ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ತೃಣಮಪಿ ನ ಚಲತಿ... ಸೂಕ್ತಿಯ ಹುಲ್ಲು ಸಾಮಾನ್ಯವೇನಲ್ಲ !

ಹಸಿವಿನಿಂದ ಬಳಲಿದ್ದರೂ ಮುಪ್ಪಿನಿಂದ ದುರ್ಬಲವಾಗಿದ್ದರೂ ಅಂಗಗಳೆಲ್ಲ ಕ್ಷೀಣಿಸಿದ್ದರೂ ಅತಿ ಕಷ್ಟದ ಸನ್ನಿವೇಶದಲ್ಲಿ ಸಿಲುಕಿದ್ದರೂ ತನ್ನ ಮನೋಸ್ಥೈರ್ಯವನ್ನೇ ಕಳೆದುಕೊಂಡಿದ್ದರೂ ಕಟ್ಟಕಡೆ ಯಲ್ಲಿ ಜೀವ ಹೋಗುವ ಸ್ಥಿತಿಯೇ ಉಂಟಾಗಿದ್ದರೂ, ಮದಿಸಿದ ಕಾಡಾನೆಗಳ ಸೀಳಿದ ಕುಂಭಸ್ಥಳದಲ್ಲಿ ರುವ ಮಾಂಸವನ್ನು ಮಾತ್ರ ಭಕ್ಷಿಸುವ ಸ್ವಭಾವವನ್ನು ತನ್ನ ಜೀವನದುದ್ದಕ್ಕೂ ಕಾಪಾಡಿಕೊಂಡು ಬಂದ, ಸ್ವಾಭಿಮಾನಿಗಳಲ್ಲಿ ಅಗ್ರಗಣ್ಯವಾದ ಸಿಂಹವು ಒಣಹುಲ್ಲನ್ನು ತಿಂದು ಬದುಕಿ ಉಳಿಯುತ್ತೇ ನೆಂದು ಎಂದಿಗೂ ಬಯಸುವುದಿಲ್ಲ ಅಂತ ಭಾವಾರ್ಥ).

ತಿಳಿರುತೋರಣ

ಅವನ ಆಣತಿಯಿಲ್ಲದೆ ಒಂದು ಹುಲ್ಲುಕಡ್ಡಿಯೂ ಚಲಿಸದು ಎಂಬರ್ಥದಲ್ಲಿ ಇರುವುದು- ತೇನ ವಿನಾ ತೃಣಮಪಿ ನ ಚಲತಿ ಎಂಬ ಸೂಕ್ತಿ. ಆದರೆ, ಅದರಲ್ಲಿ ‘ಒಂದು ಹುಲ್ಲುಕಡ್ಡಿಯೂ...’ ಎನ್ನುವಾಗ ಹುಲ್ಲೆಂದರೆ ಯಃಕಶ್ಚಿತ್ ಎಂಬಂತೆ ಧ್ವನಿಯಿದೆ ಎಂದು ನನಗನಿಸುತ್ತದೆ. ಹಾಗಿದ್ದರೆ ಹುಲ್ಲು ಅಲ್ಪವೇ? ನಗಣ್ಯವೇ? ಆಲೋಚಿಸುತ್ತ ಹೋದಂತೆ ಈ ಪ್ರಪಂಚದಲ್ಲಿ ಹುಲ್ಲು ಕೂಡ ಅಸಾಮಾನ್ಯವಾದುದು ಎಂದು ನಮಗೆ ತಿಳಿಯುತ್ತದೆ.

ಅಣು-ರೇಣು-ತೃಣ-ಕಾಷ್ಠಗಳಲ್ಲೂ ಭಗವಂತನಿದ್ದಾನೆ ಎಂದಮೇಲೆ ಹುಲ್ಲು(ತೃಣ) ದೈವಾಂಶ ಸಂಭೂತವೇ. ಭಗವಂತ ಎಷ್ಟು ಜವಾಬ್ದಾರಿಯವನೆಂದರೆ ಹುಟ್ಟಿಸಿದ ಮೇಲೆ ಹುಲ್ಲು ಮೇಯಿಸದೆ ಇರುವುದಿಲ್ಲ. ನಿಗರ್ವಿ, ನಿಷ್ಪಕ್ಷಪಾತಿ ಆಗಿರುವ ಅವನು ಹೂವ ತರುವರ ಮನೆಗೆ ಹುಲ್ಲನ್ನೂ ತರುತ್ತಾನೆ.

ಸುಖವನ್ನು ಹುಲ್ಲಿನ ಬಣವೆಯಲ್ಲಿ ಸೂಜಿ ಹುಡುಕಿದಂತೆ ಅರಸುತ್ತ ಇಹಲೋಕದ ಜಂಜಾಟಗಳಲ್ಲಿ ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯ ಆಸರೆ ತೋರುವವನೂ ದಯಾಪರನಾದ ಅವನೇ. ಅಷ್ಟಾಗಿ, ಭಗವಂತನು ನಮ್ಮಿಂದ ಬಯಸುವುದಾದರೂ ಏನನ್ನು?

ಭಗವದ್ಗೀತೆಯಲ್ಲಿ ಕೃಷ್ಣನೇನೋ ಪತ್ರಂ-ಪುಷ್ಪಂ-ಫಲಂ- ತೋಯಂ (ಎಲೆ, ಹೂ, ಹಣ್ಣು, ನೀರು) ಇವಿಷ್ಟೇ ಧಾರಾಳ ಸಾಕು ಎಂದಿದ್ದಾನೆ; ನಮ್ಮೆಲ್ಲರ ನೆಚ್ಚಿನ ಗಣಪನ ಎಕ್ಸ್‌ಪೆಕ್ಟೇಷನ್ಸು ಅದಕ್ಕಿಂತ ಲೂ ಸಿಂಪಲ್: ‘ಗರಿಕೆ ತಂದರೆ ನೀನು ಕೊಡುವೆ ವರವನ್ನ... ಗತಿ ನೀನೇ ಗಣಪನೇ ಕೈಹಿಡಿಯೊ ಮುನ್ನ...’ ಗರಿಕೆ ಎಂದರೇನು, ಅದೂ ಒಂದು ನಮೂನೆಯ ಹುಲ್ಲೇ ತಾನೆ? ‘ಹಾಲುಂಡ ತವರಿಗೆ ಏನೆಂದು ಹಾಡಲಿ ಹೊಳೆದಂಡೇಲಿರುವ ಕರಕೀಯ ಕುಡಿಹಾಂಗ ಹಬ್ಬಲಿ ಅವರ ರಸ ಬಳ್ಳಿ...’ ಎನ್ನುವ ಜನಪದ ಗರತಿಯ ಹಾರೈಕೆಯಲ್ಲಿ ಆಕೆ ನೀಡುವುದು ಕರಕಿ(ಗರಿಕೆ)ಯ ಹೋಲಿಕೆ ಯನ್ನೇ.

ಇದನ್ನೂ ಓದಿ: Srivathsa Joshi Column: ಕರುಣಾಳು ಬಾ ಬೆಳಕೇ, ನೇತಿಯಿಂದ ಇತಿಯೆಡೆಗೆ ನಡೆಸೆಮ್ಮನು

ಆದ್ದರಿಂದ, ಈ ದಿನ ಹುಲ್ಲನ್ನೇ ಪೋಣಿಸಿ ಒಂದು ತೋರಣ ಕಟ್ಟಬೇಕೆಂದಿದ್ದೇನೆ. ಬೇಕಿದ್ದರೆ ತೃಣ ತೋರಣ ಎನ್ನಬಹುದು, ಒಳ್ಳೆಯ ಅನುಪ್ರಾಸಯುಕ್ತ ಹೆಸರಾಗುತ್ತದೆ. ತೃಣವನ್ನು ಕೇವಲವಾಗಿ ಅತ್ಯಲ್ಪದ್ದೆಂಬ ಭಾವನೆಯಿಂದ ನೋಡುತ್ತೇವೆ, ಅದು ಬರೀ ದನಕರುಗಳ ಮೇವು ಎಂಬ ತಾತ್ಸಾರ ತೋರುತ್ತೇವೆ ಎಂದು ನನಗನಿಸುವುದು ‘ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ ಎಣಿಸಲಾರದ ಭವದಿ ಕಡುನೊಂದೆ ನಾನು...’ ರೀತಿಯ ದಾಸವಾಣಿಗಳಲ್ಲಿ; ‘ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ, ಮನೆಯೊಳಗೆ ಮನೆಯೊಡೆಯ ನಿದ್ದಾನೋ ಇಲ್ಲವೋ...’ ರೀತಿಯ ವಚನದ ಸಾಲುಗಳಲ್ಲಿ; ‘ಹಾದಿ ಬೀದಿಯಲಿರುವ ಕಸದ ಹುಲ್ಲನು ಮೇಯ್ದು ಮನೆಗೈ ತಂದು ನಿನಗಮೃತವ ನಾನೀವೆ ನೀನಾರಿಗಾದೆಯೋ ಎಲೆ ಮಾನವ...’ ರೀತಿಯ ಪದ್ಯಗಳಲ್ಲಿ; ‘ಕಿಂ ಜೀರ್ಣಂ ತೃಣಮತ್ತಿ ಮಾನಮಹತಾಂ ಅಗ್ರೇಸರಃ ಕೇಸರೀ’ ರೀತಿಯ ಸುಭಾಷಿತ ಸಾಲುಗಳಲ್ಲಿ (ಅದೊಂದು ಸಿಂಹದ ಸ್ವಾಭಿಮಾನ ಘನತೆಯನ್ನು ಸಾರುವ ಸುಭಾಷಿತ: ‘ಕ್ಷುತ್‌ಕ್ಷಾಮೋಧಿಪಿ ಜರಾಕೃಶೋಧಿಪಿ ಶಿಥಿಲಪ್ರಾಯೋಧಿಪಿ ಕಷ್ಟಾಂ ದಶಾಮಾಪನ್ನೋಧಿಪಿ ವಿಪನ್ನಧಿ ಧೃತಿರಪಿ ಪ್ರಾಣೇಷು ನಶ್ಯತ್ಸ್ವಪಿ| ಮತ್ತೇಭೇಂದ್ರ ವಿಭಿನ್ನಕುಂಭಪಿ ಶಿತ ಗ್ರಾಸೈಕಬದ್ಧಸ್ಪೃಹಃ ಕಿಂ ಜೀರ್ಣಂ ತೃಣಮತ್ತಿಮಾನಮಹತಾಂ ಅಗ್ರೇಸರಃ ಕೇಸರೀ||’ ಎಂದು ಅದರ ಪೂರ್ಣರೂಪ.

ಹಸಿವಿನಿಂದ ಬಳಲಿದ್ದರೂ ಮುಪ್ಪಿನಿಂದ ದುರ್ಬಲವಾಗಿದ್ದರೂ ಅಂಗಗಳೆಲ್ಲ ಕ್ಷೀಣಿಸಿದ್ದರೂ ಅತಿಕಷ್ಟದ ಸನ್ನಿವೇಶದಲ್ಲಿ ಸಿಲುಕಿದ್ದರೂ ತನ್ನ ಮನೋಸ್ಥೈರ್ಯವನ್ನೇ ಕಳೆದುಕೊಂಡಿದ್ದರೂ ಕಟ್ಟಕಡೆಯಲ್ಲಿ ಜೀವ ಹೋಗುವ ಸ್ಥಿತಿಯೇ ಉಂಟಾಗಿದ್ದರೂ, ಮದಿಸಿದ ಕಾಡಾನೆಗಳ ಸೀಳಿದ ಕುಂಭಸ್ಥಳದಲ್ಲಿರುವ ಮಾಂಸವನ್ನು ಮಾತ್ರ ಭಕ್ಷಿಸುವ ಸ್ವಭಾವವನ್ನು ತನ್ನ ಜೀವನದುದ್ದಕ್ಕೂ ಕಾಪಾಡಿಕೊಂಡು ಬಂದ, ಸ್ವಾಭಿಮಾನಿಗಳಲ್ಲಿ ಅಗ್ರಗಣ್ಯವಾದ ಸಿಂಹವು ಒಣಹುಲ್ಲನ್ನು ತಿಂದು ಬದುಕಿ ಉಳಿಯುತ್ತೇನೆಂದು ಎಂದಿಗೂ ಬಯಸುವುದಿಲ್ಲ ಅಂತ ಭಾವಾರ್ಥ).

Screenshot_8 ಋ

‘ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ’- ಮಂಕು ತಿಮ್ಮನ ಕಗ್ಗದಲ್ಲಿ ಡಿವಿಜಿ ಹೇಳಿದ್ದಾರೆ. ದೂರದ ಬೆಟ್ಟ ನುಣ್ಣಗೆ ಇದೆಯೆಂತನಿಸುವುದು ಅಲ್ಲಿನ more greener grass ನಿಂದ ಅಂತ ಮಂಕು ತಿಮ್ಮನಿಗೂ ಗೊತ್ತು; ಬೆಟ್ಟದ ತಪ್ಪಲಲ್ಲಿ ಮತ್ತು ಮೇಲ್ಮೈಗೆ ಮುಳ್ಳು ಕಂಟಿಗಳು ಇರುವುದಕ್ಕಿಂತ ಹುಲುಸಾದ ಹುಲ್ಲು ಬೆಳೆದಿದ್ದರೆ ಬೆಟ್ಟ ವನ್ನೇರು ವವರಿಗೆ ಪ್ರಯಾಸ ಕಡಿಮೆ. ಕಠಿಣ ಹಾದಿಯನ್ನು ಕ್ರಮಿಸುವವರ ಶ್ರಮವಿಳಿಸಲು ಹುಲ್ಲು ಮಾಡುವ ಸಹಾಯವದು. ಆ ರೀತಿ ಹುಲ್ಲಿನಂತಿದ್ದು ಪರೋಪಕಾರಿ ಆಗಿರಬೇಕು ಎಂಬುದು ಮಂಕುತಿಮ್ಮನ ಮಾತಿನ ಇಂಗಿತ.

ಬೆಟ್ಟಗುಡ್ಡಗಳನ್ನೇರುವ ಚಾರಣಿಗರಿಗೆ ನಡುವೆ ಹುಲ್ಲುಗಾವಲು ಸಿಕ್ಕಿದರೆ ಒಮ್ಮೆ ಆಯಾಸ ಪರಿಹಾರಕ್ಕಾಗಿ ಕೈಕಾಲು ಚಾಚಿ ಮೈ ಚೆಲ್ಲಿ ಮಲಗಿಬಿಡಲು ಬೇರೆ ಪ್ರಶಸ್ತ ಜಾಗ ಬೇಕೆ? ಕಲ್ಲುಮುಳ್ಳು ಗಳಲ್ಲಿ ಪಾದರಕ್ಷೆಗಳನ್ನು ಧರಿಸಿ ನಡೆದ ಮೇಲೆ, ಹುಲ್ಲಿನ ಮೇಲೆ ಬರಿಗಾಲಲ್ಲಿ ಒಮ್ಮೆ ನಡೆದು ನೋಡಿ.

ಗಲ್ಲಕ್ಕೆ ನವಿಲುಗರಿ ಸೋಕಿದಂಥ ಕಚಗುಳಿ ಹಿತಾನುಭವ, ತನ್ಮೂಲಕ ಆಯಾಸಪರಿಹಾರ ನಿಮ್ಮ ಪಾದಗಳಿಗಾಗದಿದ್ದರೆ ಆಗ ಹೇಳಿ. ಪಶ್ಚಿಮಘಟ್ಟದ ಕುದುರೆಮುಖ ಪರ್ವತ ಪ್ರದೇಶದಲ್ಲಿ ಹುಲ್ಲು ಗುಡ್ಡೆ ಎಂಬ ಹೆಸರಿನದೇ ಒಂದು ಜಾಗವಿದೆ. ಅಲ್ಲಿಗೆ ತಲುಪಿದಾಗ ಚಾರಣದ ಒಂದು ಹಂತ ಮುಗಿದು ಅಲ್ಲೊಂದಿಷ್ಟು ಹೊತ್ತು ವಿಶ್ರಾಂತಿ ಪಡೆಯುವ ಅವಕಾಶ. ಹೊತ್ತೇರಿದರೂ ಹುಲ್ಲಿನ ಮೇಲಿನ ಇಬ್ಬನಿ ಸಹ ಇನ್ನೂ ಫಳಫಳ ಹೊಳೆಯುತ್ತಿದ್ದರಂತೂ ಮೈದಣಿವಷ್ಟೇ ಅಲ್ಲ ಮನಸ್ಸಿನ ದಣಿವೂ ಹೇಳಹೆಸರಿಲ್ಲವಾಗುತ್ತದೆ.

ಚೆನ್ನವೀರ ಕಣವಿಯವರು ‘ಮಾತು’ ಕವಿತೆಯಲ್ಲಿ ಅಂಥದನ್ನು ಮಕಮಲ್ಲು ಹುಲ್ಲು ಎಂದು ಬಣ್ಣಿಸಿದ್ದಾರೆ: ‘ಮುಂಜಾವಿನಲಿ ಹಸಿರು ಹುಲ್ಲು ಮಕಮಲ್ಲಿನಲಿ ಪಾರಿಜಾತವು ಹೂವು ಸುರಿಸಿ ದಂತೆ... ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ ಸೃಷ್ಟಿ ಸಂಪೂರ್ಣತೆಯ ಬಿಂಬಿಪಂತೆ...’ ಆಹಾ ಆ ದೃಶ್ಯವನ್ನು ನೆನೆಸಿಕೊಂಡರೇ ಎಂಥ ಸೊಗಸು!

ನಮ್ಮಲ್ಲಿ ಹಿಂದೆಲ್ಲ ಬಡಜನರ ಗುಡಿಸಲುಗಳಿಗೆ, ಮಧ್ಯಮ ವರ್ಗದ ಮನೆಗಳಿಗೂ, ಮುಳಿಹುಲ್ಲಿನ ಚಾವಣಿ ಇರುತ್ತಿದ್ದದ್ದು. ಅದರ ಮೇಲೆ ಮುಂಜಾವಿನ ಬಿಸಿಲಿನ ಹೊಂಗಿರಣಗಳು ಬೀಳುವಾಗಿನ ಅಂದವನ್ನು ವರ್ಣಿಸುವಾಗಲೇ ಪಂಜೆ ಮಂಗೇಶರಾಯರು ‘ಮಾಡಿನ ಹುಲ್ಲಲಿ ಚಿನ್ನದ ಗೆರೆಯನು ಎಳೆಯುವನು ರವಿ ಹೊಳೆಯುವನು...’ ಎಂದಿದ್ದು. ಈಗ ಹಂಚುಹೊದಿಕೆಯ ಅಥವಾ ಟೆರೇಸ್ ಮನೆಗಳ ಮೇಲೆ ಬೀಳುವ ಬೆಳಗಿನ ಬಿಸಿಲು ಪಂಜೆಯವರಿಗೆ ಕವನ ರಚನೆಯ ಸ್ಪೂರ್ತಿ ನೀಡು ತ್ತಿತ್ತೆಂದು ಹೇಳಲಿಕ್ಕಾಗದು.

ಮುಂಜಾವಿನ ಬಿಸಿಲು ಒಣಗಿದ ಮುಳಿಹುಲ್ಲಿನ ಮೇಲೆ ಬಿದ್ದಾಗ ನಿಜಕ್ಕೂ ಅದು ಬಂಗಾರದ ಸರಿಗೆಗಳಂತೆ ಕಂಡು ಬರುತ್ತದೆ. ಬಡವರ ಬದುಕನ್ನು ಭ್ರಮೆಗಾದರೂ ಸ್ವರ್ಣಮಯವಾಗಿಸುವ ರವಿಯ ಪರಿ ಅದು. ಕವಿಗೆ ವರ್ಣನೆಗೆ ಅಷ್ಟು ಸಾಕಲ್ಲ!

ಹುಲ್ಲು ಮತ್ತು ಚಿನ್ನದ ಗೆರೆ ಎಂದಾಗ ಇನ್ನೊಂದು ಕುತೂಹಲಕಾರಿ ವಿಷಯವನ್ನೂ ಉಲ್ಲೇಖಿ ಸಲೇಬೇಕು. Grassroots politics (ಅಥವಾ ಅದರ ಮಮತಾ ಬ್ಯಾನರ್ಜಿ ಭಾಷಾಂತರದ ‘ತೃಣ ಮೂಲ ರಾಜಕೀಯ’) ಎಂಬ ಪದಪುಂಜವನ್ನು ಕೇಳಿದ್ದೀರಷ್ಟೆ? ಈ grassroots ಎಂಬ ಪದ ಮೂಲತಃ ಅಮೆರಿಕದ್ದು ಎಂಬ ವಿಚಾರ ನಿಮಗೆ ಗೊತ್ತೇ? ಇಲ್ಲಿ 19ನೆಯ ಶತಮಾನದ ಆರಂಭದಲ್ಲಿ ಗಣಿಗಾರಿಕೆ, ಚಿನ್ನದ ನಿಕ್ಷೇಪಗಳ ಪತ್ತೆಯ ವೇಳೆ ಚಾಲ್ತಿಗೆ ಬಂದ ಪದ ಅದು. ಆಗ ಚಿನ್ನ ಎಷ್ಟು ಹೇರಳವಾಗಿತ್ತೆಂದರೆ ಹುಲ್ಲಿನಡಿಯ ಮಣ್ಣನ್ನು ಅಗೆದರೆ ಅಲ್ಲೂ ಚಿನ್ನ ಸಿಗುತ್ತದೆ ಎಂಬಂತಿತ್ತು.

ಆಮೇಲೆ ಹುಲ್ಲಿನ ಬೇರುಗಳ ಅರ್ಥವ್ಯಾಪ್ತಿ ಇನ್ನೂ ವಿಸ್ತಾರವಾಯ್ತೆನ್ನಿ. ಹುಲ್ಲನ್ನು ಅದರ ಬೇರು ಗಳೇ ತಾನೆ ಜೀವಂತವಾಗಿ ಮತ್ತು ಬೆಳವಣಿಗೆಯ ಕ್ರಮದಲ್ಲಿ ಇಡುವುದು? ಅದೇ ಪ್ರಕಾರ ಯಾವುದೇ ವಿಷಯದ ಅಥವಾ ವಸ್ತುವಿನ ಆಮೂಲಾಗ್ರ ಅರಿವಾಗಬೇಕಾದರೆ ಅದರ ತಳಮಟ್ಟದ ಮಾಹಿತಿ ಯಿಂದಲೇ ಶುರುವಾಗಬೇಕಲ್ಲ? ರಾಜಕಾರಣಿಗಳು ಈ ಪದಪುಂಜವನ್ನು ಉಪಯೋಗಿಸಿ ಸಮಾಜದ ಕೆಳ ಸ್ತರದ ಜನಸಾಮಾನ್ಯರನ್ನೇ grassroots ಎಂದು ಕರೆದರು.

ಭಾಷಣಗಳನ್ನು ಕೊರೆದರು. ಸಂಪತ್ತಿನ ಕೊಳ್ಳೆ ಹೊಡೆದರು. ಸಾಮಾನ್ಯ ಜನ ಹುಲ್ಲು ತಿನ್ನುವ ಪ್ರಾಣಿಗಳಂತಾದರು. ಇಲ್ಲಿ-ಅಲ್ಲಿ ಅಂತಲ್ಲ, ಪ್ರಪಂಚದಲ್ಲಿ ಎಲ್ಲೆಲ್ಲೂ! ಹುಲ್ಲು ತಿನ್ನುವ ಪ್ರಾಣಿ ಗಳಂತಾದರು ಅಂದಮಾತ್ರಕ್ಕೇ ಕೀಳಾಗಿ ತಿಳಿಯಬೇಕಾದ್ದೇನಿಲ್ಲ. ಸಸ್ಯಶಾಸ್ತ್ರೀಯವಾಗಿ ನೋಡಿದರೆ ಪ್ರಪಂಚದ ಪ್ರಮುಖ ಆಹಾರವರ್ಗವಾದ ಅಕ್ಕಿ, ಗೋಧಿ, ರಾಗಿ, ಜೋಳ, ಸಜ್ಜೆ, ನವಣೆ ಮುಂತಾದು ವೆಲ್ಲವೂ ಹುಲ್ಲಿನ ಜಾತಿಯವೇ.

ಕಬ್ಬು ಮತ್ತು ಬಿದಿರು ಸಹ ಹುಲ್ಲಿನದೇ ಪ್ರಭೇದಗಳು. ಆದ್ದರಿಂದ ಎಳೆಬಿದಿರು ಅರ್ಥಾತ್ ಕಳಲೆಯ ರುಚಿರುಚಿಯಾದ ಪಲ್ಯ, ಹುಳಿ, ವಡೆ ಮಾಡಿ ತಿಂದರೆ ಒಂದರ್ಥದಲ್ಲಿ ಹುಲ್ಲು ತಿಂದಂತೆಯೇ. ಭಾಷಾಸಕ್ತರಿಗೆ ಇನ್ನೂ ಒಂದು ಸ್ವಾರಸ್ಯಕರ ಸಂಗತಿ ಇಲ್ಲಿದೆ. ಬಿದಿರನ್ನು ಹುಲ್ಲು ಎಂದು ಪರಿಗಣಿ ಸುವುದರಿಂದ ಮತ್ತು ತಮಿಳಿನಲ್ಲಿ ಹುಲ್ಲನ್ನು ಪುಲ್ ಎನ್ನುವುದರಿಂದ, ಬಿದಿರಿನಿಂದ ನಿರ್ಮಿತವಾದ ಕೊಳಲು ತಮಿಳಿನಲ್ಲಿ ‘ಪುಲ್ಲಾಂ’ಗುಳಲ್ ಎಂದು ಕರೆಯಲ್ಪಡುತ್ತದೆ.

ಕನ್ನಡದಲ್ಲದು ಪಿಳ್ಳಂಗೋವಿ ಆಗಿದೆ. ಮುರಲೀಧರನ ಕೈಯಲ್ಲಿದ್ದುಕೊಂಡು ಮನಮೋಹಕ ನಾದಸುಧೆಯನ್ನು ಹರಿಸಿ ಎಲ್ಲರನ್ನೂ ಸೆಳೆಯುವ ವೇಣು ನಿಜಕ್ಕೂ Pull ಆಂಗುಳಲೇ ತಾನೆ! ಸರಿ, ಮತ್ತೊಮ್ಮೆ ಹುಲ್ಲು ತಿನ್ನುವ ವಿಷಯಕ್ಕೆ ವಾಪಸಾದರೆ- ಈಚೀಚೆಗೆ ಹೆಲ್ತ್ ಕಾನ್ಷಿಯಸ್ ನಟ್‌ಗಳು ಗೋಧಿ ಹುಲ್ಲು, ಬಾರ್ಲಿ ಹುಲ್ಲುಗಳನ್ನು ಅತ್ಯಮೋಘವಾದ ಆಹಾರವೆಂದೂ, ಬೇಕಿದ್ದರೆ ಅದನ್ನು ಯೋಗ ಫುಡ್ ಅಂತ ಪರಿಗಣಿಸಬಹುದು ಎಂದೂ ಪ್ರಚಾರ ಮಾಡುತ್ತಿದ್ದಾರೆ.

ಲೆಮನ್ ಗ್ರಾಸ್ ಅಂತೂ ಔಷಧಿಯ ಗುಣಗಳನ್ನು ಹೊಂದಿರುವ ಸಸ್ಯವೆಂದು ಅದನ್ನು ಅಡುಗೆ ಯಲ್ಲಿ ಮತ್ತು ಆಯುರ್ವೇದ ಔಷಧಿಗಳಲ್ಲೂ ಬಳಸುತ್ತೇವೆ. ಅಂದಮೇಲೆ ನಾವೆಲ್ಲ ಹುಲ್ಲು ತಿನ್ನುವವರು ಎಂದು ಕರೆಸಿಕೊಳ್ಳಲಿಕ್ಕೆ ಏನೂ ನಾಚಿಕೆ ಬೇಡ. ಇದು ಹೀಗೇ ಮುಂದುವರಿದಲ್ಲಿ ದೇವರು ತಿನ್ನಿಸಲಿ ಬಿಡಲಿ ನಾವೇ ಸಿಕ್ಕಸಿಕ್ಕ ಹುಲ್ಲನ್ನೆಲ್ಲ ಮೇದುಬಿಡುತ್ತೇವೇನೋ? ಕೊಟ್ಟಿಗೆಯಲ್ಲಿ ಗೋಮಾತೆಗಳೊಡನೆ ಸಹಪಂಕ್ತಿ ಭೋಜನ ಮಾಡಿಯೇವು, ಅಥವಾ ಗೋಮಾತೆಗಳ ಊಟಕ್ಕೇ ಸಂಚಕಾರ ತಂದರೂ ತಂದೇವು! ಛೇ... ಒಂದೆರಡಲ್ಲ ಈ ಮನುಕುಲದ ಉಪದ್ವ್ಯಾಪಗಳು.

ಇರಲಿ, ಹುಲ್ಲನ್ನು ಹೊಟ್ಟೆಗೆ ಮೇವಾಗಿಸುವುದಕ್ಕಿಂತ, ಹುಲ್ಲಿನ ಬಗೆಗಿನ ಸ್ವಾರಸ್ಯಗಳೊಂದಿಷ್ಟನ್ನು ಮಿದುಳಿಗೆ ಮೇವಾಗಿಸೋಣ. ಚಂದ್ರಮತಿಗೆ, ಮಗ ಸಾಯಲು ಕಾರಣವೇನು ಎಂಬುದೂ ಗೊತ್ತಾಗಿ ಬಿಡುತ್ತದೆ. ‘ಮರದ ಕೆಲದ ಹುತ್ತಿನ ಹುಲ್ಲ ಕೊಯ್ಯೆ ಕೈಯ ನೂಕಿ ಫಣಿಯಗಿಯೆ...’ ಎಂದು ಲೋಹಿತಾಶ್ವನೊಡನೆ ಹೋಗಿದ್ದ ಇತರ ಹುಡುಗರು ಬಂದು ವರದಿಯೊಪ್ಪಿಸುತ್ತಾರೆ.

ಚಂದ್ರಮತಿಯ ಪ್ರಲಾಪ ಮುಗಿಲು ಮುಟ್ಟುತ್ತದೆ. ಕೇಳುವ, ಓದುವ ನಮಗೂ ಕರುಳು ಕಿತ್ತು ಬಂದಂತಾಗುತ್ತದೆ. ನಮ್ಮ ಪುರಾಣೇತಿಹಾಸಗಳಲ್ಲಿ ಬರುವ ಹುಲ್ಲಿನ ಉಲ್ಲೇಖಗಳನ್ನು ನೆನಪಿಸಿ ಕೊಳ್ಳೋಣ. ರಾಮಾಯಣದಲ್ಲಿ ಸೀತೆಯು ಅಶೋಕವನದಲ್ಲಿ ಕಾಲಕ್ಷೇಪ ಮಾಡುತ್ತಿದ್ದಾಗ ರಾವಣನು ಆಗಾಗ ಅವಳನ್ನು ಮಾತನಾಡಿಸಲಿಕ್ಕೆಂದು ಅಲ್ಲಿಗೆ ಬರುತ್ತಿದ್ದನಂತೆ.

ಮಾತನಾಡಿಸುವುದೆಂದರೆ ಒಂದೋ ಪ್ರಲೋಭನೆ ಒಡ್ಡುವುದು, ಇಲ್ಲವೇ ಆಕೆಗೆ ಬೆದರಿಕೆ ಬೈಗುಳ ಉದುರಿಸುವುದು. ಒಟ್ಟಿನಲ್ಲಿ ಸೀತೆ ತನ್ನವಳಾಗಬೇಕೆಂದು ರಾವಣನ ಹಠ. ಆದರೆ ಸೀತೆ ರಾವಣ ನನ್ನು ಮುಖವೆತ್ತಿ ನೋಡುತ್ತಿರಲಿಲ್ಲ. ಆತನ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಳು, ಮುಖಾ ಮುಖಿಯಾಗಿ ಅಲ್ಲ. ಬದಲಿಗೆ ಕೈಯಲ್ಲೊಂದು ಹುಲ್ಲುಕಡ್ಡಿಯನ್ನು ಹಿಡಿದು ಅದರೊಡನೆ ಸಂಭಾಷಿಸು ತ್ತಿದ್ದಳೇನೋ ಎಂಬಂತೆ.

ಪರಪುರುಷನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಲಾರೆ ಎಂಬ ವ್ರತವುಳ್ಳ ಪತಿವ್ರತೆ ಸೀತಾಮಾತೆ. ಇನ್ನು, ಮಹಾಭಾರತದಲ್ಲಿ ಹುಲ್ಲು ಬರುವುದು ಕೌರವರು-ಪಾಂಡವರು ಚಿಕ್ಕವರಿದ್ದಾಗ, ಅವರೆಲ್ಲ ಸೇರಿ ಒಟ್ಟಿಗೇ ಆಟವಾಡಿಕೊಂಡಿದ್ದಾಗ ಚೆಂಡು ಹೋಗಿ ಒಂದು ಬಾವಿಯಲ್ಲಿ ಬೀಳುವ, ಅಲ್ಲಿಗೆ ಬಂದ ದ್ರೋಣಾಚಾರ್ಯರು ಒಂದಿಷ್ಟು ಹುಲ್ಲುಕಡ್ಡಿಗಳನ್ನು ಮಂತ್ರಿಸಿ ಬಾವಿಗೆ ಎಸೆಯಲು ಅವು ಒಂದರ ತುದಿಗೊಂದು ಅಂಟಿಕೊಂಡು ಸರಪಳಿಯಂತಾಗುವ, ಮತ್ತು ಅದರ ಮೂಲಕವೇ ದ್ರೋಣಾ ಚಾರ್ಯರು ಚೆಂಡನ್ನು ಬಾವಿಯಿಂದ ಹೊರತೆಗೆಯುವ ಪ್ರಸಂಗದಲ್ಲಿ. ಹುಡುಗರು ಹೋ ಎಂದು ಖುಷಿಪಟ್ಟರು ಮಾತ್ರವಲ್ಲ ದ್ರೋಣಾಚಾರ್ಯರೇ ತಮಗೆ ಶಸ್ತ್ರಾಸ್ತ್ರ ವಿದ್ಯೆ ಕಲಿಸುವ ಗುರುಗಳಾಗ ಬೇಕೆಂದು ಪಟ್ಟುಹಿಡಿದರು.

ಸತ್ಯಹರಿಶ್ಚಂದ್ರನ ಕಥೆಯಲ್ಲಿ, ಅವನ ಕಷ್ಟಕಾರ್ಪಣ್ಯಗಳು ಪರಮಾವಧಿ ಹಂತವನ್ನು ತಲುಪುವು ದಕ್ಕೆ ಹುಲ್ಲೂ ಒಂದು ನೆಪವಾಗುತ್ತದೆ! ಹೇಗೆ? ಹೆಂಡತಿ ಚಂದ್ರಮತಿ ಮತ್ತು ಮಗ ಲೋಹಿತಾಶ್ವ ನನ್ನು ಬ್ರಾಹ್ಮಣನೊಬ್ಬನಿಗೆ ಮಾರಿದ ಹರಿಶ್ಚಂದ್ರ ಮಹಾರಾಜ ಕೊನೆಗೆ ತನ್ನನ್ನೇ ಮಾರಿಕೊಂಡು ಮಸಣದ ಕಾವಲುಗಾರನಾಗುವ ದುರ್ಭರ ಪ್ರಸಂಗ.

ಚಂದ್ರಮತಿ ಮತ್ತು ಲೋಹಿತಾಶ್ವ ಬ್ರಾಹ್ಮಣನ ಮನೆಯ ಸೇವಕರಾಗಿ ದಿನಗಳೆಯುತ್ತಾರೆ. ಅಲ್ಲಿನ ದನಕರುಗಳಿಗೆ ಉಣಿಸಲು ಹುಲ್ಲು ಕತ್ತರಿಸಿ ತರು ವುದು ಲೋಹಿತಾಶ್ವನ ಕೆಲಸ. ‘ಕೆಲದ ಮೆಳೆಯೊತ್ತಿ ನೊಳಗಿರ್ದ ಹುತ್ತಿನೊಳುನಳ| ನಳಿಸಿ ಕೋಮಲತೆಯಿಂ ಕೊಬ್ಬಿ ಕೊನೆವಾಯ್ದು ಕಂ| ಗಳವಟ್ಟು ಬೆಳೆದೆಳೆಯ ದರ್ಭೆಯಂ ಕಂಡು ಹಾರಯಿಸಿ...’ ಅಡವಿಯಲ್ಲಿ ಒಂದೆಡೆ ಹುತ್ತದ ಮೇಲೆ ಹುಲುಸಾಗಿ ಬೆಳೆದಿದ್ದ ದರ್ಭೆಯ ಹುಲ್ಲು ಲೋಹಿತಾಶ್ವನ ಮನಸ್ಸನ್ನು ಸೆಳೆಯುತ್ತದೆ.

ಹುಲ್ಲು ತೆಗೆಯುತ್ತಿರುವಾಗಲೇ ಹಾವು ಕಚ್ಚಿ ಆತ ಅಸುನೀಗುತ್ತಾನೆ. ‘ತನಯನೆಂದುಂ ಬಪ್ಪ ಹೊತ್ತಿಂಗೆ ಬಾರದಿರೆ ಮನನೊಂದಿದೇಕೆ ತಳುವಿದನೆನ್ನ ಕಂದನೆಂದೆನುತ ಸುಯ್ಯುತ್ತ ಮರುಗುತ್ತ ಬಸಿರಂ ಹೊಸೆದು ಕೊನೆವೆರಳ ಮುರಿದುಕೊಳುತ...’ ಮರುಗುವ ಹುಲ್ಲಿನ ಪ್ರಾಮುಖ್ಯದ ಇನ್ನೊಂದು ಉಜ್ಜ್ವಲ ಇತಿಹಾಸವೆಂದರೆ ಚಾಣಕ್ಯ-ಚಂದ್ರಗುಪ್ತರ ಕಥೆ.

ಸಂಕ್ಷಿಪ್ತವಾಗಿ ಆ ಪ್ರಸಂಗ ಹೀಗಿದೆ: ರಾಜ ಧನಾನಂದನಿಂದ ಅವಮಾನಗೊಂಡ ಚಾಣಕ್ಯನು ನಡೆದುಕೊಂಡು ಹೋಗುತ್ತಿರುತ್ತಾನೆ. ದಾರಿಯಲ್ಲಿದ್ದ ಒಣಗಿದ, ಬೇರುಬಿಟ್ಟ ಹುಲ್ಲು ಅವನ ಕಾಲಿಗೆ ಚುಚ್ಚುತ್ತದೆ. ಅದರಿಂದ ಅವನಿಗೆ ನೋವು ಉಂಟಾಗುತ್ತದೆ. ಮೊದಲೇ ಮಾನಸಿಕವಾಗಿ ಜರ್ಜರಿತ ನಾಗಿದ್ದವನನ್ನು ಈ ಭೌತಿಕ ನೋವು ಕೆರಳಿಸುತ್ತದೆ.

ಕೋಪಗೊಂಡ ಚಾಣಕ್ಯನು ಉರಿಯುತ್ತಿರುವ ಬಿಸಿಲಿನಲ್ಲೇ ನಿಂತು ಹುಲ್ಲನ್ನು ಬೇರುಸಹಿತ ಕೀಳಲು ಪ್ರಾರಂಭಿಸುತ್ತಾನೆ. ಬೆವರಿಂದ ತೋಯ್ದುಹೋಗುತ್ತಾನೆ. ಅವನ ಆವೇಶ ಎಷ್ಟಿತ್ತೆಂದರೆ ನೋಡ ನೋಡುತ್ತಿದ್ದಂತೆ ಆ ಪ್ರದೇಶದಲ್ಲಿದ್ದ ಹುಲ್ಲನ್ನೆಲ್ಲ ಕಿತ್ತು ತೆಗೆದಿರುತ್ತಾನೆ!

ಈ ದೃಶ್ಯವನ್ನು ಹತ್ತಿರದ ಕಟ್ಟಡದ ಕಿಟಕಿಯಿಂದ ನೋಡುತ್ತಿದ್ದ ಚಂದ್ರಗುಪ್ತನಿಗೆ ಚಾಣಕ್ಯನಲ್ಲಿ ಆಸಕ್ತಿ ಹುಟ್ಟುತ್ತದೆ. ಅವನು ಚಾಣಕ್ಯನ ಬಳಿ ಬಂದು ಮಾತನಾಡುತ್ತಾನೆ. ಇಬ್ಬರೂ ಸೇರಿ ಉದ್ದಿಶ್ಯ ಸಾಧಿಸಲು ನಿರ್ಧರಿಸುತ್ತಾರೆ. ಚಾಣಕ್ಯನು ನಿರ್ಮೂಲನ ಮಾಡಿದ್ದು ಹುಲ್ಲನ್ನು. ಅವನಿಂದ ಸೂರ್ತಿ, ಮಾರ್ಗದರ್ಶನ ಮತ್ತು ಶಿಕ್ಷಣ ಪಡೆದ ಚಂದ್ರಗುಪ್ತನು ನಿರ್ಮೂಲನ ಮಾಡಿದ್ದು ಇಡೀ ನಂದ ವಂಶವನ್ನು!

ಹಿಸ್ಟರಿಯಲ್ಲಷ್ಟೇ ಅಲ್ಲ, ಸ್ಪೋರ್ಟ್ಸ್‌ನಲ್ಲೂ ಹುಲ್ಲು ಬರುತ್ತದೆ. ವಿಂಬಲ್ಡನ್ ಮತ್ತು ಫ್ರೆಂಚ್ ಓಪನ್ ಇವೆರಡೂ ಯುರೋಪ್‌ನಲ್ಲಿ ನಡೆಯುವ, ಜಗತ್ತಿನ ಗಮನ ಸೆಳೆಯುವ ಟೆನ್ನಿಸ್ ಪಂದ್ಯಾವಳಿ ಗಳು; ಅವುಗಳದೊಂದು ಮುಖ್ಯ ವ್ಯತ್ಯಾಸವಿದೆ, ಏನು? ಎಂದು ಯಾರಾದರೂ ನಿಮಗೆ ಸಾಮಾನ್ಯಜ್ಞಾನ ಪ್ರಶ್ನೆ ಕೇಳಿದರೆ ನೆನಪಿಡಬೇಕಾದ್ದು ಹುಲ್ಲನ್ನೇ.

ಹೌದು, ವಿಂಬಲ್ಡನ್ (ಮತ್ತು ಯುಎಸ್ ಓಪನ್ ಕೂಡ) ಹುಲ್ಲುಮೈದಾನದಲ್ಲಿ ನಡೆಯುವ ಟೂರ್ನ ಮೆಂಟ್ ಆದರೆ, ಫ್ರೆಂಚ್ ಓಪನ್‌ನದು ಕೆಂಪುಮಣ್ಣಿನ ಮೈದಾನ. ಕ್ರಿಕೆಟ್ ಕ್ರೀಡಾಂಗಣದಲ್ಲಿ ಹುಲ್ಲಿನ ಪ್ರಮಾಣ ಆಟದ ಮೇಲೆ ಎಷ್ಟು ಪರಿಣಾಮ ಬೀರುತ್ತದೆಯೆಂಬುದನ್ನು ಆಟದ ವಿಶ್ಲೇಷಣೆಯಲ್ಲಿ ನೋಡಬೇಕು.

ಸಿಂಗಲ್ಸ್, ಡಬಲ್ಸ್ ರನ್ನುಗಳನ್ನು ಪಡೆಯಲು ಹುಲ್ಲು ಅಡ್ಡಿ ಮಾಡುತ್ತಿತ್ತು ಎಂದು ಹುಲ್ಲಿನ ಮೇಲೆ ಆಪಾದನೆ ಮಾಡುವವರಿರುತ್ತಾರೆ. ಅಂತೂ ಹುಲ್ಲು ನಾವಂದು ಕೊಂಡಷ್ಟು ತೃಣಮಾತ್ರ ವಿಷಯ ವಲ್ಲ. ವಿಶೇಷವಾದುದೇ. ಡಿವಿಜಿಯವರದೊಂದು ಕಗ್ಗ ಪದ್ಯದಿಂದಲೇ ಮುಕ್ತಾಯ ಗೊಳಿಸೋಣ. ‘ಇಲ್ಲಿ ಚೆನ್ನಲ್ಲಿ ಚೆನ್ನೆಲ್ಲೊ ಚೆನ್ನೆನುತೆಣಿಸಿ| ಹುಲ್ಲು ಬಯಲೊಂದೆಡೆಯಿನೊಂದಕ್ಕೆ ನೆಗೆದು| ಮೆಲ್ಲದೆಯೆ ಧಾವಿಸುತ ದಣಿವ ಕರುವನು ಪೋಲ್ತೋ| ಡೆಲ್ಲಿಯೋ ಸುಖ ನಿನಗೆ- ಮಂಕುತಿಮ್ಮ...’ ವಿಶಾಲವಾದ ಹುಲ್ಲ ಬಯಲಲ್ಲಿ, ಆಕಳ ಕರು ಛಂಗನೆ ನೆಗೆಯುತ್ತ ಒಳ್ಳೆಯ ಹುಲ್ಲು ಇಲ್ಲಿದೆ, ಓ ಅಲ್ಲಿ ಚೆನ್ನಾಗಿದೆ,

ಅಥವಾ ಇನ್ನೂ ಎಲ್ಲೋ ಚೆನ್ನಾಗಿರಬಹುದು... ಎಂದು ಯೋಚಿಸಿ, ಎಲ್ಲಕಡೆ ಓಡಿ, ಕಡೆಗೆ ಎಲ್ಲಿಯೂ ಮೆಲ್ಲದೆಯೇ ಓಡಿಓಡಿ ದಣಿವಂತೆ ಇದೆ ನಿನ್ನ ಪರಿಸ್ಥಿತಿ. ಈ ವಸ್ತುವಿನಲ್ಲಿ ಸುಖವಿದೆ, ಆ ವಸ್ತುವಿನಲ್ಲಿ ಆನಂದವಿದೆ ಅಥವಾ ನೀನು ಹುಡುಕುವ ಸುಖ ಮತ್ತು ಆನಂದ ಬೇರೆ ಯಾವ ವಸ್ತುವಿನಲ್ಲಿದೆಯೋ ಎಂದು ವಸ್ತುವಿನಿಂದ ವಸ್ತುವಿಗೆ ವಿಷಯದಿಂದ ವಿಷಯಕ್ಕೆ ನೆಗೆನೆಗೆದು ದಣಿಯುತ್ತಿದ್ದೀ. ನಿನಗಾವುದರೊಳಗೆ ಸುಖ? ನಾವೆಲ್ಲ ಪ್ರಪಂಚವೆಂಬ ಹುಲ್ಲುಗಾವಲಿನಲ್ಲಿ ಅಲೆಯುತ್ತಿರುವ ಕರುಗಳೇ ಅಲ್ಲವೇ.

ಶ್ರೀವತ್ಸ ಜೋಶಿ

View all posts by this author