ಒಂದೊಳ್ಳೆ ಮಾತು
‘ಕಥಾಸರಿತ್ಸಾಗರ’ದ ಬೇತಾಳ ಪಂಚ ವಿಂಶತಿಯ ಮೂರನೆಯ ಕಥೆಯು ಸ್ವಾಮಿನಿಷ್ಠೆ, ಕೃತಜ್ಞತೆ ಮತ್ತು ನಾಯಕತ್ವದ ಪರಮೋಚ್ಛ ಮೌಲ್ಯಗಳನ್ನು ಒರೆಗೆ ಹಚ್ಚುವ ಒಂದು ಅಪ್ರತಿಮ ಪ್ರಸಂಗ. ಶೋಭಾವತಿ ನಗರದ ರಾಜ ರೂಪಸೇನನ ಆಸ್ಥಾನಕ್ಕೆ ವೀರವರನೆಂಬ ಬ್ರಾಹ್ಮಣ ಯೋಧನು ತನ್ನ ಪತ್ನಿ, ಮಗ ಮತ್ತು ಮಗಳೊಂದಿಗೆ ಆಶ್ರಯ ಅರಸಿ ಬರುತ್ತಾನೆ. ಆತ ಪ್ರತಿ ದಿನಕ್ಕೆ ಐನೂರು ಚಿನ್ನದ ನಾಣ್ಯಗಳ ಭಾರಿ ವೇತನವನ್ನು ಬೇಡುತ್ತಾನೆ.
ರಾಜನು ಕುತೂಹಲದಿಂದ ಆತನಿಗೆ ಆ ವೇತನವನ್ನು ನಿಗದಿಪಡಿಸುತ್ತಾನೆ. ಆದರೆ ವೀರವರನು ತನಗೆ ಸಿಗುವ ಧನದಲ್ಲಿ ಬಹುಪಾಲನ್ನು ದೇವತಾ ಪೂಜೆ, ಬಡಬಗ್ಗರಿಗೆ ದಾನ ಮತ್ತು ಸತ್ಕಾರ್ಯ ಗಳಿಗೇ ವಿನಿಯೋಗಿಸಿ, ಅತ್ಯಂತ ಸರಳವಾಗಿ ಬದುಕುತ್ತಾ ಹಗಲಿರುಳು ಅರಮನೆಯ ರಕ್ಷಣೆಗೆ ಬೆನ್ಗಾವಲಾಗಿ ನಿಲ್ಲುತ್ತಾನೆ.
ಒಂದು ಕಡುಗತ್ತಲೆಯ ಮಳೆಯ ರಾತ್ರಿಯಲ್ಲಿ ಅರಮನೆಯ ಹೊರಗೆ ಹೆಣ್ಣಿನ ತೀವ್ರ ರೋದನ ಕೇಳಿಸುತ್ತದೆ. ರಾಜನ ಆಜ್ಞೆಯಂತೆ ವೀರವರನು ಆ ಶಬ್ದವನ್ನು ಹಿಂಬಾಲಿಸಿ ಸ್ಮಶಾನಕ್ಕೆ ಹೋಗುತ್ತಾನೆ. ರಾಜನೂ ಕುತೂಹಲದಿಂದ ಮರೆಯಲ್ಲಿ ಆತನನ್ನು ಹಿಂಬಾಲಿಸುತ್ತಾನೆ. ಅಲ್ಲಿ ಅಳುತ್ತಿದ್ದ ಸ್ತ್ರೀ ಬೇರಾರೂ ಅಲ್ಲ; ರಾಜನ ಆಯುಷ್ಯ ಮುಗಿದು ಆತ ಸಾಯಲಿದ್ದಾನೆಂದು ಗೋಳಾಡುತ್ತಿದ್ದ ರಾಜಲಕ್ಷ್ಮಿ!
ಇದನ್ನೂ ಓದಿ: Roopa Gururaj Column: ವಿಕ್ರಮ ಬೇತಾಳ: ಮಂದಾರವತಿ ಮತ್ತು ಮೂವರು ಪ್ರೇಮಿಗಳ ಕತೆ
ರಾಜನ ಜೀವ ಉಳಿಯಲು ಚಂಡಿಕಾ ದೇವಿಗೆ ವೀರವರನ ಮಗ ಶಕ್ತಿಧರನನ್ನೇ ಬಲಿ ನೀಡ ಬೇಕೆಂದು ಆಕೆ ಶರತ್ತು ವಿಧಿಸುತ್ತಾಳೆ. ವೀರವರನು ಕ್ಷಣವೂ ಯೋಚಿಸದೆ ಮನೆಗೆ ಬಂದು ವಿಷಯ ತಿಳಿಸಿದಾಗ, ಪತ್ನಿ ಮತ್ತು ಮಗ ರಾಜನ ಋಣ ತೀರಿಸಲು ಸಂತೋಷದಿಂದ ಸಮ್ಮತಿಸುತ್ತಾರೆ. ಮಗನು ತಾನಾ ಗಿಯೇ ದೇವಿಯ ಬಲಿಪೀಠಕ್ಕೆ ತಲೆಕೊಡುತ್ತಾನೆ; ಅಣ್ಣನ ಅಗಲಿಕೆಯನ್ನು ತಾಳಲಾರದೆ ಪುಟ್ಟ ತಂಗಿ ಪ್ರಾಣಬಿಡುತ್ತಾಳೆ; ಮಕ್ಕಳ ಸಾವಿನ ಆಘಾತದಲ್ಲಿ ತಾಯಿಯೂ ಪ್ರಾಣತ್ಯಾಗ ಮಾಡುತ್ತಾಳೆ.
ಎಲ್ಲರನ್ನೂ ಕಳೆದುಕೊಂಡ ವೀರವರನು, ರಾಜನನ್ನು ಕಾಪಾಡುವ ನನ್ನ ಕರ್ತವ್ಯ ಮುಗಿಯಿತು ಎಂದು ತನ್ನ ತಲೆಯನ್ನೂ ಕತ್ತರಿಸಿಕೊಂಡು ದೇವಿಗೆ ಅರ್ಪಿಸಿಕೊಳ್ಳುತ್ತಾನೆ. ಮರೆಯಲ್ಲಿ ನಿಂತು ಇದನ್ನೆಲ್ಲ ನೋಡಿದ ರಾಜನಿಗೆ ತೀವ್ರ ಆಘಾತವಾಗುತ್ತದೆ. ನನ್ನ ನಶ್ವರ ಪ್ರಾಣಕ್ಕಾಗಿ ಇಡೀ ಕುಟುಂಬ ವನ್ನೇ ಬಲಿಪಡೆದ ಈ ಪಾಪಿ ರಾಜ್ಯ ನನಗೆ ಬೇಡ ಎಂದು ತಾನೂ ತನ್ನ ಕತ್ತನ್ನು ಕೊಯ್ದುಕೊಳ್ಳಲು ಮುಂದಾಗುತ್ತಾನೆ. ಆಗ ಪ್ರತ್ಯಕ್ಷಳಾದ ಚಂಡಿಕಾ ದೇವಿಯು ರಾಜನ ಉದಾತ್ತತೆಗೆ ಮೆಚ್ಚಿ, ವೀರವರನ ಇಡೀ ಕುಟುಂಬಕ್ಕೆ ಮರುಜೀವವನ್ನು ಕರುಣಿಸುತ್ತಾಳೆ.
ಕಥೆಯನ್ನು ಮುಗಿಸಿದ ಬೇತಾಳನು ವಿಕ್ರಮಾದಿತ್ಯನಿಗೆ ಪ್ರಶ್ನೆಯೊಡ್ಡುತ್ತಾನೆ: ಹೇ ರಾಜಾ, ಈ ಇಡೀ ಘಟನೆಯಲ್ಲಿ ಯಾರ ತ್ಯಾಗ ಅತ್ಯಂತ ಶ್ರೇಷ್ಠವಾದುದು? ವಿಕ್ರಮಾದಿತ್ಯನು ಯಾವುದೇ ಗೊಂದಲ ವಿಲ್ಲದೆ ಉತ್ತರಿಸುತ್ತಾನೆ: ರಾಜನ ತ್ಯಾಗವೇ ಎಲ್ಲಕ್ಕಿಂತ ಶ್ರೇಷ್ಠವಾದುದು! ವೀರವರ ಮತ್ತು ಅವನ ಕುಟುಂಬದವರು ತಿಂದ ಉಪ್ಪಿನ ಋಣ ತೀರಿಸಲು, ಸೇವಕ ಧರ್ಮವನ್ನು ಪಾಲಿಸಲು ಪ್ರಾಣ ನೀಡಿದರು. ಆದರೆ, ತನಗಾಗಿ ಪ್ರಾಣ ಕೊಟ್ಟ ಸಾಮಾನ್ಯ ಸೇವಕನ ಕುಟುಂಬದ ಋಣದ ಮುಂದೆ ರಾಜಪದವಿ, ಸಂಪತ್ತು ಮತ್ತು ಸ್ವಂತ ಜೀವವನ್ನೇ ಹುಲ್ಲಿನಂತೆ ಬಿಸಾಡಲು ಮುಂದಾದ ರಾಜನ ತ್ಯಾಗಕ್ಕೆ ಜಗತ್ತಿನಲ್ಲಿ ಸಾಟಿಯಿಲ್ಲ.
ಅಧಿಕಾರದಲ್ಲಿದ್ದೂ ತಲೆಬಾಗುವ ಆತನ ಕೃತಜ್ಞತಾ ಭಾವವೇ ಪರಮೋಚ್ಛ. ಜೀವನದಲ್ಲಿ ನಮ್ಮ ಕೆಳಗೆ ದುಡಿಯುವವರು, ನಮ್ಮ ಕುಟುಂಬದ ಸದಸ್ಯರು ಅಥವಾ ಆಪ್ತರು ನಮಗಾಗಿ ನಿಸ್ವಾರ್ಥವಾಗಿ ತ್ಯಾಗ ಮಾಡುತ್ತಿರಬಹುದು. ಅವರ ಆ ನಿಷ್ಠೆಯನ್ನು ನಾವು ಹಕ್ಕು ಎನ್ನುವ ಭ್ರಮೆಯಲ್ಲಿರುತ್ತೇವೆ. ಇನ್ನೊಬ್ಬರು ನಮ್ಮ ಮೇಲೆ ಇಟ್ಟಿರುವ ನಂಬಿಕೆ ಮತ್ತು ತೋರಿದ ಕೃತಜ್ಞತೆಗೆ ನಾವು ಎಷ್ಟರಮಟ್ಟಿಗೆ ಯೋಗ್ಯರಾಗಿ ನಿಲ್ಲುತ್ತೇವೆ ಎಂಬುದರ ನಮ್ಮ ನಿಜವಾದ ಯೋಗ್ಯತೆ ನಿರ್ಧಾರವಾಗುತ್ತದೆ.
ನಾಯಕತ್ವ ಎಂದರೆ ಕೇವಲ ಆದೇಶ ನೀಡುವುದಲ್ಲ; ನಮ್ಮನ್ನು ನಂಬಿದವರ ನೋವಿಗೆ ಮಿಡಿಯುವುದು ಮತ್ತು ಅವರ ಹಿತಕ್ಕಾಗಿ ಸ್ವಂತ ಸುಖವನ್ನು ಬಿಟ್ಟುಕೊಡುವ ಹೃದಯವಂತಿಕೆ ಯನ್ನು ಹೊಂದಿರುವುದು. ಸೇವಕನ ನಿಷ್ಠೆ ಎಷ್ಟು ದೊಡ್ಡದೋ, ಆ ನಿಷ್ಠೆಯನ್ನು ಗುರುತಿಸಿ ಗೌರವಿಸುವ ನಾಯಕನ ಉದಾತ್ತತೆ ಅದಕ್ಕಿಂತಲೂ ಹಿರಿದಾದುದು. ಅಧಿಕಾರಕ್ಕೆ ಮಾನವೀಯತೆಯ ಸ್ಪರ್ಶ ಸಿಕ್ಕಾಗ ಮಾತ್ರ ಬದುಕಿಗೊಂದು ದಿವ್ಯ ಘನತೆ ಪ್ರಾಪ್ತವಾಗುತ್ತದೆ.