ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಅನುವಾದವೇ ಆಧಾರ

ಅನುವಾದದ ಹರಿವು ಯುರೋಪಿಯನ್ ಯೂನಿಯನ್‌ಗೆ ಅಗಾಧವಾದ ಸವಾಲಾಗಿದೆ. ಒಂದು ಪುಟದ ಕರಡು ಕೂಡ 25 ಭಾಷೆಗಳಿಗೆ ಅನುವಾದವಾಗಬೇಕು. ಕೆಲವೊಮ್ಮೆ ಕಡತಗಳು ಒಂದು ಸಾವಿರ ಪುಟಗಳನ್ನೂ ಮೀರುತ್ತವೆ. ಆಗ ಅವೆಲ್ಲವನ್ನೂ 25 ಭಾಷೆಗಳಿಗೆ ಅನುವಾದಿಸಲೇಬೇಕು. ಹೀಗಾಗಿ ಯುರೋಪಿಯನ್ ಯೂನಿಯನ್ ನಲ್ಲಿ ಕೆಲಸ ಮಾಡುವವರು ಇಬ್ಬರೇ- ಜೆರಾಕ್ಸ್ ಮಷೀನು ಮತ್ತು ಅನುವಾದಕರು ಮಾತ್ರ ಎಂಬ ತಮಾಷೆ ಚಾಲ್ತಿಯಲ್ಲಿದೆ. ‌

ಸಂಪಾದಕೀಯ ಸದ್ಯಶೋಧನೆ

ಕೆಲ ವರ್ಷಗಳ ಹಿಂದೆ, ನಾನು ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್‌ʼಗೆ ಹೋದಾಗ, ಅಲ್ಲಿರುವ ಯುರೋಪಿಯನ್ ಯೂನಿಯನ್ ಪಾರ್ಲಿಮೆಂಟ್‌ಗೆ ಹೋಗಿದ್ದೆ. ಕ್ರೊಯೇಷಿಯಾ ಸೇರಿದಂತೆ ಯುರೋಪಿಯನ್ ಯೂನಿಯನ್‌ನಲ್ಲಿ 28 ದೇಶಗಳಿವೆ. ಇವು ಕಾಲಕಾಲಕ್ಕೆ ಬ್ರುಸೆಲ್ಸ್‌ʼನಲ್ಲಿರುವ ಪಾರ್ಲಿಮೆಂಟ್‌ನಲ್ಲಿ ಸಭೆ ಸೇರಿ, ಇಡೀ ಯುರೋಪಿಗೆ ಸಂಬಂಧಿಸಿದ, 448 ದಶಲಕ್ಷ ಜನರಿಗೆ ಅನ್ವಯಿಸುವ ನೂರಾರು ವಿಷಯಗಳ ಬಗ್ಗೆ ಚರ್ಚಿಸುತ್ತವೆ.

ಜಗತ್ತಿನ ಜನಸಂಖ್ಯೆಯ ಶೇ.5.8ರಷ್ಟನ್ನು ಒಳಗೊಂಡಿರುವ ಈ ದೇಶಗಳು ಸೇರಿ ರಚಿಸಿಕೊಂಡಿರುವ ಈ ಪಾರ್ಲಿಮೆಂಟ್ ತೆಗೆದುಕೊಳ್ಳುವ ನಿರ್ಣಯಗಳು ಜಾಗತಿಕವಾಗಿ ಅತಿ ಮಹತ್ವವೆನಿಸಿಕೊಳ್ಳುತ್ತವೆ. ಈ 28 ದೇಶಗಳು ತಮ್ಮದೇ ಭಾಷೆಗಳನ್ನು ಹೊಂದಿವೆ. ಇವು ತಮ್ಮದಲ್ಲದ ಬೇರೆ ಭಾಷೆಗಳಲ್ಲಿ ವ್ಯವಹರಿಸಲು ಇಷ್ಟಪಡುವುದಿಲ್ಲ. ಈ 28 ದೇಶಗಳಲ್ಲಿ ಅಲ್ಲಿನ ಜನ 25 ಭಾಷೆಗಳನ್ನು ಆಡುತ್ತಾರೆ.

ಹೀಗಾಗಿ ಇಡೀ ಯುರೋಪಿಯನ್ ಯೂನಿಯನ್ ಅನುವಾದ ಅಥವಾ ಭಾಷಾಂತರದ ತಳಹದಿ ಯಲ್ಲಿ ಕಾರ್ಯನಿರ್ವಹಿಸುತ್ತದೆ. ಅಧಿವೇಶನ ನಡೆಯುವಾಗ ಅನುವಾದ ವಿಭಾಗದ ಸಿಬ್ಬಂದಿಯೇನಾದರೂ ಮುಷ್ಕರ ನಡೆಸಿದರೆ, ಇಡೀ ಸಂಸತ್ತಿನ ಕಾರ್ಯಕಲಾಪಗಳು ಸ್ಥಗಿತ!

ಇದನ್ನೂ ಓದಿ: Vishweshwar Bhat Column: ಬ್ರಿಟಿಷ್ ಏರ್‌ವೇಸ್ ಲೋಗೋ

ಅನುವಾದದ ಹರಿವು ಯುರೋಪಿಯನ್ ಯೂನಿಯನ್‌ಗೆ ಅಗಾಧವಾದ ಸವಾಲಾಗಿದೆ. ಒಂದು ಪುಟದ ಕರಡು ಕೂಡ 25 ಭಾಷೆಗಳಿಗೆ ಅನುವಾದವಾಗಬೇಕು. ಕೆಲವೊಮ್ಮೆ ಕಡತಗಳು ಒಂದು ಸಾವಿರ ಪುಟಗಳನ್ನೂ ಮೀರುತ್ತವೆ. ಆಗ ಅವೆಲ್ಲವನ್ನೂ 25 ಭಾಷೆಗಳಿಗೆ ಅನುವಾದಿಸಲೇಬೇಕು. ಹೀಗಾಗಿ ಯುರೋಪಿಯನ್ ಯೂನಿಯನ್ ನಲ್ಲಿ ಕೆಲಸ ಮಾಡುವವರು ಇಬ್ಬರೇ- ಜೆರಾಕ್ಸ್ ಮಷೀನು ಮತ್ತು ಅನುವಾದಕರು ಮಾತ್ರ ಎಂಬ ತಮಾಷೆ ಚಾಲ್ತಿಯಲ್ಲಿದೆ. ‌

ಮೂಲ ಭಾಷೆಯಲ್ಲಿ ಸಣ್ಣ ಲೋಪವಾದರೆ ಅದು ಎಲ್ಲ 25 ಭಾಷೆಗಳಲ್ಲೂ ಕಾಣಿಸಿಕೊಂಡು ರಾದ್ಧಾಂತವಾಗುತ್ತದೆ. ಆಗ ಎಲ್ಲ ಭಾಷೆಗಳ ಅನುವಾದವನ್ನು ತಡೆ ಹಿಡಿದು ಹೊಸ ಕಡತವನ್ನು ಮಂಡಿಸಬೇಕಾಗುತ್ತದೆ. ಯುರೋಪಿಯನ್ ಯೂನಿಯನ್‌ನಲ್ಲಿ ಒಂದು ಸಾಮಾನ್ಯ ಭಾಷಾ ಬಳಕೆಗೆ ಸಹಮತ ಇಲ್ಲಿ ತನಕ ಮೂಡಿ ಬಂದಿಲ್ಲ. ಅದು ಸಾಧ್ಯವೂ ಇಲ್ಲ. ಯಾವ ದೇಶವೂ ತಮ್ಮ ತಮ್ಮ ಭಾಷೆಯನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಹೀಗಾಗಿ ಅನುವಾದವೇ ಕೊಂಡಿ.

ಅನುವಾದಕರಿಲ್ಲದೇ ಸಂಸತ್ತು ಕಾರ್ಯ ನಿರ್ವಹಿಸಲು ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣ ವಾಗಿದೆ. ತಪ್ಪು ಅಥವಾ ದೋಷಪೂರಿತ ಅನುವಾದ ಅನೇಕ ಸಲ ಸಂಸತ್ತಿನಲ್ಲಿ ಗೊಂದಲ, ಗದ್ದಲಗಳಿಗೆ ಕಾರಣವಾಗಿದ್ದುಂಟು. 2012ರ ಜೂನ್‌ನಲ್ಲಿ ಜರ್ಮನ್ ಬುಂಡೆಸ್ಟಾಗ್ (ಸಂಸತ್ತು) ನೂರಕ್ಕೂ ಹೆಚ್ಚು ಯುರೋಪಿಯನ್ ಯೂನಿಯನ್ ಕಡತಗಳನ್ನು ತಪ್ಪು ಅನುವಾದದ ಕಾರಣದಿಂದ ವಾಪಸ್ ಕಳುಹಿಸಿತ್ತು. ಏಕೆಂದರೆ ಅನುವಾದ ಸಂಪೂರ್ಣ ದೋಷಪೂರಿತವಾಗಿತ್ತು.

ಮತ್ತೊಂದು ಸಮಸ್ಯೆ ಎಂದರೆ ಅನುವಾದದಲ್ಲಿ ವಿಳಂಬ. ಉದಾಹರಣೆಗೆ, 2004ರಲ್ಲಿ ಬ್ರಿಟಿಷ್ ಸರಕಾರವು ಹೊಸ ಯುರೋಪಿಯನ್ ಯೂನಿಯನ್ ಪೇಟೆಂಟ್ ಕಾನೂನನ್ನು ಆಗಿನ 20 ಸದಸ್ಯ ದೇಶಗಳ ಭಾಷೆಗಳಿಗೆ ಸಮಯಕ್ಕೆ ಸರಿಯಾಗಿ ಭಾಷಾಂತರಿಸಲು ಕಷ್ಟವಾಗಿದ್ದರಿಂದ, ಬ್ಯಾಕ್‌ ಲಾಗ್‌ಗಳು ಬಡ ದೇಶಗಳ ರೋಗಿಗಳ ಜೀವ ಉಳಿಸುವ ಔಷಧಿಗಳಿಂದ ವಂಚಿತರಾಗಲು ಕಾರಣವಾಗಿತ್ತೆಂದು ‘ದಿ ಗಾರ್ಡಿಯನ್’ ವರದಿ ಮಾಡಿತ್ತು.

ಅನುವಾದದ ವೆಚ್ಚವನ್ನು ಕಡಿತಗೊಳಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ, ಆ ಕ್ರಮ ಕಾಲಕಾಲಕ್ಕೆ ಹೊಸ ಹೊಸ ಸಮಸ್ಯೆಗಳ ಹುಟ್ಟಿಗೆ ಕಾರಣವಾಗುತ್ತಿರುವುದು ತಲೆನೋವಾಗಿ ಪರಿಣಮಿಸಿದೆ. ಪ್ರಸ್ತುತ ಯುರೋಪಿಯನ್ ಯೂನಿಯನ್ ಪಾರ್ಲಿಮೆಂಟಿನಲ್ಲಿ 4300 ಮಂದಿ ಅನುವಾದಕರಿದ್ದಾರೆ.

800 ಮಂದಿ (interpreters) ವ್ಯಾಖ್ಯಾನಕಾರರಿದ್ದಾರೆ. ಇವರೆಲ್ಲ ಖಾಯಂ ಸಿಬ್ಬಂದಿ. ಇದರ ಹೊರತಾಗಿ ಐನೂರಕ್ಕೂ ಹೆಚ್ಚು ಹವ್ಯಾಸಿ ಅನುವಾದಕರಿದ್ದಾರೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ಅನುವಾದಕರನ್ನು ತೊಡಗಿಸಿಕೊಂಡ ಸಂಸ್ಥೆಯಿದ್ದರೆ ಅದು ಯುರೋಪಿಯನ್ ಯೂನಿಯನ್ ಪಾರ್ಲಿಮೆಂಟ್. ಹೊಸ ದೇಶ ಈ ಒಕ್ಕೂಟಕ್ಕೆ ಸೇರಿದಾಗ ಅನುವಾದದ ವೆಚ್ಚವೂ ಜಾಸ್ತಿಯಾಗುತ್ತದೆ.

ವಿಶ್ವೇಶ್ವರ ಭಟ್‌

View all posts by this author