ಅಭಿಮತ
ಶ್ರೀನಿಸುತ, ಮೈಸೂರು
ರುಕ್ಮಿಣಿ ಕರಾರ್ಚಿತ ಶ್ರೀಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿ ಸನ್ನಿಧಾನವನ್ನು ತುಂಬಿಸಿ ಶ್ರೀ ಮಧ್ವಾಚಾರ್ಯರು ಬೋಧಿಸಿದ್ದು ‘ಐಕ್ಯ’ವನ್ನಲ್ಲ; ಬಲಿಗೆ, ಜೀವಾತ್ಮ ಮತ್ತು ಪರಮಾತ್ಮ ಎಂದೆಂದೂ ಒಂದಲ್ಲ ಎಂದು ಬೋಧಿಸಿ ಭೇದವನ್ನು ಸಾರಿದರು. ಶ್ರೀಕೃಷ್ಣನ ಪೂಜೆಗೆಂದು ಅಷ್ಟ ಮಠಗಳ ವ್ಯವಸ್ಥೆಯನ್ನು ಏರ್ಪಡಿಸಿದರು. ಇಂಥ ಉಡುಪಿಯಲ್ಲಿ ಆಯೋಜಿಸಲಾಗಿದ್ದ, ಐತಿಹಾಸಿಕ ಎನ್ನಬಹುದಾದ ಲಕ್ಷಕಂಠ ಗೀತಾಪಠಣ ಸಮಾರಂಭದಲ್ಲಿ ಎಲ್ಲಾ ಎಂಟು ಮಠಾಧಿಪತಿಗಳು ಹಾಜರಿರದೆ ಸಾರ್ವಜನಿಕರ ಎದುರು ‘ಭೇದ’ವನ್ನೇ ಮೆರೆದಿದ್ದಾರೆ!
ಒಳ ವೈಮನಸ್ಯಗಳು ಏನೇ ಇರಲಿ, ‘ಜಗದ್ಗುರು’ ಕೃಷ್ಣನಿಗಾಗಿ, ಅವನು ಬೋಧಿಸಿದ ಮತ್ತು ಇಡೀ ಮನುಕುಲಕ್ಕೆ ಎಲ್ಲಾ ಕಾಲಕ್ಕೂ ಅನ್ವಯಿಸುವ ಭಗವದ್ಗೀತೆಗಾಗಿ ಅವರು ಒಗ್ಗೂಡಬೇಕಿತ್ತು. ದೇಶವೇ ಕೊಂಡಾಡುವ ‘ಭಾರತ ಭಾಗ್ಯವಿಧಾತ’ ಪ್ರಧಾನಿ ನರೇಂದ್ರ ಮೋದಿಯವರ ಸಲುವಾಗಿಯಾದರೂ ಅಂದಿನ ಸಮಾರಂಭದ ವೇಳೆ ಅವರೆಲ್ಲರ ಉಪಸ್ಥಿತಿ ಇರಬೇಕಿತ್ತು.
ಇದು ಎಲ್ಲಾ ಕೃಷ್ಣಭಕ್ತರ ಆಗ್ರಹವೂ ಆಗಿತ್ತು. ಅಂದು ಕೃಷ್ಣ ದೇಗುಲದ ಮುಂಭಾಗದ ಚಂದ್ರಶಾಲೆ ಯಲ್ಲಿ ಪುತ್ತಿಗೆ ಶ್ರೀಗಳೊಂದಿಗೆ ಕಂಡುಬಂದಿದ್ದು ಪೇಜಾವರ ಮಠದ ಶ್ರೀಗಳು, ಶಿರೂರು ಶ್ರೀಗಳು ಮಾತ್ರ. ಅಷ್ಟ ಮಠಗಳಲ್ಲಿ ಸೇರದಿದ್ದರೂ ಸುಬ್ರಹ್ಮಣ್ಯ ಕ್ಷೇತ್ರದ ಶ್ರೀಗಳು ಅಲ್ಲಿ ಕಂಡುಬಂದರು.
ಇದನ್ನೂ ಓದಿ: Horanadu Temple: ಸಹ್ಯಾದ್ರಿಯ ಮಡಿಲಲ್ಲಿದೆ ಅನ್ನದಾತೆಯ ಬೀಡು- ಅದೇ ಶ್ರೀ ಕ್ಷೇತ್ರ ಹೊರನಾಡು
ಆಶ್ರಮ ಜ್ಯೇಷ್ಠರಾದ ಶ್ರೀ ಕೃಷ್ಣಾಪುರ, ಪಲಿಮಾರು, ಸೋದೆ, ಅದಮಾರು, ಕಾಣಿಯೂರು ಶ್ರೀಪಾದರ ಅನುಪಸ್ಥಿತಿ ಅಲ್ಲಿ ಎದ್ದುಕಾಣುತ್ತಿತ್ತು. ಉಡುಪಿಯ ರಾಜಾಂಗಣದಲ್ಲಿ ಬೇರೆ ಬೇರೆ ಸಮಾರಂಭ ಗಳಲ್ಲಿ ಪುತ್ತಿಗೆ ಶ್ರೀಗಳೊಂದಿಗೆ ವೇದಿಕೆ ಹಂಚಿಕೊಳ್ಳುವ ಶ್ರೀ ವಿಶ್ವಪ್ರಿಯ ತೀರ್ಥರೂ ಕಂಡುಬರಲಿಲ್ಲ!
ಅದು ಯಾವುದೇ ಸಮಾರಂಭ ಇರಲಿ, ಶ್ರೀ ವಿಶ್ವಪ್ರಿಯ ತೀರ್ಥರು ಮೋದಿ ಅವರ ಕುರಿತು ಪ್ರಸ್ತಾಪಿಸಿ ಅವರಿಂದ ದೇಶಕ್ಕೆ ಸಲ್ಲುತ್ತಿರುವ ಸೇವೆಯನ್ನು ಮನಃಪೂರ್ವಕವಾಗಿ ಶ್ಲಾಘಿಸುತ್ತಾರೆ, ಆಶೀರ್ವದಿಸು ತ್ತಾರೆ. ಮೋದಿಯವರ ಸಲುವಾಗಿ ಭಾರತೀಯರು ತಮ್ಮ ಪುಣ್ಯವನ್ನು ಧಾರೆ ಎರೆಯಬೇಕೆಂದು ಹೇಳಿದ್ದವರು ಇವರು. ಅಷ್ಟ ಮಠಗಳ ನಡುವೆ ಏಕಾದಶಿ ಉಪವಾಸ ಆಚರಣೆಯಲ್ಲಿ (ದೃಗ್ಗಣಿತ, ಆರ್ಯಭಟೀಯ) ಭೇದ, ಹಣೆಗೆ ಹಚ್ಚುವ ಅಕ್ಷತೆ-ಅಂಗಾರ ಯಾವ ಜಾಗದಲ್ಲಿರಬೇಕು ಎಂಬುವ ವಿಷಯದಲ್ಲಿ ಭೇದ ಮಾತ್ರವೇ ಇದೆಯೆಂದು ಜನಸಾಮಾನ್ಯರು ತಿಳಿದಿದ್ದರು.
ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಸಮಾರಂಭದಲ್ಲಿ ಎಲ್ಲಾ ಎಂಟು ಶ್ರೀಗಳನ್ನು ಒಟ್ಟೊಟ್ಟಿಗೆ ಒಂದೇ ವೇದಿಕೆಯಲ್ಲಿ ನೋಡಲು ದುಸ್ತರವಾಗಿದೆ. ದೇಶದ ಜನಪ್ರಿಯ ಪ್ರಧಾನಿ ಮಠದ ಬಾಗಿಲ ಬಳಿ ಬಂದಾಗ ಎದುರುಗೊಳ್ಳಬೇಕಾದ ಯಜಮಾನರೇ ಉಡುಪಿಯಿಂದಲೇ ಅದೃಶ್ಯರಾಗಿ ಹೋದಂತಿದೆ.
ಯತಿಗಳಿಗೆ ಸಂಚಾರ ನಿರ್ಬಂಧ ಹೇರುವ ಚಾತುರ್ಮಾಸ್ಯದ ಹೊತ್ತೂ ಇದಾಗಿರಲಿಲ್ಲ. ಹಾಗಿದ್ದರೂ ಅವರುಗಳು ಕಾಣದಿದ್ದುದು ಯಾವ ಕಾರಣಕ್ಕೆ? ಎಲ್ಲಾ ಪೀಠಾಧಿಪತಿಗಳು ಇದ್ದಿದ್ದರೆ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನೆಯಾಗುತ್ತಿತ್ತು, ಅಲ್ಲವೇ?
(ಲೇಖಕರು ಹವ್ಯಾಸಿ ಬರಹಗಾರರು)