆ.
ವಿಕಸಿತ ಭಾರತಕ್ಕಾಗಿ ಸಂಕಲ್ಪ: ತಲೆಮಾರುಗಳಿಂದಲೂ ಬಡತನವೆಂದರೆ ಭಾರತವು ನಿರ್ವಹಿಸ ಬಹುದಾದ ಸಮಸ್ಯೆಯೇ ಹೊರತು, ಸಂಪೂರ್ಣವಾಗಿ ಅಂತ್ಯಗೊಳಿಸಲು ಸಾಧ್ಯವಿಲ್ಲದ ಸಂಗತಿ ಎಂಬ ಭಾವನೆ ಇತ್ತು. ಆದರೆ ಒಂದು ದಶಕದ ಹಿಂದೆ ಅಸಾಧ್ಯವೆಂದು ಕಂಡಿದ್ದ ಗುರಿಯನ್ನು, ನೆಲಮಟ್ಟದಲ್ಲಿ ಹಲವು ವರ್ಷಗಳ ಕಾಲ ನಡೆಸಿದ ನಿರಂತರ ಪ್ರಯತ್ನಗಳ ಮೂಲಕ ಈಗ ಸಾಧಿಸಲಾಗಿದೆ. ಆದರೆ ಇದು ವಿಶ್ರಾಂತಿ ಪಡೆಯುವ ಸಮಯವಲ್ಲ. 2047ರ ವೇಳೆಗೆ ವಿಕಸಿತ ಭಾರತ ನಿರ್ಮಿಸುವ ಹಾದಿಯಲ್ಲಿ ಇನ್ನೂ ಹಲವು ಸವಾಲುಗಳಿವೆ. ಈಗಾಗಲೇ ಸಾಧಿಸಿರುವ ಪ್ರಗತಿಯನ್ನು ಆಧಾರವಾಗಿಟ್ಟುಕೊಂಡು, ಬಡತನದ ಕೊನೆಯ ಹಂತದಲ್ಲಿರುವ ಕೆಲವೇ ಜನರನ್ನೂ ಬಡತನ ದಿಂದ ಹೊರತರುವುದು ನಮ್ಮ ಗುರಿಯಾಗಿದೆ.
ಈಗಾಗಲೇ ಬಡತನದಿಂದ ಹೊರಬಂದವರು ಇನ್ನಷ್ಟು ಪ್ರಗತಿ ಸಾಧಿಸುವಂತೆ ಮತ್ತು ಮತ್ತೆ ಬಡತನಕ್ಕೆ ಜಾರದೆ ಇರುವಂತೆ ನೋಡಿಕೊಳ್ಳುವುದೂ ಅಷ್ಟೇ ಮುಖ್ಯ. ವಿವಿಧ ಯೋಜನೆಗಳ ಮೂಲಕ ಒದಗಿಸಿರುವ ರಕ್ಷಣಾತ್ಮಕ ಸೌಲಭ್ಯಗಳ ಜೊತೆಗೆ, ಹಣಕಾಸು ಸೇವೆಗಳು, ಮಾರುಕಟ್ಟೆಗಳು ಮತ್ತು ಡಿಜಿಟಲ್ ಆರ್ಥಿಕ ವ್ಯವಸ್ಥೆಗೆ ಇನ್ನಷ್ಟು ವ್ಯಾಪಕ ಪ್ರವೇಶಾವಕಾಶ ಕಲ್ಪಿಸಬೇಕಾಗಿದೆ. ಉದ್ಯೋಗ ಆಧಾರಿತ ಪ್ರೋತ್ಸಾಹಕ ಯೋಜನೆಗಳು, ಇಂಟರ್ನ್ಶಿಪ್ ಮತ್ತು ಅಪ್ರೆಂಟಿಸ್ಶಿಪ್ ಕಾರ್ಯಕ್ರಮಗಳ ಮೂಲಕ ಸರ್ಕಾರವು ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮಗಳ ನಡುವಿನ ಸಂಪರ್ಕವನ್ನು ಬಲಪಡಿಸುತ್ತಿದೆ.
ಮೂಲಸೌಕರ್ಯಗಳಲ್ಲಿನ ಹೂಡಿಕೆಯು ದೇಶದ ಎಲ್ಲ ಪ್ರದೇಶಗಳನ್ನು ಹಿಂದೆಂದಿಗಿಂತಲೂ ಉತ್ತಮವಾಗಿ ಸಂಪರ್ಕಿಸುತ್ತಿದೆ. ಅವಕಾಶಗಳು ಕೆಲವೇ ಜನರ ಸ್ವತ್ತಾಗಿ ಉಳಿಯಬಾರದು. ಸ್ವಾತಂತ್ರ್ಯದಂತೆಯೇ ವಿಕಸಿತ ಭಾರತವೂ ಪ್ರತಿಯೊಬ್ಬ ಭಾರತೀಯನೂ ತನ್ನ ಜೀವನದಲ್ಲಿ ಪಾಲಿಸಬೇಕಾದ ಬದ್ಧತೆಯಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದ್ದಾರೆ. ಆರು ದಶಕಗಳ ಕಾಲ ಈಡೇರದಿದ್ದ ಗುರಿಯನ್ನು ಕೇವಲ ಹತ್ತು ವರ್ಷಗಳಲ್ಲಿ ಸಾಧಿಸಿರುವ ಭಾರತವು, ಮುಂದಿನ ಇಪ್ಪತ್ತು ವರ್ಷಗಳನ್ನು ಆತ್ಮವಿಶ್ವಾಸದಿಂದ ಎದುರಿಸಬಲ್ಲದು.
140 ಕೋಟಿ ಭಾರತೀಯರ ದೃಢಸಂಕಲ್ಪದೊಂದಿಗೆ 2047ರ ವೇಳೆಗೆ ವಿಕಸಿತ ಭಾರತ ನಿರ್ಮಿಸುವ ಗುರಿ ನಮ್ಮ ಕೈಗೆಟುಕುವಂತಿದೆ. ನಾವೆಲ್ಲರೂ ಒಟ್ಟಾಗಿ ಈ ಗುರಿಯನ್ನು ಸಾಧಿಸಲಿದ್ದೇವೆ.
(ಲೇಖಕರು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರು)