Roopa Gururaj Column: ದಾಸರ ಕೋಪಕ್ಕೆ ತಕ್ಕ ಶಾಸ್ತಿ ಮಾಡಿದ ವಿಠಲ
ಕೆಲವೊಮ್ಮೆ ಅತಿಯಾದ ಭಕ್ತಿಯ ಪ್ರದರ್ಶನ, ಮೌಢ್ಯ ಆಚರಣೆಗಳು ನಮ್ಮನ್ನು ಭಗವಂತನಿಂದ ದೂರ ಕರೆದು ಕೊಂಡು ಹೋಗಿಬಿಡುತ್ತದೆ. ಭಗವಂತನಿಗೆ ಬೇಕಾಗಿರುವುದು ನಮ್ಮ ನಿಷ್ಕಲ್ಮಶ ಸಮರ್ಪಣಾ ಮನೋಭಾವ ಒಂದೇ. ಅದರಿಂದಾಚೆಗೆ ಯಾವುದೇ ರೀತಿ ನೀತಿಗಳನ್ನು, ಕಟ್ಟಳೆ ಗಳನ್ನು ಅವನು ಎಂದೂ ವಿಧಿಸಿಲ್ಲ
![ದಾಸರ ಕೋಪಕ್ಕೆ ತಕ್ಕ ಶಾಸ್ತಿ ಮಾಡಿದ ವಿಠಲ](https://cdn-vishwavani-prod.hindverse.com/media/original_images/purandara-dasa_ok.jpg)
![ರೂಪಾ ಗುರುರಾಜ್](https://cdn-vishwavani-prod.hindverse.com/media/images/Roopa-G.2e16d0ba.fill-100x100.jpg)
ಒಂದೊಳ್ಳೆ ಮಾತು
ಒಮ್ಮೆ ಪುರಂದರ ದಾಸರು ಹೊರಗಿನಿಂದ ಬಂದು ಕಾಲು ತೊಳೆಯಲು ನೀರು ಕೇಳಿದಾಗ ಅವರ ಮಗನು ವಿಠಲನ ಪೂಜೆಗೆ ಇಟ್ಟಿದ್ದ ಚಿನ್ನದ ಗಿಂಡಿಯಲ್ಲಿ ನೀರು ತಂದುಕೊಡುವನು. ಅದನ್ನು ಕಂಡು ಕೋಪಗೊಂಡ ದಾಸರು, “ದೇವರ ಗಿಂಡಿಯಲ್ಲಿ ನೀರು ತಂದೆಯಾ?" ಎಂದು ಆ ಬಾಲಕನ ತಲೆಗೆ ಜೋರಾಗಿ ಮಟ್ಟಿದರಂತೆ, ಆಘಾತಗೊಂಡ ಬಾಲಕ ಅಲ್ಲಿಂದ ಅಳುತ್ತಾ ಹೋದ. ಇದಾಗಿ ಕೆಲವು ದಿನಗಳ ನಂತರ ಗುಡಿಯಲ್ಲಿ ವಿಠಲನ ರತ್ನಕಂಕಣ ಕಾಣೆಯಾಗಿತ್ತು. ಎಲ್ಲರೂ ಹುಡುಕು ತ್ತಿರಲು, ಗುಡಿಗೆ ವಿಠಲನ ದರ್ಶನಕ್ಕೆ ಬಂದ ವೇಶ್ಯೆಯ ಕೈಯಲ್ಲಿ ಕಂಕಣ ಕಂಡಿತು. ಅವಳನ್ನು ಹಿಡಿದು ಪ್ರಶ್ನೆ ಮಾಡಲು, “ನನಗೆ ಎಲ್ಲಿಂದ ಬರಬೇಕು ಸ್ವಾಮಿ ಈ ರತ್ನಕಂಕಣ? ಪುರಂದರ ದಾಸರೇ ಕೊಟ್ಟದ್ದು" ಎಂದು ಹೇಳಿದಳು.
ಇದನ್ನೂ ಓದಿ: Roopa Gururaj Column: ನಿನಗೆ ನೀ ಬೆಳಕಾಗು
ಅದನ್ನು ಕೇಳಿ ದಾಸರನ್ನು ಕಳ್ಳತನದ ಆರೋಪದ ಮೇಲೆ ಕಂಬಕ್ಕೆ ಕಟ್ಟಿ ಛಡಿಏಟು ಶಿಕ್ಷೆ ಕೊಡಿಸಿ ದರು. ಆಗ ದಾಸರು, ‘ಯಾವ ಪಾಪಕ್ಕೆ ಈ ಶಿಕ್ಷೆ?’ ಎಂದು ಕಣ್ಣು ಮುಚ್ಚಿ ವಿಠಲನ ಧ್ಯಾನಿಸುವರು. ಆಗ ವಿಠಲನು, “ನಿನ್ನ ಕಾಲಿಗೆ ನನ್ನ ಚಿನ್ನದ ಗಿಂಡಿಯಲ್ಲಿ ನೀರು ತಂದುಕೊಟ್ಟರೆ ನನಗೇ ತಲೆಗೆ ಮಟ್ಟಿದೆಯಲ್ಲ? ಆ ಏಟಿಗೆ ಈ ಸೇಡು.
ನಾನೇ ವೇಶ್ಯೆಯ ಮನೆಗೆ ಹೋಗಿ ನಿನ್ನ ಸೋಗಿನಲ್ಲಿ ನನ್ನ ರತ್ನಕಂಕಣ ಕೊಟ್ಟು ಬಂದೆ" ಎಂದ. ಆಗ ದಾಸರು ಅಪರಿಮಿತ ಭಕ್ತಿ-ಪ್ರೀತಿಯಿಂದ ಈ ಕೀರ್ತನೆಯನ್ನು ಪಂಡರಿನಾಥನಿಗೆ ಹಾಡಿ ಸಮರ್ಪಿಸಿ ದರು: “ಮುಯ್ಯಕ್ಕೆ ಮುಯ್ಯಿ ತೀರಿತು, ಜಗದಯ್ಯ ವಿಜಯ್ಯ ಸಾಹಯ್ಯ ಪಂಢರಿರಾಯ || ಸಣ್ಣವ ನೆಂದು ನಾ ನೀರು ತಾರೆಂದರೆ, ಬೆಣ್ಣೆಕಳ್ಳ ಕೃಷ್ಣ ಮರವೆ ಮಾಡಿ, ಚಿನ್ನದ ಗಿಂಡಿಲಿ ನೀರು ತಂದಿ ಟ್ಟರೆ, ಕಣ್ಣು ಕಾಣದೆ ನಾ ಠೊಣೆದೆ ಪಂಢರಿರಾಯ || ಎನ್ನ ಪೆಸರು ಮಾಡಿ ಸೂಳೆಗೆ ಕಂಕಣ ವನ್ನು ನೀನಿತ್ತೆ ನಿಜರೂಪದಿ, ಎನ್ನ ಪೀಡಿಸಿ ಪರಮ ಬಂಡನ ಮಾಡಿ, ನಿನ್ನ ಮುಯ್ಯಕ್ಕೆ ಮುಯ್ಯಿ ತೀರಿಸಿ ಕೊಂಡ್ಯಯ್ಯ || ಭಕ್ತವತ್ಸಲನೆಂಬ ಬಿರುದು ಬೇಕಾದರೆ ಭಕ್ತರಾಧೀನನಾಗಿರ ಬೇಡವೆ? ಯುಕ್ತಿ ಯಲಿ ನಿನ್ನಂಥ ದೇವರ ನಾ ಕಾಣೆ, ಮುಕ್ತೀಶ ಪುರಂದರವಿಠಲ ಪಂಢರಿರಾಯ ||"
ಇದರಿಂದ ಪ್ರೀತನಾದ ವಿಠಲ ಅ ಇದ್ದ ಭಕ್ತನೊಬ್ಬನ ಮೂಲಕ ಬಂದು ದಾಸರ ತಪ್ಪೇನೂ ಇಲ್ಲ ವೆಂದು ಹೇಳಿ, ತಾನೇ ಅವರ ಕಳಂಕ ಅಳಿಸಿದನಂತೆ. ತನ್ನ ಭಕ್ತರ ಸಹಾಯಕ್ಕೆ ತಾನು ಇದ್ದೇನೆ, ಅವರ ಹಿಂದೆ ಮುಂದೆ ಬೆಂಬಿಡದೆ ಕಾಯುತ್ತೇನೆ ಎಂದು ರಂಗನೇ ನೀಡಿದ ಅಭಯ ಇದು. ಕಾಯು ವವನೂ ನಾನೇ, ಕಳೆವವನೂ ನಾನೇ ಎಂದು ಬ್ರಹ್ಮಾಂಡದೊಡೆಯ ಮುಕ್ತೀಶ ಹೀಗೆ ತೋರಿದ ಲೀಲೆಯಿದು.
ಕೆಲವೊಮ್ಮೆ ಅತಿಯಾದ ಭಕ್ತಿಯ ಪ್ರದರ್ಶನ, ಮೌಢ್ಯ ಆಚರಣೆಗಳು ನಮ್ಮನ್ನು ಭಗವಂತನಿಂದ ದೂರ ಕರೆದು ಕೊಂಡು ಹೋಗಿಬಿಡುತ್ತದೆ. ಭಗವಂತನಿಗೆ ಬೇಕಾಗಿರುವುದು ನಮ್ಮ ನಿಷ್ಕಲ್ಮಶ ಸಮರ್ಪಣಾ ಮನೋಭಾವ ಒಂದೇ. ಅದರಿಂದಾಚೆಗೆ ಯಾವುದೇ ರೀತಿ ನೀತಿಗಳನ್ನು, ಕಟ್ಟಳೆ ಗಳನ್ನು ಅವನು ಎಂದೂ ವಿಧಿಸಿಲ್ಲ.
ನಾವು ಮಾಡುವ ಪೂಜೆ, ತೋರುವ ಭಕ್ತಿ ಎಲ್ಲವೂ ಮನಸುಗಳನ್ನು ಅರಳಿ ವ ರೀತಿಯಲ್ಲಿ ಇರ ಬೇಕು. ಮತ್ತೊಬ್ಬರ ಆತ್ಮವಿಶ್ವಾಸವನ್ನ, ಆತ್ಮಸ್ಥೈರ್ಯವನ್ನು ಕುಗ್ಗಿಸಬಾರದು. ಭಕ್ತಿಯ ಹೆಸರಿನಲ್ಲಿ ಅನಗತ್ಯ ಆಚರಣೆ ಮಾಡಿ, ಮೈಲಿಗೆ ಎಂದು ಹಾರಾಡುತ್ತಾ ಅದರ ಅಬ್ಬರದಲ್ಲಿ ಬೇಕಾದ ನಿಜವಾದ ಭಕ್ತಿಯನ್ನೇ ಕಡೆಗಣಿಸಿಬಿಟ್ಟರೆ ಅಲ್ಲಿ ಭಗವಂತ ಹೇಗಿರಲು ಸಾಧ್ಯ? ಆದ್ದರಿಂದಲೇ ನಮ್ಮ ಪೂಜೆ ಗಳಲ್ಲಿ ಆಡಂಬರದ ಬದಲು ಭಕ್ತಿಯಿರಲಿ, ಸಮರ್ಪಣಾ ಭಾವವಿರಲಿ.
100 ರೀತಿಯ ಹಣ್ಣು ಹೂವುಗಳ ಆಡಂಬರದ ಪೂಜೆಗಳಿಗಿಂತ ಇಷ್ಟದೈವಕ್ಕೆ ಸಮರ್ಪಿಸುವ ಒಂದು ಪ್ರೀತಿಯ ಕುಸುಮವೂ ಅವನಿಗೆ ಅತ್ಯಂತ ಪ್ರಿಯವಾಗುತ್ತದೆ. ಭಗವಂತ ಎಂದಿಗೂ ಭಕ್ತರಾಧೀನ, ಅವನನ್ನು ಪ್ರೀತಿಯಿಂದ ನಿಜವಾದ ಭಕ್ತಿಯಿಂದ ಒಲಿಸಿಕೊಳ್ಳುವ ಪ್ರಯತ್ನ ನಮ್ಮದಾಗಿರಬೇಕಷ್ಟೇ.