ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Thimmanna Bhagawat Column: ಟ್ರಂಪ್‌ ಅತಿರೇಕ ಮತ್ತು ಕೌಟಿಲ್ಯನ ಅರ್ಥಶಾಸ್ತ್ರದ ವಿವೇಕ

ವಿದೇಶಾಂಗ ನೀತಿಯ ಕುರಿತು ಅರ್ಥಶಾಸ್ತ್ರದಲ್ಲಿರುವ ನೀತಿ ನಿಯಮಗಳು ಇಂದಿಗೂ ಪ್ರಸ್ತುತ ಮತ್ತು ಈಗಿನ ನೀತಿ ನಿರೂಪಕರಿಗೂ ಮಾದರಿಯಾಗಿವೆ. ‘ಸಂಧಿವಿಗ್ರಹಾಸನಯಾನ ಸಂಶ್ರಯ ದ್ವೈಧೀ ಭಾವಾ ಷ್ಷಾಡ್ಗುಣ್ಯಂ|’ (7.1.6-7.1.19). ವಿಷ್ಣುಗುಪ್ತನು ನಿರೂಪಿಸಿದ ಸಂಧಿ, ವಿಗ್ರಹ, ಆಸನ, ಯಾನ, ಸಂಶ್ರಯ ಮತ್ತು ದ್ವೈಧಿ ಭಾವ ಎಂಬ ಷಡ್ಗುಣಗಳ ವಿದೇಶೀ ನೀತಿ ಈಗ ಕೂಡಾ ಪ್ರಚಲಿತ ನೀತಿಯಾಗಿದೆ.

ಕಾನೂನ್‌ ಸೆನ್ಸ್‌

ತಿಮ್ಮಣ್ಣ ಭಾಗವತ್

‘ಅಕಾರ್ಯಾಣಾಂ ಚ ಕರಣೈಃ ಕಾರ್ಯಾಣಾಂ ಚ ಪ್ರಣಾಶನೈಃ | ಅಪ್ರದಾನೈಶ್ಚ ದೇಯಾನಾಮದೇಯಾನಾಂ ಚ ಸಾಧನೈಃ ||ಅವಕ್ಷೇಪೇಣ ಹಿ ಸತಾಮಸತಾಂ ಪ್ರಗ್ರಹೇಣ ಚ | ಅಭೂತಾನಾಂ ಚ ಹಿಂಸಾನಾಮಧರ್ಮ್ಯಾಣಂ ಪ್ರವರ್ತನೈಃ || ‘ಮಾಡಬಾರದ ಕಾರ್ಯಗಳನ್ನು ಮಾಡುವದು ಮಾಡಬೇಕಾದ್ದನ್ನು ಮಾಡದಿರುವದು, ಕೊಡಬೇಕಾದ್ದನ್ನು ಕೊಡದಿರುವದು ಮತ್ತು ಯಾವುದನ್ನು ನ್ಯಾಯವಾಗಿ ಪಡೆಯಬಾರದೋ ಅದನ್ನು ವಸೂಲಿ ಮಾಡುವದು.

ಸಜ್ಜನರನ್ನು ಅವಮಾನಿಸುವದು, ದುರ್ಜನರನ್ನು ಸತ್ಕರಿಸುವದು, ಮುಗ್ಧರನ್ನು ಹಿಂಸೆಗೆ ಒಳಪಡಿಸುವದು ಮುಂತಾದವುಗಳ ಮೂಲಕ ಅಧರ್ಮವನ್ನು ಆಚರಿಸುವದು.’ ಇವೆಲ್ಲ ರಾಜನು ಪ್ರಜೆಗಳ ಪ್ರೀತ್ಯಾದರಗಳನ್ನು ಕಳೆದುಕೊಳ್ಳಲು ಕಾರಣ ಎಂದು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಹೇಳಲಾಗಿದೆ.

ಡೊನಾಲ್ಡ್ ಟ್ರಂಪರ ರಿಪಬ್ಲಿಕನ್ ಪಕ್ಷ ಅನುಭವಿಸಿದ ಸೋಲನ್ನು ನೋಡಿದರೆ ಈ ಸೂತ್ರಗಳನ್ನು ಅವರ ಸಲುವಾಗಿಯೇ ಬರೆದದ್ದಿರಬೇಕು ಎನಿಸುತ್ತದೆ. ಅರ್ಥಶಾಸ್ತ್ರ ಕೇವಲ ಆರ್ಥಿಕತೆ ಅಥವಾ ಇಕಾನಮಿಕ್ಸ್‌ಗೆ ಸೀಮಿತವಾಗಿರಲಿಲ್ಲ. 15 ಅಧೀಕರಣ (ಪುಸ್ತಕ)ಗಳಲ್ಲಿ ಆಡಳಿತ, ರಾಜನೀತಿ, ರಾಷ್ಟ್ರವ್ಯವಸ್ಥೆ, ಆರ್ಥಿಕತೆ ಮತ್ತು ಸಾರ್ವಜನಿಕ ಹಣಕಾಸು (ಕರಾಕರಣೆ), ದಂಡ, ಸಾರ್ವಜನಿಕ ಸುರಕ್ಷತೆ ಮತ್ತು ನ್ಯಾಯವ್ಯವಸ್ಥೆ, ವಿದೇಶಾಂಗ ನೀತಿ, ಸೈನ್ಯ ಮತ್ತು ಯುದ್ಧಗಳು, ಗೂಢಚರ್ಯೆ ಮುಂತಾದ ಅನೇಕ ವಿಷಯಗಳನ್ನೊಳ ಗೊಂಡು ಪ್ರಾಚೀನ ಭಾರತದ ರಾಜರಿಗೆ ಮತ್ತು ಆಡಳಿತಗಾರರಿಗೆ ಸಮಗ್ರ ಕೈಪಿಡಿಯಾಗಿತ್ತು.

ಇದನ್ನೂ ಓದಿ: Thimmanna Bhagawat Column: ಯುಜಿಸಿ ಮಾರ್ಗಸೂಚಿ: ಮತದ ಭೂತದ ಜಾಲ

ವಿದೇಶಾಂಗ ನೀತಿಯ ಕುರಿತು ಅರ್ಥಶಾಸ್ತ್ರದಲ್ಲಿರುವ ನೀತಿ ನಿಯಮಗಳು ಇಂದಿಗೂ ಪ್ರಸ್ತುತ ಮತ್ತು ಈಗಿನ ನೀತಿ ನಿರೂಪಕರಿಗೂ ಮಾದರಿಯಾಗಿವೆ. ‘ಸಂಧಿವಿಗ್ರಹಾಸನಯಾನ ಸಂಶ್ರಯ ದ್ವೈಧೀ ಭಾವಾ ಷ್ಷಾಡ್ಗುಣ್ಯಂ|’ (7.1.6-7.1.19). ವಿಷ್ಣುಗುಪ್ತನು ನಿರೂಪಿಸಿದ ಸಂಧಿ, ವಿಗ್ರಹ, ಆಸನ, ಯಾನ, ಸಂಶ್ರಯ ಮತ್ತು ದ್ವೈಧಿ ಭಾವ ಎಂಬ ಷಡ್ಗುಣಗಳ ವಿದೇಶೀ ನೀತಿ ಈಗ ಕೂಡಾ ಪ್ರಚಲಿತ ನೀತಿ ಯಾಗಿದೆ.

‘ಪರಸ್ಮಾದ್ಧೀಯಮಾನಃ ಸಂಧದೀತ|| ಅಭ್ಯುಚ್ಛೀಯಮಾನೋ ವಿಗ್ರಹ್ಣೀಯಾತ್|| ನ ಮಾಂ ಪರೋ ನಾಹಂ ಪರಮುಪಹಂತುಂ ಶಕ್ತಂ ಇತ್ಯಾಸೀತ|| ಗುಣಾತಿಶಯಯುಕ್ತೋ ಯಾಯಾತ್|| ಶಕ್ತಿಹೀನಸ್ಸಂಶ್ರಯೇತ್|| ಸಹಾಯಸಾಧ್ಯಕಾರ್ಯೇ ದ್ವೈಧೀಭಾವಂ ಗಚ್ಛೇತ್||’ ಸಂಕ್ಷಿಪ್ತವಾದ ಈ ಸೂತ್ರದ ಜೊತೆಗೆ ಷಡ್ಗುಣಗಳ ಪೈಕಿ ಪ್ರತಿಯೊಂದು ವಿಷಯದ ಕುರಿತು ಪ್ರತ್ಯೇಕ ಸೂತ್ರಗಳಿವೆ. ವಿವರಣೆಗಳಿವೆ. ಪ್ರತಿಯೊಂದಕ್ಕೂ ಪ್ರತ್ಯೇಕ ಪ್ರಕರಣ ಅಂದರೆ ಅಧ್ಯಾಯಗಳನ್ನೇ ಒದಗಿಸಲಾಗಿದೆ.

ಕೆಲವು ಸೂತ್ರಗಳ ಸಾರಾಂಶವನ್ನು ಇಲ್ಲಿ ಕೊಡಲು ಪ್ರಯತ್ನಿಸಲಾಗಿದೆ. ಸಂಧಿ: ತನಗಿಂತ ಶಕ್ತಿಶಾಲಿಯೊಡನೆ ಸಂಧಿ ಮಾಡಿಕೊಂಡು ಕಾಲಾವಕಾಶ ಪಡೆಯಬೇಕು. ಹಾಗೆ ಪಡೆದ ಕಾಲಾವಕಾಶದಲ್ಲಿ ತನ್ನ ಸಂಪತ್ತು, ಸೈನ್ಯ ಮತ್ತು ಸೇನಾ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಳ್ಳ ಬೇಕು. ಯುದ್ಧದಲ್ಲಿ ಜಯವಾದರೆ ಸಿಗುವ ಲಾಭಕ್ಕಿಂತ ಸೈನ್ಯ ಮತ್ತು ಸಂಪತ್ತಿನ ಹಾನಿ ಅಧಿಕವಾಗುವ ಸಾಧ್ಯತೆಯಿರುವಾಗ ಸಂಽಯನ್ನೇ ಆಯ್ಕೆಮಾಡಿಕೊಳ್ಳಬೇಕು.

62

ಇಬ್ಬರು ರಾಜರು ಪರಸ್ಪರ ವೈರಿಗಳಾಗಿದ್ದರೂ ಸಮಾನ ಬಲರಾಗಿದ್ದು ಸಮಾನವಾದ ಸಂಪತ್ತನ್ನು ಗಳಿಸುವ ಅವಕಾಶಗಳಿದ್ದಾಗ ಪರಸ್ಪರರಲ್ಲಿ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕು. ದುರ್ಬಲರಿಗೆ ಹಾನಿಯಾಗಬಹುದಾದ ಅಸಮಾನ ಸಂಧಿಯನ್ನು ದೇಶದ ಹಿತದೃಷ್ಟಿಯಿಂದ ಅನಿವಾರ್ಯ ವಾದರೆ ಮಾತ್ರ ಮಾಡಿಕೊಳ್ಳಬೇಕು. ಸಂಧಿ ಅಥವಾ ಒಪ್ಪಂದಗಳ ಕುರಿತು ಅರ್ಥಶಾಸ್ತ್ರ ದೀರ್ಘವಾಗಿ ವಿವರಿಸುತ್ತದೆ. 7ನೇ ಅಧೀಕರಣದ 6, 7, 8, 11, 17 ಮುಂತಾದ ಪ್ರಕರಣಗಳು ಸಂಧಿಗಳ ವಿವಿಧ ಪ್ರಕಾರಗಳನ್ನು ವಿವರಿಸುತ್ತದೆ.

ಕಾಲ, ಸ್ಥಳ, ಶರತ್ತುಗಳು, ಸಂಧಿ ಮುರಿಯದಂತೆ ತೆಗೆದುಕೊಳ್ಳಬೇಕಾದ ಕ್ರಮಗಳು, ಸಂಧಿಯ ಶರತ್ತು ಗಳನ್ನು ಮುರಿದರೆ ನೀಡಬೇಕಾದ ಶುಲ್ಕ/ದಂಡ ಮುಂತಾದ ಅನೇಕ ವಿಷಯಗಳನ್ನು ವಿವರಿಸ ಲಾಗಿದೆ. ಟ್ರಂಪರ ವಿದೇಶೀ ನೀತಿಯಲ್ಲಿ ಸಂಧಿ ಅಥವಾ ಟ್ರೀಟಿಗಳನ್ನು ಮುರಿಯುವ ಮೂಲಕ ಅವುಗಳು ವ್ಯರ್ಥವೆನಿಸಿದವು. ಪಶ್ಚಿಮ ಏಶ್ಯಾ ಯುದ್ಧವಿರಾಮದ ಒಪ್ಪಂದ ಜಗತ್ತಿನೆದುರು ಹಾಸ್ಯಾಸ್ಪದವಾಯಿತು.

ವಿಗ್ರಹ: ತನ್ನ ನೆರೆಯ ರಾಷ್ಟ್ರವನ್ನು ಶತ್ರು ರಾಷ್ಟ್ರವೆಂದೇ ಪರಿಗಣಿಸಬೇಕು ಮತ್ತು ಆ ರಾಜನನ್ನು ಸೋಲಿಸಿ ಆತನ ರಾಜ್ಯವನ್ನು ವಶಪಡಿಸಿಕೊಳ್ಳುವದು ರಾಜನ ಗುರಿಯಾಗಿರಬೇಕು ಎಂದು ಅರ್ಥ ಶಾಸ್ತ್ರ ಹೇಳುತ್ತದೆ. ಹಾಗೆ ಮಾಡುತ್ತ ಕ್ರಮೇಣ ಸಾಮ್ರಾಜ್ಯ ವಿಸ್ತಾರವನ್ನು ಸಾಧಿಸಬೇಕು. ಸಾಕಷ್ಟು ಬಲ ಮತ್ತು ಸಂಪನ್ಮೂಲ ವಿರುವ ರಾಜನು ಕಡಿಮೆ ಬಲವಿರುವ ರಾಜನ ಮೇಲೆ ಯುದ್ಧ ಸಾರಿ ಅವನ ರಾಜ್ಯವನ್ನು ವಶಪಡಿಸಿಕೊಳ್ಳಬೇಕು.

ವಿಗ್ರಹವೆಂದರೆ ಸೇನಾ ಕಾರ್ಯಾಚರಣೆ ಮಾತ್ರವಲ್ಲ. ಅದು ರಹಸ್ಯ ಕಾರ್ಯಾಚರಣೆಯ ಮೂಲಕ ಕೂಡಾ ಆಗಬಹುದು. ನಂದರನ್ನು ಸೋಲಿಸುವಾಗ ಸ್ವತಃ ಚಾಣಕ್ಯನೇ ಭಿಕ್ಷುಕನಾಗಿ ಮಗಧದಲ್ಲಿ ಒಡಾಡಿಕೊಂಡು ರಹಸ್ಯ ವಿವರಗಳನ್ನು ಸಂಗ್ರಹಿಸಿದ್ದನಂತೆ. ಅರ್ಥಶಾಸ್ತ್ರದಲ್ಲಿ ರಹಸ್ಯ ಕಾರ್ಯಾ ಚರಣೆ ಮತ್ತು ಬೇಹುಗಾರರ ಪಾತ್ರವನ್ನು ವಿಸ್ತಾರವಾಗಿ ವಿವರಿಸಲಾಗಿದೆ.

ಶತ್ರು ರಾಷ್ಟ್ರದ ಮಂತ್ರಿಗಳು, ಸೇನಾ ಮುಖ್ಯಸ್ಥರು ಅಥವಾ ಉನ್ನತ ಅಧಿಕಾರಿಗಳ ಅತಿಯಾಸೆ, ದೌರ್ಬಲ್ಯ ಗಳನ್ನು ಕಂಡುಹಿಡಿದು ಅವರನ್ನು ಈಗಿನ ಭಾಷೆಯಲ್ಲಿ ಹೇಳುವದಾದರೆ ಹನಿ ಟ್ರ್ಯಾಪ್ ಅಥವಾ ಲಂಚದ ಮೂಲಕ ಬಲೆಗೆ ಬೀಳಿಸಿ ಅವರನ್ನು ಶತ್ರು ರಾಜನನ್ನು ಕೊಲ್ಲಲು ಬಳಸುವದು. ಸ್ವತಃ ಶತ್ರು ರಾಜನನ್ನೇ ಹೆಣ್ಣುಗಳ ಮೂಲಕ, ವಿಷಕನ್ಯೆಯರ ಮೂಲಕ ಕೊಲ್ಲುವಂಥ ವಿಧಾನಗಳನ್ನು ಕೂಡಾ ವಿವರಿಸಲಾಗಿದೆ. ಶತ್ರು ರಾಷ್ಟ್ರದ ರಾಜಕುಮಾರರ ಪೈಕಿ ಒಬ್ಬನನ್ನು ರಾಜನನ್ನಾಗಿ ಮಾಡಿದ್ದರೆ ಅಸಮಾಧಾನವಿರುವ ಇನ್ನೊಬ್ಬನ್ನು ಎತ್ತಿಕಟ್ಟಿ ದಂಗೆ, ದೊಂಬಿಗಳ ಮೂಲಕ ಆಡಳಿತ ಬದಲಾವಣೆ (Regime Change) ಸಾಧಿಸುವದು ಕೂಡಾ ಕೌಟಿಲ್ಯನ ಕೂಟ ನೀತಿಯ ಭಾಗವೇ ಆಗಿದೆ.

ಆರ್ಥಿಕ ಅಥವಾ ವ್ಯಾಪಾರೀ ನಿರ್ಬಂಧ ಕೂಡಾ ವಿಗ್ರಹ ತಂತ್ರವೇ ಆಗುತ್ತದೆ. ಶತ್ರು ರಾಷ್ಟ್ರ ನೈಸರ್ಗಿಕ ವಿಕೋಪಕ್ಕೆ ಒಳಗಾದಾಗ, ಹೆಚ್ಚಿನ ಕರಭಾರವಿರುವಾಗ ಅಥವಾ ಇನ್ನೊಂದು ಶತ್ರು ರಾಷ್ಟ್ರದ ಆಕ್ರಮಣದಿಂದ ತೊದರೆಗೊಳಗಾದಾಗ ಶತ್ರು ರಾಷ್ಟ್ರದ ಪ್ರಜೆಗಳು ರಕ್ಷಣೆ ಅಥವಾ ಒಳಿತಿಗಾಗಿ ತನ್ನ ರಾಜ್ಯದೊಂ ದಿಗೆ ವಿಲೀನ ಬಯಸಿದರೆ ಯುದ್ಧವಿಲ್ಲದೆ ಜಯ ಸಾಧಿಸಬಹುದು.

ಆಸನ: ಅಲಿಪ್ತತೆ. ತನಗೆ ಯಾರ ಮೇಲೂ ಯುದ್ಧ ಮಾಡಿ ಗೆಲ್ಲುವ ಸಾಮರ್ಥ್ಯವಿಲ್ಲ. ಮತ್ತು ತನ್ನನ್ನು ಯಾರೂ ಸೋಲಿಸಲಾರರು ಎಂಬ ಭಾವನೆಯಿದ್ದಾಗ ತಟಸ್ಥ ಅಥವಾ ಅಲಿಪ್ತ ನೀತಿ ಅನುಸರಿಸಬೇಕು. ಕಾಲಕೂಡಿ ಬಂದಾಗ ಶತ್ರುವಿನ ಕಷ್ಟ ಅಥವಾ ಪ್ರತಿಕೂಲ ಕಾಲದಲ್ಲಿ ಆಕ್ರಮಣ ಮಾಡಲು ಅವಕಾಶಕ್ಕಾಗಿ ಕಾಯಬೇಕು. ಅಲಿಪ್ತತೆ ದೌರ್ಬಲ್ಯವಲ್ಲ. ಸಾಕಷ್ಟು ಬಲ ಮತ್ತು ಸಮೃದ್ಧಿಯಿರುವ ರಾಜ ಅಲಿಪ್ತತೆ ಅನುಸರಿಸಬಾರದು. ಬದಲಾಗಿ ಅದೊಂದು ಪ್ರಜ್ಞಾಪೂರ್ವಕ ನಿರ್ಧಾರವಾಗಬೇಕು. ಅದೊಂದು ಕಾಯುವ ತಂತ್ರವೇ ಹೊರತು ದೀರ್ಘಕಾಲೀನ ನೀತಿಯಲ್ಲ.

ಯಾನ: ಅಂದರೆ ಯುದ್ಧದ ತಯಾರಿ. ಯುದ್ಧಕ್ಕಾಗಿ ದಂಡನ್ನು ಮುನ್ನಡೆಸುವದು. ‘ಯದಿ ವಾ ಮನ್ಯೇತ್ ಯಾನಮಾಧ್ಯಃ ಕರ್ಮೋಪಘಾತಃ ಶತ್ರೋಃ ಪ್ರತಿವಿಹಿತಸ್ವಕರ್ಮಾರಕ್ಷಶ್ಚಾಸ್ಮಿ ಇತಿ ಯಾನೇನ ವೃದ್ಧಿಮಾತಿಷ್ಟೇತ್|’ ಅಂದರೆ ಯುದ್ಧಕ್ಕಾಗಿ ಸೈನ್ಯವನ್ನು ಮುನ್ನಡೆಸಿ ಹೋಗುವಾಗ ಯಾವದೇ ಬಾಧೆ, ಹಾನಿ ಅಥವಾ ಸಾವು ನೋವುಗಳಾದರೂ ತನ್ನನ್ನು ರಕ್ಷಿಸಿಕೊಂಡು ಶತ್ರುವಿನ ಪರಾಕ್ರಮವನ್ನು ನಾಶ ಮಾಡಿ ಅವರನ್ನು ಸೋಲಿಸಲು ಬೇಕಾದಷ್ಟು ತನ್ನ ಸೇನೆ ಬಲವಾಗಿದೆ ಎಂದು ಅನಿಸಿದರೆ ಮಾತ್ರ ಯುದ್ಧ ಮಾಡಲು ಪೃವೃತ್ತನಾಗಬೇಕು. ಅಂದರೆ ಯುದ್ಧಕ್ಕಾಗಿ ಮುನ್ನಡೆಯುವಾಗ ಸಂಭವನೀಯ ಅಪಾಯಗಳನ್ನು ಮತ್ತು ಶತ್ರು ಸೇನೆಯ ಬಲಾಬಲಗಳನ್ನು ಸರಿಯಾಗಿ ಪರಾಮರ್ಶಿಸಿ ತನ್ನ ಸೇನೆ ಸಾಕಷ್ಟು ಬಲವಾಗಿದೆ ಮತ್ತು ತನ್ನನ್ನು ರಕ್ಷಿಸುವದರ ಜೊತೆಗೆ ಶತ್ರುವನ್ನು ಸೋಲಿಸಲು ಶಕ್ತವಾಗಿದೆ ಎಂಬುದನ್ನು ಧೃಢೀಕರಿಸಿಕೊಂಡೇ ಮುನ್ನಡೆಯಬೇಕು.

ಸಂಶ್ರಯ: ಅಂದರೆ ಪರಾರ್ಪಣ. ಕಡಿಮೆ ಬಲವಿದ್ದು ಬಲಿಷ್ಟ ವೈರಿರಾಜರಿಂದ ಆಕ್ರಮಣದ ಸಾಧ್ಯತೆಯಿದ್ದಾಗ ಬಲಿಷ್ಟರಾದ ರಾಜರ ಆಶ್ರಯ ಪಡೆಯಬೇಕು. ಹಾಗೆ ಆಶ್ರಯ ಪಡೆದ ನಂತರ ತನ್ನ ಅಭಿವೃದ್ಧಿ ಸಾಧಿಸಲು ರಾಜನು ಪ್ರಯತ್ನಿಸಬೇಕು ಮತ್ತು ಪರಿಶ್ರಮದ ಮೂಲಕ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು. ಭಾರತದ ಈಗಿನ ವಿದೇಶಾಂಗ ನೀತಿಯು ದೇಶದ ಆತ್ಮಗೌರವ ಮತ್ತು ಹಿತಾಸಕ್ತಿ ಯನ್ನೇ ಪ್ರಮುಖವಾಗಿ ಪರಿಗಣಿಸುತ್ತದೆ.

ಭಾರತ ಯಾವ ರಾಷ್ಟ್ರದ ಆಶ್ರಯವನ್ನೂ ಪಡೆದಿಲ್ಲ. ಆದರೆ ಪಾಕಿಸ್ತಾನವು ಚೀನಾ, ಅಮೇರಿಕದಂಥ ರಾಷ್ಟ್ರಗಳ ಆಶ್ರಯ ಪಡೆದು ಅವುಗಳ ಆಣತಿಯಂತೆ ವರ್ತಿಸುತ್ತಿದೆ. ದ್ವೆ ಧೀಭಾವ: ಇಬ್ಬರು ಬಲಿಷ್ಟ ರಾಜರಿಂದ ಆಕ್ರಮಣ ಅಥವಾ ಯುದ್ಧದ ಸಾಧ್ಯತೆಯಿದ್ದಾಗ ಆ ಪೈಕಿ ಯಾರು ಬಲಿಷ್ಟರಿದ್ದಾರೋ ಆಥವಾ ನಂಬಲರ್ಹರೋ ಅವರ ಜೊತೆ ಮೈತ್ರಿ ಮಾಡಿಕೊಂಡು ಅಂಥ ಇನ್ನೊಬ್ಬ ರಾಜನನ್ನು ಮಣಿಸಲು ತಂತ್ರಗಾರಿಕೆ ಮಾಡಬೇಕು.

ವಿಶ್ವ ರಾಜಕೀಯದ ಇಂದಿನ ವ್ಯವಸ್ಥೆಯಲ್ಲಿ ಈ ತಂತ್ರವು ಅತೀ ಮಹತ್ವದ್ದಾಗಿದೆ. ತನ್ನ ಶತ್ರುವನ್ನು ಮಣಿಸಲು ಆತನ ವಿರುದ್ಧ ಇನ್ನೊಂದು ರಾಷ್ಟ್ರವನ್ನು ಎತ್ತಿ ಕಟ್ಟಬೇಕೆಂದು ಹೇಳುತ್ತದೆ. ಅಮೇರಿಕದ ಬೆದರಿಕೆಗಳಿಗೆ ಜಗ್ಗದ ಭಾರತವು ರಶ್ಯಾದ ಜೊತೆ ತೈಲ ಒಪ್ಪಂದ ಮಾಡಿಕೊಂಡಿದ್ದ ರಿಂದ ಅಮೇರಿಕದ ಒತ್ತಡವನ್ನು ನಿಭಾಯಿಸಲು ಸಾಧ್ಯವಾಯಿತು. ಚೀನಾದಂಥ ವೈರಿ ರಾಷ್ಟ್ರದ ಜೊತೆ ಕೂಡಾ ಭಾರತ ಸಂಬಂಧವನ್ನು ಸುದಾರಿಸಿಕೊಳ್ಳುವ ಮೂಲಕ ಅಮೇರಿಕಕ್ಕೆ ಸೆಡ್ಡು ಹೊಡೆಯಿತು.

ಪರಸ್ಪರ ವಿರೋಧಿ ಕಾರ್ಯತಂತ್ರ ಹೊಂದಿರುವ ಬ್ರಿಕ್ಸ್, ಜಿ-7 ಮತ್ತು ಕ್ವಾಡ್‌ನಂಥ ಒಕ್ಕೂಟಗಳ ಸದಸ್ಯತ್ವವನ್ನು ಹೊಂದಿರುವ ಮೂಲಕ ಭಾರತ ದ್ವೈಧೀಭಾವದ ನೀತಿಯನ್ನು ಅನುಸರಿಸುತ್ತಿದೆ. ಕೌಟಿಲ್ಯನ ಮಂಡಲ ನೀತಿ ಮೈತ್ರಿ ಮತ್ತು ಮಿತ್ರ ರಾಷ್ಟ್ರಗಳ ಒಕ್ಕೂಟ ರಚನೆಯ ಕುರಿತಾಗಿಯೇ ಇದೆ. ನೆರೆಯ ರಾಷ್ಟ್ರ ಸಹಜವಾಗಿ ವೈರಿ. ಅದರ ನೆರೆ ರಾಷ್ಟ್ರ ತನಗೆ ಮಿತ್ರ. ಶತ್ರುವಿನ ಮಿತ್ರ ಸಾಮಾನ್ಯ ವಾಗಿ ಶತ್ರು. ಶತ್ರುವಿನ ಶತ್ರುವಿನ ಜೊತೆಗೆ ಮಿತ್ರತ್ವ.

ಮಿತ್ರರಾಷ್ಟ್ರದ ಮಿತ್ರರ ಜೊತೆ ಮಿತ್ರತ್ವ. ಮಧ್ಯಮ ಅಂದರೆ ತನ್ನ ಮತ್ತು ಶತ್ರು ರಾಷ್ಟ್ರಕ್ಕೆ ಹತ್ತಿರವಿರುವ ರಾಷ್ಟ್ರ, ಸಂಧಾನಕಾರನಾಗಿ ಅಥವಾ ಯುದ್ಧ ಕಾಲದಲ್ಲಿ ಸಹಾಯಕ್ಕೆ ಒದಗಬಹು ದೆಂಬ ಕಾರಣಕ್ಕೆ ಆತನೊಂದಿಗೆ ಮಿತ್ರತ್ವ ಸಂಪಾದಿಸಬೇಕು. ತಟಸ್ಥ ರಾಜನ ಜೊತೆಗಿನ ಮಿತ್ರತ್ವವೂ ಸಹಕಾರಿಯಾಗಬಲ್ಲುದು. ರಾಜನು ತನ್ನ ಹಿತಕ್ಕಾಗಿ ರಚಿಸಿಕೊಂಡ ಕೂಟಗಳಲ್ಲಿರುವ ರಾಷ್ಟ್ರಗಳು ರಥದ ಗಾಲಿಯ ಕಡ್ಡಿಗಳಂತಿರಬೇಕು ಮತ್ತು ತಾನು ಆ ಚಕ್ರದ ಕೇಂದ್ರದಲ್ಲಿರಬೇಕು.

ಈ ಎಲ್ಲ ತಂತ್ರಗಳು ಇಂದಿಗೂ ಪ್ರಸ್ತುತವಾಗಿವೆ. ಮಧ್ಯ ಏಶ್ಯಾದ ಸಂಕಷ್ಟದ ಕಾಲದಲ್ಲಿ ಶತ್ರುವಿನ ಶತ್ರು ಮಿತ್ರ ಹಾಗೂ ಶತ್ರುವಿನ ಮಿತ್ರನೂ ಶತ್ರುವೇ ಎಂಬುದು ಸಾಬೀತಾಗಿದೆ. ಚೀನಾ, ರಶ್ಯಾಗಳು ಇರಾನಿಗೆ ಸಹಾಯ ಮಾಡಲು ಅಮೇರಿಕದೊಂದಿಗಿರುವ ಶತ್ರುತ್ವವೂ ಕಾರಣ. ಹಾಗೇ ಯುಕ್ರೈನಿಗೆ ನ್ಯಾಟೋ ರಾಷ್ಟ್ರಗಳು ಸಹಾಯ ಮಾಡಲು ಕೂಡಾ ಅವುಗಳಿಗೆ ರಶ್ಯಾದ ಜೊತೆ ವೈರತ್ವವೇ ಮುಖ್ಯ ಕಾರಣ.

ಮಂಡಲ ನೀತಿಯ ಮುಖ್ಯ ತತ್ವವಾದ ಪರಸ್ಪರ ವಿಶ್ವಾಸ ಮತ್ತು ಹಿತಾಸಕ್ತಿಯ ರಕ್ಷಣೆಯ ವಿಷಯವನ್ನು ನಿರ್ಲಕ್ಷಿಸಿರುವದೇ ಟ್ರಂಪರ ವಿದೇಶೀ ನೀತಿಯ ವೈಫಲ್ಯಕ್ಕೆ ಕಾರಣವೆನ್ನಬಹುದು. ಇರಾನ್ ವಿರುದ್ಧ ಯುದ್ಧ ಸಾರುವಾಗ ಆ ದೇಶದ ಸೈನ್ಯದ ಬಲ, ಅವರಿಗೆ ಸಿಗಬಹುದಾದ ಬಾಹ್ಯ ಬೆಂಬಲಗಳನ್ನು ಪರಿಗಣಿಸದೆ ಹಾಗೂ ಮಿತ್ರರಾದ ನ್ಯಾಟೋ ರಾಷ್ಟ್ರಗಳನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದೆ ಏಕಪಕ್ಷೀಯವಾಗಿ ಅನಗತ್ಯವೆನಿಸಬಹುದಾದ ಯುದ್ಧ ಘೋಷಿಸಿ ತನ್ನ ದೇಶಕ್ಕಲ್ಲದೇ ಅರಬ್ ರಾಷ್ಟ್ರಗಳಿಗೂ ಅಪಾರ ಹಾನಿಯಾಗಲು ಕಾರಣರಾದರು.

ಯುಕ್ರೈನ್, ಗ್ರೀನ್ ಲ್ಯಾಂಡ್ ಮುಂತಾದ ವಿಷಯಗಳಲ್ಲೂ ನ್ಯಾಟೋ ರಾಷ್ಟ್ರಗಳ ವಿಶ್ವಾಸವನ್ನೂ ಕಳೆದುಕೊಂಡರು. ಸುಂಕದ ಬೆದರಿಕೆ, ಕಠಿಣ ವೀಸಾ ನಿಯಮಗಳು ಮುಂತಾದವುಗಳು ತನ್ನದೇ ದೇಶದ ಉತ್ಪಾದಕ ಕಂಪನಿಗಳ ಹಿತಾಸಕ್ತಿಗೆ ವಿರುದ್ಧವಾದರೂ ಅವುಗಳನ್ನು ಬೆದರಿಕೆಯ ಅಸ್ತ್ರವಾಗಿ ಬಳಸುವ ಮೂಲಕ ಜನಪ್ರಿಯತೆ ಕಳೆದುಕೊಂಡ ಟ್ರಂಪ್‌ರನ್ನು ಅಮೇರಿಕದ ಜನ ಮಧ್ಯಂತರ ಚುನಾವಣೆಯಲ್ಲಿ ಸಹಜವಾಗಿಯೇ ತಿರಸ್ಕರಿಸಿದ್ದಾರೆ.

ಭಾರತದ ವಿರುದ್ಧ ಅವರು ಬಳಸಿದ ಭಾಷೆ, ಪಾಕಿಸ್ಥಾನದಂಥ ಭಯೋತ್ಪಾದಕ ರಾಷ್ಟ್ರಕ್ಕೆ ಅವರು ನೀಡಿದ ಮಹತ್ವ ಇವೆಲ್ಲ ‘ಅವಕ್ಷೇಪೇಣ ಹಿ ಸತಾಮಸತಾಂ ಪ್ರಗ್ರಹೇಣ ಚ’ ಎಂಬುದೇ ಆಗಿದೆ. ಅವರ ಸೋಲನ್ನು ನಾವೇನೂ ಸಂಭ್ರಮಿಸುತ್ತಿಲ್ಲ. ಆದರೆ ಡೆಮಾಕ್ರೆಟರ ಗೆಲುವಿನ ಸುದ್ದಿ ಶೇರು ಮಾರುಕಟ್ಟೆಗಳ ಸಂಭ್ರಮಕ್ಕೆ ಕಾರಣವಾಗಿದೆ ಎಂದರೆ ಟ್ರಂಪರ ಕುರಿತು ಜಗತ್ತಿನ ಜನರಿಗಿರುವ ಭಾವನೆ ಅರ್ಥವಾಗುತ್ತದೆ. ಅರ್ಥಶಾಸ್ತ್ರದ ಪುಸ್ತಕವನ್ನು ಟ್ರಂಪ್ ಖಂಡಿತ ಓದಬೇಕು. ಅಷ್ಟೇ ಅಲ್ಲ ಅದನ್ನು ಶ್ವೇತಭವನದಲ್ಲಿಟ್ಟರೆ ಮುಂದಿನ ಅಧ್ಯಕ್ಷರೂ ಓದಬಹುದು.