ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ವಿಶ್ವಾಮಿತ್ರನ ಪ್ರತಿಸೃಷ್ಟಿ, ತ್ರಿಶಂಕು ಸ್ವರ್ಗ

ವಿಶ್ವಾಮಿತ್ರರು ಸೃಷ್ಟಿಸಿದ ಹೊಸ ನಕ್ಷತ್ರಗಳು ಮತ್ತು ಲೋಕವು ಹಾಗೆಯೇ ಉಳಿಯುವಂತಾ ಯಿತು. ತ್ರಿಶಂಕುವು ಭೂಮಿ ಮತ್ತು ಸ್ವರ್ಗದ ನಡುವೆ ಇರುವ ಆ ಹೊಸ ಲೋಕದ ಇರಬೇಕೆಂದು ನಿರ್ಧಾರವಾಯಿತು. ಅಂದಿನಿಂದ ತ್ರಿಶಂಕು ಆ ಎರಡೂ ಲೋಕಗಳ ನಡುವೆ ತೂಗುತ್ತಾ ಉಳಿದನು.

ಒಂದೊಳ್ಳೆ ಮಾತು

ಪುರಾಣ ಕಾಲದಲ್ಲಿ ಅಯೋಧ್ಯೆಯನ್ನು ಆಳುತ್ತಿದ್ದ ಸೂರ್ಯವಂಶದ ರಾಜ ತ್ರಿಶಂಕು. ಸತ್ಯವಂತನೂ, ಧರ್ಮಿಷ್ಠನೂ ಆಗಿದ್ದ ಈತನಿಗೆ ಒಂದು ವಿಚಿತ್ರವಾದ ಆಸೆ ಇತ್ತು. ಅದು- ತನ್ನ ಈ ಮನುಷ್ಯ ದೇಹದೊಂದಿಗೇ ಸ್ವರ್ಗವನ್ನು ಪ್ರವೇಶಿಸಬೇಕು ಎಂಬುದು. ಪ್ರಕೃತಿಯ ನಿಯಮದ ಪ್ರಕಾರ, ಮನುಷ್ಯನು ಮರಣ ಹೊಂದಿದ ನಂತರ ಆತ್ಮವಷ್ಟೇ ಸ್ವರ್ಗಕ್ಕೆ ಹೋಗಲು ಸಾಧ್ಯ.

ತ್ರಿಶಂಕು ತನ್ನ ಕುಲಗುರುಗಳಾದ ವಸಿಷ್ಠರ ಬಳಿ ಹೋಗಿ ತನ್ನ ಇಚ್ಛೆಯನ್ನು ತಿಳಿಸಿದನು. ಆದರೆ ವಸಿಷ್ಠರು, “ಇದು ಅಧರ್ಮ ಮತ್ತು ಪ್ರಕೃತಿ ವಿರುದ್ಧ" ಎಂದು ಹೇಳಿ ಅದನ್ನು ನಿರಾಕರಿಸಿದರು. ಛಲ ಬಿಡದ ತ್ರಿಶಂಕು ವಸಿಷ್ಠರ ಪುತ್ರರ ಬಳಿ ಹೋದಾಗ, ಅವರು ಕೋಪಗೊಂಡು ಅವನಿಗೆ ಚಂಡಾಲನಾಗುವಂತೆ ಶಾಪ ನೀಡಿದರು. ರಾಜಕುಮಾರನಾಗಿದ್ದ ತ್ರಿಶಂಕು ಕಪ್ಪನೆಯ ರೂಪ ತಾಳಿ, ಭೀಕರವಾಗಿ ಕಾಣತೊಡಗಿದನು. ಅಸಹಾಯಕನಾದ ತ್ರಿಶಂಕು ಆಗ ದಕ್ಷಿಣಕ್ಕೆ ತೆರಳಿ ಮಹಾತಪಸ್ವಿ ವಿಶ್ವಾಮಿತ್ರರನ್ನು ಭೇಟಿ ಮಾಡಿದನು. ಆಗತಾನೆ ವಸಿಷ್ಠರ ಮೇಲೆ ಸೇಡು ತೀರಿಸಿಕೊಳ್ಳಲು ಅವಕಾಶ ಹುಡುಕುತ್ತಿದ್ದ ವಿಶ್ವಾಮಿತ್ರ ರಿಗೆ, ವಸಿಷ್ಠರು ನಿರಾಕರಿಸಿದ ಕೆಲಸವನ್ನು ತಾವು ಮಾಡಿ ತೋರಿಸಬೇಕೆಂಬ ಛಲ ಉಂಟಾಯಿತು.

“ರಾಜನೇ ಹೆದರಬೇಡ, ನನ್ನ ತಪೋಶಕ್ತಿಯಿಂದ ನಿನ್ನನ್ನು ಸಶರೀರನಾಗಿ ಸ್ವರ್ಗಕ್ಕೆ ಕಳುಹಿಸುತ್ತೇನೆ" ಎಂದು ವಿಶ್ವಾಮಿತ್ರರು ಅಭಯ ನೀಡಿದರು. ವಿಶ್ವಾಮಿತ್ರರು ಒಂದು ಬೃಹತ್ ಯಾಗವನ್ನು ಆಯೋಜಿಸಿದರು. ತಮ್ಮ ಇಡೀ ಜೀವನದ ತಪಸ್ಸಿನ ಪುಣ್ಯಫಲ ವನ್ನು ಧಾರೆ ಎರೆದು ತ್ರಿಶಂಕುವನ್ನು ಆಕಾಶಕ್ಕೆ ಹಾರಿಸಿದರು.

ಇದನ್ನೂ ಓದಿ: Roopa Gururaj Column: ಸಾವಿತ್ರಿ ಬುದ್ಧಿವಂತಿಕೆಯಿಂದ, ಪತಿಯ ಮೃತ್ಯುವನ್ನೇ ಗೆದ್ದ ಕಥೆ

ವಿಶ್ವಾಮಿತ್ರರ ಶಕ್ತಿಯಿಂದ ತ್ರಿಶಂಕು ಮನುಷ್ಯ ದೇಹದ ಸ್ವರ್ಗದ ಬಾಗಿಲನ್ನು ತಲುಪಿದನು. ಆದರೆ, ದೇವತೆಗಳ ರಾಜನಾದ ಇಂದ್ರನು ಇದನ್ನು ಕಂಡು ದಂಗಾದನು. ಗುರುಗಳ ಶಾಪಕ್ಕೆ ಒಳಗಾದವನಿಗೆ ಮತ್ತು ಮನುಷ್ಯ ದೇಹ ಹೊಂದಿದವನಿಗೆ ಇಲ್ಲಿ ಜಾಗವಿಲ್ಲ ಎಂದು ಗರ್ಜಿಸಿ, ತ್ರಿಶಂಕುವನ್ನು ಜೋರಾಗಿ ಕೆಳಕ್ಕೆ ತಳ್ಳಿದನು.

ತ್ರಿಶಂಕು ಆಕಾಶದಿಂದ ತಲೆಕೆಳಗಾಗಿ ಭೂಮಿಗೆ ಬೀಳತೊಡಗಿದನು. ಅವನು ಗಾಬರಿಯಿಂದ “ವಿಶ್ವಾಮಿತ್ರರೇ, ನನ್ನನ್ನು ಕಾಪಾಡಿ!" ಎಂದು ಕಿರಿಚಿದನು. ಭೂಮಿಗೆ ಬೀಳುತ್ತಿದ್ದ ತ್ರಿಶಂಕು ವನ್ನು ಕಂಡು ಕೋಪೋದ್ರಿಕ್ತರಾದ ವಿಶ್ವಾಮಿತ್ರರು, “ತಿಷ್ಠ!" (ಅ ನಿಲ್ಲು) ಎಂದು ಆಜ್ಞಾಪಿಸಿದರು.

ತ್ರಿಶಂಕು ಆಕಾಶದ ಮಧ್ಯದ ತೂಗುತ್ತಾ ನಿಂತನು. ಆಗ ವಿಶ್ವಾಮಿತ್ರರು ತಮ್ಮ ಕಣ್ಣುಗಳನ್ನು ಕೆಂಪಗಾಗಿಸಿ ದೇವತೆಗಳಿಗೇ ಸವಾಲು ಹಾಕಿದರು. “ಇಂದ್ರನು ನಿನ್ನನ್ನು ಬರಮಾಡಿ ಕೊಳ್ಳದಿದ್ದರೆ ಏನಂತೆ? ನಾನೇ ನಿನಗಾಗಿ ಹೊಸ ಸ್ವರ್ಗವನ್ನೇ ನಿರ್ಮಿಸುತ್ತೇನೆ" ಎಂದು ಘೋಷಿಸಿದರು.

ಅವರು ಇಂದ್ರನ ಸ್ವರ್ಗಕ್ಕೆ ಪರ್ಯಾಯವಾಗಿ ದಕ್ಷಿಣ ದಿಕ್ಕಿನಲ್ಲಿ ಹೊಸ ನಕ್ಷತ್ರ ಮಂಡಲ ವನ್ನೇ ಸೃಷ್ಟಿಸಿದರು. ದೇವತೆಗಳಿಗೆ ಬದಲಾಗಿ ತಮ್ಮದೇ ಆದ ಹೊಸ ದೇವತೆಗಳ ಗುಂಪನ್ನು ಸೃಷ್ಟಿಸಲು ಪ್ರಾರಂಭಿಸಿದರು. ಅಂತಿಮವಾಗಿ ಇಂದ್ರನ ಪದವಿಯನ್ನೇ ಕಿತ್ತುಕೊಳ್ಳಲು ’ಇನ್ನೊಬ್ಬ ಇಂದ್ರ’ನನ್ನು ನಿರ್ಮಿಸಲು ಮಂತ್ರಗಳನ್ನು ಪಠಿಸಿದರು.

ವಿಶ್ವಾಮಿತ್ರರ ಈ ಸೃಷ್ಟಿಯಿಂದಾಗಿ ಬ್ರಹ್ಮಾಂಡದ ಸಮತೋಲನವೇ ತಪ್ಪಿಹೋಯಿತು. ಇಡೀ ವಿಶ್ವವೇ ನಡುಗತೊಡಗಿತು. ವಿಶ್ವವೇ ನಾಶವಾಗಬಹುದೆಂದು ಹೆದರಿದ ಬ್ರಹ್ಮದೇವನು ಸ್ವತಃ ಪ್ರತ್ಯಕ್ಷನಾಗಿ ವಿಶ್ವಾಮಿತ್ರರನ್ನು ಸಮಾಧಾನಪಡಿಸಿದನು.

“ಮಹರ್ಷಿಗಳೇ, ಪ್ರಕೃತಿ ನಿಯಮವನ್ನು ಬದಲಿಸಬೇಡಿ. ಸಶರೀರನಾಗಿ ಸ್ವರ್ಗಕ್ಕೆ ಹೋಗು ವುದು ಸಾಧ್ಯವಿಲ್ಲ" ಎಂದು ಮನವರಿಕೆ ಮಾಡಿಕೊಟ್ಟನು. ಆದರೆ ವಿಶ್ವಾಮಿತ್ರರು, “ನಾನು ಕೊಟ್ಟ ಮಾತು ಸುಳ್ಳಾಗಬಾರದು, ತ್ರಿಶಂಕುವಿಗೆ ಒಂದು ಲೋಕವಿರಲೇಬೇಕು" ಎಂದು ಹಠ ಹಿಡಿದರು.

ಕೊನೆಗೆ ಒಂದು ಒಪ್ಪಂದವಾಯಿತು. ವಿಶ್ವಾಮಿತ್ರರು ಸೃಷ್ಟಿಸಿದ ಹೊಸ ನಕ್ಷತ್ರಗಳು ಮತ್ತು ಲೋಕವು ಹಾಗೆಯೇ ಉಳಿಯುವಂತಾಯಿತು. ತ್ರಿಶಂಕುವು ಭೂಮಿ ಮತ್ತು ಸ್ವರ್ಗದ ನಡುವೆ ಇರುವ ಆ ಹೊಸ ಲೋಕದ ಇರಬೇಕೆಂದು ನಿರ್ಧಾರವಾಯಿತು. ಅಂದಿನಿಂದ ತ್ರಿಶಂಕು ಆ ಎರಡೂ ಲೋಕಗಳ ನಡುವೆ ತೂಗುತ್ತಾ ಉಳಿದನು. ಇದನ್ನೇ ನಾವು ಇಂದು ‘ತ್ರಿಶಂಕು ಸ್ವರ್ಗ’ ಎಂದು ಕರೆಯುತ್ತೇವೆ. ವಿಶ್ವಾಮಿತ್ರರು ಸೃಷ್ಟಿಸಿದ ಆ ಹೊಸ ನಕ್ಷತ್ರ ಮಂಡಲವನ್ನೇ ಇಂದು ನಾವು ‘ದಕ್ಷಿಣ ಶಿಲುಬೆ’(Southern Cross) ನಕ್ಷತ್ರ ಸಮೂಹ ಎಂದು ಗುರುತಿಸುತ್ತೇವೆ. ಬದುಕಿನಲ್ಲಿ ಕೆಲವೊಮ್ಮೆ ಅಂದುಕೊಂಡ ಹಾಗೆ ಆಗದೆ ಹೋದರೆ ಭಗವಂತನ ನಿಯಮ ಎಂದು ಎರಡು ಹೆಜ್ಜೆ ಹಿಂದೆ ಸರಿಯಬೇಕಾಗುತ್ತದೆ.

ಶತಾಯಗತಾಯ ಅದನ್ನು ಪಡೆದೇ ತೀರುತ್ತೇನೆ ಎನ್ನುವ ಹಟ ಕೆಲವೊಮ್ಮೆ ನಮ್ಮನ್ನು ಈ ತ್ರಿಶಂಕು ವರ್ಗದ ಪರಿಸ್ಥಿತಿಗೆ ತಳ್ಳುತ್ತದೆ. ಬದುಕಿನಲ್ಲಿದ್ದ ನೆಮ್ಮದಿಯನ್ನು ಕಳೆದುಕೊಂಡು, ಮುಂದೆ ಹೋಗಲಾಗದೆ, ಹಿಂದೆ ಬರಲೂ ಆಗದೆ ಅನಿಶ್ಚಿತತೆಯಲ್ಲಿ ಒzಡಬೇಕಾಗುತ್ತದೆ. ಆದ್ದರಿಂದಲೇ ಅತಿಯಾದ ಹಠ ಒಳ್ಳೆಯದಲ್ಲ...

ರೂಪಾ ಗುರುರಾಜ್

View all posts by this author