ಕಾನೂನ್ ಸೆನ್ಸ್
ತಿಮ್ಮಣ್ಣ ಭಾಗ್ವತ್
ವಕ್ಫ್ ಎಂದರೆ, ಮುಸಲ್ಮಾನನೊಬ್ಬ ಪವಿತ್ರ ಉದ್ದೇಶಗಳಿಗೆ ತನ್ನ ಆಸ್ತಿಯನ್ನು ಅರ್ಪಿಸು ವುದು. ತನಗಾಗಿ, ತನ್ನ ಕುಟುಂಬಕ್ಕಾಗಿ ಮತ್ತು ತಾನು ಹೆಸರಿಸುವ ತನ್ನ ಸಂತಾನಕ್ಕಾಗಿ ಉಪಯೋಗಿಸಿ ಅಂತಿಮವಾಗಿ ಪವಿತ್ರ ಉದ್ದೇಶಕ್ಕೆ ಅಥವಾ ಅಲ್ಲಾಹುವಿಗೆ ಸಮರ್ಪಿಸುವ ವ್ಯವಸ್ಥೆಯ ವಕ್ಫ್-ಅಲಾಲ್-ಔಲಾದ್ ಅಂದರೆ ಕುಟುಂಬ ವಕ್ಫ್ ಆನಂತರದಲ್ಲಿ ಸೇರಿಕೊಂಡಿತು. ಇದು ಮೂಲ ವಕ್ಫ್ನ ಉದ್ದೇಶವನ್ನೇ ಬದಲಿಸಿ ಹೆಣ್ಣುಮಕ್ಕಳಿಗೆ ಉತ್ತರಾಧಿಕಾರದ ಹಕ್ಕನ್ನು ವಂಚಿಸಲು ದುರುಪಯೋಗ ವಾಗುತ್ತದೆ ಎಂಬ ಆರೋಪವಿದೆ.
ಸುಪ್ರೀಂ ಕೋರ್ಟು ಭಾಗಶಃ ತಡೆಯಾಜ್ಞೆ ನೀಡಿದ ನಂತರ ಸ್ವಲ್ಪ ಕಾಲ ಮರೆತಿದ್ದ ಹೊಸ ವಕ್ಫ್ ಕಾಯಿದೆ- ಅಂದರೆ UWMEED 2025, ಬಿಹಾರದ ಚುನಾವಣೆಯ ಕಾರಣಕ್ಕೆ ಪುನಃ ಮುನ್ನೆಲೆಗೆ ಬಂದಿದೆ. ಅರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕೇಂದ್ರ ಸರಕಾರದ ಈ ಕಾಯಿದೆಯನ್ನು ಬಿಹಾರ ದಲ್ಲಿ ರದ್ದುಪಡಿಸುತ್ತೇವೆ ಎಂದಿದ್ದಾರೆ.
ವಕ್ಫ್ ಎಂದರೆ ಸರಳ ಭಾಷೆಯಲ್ಲಿ ಸಮರ್ಪಣೆ ಅಥವಾ ಪವಿತ್ರ ಉದ್ದೇಶಕ್ಕಾಗಿ ಮಾಡಲಾಗುವ ಹಿಂಪಡೆಯಲಾಗದ ತ್ಯಾಗ. ಇಸ್ಲಾಂ ಪರಂಪರೆಯ ಖಾಲೀಫರಾಗಿದ್ದ ಉಮರ್ -ಇಬನ್-ಖತಬ್‌ರ ಆಸ್ತಿಯೊಂದರ ಕುರಿತು ಪ್ರವಾದಿ ಮುಹಮ್ಮದ್ ಪೈಗಂಬರರು “ನೀನು ಇಚ್ಛಿಸುವುದಾದಲ್ಲಿ ಆ ಆಸ್ತಿಯ (asl or Corpus) ವರ್ಗಾವಣೆಯ ಹಕ್ಕನ್ನು ಪ್ರತಿಬಂಧಿಸಿ ಅದರ ಫಸಲನ್ನು (Usufruct) ಪವಿತ್ರ ಉದ್ದೇಶಗಳಿಗೆ ಮೀಸಲಿಡು" ಎಂದರು.
ಇಸ್ಲಾಂನಲ್ಲಿ ಥವಾಬ್ ಅಥವಾ ಪುಣ್ಯ ಕಾರ್ಯವಾದ ವಕ್ಫ್ ನ ಆರಂಭ ಹೀಗೆ ಆಯಿತು ಎನ್ನಲಾಗಿದೆ. ಹಾಗಾದರೆ ಮುಸ್ಲಿಮರು ಮಾಡುವ ಪುಣ್ಯ ಕಾರ್ಯದಿಂದ ಇತರರಿಗೇನು ತೊಂದರೆ? ಇದನ್ನು ಅರಿಯಲು ಭಾರತದಲ್ಲಿ ವಕ್ಫ್ ಕಾಯಿದೆ ಬೆಳೆದುಬಂದ ಪರಿಯನ್ನು ಅಭ್ಯಸಿಸಬೇಕು.
ಇದನ್ನೂ ಓದಿ: Thimmanna Bhagwat Column: ಜೀವನಾಂಶವೆಂದರೆ ಸಂಬಂಧ-ಭಾವನೆಗಳ ಕಿಮ್ಮತ್ತಲ್ಲ...
ವಕ್ಫ್ ನ ವ್ಯಾಖ್ಯೆ: ಬ್ರಿಟಿಷ್ ಭಾರತದಲ್ಲಿ ಜಾರಿಗೆ ಬಂದ 1913ರ ವಕ್ ಸಕ್ರಮಗೊಳಿಸುವ ಕಾಯಿದೆ ಯ ( Waqf Validation Act) ೨ನೇ ಕಲಮಿನ ಪ್ರಕಾರ “ವಕ್ಫ್ ಎಂದರೆ ಮುಸಲ್ಮಾನ ಧರ್ಮವನ್ನು ಪಾಲಿಸುವ ವ್ಯಕ್ತಿಯೊಬ್ಬ ತನ್ನ ಯಾವುದೇ ಆಸ್ತಿಯನ್ನು ಮುಸಲ್ಮಾನ ಧರ್ಮದ ಪ್ರಕಾರ ಧಾರ್ಮಿಕ, ಪವಿತ್ರ ಅಥವಾ ದತ್ತಿ ಎಂದೆನಿಸುವ ಉದ್ದೇಶಕ್ಕೆ ಕಾಯಂ ಆಗಿ ಮೀಸಲಿಡುವುದು".
1923 ಮತ್ತು 1954ರ ವಕ್ಫ್ ಕಾಯಿದೆಗಳು ಹಾಗೂ 1969, 1984ನೇ ವರ್ಷಗಳಲ್ಲಿ ಮಾಡಲಾದ ತಿದ್ದುಪಡಿಗಳಲ್ಲಿ ಕೂಡ ಈ ಮೂಲಕಲ್ಪನೆ ವ್ಯತ್ಯಾಸವಾಗಲಿಲ್ಲ. ಆದರೆ 1995ರ ಸಮಗ್ರ ವಕ್ಫ್ ಕಾಯಿದೆಯಲ್ಲಿ ‘ಮುಸಲ್ಮಾನರು’ ಎಂಬ ಶಬ್ದದ ಬದಲಿಗೆ ‘ಯಾವುದೇ ವ್ಯಕ್ತಿ’ ಎನ್ನಲಾಯಿತು. ಅಂದರೆ ಮುಸಲ್ಮಾನರಲ್ಲದವರ ಆಸ್ತಿಯನ್ನು ಕೂಡ ವಕ್ಫ್ ಆಸ್ತಿಯೆಂದು ಪರಿಗಣಿಸಬಹುದು ಎಂಬ ಅಂಶವನ್ನು ಸೇರಿಸಲಾಯಿತು. ಇದು ಅನ್ಯಧರ್ಮದವರಿಗೆ ಅಥವಾ ಸರಕಾರಕ್ಕೆ ಸೇರಿದ ಆಸ್ತಿಗಳನ್ನು ವಕ್ಫ್ ಆಗಿ ಪರಿವರ್ತಿಸಿಕೊಳ್ಳುವ ಹುನ್ನಾರ ಎಂಬುದು ಹಲವರ ವಾದ.
ವಿವಿಧ ಬಗೆಯ ವಕ್ಫ್ ಗಳು: ಮೂಲದಲ್ಲಿ ವಕ್ಫ್ ಎಂದರೆ, ಮುಸಲ್ಮಾನ ವ್ಯಕ್ತಿಯೊಬ್ಬ ಪವಿತ್ರ ಉದ್ದೇಶಗಳಿಗೆ ತನ್ನ ಆಸ್ತಿಯನ್ನು ಅರ್ಪಿಸುವುದು. ತನಗಾಗಿ, ತನ್ನ ಕುಟುಂಬಕ್ಕಾಗಿ ಮತ್ತು ತಾನು ಹೆಸರಿಸುವ ತನ್ನ ಸಂತಾನಕ್ಕಾಗಿ ಉಪಯೋಗಿಸಿ ಅಂತಿಮವಾಗಿ ಪವಿತ್ರ ಉದ್ದೇಶಕ್ಕೆ ಅಥವಾ ಅಲ್ಲಾಹುವಿಗೆ ಸಮರ್ಪಿಸುವ ವ್ಯವಸ್ಥೆಯ ವಕ್ಫ್-ಅಲಾಲ್-ಔಲಾದ್ ( wakf-alal aulad) ಅಂದರೆ ಕುಟುಂಬ ವಕ್ಫ್ ಆನಂತರದಲ್ಲಿ ಸೇರಿಕೊಂಡಿತು.
ಇದು ಮೂಲ ವಕ್ಫ್ ನ ಉದ್ದೇಶವನ್ನೇ ಬದಲಿಸಿ ಹೆಣ್ಣುಮಕ್ಕಳಿಗೆ ಉತ್ತರಾಧಿಕಾರದ ಹಕ್ಕನ್ನು ವಂಚಿಸಲು ದುರುಪಯೋಗವಾಗುತ್ತದೆಯಲ್ಲದೆ ಸ್ಟಾಂಪ್ ಮತ್ತು ನೋಂದಣಿ ಕಾಯಿದೆಗಳ ಉಲ್ಲಂಘನೆಗೆ ಕಾರಣವಾಗುತ್ತದೆ ಎಂಬ ಆರೋಪವಿದೆ. 1954ರಲ್ಲಿ ಬಳಕೆದಾರ-ವಕ್ಫ್ ( Wakf by User ) ಎಂಬ ಹೊಸ ಅಂಶವನ್ನು ಸೇರಿಸುವ ಮೂಲಕ ಬಹಳ ಕಾಲದಿಂದ ಅಂಥ ಉದ್ದೇಶಗಳಿಗೆ ಉಪಯೋಗಿಸಲ್ಪಡುತ್ತಿವೆ ಎಂಬ ಆಧಾರದಲ್ಲಿ ವಕ್ಫ್ ಎಂದು ಪರಿಗಣಿಸಲು ಅವಕಾಶ ಕಲ್ಪಿಸಲಾ ಯಿತು.
1995ರ ಕಾಯಿದೆಯಲ್ಲಿ Wakf by User ಎನ್ನಲಾದ ಆಸ್ತಿಗಳು ಅಂಥ ಉದ್ದೇಶಗಳಿಗೆ ಬಳಕೆ ಯಾಗದೆ ಎಷ್ಟೇ ವರ್ಷಗಳಾಗಿದ್ದರೂ ವಕ್ ಆಸ್ತಿಯೆಂದು ಪರಿಗಣಿಸುವ ಅವಕಾಶವನ್ನು ನೀಡಲಾಯಿತು. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಹಳ್ಳಿಗಳ ಹೊಲ ಪಟ್ಟಿಗಳು ಮತ್ತು ನಗರಗಳ ಪ್ರದೇಶ ಗಳನ್ನು (Shamlat Patti, Shamlat Deh, Jumla Malkkan) ಕಂದಾಯ ದಾಖಲೆಗಳಲ್ಲಿ ವಕ್ಫ್ ಆಸ್ತಿಗಳೆಂದು ಸೇರಿಸಲು ಅವಕಾಶ ನೀಡಲಾಯಿತು. ಇಷ್ಟು ಸಾಲದೆಂಬಂತೆ ‘ಮಂಜೂರಿ’ ಎಂಬ ಶಬ್ದವನ್ನು ಕೂಡ ಸೇರಿಸುವ ಮೂಲಕ ಸರಕಾರಿ ಜಾಗಗಳೂ ವಕ್ಫ್ ಭೂಮಿ ಗಳಾಗಲು ಅನುವು ಮಾಡಲಾಯಿತು.
ವಕ್ಫ್ ಮಂಡಳಿಗಳು: 1913 ಅಥವಾ 1923ರ ಕಾಯಿದೆಗಳಲ್ಲಿ ವಕ್ಫ್ ಮಂಡಳಿಗಳು ಇರಲಿಲ್ಲ. 1954ರ ಕಾಯಿದೆಯ ಪ್ರಕಾರ ರಚಿತವಾದ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರು ಇರುವಂತಿಲ್ಲ ವೆಂಬ ನಿಯಮವನ್ನು ಸದಸ್ಯತ್ವದ ಅನರ್ಹತೆಯ ಮೂಲಕ ಅಪರೋಕ್ಷವಾಗಿ ಸೇರಿಸಲಾಯಿತು. ಆಯಾ ರಾಜ್ಯದಲ್ಲಿರುವ ಎಲ್ಲಾ ವಕ್ಫ್ ಗಳ ಪೂರ್ತಿ ಆಡಳಿತಾತ್ಮಕ ನಿಯಂತ್ರಣ ಮತ್ತು ಪರಿಶೀಲನೆಯ ಅಧಿಕಾರವಲ್ಲದೆ ವಕ್ಫ್ ಗಳ ಪೂರ್ತಿ ವಿವರಗಳನ್ನು ದಾಖಲಿಸುವ ಹೊಣೆಯನ್ನು ವಕ್ಫ್ ಮಂಡಳಿಗಳಿಗೆ ನೀಡಲಾಯಿತು.
1995ರ ಕಾಯಿದೆಯು ನೇರವಾಗಿ ಮುಸ್ಲಿಮರು ಮಾತ್ರ ವಕ್ಫ್ ಮಂಡಳಿಗಳ ಸದಸ್ಯರಾಗಿರಬೇಕೆಂದು ಹೇಳುತ್ತದಲ್ಲದೆ ಅಂಥ ಮಂಡಳಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂಡಾ ಮುಸ್ಲಿಮರೇ ಆಗಿರಬೇಕೆಂಬ ನಿಯಮವನ್ನು ವಿಧಿಸುತ್ತದೆ. ಮಂಡಳಿಯ ವಿಶೇಷ ಅಧಿಕಾರವೆಂದರೆ, ಸರ್ವೆ ಕಮಿಷನರ್‌ರವರು ಸಲ್ಲಿಸುವ ವಕ್ಫ್ ಗಳ ಯಾದಿಯನ್ನು ಅಂತಿಮಗೊಳಿಸಿ ರಾಜ್ಯ ಸರಕಾರಕ್ಕೆ ಕಳುಹಿಸುವುದು; ಹಾಗೆ ಕಳಿಸಿದ ಯಾದಿಯ ಪ್ರಕಾರ ಕಂದಾಯ ಅಧಿಕಾರಿಗಳು ಕಂದಾಯ ದಾಖಲೆ ಗಳಲ್ಲಿ ಸೇರಿಸಬೇಕು.
1995ರ ಕಾಯಿದೆ ಹಾಗೂ 2013ರಲ್ಲಿ ಅದಕ್ಕೆ ತಂದ ತಿದ್ದುಪಡಿಯ 40ನೇ ಕಲಮಿನಡಿ ಕೇವಲ ಮುಸ್ಲಿಮರೇ ಒಳಗೊಂಡಿರುವ ವಕ್ಫ್ ಮಂಡಳಿಗಳು ದೇಶದ ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿಯೆಂದು ಪರಿಗಣಿಸಿ ತಾವೇ ಒಂದು ವಿಚಾರಣೆ ನಡೆಸಿ ಆ ಕುರಿತು ಆದೇಶ ಹೊರಡಿಸಬಹುದು.
ಮತ್ತು ಅಂಥ ಆದೇಶದಂತೆ ಕಂದಾಯ ಅಧಿಕಾರಿಗಳು ಸಂಬಂಧಿತ ದಾಖಲೆಗಳಲ್ಲಿ ಅದನ್ನು ವಕ್ಫ್ ಆಸ್ತಿಯೆಂದು ನಮೂದಿಸಬೇಕಾಗುತ್ತದೆ. ಈ ಕುರಿತು 1923 ಮತ್ತು 1954ರ ಕಾಯಿದೆಗಳಲ್ಲಿ ಸಿವಿಲ್ ಕೋರ್ಟುಗಳಿಗೆ ಇದ್ದ ಅಧಿಕಾರ 1995ರ ಕಾಯಿದೆಯಲ್ಲಿ ಇಲ್ಲ. ಅಂಥ ಆಸ್ತಿಯ ನಿಜವಾದ ಮಾಲೀಕ ತನ್ನ ಮಾಲೀಕತ್ವವನ್ನು ಸಾಧಿಸಿ, ಆಸ್ತಿಯನ್ನು ಉಳಿಸಿಕೊಳ್ಳಲು ವಕ್ಫ್ ಟ್ರಿಬ್ಯುನಲ್ ಎದುರು ದಾವೆ ನಡೆಸಬೇಕು.
ಇಂಥ ಅಪಾಯ ದೇಶದ ಯಾವುದೇ ಖಾಸಗಿ, ಸರಕಾರಿ ಅಥವಾ ಸಾರ್ವಜನಿಕ ಆಸ್ತಿಗೂ ಬರಬಹುದು. ಈ ಕಾರಣಕ್ಕೇ ಕೇರಳದ ಕ್ರೈಸ್ತರ ಆಸ್ತಿಗಳು, ಕರ್ನಾಟಕದ ರೈತರ ಆಸ್ತಿಗಳು, ಬಿಹಾರದ ಒಂದು ಇಡೀ ಹಳ್ಳಿ ವಕ್ಫ್ ಆಸ್ತಿಗಳೆಂದು ದಾಖಲಾಗಿದ್ದವು. ಅಂಥ ಪರಿಸ್ಥಿತಿ ನಮ್ಮ ಹಂಪಿ, ಚಿತ್ರದುರ್ಗದಂಥ ಐತಿಹಾಸಿಕ ಸ್ಮಾರಕಗಳಿಗೆ ಕೂಡ ಬರಬಹುದು.
39ನೇ ಕಲಮಿನ ಪ್ರಕಾರ ಯಾವುದೇ ವಕ್ಫ್ ಆಸ್ತಿಯನ್ನು ಸ್ಥಾಪಿಸಿದ ಉದ್ದೇಶ ಪೂರ್ತಿಯಾದ ಮೇಲೆ ಅಂಥ ಆಸ್ತಿಗಳನ್ನು ಇನ್ಯಾವುದೇ ನಿಗದಿತ ಉದ್ದೇಶಗಳಿಗೆ ಬಳಸಲು ಆದೇಶ ನೀಡುವ ಅಧಿಕಾರವನ್ನು ವಕ್ಫ್ ಮಂಡಳಿ ಹೊಂದಿದೆ. ಅಂದರೆ ಒಂದು ಆಸ್ತಿ ಯಾವುದೇ ಕಾರಣಕ್ಕೆ ಒಮ್ಮೆ ವಕ್ಫ್ ಅಂತ ಪರಿಗಣಿಸಲ್ಪಟ್ಟರೆ ಅದು ಯಾವಾಗಲೂ ವಕ್ಫ್ ಆಸ್ತಿಯೇ ಆಗಿರುತ್ತದೆ ( Once Waqf – always a waqf ).
ವಕ್ಫ್ ಆಸ್ತಿಗಳ ಸರ್ವೆ: ವಕ್ಫ್ ಆಸ್ತಿಗಳ ಸರ್ವೆ ಒಂದು ಮುಗಿಯದ ಕಥೆ. 1954ರ ಕಾಯಿದೆಯಲ್ಲೇ ಸರ್ವೆ ನಡೆಸಿ ದೇಶದಲ್ಲಿರುವ ಎಲ್ಲಾ ವಕ್ಫ್ ಆಸ್ತಿಗಳ ಯಾದಿ ತಯಾರಿಸಬೇಕೆಂಬ ನಿಯಮ ಇದೆ. ಸರ್ವೆ ಕಮಿಷನರ್ ಮತ್ತು ಸಹಾಯಕ ಕಮಿಷನರ್‌ಗಳ ನೇಮಕದ ಅಧಿಕಾರ ವಕ್ಫ್ ಮಂಡಳಿಗಳಿಗೆ ಇದೆ. ಆದರೂ ಸರ್ವೆ ಕಾರ್ಯ ಮುಗಿಯುವುದೇ ಇಲ್ಲ. ೧೯೯೫ರ ಕಾಯಿದೆಯಡಿ ೨ನೇ ಮತ್ತು ಹೆಚ್ಚಿನ ಸಲದ ಸರ್ವೆಗಾಗಿ ಆದೇಶ ನೀಡುವ ಅವಕಾಶವಿದೆ.
ಸರ್ವೆ ನಡೆದಂತೆಲ್ಲಾ ಹೆಚ್ಚಾಗುತ್ತಲೇ ಇರುವ ವಕ್ಫ್ ಆಸ್ತಿಗಳ ಒಟ್ಟೂ ಸಂಖ್ಯೆ ಅಂದಾಜು ೮.೭೨ ಲಕ್ಷದಷ್ಟಿದ್ದು ೩೮.೧೬ ಲಕ್ಷ ಎಕರೆಗಳಷ್ಟು ಕ್ಷೇತ್ರವಿದೆ. ವಕ್ಫ್ ಆಸ್ತಿಯೆನಿಸಿಕೊಂಡ ಬಹುಮೌಲ್ಯದ ಆಸ್ತಿಗಳನ್ನು ಖಾಸಗಿಯವರಿಗೆ ಅತಿ ಕಡಿಮೆ ಬಾಡಿಗೆಗೆ ಲೀಸ್ ಕೊಟ್ಟ ಅನೇಕ ಉದಾಹರಣೆಗಳಿವೆ ಯೆನ್ನಲಾಗಿದೆ. ವಕ್ಫ್ ಆಡಳಿತದಲ್ಲಿನ ಪಾರದರ್ಶಕತೆಯ ಕೊರತೆಯ ಕುರಿತು ಅನೇಕ ದೂರುಗಳಿವೆ.
UWMEED- 2025 ಏಕೀಕೃತ ವಕ್ಫ್ ಆಡಳಿತ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯಿದೆ ( Unified Waqf Management, Empowerment, Efficiency and Development Act ): ಸ್ವಾತಂತ್ರ್ಯೋತ್ತರದಲ್ಲಿ ವಕ್ಫ್ ಕಾಯಿದೆಗೆ ಉದ್ದೇಶಪೂರ್ವಕವಾಗಿ ಮಾಡಲಾದ ಅನೇಕ ತಿದ್ದುಪಡಿ ಗಳಿಂದ ದೇಶದ ಮುಸ್ಲಿಮೇತರರ ಹಿತಾಸಕ್ತಿಗಳಿಗೆ ವ್ಯಾಪಕ ಅನ್ಯಾಯವಾಗಿದ್ದರೂ ಈವರೆಗೂ ಯಾವುದೇ ರಾಜಕೀಯ ಪಕ್ಷವಾಗಲೀ, ಧಾರ್ಮಿಕ ಸಂಘಟನೆಗಳಾಗಲೀ ಕಾನೂನು ಕ್ರಮವನ್ನಾಗಲೀ, ಪ್ರತಿಭಟನೆಗಳನ್ನಾಗಲೀ ಕೈಗೊಳ್ಳದಿರುವದು ಆಶ್ಚರ್ಯಕರ ಮತ್ತು ದುರದೃಷ್ಟಕರ ಕೂಡ.
ಒಂದು ಧರ್ಮಕ್ಕೆ ಸೇರಿದ ಜನರು, ಇನ್ನೊಬ್ಬರ ಆಸ್ತಿಯ ಮೇಲೆ ತಮ್ಮ ಹಕ್ಕನ್ನು ಸ್ಥಾಪಿಸಲು ತಾವೇ ಅಽಕಾರ ಹೊಂದುವ ನ್ಯಾಯವ್ಯವಸ್ಥೆಯನ್ನು ಕೂಡ ಅಸಾಂವಿಧಾನಿಕ ಎಂದು ಪ್ರಶ್ನಿಸದಷ್ಟು ನಮ್ಮ ರಾಜಕಾರಣಿಗಳು ಸಂವೇದನಾರಹಿತರಾದದ್ದು ದುರಂತ. ಬಿಜೆಪಿಯು ಅಧಿಕಾರಕ್ಕೆ ಬಂದು ಒಂದು ದಶಕದ ನಂತರ ರೂಪಿಸಿದ UWMEED-2025 ಕಾಯಿದೆ ಜಾರಿಯಾದ ತಕ್ಷಣ ಇಂಥ ವಿಷಯಗಳಿಗೆ ಕಾಯಂ ವಕೀಲರಾದ ಕಪಿಲ್ ಸಿಬಾಲ್ ಮತ್ತು ಅಭಿಷೇಕ್ ಸಿಂಘ್ವಿಗಳು ಕಾರ್ಯತತ್ಪರ ರಾಗಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸುತ್ತಾರೆ ಮತ್ತು ನಮ್ಮ ನ್ಯಾಯಾಲಯ ಕೂಡ ಅಷ್ಟೇ ಕ್ಷಿಪ್ರವಾಗಿ ಕೆಲವು ಕಲಮುಗಳಿಗೆ ತಡೆಯಾಜ್ಞೆ ನೀಡುತ್ತದೆ.
ಈ ಕಾಯಿದೆಯು ತರಲುದ್ದೇಶಿಸಿದ್ದ ಕೆಲವು ಕ್ರಮಗಳು ಹೀಗಿವೆ: ೧. ಮುಸ್ಲಿಮ್ ಧರ್ಮವನ್ನು ಕನಿಷ್ಠ 5 ವರ್ಷದಿಂದ ಪಾಲಿಸುತ್ತಿರುವ ವ್ಯಕ್ತಿಗಳು ಮಾತ್ರ ವಕ್ಫ್ ನೀಡಲು ಅನುಮತಿ. ೨. ವಿವಾದಿತ Waqf by User ಅಡಿಯಲ್ಲಿ ಹೊಸ ಆಸ್ತಿಗಳ ಸೇರ್ಪಡೆ ರದ್ದು. ಮತ್ತು ಈಗಿರುವ ಅಂಥ Waqf by User ಆಸ್ತಿಗಳು ಸರಕಾರದ್ದಾಗಿದ್ದರೆ ಅಥವಾ ವ್ಯಾಜ್ಯದಲ್ಲಿದ್ದರೆ ಅಂಥ ವಕ್ಫ್ ಗಳಿಗೆ ಮಾನ್ಯತೆ ಇಲ್ಲ.
ಅಲ್ಲದೆ, ಈ ಹಿಂದೆ ಯಾವುದೋ ಕಾಲಕ್ಕೆ ವಕ್ಫ್ ಆಸ್ತಿಯಾಗಿದ್ದು ಅನೇಕ ವರ್ಷಗಳವರೆಗೆ ಅದನ್ನು ವಕ್ಫ್ ಉದ್ದೇಶಕ್ಕೆ ಬಳಸದಿದ್ದಲ್ಲಿ ಅದನ್ನು ಪುನಃ ವಕ್ ಎಂದು ಪರಿಗಣಿಸುವ ಉಪಕಲಮು ರದ್ದು. ವಕ್ ಹೆಸರಿನಲ್ಲಿ ಆಸ್ತಿ ಕಬಳಿಕೆಯ ಹುನ್ನಾರಗಳಿಗೆ ಬ್ರೇಕ್.
೩. ದೇಶಾದ್ಯಂತ ಇರುವ ಲಕ್ಷಗಟ್ಟಲೆ ವಕ್ಫ್ ಆಸ್ತಿಗಳ ವಿವರವನ್ನು ಕ್ರೋಡೀಕರಿಸುವ ಉದ್ದೇಶದಿಂದ WAMSI ಎಂಬ ಹೆಸರಿನ ಆನ್‌ಲೈನ್ ಪೋರ್ಟಲ್ ಒಂದನ್ನು ಅಭಿವೃದ್ಧಿ ಪಡಿಸಲಾಗಿದ್ದು ರಾಜ್ಯ ವಕ್ಫ್ ಮಂಡಳಿಗಳು ಈ ಪೋರ್ಟಲ್‌ನಲ್ಲಿ ಎಲ್ಲಾ ವಕ್ಫ್ ಆಸ್ತಿಗಳ ವಿವರವನ್ನು ೬ ತಿಂಗಳ ಒಳಗೆ ನಮೂದಿಸತಕ್ಕದ್ದು.
೪. ರಾಜ್ಯ ವಕ್ ಮಂಡಳಿಗಳಲ್ಲಿ ಮುಸ್ಲಿಮೇತರರನ್ನು ಮತ್ತು ಮಹಿಳಾ ಸದಸ್ಯರನ್ನು ಸೇರಿಸಲು ಅವಕಾಶ. ೫. ಮಂಡಳಿಗಳ ಮುಖ್ಯ ಕಾರ್ಯನಿರ್ವಾಹಕರು ಮುಸ್ಲಿಮರೇ ಆಗಿರಬೇಕೆಂಬ ನಿಯಮ ರದ್ದು. ೬. ವಕ್ಫ್-ಅಲಾಲ್-ಔಲಾದ್ ಅಡಿಯಲ್ಲಿ ಮಹಿಳೆಯರ ಮತ್ತು ಇತರರ ಉತ್ತರಾಧಿಕಾರ ಹಕ್ಕಿಗೆ ಧಕ್ಕೆ ಬರಬಾರದು.
೭. ಯಾವುದೇ ಸರಕಾರಿ ಆಸ್ತಿಗಳು ವಕ್ಫ್ ಆಸ್ತಿಯೆಂದು ಪರಿಗಣಿತವಾಗುವುದಿಲ್ಲ. ಸರಕಾರಿ ಆಸ್ತಿ ಕುರಿತು ವಿವಾದವಿದ್ದರೆ ಅದರ ವಿಚಾರಣೆ ನಡೆಸುವ ಅಧಿಕಾರ ಜಿಲ್ಲಾ ಕಲೆಕ್ಟರ್ ಅಥವಾ ಅದಕ್ಕಿಂತ ಹೆಚ್ಚಿನ ಹುದ್ದೆಯ ಅಧಿಕಾರಿಗೆ ಇರುತ್ತದೆ. ಅದು ಬೋರ್ಡ್‌ನ ಅಧಿಕಾರ ವ್ಯಾಪ್ತಿಯಲ್ಲಿ ಬರುವುದಿಲ್ಲ.
೮. ವಕ್ಫ್ ಆಸ್ತಿಗಳ ಸರ್ವೆ ಹಾಗೂ ಆ ಕುರಿತು ಬರಬಹುದಾದ ವ್ಯಾಜ್ಯಗಳ ವಿಚಾರಣೆಯ ಅಧಿಕಾರ ಬೋರ್ಡ್ ಮತ್ತು ಟ್ರಿಬ್ಯುನಲ್ ಬದಲಿಗೆ ಜಿಲ್ಲಾ ಕಲೆಕ್ಟರರಿಗೆ. ಎರಡನೆ ಅಥವಾ ಮುಂದಿನ ಸರ್ವೆ ಯನ್ನು ೧೦ ವರ್ಷಗಳವರೆಗೆ ನಡೆಸುವಂತಿಲ್ಲ. ಆ ಮೂಲಕ ಹೊಸ ಆಸ್ತಿಗಳ ಸೇರ್ಪಡೆಗೆ ಬ್ರೇಕ್.
೯. ವಕ್‌ಗಳ ಆನ್‌ಲೈನ್ ನೋಂದಣಿ ಮತ್ತು ವಕ್ಫ್-ಡೀಡ್ ಕಡ್ಢಾಯ.
೧೦. ಹೊಸ ಆಸ್ತಿಗಳನ್ನು ವಕ್ಫ್ ಆಸ್ತಿಯೆಂದು ಗುರುತಿಸುವ ಅಧಿಕಾರವನ್ನು ಬೋರ್ಡ್‌ಗಳಿಗೆ ನೀಡುವ ೪೦ನೇ ಕಲಮು ಪೂರ್ತಿ ರದ್ದು.
ಇಂಥ ಅನೇಕ ತಿದ್ದುಪಡಿಗಳ ಮೂಲಕ ವಕ್ಫ್ ಮಂಡಳಿ ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಹಿಂದಿನ ಕಾಯಿದೆಯಲ್ಲಿ ನೀಡಲಾಗಿದ್ದ ನಿರಂಕುಶವೆನಿಸಬಹುದಾದ ಅನೇಕ ಅಧಿಕಾರಗಳನ್ನು ರದ್ದುಪಡಿಸಲಾಗಿದೆ. ಆದರೆ ಈ ತಿದ್ದುಪಡಿ ಕಾಯಿದೆಯನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸ ಲಾಗಿದ್ದು, ಮಾನ್ಯ ನ್ಯಾಯಾಲಯವು ಈ ಕಾಯಿದೆಗೆ ಭಾಗಶಃ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಬಹುತೇಕ ಅಸಾಂವಿಧಾನಿಕ ಎಂದೇ ಪರಿಗಣಿಸಬಹುದಾಗಿದ್ದ ಅನೇಕ ಕಲಮುಗಳನ್ನು ರದ್ದು ಪಡಿಸಿದ ಈ ಕಾಯಿದೆಯನ್ನು ಮಾನ್ಯ ಸುಪ್ರೀಂ ಕೋರ್ಟು ಎತ್ತಿ ಹಿಡಿಯಲೆಂಬುದು ಎಲ್ಲ ಸಂವಿಧಾನಪ್ರಿಯರ ಹಾಗೂ ರಕ್ಷಕರೆನಿಸಿಕೊಂಡವರ ಆಶಯವಾಗಬೇಕು.
(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ ನಿವೃತ್ತ ಎಜಿಎಂ)