ಸಂಪಾದಕೀಯ ಸದ್ಯಶೋಧನೆ
ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಯುದ್ಧ ಸಾರಿದ ಬಳಿಕ, ದುಬೈನಲ್ಲಿ ತಲೆದೋರಿರುವ ಸಂಘರ್ಷ ಮತ್ತು ಅಸ್ಥಿರತೆಯು ಮನುಷ್ಯರ ಮೇಲೆ ಮಾತ್ರವಲ್ಲ, ಅಲ್ಲಿನ ಸಾಕುಪ್ರಾಣಿಗಳ ಮೇಲೂ ಭೀಕರ ಪರಿಣಾಮ ಬೀರಿದೆ. ಯುದ್ಧದ ಭೀತಿ ಮತ್ತು ತುರ್ತು ಪರಿಸ್ಥಿತಿಯಿಂದಾಗಿ ಜನರು ದೇಶ ಬಿಟ್ಟು ಓಡುತ್ತಿದ್ದಾರೆ. ಆದರೆ, ಈ ಆತುರದ ಪಲಾಯನ ದಲ್ಲಿ ಸಾವಿರಾರು ಸಾಕುಪ್ರಾಣಿಗಳು ಅನಾಥವಾಗಿ ಬೀದಿಗೆ ಬೀಳುತ್ತಿವೆ.
ಪ್ರಾಣ ಉಳಿಸಿಕೊಳ್ಳಲು ಜನರು ಸಿಕ್ಕಸಿಕ್ಕ ವಿಮಾನಗಳನ್ನು ಹತ್ತಿ ಹೊರದೇಶಗಳಿಗೆ ತೆರಳು ತ್ತಿದ್ದಾರೆ. ಆದರೆ, ಈ ಪ್ರಕ್ರಿಯೆಯಲ್ಲಿ ಅವರು ತಮ್ಮ ನೆಚ್ಚಿನ ನಾಯಿ, ಬೆಕ್ಕು ಮತ್ತು ಇತರ ಸಾಕುಪ್ರಾಣಿಗಳನ್ನು ಕರೆದೊಯ್ಯಲು ಸಾಧ್ಯವಾಗದೇ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಸ್ಥಳೀಯ ಪ್ರಾಣಿ ಆಶ್ರಯ ತಾಣಗಳು ಮತ್ತು ಪಶುವೈದ್ಯಕೀಯ ಆಸ್ಪತ್ರೆಗಳಿಗೆ ಈಗ ಕರೆಗಳ ಮಹಾಪೂರವೇ ಹರಿದು ಬರುತ್ತಿವೆ. ಅನೇಕ ಮಾಲೀಕರು ತಮ್ಮ ಆರೋಗ್ಯವಂತ ಸಾಕು ಪ್ರಾಣಿಗಳನ್ನು ಕೊಂದೇಬಿಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Vishweshwar Bhat Column: ಕೆ-9 ಯೂನಿಟ್ ಅಂದರೇನು ?
‘ನಾವು ಅವುಗಳನ್ನು ಜತೆಗೆ ಕರೆದೊಯ್ಯಲು ಸಾಧ್ಯವಿಲ್ಲ, ಬೀದಿಯಲ್ಲಿ ಬಿಟ್ಟರೆ ಅವು ಸಾಯುತ್ತವೆ, ಅದಕ್ಕಿಂತ ನೀವೇ ಸಾಯಿಸಿಬಿಡಿ’ ಎಂಬ ಮನವಿ ಪ್ರಾಣಿಪ್ರೇಮಿಗಳ ಎದೆ ಸೀಳುವಂತಿದೆ. ಅನೇಕ ಪ್ರಾಣಿಗಳನ್ನು ಮಾಲೀಕರು ಖಾಲಿ ಅಪಾರ್ಟ್‌ಮೆಂಟ್‌ಗಳಲ್ಲಿ ಕೂಡಿ ಹಾಕಿ ಹೋಗಿದ್ದಾರೆ.
ಕೆಲವು ನಾಯಿಗಳನ್ನು ವಿದ್ಯುತ್ ಕಂಬಗಳಿಗೆ ಅಥವಾ ಗೇಟ್ʼಗಳಿಗೆ ಕಟ್ಟಿಹಾಕಲಾಗಿದೆ. ರಸ್ತೆಗಳಲ್ಲಿ ಬೆಲೆಬಾಳುವ ತಳಿಯ ಬೆಕ್ಕುಗಳು ಮತ್ತು ನಾಯಿಗಳು ದಿಕ್ಕು ತೋಚದೆ ಅಲೆದಾಡುತ್ತಿವೆ. ಹಲವು ದಿನಗಳಿಂದ ಆಹಾರ ಮತ್ತು ನೀರಿಲ್ಲದೇ ಮುಚ್ಚಿದ ಮನೆಯೊಳಗೆ ಪ್ರಾಣಿಗಳು ಪರದಾಡುತ್ತಿರುವ ದೃಶ್ಯಗಳು ಮನಕಲಕುವಂತಿವೆ.
ಜನರು ಪ್ರಾಣಿಗಳನ್ನು ಬಿಟ್ಟು ಹೋಗಲು ಕೇವಲ ನಿರ್ದಯತೆ ಕಾರಣವಲ್ಲ, ಬದಲಾಗಿ ಕಠಿಣವಾದ ಅಂತಾರಾಷ್ಟ್ರೀಯ ಪ್ರಯಾಣದ ನಿಯಮಗಳೂ ಇದರಲ್ಲಿ ಸೇರಿವೆ. ಹೆಚ್ಚಿನ ದೇಶಗಳಿಗೆ ಪ್ರಾಣಿಗಳನ್ನು ಕರೆದೊಯ್ಯಬೇಕಾದರೆ ರೇಬಿಸ್ ಲಸಿಕೆ ಹಾಕಿದ ನಂತರ ಕನಿಷ್ಠ 21 ದಿನಗಳ ಕಾಯುವ ಅವಧಿ ಕಡ್ಡಾಯವಾಗಿದೆ.
ಕೆಲವು ದೇಶಗಳು ಪ್ರಾಣಿಗಳ ರಕ್ತದಲ್ಲಿ ರೋಗನಿರೋಧಕ ಶಕ್ತಿ ಇದೆಯೇ ಎಂದು ಪರೀಕ್ಷಿಸಲು ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳುತ್ತವೆ. ಜನರು ಕೇವಲ 24ರಿಂದ 48 ಗಂಟೆಗಳ ಕಾಲಾವಕಾಶದಲ್ಲಿ ದೇಶ ಬಿಡುತ್ತಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ಈ ಎಲ್ಲ ಕಾನೂನು ಪತ್ರಗಳನ್ನು ಸಿದ್ಧಪಡಿಸುವುದು ಅಸಾಧ್ಯ.
ಈ ‘ತಾಂತ್ರಿಕ ಅಡಚಣೆ’ಗಳು ಪ್ರಾಣಿಗಳನ್ನು ಮಾಲೀಕರಿಂದ ಬೇರ್ಪಡಿಸುತ್ತಿವೆ. ಈ ಬಿಕ್ಕಟ್ಟಿನ ಸಮಯದಲ್ಲಿ ಸ್ಥಳೀಯ ಪ್ರಾಣಿಕಲ್ಯಾಣ ಸಂಸ್ಥೆಗಳು ಮತ್ತು ಸ್ವಯಂಸೇವಕರು ದೇವದೂತರಂತೆ ಕೆಲಸ ಮಾಡುತ್ತಿzರೆ. ಅತಂತ್ರವಾಗಿ ಬಿಟ್ಟ ಪ್ರಾಣಿಗಳನ್ನು ರಕ್ಷಿಸುವುದು, ರಕ್ಷಿಸಿದ ಪ್ರಾಣಿಗಳಿಗೆ ತಾತ್ಕಾಲಿಕವಾಗಿ ಆಶ್ರಯ ನೀಡುವುದು, ಆ ಪ್ರಾಣಿಗಳಿಗೆ ಹೊಸ ಮಾಲೀಕರನ್ನು ಹುಡುಕುವುದು, ವೈದ್ಯಕೀಯ ಚಿಕಿತ್ಸೆ ಮತ್ತು ಆಹಾರಕ್ಕಾಗಿ ದೇಣಿಗೆ ಸಂಗ್ರಹಿಸುವುದು ಇತ್ಯಾದಿ ಕಾರ್ಯದಲ್ಲಿ ನಿರತರಾಗಿದ್ದಾರೆ.
ಯುದ್ಧದ ಸಮಯದಲ್ಲಿ ಮನುಷ್ಯರ ನೋವು ಎಲ್ಲರಿಗೂ ಕಾಣಿಸುತ್ತದೆ, ಆದರೆ ಈ ಮೂಕಪ್ರಾಣಿಗಳ ಆರ್ತನಾದ ಯಾರಿಗೂ ಕೇಳಿಸುವುದಿಲ್ಲ. ದುಬೈನ ಈ ಪರಿಸ್ಥಿತಿಯು ಮಾನವೀಯತೆಯ ಮೇಲೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿದೆ. ಸಂಘರ್ಷಗಳು ಕೇವಲ ದೇಶಗಳ ನಡುವೆ ನಡೆಯುವುದಿಲ್ಲ, ಅವು ಸಾವಿರಾರು ಮುಗ್ಧ ಜೀವಿಗಳ ಬದುಕನ್ನು ಕಸಿದುಕೊಳ್ಳುತ್ತವೆ.
ದುಬೈನಲ್ಲಿ ಸೃಷ್ಟಿಯಾಗಿರುವ ಈ ಬಿಕ್ಕಟ್ಟು ಕೇವಲ ಒಂದು ಸ್ಥಳೀಯ ಸಮಸ್ಯೆಯಾಗಿ ಉಳಿದಿಲ್ಲ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಾಣಿಪ್ರೇಮಿಗಳ ಗಮನ ಸೆಳೆದಿದೆ. ಇತ್ತೀಚಿನ ವರದಿಗಳ ಪ್ರಕಾರ, ಇರಾನ್ ಮತ್ತು ಇತರ ಪ್ರಾದೇಶಿಕ ಸಂಘರ್ಷಗಳ ಹಿನ್ನೆಲೆ ಯಲ್ಲಿ ದುಬೈನಿಂದ ಹೊರಹೋಗುತ್ತಿರುವ ವಲಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.
ವಾಟ್ಸಾಪ್ ಮತ್ತು ಫೇಸ್‌ಬುಕ್ ಗುಂಪುಗಳಲ್ಲಿ ದಿನಕ್ಕೆ ಸುಮಾರು ಇನ್ನೂರಕ್ಕೂ ಹೆಚ್ಚು ಪ್ರಾಣಿ ಹಸ್ತಾಂತರ ಅಥವಾ ಅನಾಥ ಪ್ರಾಣಿಗಳ ರಕ್ಷಣೆಯ ಪೋಸ್ಟ್‌ಗಳು ಕಂಡುಬರುತ್ತಿವೆ. ದುಬೈನ ಪ್ರಮುಖ ಪ್ರಾಣಿ ಆಶ್ರಯ ತಾಣಗಳು ಈಗಾಗಲೇ ತಮ್ಮ ಸಾಮರ್ಥ್ಯ ಮೀರಿ ಪ್ರಾಣಿ ಗಳನ್ನು ತುಂಬಿಕೊಂಡಿವೆ.
ಕೆಲವು ಶೆಲ್ಟರ್‌ಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ನಾಯಿಗಳಿವೆ. ಓಮನ್ ಗಡಿಯ ಮೂಲಕ ರಸ್ತೆ ಮಾರ್ಗವಾಗಿ ತಪ್ಪಿಸಿಕೊಳ್ಳಲು ಯತ್ನಿಸಿದವರು, ಗಡಿಯಲ್ಲಿ ಪ್ರಾಣಿಗಳಿಗೆ ಅನುಮತಿ ಸಿಗದಿzಗ ಅವುಗಳನ್ನು ಅಲ್ಲಿಯೇ ಮರುಭೂಮಿಯಲ್ಲಿ ಬಿಟ್ಟು ಹೋಗಿರುವ ಘಟನೆಗಳು ವರದಿಯಾಗಿವೆ.