ತನ್ನಿಮಿತ್ತ
ರವಿ ಕಂಗಳ
ಈ ಜಗತ್ತು ಕಂಡ ಶ್ರೇಷ್ಠ ವೀರಸನ್ಯಾಸಿ ಸ್ವಾಮಿ ವಿವೇಕಾನಂದರು. ಸರ್ವಧರ್ಮ ಸಮನ್ವಯದ ಸೂತ್ರ ಪಠಿಸಿ, ಹಿಂದೂ ಧರ್ಮ ಮತ್ತು ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯ ಮಾಡಿ ಕೊಟ್ಟ ಇವರು, ಪ್ರತಿಯೊಬ್ಬರಲ್ಲಿ ಅಡಗಿದ್ದ ಆತ್ಮವಿಶ್ವಾಸವನ್ನು ಬಡಿದೆಬ್ಬಿಸಿ ಧೀಃಶಕ್ತಿಯನ್ನು ಜಾಗೃತಗೊಳಿಸಿದವರು. ಚೈತನ್ಯದ ಬುಗ್ಗೆಯಾಗಿ ಲೋಕಸಂಚಾರ ಮಾಡುತ್ತಾ, ಯುವಜನರ ಕಣ್ಮಣಿಯಾಗಿ, ಸ್ಪೂರ್ತಿಯ ಸೆಲೆಯಾಗಿ ಆದರ್ಶ ಜೀವನದ ರಹದಾರಿಯನ್ನು ನಿರ್ಮಿಸಿದವರು.
“ಹೇಡಿಗಳು, ಬಲಹೀನರು ಮಾತ್ರವೇ ಪಾಪಗಳನ್ನು ಮಾಡುತ್ತಾರೆ, ಸುಳ್ಳು ಹೇಳುತ್ತಾರೆ; ಆದರೆ ಧೀರರು ಯಾವಾಗಲೂ ನೀತಿವಂತರಾಗಿರುತ್ತಾರೆ. ಹೀಗಾಗಿ ಧೀರರಾಗಿ, ನೀತಿವಂತರಾಗಿ, ಸಹಾನು ಭೂತಿ ಯುಳ್ಳವರಾಗಿ" ಎಂದು ಕರೆನೀಡಿದ ವಿವೇಕಾನಂದರು 1883ರ ಸೆಪ್ಟೆಂಬರ್‌ನಲ್ಲಿ ಅಮೆರಿಕದ ಶಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಮಾಡಿದ ಭಾಷಣವು ಇಡೀ ವಿಶ್ವಕ್ಕೆ ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಪರಿಚಯಿಸಿತು.
'East is East, West is West; they will never meet' ಎನ್ನುತ್ತಿದ್ದ ಸಂಕುಚಿತ ಮನಸ್ಸುಗಳಿಗೆ ವಿವೇಕಾನಂದರ ಈ ಭಾಷಣವು ಚಿಕಿತ್ಸೆ ನೀಡಿ, ವಿಶ್ವಭ್ರಾತೃತ್ವದ ಭಾವ ವನ್ನು ಬೆಸೆಯಿತು. ವಿದೇಶಿಯೊಬ್ಬ ರವೀಂದ್ರನಾಥ ಟ್ಯಾಗೋರರನ್ನು ಒಮ್ಮೆ ಭೇಟಿಯಾಗಿ, “ಭಾರತದ ಸಂಸ್ಕೃತಿ ಯನ್ನು ತಿಳಿದುಕೊಳ್ಳಲು ಯಾರನ್ನು ಸಂದರ್ಶಿಸಿದರೆ ಸಂಪೂರ್ಣ ಮಾಹಿತಿ ದಕ್ಕುತ್ತದೆ?" ಎಂದು ಕೇಳಿದಾಗ, ""If you want know India, you will have to meet and study Swamy Vivekananda'' ಎಂದು ಅವರು ಉತ್ತರಿಸಿದರಂತೆ.
ಈ ಮಾತು ಅಕ್ಷರಶಃ ನಿಜ. ಭಾರತದ ಸಂಸ್ಕೃತಿಯನ್ನು ತಮ್ಮ ದೇಹದ ಕಣಕಣದಲ್ಲೂ ಮೈಗೂಡಿಸಿ ಕೊಂಡು ತಮ್ಮ ‘ವಿವೇಕವಾಣಿ’ಯ ಮೂಲಕ ಲೋಕಕ್ಕೆಲ್ಲಾ ಪ್ರಚುರಪಡಿಸಿದವರು ವಿವೇಕಾ ನಂದರು. ಕರ್ಮರಹಸ್ಯ, ರಾಜಯೋಗ, ಭಕ್ತಿಯೋಗ, ಜ್ಞಾನಯೋಗ, ಧ್ಯಾನಸಮಾಧಿ, ಮನಃಶಕ್ತಿಗಳ ಕುರಿತಾಗಿ ಅದ್ಭುತ ವಿಚಾರಧಾರೆಗಳನ್ನು ಮಂಡಿಸುತ್ತ, ಧರ್ಮ ಮತ್ತು ಆತ್ಮಸಾಕ್ಷಾತ್ಕಾರದ ಅವಶ್ಯ ಕತೆಯ ಕುರಿತು ಮನಮುಟ್ಟುವ ರೀತಿಯಲ್ಲಿ ವಿಶ್ವದೆಲ್ಲೆಡೆ ಉಪನ್ಯಾಸ ನೀಡಿದವರು ವಿವೇಕಾ ನಂದರು.
ಇದನ್ನೂ ಓದಿ: Ravi Kangala Column: ಕುವೆಂಪು: ಅಗ್ರಮಾನ್ಯ ಯುಗಪ್ರವರ್ತಕ ಕವಿ
ಶ್ರೀ ರಾಮಕೃಷ್ಣ ಪರಮಹಂಸರ ಕೃಪಾಕಟಾಕ್ಷಕ್ಕೆ ಪಾತ್ರರಾಗಿದ್ದ ವಿವೇಕಾನಂದರು ಅವರ ಬೋಧನೆ ಯಿಂದ ಪಡೆದ ಶಕ್ತಿಯಿಂದಾಗಿ ದೇವರ ಇರುವಿಕೆಯ ಕುರಿತಾಗಿ ಸಮರ್ಥವಾಗಿ ವ್ಯಾಖ್ಯಾನಿಸು ತ್ತಿದ್ದರು. ದೇವರ ಬಗೆಗಿನ ನಂಬಿಕೆ ಎಲ್ಲಿಯವರೆಗೆ ಇರುತ್ತದೆ ಎಂದು ಒಮ್ಮೆ ಕೇಳಿದ್ದಕ್ಕೆ, “ಸಿದ್ಧಾಂತ ಹೇಗಾದರೂ ಇರಲಿ, ತತ್ವ ಯಾವ ರೀತಿಯಲ್ಲಿ ಬೇಕಾದರೂ ಇರಲಿ, ಎಲ್ಲಿಯವರೆಗೆ ಈ ಪ್ರಪಂಚ ದಲ್ಲಿ ಸಾವು ಎಂಬುದು ಇದೆಯೋ, ಮಾನವನ ಹೃದಯದಲ್ಲಿ ದುರ್ಬಲತೆ ಎಂಬುದು ಇದೆಯೋ, ಎಲ್ಲಿಯವರೆಗೆ ಮಾನವನ ಹೃದಯಾಂತರಾಳದಿಂದ ಒಂದು ಪ್ರಾರ್ಥನೆ ಬರುವುದೋ, ಅಲ್ಲಿಯವರೆಗೂ ದೇವರಲ್ಲಿ ನಂಬಿಕೆ ಇದ್ದೇ ಇರುವುದು" ಎಂದು ಉತ್ತರಿಸಿದ್ದರು ವಿವೇಕಾನಂದರು.
“ಯಾವುದಾದರೂ ಒಂದು ಧರ್ಮದ ಜಯದಿಂದ ಅಥವಾ ಉಳಿದ ಧರ್ಮಗಳ ನಾಶದಿಂದ ಧಾರ್ಮಿಕ ಏಕತೆ ಸಾಕಾರಗೊಳ್ಳುತ್ತದೆ ಎಂದು ಯಾರಾದರೂ ಆಶಿಸಿದರೆ ಅದು ಅಸಾಧ್ಯ ಬಯಕೆ. ಬೀಜವನ್ನು ನೆಲದಲ್ಲಿ ಬಿತ್ತಿ ಆಗಿದೆ. ಅದರ ಸುತ್ತಲೂ ಮಣ್ಣು-ನೀರು-ಗಾಳಿ ಇವೆ. ಬೀಜ ಮಣ್ಣಾಗುವುದೇ? ನೀರಾಗುವುದೇ? ಗಾಳಿಯಾಗುವುದೇ? ಇಲ್ಲ ಅದೊಂದು ಸಸಿಯಾಗುವುದು ಹೌದು ತಾನೆ.... ಅದು ತನ್ನ ಬೆಳವಣಿಗೆಯ ನಿಯಮವನ್ನು ಅನುಸರಿಸಿ ಬೆಳೆಯುತ್ತದೆ, ಅದಕ್ಕಾಗಿ ಗಾಳಿ ಮತ್ತು ನೀರನ್ನು ಅದು ಜೀರ್ಣಿಸಿಕೊಳ್ಳುತ್ತದೆ.
ಧರ್ಮವೂ ಹೀಗೆಯೇ. ಒಬ್ಬ ಕ್ರೈಸ್ತನು ಹಿಂದೂ ಅಥವಾ ಬೌದ್ಧನಾಗಬೇಕಿಲ್ಲ. ಪ್ರತಿಯೊಬ್ಬರು ಕೂಡ ತಮ್ಮ ವ್ಯಕ್ತಿತ್ವವನ್ನು ನಾಶಮಾಡಿಕೊಳ್ಳದೆ, ಮತ್ತೊಬ್ಬರ ಭಾವವನ್ನು ಹೀರಿಕೊಂಡು, ತಮ್ಮ ಬೆಳವಣಿಗೆಯ ನಿಯಮದಂತೆ ಬೆಳೆಯಬೇಕು" ಎನ್ನುತ್ತಿದ್ದ ವಿವೇಕಾನಂದರು, ಜನರು ತಂತಮ್ಮ ಧರ್ಮವನ್ನು ಪ್ರೀತಿಸುವಂತೆ ಕರೆನೀಡಿ, ಸರ್ವಧರ್ಮ ಸಹಿಷ್ಣುತೆಯ ಬೀಜವನ್ನು ಅಂಕುರಿಸಿದರು ಮತ್ತು ಮಾನವನಲ್ಲಿ ಈಗಾಗಲೇ ಅಡಗಿರುವ ದೈವತ್ವವನ್ನು ಪ್ರಕಾಶಪಡಿಸುವುದೇ ಧರ್ಮವೆಂದು ಜಗತ್ತಿಗೆ ತೋರ್ಪಡಿಸಿಕೊಟ್ಟರು.
“ಮೂರು ಸಾಗರ, ನೂರು ಮಂದಿರ, ಸಾವಿರ ದೈವವಿದ್ದರೇನು? ಗಂಗೆಯಿದ್ದರೇನು? ಸಿಂಧುವಿದ್ದ ರೇನು? ಗಿರಿಹಿಮಾಲಯವಿದ್ದರೇನು? ವೇದವಿದ್ದರೇನು? ಭೂಮಿಯಿದ್ದರೇನು? ಘನ ಪರಂಪರೆ ಯಿದ್ದರೇನು- ಸಾರ್ಥಕ ದೇಶದ ಯುವಕರೇ ಮಲಗಿ ನಿದ್ರಿಸುತ್ತಿದ್ದರೆ!" ಎಂದು ಚುಚ್ಚುಮದ್ದು ನೀಡುವ ಮೂಲಕ, ಬದುಕಿದ್ದೂ ಸತ್ತಂತಿರುವ ಯುವಶಕ್ತಿಯನ್ನು ಬಡಿದೆಬ್ಬಿಸಿ, “ಏಳಿ, ಎದ್ದೇಳಿ.... ಗುರಿಮುಟ್ಟುವ ತನಕ ನಿಲ್ಲದಿರಿ.
ನಿಮ್ಮಲ್ಲಿರುವ ಶಕ್ತಿಯನ್ನು ಒಂದುಗೂಡಿಸಿ ಕಾರ್ಯೋನ್ಮುಖರಾಗಿ. ಈ ಜೀವನವಾದರೂ ಎಷ್ಟು ದಿನ? ನೀವು ಈ ಜಗತ್ತಿಗೆ ಬಂದ ಮೇಲೆ ಏನನ್ನಾದರೂ ಸಾಧಿಸಿ, ಈ ಭೂಮಿಯಲ್ಲಿ ನಿಮ್ಮ ಗೆಲುವಿನ ಹೆಜ್ಜೆಗುರುತುಗಳನ್ನು ಬಿಟ್ಟುಹೋಗಿ. ಇಲ್ಲದಿದ್ದರೆ ನಿಮಗೂ, ನಿರ್ಜೀವ ವಸ್ತುಗಳಿಗೂ ಏನು ವ್ಯತ್ಯಾಸ?!" ಎಂದು ಹೇಳುತ್ತಾರೆ.
ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಎಂಬ ಮೂರು ಗುಣ-ವೈಶಿಷ್ಟ್ಯಗಳು ಇರುವವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲು ಸಾಧ್ಯವಿಲ್ಲ; ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಿ ಗೆಲ್ಲಬಲ್ಲ ಎಂದು ಹೇಳುವ ಮೂಲಕ, ನಮ್ಮ ಆತ್ಮಬಲವನ್ನು ಸಮರ್ಥವಾಗಿ ಬಳಸಿಕೊಳ್ಳಲು ವಿವೇಕಾನಂದರು ಕರೆ ನೀಡುತ್ತಾರೆ.
ಸ್ವಾಮಿ ವಿವೇಕಾನಂದರ ಅಂಥ ಮತ್ತಷ್ಟು ಸೂರ್ತಿಕಿಡಿಗಳು ಹೀಗಿವೆ: ಈ ಜಗತ್ತಿನಲ್ಲಿ ಪ್ರತಿ ಯೊಬ್ಬರೂ ಅದೆಷ್ಟೇ ಕಷ್ಟವಾದರೂ ತಮ್ಮ ಪಾಲಿನ ಕರ್ತವ್ಯಗಳನ್ನು ಮಾಡಲೇಬೇಕು. ಅದೇ ರೀತಿಯಲ್ಲಿ, ಮಾಡಬಾರದ ಪಾಪಕಾರ್ಯಗಳ ಕಡೆಗೆ ಕಣ್ಣೆತ್ತಿಯೂ ನೋಡಬಾರದು.
ಕರ್ತವ್ಯವೆಂದರೆ ನಾವು ಇತರರಿಗೆ ಸಹಾಯ ಮಾಡುವುದು, ಜಗತ್ತಿಗೆ ಒಳ್ಳೆಯದನ್ನು ನೀಡುವುದು. ಯಾವುದು ಸ್ವಾರ್ಥದಿಂದ ಕೂಡಿದ ಕಾಯಕವಾಗಿರುತ್ತದೆಯೋ ಅದು ಅನೈತಿಕ, ಸ್ವಾರ್ಥಶೂನ್ಯ ವಾಗಿರುವಂಥದ್ದು ನೈತಿಕ. ಸಾಮಾನ್ಯವಾಗಿ ಜಗತ್ತಿನ ಪ್ರತಿಯೊಂದು ವಸ್ತು/ವಿಷಯವೂ ಒಳ್ಳೆಯದು ಮತ್ತು ಕೆಟ್ಟದ್ದರಿಂದ ಕೂಡಿರುತ್ತದೆ.
ಬೆಂಕಿಯು ಸ್ವತಃ ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ ಹೇಗೆಂದರೆ, ನಮಗೆ ಚಳಿಯಾದಾಗ ದೇಹಕ್ಕೆ ಬೆಚ್ಚಗಿನ ಅನುಭವ ಕೊಡುವ ಬೆಂಕಿಯನ್ನು ‘ಒಳ್ಳೆಯದು’ ಎನ್ನುತ್ತೇವೆ. ಒಂದೊಮ್ಮೆ ಅದೇ ಬೆಂಕಿ ಯು ನಮ್ಮ ಕೈಕಾಲುಗಳನ್ನು ಸುಟ್ಟರೆ ಅದನ್ನು ‘ಕೆಟ್ಟದು’ ಎನ್ನುತ್ತೇವೆ.
ನಮಗೆ ದಾರಿಯಲ್ಲಿ ರಾಮ ಮತ್ತು ರಾವಣರ ಕಲ್ಲಿನ ವಿಗ್ರಹಗಳು ಸಿಕ್ಕರೆ, ರಾಮನ ವಿಗ್ರಹವನ್ನೇ ಎತ್ತಿಕೊಳ್ಳುತ್ತೇವೆ. ಏಕೆಂದರೆ ರಾಮನು ಧರ್ಮನಿಷ್ಠ, ಆದರ್ಶ ಗುಣಗಳ ಸಾಕಾರಮೂರ್ತಿ. ರಾವಣನೋ ಕ್ರೂರಿ, ಸೀತೆಯನ್ನು ಬಲವಂತವಾಗಿ ಎಳೆದೊಯ್ದ ನೀಚ. ಒಂದು ವೇಳೆ ರಾಮನ ವಿಗ್ರಹವು ಕಬ್ಬಿಣದ್ದೂ, ರಾವಣನ ವಿಗ್ರಹವು ಚಿನ್ನದ್ದೂ ಆಗಿದ್ದರೆ, ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ? ಖಂಡಿತ, ನಿಮ್ಮ ಊಹೆ ಸರಿಯಾಗಿದೆ.
ಅದು ರಾವಣನದ್ದು ಅಲ್ಲವೇ.... ಕಾರಣ, ಮೊದಲ ನಿದರ್ಶನದಲ್ಲಿ ನಾವು ವ್ಯಕ್ತಿತ್ವಕ್ಕೆ ಗೌರವ ನೀಡಿ ಆಯ್ಕೆಮಾಡಿದರೆ, ಎರಡನೆಯ ನಿದರ್ಶನದಲ್ಲಿ ವಸ್ತುವಿನ ಮೌಲ್ಯದ ಮೋಹಕ್ಕೆ ಒಳಗಾಗಿ, ಕೆಟ್ಟವನೆಂದು ಗೊತ್ತಿದ್ದರೂ ರಾವಣನ ವಿಗ್ರಹವನ್ನೇ ಆಯ್ಕೆಮಾಡಿಕೊಳ್ಳುತ್ತೇವೆ! ಹೀಗೆಯೇ ಪ್ರಪಂಚವೂ ಅವರವರ ಅನುಕೂಲಕ್ಕೆ ತಕ್ಕಂತೆ ಒಳ್ಳೆಯದಾಗಿಯೋ ಕೆಟ್ಟದ್ದಾಗಿಯೋ ಕಾಣುತ್ತದೆ.
ಜಗತ್ತನ್ನು ಸರಿಪಡಿಸಲು ಹೋಗುವ ಮೊದಲು, ನಮ್ಮನ್ನು ನಾವು ಪರಿವರ್ತಿಸಿಕೊಂಡು ಈ ಸಮಾಜವು ಒಪ್ಪುವ ರೀತಿಯಲ್ಲಿ ನಡೆದಿದ್ದೇ ಆದಲ್ಲಿ, ಮೂರ್ಖರ ಸಂಖ್ಯೆಯಲ್ಲಿ ಒಬ್ಬ ಕಡಿಮೆ ಯಾದಂತೆ ಆಗುತ್ತದೆ. ಅಲ್ಲವೇ?! ವಿವೇಕಾನಂದರ ಚಿಂತನೆಗಳು ಮತ್ತು ಒಂದೊಂದು ನುಡಿಮುತ್ತು ಗಳು ಕೂಡ ಯುವಜನರ ಪಾಲಿನ ಬದುಕಿನ ತುತ್ತುಗಳು ಹಾಗೂ ಒಟ್ಟಾರೆಯಾಗಿ ಭಾರತೀಯ ಸಂಸ್ಕೃತಿಯ ಸೊತ್ತುಗಳು. ಅವರ ಜನ್ಮದಿನವಾದ ಜನವರಿ 12ನ್ನು ರಾಷ್ಟ್ರೀಯ ಯುವದಿನವಾಗಿ ಆಚರಿಸಲಾಗುತ್ತದೆ.
ಈ ಶುಭಸಂದರ್ಭದಲ್ಲಿ ಅವರ ದಿವ್ಯಸಂದೇಶಗಳನ್ನು ಅಳವಡಿಸಿಕೊಂಡು, ಭಾರತದ ಭವ್ಯ ಸಂಸ್ಕೃತಿಯನ್ನು ಉಳಿಸಿ-ಬೆಳೆಸಿ, ಬಲಿಷ್ಠ ಭಾರತವನ್ನು ನಿರ್ಮಾಣ ಮಾಡುವಲ್ಲಿ ಅಳಿಲುಸೇವೆ ಸಲ್ಲಿಸೋಣ. ಮೌಲ್ಯಯುತ ಜೀವನವನ್ನು ಕಟ್ಟಿಕೊಂಡು ಸಂತೃಪ್ತಭಾವದಿಂದ ಜೀವಿಸೊಣ.(ಲೇಖಕರು ಶಿಕ್ಷಕರು)