ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naveen Sagar Column: ಕಾಂತಾರ ಮತ್ತು ಸೀಕ್ವೆಲ್‌ ಪ್ರೀಕ್ವೆಲ್‌ʼಗಳೆಂಬ ಹಗ್ಗದ ಮೇಲಿನ ನಡಿಗೆ

ಆ ದೃಶ್ಯ ಕೊನೆಗೂ ಬಂದಾಗ ಒಂದು ವರ್ಗದ ಹಸಿವು ತೀರಿದರೆ, ಮತ್ತೊಂದು ವರ್ಗಕ್ಕೆ ನಿರಾಸೆಯಾಗಿದೆ. ವಿಷಯ ಇಷ್ಟೆ. ಸೀಕ್ವೆಲ್ ಇರಲಿ ಪ್ರೀಕ್ವೆಲ್ ಇರಲಿ, ಒಂದರ ಯಶಸ್ಸಿನ ಲಾಭ ಪಡೆಯಲು ಹುಟ್ಟುವ ಇನ್ನೊಂದು ಪ್ರಾಡಕ್ಟ್ ವ್ಯಾವಹಾರಿಕವಾಗಿಯೂ, ಗುಣಮಟ್ಟದ ದೃಷ್ಟಿಯಲ್ಲಿಯೂ ಬಹಳ ರಿಸ್ಕಿ ನಲ್ಲಿರುತ್ತದೆ. ‌ಅದು ಹಗ್ಗದ ಮೇಲಿನ ನಡಿಗೆಯೇ. ರಿಷಬ್ ತಮ್ಮದೇ ಪ್ರೊಡಕ್ಷನ್ನಿನಲ್ಲಿ ಆಗಿದ್ದಿದ್ದರೆ ಮೊದಲ ಕಾಂತಾರ ಗೆದ್ದಿದ್ದರೂ, ಮತ್ತೆ ಇನ್ನೊಂದು ಕಾಂತಾರ ಮಾಡುವ ಆಲೋಚನೆ ಮಾಡುತ್ತಿರ ಲಿಲ್ಲ.

ಪದಸಾಗರ

ದೇಶಕ್ಕೆ ದೇಶವೇ ಟೈಮ್ ಟ್ರಾವೆಲ್ ಮಾಡಿಕೊಂಡು ಸಾವಿರ ವರ್ಷ ಹಿಂದಕ್ಕೆ ಓಡಿದೆ ಎಂಬ ಅನುಭವ ಕಳೆದೊಂದು ವಾರದಿಂದ. ಹಾಗನಿಸಲು ಕಾರಣ ಕಾಂತಾರ. ಫೇಸ್ ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್, ಪತ್ರಿಕೆಯ ಪುಟಗಳು ಎಲ್ಲವೂ ಕಾಂತಾರಮಯ. ಕಡೆಗೆ ಗೆಳೆಯರು, ನೆಂಟರು, ಕೊಲೀಗ್ ಗಳು ಯಾರು ಸಿಕ್ಕರೂ ಕಾಂತಾರದ್ದೇ ಮಾತು. ಕಾಂತಾರದ ಮೂಲಕ ರಿಷಬ್ ಶೆಟ್ಟಿ ಪ್ರೇಕ್ಷಕರನ್ನು ಬೇರೆ ಜಗತ್ತಿಗೆ, ಬೇರೆ ಕಾಲಘಟ್ಟಕ್ಕೆ ಕೊಂಡೊಯ್ದಿದ್ದಾರೆ.

ದೈವಗಳ ಮೋಡಿಗೆ, ಗುಳಿಗಾವತಾರಗಳಿಗೆ, ಪಂಜುರ್ಲಿ ನೃತ್ಯಕ್ಕೆ, ಕಾಂತಾರ ಸೃಷ್ಟಿಸಿದ ಈಶ್ವರನ ಹೂದೋಟಕ್ಕೆ, ಗ್ರಾಫಿಕ್ ಹುಲಿ, ಬ್ರಹ್ಮರಾಕ್ಷಸ ಮುಂತಾದ ಕ್ಯಾರೆಕ್ಟರ್‌ಗಳಿಗೆ, ರುಕ್ಮಿಣಿ ವಸಂತ್ ಸೌಂದರ್ಯಕ್ಕೆ, ರಿಷಬ್ ಶೆಟ್ಟಿಯ ಪ್ರಚಂಡ ಅಭಿನಯಕ್ಕೆ ಪ್ರೇಕ್ಷಕ ಅಕ್ಷರಶಃ ಮರುಳಾಗಿ ಹೋಗಿದ್ದಾನೆ.

ಕನ್ನಡ ಚಿತ್ರರಂಗದ ಕಲೆಕ್ಷನ್ನನ್ನೇ ಮೀರಿಸಿ ಬಾಲಿವುಡ್‌ನಲ್ಲಿ ಕಾಂತಾರ ನೂರು ಕೋಟಿ ಕ್ಲಬ್‌ನತ್ತ ದಾಪುಗಾಲು ಹಾಕುತ್ತಿದೆ. ಅನುಪಮ್ ಖೇರ್, ರಾಮ್‌ಗೋಪಾಲ್ ವರ್ಮ ಆದಿಯಾಗಿ ಭಾರತೀಯ ಚಿತ್ರರಂಗದ ದಿಗ್ಗಜರೆಲ್ಲ ಕಾಂತಾರವನ್ನು ಕೊಂಡಾಡುತ್ತಿದ್ದಾರೆ, ವ್ಯಾವಹಾರಿಕವಾಗಿಯೂ, ಕನ್ನಡದ ಚಿತ್ರ ಎಂಬ ಭಾವನಾತ್ಮಕ ದೃಷ್ಟಿಕೋನದಿಂದಲೂ, ಒಂದು ಸಿನಿಮಾ ಆಗಿಯೂ ಕಾಂತಾರದ ಗೆಲುವು ಅತ್ಯದ್ಭುತ.

ಇದನ್ನೂ ಓದಿ: Naveen Sagar Column: ನುಗ್ಗಿ ಹೊಡೆಯೋದನ್ನು ಕಲಿತಿರುವ ಇಂದಿನ ಭಾರತ.. !

ಸೋಷಿಯಲ್ ಮೀಡಿಯಾ ಹೈಪ್, ಮಾಧ್ಯಮಗಳ ಪೇಯ್ಡ್ ಪ್ರಚಾರ, ಪೇಯ್ಡ್ ಹೊಗಳಿಕೆ ಇವೆಲ್ಲವೂ ಕಾಂತಾರದ ಗೆಲುವಿನ ಹಿಂದಿದೆ ಅಂದುಕೊಂಡರೂ ಓಕೆ, ಅದೆಲ್ಲದರ ಹೊರತಾಗಿಯೂ ಕಾಂತಾರ ಸ್ವಂತಬಲದಿಂದ ಐನೂರು ಕೋಟಿಗೂ ಮೀರಿ ದುಡಿಯುವ ತಾಕತ್ತು ಹೊಂದಿರುವ ಚಿತ್ರ ಎಂಬು‌ ದನ್ನು ನಾವು ಇಲ್ಲಿ ಒಪ್ಪಲೇಬೇಕು. ಆದರೆ ಸ್ವಂತಬಲ ಅಂದರೆ ಕಾಂತಾರಾ ಚಾಪ್ಟರ್ ಒನ್‌ಗೆ ಇರುವ ಸ್ವಂತಬಲ ಅಲ್ಲ. ‌

ಕಾಂತಾರ ಎಂಬ ಹಿಂದಿನ ಚಿತ್ರವಿತ್ತಲ್ಲ ಅದರಿಂದ ಸಿಕ್ಕಿರುವ ಬಲ. ರಿಷಬ್ ಶೆಟ್ಟಿ ಕಟ್ಟಿಕೊಟ್ಟ 2022ರ ಕಾಂತಾರ ಜನರನ್ನು ತಲುಪಿದ ರೀತಿ ಮತ್ತು ಹುಟ್ಟು ಹಾಕಿದ ನಿರೀಕ್ಷೆಯೇ ಇಂದಿನ ಈ ಕಾಂತಾರ ಈ ಪರಿ ಮೇನಿಯಾ ಸೃಷ್ಟಿಸಲು ಕಾರಣ. ಆ ಕಾಂತಾರದ ನಿರೀಕ್ಷೆಯ ಭಾರದಿಂದ ಸಿನಿಮಾ ಇಷ್ಟವಾಗದಿರಬಹುದು, ನಿರಾಶೆಯಾಗಿರಬಹುದು ಅಥವಾ ಇಷ್ಟವಾಗಿರಲೂಬಹುದು.

ಆದರೆ ಆ ತುಲನೆಗೋಸ್ಕರವಾದರೂ ಸಿನಿಮಾ ನೋಡಬೇಕು ಎಂದು ಪ್ರೇಕ್ಷಕರು ದೌಡಾಯಿಸು ತ್ತಿರುವುದು ದಿಟ. ಕಮರ್ಷಿಯಲ್ ಸಕ್ಸಸ್ ಇರೋದೇ ಇಲ್ಲಿ. ಸಿನಿಮಾ ಬಗ್ಗೆ ಅಭಿಪ್ರಾಯ ಹೊರ ಬರುವ ಮುನ್ನವೇ ಅತಿ ದೊಡ್ಡ ಸಮೂಹವೊಂದು ಸಿನಿಮಾ ನೋಡುವಂತಾಗಬೇಕು. ‘ಹೇಗಾದ್ರೂ ಇರ್ಲಿ, ನೋಡಿ ಡಿಸೈಡ್ ಮಾಡ್ತೀನಿ’ ಅನ್ನುವಂತಾಗಬೇಕು.

Kantara-Chapter-1 ok

ಲಕ್ಷಾಂತರ ಜನ ನೆಗೆಟಿವ್ ಒಪೀನಿಯನ್ ನೀಡುತ್ತಾ ಇದ್ದರೂ, ನಾನು ನೋಡಿ ನಂಬುತ್ತೇನೆ ಅಥವಾ ಅವರ ಅಭಿಪ್ರಾಯವನ್ನು ವಿಮರ್ಶಿಸುತ್ತೇನೆ ಎಂಬಂತಾಗಬೇಕು. ಅದು ಸಿನಿಮಾದ ಕಮರ್ಷಿಯಲ್ ಗೆಲುವು. ಹೀಗಾಗುವುದಕ್ಕೆ ಆ ಸಿನಿಮಾಗೆ ಅಥವಾ ಅದರಲ್ಲಿರುವ ನಟ/ನಟಿಯರು, ನಿರ್ದೇಶಕ ನಿಗೊಂದು ರೆಪ್ಯುಟೇಷನ್ ಇರಬೇಕಾಗುತ್ತದೆ.

ಹಿಂದಿನ ಚಿತ್ರಗಳಿಂದ ನಂಬಿಕೆ ಬೆಳೆದಿರಬೇಕಾಗುತ್ತದೆ. ಕಾಂತಾರ ಚಾಪ್ಟರ್ ಒನ್‌ಗೆ ಈಗ ಸಿಕ್ಕಿರು ವುದು ಕಾಂತಾರ, ಹೊಂಬಾಳೆ ಮತ್ತು ರಿಷಬ್ ಎಂಬ ಮೂರು ಭರವಸೆಗಳು. ಅಂದು ನಾನೂರಾ ಐವತ್ತು ಕೋಟಿ ಕೊಟ್ಟು ಸಿನಿಮಾ ನೋಡಿದ ಪ್ರತಿಯೊಬ್ಬರೂ ಇಂದು ಕಾಂತಾರ ಚಾಪ್ಟರ್ ಒನ್ ಮಿಸ್ ಮಾಡದೇ ನೋಡುತ್ತಿದ್ದಾರೆ.

ಹೀಗಾಗಿ ಈ ಚಿತ್ರ ನಾನೂರಾ ಐವತ್ತು ಕೋಟಿ ದುಡಿಯುವ ಬಗ್ಗೆ ಯಾವ ಅಪನಂಬಿಕೆಯೂ ಬೇಡ. ಆ ನಂಬಿಕೆ ಇದ್ದಿದ್ದರಿಂದಲೇ ಹೊಂಬಾಳೆ ಚಿತ್ರ ನೂರಾ ಹತ್ತು ಕೋಟಿ ಸುರಿದು ಈ ಸಿನಿಮಾ ಮಾಡಿದೆ. ಆದರೆ ನಾನೂರಾ ಐವತ್ತು ಕೋಟಿ ಗಳಿಸೋ ಚಿಕ್ಕ ಟಾರ್ಗೆಟ್ ಇಟ್ಟುಕೊಂಡಿದೆಯಾ? ಖಂಡಿತ ಇಲ್ಲ. ಈ ಬಾರಿಯ ಟಾರ್ಗೆಟ್ ಮಿನಿಮಮ್ ಸಾವಿರ ಕೋಟಿ. ಹದಿನಾರು ಕೋಟಿ ಹಾಕಿ ನಾನೂರೈವತ್ತು ಕೋಟಿ ಗಳಿಸಿದವರಿಗೆ ಮತ್ತೆ ಅಷ್ಟೇ ಹಾಕಿ ಅಷ್ಟೇ ಗಳಿಸುವ ಅಲ್ಪತೃಪ್ತಿ ಇರುವುದಿಲ್ಲ.

ಕೆಲವು ಬ್ಯುಸಿನೆಸ್ ಹಾಗೆಯೇ. ಆದರೆ ವ್ಯವಹಾರದಿಂದ ಆಚೆ ನೋಡಿದಾಗ ನಮಗನಿಸೋದು ಮಾತ್ರ ಭಿನ್ನವಾಗಿ. ಕೇವಲ ಹದಿನಾರು ಕೋಟಿ ಖರ್ಚು ಮಾಡಿ ನಾನೂರೈವತ್ತು ಕೋಟಿ ದುಡಿದರೆ ಅದು ಮೂವತ್ತು ಪಟ್ಟು ಲಾಭ. ಆದರೆ ನೂರು ಕೋಟಿ ಖರ್ಚು ಮಾಡಿ ಸಾವಿರ ಕೋಟಿ ದುಡಿದರೆ ಕೇವಲ ಹತ್ತು ಪಟ್ಟು ಲಾಭ. ಇದರ ಬದಲು ಹದಿನಾರು ಕೋಟಿಯ ಆರೋ ಏಳೋ ಬೆಸ್ಟ್‌ ಸಿನಿಮಾ ಮಾಡಿ ಒಂದೊಂದರಿಂದಲೂ ಐನೂರು ಕೋಟಿ ಗಳಿಸಬಹುದಿತ್ತಲ್ಲವಾ ಅಂತೆಲ್ಲ ನಮ್ಮ ಲೆಕ್ಕಾ ಚಾರಗಳು ಹರಿದಾಡುತ್ತವೆ. ಅವರ ಲಾಭ ನಷ್ಟಗಳಿಂದ ನಮಗೇನೂ ಆಗಬೇಕಿಲ್ಲ. ಆದರೂ ಹತ್ತಾರು ಸಿನಿಮಾಗಳಾಗುವ ಬಜೆಟ್ ಒಂದಕ್ಕೇ ಹೋಗ್ತಿದೆಯಲ್ಲ.

ಹತ್ತಾರು ಒಳ್ಳೆಯ ಸಿನಿಮಾಗಳನ್ನು ಕಳೆದುಕೊಳ್ಳುತ್ತಿದ್ದೇವಲ್ಲ ಎಂಬ ದುಃಖ ಪ್ರೇಕ್ಷಕನದ್ದು. ರಜನಿಕಾಂತ್‌ರ ಸಿನಿಮಾ ಹೇಗೇ ಇದ್ದರೂ ಐನೂರು ಕೋಟಿ ದುಡಿಯಬಲ್ಲದು ಎಂಬ ಅರಿವಿರು ವಾಗ, ಚೆಂದದ ಕಂಟೆಂಟ್ ಉಳ್ಳ ಚಿತ್ರವನ್ನು ನಾಲ್ಕೋ ಐದೋ ಕೋಟಿ ವೆಚ್ಚದಲ್ಲಿ ಮಾಡಿ ಆ ಐನೂರು ಕೋಟಿ ಗಳಿಸಬಹುದಲ್ಲ, ಯಾಕೆ ಶ್ರೀಮಂತಿಕೆ, ಆಡಂಬರ, ಮೇಕಿಂಗ್, ಮಲ್ಟಿ ಸ್ಟಾರ್, ಪ್ಯಾನ್ ಇಂಡಿಯಾ ಇವೆಲ್ಲದರ ಹೆಸರಲ್ಲು ನೂರಾರು ಕೋಟಿ ಸುರಿಯಲಾಗುತ್ತಿದೆ? ಹೀಗನಿಸುವು ದರಲ್ಲಿ ಅರ್ಥವಿಲ್ಲವೇ? ಕನ್ನಡದ ‘ಸು ಫ್ರಮ್ ಸೋ’ ಥರದ ಸಿನಿಮಾಗಳು, ಮಲಯಾಳಂನ ಬಾಸಿಲ್ ಜೋಸೆಫ್‌ ರ ಚಿತ್ರಗಳು ಕಡಿಮೆ ಖರ್ಚಿನಿಂದಲೇ ನೂರಾರು ಕೋಟಿ ಗಳಿಸಿದ್ದು ಕಂಟೆಂಟ್ ಬಲದಿಂದ ಅಂತ ಗೊತ್ತಿದ್ದರೂ ಕಂಟೆಂಟ್ ಬಿಟ್ಟು ಅತಿ ವೆಚ್ಚದ ಮೇಕಿಂಗ್‌ ನತ್ತ ಹೊರಳುವುದೇಕೆ? ಅಸಲಿಗೆ ಮೇಕಿಂಗ್ ಎಂದರೆ ಅತಿ ವೆಚ್ಚ ಎಂಬ ತಪ್ಪು ಕಲ್ಪನೆಯಾದರೂ ಯಾಕೆ? ಕಾಂತಾರ ಚಾಪ್ಟರ್ ಒನ್ ಇದೀಗ ಪ್ರೇಕ್ಷಕವರ್ಗವನ್ನು ಎರಡು ಭಾಗವಾಗಿಸಿದೆ.

ಕಂಟೆಂಟ್ ವಿಚಾರದಲ್ಲಿ ನಿರಾಸೆ ಹೊಂದಿದ ವರ್ಗ. ಸಿನಿಮಾವನ್ನು ವಿಮರ್ಶೆಯಾಚೆಗೆ ಮೆಚ್ಚಿ ಕೊಂಡ ವರ್ಗ. ಎರಡೂ ತಪ್ಪಲ್ಲ. ಆದರೆ ಇಲ್ಲಿ ನಿರಾಸೆ ವ್ಯಕ್ತಪಡಿಸುವ ವರ್ಗವನ್ನು ನೀವು ಚಿತ್ರದ ಮೇಲಿನ ಉರಿಗೆ, ಸಿಟ್ಟಿಗೆ, ಭಿನ್ನ ಅನಿಸಿಕೊಳ್ಳುವ ಹಪಹಪಿಗೆ ಎಂದು ದೂರಲಾಗುತ್ತಿದೆ. ಚಿತ್ರ ಇಷ್ಟಪಡುವವರನ್ನು, ಹೊಗಳ್ತಾ ಇರೋದರ ಹಿಂದೇನೋ ಅಜೆಂಡಾ ಇದೆ ಎಂಬಂತೆ ಬಿಂಬಿಸ ಲಾಗುತ್ತಿದೆ.

ಲೋಕೋ ಭಿನ್ನಃ ರುಚಿ ಎಂಬ ಸತ್ಯವನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ‘ಲೆಟ್ ಅಸ್ ಅಗ್ರೀ ಟು ಡಿಸ್ ಅಗ್ರೀ’ ಅನ್ನೋ ವೈಶಾಲ್ಯಕ್ಕೆ ಜಾಗವೇ ಕೊಡುತ್ತಿಲ್ಲ. ನೀನು ಇಷ್ಟಪಡಲೇಬೇಕು ಎಂಬಂತೆ ಕೆಲವರು ಖಡ್ಗ ಹಿರಿಯುತ್ತಿದ್ದರೆ, ನೀನು ಹೇಗೆ ಇಷ್ಟಪಟ್ಟೆ ಅಂತ ಕೆಲವರು ಕತ್ತಿ ಮಸೆಯುತ್ತಿದ್ದಾರೆ.

ಹೊಸ ಕಾಂತಾರ ಚಿತ್ರದಲ್ಲಿ ಮೊದಲ ಚಿತ್ರ ನೀಡಿದ್ದ ಆ ಅನುಭೂತಿ ಮಿಸ್ ಆಗಿರೋದು ಸತ್ಯ. ಕಂಬಳದ ಚಿತ್ರ ಎಂಬ ನಿರೀಕ್ಷೆಯಲ್ಲಿ ಹೋದ ಪ್ರೇಕ್ಷಕನಿಗೆ, ಒಂದೊಳ್ಳೆ ಕುಂದಾಪುರದ ಹಳ್ಳಿ ಕಾಮಿಡಿ, ಲವ್ವು, ನಡುನಡುವೆ ಸಣ್ಣ ಜರ್ಕ್ ಕೊಡುವ ಹಾರರ್, ಜಾತಿ ಸಂಘರ್ಷ, ಏನೇನೋ ಎಲ್ಲ ಇಟ್ಟು, ಕೊನೆಗೆ ಯಾರೂ ಊಹಿಸಲಾಗದಂಥ ಒಂದು ಕ್ಲೈಮ್ಯಾ‌ಕ್ಸ್ ಕೊಟ್ಟು, ಅಂತ್ಯದಲ್ಲಿ ಕೈ ಮುಗಿದು ಕಣ್ಣೀರು ತುಂಬಿಕೊಂಡು ನಿಲ್ಲುವಂತೆ ಮಾಡಿತ್ತು ಆ ಕಾಂತಾರ ಸಿನಿಮಾ. ‌

ಈ ಸಿನಿಮಾಗೆ ಇದ್ದ ದೊಡ್ಡ ಚಾಲೆಂಜೇ ಅದು. ಪ್ರೇಕ್ಷಕ ಈ ಚಿತ್ರದಲ್ಲೂ ರಿಷಬ್ ಶೆಟ್ಟಿಯಿಂದ ಆ ಅಭಿನಯ, ಆ ಸೀನ್ ಎಲ್ಲವನ್ನೂ ನಿರೀಕ್ಷಿಸುತ್ತಿದ್ದ. ಅದನ್ನು ಕೊಡಲೇಬೇಕಿರೋ ಅನಿವಾರ್ಯತೆ ರಿಷಬ್‌ಗಿತ್ತು. ಆದರೆ ಅದನ್ನೇ ಕೊಟ್ಟರೆ ಪ್ರೇಕ್ಷಕ ಹೊಸತೇನಿದೆ ಎಂದು ಗೊಣಗೋದು ಖಚಿತ ಎಂಬುದೂ ರಿಷಬ್‌ಗೆ ಗೊತ್ತಿತ್ತು.

ಟ್ರಂಪ್ ಕಾರ್ಡ್ ಸೀನ್ ಬಿಡೋ ಹಾಗೂ ಇಲ್ಲ, ಇಟ್ಕೊಳ್ಳೋ ಹಾಗೂ ಇಲ್ಲ. ಕೊಡಬೇಕು. ಮೊದಲ ಚಿತ್ರದಲ್ಲಿ ಕೊಟ್ಟಿದ್ದಕ್ಕಿಂತ ಭಿನ್ನವಾಗಿ, ಅದ್ಭುತವಾಗಿ, ಇನ್ನೂ ಬೃಹತ್ ರೀತಿಯಲ್ಲಿ ಕೊಡಬೇಕು. ಅದೊಂದೇ ದಾರಿ ಇದ್ದದ್ದು ರಿಷಬ್‌ಗೆ. ಹೀಗಾಗಿ ರಿಷಬ್ ಅದೇನೇ ತಮ್ಮ ಬಳಿ ಮೊದಲೇ ಈ ಪ್ರೀಕ್ವೆಲ್ ಕಥೆ ಇತ್ತು ಎಂದು ಹೇಳಿದರೂ, ಈ ಕಥೆ ಹುಟ್ಟಿಕೊಂಡದ್ದು ಆ ಟ್ರಂಪ್ ಕಾರ್ಡ್ ದೃಶ್ಯದ ಸುತ್ತಲೇ ಎಂಬುದರಲ್ಲಿ ಅನುಮಾನವೇ ಇಲ್ಲ.

ಬಜೆಟ್ ಇದ್ದಿದ್ದರಿಂದ ಆ ದೃಶ್ಯಗಳತ್ತ ಕಥೆಯನ್ನು ಎಳೆದುಕೊಂಡು ಬರೋದಕ್ಕೆ ಇನ್ನಿಲ್ಲದ ಕಸರತ್ತು ಮಾಡಿದ್ದಾರೆ ರಿಷಬ್. ಹೊಸ ಪಾತ್ರಗಳ ಸೃಷ್ಟಿ, ಹೊಸ ಟ್ರ್ಯಾಕ್‌ಗಳ ಸೃಷ್ಟಿ, ಅವೆಲ್ಲವನ್ನೂ ಈ ಬಹುನಿರೀಕ್ಷಿತ ದೃಶ್ಯದತ್ತ ಲೀಡ್ ಮಾಡುವುದೇ ರಿಷಬ್‌ಗಿದ್ದ ಚಾಲೆಂಜ್. ಅದಕ್ಕಾಗಿ ಕಾಮಿಡಿ ದೃಶ್ಯಗಳು, ಆಕ್ಷನ್ ಸನ್ನಿವೇಶಗಳು ಎಲ್ಲವನ್ನೂ ತುರುಕಿಸಲಾಗಿದೆ. ಆದರೆ ಅವ್ಯಾವುದೂ ಪ್ರೇಕ್ಷಕನಿಗೆ ರುಚಿಸಿಲ್ಲ. ಆತ ಕಾಯುತ್ತಿದ್ದ ದೃಶ್ಯ ಇನ್ನೂ ಬಂದಿಲ್ಲವಾದ್ದರಿಂದ ಆತನಿಗೆ ಇವೆಲ್ಲವೂ ಎಳೆತ ವೆನಿಸಿದೆ. ಆ ದೃಶ್ಯ ಕೊನೆಗೂ ಬಂದಾಗ ಒಂದು ವರ್ಗದ ಹಸಿವು ತೀರಿದರೆ, ಮತ್ತೊಂದು ವರ್ಗಕ್ಕೆ ನಿರಾಸೆಯಾಗಿದೆ. ವಿಷಯ ಇಷ್ಟೆ.

ಸೀಕ್ವೆಲ್ ಇರಲಿ ಪ್ರೀಕ್ವೆಲ್ ಇರಲಿ, ಒಂದರ ಯಶಸ್ಸಿನ ಲಾಭ ಪಡೆಯಲು ಹುಟ್ಟುವ ಇನ್ನೊಂದು ಪ್ರಾಡಕ್ಟ್ ವ್ಯಾವಹಾರಿಕವಾಗಿಯೂ, ಗುಣಮಟ್ಟದ ದೃಷ್ಟಿಯಲ್ಲಿಯೂ ಬಹಳ ರಿಸ್ಕಿ ನಲ್ಲಿರುತ್ತದೆ. ‌ಅದು ಹಗ್ಗದ ಮೇಲಿನ ನಡಿಗೆಯೇ. ರಿಷಬ್ ತಮ್ಮದೇ ಪ್ರೊಡಕ್ಷನ್ನಿನಲ್ಲಿ ಆಗಿದ್ದಿದ್ದರೆ ಮೊದಲ ಕಾಂತಾರ ಗೆದ್ದಿದ್ದರೂ, ಮತ್ತೆ ಇನ್ನೊಂದು ಕಾಂತಾರ ಮಾಡುವ ಆಲೋಚನೆ ಮಾಡುತ್ತಿರಲಿಲ್ಲ. ಇನ್ಯಾವುದೋ ಹೊಸ ಥರದ ಚಿತ್ರಕ್ಕೆ ತುಡಿದಿರುತ್ತಿದ್ದರು. ಆದರೆ ಇಲ್ಲಿ ಹೊಂಬಾಳೆ ಫಿಲ್ಮ್ಸ್‌ನ ಆಫರ್ ಅಥವಾ ಆದೇಶವನ್ನು ರಿಷಬ್ ತಳ್ಳಿ ಹಾಕುವಂತಿರಲಿಲ್ಲ. ತಮ್ಮ ಮೇಲೆ ನಂಬಿಕೆ ಇಟ್ಟು ಹದಿನಾರು ಕೋಟಿ ಸುರಿದವರ ಬಗ್ಗೆ ರಿಷಬ್‌ಗೆ ವಿಪರೀತವೇ ಕೃತಜ್ಞತೆಯಿತ್ತು.

ಹೀಗಾಗಿ ಪ್ರೀಕ್ವೆಲ್ ಅಥವಾ ಸೀಕ್ವೆಲ್ ಮಾಡುವ ಆಫರ್ ಬಂದಾಗ ಅದನ್ನು ಒಪ್ಪಿದ್ದು ಮಾತ್ರವಲ್ಲ, ಶತಾಯಗತಾಯ ಗೆಲ್ಲಿಸಲೇಬೇಕೆಂದು ನಿಂತುಬಿಟ್ಟರು. ಕಥೆ ದುರ್ಬಲವಿದ್ದರೂ, ಮೇಕಿಂಗ್ ಮತ್ತು ತಮ್ಮ ಅಭಿನಯದಿಂದ ಗೆಲ್ಲಿಸಿಯೇ ಗೆಲ್ಲಿಸುತ್ತೇನೆಂಬ ಆತ್ಮವಿಶ್ವಾಸ ಹಾಗೂ ಶ್ರಮ ಇದೀಗ ಕಾಂತಾರ ವನ್ನು ಬಹುದೊಡ್ಡ ಸಕ್ಸಸ್ ಮಾಡಿದೆ.

ರಿಷಬ್ ಇನ್ನೊಂದು ಪಾರ್ಟ್ ಬರುವ ಸುಳುಹು ಕೊಟ್ಟಿರೋದು ಹೌದು. ಆದರೆ ನಿಜಕ್ಕೂ ಒಮ್ಮೆ ಕೂತು ಯೋಚಿಸಿದರೆ, ಪ್ರಾಮಾಣಿಕ ಅಭಿಪ್ರಾಯಗಳನ್ನೂ ಒಮ್ಮೆ ಗಮನಿಸಿದರೆ, ರಿಷಬ್ ಹಾಗೂ ವಿಜಯ್ ಕಿರಗಂದೂರ್ ಸೀಕ್ವೆಲ್ ಆಲೋಚನೆಯನ್ನು ಕೈ ಬಿಡುತ್ತಾರೆ. ಅದು ನಿಸ್ಸಂಶಯವಾಗಿ ಉತ್ತಮ ನಿರ್ಧಾರವೆನಿಸಿಕೊಳ್ಳುತ್ತದೆ. ರಿಷಬ್ ಎಂಬ ನಟ-ನಿರ್ದೇಶಕ ಕಾಂತಾರಕ್ಕೆ ಸೀಮಿತವಾಗುವ ಪ್ರತಿಭೆ ಅಲ್ಲ.

ಕನ್ನಡದ ಮತ್ತೊಬ್ಬ ನಟ ಯಶ್ ಮಾಡ್ತಿರೋದು ತಪ್ಪೋ ಸರಿಯೋ ಗೊತ್ತಿಲ್ಲ, ಆದರೆ ಯಶ್ ಹಾದಿ ಯನ್ನು ರಿಷಬ್ ತುಳಿಯಬಾರದು. ಭಿನ್ನ ಸಾಧ್ಯತೆಗಳತ್ತ ರಿಷಬ್ ಹೊರಳಬೇಕು. ಚಿಕ್ಕ ಬಜೆಟ್‌ನ ಕಂಟೆಂಟ್ ಓರಿಯೆಂಟೆಡ್ ಚಿತ್ರಗಳ ಮೂಲಕ ಪ್ಯಾನ್ ಇಂಡಿಯಾ ತಲುಪಬೇಕು. 2-3 ವರ್ಷ ಕ್ಕೊಂದು ಚಿತ್ರ ಮಾಡುವ ನಟನಾಗದೇ ವರ್ಷಕ್ಕೊಂದು ಎರಡು ಚಿತ್ರಗಳನ್ನು ಮಾಡಬೇಕು.

ಕಾಂತಾರ ಅಂದು ಗೆದ್ದಾಗ, ‘ಮೋರ್ ಲೋಕಲ್, ಮೋರ್ ಗ್ಲೋಬಲ್’ ಎಂಬುದು ರಿಷಬ್ ಮಾತಾ ಗಿತ್ತು. ಹೊಸ ಕಾಂತಾರ, ಗ್ಲೋಬಲ್ ಲೆವೆಲ್ಲಲ್ಲಿ ಸದ್ದು ಮಾಡಿದೆ ನಿಜ. ಆದರೆ ಮೋರ್ ಲೋಕಲ್ ಅನಿಸುತ್ತಿಲ್ಲ. ಈ ಸಲದ ಗೆಲುವನ್ನು ರಿಷಬ್ ತಪ್ಪಾಗಿ ಅರ್ಥೈಸಿಕೊಳ್ಳಬಾರದು, ಪ್ರೇಕ್ಷಕರನ್ನು ಗ್ರ್ಯಾಂಟೆಂಡ್ ಆಗಿ ತೆಗೆದುಕೊಳ್ಳಬಾರದು. ಮತ್ತೊಮ್ಮೆ ಇದೇ ರೀತಿ ದೈವಗಳನ್ನು ಇನ್ನಷ್ಟು ಭಿನ್ನ ವಾಗಿ ಪ್ರೆಸೆಂಟ್ ಮಾಡಿದರೆ ಸಾಕು, ಇನ್ನಷ್ಟು ಇಂಟೆನ್ಸ್ ಅಗಿ ನಟಿಸಿದರೆ ಸಾಕು, ಜನ ಗೆಲ್ಲಿಸುತ್ತಾರೆ ಎಂದುಕೊಳ್ಳಬಾರದು. ರಿಷಬ್ ಬೇರೆ ಮಾದರಿಯ ಚಿತ್ರಗಳ ಮೂಲಕ ಗೆಲ್ಲುತ್ತಾ ಹೋಗಲಿ. ಡಿವೈನ್ ಸ್ಟಾರ್ ಪಟ್ಟಕ್ಕೆ ಜೋತು‌ ಬೀಳದಿರಲಿ. ಅದೇ ಮುಳುವಾಗದಿರಲಿ.

ನವೀನ್‌ ಸಾಗರ್‌

View all posts by this author