ಮೂರ್ತಿ ಪೂಜೆ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೆಲ ದಿನಗಳ ಹಿಂದೆ ಜೆಡಿಎಸ್ ನಾಯಕ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಉಭಯ ಪಕ್ಷಗಳ ಮಧ್ಯೆ ಸಮನ್ವಯ ಸಾಧಿಸುವ ಕುರಿತು ಉತ್ಸಾಹ ತೋರಿಸಿದ್ದಾರೆ.
‘ಸಾರ್, ಇದುವರೆಗೆ ಸಮನ್ವಯದ ಕೊರತೆಯಿಂದ ನಾವು ಒಗ್ಗೂಡಿ ಹೋರಾಟ ಮಾಡಲು ಸಾಧ್ಯ ವಾಗಿಲ್ಲ. ಆದರೆ ಇನ್ನು ಮುಂದೆ ಇಂತಹ ಸಮಸ್ಯೆ ಆಗಬಾರದು. ಹೀಗಾಗಿ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಪಕ್ಷಗಳು ಒಗ್ಗೂಡಿ ಹೋರಾಟ ನಡೆಸಬೇಕು. ಅಂದ ಹಾಗೆ ಇದುವರೆಗೆ ಆಗಿದ್ದೇನೋ ಆಯಿತು. ಅದನ್ನು ಮರೆತು ಬಿಡಿ’ ಅಂತ ಅವರು ಹೇಳಿದಾಗ ಕುಮಾರಸ್ವಾಮಿ ಪ್ರಸನ್ನರಾಗಿದ್ದಾರೆ.
ಹಾಗಂತಲೇ, ‘ಬ್ರದರ್, ನಮ್ಮಿಂದ ಯಾವತ್ತೂ ನಿಮಗೆ ಸಹಕಾರವಿದೆ. ಇವತ್ತಿನ ಸ್ಥಿತಿಯಲ್ಲಿ ನಾವು ಕಾಂಗ್ರೆಸ್ ಸರಕಾರದ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು. ಈ ವಿಷಯದಲ್ಲಿ ನಮ್ಮ ಮಧ್ಯೆ ಸಮನ್ವಯ ಸಾಧಿತವಾಗದಿದ್ದರೆ ಕಷ್ಟ’ ಎಂದಿದ್ದಾರೆ.
ಅಷ್ಟೇ ಅಲ್ಲ, ಮುಂದುವರಿದು ಮಾತನಾಡಿ, ‘ಬ್ರದರ್, ಬಿಜೆಪಿ-ಜೆಡಿಎಸ್ ಪಕ್ಷಗಳು ಒಗ್ಗೂಡಿ ಹೋರಾಡುವ ವಿಷಯದಲ್ಲಿ ಯಾರೇ ಅಪಸ್ವರ ಎತ್ತಿದರೂ ಅದನ್ನು ಲೆಕ್ಕಿಸಬೇಡಿ. ಬದಲಿಗೆ ನಿಮ್ಮ ತಂದೆ ಯಡಿಯೂರಪ್ಪನವರಂತೆ ದೂರದೃಷ್ಟಿ ಇರಲಿ. ಅವರ ದೂರದೃಷ್ಟಿ ಕರ್ನಾಟಕದ ರಾಜಕೀಯ ಸ್ವರೂಪವನ್ನು ಹೇಗೆ ಬದಲಿಸಿತು ಅಂತ ನಿಮಗೆ ಗೊತ್ತಿದೆ. ಹೀಗಾಗಿ ನಿಮ್ಮ ಹೆಜ್ಜೆಗಳು ನಿಮ್ಮ ತಂದೆ ಯವರಂತೆ ಇರಲಿ, ನಮ್ಮ ಜಿಲ್ಲೆಯಲ್ಲಿರುವ ಅದ್ಯಾರೋ ಒಬ್ಬ ವ್ಯಕ್ತಿಯ ಮಾತು ಉಭಯ ಪಕ್ಷಗಳ ಸಂಬಂಧಕ್ಕೆ ಹುಳಿ ಹಿಂಡಬಾರದು’ ಎಂದಿದ್ದಾರೆ.
ಇದನ್ನೂ ಓದಿ: R T Vittalmurthy Column: ರಾಹುಲ್ ಗಾಂಧಿ ಅವರಿಗೆ ಭಿನ್ನರ ಚಿಂತೆ!
ಹೀಗೆ ಕುಮಾರಸ್ವಾಮಿಯವರು ಆಡಿದ ಮಾತನ್ನು ತುಂಬ ಕಕ್ಕುಲತೆಯಿಂದ ಕೇಳಿಸಿಕೊಂಡ ವಿಜಯೇಂದ್ರ, ‘ಹಾಗೇ ಆಗಲಿ ಸಾರ್, ಇನ್ನು ಮುಂದೆ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಹೋರಾಡಲು ಯಾವ ಅಡ್ಡಿಯೂ ಆಗದಂತೆ ನೋಡಿಕೊಳ್ಳೋಣ. ಇದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ’ ಎಂದು ಹೇಳಿ ವಾಪಸ್ಸು ಬಂದಿದ್ದಾರೆ. ಅಂದ ಹಾಗೆ ವಿಜಯೇಂದ್ರ ಅವರು ಬಂದು ಉಭಯ ಪಕ್ಷಗಳ ಮಧ್ಯೆ ಇರಬೇಕಾದ ಸಮನ್ವಯತೆಯ ಬಗ್ಗೆ ಮಾತನಾಡಿ ಹೋದ ನಂತರ ಕುಮಾರಸ್ವಾಮಿ ಅವರೂ ನಿರಾಳರಾಗಿದ್ದಾರೆ.
ಯಾಕೆಂದರೆ ರಾಜ್ಯ ಕಾಂಗ್ರೆಸ್‌ನ ಗೊಂದಲಗಳನ್ನು ಎನ್‌ಕ್ಯಾಶ್ ಮಾಡಿಕೊಳ್ಳಬೇಕಾದ ಬಿಜೆಪಿ-ಜೆಡಿಎಸ್ ಪಕ್ಷಗಳು ಒಗ್ಗೂಡಿ ಹೋರಾಟ ನಡೆಸುವುದೇ ಅಪರೂಪವಾಗಿದೆ. ಅದು ಯಾವುದೇ ಹೋರಾಟವಿರಲಿ, ಒಟ್ಟಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪ್ರತ್ಯೇಕ ನೆಲೆಯಲ್ಲಿ ಹೋರಾಟ ಮಾಡುವು ದರಿಂದ ಅದರ ಪವರ್ರು ಕಡಿಮೆಯಾಗಿದೆ ಎಂಬುದು ಕುಮಾರಸ್ವಾಮಿಯವರ ಯೋಚನೆ.
ಇಂತಹ ಸಂದರ್ಭದ ವಿಜಯೇಂದ್ರ ಅವರು ಬಂದು ಒಗ್ಗಟ್ಟಿನ ಮಾತನಾಡಿದ್ದರಿಂದ ಕುಮಾರ ಸ್ವಾಮಿ ಅವರಿಗೆ ಸಹಜವಾಗಿಯೇ ಖುಷಿಯಾಗಿದೆ. ಈ ಖುಷಿಯ ದೆಹಲಿಗೆ ಹೋದ ಅವರಿಗೆ ಕೆಲವೇ ದಿನಗಳಲ್ಲಿ ಅಚ್ಚರಿಯಾಗುವ ಬೆಳವಣಿಗೆ ನಡೆದಿದೆ. ಅದೆಂದರೆ ರಾಜ್ಯ ಬಿಜೆಪಿ ತಮ್ಮ ಗಮನಕ್ಕೇ ತಾರದೆ ಕೆಆರ್‌ಎಸ್ ಚಲೋ ಹೋರಾಟ ಹಮ್ಮಿಕೊಂಡಿದ್ದು. ‘ಅರೇಸ್ಕಿ, ಮೊನ್ನೆ ತಾನೇ ಬಂದು ಉಭಯ ಪಕ್ಷಗಳ ಮಧ್ಯೆ ಒಗ್ಗಟ್ಟಿನ ಮಾತನಾಡಿ ಹೋದ ವಿಜಯೇಂದ್ರ ಇಷ್ಟು ಬೇಗ ಅದನ್ನು ಮರೆತುಬಿಟ್ಟರೇ?’ ಅಂತ ಸಿಟ್ಟೂ ಬಂದಿದೆ.
ಯಾವಾಗ ಕುಮಾರಸ್ವಾಮಿ ಸಿಟ್ಟು ಮಾಡಿಕೊಂಡರೋ? ಅದು ಕೆಲವರ ಮೂಲಕ ರಾಜ್ಯ ಬಿಜೆಪಿಯ ಉಸ್ತುವಾರಿ ರಾಧಾಮೋಹನ ದಾಸ್ ಅಗರ್ವಾಲ್ ಅವರ ಕಿವಿಗೆ ತಲುಪಿದೆ. ಹೀಗೆ ವಿಷಯ ಕಿವಿಗೆ ಬಿದ್ದಿದ್ದೇ ತಡ, ಗಡಬಡಿಸಿ ಮೇಲೆದ್ದ ರಾಧಾಮೋಹನದಾಸ್ ಅಗರ್ವಾಲ್ ಅವರು ಆ ಹೊತ್ತಿಗಾಗಲೇ ದಿಲ್ಲಿಯಲ್ಲಿದ್ದ ಕರ್ನಾಟಕದ ಇಬ್ಬರು ನಾಯಕರನ್ನು ಸಂಪರ್ಕಿಸಿದ್ದಾರೆ. ಅಷ್ಟೇ ಅಲ್ಲ, ‘ನೀವಿಬ್ಬರೂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಉಭಯ ಪಕ್ಷಗಳು ಒಗ್ಗೂಡಿ ಹೋರಾಡಬೇಕು ಎಂಬ ವಿಷಯದಲ್ಲಿ ನಾವು ಕ್ಲಿಯರ್ ಆಗಿದ್ದೇವೆ ಅಂತ ಕನ್ವಿನ್ಸು ಮಾಡಿ ಬನ್ನಿ’ ಅಂತ ಸೂಚಿಸಿದ್ದಾರೆ.
ಹೀಗೆ ರಾಧಾಮೋಹನದಾಸ್ ಅಗರ್ವಾಲ್ ಅವರು ಕೊಟ್ಟ ಸೂಚನೆಯ ಅನುಸಾರ ದಿಲ್ಲಿಯಲ್ಲಿರುವ ಕುಮಾರಸ್ವಾಮಿ ಅವರ ಮನೆಗೆ ಹೋದ ಈ ಇಬ್ಬರು ನಾಯಕರು, ‘ಕುಮಾರಣ್ಣ, ಸಣ್ಣ-ಪುಟ್ಟ ವಿಷಯ ಗಳ ಬಗ್ಗೆ ಬೇಸರ ಮಾಡಿಕೊಳ್ಳಬೇಡಿ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಗ್ಗೂಡಿ ಹೋರಾಡಬೇಕು ಎಂಬ ಬಗ್ಗೆ, ಉಭಯ ಪಕ್ಷಗಳ ನಡುವಣ ಮೈತ್ರಿ ಸಾಲಿಡ್ಡಾಗಿರಬೇಕು ಎಂಬ ಬಗ್ಗೆ ನಾವು ಕ್ಲಿಯರ್ ಆಗಿದ್ದೇವೆ’ ಎಂದಿದ್ದಾರೆ.
ಆದರೆ ಈ ನಾಯಕರಾಡಿದ ಮಾತನ್ನು ಕೇಳಿದ ಕುಮಾರಸ್ವಾಮಿ, ‘ಬ್ರದರ್ ನೀವು ಬಂದು ಹೇಳುತ್ತಿರುವುದೇನೋ ಸರಿ, ಆದರೆ ನಿಮ್ಮ ಪಕ್ಷದಲ್ಲಿ ನಡೆಯುತ್ತಿರುವುದೇ ಬೇರೆ. ಅದೇನೇ ಇರಲಿ, ಮೈತ್ರಿಯ ವಿಷಯದಲ್ಲಿ ನಮ್ಮಿಂದ ಯಾವುದೇ ಲೋಪ ಆಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಧಾನಿ ಮೋದಿಯವರು ಮತ್ತು ಗೃಹ ಸಚಿವರಾದ ಅಮಿತ್ ಶಾ ಅವರು ನಮ್ಮ ಬಗ್ಗೆ ತೋರಿಸುತ್ತಿರುವ ವಿಶ್ವಾಸ ಏನಿದೆ? ಅದಕ್ಕೆ ನಾವು ಗೌರವ ಕೊಡುತ್ತೇವೆ. ಆದರೆ ಕರ್ನಾಟಕದಲ್ಲಿ ನೀವು ಯಾವ ಹೆಜ್ಜೆ ಇಡುತ್ತೀರೋ ಅದು ನನಗೆ ಗೊತ್ತಿಲ್ಲ. ಹೀಗಾಗಿ ಈ ವಿಷಯದ ಬಗ್ಗೆ ನಾವು ಮಾತನಾಡುವುದರಲ್ಲಿ ಅರ್ಥವೇನೂ ಇಲ್ಲ’ ಎಂದಿದ್ದಾರೆ. ಕುಮಾರಸ್ವಾಮಿಯವರ ಮಾತಿನಲ್ಲಿದ್ದ ಅಸಮಾಧಾನವನ್ನು ಅರ್ಥ ಮಾಡಿಕೊಂಡ ಈ ನಾಯಕರು, ‘ಇಲ್ಲ, ಮುಂದಿನ ದಿನಗಳಲ್ಲಿ ನಾವು ನಿಮ್ಮ ಜತೆ ಗಟ್ಟಿಯಾಗಿ ನಿಲ್ಲುತ್ತೇವೆ’ ಅಂತ ಪ್ರಾಮಿಸ್ಸು ಮಾಡಿದ್ದಾರೆ.
ಅಂದ ಹಾಗೆ ಈ ನಾಯಕರು ಕೊಟ್ಟ ಪ್ರಾಮಿಸ್ಸು, ಬಿಡದಿ ಟೌನ್‌ಷಿಪ್ ವಿರುದ್ಧ ಜೆಡಿಎಸ್ ಆರಂಭಿಸಿರುವ ಬೆಂಗಳೂರು ಚಲೋ ಪಾದಯಾತ್ರೆಯಲ್ಲಿ ಈಡೇರಿದ್ದೇನೋ ನಿಜ. ಆದರೆ ಈ ಹೋರಾಟದ ವಿಷಯದಲ್ಲಿ ವಿಜಯೇಂದ್ರ ಮಾತ್ರ ನೆಪ ಮಾತ್ರಕ್ಕೂ ಹುಮ್ಮಸ್ಸು ತೋರಿಸಿಲ್ಲ.
ವಿಜಯೇಂದ್ರ ಅವರ ಪ್ರಾಬ್ಲಂ ಏನು?
ಅಂದ ಹಾಗೆ ಜೆಡಿಎಸ್ ಜತೆಗಿನ ಮೈತ್ರಿ ವಿಷಯದಲ್ಲಿ ಬಹಿರಂಗವಾಗಿ ಸಹಮತ ವ್ಯಕ್ತಪಡಿಸುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಳದಲ್ಲಿ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದೇಕೆ? ಬಿಜೆಪಿ ಮೂಲಗಳ ಪ್ರಕಾರ, ವರಿಷ್ಟರು ಹೇಳಿದ್ದಾರೆ ಎಂಬ ಕಾರಣಕ್ಕಾಗಿ ವಿಜಯೇಂದ್ರ ಅವರು ಜೆಡಿಎಸ್ ಜತೆಗಿನ ಮೈತ್ರಿಯ ಬಗ್ಗೆ ಪಾಸಿಟಿವ್ ಆಗಿ ಮಾತನಾಡುತ್ತಿದ್ದಾರೆ. ಆದರೆ ಪಕ್ಷದ ಕಾರ್ಯಕರ್ತರಿಂದ ಬರುತ್ತಿರುವ ಫೀಡ್ ಬ್ಯಾಕು ಅವರನ್ನು ವಿಚಲಿತರನ್ನಾಗಿಸುತ್ತಿದೆ.
‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವು ಜೆಡಿಎಸ್ ಜತೆ ಹೋದರೆ ಐವತ್ತೋ, ಅರವತ್ತು ಕ್ಷೇತ್ರಗಳನ್ನು ಅವರಿಗೆ ಬಿಟ್ಟು ಕೊಡಬೇಕಾಗುತ್ತದೆ. ಹೀಗೆ ಅಷ್ಟು ಸಂಖ್ಯೆಯ ಕ್ಷೇತ್ರಗಳನ್ನು ಬಿಟ್ಟು ಕೊಟ್ಟರೆ ಆ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆಯ ಗತಿ ಏನು? ನಾಳೆ ನಮಗೆ ಪಕ್ಷದ ಟಿಕೆಟ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ನಮ್ಮ ಪಕ್ಷದ ಸ್ಥಳೀಯ ನಾಯಕರು, ಕಾರ್ಯಕರ್ತರು ಕೆಲಸ ಮಾಡುತ್ತಿರುತ್ತಾರೆ.
ಹೀಗಿರುವಾಗ ಚುನಾವಣೆಯಲ್ಲಿ ಏಕಾಏಕಿಯಾಗಿ ನಮ್ಮ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ಅವರಿಗಾಗಿ ಕೆಲಸ ಮಾಡಿ ಎಂದರೆ ನಾವೇಕೆ ಮಾಡಬೇಕು? ಅಂದ ಹಾಗೆ ನಾಳೆ ಚುನಾವಣೆಯಲ್ಲಿ ಬಹುಮತಕ್ಕೆ ಕೊರತೆಯಾಗುತ್ತದೆ ಎಂದಾದರೆ ಜೆಡಿಎಸ್ ಜತೆ ಮೈತ್ರಿ ಸಾಧಿತವಾಗಲಿ. ಆದರೆ ಚುನಾವಣೆ ಯಲ್ಲಿ ಮೈತ್ರಿ ಬೇಡವೇ ಬೇಡ.
ಯಾಕೆಂದರೆ ಇದು ಒಂದು ಕಡೆಯಿಂದ ಸ್ಥಳೀಯ ಮಟ್ಟದಲ್ಲಿ ನಮ್ಮ ಪಕ್ಷದ ಹಿತಾಸಕ್ತಿಗೆ ಧಕ್ಕೆಯಾದರೆ ಮತ್ತೊಂದು ಕಡೆ ನಾಯಕತ್ವದ ವಿಷಯದಲ್ಲೂ ಸಮಸ್ಯೆ ಎದುರಾಗುತ್ತದೆ. ಯಾಕೆಂದರೆ ಚುನಾವಣೆ ಯಲ್ಲಿ ಜೆಡಿಎಸ್ ಪಕ್ಷಕ್ಕೆ ಐವತ್ತೋ, ಅರವತ್ತು ಸೀಟು ಬಿಟ್ಟು ಕೊಟ್ಟರೆ ಸ್ವಯಂ ಬಲದ ಮೇಲೆ ಅಧಿಕಾರಕ್ಕೆ ಬರುವ ಪ್ರಯತ್ನವನ್ನು ನಾವೇ ಕೈ ಬಿಟ್ಟಂತೆ ಆಗುತ್ತದೆ.
ಹೀಗೆ ನಾವು ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರದೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಹೋದರೆ ಅನಿವಾರ್ಯವಾಗಿ ಅವರ ಬೆಂಬಲಕ್ಕೆ ಕಾಯಬೇಕಾಗುತ್ತದೆ. ಆ ಸಂದರ್ಭದಲ್ಲಿ ಸಹಜವಾಗಿಯೇ ಸಿಎಂ ಹುದ್ದೆಯನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ನಮ್ಮ ವರಿಷ್ಠರು ನಿರ್ಧರಿಸುತ್ತಾರೆ. ಹೀಗಾಗಿ ಮೈತ್ರಿಯ ವಿಷಯದಲ್ಲಿ ವರಿಷ್ಠರ ಭಾವನೆ ಏನೇ ಇರಲಿ, ಆದರೆ ಈ ವಿಷಯದಲ್ಲಿ ನೀವು ಕ್ಲಿಯರ್ ಆಗಿರಿ’ ಎಂಬುದು ವಿಜಯೇಂದ್ರ ಆಪ್ತರ ಫೀಡ್ ಬ್ಯಾಕು.
ಹೀಗಾಗಿ ಕುಮಾರಸ್ವಾಮಿ ಅವರನ್ನು ಭೇಟಿಯಾದರೆ ಬಿಜೆಪಿ-ಜೆಡಿಎಸ್ ನಡುವಣ ಒಗ್ಗಟ್ಟಿನ ಬಗ್ಗೆ ಕಕ್ಕುಲತೆ ತೋರಿಸುವ ವಿಜಯೇಂದ್ರ, ಆಪ್ತರ ಫೀಡ್ ಬ್ಯಾಕು ನೆನಪಿಗೆ ಬಂದ ತಕ್ಷಣ ಮೈತ್ರಿಯ ವಿಷಯದಲ್ಲಿ ಉಲ್ಟಾ ಆಗುತ್ತಾರೆ’ ಎಂಬುದು ಬಿಜೆಪಿ ಮೂಲಗಳ ಮಾತು.
ಅರ್ಥಾತ್, ಇವತ್ತು ಬಿಜೆಪಿ-ಜೆಡಿಎಸ್ ನಡುವಣ ಮೈತ್ರಿ ಹಳಿ ತಪ್ಪಬಾರದು ಎಂದರೆ ವಿಜಯೇಂದ್ರ ಅವರು ಎದುರಿಸುತ್ತಿರುವ ಈ ರಿಯಲ್ ಪ್ರಾಬ್ಲಂ ಅನ್ನು ಮೊದಲು ಬಗೆಹರಿಸಬೇಕು. ಇಲ್ಲದಿದ್ದರೆ ಬಿಜೆಪಿ-ಜೆಡಿಎಸ್ ನಡುವಣ ಮೈತ್ರಿ ಹೀಗೆಯೇ ಕುಂಟುತ್ತಾ ಸಾಗುತ್ತದೆ ಎಂಬುದು ಅದರ ಮಾತು.
ಡಾ.ಮಹದೇವಪ್ಪ ಜಪಿಸಿದ ಮಂತ್ರ
ಇನ್ನು ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಭುಗಿಲೆದ್ದಿರುವ ಬಂಡಾಯವನ್ನು ತಡೆಗಟ್ಟಲು ಪಕ್ಷದ ಉಸ್ತುವಾರಿ ಸುರ್ಜೇವಾಲಾ ಹರಸಾಹಸ ಮಾಡುತ್ತಿದ್ದಾರಲ್ಲ? ಇದಕ್ಕಾಗಿ ಕರ್ನಾಟಕಕ್ಕೆ ಬಂದು ಎಂ.ಕೃಷ್ಣಪ್ಪ, ಜಯಚಂದ್ರ ಸೇರಿದಂತೆ ಹಲ ನಾಯಕರನ್ನು ಭೇಟಿ ಮಾಡಿದ್ದ ಅವರು ಎಲ್ಲರ ಬಳಿ, ‘ನಮ್ಮಿಂದ ತಪ್ಪಾಗಿದೆ. ಅದನ್ನು ಸರಿಪಡಿಸುತ್ತೇವೆ. ಈಗ ದಯವಿಟ್ಟು ಸಹಕರಿಸಿ’ ಅಂತ ಹೇಳಿದ್ದಾರೆ.
ಇಂತಹ ಮನವೊಲಿಕೆಯ ಭಾಗವಾಗಿಯೇ ಮೊನ್ನೆ ಹಿರಿಯ ನಾಯಕ ಡಾ. ಹೆಚ್.ಸಿ. ಮಹದೇವಪ್ಪ ಅವರನ್ನು ದಿಲ್ಲಿಗೆ ಬರಮಾಡಿಕೊಂಡಿದ್ದ ಸುರ್ಜೇವಾಲಾ ಅವರು ಯಥಾಪ್ರಕಾರ, ‘ನಮ್ಮಿಂದ ತಪ್ಪಾಗಿದೆ. ಅದನ್ನು ಸರಿಪಡಿಸಿಕೊಳ್ಳುತ್ತೇವೆ. ದಯವಿಟ್ಟು ಸಹಕರಿಸಿ’ ಎಂದಿದ್ದಾರೆ. ಹಾಗೆಯೇ ಮುಂದುವರಿದು, ‘ಕರ್ನಾಟಕದ ನೆಲೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ನಿಮ್ಮ ಪಾತ್ರ ದೊಡ್ಡದು ಅಂತ ನನಗೆ ಗೊತ್ತು. 2028ರಲ್ಲೂ ಪಕ್ಷ ಗೆಲ್ಲಲು ನಿಮ್ಮ ಸಹಕಾರ ಬೇಕು’ ಅಂತ ಹೇಳಿದ್ದಾರೆ.
ಅವರಾಡಿದ ಮಾತನ್ನು ಕೇಳಿದ ಮಹದೇವಪ್ಪ ಅವರು, ‘ಸಾರ್, ಮಂತ್ರಿಗಿರಿ ಸಿಗಲಿಲ್ಲ ಅಂತ ನಾನೇನೂ ಬೇಸರ ಮಾಡಿಕೊಂಡಿಲ್ಲ. ಆದರೆ ಸಂಪುಟ ವಿಸ್ತರಣೆ ಮಾಡುವಾಗ ನೀವು ಪಕ್ಷದ ಕೆಲಸ ಮಾಡಿ. ಈ ಬಾರಿ ಮಂತ್ರಿಗಿರಿ ಬೇಡ ಎಂದಿದ್ದರೆ ನಾನು ಸಂತೋಷವಾಗಿ ಒಪ್ಪಿಕೊಳ್ಳುತ್ತಿದ್ದೆ. ಎಲ್ಲಕ್ಕಿಂತ ಮುಖ್ಯವಾಗಿ ನಾನು ಸಂವಿಧಾನದ ರಕ್ಷಣೆಗಾಗಿ ಹೋರಾಡುವವನೇ ಹೊರತು ಮಂತ್ರಿಗಿರಿಗಾಗಿ ಅಲ್ಲ’ ಎಂದಿದ್ದಾರೆ.
ಆಗೆಲ್ಲ ತುಂಬ ಮೃದುವಾದ ಸುರ್ಜೇವಾಲಾ, ‘ನನಗೆ ಗೊತ್ತು ಮಹದೇವಪ್ಪಾಜೀ. ಮಂತ್ರಿಗಿರಿಗಾಗಿ ಹಲವರು ದಿಲ್ಲಿಯ ಬೀಡು ಬಿಟ್ಟಿದ್ದರೆ ನೀವು ಈ ಕಡೆ ತಪ್ಪಿಯೂ ಸುಳಿಯಲಿಲ್ಲ. ನಿಮ್ಮಂತಹ ನಾಯಕರ ಸೇವೆಯನ್ನು ಪಕ್ಷ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮರ್ಪಕವಾಗಿ ಬಳಸಿಕೊಳ್ಳುತ್ತದೆ ಅಂತ ಮಾತ್ರ ಹೇಳಬ’ ಎಂದಿದ್ದಾರೆ.
ಆಗೆಲ್ಲ ಮಹದೇವಪ್ಪ ಅವರು, ‘ಐ ನೋ ಸಾರ್, ಈ ಹಿಂದೆಯೇ ನೀವು ಮಹತ್ವದ ಹುದ್ದೆಯನ್ನು ಅಲಂಕರಿಸುವಂತೆ ಆಫರ್ ನೀಡಿದ್ದಿರಿ. ಆದರೆ ಮಂತ್ರಿಯಾಗಿರುವಾಗ ಆ ಜವಾಬ್ದಾರಿ ಹೊರಲು ನಾನು ತಯಾರಿರಲಿಲ್ಲ’ ಅಂತ ಹೇಳಿ ವಾಪಸ್ಸು ಬಂದಿದ್ದಾರೆ.