ಒಂದೊಳ್ಳೆ ಮಾತು
ಕಥಾಸರಿತ್ಸಾಗರ’ದ ಬೇತಾಳ ಪಂಚ ವಿಂಶತಿಯ ಏಳನೆಯ ಕಥೆಯು ಆತ್ಮ ಸಾಕ್ಷಿ ಮತ್ತು ಪ್ರಾಯಶ್ಚಿತ್ತದ ಸತ್ಯವನ್ನು ಬಿಂಬಿಸುತ್ತದೆ. ಚಂದ್ರಪ್ರಭ ಮಹಾರಾಜನು ಆಳುತ್ತಿದ್ದ ತಾಮ್ರಲಿಪ್ತಿ ನಗರದಲ್ಲಿ ದೇವಸ್ವಾಮಿ ಎಂಬ ಧರ್ಮಿಷ್ಠ ವಿದ್ವಾಂಸನಿದ್ದನು. ಆತನಿಗೆ ಹರಿದತ್ತ ನೆಂಬ ಮಗನಿದ್ದ. ಹರಿದತ್ತನು ಸದ್ಗುಣ ಸಂಪನ್ನ ನಾಗಿದ್ದರೂ, ಒಮ್ಮೆ ದುಷ್ಟರ ಸಹವಾಸಕ್ಕೆ ಬಿದ್ದು ಜೂಜಾಟದ ಚಟಕ್ಕೆ ಅಂಟಿಕೊಂಡನು.
ಜೂಜಿನಲ್ಲಿ ಸರ್ವಸ್ವವನ್ನೂ ಕಳೆದುಕೊಂಡು ಭಾರಿ ಸಾಲದ ಸುಳಿಗೆ ಸಿಲುಕಿದಾಗ, ಸಾಲಗಾರರ ಕಾಟ ತಾಳಲಾರದೆ ಮನೆಯನ್ನೂ ತೊರೆದನು. ಹಸಿವು, ಅವಮಾನ ಮತ್ತು ಹತಾಶೆಯ ಕಡುಗತ್ತಲೆ ಯಲ್ಲಿ ಆತನ ವಿವೇಕ ಸಂಪೂರ್ಣವಾಗಿ ಮಂಕಾಯಿತು. ಅನಿವಾರ್ಯವಾಗಿ ಆತ ತನ್ನ ಜೀವನದ ಮೊದಲ ಬಾರಿಗೆ ನಗರದ ಶ್ರೀಮಂತ ಶ್ರೇಷ್ಠಿಯೊಬ್ಬನ ಮನೆಯಲ್ಲಿ ಕನ್ನ ಕೊರೆದು ಕಳ್ಳತನ ಮಾಡಲು ನಿರ್ಧರಿಸಿದನು.
ಅರ್ಧರಾತ್ರಿಯಲ್ಲಿ ಯಾರಿಗೂ ತಿಳಿಯದಂತೆ ಶ್ರೀಮಂತನ ಮನೆಯ ಗೋಡೆಯನ್ನು ಕೊರೆದು ಒಳನುಗ್ಗಿದ. ಅಲ್ಲಿ ನಿದ್ರಿಸುತ್ತಿದ್ದ ಶ್ರೇಷ್ಠಿಯ ಕನ್ಯೆ ಮದನಮಂಜರಿಯ ಮೈಮೇಲಿದ್ದ ರತ್ನಾಭರಣ ಗಳನ್ನು ಕದಿಯಲು ಮುಂದಾದನು. ಆದರೆ ಅದೇ ಕ್ಷಣದಲ್ಲಿ ಆ ಯುವತಿ ಎಚ್ಚರಗೊಂಡು ಕಳ್ಳನೆಂದು ಚೀರಾಡಲು ಆರಂಭಿಸಿದಳು. ಭಯ ಭೀತನಾದ ಹರಿದತ್ತನು ಆಕೆಯ ಬಾಯಿ ಮುಚ್ಚಿಸಲು ಯತ್ನಿಸುವ ಭರದಲ್ಲಿ, ಆತನ ಕೈಯಲ್ಲಿದ್ದ ಕಠಾರಿಯು ಅಚಾನಕ್ಕಾಗಿ ಆಕೆಯ ಕುತ್ತಿಗೆಗೆ ತಾಗಿ ಆಕೆ ರಕ್ತದ ಮಡುವಿನಲ್ಲಿ ಪ್ರಾಣಬಿಟ್ಟಳು!
ಇದನ್ನೂ ಓದಿ: Roopa Gururaj Column: ವಿಕ್ರಮ ಬೇತಾಳ: ಯಶಕೇತುವಿನ ಸ್ನೇಹ ಮತ್ತು ಪ್ರಜ್ಞಾಸಾಗರನ ಕರ್ತವ್ಯ ಪ್ರಜ್ಞೆ
ತಾನು ಕೇವಲ ಧನಕ್ಕಾಗಿ ಬಂದಿದ್ದೆ, ಆದರೆ ಕೈಯಾರೆ ಅಮಾಯಕ ಜೀವವನ್ನೇ ಬಲಿ ತೆಗೆದು ಕೊಂಡೆನಲ್ಲ ಎಂಬ ಆಘಾತ ಹರಿದತ್ತನನ್ನು ಬೆಚ್ಚಿ ಬೀಳಿಸಿತು. ಆ ಕಡುಗತ್ತಲೆಯಲ್ಲಿ ಆತ ಕದ್ದ ಒಡವೆಗಳ ಸಮೇತ ಯಾರ ಕಣ್ಣಿಗೂ ಬೀಳದೆ ತಪ್ಪಿಸಿ ಕೊಂಡು ಓಡಿಹೋಗಬಹುದಿತ್ತು. ಆದರೆ ಆತನ ಅಂತರಂಗದ ಆತ್ಮಸಾಕ್ಷಿ ಚೀರಿತು. ತಪ್ಪು ಮುಚ್ಚಿಟ್ಟು ಬದುಕುವ ಈ ಹೇಡಿ ಬದುಕು ನನಗೇಕೆ? ನನ್ನ ಕೈಯಿಂದ ಮಹಾಪಾಪ ನಡೆದು ಹೋಗಿದೆ. ಇದಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸು ವುದೇ ಧರ್ಮ ಎಂದು ತೀರ್ಮಾನಿಸಿದ.
ಮಾರನೆಯ ದಿನ ಬೆಳಿಗ್ಗೆ ಆತ ಕದ್ದ ಆಭರಣಗಳು ಮತ್ತು ರಕ್ತಸಿಕ್ತ ಕಠಾರಿಯೊಂದಿಗೆ ನೇರವಾಗಿ ರಾಜ ಚಂದ್ರಪ್ರಭನ ನ್ಯಾಯಸಭೆಗೆ ಹೋದನು. ಎಲ್ಲರ ಎದುರು ನಿಂತು, ಹೇ ರಾಜಾ, ನಾನೇ ಆ ಕಳ್ಳ, ನಾನೇ ಆ ಯುವತಿಯ ಪ್ರಾಣ ತೆಗೆದ ಹಂತಕ. ಯಾರೂ ನನ್ನನ್ನು ಹಿಡಿದಿಲ್ಲ; ನನ್ನ ಆತ್ಮಸಾಕ್ಷಿಯೇ ನನ್ನನ್ನು ಇಲ್ಲಿಗೆ ಎಳೆದು ತಂದಿದೆ. ನನಗೆ ಕಠಿಣ ಮರಣದಂಡನೆ ವಿಽಸಿ ಪ್ರಾಯಶ್ಚಿತ್ತ ಕರುಣಿಸು ಎಂದು ಕೈಮುಗಿದು ಬೇಡಿದನು.
ಕಥೆಯನ್ನು ಮುಗಿಸಿದ ಬೇತಾಳನು ವಿಕ್ರಮಾದಿತ್ಯನಿಗೆ ಕಠಿಣ ಪ್ರಶ್ನೆಯೊಡ್ಡುತ್ತಾನೆ: ಹೇ ರಾಜಾ, ಆ ಯುವಕ ಹಂತಕನಾಗಿದ್ದರೂ, ಆತನ ಈ ನಿರ್ಧಾರವನ್ನು ಧರ್ಮ ಎನ್ನಬೇಕೋ ಅಥವಾ ಮೂರ್ಖ ತನ ಎನ್ನಬೇಕೋ? ಆತನಿಗೆ ಯಾವ ಗತಿ ಪ್ರಾಪ್ತವಾಗುತ್ತದೆ? ವಿಕ್ರಮಾದಿತ್ಯನು, ಆತ ಮಾಡಿದ ಕೃತ್ಯ ಅಪರಾಧವೇ ಸರಿ. ಆದರೆ ತಾನು ತಪ್ಪಿಸಿಕೊಂಡು ಓಡಿಹೋಗಲು ನೂರು ದಾರಿಗಳಿದ್ದರೂ, ಶಿಕ್ಷೆಯ ಭಯವನ್ನು ಮೀರಿ ತನ್ನ ತಪ್ಪನ್ನು ತಾನೇ ನಿವೇದಿಸಿ ಕೊಂಡು ನ್ಯಾಯದ ಪೀಠಕ್ಕೆ ತಲೆಕೊಟ್ಟ ಆತನ ಸತ್ಯನಿಷ್ಠೆ ಮತ್ತು ಪ್ರಾಯಶ್ಚಿತ್ತದ ಭಾವ ಮಹತ್ತರ ವಾದುದು.
ಶರೀರಕ್ಕೆ ಮರಣದಂಡನೆಯ ಶಿಕ್ಷೆ ಯಾದರೂ, ಆತನ ಆತ್ಮವು ಎಲ್ಲ ಪಾಪಗಳಿಂದ ಮುಕ್ತವಾಗಿ ಸದ್ಗತಿಯನ್ನು ಪಡೆಯುತ್ತದೆ. ತಪ್ಪನ್ನು ಮುಚ್ಚಿಟ್ಟು ಬದುಕುವ ಕಪಟ ಜೀವನ ಕ್ಕಿಂತ, ಸತ್ಯವನ್ನು ಒಪ್ಪಿಕೊಂಡು ಸಾಯುವ ಸಾವು ಸಾವಿರ ಪಟ್ಟು ಪವಿತ್ರವಾದುದು ಎಂದ. ನಾವು ಬದುಕಿನಲ್ಲಿ ತಪ್ಪುಗಳನ್ನು ಮಾಡಿದಾಗ, ಬೇರೆಯವರ ದೃಷ್ಟಿಯಿಂದ ಸುಲಭವಾಗಿ ನುಣುಚಿಕೊಳ್ಳಬಹುದು. ಆದರೆ ನಮ್ಮದೇ ಆತ್ಮಸಾಕ್ಷಿಯ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಮಾಡಿದ ತಪ್ಪನ್ನು ಸಮರ್ಥಿಸಿಕೊಳ್ಳುವುದು ಅಥವಾ ಮುಚ್ಚಿಡಲು ಮತ್ತಷ್ಟು ಸುಳ್ಳುಗಳನ್ನು ಹೆಣೆಯುವುದು ನಿಧಾನವಾಗಿ ನಮ್ಮ ವ್ಯಕ್ತಿತ್ವವನ್ನೇ ಹಾಳು ಮಾಡಲು ಪ್ರಾರಂಭ ಮಾಡುತ್ತದೆ. ತಪ್ಪನ್ನು ಮಾಡುವುದು ಸಹಜ ಸ್ವಭಾವ. ಆದರೆ ಅದನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುವುದು, ತಪ್ಪನ್ನು ಒಪ್ಪಿಕೊಳ್ಳಲು ಧೈರ್ಯ ಬೇಕು, ಪ್ರಾಮಾಣಿಕತೆ ಬೇಕು. ಒಮ್ಮೆ ಇದನ್ನು ಅಭ್ಯಾಸ ಮಾಡಿಕೊಂಡರೆ ನಾವು ನಮ್ಮ ಕಣ್ಣಲ್ಲಿ ಚಿಕ್ಕವರಾ ಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮವರ ಮುಂದೆ ಆತ್ಮ ಗೌರವದಿಂದ ಬದುಕುವ ಧೈರ್ಯವಿರುತ್ತದೆ.