ಸಂಘ ದಕ್ಷ
ರಾಜಗುರು ಕೆ.ಆರ್.
ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರೆಸ್ಸೆಸ್) 1925ರ ವಿಜಯದಶಮಿಯ ಶುಭದಿನದಂದು ಮಹಾರಾಷ್ಟ್ರದ ನಾಗಪುರದಲ್ಲಿ ಡಾ.ಕೇಶವ ಬಲಿರಾಮ್ ಹೆಡ್ಗೆವಾರ್ ಅವರಿಂದ ಸ್ಥಾಪನೆಯಾಗಿ 100 ವರ್ಷಗಳನ್ನು ಪೂರೈಸಿದೆ. ಭಾರತೀಯ ಸಮಾಜದಲ್ಲಿ ದೇಶಭಕ್ತಿ, ಶಿಸ್ತು ಮತ್ತು ಹಿಂದೂ ಸಂಸ್ಕೃತಿಯ ಮೌಲ್ಯಗಳನ್ನು ಬೆಳೆಸುವ ಮುಖ್ಯ ಉದ್ದೇಶದೊಂದಿಗೆ ಪ್ರಾರಂಭವಾದ ಆರೆಸ್ಸೆಸ್, ಅನೇಕ ಏಳು-ಬೀಳುಗಳೊಂದಿಗೆ ಶತಮಾನವನ್ನು ಪೂರೈಸಿರುವುದು ಗಮನಾರ್ಹ.
ಮಹಾತ್ಮ ಗಾಂಧಿಯವರ ಹತ್ಯೆ ಪ್ರಕರಣದಲ್ಲಿ ಪಾಲ್ಗೊಂಡಿತ್ತು ಎಂಬ ಊಹಾಪೋಹಗಳನ್ನು ಹಬ್ಬಿಸಿ ಆರೆಸ್ಸೆಸ್ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಇಂದಿಗೂ ಮುಂದುವರಿದಿದ್ದರೂ, ಅದರ ಸೇವಾ ಚಟುವಟಿಕೆಗಳು ಮತ್ತು ಶಾಖೆಗಳ ವಿಸ್ತಾರವನ್ನು ಗಮನಿಸಿದರೆ ಎಂಥವರೂ ಹುಬ್ಬೇರಿಸ ಬೇಕಾಗುತ್ತದೆ.
ಒಂದು ಸಣ್ಣ ಗುಂಪಾಗಿ ಶುರುವಾದ ಈ ಸಂಘಟನೆಯು ಒಂದು ಶತಮಾನದ ಅವಧಿಯಲ್ಲಿ, ಸ್ವಯಂಸೇವಕರನ್ನು ಆಧರಿಸಿದ ಜಗತ್ತಿನ ಅತಿದೊಡ್ಡ ಸಂಘಟನೆಯಾಗಿ ಬೆಳೆದಿರುವುದು ಶ್ಲಾಘ ನೀಯ. ಆರೆಸ್ಸೆಸ್ ಪ್ರಭಾವ ಕೇವಲ ಶಾಖೆಗಳಿಗೆ ಸೀಮಿತವಾಗಿಲ್ಲ. ಅದು ಶಿಕ್ಷಣ, ರಾಜಕೀಯ, ಬುಡಕಟ್ಟು ಕಲ್ಯಾಣ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳ ಬೃಹತ್ ಜಾಲದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನೂ ಗಮನಿಸಬೇಕು.
ಬಿಜೆಪಿಯ ಮಾತೃಸಂಸ್ಥೆ ಅಥವಾ ಸೈದ್ಧಾಂತಿಕ ಮಾರ್ಗದರ್ಶಕ ಸಂಸ್ಥೆ ಎಂಬುದಾಗಿಯೂ ಆರೆಸ್ಸೆಸ್ ಪರಿಗಣಿಸಲ್ಪಟ್ಟಿರುವುದರಿಂದ, ಬಿಜೆಪಿಯ ರಾಜಕೀಯ ವಿರೋಧಿಗಳು ಆರೆಸ್ಸೆಸ್‌ಗೆ ಭಯೋತ್ಪಾದಕ ಸಂಘಟನೆಯ ಹಣೆಪಟ್ಟಿ ಕಟ್ಟಲು ಯತ್ನಿಸಿದ್ದಾರೆ, ಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: Rajguru K R Column: ದಿ ಬೆಂಗಾಲ್ ಫೈಲ್ಸ್: ಬಂಗಾಳದ ಕರಾಳ ಇತಿಹಾಸದ ಮರುದರ್ಶನ
ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಆಗಿನ ಸಮಾಜದಲ್ಲಿನ ಬಿರುಕುಗಳನ್ನು ಗಮನಿಸಿದ ಡಾ.ಹೆಡ್ಗೆವಾರ್ ಅವರು, ರಾಷ್ಟ್ರೀಯ ಭಾವನೆ ಮತ್ತು ಸಮಾಜ ಸಂಘಟನೆಯ ಕೊರತೆಯೇ ದೇಶದ ದುಸ್ಥಿತಿಗೆ ಮೂಲಕಾರಣ ಎಂದು ಮನಗಂಡರು. ಈ ಕೊರತೆಯನ್ನು ನೀಗಿಸಲು, ದೇಶಕ್ಕಾಗಿ ನಿಸ್ವಾರ್ಥದಿಂದ ದುಡಿಯುವ ಮತ್ತು ಉನ್ನತ ನೈತಿಕ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿಗಳನ್ನು ನಿರ್ಮಿಸುವ ಗುರಿಯೊಂದಿಗೆ ಆರೆಸ್ಸೆಸ್ ಅನ್ನು ಸ್ಥಾಪಿಸಲಾಯಿತು.
ಹಿಂದೂಗಳ ನಡುವೆ ಶಿಸ್ತು, ಏಕತೆ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸುವುದು, ಭಾರ ತೀಯ ಸಂಸ್ಕೃತಿ, ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ಎತ್ತಿ ಹಿಡಿಯುವುದು ಆರೆಸ್ಸೆಸ್‌ನ ಧ್ಯೇಯೋ ದ್ದೇಶವಾಗಿತ್ತು. ಇಂಥ ಮಹತ್ತರ ಉದ್ದೇಶವಿಟ್ಟುಕೊಂಡ ಆರೆಸ್ಸೆಸ್, ಸಾಮಾಜಿಕ ಸೇವಾ ಕಾರ್ಯ ಕ್ರಮಗಳು, ವಿಪತ್ತು ಪರಿಹಾರ ಮತ್ತು ನೆರವಿನ ಚಟುವಟಿಕೆಗಳಲ್ಲಿ ಏಕಪ್ರಕಾರವಾಗಿ ನಿರತವಾಗಿ ದ್ದರೂ, ಆರೆಸ್ಸೆಸ್‌ನ ಬಗ್ಗೆ ಜನರಲ್ಲಿ ನಕಾರಾತ್ಮಕ ಭಾವನೆಗಳನ್ನು ಮೂಡಿಸುವ ಪ್ರಯತ್ನಗಳು ಎಡಚರರು ಹಾಗೂ ಕಾಂಗ್ರೆಸ್ಸಿಗರಿಂದ ನಡೆದುಕೊಂಡೇ ಬಂದಿವೆ.
ಮಹಾತ್ಮ ಗಾಂಧಿಯವರ ಹತ್ಯೆಯಲ್ಲಿ ಆರೆಸ್ಸೆಸ್ ಭಾಗಿಯಾಗಿತ್ತು ಎಂಬ ಗ್ರಹಿಕೆಯ ಬಿತ್ತನೆ ಇವುಗಳಲ್ಲೊಂದು. ಗಾಂಧಿಯವರ ಹಂತಕನಾದ ನಾಥೂರಾಂ ಗೋಡ್ಸೆಯು ಹಿಂದೂ ಮಹಾ ಸಭಾದ ಸದಸ್ಯನಾಗಿದ್ದು, ಹಿಂದೆ ಆರೆಸ್ಸೆಸ್‌ನಲ್ಲಿ ಸಕ್ರಿಯನಾಗಿದ್ದ ಎಂಬ ಏಕೈಕ ಕಾರಣಕ್ಕೆ ಗಾಂಧಿ ಹತ್ಯೆಯ ನಂತರ ಅಂದಿನ ಭಾರತ ಸರಕಾರವು (ಗೃಹಸಚಿವ ಸರ್ದಾರ್ ವಲ್ಲಭ ಭಾಯಿ ಪಟೇಲರ ನೇತೃತ್ವದಲ್ಲಿ) ಆರೆಸ್ಸೆಸ್ ಅನ್ನು ನಿಷೇಧಿಸಿತು.
ಆರೆಸ್ಸೆಸ್‌ನವರು ಹಂಚಿದ ಕೋಮುದ್ವೇಷವೇ ಗಾಂಧಿಯವರ ಕೊಲೆಗೆ ಕಾರಣ ಎಂದು ಆಪಾದಿಸ ಲಾಗಿತ್ತು. ಆದರೆ, ಇದರ ಹಿಂದಿನ ಕಾರಣಗಳು ರಾಜಕೀಯ ಪ್ರೇರಿತವಾಗಿದ್ದವು ಎಂಬುದಕ್ಕೆ ಸಾಕ್ಷಿ ಗಳಿವೆ.
ದೇಶ ವಿಭಜನೆಯ ಸಂದರ್ಭದಲ್ಲಿ ಆರೆಸ್ಸೆಸ್ ಮತ್ತು ಅದರ ಸ್ವಯಂಸೇವಕರು ನಿರ್ವಹಿಸಿದ ಕಾರ್ಯವನ್ನು ಒರೆಗೆ ಹಚ್ಚದೆಯೇ, ಕಾಂಗ್ರೆಸ್ ಪಕ್ಷವು ಆರೆಸ್ಸೆಸ್‌ನ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ್ದು ಘೋರ ಅಪಚಾರ. ವಿಭಜನೆಯ ವೇಳೆ ಆರೆಸ್ಸೆಸ್ ಕಾರ್ಯಕರ್ತರು, ಪಾಕ್ ಸೇನೆಯ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇರಿಸಿದ್ದರು.
ಗಲಭೆಗಳು ಭುಗಿಲೆದ್ದಾಗ ಮತ್ತು ನೆಹರು ಸರಕಾರವು ಸಂಪೂರ್ಣ ಹಿನ್ನಡೆ ಅನುಭವಿಸುತ್ತಿದ್ದಾಗ ಸಂಘವು ಮುಂಚೂಣಿಗೆ ಬಂದು, ಪಾಕಿಸ್ತಾನದಿಂದ ಬಂದ ಲಕ್ಷಾಂತರ ಹಿಂದೂ ನಿರಾಶ್ರಿತರಿಗಾಗಿ 3 ಸಾವಿರಕ್ಕೂ ಹೆಚ್ಚು ಪರಿಹಾರ ಶಿಬಿರಗಳನ್ನು ಆಯೋಜಿಸಿತ್ತು ಎನ್ನುವುದು ಗಮನಾರ್ಹ.
ಪಾಕಿಸ್ತಾನ ಭಾಗದಲ್ಲಿ ನೆಲೆಸಿದ್ದ ಹಿಂದೂಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಹೊಣೆ ಹೊತ್ತಿದ್ದ ಆರೆಸ್ಸೆಸ್, ಏಕಕಾಲಕ್ಕೆ ಎರಡು ರಂಗಗಳಲ್ಲಿ ಹೋರಾಡುತ್ತಿತ್ತು ಎನ್ನಲಡ್ಡಿಯಿಲ್ಲ, ಒಂದು-ಯಾವುದೇ ಬೆಲೆ ತೆತ್ತಾದರೂ ಹಿಂದೂಗಳನ್ನು ಪಾಕಿಸ್ತಾನದಿಂದ ಸ್ಥಳಾಂತರಿಸುವುದು; ಇನ್ನೊಂದು- ಮುಸ್ಲಿಂ ಲೀಗ್‌ನವರು ದೇಶದೊಳಗೆ ಶುರುಹಚ್ಚಿಕೊಂಡಿದ್ದ ‘ಹಿಂದೂ-ವಿರೋಧಿ’ ಗಲಭೆಗಳ ವಿರುದ್ಧ ಹೋರಾಡುವುದು.
“ಅಲ್ಲಿ (ಪಾಕಿಸ್ತಾನದಲ್ಲಿ) ಒಬ್ಬನೇ ಒಬ್ಬ ಹಿಂದೂ ಇರುವವರೆಗೂ, ನೀವು ಅವನನ್ನು ಅಲ್ಲೇ ಬಿಟ್ಟು ಬರಬೇಡಿ" ಎಂದು ಆರೆಸ್ಸೆಸ್‌ನ ಸರಸಂಘಚಾಲಕರಾಗಿದ್ದ ‘ಗುರೂಜಿ’ ಗೋಲ್ವಲ್ಕರ್ ಅವರೇ ಹೇಳಿದ್ದರು. ಅವರ ಕರೆಯ ಮೇರೆಗೆ ಲಕ್ಷಾಂತರ ಸ್ವಯಂಸೇವಕರು ಸುಮಾರು 2 ಕೋಟಿ ಹಿಂದೂ ಗಳನ್ನು ಪಾಕಿಸ್ತಾನದಿಂದ ಸುರಕ್ಷಿತವಾಗಿ ಕರೆ ತಂದರು.
ಪಾಕಿಸ್ತಾನದ ಪಂಜಾಬ್, ಸಿಂಧ್, ಬಲೂಚಿಸ್ತಾನ್, ಲಾಹೋರ್ ಮತ್ತು ಕರಾಚಿ ಪ್ರದೇಶಗಳಲ್ಲಿ, ಗುರೂಜಿ ಮತ್ತು ಸಂಘದ ಹಿರಿಯ ಪದಾಧಿಕಾರಿಗಳು ಹಿಂದೂ ಸಮುದಾಯದ ನೈತಿಕ ಸ್ಥೈರ್ಯ ವನ್ನು ಹೆಚ್ಚಿಸಲು ಮತ್ತು ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಲು ದಣಿವರಿಯದೆ ಕೆಲಸ ಮಾಡು ತ್ತಿದ್ದರು.
ಆದಾಗ್ಯೂ, ಗಾಂಧೀಜಿ ಹತ್ಯೆಯ ಸಂದರ್ಭದಲ್ಲಿ ದಿಢೀರ್ ಪ್ರತಿಕ್ರಿಯೆಯಾಗಿ ಸರಕಾರವು 1948ರ ಫೆಬ್ರವರಿ 4ರಂದು ಆರೆಸ್ಸೆಸ್ ಅನ್ನು ನಿಷೇಧಿಸಿತು ಮತ್ತು ಗೋಲ್ವಲ್ಕರ್ ಅವರನ್ನು ಬಂಧಿಸಿತು. ವಿಪರ್ಯಾಸವೆಂದರೆ, ಈ ಬಂಧನವನ್ನು ಕುಖ್ಯಾತ ‘ಬೆಂಗಾಲ್ ಸ್ಟೇಟ್ ಪ್ರಿಸನರ್ಸ್ ಆಕ್ಟ್’ ಅಡಿಯಲ್ಲಿ ಮಾಡಲಾಯಿತು. ಈ ಕಾಯಿದೆಯನ್ನು ನೆಹರು ಅವರು ಸ್ವಾತಂತ್ರ್ಯಕ್ಕೆ ಮುಂಚೆಯೇ ‘ಕರಾಳ ಕಾನೂನು’ ಎಂದು ಖಂಡಿಸಿದ್ದರು!
6 ತಿಂಗಳ ನಂತರ, ಆರೆಸ್ಸೆಸ್‌ನ ಮುಖ್ಯಸ್ಥರನ್ನು ಬಿಡುಗಡೆ ಮಾಡಲಾಯಿತಾದರೂ, ಕೆಲ ಸಮಯದ ನಂತರ ಮತ್ತೆ ಬಂಧಿಸಲಾಯಿತು. ನಂತರ ಆರೆಸ್ಸೆಸ್‌ನ ಸ್ವಯಂಸೇವಕರಿಂದ ಸತ್ಯಾಗ್ರಹ ನಡೆದು, 77000ಕ್ಕೂ ಹೆಚ್ಚು ಮಂದಿ ಬಂಧನಕ್ಕೊಳಗಾದರು. ಆದರೆ, ಆರೆಸ್ಸೆಸ್ ವಿರುದ್ಧ ಯಾವುದೇ ಸಾಕ್ಷಿ-ಪುರಾವೆಯನ್ನು ಕಂಡುಹಿಡಿಯಲು ಆಗಿನ ಸರಕಾರಕ್ಕೆ ಸಾಧ್ಯವಾಗಲಿಲ್ಲ.
ಆಗಷ್ಟೇ ಸ್ವಾತಂತ್ರ್ಯವನ್ನು ಪಡೆದಿದ್ದ ಭಾರತದಲ್ಲಿ ಪ್ರಬಲವಾಗುತ್ತಿದ್ದ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾದಂಥ ಹಿಂದೂ ರಾಷ್ಟ್ರೀಯವಾದಿ ಸಂಘಟನೆಗಳನ್ನು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ದುರ್ಬಲಗೊಳಿಸುವುದು ಆಡಳಿತ ಪಕ್ಷದ ಉದ್ದೇಶವಾಗಿತ್ತು.
ನ್ಯಾಯಾಲಯದ ತೀರ್ಪು ಮತ್ತು ತನಿಖೆ ಮಹಾತ್ಮ ಗಾಂಧಿಯವರ ಹತ್ಯೆಯ ಪ್ರಕರಣದ ವಿಚಾರಣೆ ನಡೆದು, ನಾಥುರಾಂ ಗೋಡ್ಸೆ ಮತ್ತು ನಾರಾಯಣ ಆಪ್ಟೆ ಅವರಿಗೆ ಗಲ್ಲುಶಿಕ್ಷೆ ವಿಧಿಸಲಾಯಿತು. ಇನ್ನು ಕೆಲವರಿಗೆ ಜೀವಾವಧಿ ಶಿಕ್ಷೆಯಾಯಿತು. ಆದಾಗ್ಯೂ, ವಿಚಾರಣೆಯ ನಂತರ, ಗಾಂಧೀಜಿ ಹತ್ಯೆ ಯಲ್ಲಿ ಆರೆಸ್ಸೆಸ್ ನೇರವಾಗಿ ಭಾಗಿಯಾಗಿತ್ತು ಎಂಬುದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸ ಲಾಗಲಿಲ್ಲ.
ಆರೆಸ್ಸೆಸ್‌ನ ಮೇಲೆ ಹೇರಿದ್ದ ನಿಷೇಧವನ್ನು ಸರಕಾರ ಹಿಂತೆಗೆದುಕೊಂಡಿತು. 1966ರಲ್ಲಿ, ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸರಕಾರವು, ಸದರಿ ಹತ್ಯೆ ಪ್ರಕರಣ ವನ್ನು ಸಂಪೂರ್ಣವಾಗಿ ತನಿಖೆ ಮಾಡಲು ಮತ್ತೆ ಹೊಸ ನ್ಯಾಯಾಂಗ ಆಯೋಗವನ್ನು ಸ್ಥಾಪಿಸಿತು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಽಶ ನ್ಯಾ.ಜೆ.ಎಲ್. ಕಪೂರ್ ಅವರು ಇದರ ಮುಖ್ಯಸ್ಥ ರಾಗಿದ್ದರು.
ಆಯೋಗವು 101 ಸಾಕ್ಷಿಗಳನ್ನು ಮತ್ತು 407 ದಾಖಲೆಗಳನ್ನು ಪರಿಶೀಲಿಸಿತು; 1969ರಲ್ಲಿ ವರದಿ ಯನ್ನು ಪ್ರಕಟಿಸಲಾಯಿತು. ಅದರ ಪ್ರಕಾರ, ಆರೋಪಿಗಳು ಆರೆಸ್ಸೆಸ್‌ನ ಸದಸ್ಯರೆಂದು ಸಾಬೀತಾಗಿಲ್ಲ ಮತ್ತು ಈ ಸಂಘಟನೆಯು ಮಹಾತ್ಮ ಗಾಂಧಿಯವರ ಕೊಲೆಯಲ್ಲಿ ಪಾತ್ರ ವಹಿಸಿದೆ ಎಂಬುದಕ್ಕೆ ಪೂರಕ ಸಾಕ್ಷಿಗಳಿಲ್ಲ.
ಕಪೂರ್ ಆಯೋಗದ ಮುಂದೆ ಸಾಕ್ಷ್ಯ ನುಡಿದ ಪ್ರಮುಖರಲ್ಲಿ ಆರ್.ಎನ್.ಬ್ಯಾನರ್ಜಿ ಕೂಡ ಒಬ್ಬರು. ಇವರು ‘ಇಂಡಿಯನ್ ಸಿವಿಲ್ ಸರ್ವೀಸಸ್’ ಅಧಿಕಾರಿಯಾಗಿದ್ದರು. ಹತ್ಯೆಯ ಸಮಯದಲ್ಲಿ ಬ್ಯಾನರ್ಜಿಯವರು ಭಾರತ ಸರಕಾರದ ಗೃಹ ಕಾರ್ಯದರ್ಶಿಯಾಗಿದ್ದ ಕಾರಣ ಅವರ ಹೇಳಿಕೆ ನಿರ್ಣಾಯಕವಾಗಿತ್ತು. ಆದರೂ, ಗಾಂಧಿಯವರ ಹತ್ಯೆಯಲ್ಲಿ ಆರೆಸ್ಸೆಸ್ ಅನ್ನು ಎಳೆದು ತರುವವರಿಗೆ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದಿರುವುದು ವಿಷಾದನೀಯ.
ದಂಡಿಯಾಗಿ ಹೊಮ್ಮುವ ಆರೋಪಗಳು 2007-08ರ ಕಾಲಘಟ್ಟದಲ್ಲಿ, ದೇಶದ ಕೆಲವೆಡೆ ನಡೆದ ಸ್ಫೋಟ ಪ್ರಕರಣಗಳಲ್ಲಿ, ಹಿಂದೂ ರಾಷ್ಟ್ರೀಯವಾದಿ ಸಂಘಟನೆಗಳಿಗೆ ಸಂಬಂಧಿಸಿದ ಅಥವಾ ಸಂಬಂಧ ಹೊಂದಿದ್ದಾರೆ ಎನ್ನಲಾದ ಕೆಲವು ವ್ಯಕ್ತಿಗಳ ಹೆಸರು ಕೇಳಿಬಂದಾಗ, ಕಾಂಗ್ರೆಸ್ ಪಕ್ಷವು ‘ಹಿಂದೂ ಭಯೋತ್ಪಾದನೆ’ ಅಥವಾ ‘ಕೇಸರಿ ಭಯೋತ್ಪಾದನೆ’ ಎಂಬ ಪದವನ್ನು ಬಳಸಿ, ಸುಳ್ಳು ಆರೋಪಗಳ ಮೂಲಕ ಆರೆಸ್ಸೆಸ್ ಅನ್ನು ಗುರಿಯಾಗಿಸಲು ಯತ್ನಿಸಿತು.
‘ಹಿಂದೂ ಸರ್ವೋಚ್ಚತೆಯನ್ನು ಆರೆಸ್ಸೆಸ್ ಪ್ರತಿಪಾದಿಸುತ್ತದೆ ಮತ್ತು ಅಲ್ಪಸಂಖ್ಯಾತರ ಬಗ್ಗೆ, ನಿರ್ದಿಷ್ಟವಾಗಿ ಮುಸ್ಲಿಮರ ಬಗ್ಗೆ ಆರೆಸ್ಸೆಸ್ ಅಸಹಿಷ್ಣುತೆಯನ್ನು ಹರಡುತ್ತದೆ; ಈ ಸಿದ್ಧಾಂತವು ದ್ವೇಷ ಮತ್ತು ಹಿಂಸೆಗೆ ಪ್ರಚೋದನೆ ನೀಡುತ್ತದೆ’ ಎಂಬುದಾಗಿ ಆರೆಸ್ಸೆಸ್‌ನ ಟೀಕಾಕಾರರು ಆರೋಪಿಸುತ್ತಾರೆ.
ಪಾಕಿಸ್ತಾನದಂಥ ದೇಶಗಳು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಂಥ (ಯುಎನ್‌ಎಸ್‌ಸಿ) ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ, ಆರೆಸ್ಸೆಸ್‌ನಂಥ ಗುಂಪುಗಳನ್ನು ‘ಭಯೋತ್ಪಾದಕ ಸಂಘಟನೆ ಗಳು’ ಎಂಬುದಾಗಿ ಘೋಷಿಸಲು ಆಗ್ರಹಿಸಿ, ಜಾಗತಿಕ ಮಟ್ಟದಲ್ಲಿ ಈ ಸಂಘಟನೆಯ ಬಗ್ಗೆ ಮತ್ತು ಇದರ ಒತ್ತಾಸೆಯಿರುವ ಆಡಳಿತ ಪಕ್ಷದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಮೂಡಿಸಲು ಯತ್ನಿಸಿರು ವುದು ಮತ್ತು ಯತ್ನಿಸುತ್ತಿರುವುದು ಉಂಟು.
ಆರೆಸ್ಸೆಸ್ ಸಂಘಟನೆಯು ರಾಷ್ಟ್ರೀಯ ವಿಚಾರಗಳನ್ನು ಬೆಂಬಲಿಸುತ್ತದೆ ಎಂಬುದೇ ಈ ನಡೆಯ ಹಿಂದಿರುವ ಏಕೈಕ ಕಾರಣ; ಪಾಕಿಸ್ತಾನವು ಹಾಗೆ ನಿರ್ಧಾರಕ್ಕೆ ಬರಲು, ನಮ್ಮಲ್ಲಿನ ಎಡಚರರು, ಕಾಂಗ್ರೆಸ್‌ನ ‘ಇಕೋ ಸಿಸ್ಟಂ’ಗಳು ಹಬ್ಬಿಸುತ್ತಿರುವ ಸುಳ್ಳುಗಳೇ ಮೂಲಬಂಡವಾಳ ಆಗಿ ಬಿಟ್ಟಿದೆ ಯಷ್ಟೇ. ಅಲ್ಪಸಂಖ್ಯಾತರ ಮತಗಳ ಕ್ರೋಡೀಕರಣದ ಅಜೆಂಡಾ ಇಟ್ಟುಕೊಂಡು ಇಂಥ ಆರೋಪ ಗಳು ಹೊಮ್ಮುತ್ತಿವೆ ಎಂಬುದಷ್ಟೇ ವ್ಯಕ್ತಸಂಗತಿ!
ಸೇವೆ-ಸಂರಕ್ಷಣೆಯೇ ಪರಮಧರ್ಮ
ಪ್ರವಾಹ, ಭೂಕಂಪ, ಸುನಾಮಿಯಂಥ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಆರೆಸ್ಸೆಸ್‌ನ ಸ್ವಯಂಸೇವಕರು ತಕ್ಷಣವೇ ನೆರವಿಗೆ ಧಾವಿಸುತ್ತಾರೆ. ಈ ಸೇವಾಕಾರ್ಯಗಳನ್ನು ನಡೆಸಲು ಸಂಘದ ಅಧೀನದಲ್ಲಿ ಅನೇಕ ಸೇವಾಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಆರೆಸ್ಸೆಸ್ ಬಗ್ಗೆ ಅಷ್ಟೆಲ್ಲಾ ಆರೋಪ-ಪ್ರತ್ಯಾರೋಪ ಮಾಡುವವರು ಕೂಡ, ಆರೆಸ್ಸೆಸ್ ತನ್ನ ವಿವಿಧ ಅಂಗಸಂಸ್ಥೆಗಳ ಮೂಲಕ ನಡೆಸುವ ಸೇವಾಚಟುವಟಿಕೆಗಳನ್ನು ಅಲ್ಲಗಳೆಯುವುದಿಲ್ಲ.
ವ್ಯಕ್ತಿತ್ವ ನಿರ್ಮಾಣ, ಹಿಂದೂ ಸಂಘಟನೆಯ ಬಲವರ್ಧನೆ ಮತ್ತು ರಾಷ್ಟ್ರೀಯ ಜಾಗೃತಿಯನ್ನು ತನ್ನ ಪ್ರಮುಖ ಗುರಿಯಾಗಿಸಿಕೊಂಡಿರುವ ಆರೆಸ್ಸೆಸ್, ದಿನಗಳೆದಂತೆ ವಿವಿಧ ಅಂಗಸಂಸ್ಥೆಗಳ ದೊಡ್ಡ ಜಾಲವನ್ನೇ ನಿರ್ಮಿಸಿದೆ. ಇವು ಶಿಕ್ಷಣ, ಕೃಷಿ, ಧಾರ್ಮಿಕ, ರಾಜಕೀಯ, ವಿದ್ಯಾರ್ಥಿ ವಲಯ ಮುಂತಾದ ಬಹು ಆಯಾಮಗಳಲ್ಲಿ ಸಕ್ರಿಯವಾಗಿವೆ.
‘ಸಂಘ ಪರಿವಾರ’ ಎಂದು ಸ್ಥೂಲವಾಗಿ ಕರೆಯಲ್ಪಡುವ ಈ ಅಂಗಸಂಸ್ಥೆಗಳು, ಆರೆಸ್ಸೆಸ್‌ನ ಚಿಂತನೆ ಮತ್ತು ಧ್ಯೇಯೋದ್ದೇಶಗಳನ್ನು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಹೀಗೆ ಅನುಷ್ಠಾನಗೊಳಿಸುತ್ತವೆ. ಪ್ರಮುಖ ಅಂಗಸಂಸ್ಥೆಗಳು ಮತ್ತು ಚಟುವಟಿಕೆಗಳು ಆರೆಸ್ಸೆಸ್ ನೇರವಾಗಿ ಕೇವಲ ಸಾಂಸ್ಕೃತಿಕ ಮತ್ತು ವ್ಯಕ್ತಿತ್ವ ವಿಕಸನದ ಕಾರ್ಯಕ್ರಮಗಳನ್ನು ನಡೆಸುತ್ತದೆಯಾದರೂ, ಆರೆಸ್ಸೆಸ್‌ನ ಸ್ಫೂರ್ತಿ ಯಿಂದ ಹುಟ್ಟಿರುವ ಅಂಗಸಂಸ್ಥೆಗಳು ನಿರ್ದಿಷ್ಟ ಕ್ಷೇತ್ರಗಳಲ್ಲಿ ಗಣನೀಯ ಕಾರ್ಯ ಚಟುವಟಿಕೆ ಗಳನ್ನು ನಿರ್ವಹಿಸುತ್ತಿವೆ.
- ಭಾರತೀಯ ಮಜ್ದೂರ್ ಸಂಘ: ಇದು ಕಾರ್ಮಿಕರ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ಕೆಲಸ ಮಾಡುವ ರಾಷ್ಟ್ರೀಯ ಮಟ್ಟದ ಟ್ರೇಡ್ ಯೂನಿಯನ್. ಸ್ವದೇಶಿ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಆಧಾರದ ಮೇಲೆ ಕಾರ್ಮಿಕ ಚಳವಳಿಯನ್ನು ಕಟ್ಟುವುದಕ್ಕೆ ಇದು ಒತ್ತುನೀಡುತ್ತದೆ.
- ಭಾರತೀಯ ಕಿಸಾನ್ ಸಂಘ: ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಕೃಷಿ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡುವ ರೈತರ ಸಂಘಟನೆಯಿದು. ಇದರ ಸದಸ್ಯರು ರೈತರಿಗೆ ಅನುಕೂಲಕರ ಕಾರ್ಯನೀತಿಗಳು ಹೊಮ್ಮುವಂತಾಗುವುದಕ್ಕೆ ಮತ್ತು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ದಕ್ಕಿಸಿ ಕೊಡುವುದಕ್ಕಾಗಿ ಹೋರಾಡುತ್ತಾರೆ.
- ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು: ಇದು ದೇಶದ ಅತಿದೊಡ್ಡ ವಿದ್ಯಾರ್ಥಿ ಸಂಘಟನೆ ಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವನೆ, ಶಿಸ್ತು ಮತ್ತು ಸಾಮಾಜಿಕ ಬದ್ಧತೆ ಯನ್ನು ಬೆಳೆಸುವುದು, ಶೈಕ್ಷಣಿಕ ಸುಧಾರಣೆಗಳು ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಇದರ ಮುಖ್ಯಗುರಿ.
- ವಿದ್ಯಾಭಾರತಿ: ಇದು ಆರೆಸ್ಸೆಸ್-ಪ್ರೇರಿತ ಶಾಲೆಗಳ ಬೃಹತ್ ಜಾಲವನ್ನು ನಿರ್ವಹಿಸುತ್ತದೆ. ಸಾಂಪ್ರದಾಯಿಕ ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಆಧಾರವಾಗಿಟ್ಟುಕೊಂಡು, ಶೈಕ್ಷಣಿಕ ಮತ್ತು ನೈತಿಕ ಶಿಕ್ಷಣವನ್ನು ನೀಡುವುದು ಇದರ ಉದ್ದೇಶ.
- ವಿಶ್ವ ಹಿಂದೂ ಪರಿಷತ್ತು: ಹಿಂದೂ ಸಮಾಜದ ಸಂಘಟನೆ, ದೇವಾಲಯಗಳ ರಕ್ಷಣೆ ಮತ್ತು ಧಾರ್ಮಿಕ ಜಾಗೃತಿಗಾಗಿ ಇದು ಕೆಲಸ ಮಾಡುತ್ತದೆ. ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದು ಪ್ರತಿಪಾದಿಸುವುದು, ಸಾಮಾಜಿಕ ಸಾಮರಸ್ಯಕ್ಕಾಗಿ ಸಭೆಗಳನ್ನು ಆಯೋಜಿಸುವುದು ಇದರ ಮುಖ್ಯ ಕಾರ್ಯಗಳು.
- ಬಜರಂಗದಳ: ಇದು ಆರೆಸ್ಸೆಸ್‌ನ ಯುವವಿಭಾಗವಾಗಿದ್ದು, ಸಾಮಾನ್ಯವಾಗಿ ಹಿಂದೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿತಾಸಕ್ತಿಗಳನ್ನು ರಕ್ಷಿಸುವ ವಿಷಯದಲ್ಲಿ ಸಕ್ರಿಯವಾಗಿರುತ್ತದೆ.
- ರಾಷ್ಟ್ರ ಸೇವಿಕಾ ಸಮಿತಿ: ಮಹಿಳೆಯರಲ್ಲಿ ದೇಶಭಕ್ತಿ, ಸಂಸ್ಕೃತಿ ಮತ್ತು ಶಕ್ತಿಯನ್ನು ತುಂಬಲು ಸ್ಥಾಪಿಸಲಾದ ಸಂಘಟನೆಯಿದು.
- ಸೇವಾ ಭಾರತಿ: ವಿಪತ್ತು ಪರಿಹಾರ, ಬಡವರು ಮತ್ತು ಹಿಂದುಳಿದವರಿಗೆ ವೈದ್ಯಕೀಯ ಸೇವೆ, ಶಿಕ್ಷಣ, ವಸತಿ ಮತ್ತು ಪುನರ್ವಸತಿ ಕಾರ್ಯಗಳನ್ನು ಕೈಗೊಳ್ಳುವ ಬೃಹತ್ ಸೇವಾಸಂಸ್ಥೆಯಿದು.
ಪ್ರವಾಹ, ಭೂಕಂಪ ಇತ್ಯಾದಿ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಇದರ ಸ್ವಯಂಸೇವಕರು ಪರಿಹಾರ ಕಾರ್ಯದಲ್ಲಿ ಮುಂಚೂಣಿಯಲ್ಲಿರುತ್ತಾರೆ.
- ವನವಾಸಿ ಕಲ್ಯಾಣ ಆಶ್ರಮ: ಬುಡಕಟ್ಟು ಸಮುದಾಯದವರ ಶಿಕ್ಷಣ, ಆರೋಗ್ಯ, ಸರ್ವಾಂಗೀಣ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ರಕ್ಷಣೆಗೆ ಇದು ತನ್ನನ್ನು ಸಮರ್ಪಿಸಿಕೊಂಡಿದೆ.
- ಸಾಮಾಜಿಕ ಸಮರಸತಾ ಮಂಚ್: ಸಮಾಜದಲ್ಲಿನ ಜಾತಿಭೇದ ಮತ್ತು ಅಸಮಾನತೆಯನ್ನು ಹೋಗಲಾಡಿಸಲು, ಎಲ್ಲ ವರ್ಗದವರ ನಡುವೆ ಸಾಮಾಜಿಕ ಸಾಮರಸ್ಯವನ್ನು ಸ್ಥಾಪಿಸಲು ಇದು ಕೆಲಸ ಮಾಡುತ್ತದೆ.
ಭಾರತೀಯ ಜನತಾಪಕ್ಷ: ಇದು ಸಂಘ ಪರಿವಾರದ ರಾಜಕೀಯ ಮುಖವಾಗಿದ್ದು, ಚುನಾವಣಾ ಪ್ರಜಾಪ್ರಭುತ್ವದ ಮೂಲಕ ರಾಜಕೀಯ ಅಧಿಕಾರವನ್ನು ಗಳಿಸುವ ಮತ್ತು ರಾಷ್ಟ್ರೀಯ ಜೀವನದ ಮೇಲೆ ಪ್ರಭಾವ ಬೀರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ರಾಷ್ಟ್ರೀಯವಾದಿ ಮತ್ತು ಸಾಂಸ್ಕೃತಿಕ ನೀತಿಗಳನ್ನು ಜಾರಿಗೊಳಿಸುವ ಗುರಿ ಇದರದ್ದು.
ಕಾರ್ಯಗಳ ವ್ಯಾಪಕತೆ ಮತ್ತು ವಿಧಾನಗಳು ಮೇಲೆ ಉಲ್ಲೇಖಿಸಲಾಗಿರುವ ಅಂಗಸಂಸ್ಥೆಗಳು ಔಪಚಾರಿಕವಾಗಿ ಸ್ವತಂತ್ರ ಸಂಸ್ಥೆಗಳಾಗಿ ನೋಂದಾಯಿಸಲ್ಪಟ್ಟಿದ್ದರೂ, ಆರೆಸ್ಸೆಸ್ ನಿಂದ ಅವು ಮಾರ್ಗದರ್ಶನ ಮತ್ತು ಸ್ಪೂರ್ತಿಯನ್ನು ಪಡೆದಿವೆ. ವರ್ಷಕ್ಕೊಮ್ಮೆ ನಡೆಯುವ ‘ಸಮನ್ವಯ ಬೈಠಕ್’ ಮೂಲಕ ಈ ಎಲ್ಲ ಸಂಸ್ಥೆಗಳ ಚಟುವಟಿಕೆಗಳು, ಅನುಭವಗಳು ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ.
ಒಟ್ಟಾರೆಯಾಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಅಂಗಸಂಸ್ಥೆಗಳ ಮೂಲಕ ಭಾರತೀಯ ಸಮಾಜದ ಬಹುತೇಕ ಎಲ್ಲ ಕ್ಷೇತ್ರಗಳ ಮೇಲೆ ಪ್ರಭಾವ ಬೀರುವ ಮೂಲಕ, ‘ರಾಷ್ಟ್ರೀಯ ಪುನರ್ ನಿರ್ಮಾಣ’ದ ಆಂದೋಲನವನ್ನು ವ್ಯಾಪಕವಾಗಿ ಮುಂದುವರಿಸಿಕೊಂಡು ಹೋಗುತ್ತಿದೆ. ಶತಮಾನ ಪೂರೈಸಿರುವ ಆರೆಸ್ಸೆಸ್ ಅನ್ನು ರಾಜಕೀಯ ಕಾರಣಗಳಿಗಾಗಿ ವಿರೋಧಿಸುವವರು, ಅದರ ಕಾರ್ಯ ಶೈಲಿ, ಶಿಸ್ತುಬದ್ಧತೆ ಮತ್ತು ಸೇವಾ ಚಟುವಟಿಕೆಗಳನ್ನು ಒಮ್ಮೆ ಅಧ್ಯಯನ ಮಾಡುವುದು ಒಳಿತು.
(ಲೇಖಕರು ಹವ್ಯಾಸಿ ಬರಹಗಾರರು)