Vishweshwar Bhat Column: ಪ್ರವಾಸಿ ತಾಣಗಳಾದ ಮ್ಯಾನ್ ಹೋಲ್ !
ಇದು ಯಾವನೋ ಕೆಲಸವಿಲ್ಲದನ ಕೈಚಳಕವಿದ್ದಿರಬಹುದು ಎಂದು ಅಂದುಕೊಂಡೆ. ಸುಮಾರು ನೂರು ಅಡಿ ಮುಂದೆ ಹೋಗುತ್ತಿದ್ದಂತೆ, ಇನ್ನೊಂದು ಮ್ಯಾನ್ ಹೋಲ್ ಮುಚ್ಚಳದ ಮೇಲೆ ಸುಂದರ ಚಿತ್ರ ಕಾಣಿಸಿತು. ಅದರ ಮೇಲೆ ಸೊಂಡಿಲು ಎತ್ತಿದ ಆನೆಯ ಚಿತ್ರವಿತ್ತು
ಜಪಾನಿನ ಬೀದಿಗಳಲ್ಲಿ ಓಡಾಡುವಾಗ, ಅಲ್ಲಿನ ಒಳಚರಂಡಿಗಳ ಮ್ಯಾನ್ ಹೋಲ್ ಮುಚ್ಚಳ ಸಾಮಾನ್ಯವಾಗಿ ಗಮನ ಸೆಳೆಯದೇ ಹೋಗುವುದಿಲ್ಲ. ನಾನು ಟೋಕಿಯೋದಲ್ಲಿ ಉಳಿದುಕೊಂಡ ಹೋಟೆಲಿನ ಸುತ್ತಮುತ್ತ ಬೆಳಗ್ಗೆ ವಾಕಿಂಗ್ ಹೋದಾಗ, ಬಣ್ಣ ಬಣ್ಣದ ಚಿತ್ರಗಳಿರುವ ಒಂದು ಮ್ಯಾನ್ ಹೋಲ್ ಮುಚ್ಚಳ ಕಣ್ಣಿಗೆ ಬಿತ್ತು.
ಇದು ಯಾವನೋ ಕೆಲಸವಿಲ್ಲದನ ಕೈಚಳಕವಿದ್ದಿರಬಹುದು ಎಂದು ಅಂದುಕೊಂಡೆ. ಸುಮಾರು ನೂರು ಅಡಿ ಮುಂದೆ ಹೋಗುತ್ತಿದ್ದಂತೆ, ಇನ್ನೊಂದು ಮ್ಯಾನ್ ಹೋಲ್ ಮುಚ್ಚಳದ ಮೇಲೆ ಸುಂದರ ಚಿತ್ರ ಕಾಣಿಸಿತು. ಅದರ ಮೇಲೆ ಸೊಂಡಿಲು ಎತ್ತಿದ ಆನೆಯ ಚಿತ್ರವಿತ್ತು. ಅದು ಉಕ್ಕಿನ ಮುಚ್ಚಳ. ನಂತರ ತುಸು ದೂರ ಕ್ರಮಿಸಿದ ಬಳಿಕ ಕಂಡ ಮತ್ತೊಂದು ಮ್ಯಾನ್ ಹೋಲ್ ಮುಚ್ಚಳ ವೂ ಸುಂದರ ಚಿತ್ತಾರಗಳಿಂದ ಆಕರ್ಷಕವಾಗಿತ್ತು.
ಇದೇನು ಈ ದೇಶದ ಮ್ಯಾನ್ ಹೋಲ್ ಮುಚ್ಚಳಗಳೂ ಇಷ್ಟೊಂದು ಸುಂದರವಾಗಿದೆಯಲ್ಲ ಅಂತ ಅಂದುಕೊಂಡು ನನ್ನ ಪಾಡಿಗೆ ಹೋಟೆಲಿಗೆ ಬಂದು, ನಮ್ಮ ಗೈಡ್ ಗೆ ಕೇಳಿದರೆ ಆಕೆ ಮ್ಯಾನ್ ಹೋಲ್ ಮುಚ್ಚಳಗಳ ಬಗ್ಗೆ ದೊಡ್ಡ ಪುರಾಣವನ್ನೇ ಬಿಚ್ಚಿಟ್ಟಳು.“ ಜಪಾನಿನ ರಸ್ತೆಗಳು ಕೇವಲ ವಾಹನ ಅಥವಾ ಮನುಷ್ಯರ ಸಂಚಾರಕ್ಕೆ ಸೀಮಿತವಾದ ಸ್ಥಳವಲ್ಲ, ಅದು ಕಲೆ ಮತ್ತು ವಿನ್ಯಾಸ ವನ್ನು ಪ್ರತಿನಿಽಸುವ ಸ್ಥಳವೂ ಹೌದು. ಮನೆಗಳಿಗೆ ನೀರು, ತ್ಯಾಜ್ಯ ನಿರ್ವಹಣೆ ಮತ್ತು ಪೈಪ್‌ಲೈನ್ ವ್ಯವಸ್ಥೆಗಳನ್ನು ನಿರ್ವಹಿಸಲು ಬಳಸುವ ಒಳಚರಂಡಿಗಳ ಮ್ಯಾನ್ ಹೋಲ್ ಮುಚ್ಚಳಗಳು ಇಲ್ಲಿನ ಜನಜೀವನದ ಕಲಾಕೃತಿಗಳಾಗಿವೆ" ಎಂದಾಗ ನಿಜಕ್ಕೂ ಅಚ್ಚರಿಯಾಯಿತು.
ಇದನ್ನೂ ಓದಿ: Vishweshwar Bhat Column: ಭೂಕಂಪ ಮತ್ತು ಅನಿಲ ಸೋರಿಕೆ
ಜಗತ್ತಿನ ಯಾವುದೇ ದೇಶದ, ಯಾವುದೇ ನಗರಗಳಿಗೆ ಹೋದರೂ ಮ್ಯಾನ್ ಹೋಲುಗಳನ್ನು ನೋಡ ಬಹುದು. ಸಾಮಾನ್ಯವಾಗಿ ಎಡೆ ಸುಣ್ಣ-ಬಣ್ಣ ಕಾಣದ, ತುಕ್ಕು ಹಿಡಿದ ಸ್ಥಿತಿಯಲ್ಲಿರುವ ಮುಚ್ಚಳ ಗಳನ್ನು ನೋಡಬಹುದು. ಆದರೆ ಮ್ಯಾನ್ ಹೋಲ್ ಮುಚ್ಚಳಕ್ಕೂ ಕಲಾಕೃತಿಯ ಲೇಪ, ಪ್ರಾಮುಖ್ಯ ನೀಡಿರುವುದು ಜಪಾನಿನಲ್ಲಿ ಮಾತ್ರವೇನೋ. ನಗರ ಸೌಂದರ್ಯವನ್ನು ವೃದ್ಧಿಸಲು ರಸ್ತೆಗಳು ಎಷ್ಟು ಮುಖ್ಯವೋ, ರಸ್ತೆಗೆ ಹೊಂದಿಕೊಂಡಿರುವ ಮ್ಯಾನ್ ಹೋಲ್ ಮುಚ್ಚಳಗಳೂ ಅಷ್ಟೇ ಮುಖ್ಯ ಎಂಬ ಅಂಶವನ್ನು ಜಪಾನಿನ ಪುರಪಿತೃಗಳು ಅರ್ಥ ಮಾಡಿಕೊಂಡಿದ್ದು ಹೆಮ್ಮೆಪಡುವಂಥದ್ದು.
1970ರ ದಶಕದಲ್ಲಿ ಜಪಾನ್‌ನಲ್ಲಿ ಮ್ಯಾನ್ ಹೋಲ್ ಮುಚ್ಚಳಗಳನ್ನು ವಿನೂತನವಾಗಿ ವಿನ್ಯಾಸ ಗೊಳಿಸುವ ಪರಿಕಲ್ಪನೆ ಆರಂಭವಾಯಿತು. ಆಗ ಟೋಕಿಯೋ ತನ್ನ ಜಲಮಂಡಳಿಯನ್ನು ಮರು ನಿರ್ಮಿಸುವ ದೊಡ್ಡ ಯೋಜನೆಯನ್ನು ಕೈಗೊಂಡಿತ್ತು. ಜನರಿಗೆ ಈ ವ್ಯವಸ್ಥೆಯ ಪ್ರಾಮುಖ್ಯವನ್ನು ವಿವರಿಸಲು ಮತ್ತು ಯೋಜನೆಯ ಬಗ್ಗೆ ಆಸಕ್ತಿ ಹುಟ್ಟಿಸಲು, ಸರಕಾರವು ಮ್ಯಾನ್ ಹೋಲ್ ಮುಚ್ಚಳಗಳನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಲು ನಿರ್ಧರಿಸಿತು.
ಇದನ್ನು ಸರಕಾರ ಕೇವಲ ಉಪಯುಕ್ತತೆಯ ದೃಷ್ಟಿಯಿಂದ ನೋಡದೇ, ಸ್ಥಳೀಯ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಂಕೇತಗಳಾಗಿ ಪರಿಗಣಿಸಿದರೆ, ಜನರಲ್ಲಿ ಮ್ಯಾನ್ ಹೋಲ್ ಬಗ್ಗೆ ಹೆಚ್ಚಿನ ಜಾಗೃತಿ ಮತ್ತು ಗೌರವ ಹೆಚ್ಚಾಗುತ್ತದೆ ಎಂದು ಭಾವಿಸಿತು. ಅದಾಗಿ ಮೂರು ವರ್ಷಗಳಲ್ಲಿ ‘ ಜಪಾನ್ ಸೊಸೈಟಿ ಆಫ್ ಮ್ಯಾನ್ ಹೋಲ್ ಕವರ್ಸ್’ ಎಂಬ ಸಂಸ್ಥೆ ಅಸ್ತಿತ್ವಕ್ಕೆ ಬಂದಿತು. ಮ್ಯಾನ್ ಹೋಲ್ ಮೇಲೆ ಯಾವ ಚಿತ್ರವಿರಬೇಕು, ಅದನ್ನು ಹೇಗೆ ವಿನ್ಯಾಸಗೊಳಿಸಬೇಕು, ಯಾವ ಬಣ್ಣ ಮಿಶ್ರಣವಿದ್ದರೆ ಚೆಂದವಾಗಿ ಕಾಣುತ್ತದೆ...
ಮುಂತಾದವುಗಳನ್ನು ನಿರ್ಧರಿಸಿ ಜಾರಿಗೆ ತರುವ ಹೊಣೆಗಾರಿಕೆಯನ್ನು ಆ ಸಂಸ್ಥೆಗೆ ವಹಿಸಲಾ ಯಿತು. ಮ್ಯಾನ್ ಹೋಲ್ ಗಳನ್ನು ನಿರ್ಮಿಸುವಾಗ ದೀರ್ಘಕಾಲದಲ್ಲಿ ವಿನ್ಯಾಸಗಳು ನಾಶವಾಗ ದಂತೆ ಗುಣಮಟ್ಟದ ಲೋಹಗಳನ್ನು ಬಳಸುವುದು, ವಿನ್ಯಾಸಗಳು ಎದ್ದು ಕಾಣುವಂತೆ ಬಣ್ಣ ಗಳನ್ನು ಆಯ್ಕೆ ಮಾಡುವುದು, ಸ್ಥಳೀಯ ಕಲೆ ಮತ್ತು ಇತಿಹಾಸವನ್ನು ಪ್ರತಿನಿಧಿಸುವ ಚಿತ್ರಗಳನ್ನು ಆಯ್ಕೆ ಮಾಡುವುದು... ಈ ಎಲ್ಲ ಆಯ್ಕೆಗಳನ್ನು ಆ ಸಂಸ್ಥೆಯೇ ನಿರ್ಧರಿಸುತ್ತದೆ. ಜಪಾನಿನ ಮ್ಯಾನ್ ಹೋಲ್ ಕವರ್‌ಗಳನ್ನು ವೈಜ್ಞಾನಿಕವಾಗಿ ಮತ್ತು ಅತ್ಯಂತ ಶ್ರದ್ಧೆಯೊಂದಿಗೆ ತಯಾರಿಸುವುದು ವಿಶೇಷ.
ಪ್ರತಿ ಕವರ್‌ನ್ನು ವಿನ್ಯಾಸಗೊಳಿಸಲು ತಜ್ಞ ಕಲಾವಿದರನ್ನು ನೇಮಿಸಲಾಗುತ್ತದೆ. ಆರಂಭದಲ್ಲಿ, ಕಾಗದದಲ್ಲಿ ಚಿತ್ತಾರ ಅಥವಾ ಡಿಜಿಟಲ್ ಆಕೃತಿಗಳನ್ನು ರಚಿಸಲಾಗುತ್ತದೆ. ನಂತರ ಈ ವಿನ್ಯಾಸ ವನ್ನು ಕಾಸ್ಟ್ ಐರನ್ ಮೇಲೆ ಕೆತ್ತಲಾಗುತ್ತದೆ. ಅಲ್ಲಿನ ಮ್ಯಾನ್ ಹೋಲ್ ಗಳನ್ನು ಕೂಡ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲಾಗಿದೆ ಅಂದ್ರೆ ಸೋಜಿಗವಾಗಬಹುದು.