ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ವಿಕ್ರಮ ಬೇತಾಳ 20: ಸೋಮದತ್ತನ ಉಪಕಾರ ಮರೆತ ಅಕ್ಕಸಾಲಿಗ

ಬದುಕಿನಲ್ಲಿ ನಮಗೆ ಕಷ್ಟ ಬಂದಾಗ ಅನೇಕರು ನೆರವಾಗಿರುತ್ತಾರೆ. ನಮ್ಮ ಯಶಸ್ಸಿನಲ್ಲಿ ಅನೇಕರ ಸಹಾಯ ಹಸ್ತವಿರುತ್ತದೆ. ನಾವು ಅದನ್ನೆಲ್ಲ ಮರೆತು ನಮ್ಮ ಸಮಯ ಬಂದಾಗ ಸ್ವಾರ್ಥಿಗಳಾಗಿ ಬಿಟ್ಟರೆ ಪ್ರಾಣಿಗಳಿಗಿಂತಲೂ ಹೀನ ಕುಲದವ ರಾಗುತ್ತೇವೆ. ಬದುಕಿನಲ್ಲಿ ಮಾಡಿದ ಸಹಾಯ ನಡೆದು ಬಂದ ದಾರಿ ಇವೆಲ್ಲವನ್ನೂ ಮರೆತವರು ಯಾವ ಏಳಿಗೆಯನ್ನೂ ಕಾಣಲು ಸಾಧ್ಯವಿಲ್ಲ.

ಒಂದೊಳ್ಳೆ ಮಾತು

ವಾರಣಾಸಿಯ ಬಡ ಬ್ರಾಹ್ಮಣ ಯುವಕ ಸೋಮದತ್ತನು ಹೊಟ್ಟೆಪಾಡಿಗಾಗಿ ಕಾಡಿನಲ್ಲಿ ಅಲೆದಾಡು ತ್ತಿದ್ದಾಗ, ಪಾಳು ಬಿದ್ದ ಆಳವಾದ ಬಾವಿಯೊಂದರೊಳಗಿಂದ ದೀನ ಧ್ವನಿಗಳು ಕೇಳಿ ಬಂದವು. ಇಣುಕಿ ನೋಡಿದಾಗ, ಆ ಆಳದ ಹಳ್ಳದಲ್ಲಿ ಒಂದು ಸಿಂಹ, ಒಂದು ಹಾವು, ಒಂದು ಕೋತಿ ಮತ್ತು ಒಬ್ಬ ಅಕ್ಕಸಾಲಿಗ ಬಿದ್ದು ಒದ್ದಾಡುತ್ತಿದ್ದರು.

ಯುವಕನಿಗೆ ಕರುಣೆ ಉಕ್ಕಿ, ಬಳ್ಳಿಯೊಂದನ್ನು ಕೆಳಗೆ ಬಿಟ್ಟು ಒಂದೊಂದಾಗಿ ಎಲ್ಲರನ್ನೂ ಮೇಲೆತ್ತಲು ಮುಂದಾದನು. ಮೊದಲು ಮೇಲಕ್ಕೆ ಬಂದ ಕೋತಿ, ಉಪಕಾರಿಯಾದ ಗೆಳೆಯನೇ, ನಿನಗೆ ಕೃತಜ್ಞತೆ. ನಿನಗೆ ಹಸಿವಾದಾಗ ನನ್ನ ಬಳಿ ಬಾ, ರುಚಿಯಾದ ಕಾಡು ಹಣ್ಣುಗಳನ್ನು ಕೊಡುತ್ತೇನೆ ಎಂದಿತು. ಎರಡನೆ ಯದಾಗಿ ಬಂದ ಸಿಂಹವು, ನನ್ನ ಪ್ರಾಣ ಉಳಿಸಿದ ನಿನಗೆ ನನ್ನ ನಮನ. ನಿನಗೆ ಆಪತ್ತು ಬಂದಾಗ ನಾನು ನೆರವಾಗುತ್ತೇನೆ ಎಂದು ಮಾತು ಕೊಟ್ಟಿತು.

ಮೂರನೆಯದಾಗಿ ಬಂದ ಸರ್ಪವು, ನನ್ನನ್ನು ಯಾರೂ ನಂಬುವುದಿಲ್ಲ, ಆದರೆ ನೀನು ನನ್ನ ಜೀವ ಉಳಿಸಿದೆ; ನಿನಗೆ ನನ್ನ ಅಗತ್ಯ ಬಿದ್ದಾಗ ನೆನೆದುಕೋ, ಧಾವಿಸಿ ಬರುತ್ತೇನೆ ಎಂದಿತು. ಆದರೆ ಆ ಮೂರೂ ಪ್ರಾಣಿಗಳು ಹೋಗುವ ಮುನ್ನ ಸೋಮದತ್ತನಿಗೆ ಒಂದು ಗಂಭೀರ ಎಚ್ಚರಿಕೆ ನೀಡಿದವು: ಸ್ನೇಹಿತನೇ, ಕೆಳಗಿರುವ ಆ ಮನುಷ್ಯನನ್ನು ಮಾತ್ರ ಮೇಲಕ್ಕೆತ್ತಬೇಡ!

ಇದನ್ನೂ ಓದಿ: Roopa Gururaj Column: ವಿಕ್ರಮ ಬೇತಾಳ 19: ರಾಜ ಪ್ರತಾಪ ಮುಕುಟನ ಜೀವ ಉಳಿಸಲು ಬಲಿಪೀಠಕ್ಕೇರಿದ ಬಾಲಕ

ಮನುಷ್ಯನ ಜಾತಿ ಅತ್ಯಂತ ಕೃತಘ್ನವಾದದ್ದು; ಆತನಿಗೆ ಉಪಕಾರ ಮಾಡಿದರೆ ಪ್ರತಿಯಾಗಿ ನಿನಗೇ ಆಪತ್ತು ತರುತ್ತಾನೆ. ಆದರೆ ಸೋಮದತ್ತನಿಗೆ ಮನುಷ್ಯನ ಮೇಲಿನ ಕರುಣೆ ಕಡಿಮೆಯಾಗಲಿಲ್ಲ. ಸ್ವಜಾತಿಯ ಮನುಷ್ಯನನ್ನು ಅಲ್ಲಿಯೇ ಬಿಡುವುದು ಹೇಗೆ? ಎಂದು ಆ ಅಕ್ಕಸಾಲಿಗನನ್ನೂ ಮೇಲಕ್ಕೆತ್ತಿದನು. ಆತ ಕೈಮುಗಿದು, ನಾನು ನಗರದ ಅಕ್ಕಸಾಲಿಗ. ನೀನು ನಗರಕ್ಕೆ ಬಂದಾಗ ನನ್ನ ಮನೆಗೆ ಬಾ, ನಿನಗೆ ಬೇಕಾದ ಒಡವೆಗಳನ್ನು ಉಚಿತವಾಗಿ ಮಾಡಿ ಕೊಟ್ಟು ಉಪಕಾರ ತೀರಿಸುತ್ತೇನೆ ಎಂದು ಹೇಳಿ ಹೊರಟನು.

ಕೆಲವು ದಿನಗಳ ನಂತರ ಸಂಕಷ್ಟದಲ್ಲಿದ್ದ ಸೋಮದತ್ತನು ಕಾಡಿಗೆ ಹೋದಾಗ, ಕೋತಿ ಆತನಿಗೆ ಸಿಹಿಯಾದ ಹಣ್ಣುಗಳನ್ನು ನೀಡಿ ಹಸಿವು ತಣಿಸಿತು. ಸಿಂಹವು ತಾನು ಕೊಂದ ರಾಜಕುಮಾರನೊಬ್ಬನ ಚಿನ್ನಾಭರಣ ಗಳನ್ನು ತಂದು, ಗೆಳೆಯನೇ, ಇದನ್ನು ಮಾರಿ ನಿನ್ನ ಬಡತನ ಕಳೆದುಕೋ ಎಂದು ಕೃತಜ್ಞತೆಯಿಂದ ಸಮರ್ಪಿ ಸಿತು. ಆ ಅಪಾರ ಒಡವೆಗಳನ್ನು ಕರಗಿಸಿ ಹಣ ಪಡೆಯಲು ಸೋಮದತ್ತನು ತಾನು ಕಾಪಾಡಿದ್ದ ಅದೇ ಅಕ್ಕಸಾಲಿಗನ ಬಳಿಗೆ ಹೋದನು. ಆದರೆ ಆ ಒಡವೆಗಳನ್ನು ಕಂಡ ಅಕ್ಕಸಾಲಿಗನ ಮನಸ್ಸಿನಲ್ಲಿ ಕ್ರೂರ ಸ್ವಾರ್ಥ ನರ್ತಿಸಿತು!

ಈ ಒಡವೆಗಳು ಕಳೆದುಹೋದ ರಾಜಕುಮಾರನದ್ದು. ಇವನ್ನು ರಾಜನಿಗೆ ಒಪ್ಪಿಸಿ, ಕೊಂದವನು ಇವನೇ ಎಂದು ಹಿಡಿದುಕೊಟ್ಟರೆ ನನಗೆ ಭಾರಿ ಬಹುಮಾನ ಸಿಗುತ್ತದೆ ಎಂದು ತೀರ್ಮಾನಿಸಿದ. ತನಗೆ ಮರುಜೀವ ನೀಡಿದ ಉಪಕಾರಿಯೆಂಬ ಕನಿಷ್ಠ ಕೃತಜ್ಞತೆಯೂ ಇಲ್ಲದೆ, ಆತ ನೇರವಾಗಿ ಹೋಗಿ ರಾಜಭಟರಿಗೆ ಹಿಡಿದುಕೊಟ್ಟನು!

ರಾಜನು ಆ ಅಮಾಯಕ ಸೋಮದತ್ತನನ್ನು ಸೆರೆಮನೆಗೆ ತಳ್ಳಿ, ಮರಣದಂಡನೆ ವಿಧಿಸಿದನು. ಸಾವಿನ ದವಡೆಯಲ್ಲಿದ್ದಾಗ ಸೋಮದತ್ತನಿಗೆ ಹಾವಿನ ನೆನಪಾಯಿತು. ತಕ್ಷಣವೇ ಪ್ರತ್ಯಕ್ಷವಾದ ಹಾವು ರಾಜಕುಮಾರಿಗೆ ಕಚ್ಚಿ ವಿಷವೇರಿಸಿತು; ನಂತರ ಕನಸಿನಲ್ಲಿ ರಾಜನಿಗೆ, ಸೆರೆಮನೆಯಲ್ಲಿರುವ ಸೋಮದತ್ತನ ಕೈಸ್ಪರ್ಶವಾದರೆ ಮಾತ್ರ ನನ್ನ ವಿಷ ಇಳಿಯುತ್ತದೆ ಎಂದು ಹೇಳಿತು.

ಸೋಮದತ್ತನು ಬಂದು ರಾಜಕುಮಾರಿಯನ್ನು ಬದುಕಿಸಿದಾಗ, ರಾಜನಿಗೆ ಸತ್ಯದ ಅರಿವಾಯಿತು. ಸತ್ಯ ತಿಳಿದ ರಾಜನು ಕೃತಘ್ನ ಅಕ್ಕಸಾಲಿಗನನ್ನು ಶೂಲಕ್ಕೇರಿಸಿ, ಸೋಮದತ್ತನಿಗೆ ಮಂತ್ರಿಯ ಪದವಿ ನೀಡಿ ಗೌರವಿಸಿದನು. ಕಥೆಯನ್ನು ಮುಗಿಸಿದ ಬೇತಾಳನು ವಿಕ್ರಮಾದಿತ್ಯನಿಗೆ ಪ್ರಶ್ನೆಯೊಡ್ಡುತ್ತಾನೆ: ಹೇ ರಾಜಾ, ಈ ಘಟನೆಯಲ್ಲಿ ಅತ್ಯಂತ ಹೀನವಾದದ್ದು ಯಾವುದು ಮತ್ತು ಕೃತಜ್ಞತೆಯ ನಿಜವಾದ ಅರ್ಥವೇನು? ವಿಕ್ರಮಾದಿತ್ಯನು ಉತ್ತರಿಸುತ್ತಾನೆ: ಬುದ್ಧಿಜೀವಿಯಾದ ಮನುಷ್ಯನು ತೋರುವ ಕೃತಘ್ನತೆಯೇ ಸೃಷ್ಟಿಯ ಅತ್ಯಂತ ಘೋರ ಪಾಪ! ಕಾಡಿನ ಕ್ರೂರ ಮೃಗಗಳೂ ತಮಗೆ ಸಿಕ್ಕ ನೆರವನ್ನು ಜೀವಮಾನ ವಿಡೀ ನೆನಪಿಟ್ಟುಕೊಂಡು ಮರಳಿಸಿದವು. ಆದರೆ ಜ್ಞಾನ, ಮಾತು ಮತ್ತು ವಿವೇಕವಿದ್ದ ಮನುಷ್ಯ ಮಾತ್ರ ಕೇವಲ ಚಿನ್ನದ ಆಸೆಗೆ ಬಿದ್ದು, ಪ್ರಾಣದಾತನನ್ನೇ ಬಲಿಕೊಡಲು ಮುಂದಾದನು. ಕೃತಜ್ಞತೆ ಇಲ್ಲದ ಮನುಷ್ಯನು ಕಾಡುಪ್ರಾಣಿಗಳಿಗಿಂತಲೂ ಕಡೆಯಾದವನು.

ಬದುಕಿನಲ್ಲಿ ನಮಗೆ ಕಷ್ಟ ಬಂದಾಗ ಅನೇಕರು ನೆರವಾಗಿರುತ್ತಾರೆ. ನಮ್ಮ ಯಶಸ್ಸಿನಲ್ಲಿ ಅನೇಕರ ಸಹಾಯ ಹಸ್ತವಿರುತ್ತದೆ. ನಾವು ಅದನ್ನೆಲ್ಲ ಮರೆತು ನಮ್ಮ ಸಮಯ ಬಂದಾಗ ಸ್ವಾರ್ಥಿಗಳಾಗಿ ಬಿಟ್ಟರೆ ಪ್ರಾಣಿಗಳಿಗಿಂತಲೂ ಹೀನ ಕುಲದವ ರಾಗುತ್ತೇವೆ. ಬದುಕಿನಲ್ಲಿ ಮಾಡಿದ ಸಹಾಯ ನಡೆದು ಬಂದ ದಾರಿ ಇವೆಲ್ಲವನ್ನೂ ಮರೆತವರು ಯಾವ ಏಳಿಗೆಯನ್ನೂ ಕಾಣಲು ಸಾಧ್ಯವಿಲ್ಲ.

ರೂಪಾ ಗುರುರಾಜ್

View all posts by this author