Harish Kera Column: ಟ್ರಂಪ್ ಮತ್ತು ಡೇರಿಯನ್ ಗ್ಯಾಪ್
ಡೇರಿಯನ್ ಗೊಂಡಾರಣ್ಯದಲ್ಲಿ ಕಳೆದುಹೋಗುವವರೇ ಬಹಳ. 2024ರಲ್ಲಿ ಸುಮಾರು ನಾಲ್ಕು ಲಕ್ಷ ಜನ ಈ ಭೂಭಾಗದ ಮೂಲಕ ಉತ್ತರ ಅಮೆರಿಕಕ್ಕೆ ದಾಟಿಕೊಂಡಿರಬಹುದು ಎಂಬ ಅಂದಾಜು. ಇದರಲ್ಲಿ ಸತ್ತವರು ಎಷ್ಟು ಎಂಬುದರ ಲೆಕ್ಕವೇ ಇಲ್ಲ. ಅನಾಥರಾಗಿ ಸಿಕ್ಕುವ ಮಕ್ಕಳ ಲೆಕ್ಕವೇ ನೂರಕ್ಕಿಂತ ಮೇಲೆ.
![Harish Kera Column: ಟ್ರಂಪ್ ಮತ್ತು ಡೇರಿಯನ್ ಗ್ಯಾಪ್](https://cdn-vishwavani-prod.hindverse.com/media/original_images/Harish_Kera_Column_130225.jpg)
ಸುದ್ದಿ ಸಂಪಾದಕ, ಅಂಕಣಕಾರ ಹರೀಶ್ ಕೇರ
![ಹರೀಶ್ ಕೇರ](https://cdn-vishwavani-prod.hindverse.com/media/images/Harish_Kerargylr_YyRvY8Q.2e16d0ba.fill-100x100.jpg)
ಕಾಡುದಾರಿ
ಅಮೆರಿಕದ ಹೊಸ ಐಲು ದೊರೆ ಡೊನಾಲ್ಡ್ ಟ್ರಂಪ್ ಮಹಾಶಯರ ಪೀಠಾರೋಹಣ ಸಂಭ್ರಮದ ನಿಮಿತ್ತ 104 ಅಕ್ರಮ ಭಾರತೀಯ ವಲಸಿಗರ ಕಾಲುಗಳಿಗೆ ಚೈನ್, ಕೈಗಳಿಗೆ ಬೇಡಿ ಹಾಕಿ, ಮಿಲಿಟರಿ ವಿಮಾನದಲ್ಲಿ ಸಕಲ ಗೌರವಾದರಗಳೊಂದಿಗೆ ವಾಪಸ್ ಕಳಿಸಲಾಗಿದೆ. ಅಕ್ರಮ ವಲಸಿಗರು ಯಾವು ದೇ ದೇಶಕ್ಕೂ ತಲೆನೋವೇ, ಆದ್ದರಿಂದ ಅವರನ್ನು ಟ್ರಂಪ್ ಕಳಿಸಿ ರೋದರಲ್ಲಿ ತಪ್ಪಿಲ್ಲ ಅನ್ನೋದು ಒಂದು ವಾದ. ಕಳಿಸೋದು ಕಳಿಸಲಿ, ಆದರೆ ಈ ಥರ ಅಮಾನವೀಯವಾಗಿ ಕಳಿಸ ಬಾರದು ಎಂಬು ದು ಇನ್ನೊಂದು ವಾದ. ವಿಯೆಟ್ನಾಂ, ಅಫಘಾನಿಸ್ತಾನ ಮುಂತಾದ ಯಾವ ಯಾವ ದೇಶಗಳಲ್ಲಿ ಅಮೆರಿಕದ ಮಿಲಿಟರಿ ಎಷ್ಟು ಕ್ರೂರ, ಪೈಶಾಚಿಕವಾಗಿ ವರ್ತಿಸಿದೆ ಎಂಬುದನ್ನು ಗಮ ನಿಸಿದರೆ ಇದೇನೂ ಹೊಸತಲ್ಲ.
ಸದ್ಯ ಬಂದಿರೋದು 104 ಮಂದಿ, ಇನ್ನಷ್ಟು ಬರೋರಿದ್ದಾರೆ. ಕಳೆದ 15 ವರ್ಷಗಳಲ್ಲಿ ಭಾರತಕ್ಕೆ 15000ಕ್ಕೂ ಹೆಚ್ಚಿನ ಅಕ್ರಮ ವಲಸಿಗರನ್ನು ಅಮೆರಿಕ ಮರಳಿ ಕಳಿಸಿದೆ ಎಂಬ ಲೆಕ್ಕವನ್ನು ವಿದೇ ಶಾಂಗ ಸಚಿವ ಜೈಶಂಕರ್ ಸಂಸತ್ತಿನಲ್ಲಿ ಪ್ರಾಮಾಣಿಕವಾಗಿ ಒಪ್ಪಿಸಿದ್ದಾರೆ.
ಇದನ್ನೂ ಓದಿ: Harish Kera Column: ಕೈಬೀಸಿ ಕರೆವ ಕೇಡಿನ ಕಗ್ಗತ್ತಲು
ಟ್ರಂಪ್ ಎಂಬ ಫಿನಾಮೆನಾ ಕಡೆಗೆ ಈಗ ಮೀಡಿಯಾ ಬೆಳಕು ತಿರುಗಿರುವುದರಿಂದ ಇದು ಸುದ್ದಿ ಯಾಗಿದೆ ಅಷ್ಟೇ. ಇನ್ನೊಂದು ಲೆಕ್ಕದ ಪ್ರಕಾರ, ಅಮೆರಿಕದಲ್ಲಿರುವ ಅಕ್ರಮ ವಲಸಿಗರಲ್ಲಿ ಭಾರತೀ ಯರ ಪಾಲು ಕೇವಲ 2 ಶೇಕಡ. 2022ರಲ್ಲಿ ಇಂಥವರ ಸಂಖ್ಯೆ 2.20 ಲಕ್ಷ ಇದ್ದಿರಬಹುದು ಎಂದು ಅಮೆರಿಕದ ಭದ್ರತಾ ಇಲಾಖೆ ಲೆಕ್ಕ ಕೊಟ್ಟಿತ್ತು.
ಅಮೆರಿಕದ ನಾನಾ ಕಡೆ ಹಂಚಿಹೋಗಿರುವ ಇವರಲ್ಲಿ ಪಂಜಾಬಿಗಳು ಮತ್ತು ಗುಜರಾತಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗೆ ಹೋಗುವ ವಲಸಿಗರಲ್ಲಿ ಅಮೆರಿಕ ಎಂಬುದೊಂದು ಹಿತವಾದ ಕನಸು. ಇಲ್ಲಿನ ಅಕ್ರಮ ವಲಸಿಗರಲ್ಲಿ ಮೆಕ್ಸಿಕೋದವರ ಪಾಲು ಅತ್ಯಧಿಕ. ನಂತರದ ಸ್ಥಾನದಲ್ಲಿ ಭಾರತ, ಚೀನಾ, ಫಿಲಿಪ್ಪೀನ್ಸ್, ದಕ್ಷಿಣ ಅಮೆರಿಕದ ಇತರ ದೇಶಗಳಿವೆ. ಅದೆಲ್ಲ ಸರಿ, ಅಷ್ಟೊಂದು ಬಿಗಿಯಾದ ಭದ್ರತೆ ಹೊಂದಿರುವ ಅಮೆರಿಕದ ಒಳಗೆ ಸರಿಯಾದ ದಾಖಲೆಗಳಿಲ್ಲದೆ ವಿಮಾನ ಯಾನದ ಮೂಲಕ ಹೋಗುವುದಕ್ಕಂತೂ ಸಾಧ್ಯವಿಲ್ಲ.
ಮತ್ತೆ ಹೇಗೆ ಹೋಗ್ತಾರೆ? ಕೆಲವು ಮಂದಿ ಕೆನಡಾದ ಗಡಿಗಳ ಮೂಲಕ ಹೋದರೆ, ಹೆಚ್ಚಿನ ಮಂದಿ ಮೆಕ್ಸಿಕೋದ ದೋಷಪೂರಿತ ಗಡಿಗಳ ಮೂಲಕ ಒಳಗೆ ನುಸುಳುತ್ತಾರೆ. ಮೆಕ್ಸಿಕೋಗೆ ಬರಬೇಕಿದ್ದರೆ ಕೂಡ ದಕ್ಷಿಣ ಆಮೆರಿಕದಿಂದ ಡೇರಿಯನ್ ಗ್ಯಾಪ್ ಎಂಬ ಮೃತ್ಯುಕೂಪವನ್ನು ದಾಟಿಕೊಂಡು ಬರಬೇಕು.
ಸದ್ಯಕ್ಕೆ ನಾವೀಗ ಅಂತಾರಾಷ್ಟ್ರೀಯ ವಲಸೆಯ ಗಂಭೀರ ಸಂಗತಿಗಳನ್ನು ಬಿಟ್ಟು, ಡೇರಿಯನ್ ಗ್ಯಾಪ್‌ನ ಕುರಿತು ತುಸು ನೋಡೋಣ. ಈ ಡೇರಿಯನ್ ಗ್ಯಾಪ್ ಇರುವ ಜಾಗವನ್ನು ಮ್ಯಾಪ್‌ನಲ್ಲಿ ತುಸು ಗಮನಿಸಿ. ದಕ್ಷಿಣ ಅಮೆರಿಕ ಹಾಗೂ ಉತ್ತರ ಅಮೆರಿಕಗಳನ್ನು ಸೇರಿಸುವ ಒಂದು ಸಣ್ಣ ಕುತ್ತಿಗೆ ಯಂಥ ಜಾಗವಿದು.
ಇದನ್ನೂ ಓದಿ: Roopa Gururaj Column: ದಾಸರ ಕೋಪಕ್ಕೆ ತಕ್ಕ ಶಾಸ್ತಿ ಮಾಡಿದ ವಿಠಲ
ಇದರ ಪೂರ್ವಕ್ಕೆ ಡೇರಿಯನ್ ಕೊಲ್ಲಿ (ಕೆರಿಬಿಯನ್ ಸಮುದ್ರ) ಹಾಗೂ ಪಶ್ಚಿಮಕ್ಕೆ ಉತ್ತರ ಪೆಸಿಫಿಕ್ ಸಮುದ್ರವಿದೆ. ದಕ್ಷಿಣದಲ್ಲಿ ಕೊಲಂಬಿಯಾಕ್ಕೂ ಉತ್ತರದಲ್ಲಿ ಪನಾಮಾಕ್ಕೂ ಇದರ ತುದಿಗಳು ಅಂಟಿಕೊಂಡಿವೆ. ಸುಮಾರು 90 ಕಿಲೋಮೀಟರ್ ಉದ್ದ, ಸರಾಸರಿ 60 ಕಿಲೋಮೀಟರ್ ಅಗಲ ಹೊಂದಿರುವ ಈ ಭೂಭಾಗದ ಕುಖ್ಯಾತಿ ಎಂದರೆ, ದಕ್ಷಿಣದಿಂದ ಉತ್ತರ ಅಮೆರಿಕಕ್ಕೆ ಇದರ ಮೂಲ ಕವೇ ಅಕ್ರಮ ವಲಸಿಗರು ನುಗ್ಗುತ್ತಾರೆ. ಆದರೆ ಈ ಭೂಭಾಗವೇನೂ ಹೂವಿನ ಹಾಸಿಗೆಯಲ್ಲ. ಇದರ ಒಳಹೊಕ್ಕವರೆಲ್ಲ ಇನ್ನೊಂದು ತುದಿಯಲ್ಲಿ ಹೊರಬರುತ್ತಾರೆ ಎಂಬ ಖಾತ್ರಿಯಿಲ್ಲ. ಈ ಗೊಂಡಾ ರಣ್ಯದಲ್ಲಿ ಕಳೆದುಹೋಗುವವರೇ ಬಹಳ.
2024ರಲ್ಲಿ ಸುಮಾರು ನಾಲ್ಕು ಲಕ್ಷ ಜನ ಈ ಭೂಭಾಗದ ಮೂಲಕ ಉತ್ತರ ಅಮೆರಿಕಕ್ಕೆ ದಾಟಿ ಕೊಂಡಿರಬಹುದು ಎಂಬ ಅಂದಾಜು. ಇದರಲ್ಲಿ ಸತ್ತವರು ಎಷ್ಟು ಎಂಬುದರ ಲೆಕ್ಕವೇ ಇಲ್ಲ. ಅನಾಥರಾಗಿ ಸಿಕ್ಕುವ ಮಕ್ಕಳ ಲೆಕ್ಕವೇ ನೂರಕ್ಕಿಂತ ಮೇಲೆ. ಅಮೆರಿಕದ ಉತ್ತರ ತುದಿಯ ಅಲಾಸ್ಕ ದಿಂದ ದಕ್ಷಿಣ ಅಮೆರಿಕದ ಅರ್ಜೆಂಟೀನಾದ ತುದಿಯವರೆಗೆ ಪ್ಯಾನ್ ಅಮೆರಿಕನ್ ಹೈವೇ ಎಂದು ಕರೆಯಲ್ಪಡುವ ಹೆದ್ದಾರಿಗಳ ಜಾಲವೊಂದು ಹಾದುಹೋಗುತ್ತದೆ. ಆದರೆ ಈ ಹೆzರಿ ಕೂಡ, ಡೇರಿಯನ್ ಗ್ಯಾಪ್‌ನ 106 ಕಿಲೋಮೀಟರ್‌ಗಳ ಉದ್ದವನ್ನು ಸ್ಪರ್ಶಿಸಲೂ ಹೆದರಿಕೊಂಡು ಕತ್ತರಿಸಿ ಹೋಗಿದೆ.
ಈ ಶಪಿತ ನೆಲದಲ್ಲಿ ರಸ್ತೆ ನಿರ್ಮಿಸುವ ಯಾವ ಪ್ರಯತ್ನವೂ ಸಫಲವಾಗಿಲ್ಲ. ವಾಸ್ತವಿಕ ಸ್ಥಿತಿಯಲ್ಲಿ ಈ ನೆಲದಲ್ಲಿ ರಸ್ತೆ ನಿರ್ಮಿಸುವುದು ಸಾಧ್ಯವೇ ಇಲ್ಲ. ಇಲ್ಲಿನ ಭೌಗೋಳಿಕ ಏರಿಳಿತ, ದಟ್ಟ ಕಾಡು, ಜವುಗು ನೆಲ, ನದಿಗಳು, ಕೊರಕಲುಗಳು ಹಾಗಿವೆ. ಇನ್ನು ಸ್ಥಳೀಯರ ವಿರೋಧ, ಪರಿಸರವಾದಿಗಳ ವಿರೋಧ, ಡ್ರಗ್ ಮಾಫಿಯಾದ ವಿರೋಧವೂ ಈ ಗ್ಯಾಪ್ ಅನ್ನು ಹಾಗೇ ಇರಿಸಿದೆ.
ಪ್ರತಿದಿನ ಸಾವಿರಾರು ಮಂದಿ, ಮಕ್ಕಳನ್ನೂ ಸೇರಿಸಿಕೊಂಡು, ತಮಗೂ ಕುಟುಂಬಕ್ಕೂ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳುವ ಆಸೆಯಿಂದ ಉತ್ತರದತ್ತ ದೀರ್ಘ ಪ್ರಯಾಣವನ್ನು ಕಾಲ್ನಡಿಗೆ ಯಲ್ಲಿಯೇ ಪ್ರಾರಂಭಿಸುತ್ತಾರೆ. ಕಾಡಿನೊಳಗೆ ಪ್ರವೇಶಿಸುವ ಅನೇಕರು ಅಲ್ಲಿ ಮಲೇರಿಯಾದಂಥ ರೋಗಗಳನ್ನು ಎದುರಿಸಬೇಕು; ಗ್ಯಾಪ್‌ನ ನಡುವೆ ಎಲ್ಲ ಕಡೆ ಸಿಗುವ ನೂರಾರು ನದಿಹೊಳೆಗಳಿಗೆ ಸೇತುವೆಗಳಿಲ್ಲ.
ಅವುಗಳನ್ನು ದಾಟುವಾಗ ಮುಳುಗಿ ಸಾಯುವ ಭಯ ಎದುರಿಸಬೇಕು. ಪರ್ವತಗಳನ್ನು ಹತ್ತಿಳಿಯ ಬೇಕು; ಕೊರಕಲಿಗೆ ಬಿದ್ದು ಜೀವ ಬಿಡಬಹುದು. ಪ್ರಾಣಿಗಳ ದಾಳಿಯಾಗಬಹುದು. ವಿಷಕಾರಿ ಹಾವು, ಜೇಡ ಕಚ್ಚಿ ಅಸುನೀಗಬಹುದು. ಹಸಿವಿನಿಂದ ಸಾಯಬಹುದು. ದರೋಡೆಕೋರರಂತೂ ಸಾಕಷ್ಟು ಇದ್ದಾರೆ.
ಹೆಣ್ಣುಮಕ್ಕಳಿಗೆ ಯಾವ ಸುರಕ್ಷತೆಯೂ ಇಲ್ಲ. ರೇಪ್ ಹಾಗೂ ಕೊಲೆಗಳಂತೂ ಅತ್ಯಂತ ಸಾಮಾನ್ಯ. ಇಲ್ಲಿ ನಡೆಯುವ ಅಪರಾಧಗಳು, ಸಾವುಗಳು ಎಲ್ಲೂ ದಾಖಲಾಗುವುದೇ ಇಲ್ಲ. ಲೆಕ್ಕಕ್ಕೆ ಈ ಭೂಭಾಗ ಅರ್ಧ ಪನಾಮಾಗೆ ಹಾಗೂ ಅರ್ಧ ಕೊಲಂಬಿಯಾಗೆ ಸೇರಿದೆಯಾದರೂ ಆ ಸರಕಾರಗಳಿಗೆ ಇಲ್ಲಿ ಯಾವ ಹಿಡಿತವೂ ಇಲ್ಲ.
ಕಾಡಿನೊಳಗೆ ಪ್ರವೇಶಿಸುವ ಅನೇಕರಿಗೆ ಒಳಗೆ ಏನಿದೆ ಎಂದು ತಿಳಿದಿರುವುದಿಲ್ಲ. ಸಾಕಷ್ಟು ಬಟ್ಟೆ, ಆಹಾರ ಮತ್ತಿತರ ಅಗತ್ಯ ಪ್ಯಾಕಿಂಗ್ ಇದ್ದರೆ ಕೆಸರು ನೆಲ, ತುಂಬಿ ಹರಿವ ನದಿಗಳು ಮತ್ತು ಪರ್ವತ ಗಳನ್ನು 15 ದಿನಗಳ ನಡಿಗೆಯಲ್ಲಿ ದಾಟಬಹುದು. ಆದರೆ ಕಾಡಿನ ಪ್ರತಿಕೂಲ ಸನ್ನಿವೇಶ, ಕ್ರಿಮಿನಲ್ ಗಳು, ಪ್ರಾಣಿಗಳು, ಆಕಸ್ಮಿಕಗಳು ಅದನ್ನು ಆಗಗೊಡುವುದಿಲ್ಲ. ಮಕ್ಕಳನ್ನೋ ಅಶಕ್ತರನ್ನೋ ಹೊತ್ತೊಯ್ಯುವವರಿಗೆ ಪ್ರಯಾಣ ಇನ್ನಷ್ಟು ಕಷ್ಟಕರ.
ಡೇರಿಯನ್ ದಾಟುವ ಸಮಯಾವಧಿಯೂ ಮುಖ್ಯ. ನೀವು ಕಾಡಿನಲ್ಲಿ ಹೆಚ್ಚು ಕಾಲ ಉಳಿದರೆ ಆಹಾರದ ಕೊರತೆ ಅಥವಾ ಕ್ರಿಮಿನಲ್ ಗಳ ದಾಳಿಯ ಅಪಾಯ ಹೆಚ್ಚು. ಡೇರಿಯನ್ ಮೂಲಕ ಹಾದುಬಂದವರು ದಾರಿಯುದ್ದಕ್ಕೂ ಶವಗಳು, ತಲೆಬುರುಡೆಗಳು, ಹಳೆಯ ತ್ಯಜಿಸಿದ ಡೇರೆಗಳು, ಮಕ್ಕಳ ಆಟಿಕೆಗಳನ್ನು ಕಂಡಿದ್ದಾರೆ.
ಇಲ್ಲಿ ಹೆಚ್ಚಾಗಿ ದಾಟುವವರು ಆರಂಭದಲ್ಲಿ ಕನಿಷ್ಠ ಟೆಂಟ್, ರೈನ್ ಬೂಟುಗಳು, ನೀರು ಮತ್ತು ಸ್ವಲ್ಪ ಆಹಾರದೊಂದಿಗೆ ಕಾಡಿನೊಳಗೆ ಪ್ರವೇಶಿಸುತ್ತಾರೆ. ಆದರ ಈ ಸಾಮಗ್ರಿಗಳು ಬಹಳ ಬೇಗ ಮುಗಿಯುತ್ತ ಬರುತ್ತವೆ. ಇಡೀ ಪ್ರಯಾಣಕ್ಕೆ ಸಾಕಷ್ಟು ನೀರು, ಆಹಾರ ಸಾಗಿಸಲು ಸಾಧ್ಯವಿಲ್ಲ. ಒಂದೆರಡು ದಿನಗಳ ಬಳಿಕ ನೀರು ಮುಗಿಯುತ್ತದೆ.
ನೀರು ಮುಗಿದಾಗ ಅಲ್ಲಿ ಹರಿಯುವ ಕೊಳಕು ನದಿ ನೀರನ್ನು ಬಳಸುತ್ತಾರೆ. ಇದರಿಂದ ಅನೇಕ ವಲಸಿಗರು ತೀವ್ರ ಅನಾರೋಗ್ಯ, ನಿರ್ಜಲೀಕರಣಕ್ಕೆ ಒಳಗಾಗುತ್ತಾರೆ. ಆಹಾರ ಮುಗಿಯುತ್ತದೆ. ಹಣ ವಿಲ್ಲದಿದ್ದರೆ ಮಾಫಿಯಾಗಳಿಂದ ಆಹಾರ ಖರೀದಿಸುವುದೂ ಕಷ್ಟ. ನದಿ ದಾಟುವಾಗಲೇ ಪ್ರವಾಹ ಉಕ್ಕಬಹುದು.
ಕೊಲಂಬಿಯಾದ ಡ್ರಗ್ ಮಾಫಿಯಾಗಳು ಈ ಮಾರ್ಗಗಳನ್ನು ನಿಯಂತ್ರಿಸುತ್ತವೆ. ಈ ಕಾಡಿನ ಮೂಲಕ ಹಾದುಹೋಗಲು ಪ್ರತಿ ವ್ಯಕ್ತಿಗೆ ಸುಮಾರು 400 ಡಾಲರ್‌ವರೆಗೆ ಶುಲ್ಕ ವಿಧಿಸುತ್ತವೆ. ಮಾಫಿ ಯಾ ಸದಸ್ಯರು ಆಹಾರ ಮತ್ತು ನೀರನ್ನೂ ಸುಲಿಗೆ ಬೆಲೆಯಲ್ಲಿ ಮಾರಾಟ ಮಾಡುತ್ತಾರೆ. ಒಂದು ಬಾಟಲ್ ನೀರಿಗೆ 5 ಡಾಲರ್‌ವರೆಗೂ ಕೊಡಬೇಕಾಗಬಹುದು. ಪ್ರಯಾಣದ ಕೊನೆಯವರೆಗೂ ಬದುಕುಳಿದವರು ಪನಾಮಾದ ಎರಡು ವಲಸೆ ಸ್ವಾಗತ ಕೇಂದ್ರಗಳಿಗೆ ಬಂದು ಸೇರುತ್ತಾರೆ.
ಇಲ್ಲಿ ಇನ್ನಷ್ಟು ಉತ್ತರಕ್ಕೆ ಹೋಗುವ ಮುನ್ನ ಕೆಲ ವಾರ ಕಾಯಬೇಕಾಗಬಹುದು. ಈ ಕೇಂದ್ರಗಳ ಸ್ಥಿತಿ ಅಧ್ವಾನ. ಇಲ್ಲಿಗೆ ಕಷ್ಟಗಳು ಮುಗಿಯುವುದಿಲ್ಲ. ಇಲ್ಲಿಂದ ಅಮೆರಿಕಕ್ಕೆ ತೆರಳಲು ವಲಸಿಗರು ಅರ್ಧ ಡಜನ್ ಗಡಿಗಳನ್ನು ದಾಟಬೇಕು. ಅ ಅವರನ್ನು ಬಂಧಿಸುವ, ಗಡೀಪಾರಾಗುವ ರಿಸ್ಕ್ ಇದೆ. ಮಧ್ಯ ಅಮೇರಿಕಾದಿಂದ ಸುಮಾರು 4000 ಕಿಲೋಮೀಟರ್ ಪ್ರಯಾಣದ ಬಳಿಕ ದಕ್ಷಿಣ ಅಮೆರಿಕದ ಗಡಿಯನ್ನು ತಲುಪಿದರೂ ಸಹ, ಅನೇಕರು ಪೊಲೀಸರಿಗೆ ಸಿಕ್ಕಿಬೀಳುತ್ತಾರೆ. ಅವರನ್ನು ಅವರವರ ದೇಶಗಳಿಗೆ ಹಿಂತಿರುಗಿಸಲಾಗುತ್ತದೆ ಅಥವಾ ಹೊರಹಾಕಲಾಗುತ್ತದೆ.
2023ರಲ್ಲಿ ಡೇರಿಯನ್ ಗ್ಯಾಪ್ ಮಾರ್ಗಗಳನ್ನು ಮುಚ್ಚಲು ಕೊಲಂಬಿಯಾ ಮತ್ತು ಪನಾಮ ದೊಂದಿಗೆ ಅಮೆರಿಕದ ಅಧಿಕಾರಿಗಳು ಒಪ್ಪಂದವನ್ನು ಮಾಡಿಕೊಂಡರು. ಮೆಕ್ಸಿಕೋದ ವಲಸೆ ನೀತಿಯನ್ನೂ ಬಿಗಿ ಮಾಡಲು ಅಮೆರಿಕದ ಸರಕಾರ ಒತ್ತಡ ಹೇರಿದರು. ಪರಿಣಾಮ ಮೆಕ್ಸಿಕೋದ ವಲಸೆ ನೀತಿ ಸ್ವಲ್ಪ ಬಿಗಿಯಾಯಿತು.
ಆದರೆ ಡೇರಿಯನ್ ಗ್ಯಾಪ್ ಮಾತ್ರ ಹಾಗೇ ಉಳಿಯಿತು. ಇಲ್ಲಿ ನಿಯೋಜಿಸಲಾದ ಪೊಲೀಸರು ಕೂಡ ಅಂತಾರಾಷ್ಟ್ರೀಯ ಡ್ರಗ್ ಮಾಫಿಯಾಗಳ ಕೈಗೊಂಬೆಗಳಾಗಿ ಹೋದರು. ಇದು ನಾರ್ಕೋಸ್ ಮೊದ ಲಾದ ವೆಬ್ ಸೀರೀಸ್ ನೋಡಿದವರಿಗೆ ಗೊತ್ತಿರುತ್ತೆ. ಹೀಗಾಗಿ ವಲಸಿಗರ ಸಂಖ್ಯೆಯೇನೂ ಕಡಿಮೆಯಾಗಲಿಲ್ಲ.
ಇಷ್ಟೆ ಕಷ್ಟಪಟ್ಟು ಇವರಿಗೆ ಅಮೆರಿಕಕ್ಕೆ ಯಾಕೆ ಹೋಗಬೇಕೆನಿಸುತ್ತದೆ? ದಕ್ಷಿಣ ಅಮೆರಿಕದ ಹಾಗೂ ಆಫ್ರಿಕನ್ ದೇಶಗಳ ಬಡತನ, ಅನಾರೋಗ್ಯ, ಅಶಿಕ್ಷಣ ಹೀಗೆ ಮಾಡಿಸುತ್ತದೆ. ಆದರೆ ಭಾರತೀಯರೂ ಯಾಕೆ ‘ಡ್ರೀಮ್ ಅಮೆರಿಕ’ಕ್ಕಾಗಿ ಈ ಕಷ್ಟ ಸಹಿಸಲು ಮುಂದಾಗುತ್ತಾರೆ. ಮುಂದೆ ಸಿಗಬಹುದಾದ ಸುಖವಾದ ಬಾಳಿನ ನಿರೀಕ್ಷೆ ಎಲ್ಲದಕ್ಕಿಂತ ಪ್ರಬಲವಾದುದು. ಡೇರಿಯನ್ ಗ್ಯಾಪ್ ಅನ್ನು ಮೃತ್ಯು ಕೂಪ ಮಾಡಿರುವುದು ಅಲ್ಲಿನ ಭೌಗೋಲಿಕತೆಯಲ್ಲ.
ಮನುಷ್ಯ ಬಡ ದೇಶಗಳಲ್ಲಿ ಸೃಷ್ಟಿಸಿದ ವಿಕೃತಿ. ಯುವಾಲ್ ನೋವಾ ಹರಾರಿ ಹೇಳಿದ ಹಾಗೆ- ಸತ್ತ ಮೇಲೆ ಸ್ವರ್ಗದಲ್ಲಿ ನಿಂಗೆ ಸಾವಿರಾರು ಬಾಳೆಹಣ್ಣು ಸಿಗುತ್ತೆ ಅಂತ ಹೇಳಿ ಒಂದು ಮಂಗವನ್ನು ಅದರ ಕೈಯಲ್ಲಿರುವ ಬಾಳೆಹಣ್ಣು ಎಸೆಯುವಂತೆ ಮಾಡಲು ಸಾಧ್ಯವಿಲ್ಲ. ಆದರೆ ಮನುಷ್ಯ (ಸೇಪಿಯನ್ಸ್ ) ಮಾತ್ರ ಅಂಥ ಕಾಲ್ಪನಿಕ ಕತೆಗಳಲ್ಲಿ ನಂಬಿಕೆಯಿಡುತ್ತಾನೆ.