ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Raghav Sharma Nidle Column: ವಿರೋಧಿ ಕೂಗಿಗೆ ಸಾಂತ್ವನವನ್ನಷ್ಟೇ ಹೇಳಬಹುದು

ರಾಷ್ಟ್ರಮಟ್ಟದಲ್ಲಿ ರಾಹುಲ್ ಗಾಂಧಿ ಸೇರಿ ಅನೇಕರು ಇದೇ ಮಾನದಂಡದಿಂದಲೇ ಅಧಿಕಾರ ಕ್ಕೇರಿರುವುದರಿಂದ ಯಾರು ಯಾರನ್ನು ವಿರೋಧಿಸುವುದು ಎನ್ನುವುದು ಪ್ರಶ್ನೆ. ಸಾಮಾನ್ಯ ವಾಗಿ, ಜನಪ್ರತಿನಿಧಿಗಳು ನಿಧನರಾದಾಗ ಅನುಕಂಪದ ಲಾಭ ಪಡೆದುಕೊಳ್ಳುವ ಸಲುವಾಗಿ ಅವರದ್ದೇ ಕುಟುಂಬದ ವ್ಯಕ್ತಿಗಳಿಗೆ ಟಿಕೆಟ್ ನೀಡುವ ಸಂಪ್ರದಾಯವನ್ನು ಎಲ್ಲ ಪಕ್ಷಗಳೂ ಪಾಲಿಸಿಕೊಂಡು ಬರುತ್ತಿವೆ.

ಜನಪಥ

ದೇಶದ ಬಹುಪಾಲು ಪ್ರಾದೇಶಿಕ ಪಕ್ಷಗಳನ್ನು ಕುಟುಂಬಗಳೇ ನಡೆಸುತ್ತಿವೆ. ರಾಷ್ಟೀಯ ಪಕ್ಷಗಳಿಗೂ ನಿರ್ದಿಷ್ಟ ಕ್ಷೇತ್ರಗಳಲ್ಲಿ ಕುಟುಂಬಗಳ ಪ್ರಭಾವ-ಸಾಮರ್ಥ್ಯ-ಆರ್ಥಿಕ ಶಕ್ತಿಯನ್ನು ಮೀರಿ ರಾಜಕಾರಣ ಮಾಡಲು ಸಾಧ್ಯವಾಗದ ಕಾರಣ, ಸೋಲು-ಗೆಲುವು ಏನೇ ಇರಲಿ, ಸಮರ್ಥ್ ಶಾಮನೂರು ಅಂಥವರಿಗೆ ಟಿಕೆಟ್ ನೀಡುವುದು ಅನಿವಾರ್ಯ ವಾಗುತ್ತದೆ.

ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಮತ್ತು ಎಚ್.ವೈ.ಮೇಟಿ ಅವರ ನಿಧನದಿಂದ ಕ್ರಮವಾಗಿ ತೆರವಾಗಿದ್ದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗಳಿಗೆ ಅವರದ್ದೇ ಕುಟುಂಬದ ವ್ಯಕ್ತಿಗಳಿಗೆ ಟಿಕೆಟ್ ನೀಡಿರುವುದು ಪಕ್ಷ ದೊಳಗೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಶಾಮನೂರು ಶಿವಶಂಕರಪ್ಪನವರ ಬಗ್ಗೆ ಒಲವಿದ್ದರೂ, ಅವರ ಕ್ಷೇತ್ರಕ್ಕೆ ಮೊಮ್ಮಗನನ್ನು ಆಯ್ಕೆ ಮಾಡಿರುವುದು ಕಾರ್ಯಕರ್ತರಿಗೆ ಒಪ್ಪಲಾಗುತ್ತಿಲ್ಲ. ಆದರೆ, ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಕುಟುಂಬವೊಂದರ ಪ್ರಭಾವ, ಗೆಲ್ಲುವ ಸಾಮರ್ಥ್ಯ ಹಾಗೂ ಹಣಬಲಗಳೇ ಟಿಕೆಟ್ ನೀಡಿಕೆಗೆ ಮಾನದಂಡವಾಗುವುದರಿಂದ ಶಾಮನೂರು ಮೊಮ್ಮಗನಿಗೆ ಟಿಕೆಟ್ ನೀಡುವುದು ಕಾಂಗ್ರೆಸ್‌ಗೆ ಅನಿವಾರ್ಯವಾಗಿತ್ತು.

ಎಲ್ಲಕ್ಕಿಂತ ಮುಖ್ಯವಾಗಿ, ಪಕ್ಷದ ಹಿರಿಯಾಳುಗಳಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರು ತಮ್ಮ ಪ್ರಭಾವ ಬಳಸಿ ತಮ್ಮ ಮಕ್ಕಳ ನ್ನೇ ಶಾಸಕ, ಸಂಸದ, ಸಚಿವರನ್ನಾಗಿ ಮಾಡಿರುವುದರಿಂದ ಶಾಮನೂರು ಶಿವಶಂಕರಪ್ಪರ ಮೊಮ್ಮಗ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ-ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ದಂಪತಿ ಪುತ್ರ ಸಮರ್ಥ್ ಶಾಮನೂರು ಹೆಸರಿಗೆ ವಿರೋಧವೊಡ್ಡುವ, ಪ್ರಾಮಾಣಿಕ ಕಾರ್ಯಕರ್ತರಿಗೆ ನೀಡಬೇಕು ಎಂದು ವಾದಿಸುವ ನೈತಿಕ ಸ್ಥೈರ್ಯವೂ ಅವರಲ್ಲಿ ಇಲ್ಲ.

ಇದನ್ನೂ ಓದಿ: Raghava Sharma Nidle Column: ದೀದಿ...ಅವರು ಒಂದೇ ಸೆಕೆಂಡಿನಲ್ಲಿ ಮುಗಿಸುವುದು ಯಾರನ್ನು ?

ರಾಷ್ಟ್ರಮಟ್ಟದಲ್ಲಿ ರಾಹುಲ್ ಗಾಂಧಿ ಸೇರಿ ಅನೇಕರು ಇದೇ ಮಾನದಂಡದಿಂದಲೇ ಅಧಿಕಾರಕ್ಕೇರಿರುವುದರಿಂದ ಯಾರು ಯಾರನ್ನು ವಿರೋಧಿಸುವುದು ಎನ್ನುವುದು ಪ್ರಶ್ನೆ. ಸಾಮಾನ್ಯವಾಗಿ, ಜನಪ್ರತಿನಿಧಿಗಳು ನಿಧನರಾದಾಗ ಅನುಕಂಪದ ಲಾಭ ಪಡೆದುಕೊಳ್ಳುವ ಸಲುವಾಗಿ ಅವರದ್ದೇ ಕುಟುಂಬದ ವ್ಯಕ್ತಿಗಳಿಗೆ ಟಿಕೆಟ್ ನೀಡುವ ಸಂಪ್ರದಾಯವನ್ನು ಎಲ್ಲ ಪಕ್ಷಗಳೂ ಪಾಲಿಸಿಕೊಂಡು ಬರುತ್ತಿವೆ.

ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಮೃತಪಟ್ಟ ನಂತರ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಪತ್ನಿ ಸುನೇತ್ರಾ ಪವಾರ್ ರನ್ನು ಎನ್‌ಡಿಎ ಮೈತ್ರಿಕೂಟದ ನಾಯಕರು ತಂದು ಕೂರಿಸಿದ್ದು ಈಚಿನ ಒಂದು ಉದಾಹರಣೆ. ನಿಧನದ ಸಂದರ್ಭಗಳಲ್ಲಿ ಅರ್ಹತೆಗಿಂತ ಅನುಕಂಪವು ವ್ಯಕ್ತಿಯನ್ನು ಗೆಲುವಿನ ದಡ ಸೇರಿಸುತ್ತದೆ.

ಕರೋನಾ ಮಹಾಮಾರಿ ಸಂದರ್ಭದಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿಯವರು ನಿಧನ ರಾದ ನಂತರ ನಡೆದ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆಗೆ ಪತ್ನಿ ಮಂಗಳಾ ಸುರೇಶ್ ಅಂಗಡಿ ಸ್ಪರ್ಧಿಸಿ ಗೆದ್ದಿದ್ದರು. ಆದರೆ, 2024ರ ಲೋಕಸಭೆ ಚುನಾವಣೆಯಲ್ಲಿ ಅವರನ್ನು ಕ್ಷೇತ್ರದ ಜನ ಗೆಲ್ಲಿಸುವ ಬಗ್ಗೆ ಅನುಮಾನಗಳಿದ್ದ ಕಾರಣ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ನೀಡಲಾಯ್ತು.

ಚುನಾವಣೆಗಳಲ್ಲಿ ಗೆಲ್ಲುವ ಸಾಮರ್ಥ್ಯ, ಆರ್ಥಿಕ ಕ್ರೋಡೀಕರಣ-ಹಂಚಿಕೆ ಮುಖ್ಯವಾಗು ತ್ತದೆಯೇ ವಿನಾ ಉಳಿದದ್ದೆಲ್ಲವೂ ಗೌಣ. ಸಮಾವೇಶಗಳಲ್ಲಿ ಕುಟುಂಬ ರಾಜಕಾರಣದ ವಿರುದ್ಧ ಎಷ್ಟೇ ಮಾತನಾಡಿದರೂ, ಚುನಾವಣೆ ಬಂದಾಗ ವ್ಯಕ್ತಿಯ ಹಣಬಲ ಮತ್ತು ಗೆಲ್ಲುವ ಶಕ್ತಿಯೇ ಟಿಕೆಟ್ಗೆ ಮಾನದಂಡ. ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಆಯ್ಕೆ ಯಲ್ಲೂ ಕಾಂಗ್ರೆಸ್ ಅದೇ ಮಾನದಂಡ ಅನುಸರಿಸಿತು.

Screenshot_2 R

ಶಾಮನೂರು ಕುಟುಂಬದ ರಾಜಕೀಯ ಪ್ರಾಬಲ್ಯ ಹಾಗೂ ಸಂಪನ್ಮೂಲ ಶಕ್ತಿಗಳು ಪಕ್ಷಕ್ಕೆ ಭವಿಷ್ಯದಲ್ಲೂ ಮುಖ್ಯವಾಗಿರುವುದರಿಂದ ಅವರ ಕುಟುಂಬವನ್ನು ಕಡೆಗಣಿಸುವುದು ಸುಲಭದ ಮಾತಲ್ಲ. ಎಚ್.ವೈ.ಮೇಟಿ ಪ್ರಭಾವಿ ರಾಜಕಾರಣಿಯಾಗಿದ್ದರಿಂದ ಅವರ ಪುತ್ರ ಉಮೇಶ್ ಮೇಟಿಗೂ ಟಿಕೆಟ್ ಕೊಟ್ಟು ಕಣಕ್ಕಿಳಿಸಲಾಗಿದೆ.

ಆದರೆ, ಸುರಕ್ಷಿತ ಎಂದು ಪರಿಗಣಿಸಲಾದ ಕ್ಷೇತ್ರಗಳಲ್ಲಿ ಕುಟುಂಬಸ್ಥರನ್ನು ನಿಲ್ಲಿಸದಿದ್ದರೂ ಗೆಲ್ಲುತ್ತೇವೆ ಎಂಬ ವಿಶ್ವಾಸವಿದ್ದಾಗ ಪಕ್ಷಗಳು ಪ್ರಯೋಗ ಮಾಡಿದ್ದನ್ನು ನೋಡಬಹುದು. ಬಿಜೆಪಿ ನಾಯಕ, ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿಧನದ ನಂತರ, 2019ರ ಲೋಕಸಭೆ ಚುನಾವಣೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್‌ಗೆ ಟಿಕೆಟ್ ನೀಡಬೇಕೆಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ರಿಂದ ಒತ್ತಡವಿದ್ದರೂ, ದಿಲ್ಲಿ ನಾಯಕರು ಬೇರೆಯೇ ಲೆಕ್ಕಾಚಾರ ಹಾಕಿ ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿದ್ದರು. ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದರಿಂದ ಅನಂತ್ ಕುಮಾರ್ ಕುಟುಂಬದವರಲ್ಲದವರಿಗೆ ಟಿಕೆಟ್ ಕೊಟ್ಟರೂ ಗೆಲ್ಲುವುದು ನಿಶ್ಚಿತವಾಗಿತ್ತು.

ಹೀಗಾಗಿ, ಬಿಜೆಪಿ ಇಲ್ಲಿ ಪ್ರಯೋಗ ಮಾಡಿತು. ಆದರೆ, ತೀವ್ರ ಹಣಾಹಣಿ ಇರುವ ಸವಾಲಿನ ಕ್ಷೇತ್ರಗಳಲ್ಲಿ ಇಂಥ ಪ್ರಯೋಗದ ಸಾಹಸಗಳನ್ನು ಮಾಡುವುದು ಅಪಾಯಕಾರಿ. ಗಾಳಿ ವಿರುದ್ಧ ಗುದ್ದಾಟ ಮಾಡಿ ಪೆಟ್ಟು ತಿಂದಿರುವುದರಿಂದ ಪಕ್ಷಗಳು ಇಂಥ ಸಾಹಸ ಮಾಡುವುದು ಈಗ ಕಡಿಮೆಯಾಗಿದೆ.

2021ರ ಹಾನಗಲ್ ಉಪಚುನಾವಣೆ ಇದಕ್ಕೆ ಉದಾಹರಣೆಯಾಗಬಲ್ಲದು. ಮಾಜಿ ಸಚಿವ ಸಿ.ಎಂ.ಉದಾಸಿಯವರ ನಿಧನದಿಂದ ತೆರವಾದ ಕ್ಷೇತ್ರದಲ್ಲಿ ತಾವು ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಪುತ್ರ ಮತ್ತು ಆಗ ಹಾವೇರಿ ಸಂಸದರಾಗಿದ್ದ ಶಿವಕುಮಾರ್ ಉದಾಸಿ ಹೈಕಮಾಂಡ್ ಬಳಿ ಮನವಿ ಮಾಡಿದ್ದರು. ಆದರೆ, ಹಾನಗಲ್ ಟಿಕೆಟ್ ಅನ್ನು ಶಿವರಾಜ್ ಸಜ್ಜನ್ʼಗೆ ನೀಡಲಾಯಿತು. ಅವರು ಚುನಾವಣೆಯನ್ನು ಹೀನಾಯವಾಗಿ ಸೋತರು.

Screenshot_3 R

ಪಕ್ಷದ ಕಾರ್ಯಕರ್ತರು, ಮುಖಂಡರು ಕೂಡ ಶಿವಕುಮಾರ್ ಉದಾಸಿಗೆ ಟಿಕೆಟ್ ನೀಡಿ ಎಂದು ಹೇಳಿದ್ದರೂ, ಅದನ್ನು ನಿರ್ಲಕ್ಷಿಸಲಾಗಿತ್ತು. ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯ ಹಾನಗಲ್‌ನ ಬಿಜೆಪಿ ಮುಖಭಂಗ ಅನುಭವಿಸಿತ್ತು. ಈ ಸೋಲಿನ ಅಲೆಯಿಂದಾಗಿ ಇದೇ ಕ್ಷೇತ್ರದಲ್ಲಿ 2023ರ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಸೋತಿತು.

2024ರ ಲೋಕಸಭೆ ಚುನಾವಣೆಗೆ ಹಾವೇರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಶಿವಕುಮಾರ್ ಉದಾಸಿ ಹಿಂದೇಟು ಹಾಕಿದ್ದರಿಂದ ಬಸವರಾಜ ಬೊಮ್ಮಾಯಿ ಅವರು ಸ್ಪರ್ಧಿಸಿ ಗೆದ್ದರು. ಅವರಿಂದ ತೆರವಾದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿಯವರನ್ನೇ ಬಿಜೆಪಿ ಕಣಕ್ಕಿಳಿಸಿತು. ಆದರೆ, ವಿಚಿತ್ರ ಎಂದರೆ, ಭರತ್‌ರನ್ನು ಶಿಗ್ಗಾಂವಿ ಮತದಾರರು ಶಾಸಕರಾಗಿ ಸ್ವೀಕರಿಸಲಿಲ್ಲ.

ಹೀಗಾಗಿ, ಎಲ್ಲಾ ಕ್ಷೇತ್ರಗಳಲ್ಲಿ ಕುಟುಂಬ ರಾಜಕಾರಣಕ್ಕೆ ಜನಮನ್ನಣೆ ಇರುತ್ತದೆ ಎಂದೇನಲ್ಲ. ಕುಟುಂಬಿಕರ ಆಯ್ಕೆ ವಿಷಯದಲ್ಲಿ ಜನರು ಸಮಯ-ಸಂದರ್ಭಕ್ಕನು ಗುಣವಾಗಿ ತೀರ್ಪು ನೀಡುತ್ತಾರೆ ಎನ್ನುವುದೂ ಉಖಾರ್ಹ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯವರನ್ನು ಮೂರು ಬಾರಿ (ಮಂಡ್ಯ, ರಾಮನಗರ, ಚೆನ್ನಪಟ್ಟಣ) ಚುನಾವಣೆ ಸ್ಪರ್ಧೆ ಮೂಲಕ ‘ಪೊಲಿಟಿಕಲಿ ಲಾಂಚ್’ ಮಾಡಲು ಯತ್ನಿಸಿದರೂ, ಜನಾದೇಶ ನಿಖಿಲ್ ಪರ ಇರಲಿಲ್ಲ.

ಚಿತ್ರನಟ ಅಂಬರೀಷ್ ಅವರ ನಿಧನದ ನಂತರ ಮಂಡ್ಯ ಕ್ಷೇತ್ರದಿಂದ ಅವರ ಪತ್ನಿ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ, ಗೆದ್ದಿದ್ದರು. ಅಂಬರೀಷ್ ಸಾವಿನ ನೋವಿನಲ್ಲಿದ್ದ ಮಂಡ್ಯ ಜನತೆ ಸುಮಲತಾರಿಗೆ ಸಂಸತ್ ಸ್ಥಾನದ ಉಡುಗೊರೆ ನೀಡಿದ್ದರು. ಆದರೆ, 5 ವರ್ಷಗಳ ನಂತರ ಪರಿಸ್ಥಿತಿ ಸುಮಲತಾ ಪರ ಇರಲಿಲ್ಲ.

ಪಕ್ಷೇತರರಾಗಿ ಸ್ಪರ್ಧಿಸಿದರೂ, ಗೆಲ್ಲುವ ಸಾಧ್ಯತೆಗಳ ಬಗ್ಗೆ ಅನೇಕರಿಗೆ ಅನುಮಾನಗಳಿದ್ದವು ಮತ್ತು 5 ವರ್ಷಗಳ ಹಿಂದೆ ಇದ್ದ ಅನುಕಂಪದ ಅಲೆ 2024ರಲ್ಲಿ ಇರಲಿಲ್ಲ. ಇದನ್ನು ರಾಜಕೀಯ ಪಕ್ಷಗಳೂ ಅರಿತುಕೊಂಡಿದ್ದವು. ರಾಜ್ಯದ ಮಾಜಿ ಸಿಎಂ ವೀರೇಂದ್ರ ಪಾಟೀಲರ ಪುತ್ರ ಕೈಲಾಶ್‌ನಾಥ್ ಪಾಟೀಲ, ಜೆ.ಎಚ್.ಪಟೇಲರ ಪುತ್ರ ಮಹಿಮಾ ಪಟೇಲ್ ತಂದೆಯವರ ಪ್ರಭಾವಳಿಯಲ್ಲಿ ಒಂದೆರಡು ಚುನಾವಣೆ ಗೆದ್ದರೂ, ನಂತರದಲ್ಲಿ ಅದೇ ವೇಗ ಮತ್ತು ಪ್ರಭಾವವನ್ನು ರಾಜಕೀಯದಲ್ಲಿ ವಿಸ್ತರಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಅಪ್ಪನ ಪ್ರಭಾವಳಿಯಲ್ಲಿ ರಾಜಕಾರಣದ ಮುಖ್ಯ ವೇದಿಕೆಗೆ ಬಂದರೂ ರಾಜ್ಯವ್ಯಾಪಿ ಜನಪ್ರಿಯರಾಗಲು ಸಾಧ್ಯವಾಗಲಿಲ್ಲ. ಕೆಂಗಲ್ ಹನುಮಂತಯ್ಯರ ಮೊಮ್ಮಗ ಎಂದು ಪ್ರಚಾರ ಮಾಡಿದರೂ, 2013ರ ವಿಧಾನಸಭೆ ಚುನಾವಣೆಯಲ್ಲಿ ಮಲ್ಲೇಶ್ವರಂ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆಂಗಲ್ ಶ್ರೀಪಾದರೇಣು ಹೀನಾಯವಾಗಿ ಸೋತರು.

ಪರಿವಾರವಾದ ದೇಶದ ರಾಜಕಾರಣಕ್ಕೆ ಒಳ್ಳೆಯದೋ ಕೆಟ್ಟದೋ ಎಂಬ ಬಗ್ಗೆ ಅಕ್ಯಾಡೆ ಮಿಕ್ ಚರ್ಚೆಗಳನ್ನು ಮಾಡಬಹುದು. ಆದರೆ, ಪರಿವಾರವಾದವನ್ನು ಬಿಟ್ಟು ರಾಜಕೀಯ ನಡೆಸಲು ಸಾಧ್ಯವೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ಕುಟುಂಬ ಸೇರಿದಂತೆ ಕಾಂಗ್ರೆಸ್ಸಿನ ಅನೇಕರನ್ನು ಪರಿವಾರವಾದದ ಹೆಸರಲ್ಲಿ ಗುರಿ ಮಾಡಬಹುದು. ಆದರೆ, ಬಿಜೆಪಿ ಕೂಡ ವಂಶ ರಾಜಕಾರಣದ ಕುಡಿಗಳನ್ನು ಪ್ರೋತ್ಸಾಹಿಸಿ ಬೆಳೆಸಿರುವುದು ವಾಸ್ತವವೇ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಕೂಡ ವಂಶ ರಾಜಕಾರಣದ ಹಿನ್ನೆಲೆಯಿಂದ ಬಂದವರು. ಅವರ ತಂದೆ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರು ಪಟನಾ ಪಶ್ಚಿಮ ಕ್ಷೇತ್ರದಿಂದ 4 ಬಾರಿ ಶಾಸಕರಾಗಿದ್ದರು. ತಂದೆಯ ಮರಣದ ನಂತರ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದ್ದ ನಿತಿನ್, 2006ರಲ್ಲಿ ತಂದೆ ಪ್ರತಿನಿಧಿಸಿದ್ದ ಪಟನಾ ಪಶ್ಚಿಮ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದಿದ್ದರು.

ಕ್ಷೇತ್ರ ಪುನರ್‌ವಿಂಗಡಣೆಯ ನಂತರ, ಪಟನಾದ ಬಂಕಿಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ, 2010, 2015, 2020 ಮತ್ತು 2025ರಲ್ಲಿ ಆಯ್ಕೆಯಾಗುತ್ತಾ ಬಂದಿದ್ದಾರೆ. ನಿತಿನ್ ತಮ್ಮ ವೈಯಕ್ತಿಕ ವರ್ಚಸ್ಸನ್ನು ವೃದ್ಧಿಸಿಕೊಂಡಿದ್ದರಿಂದ ರಾಜಕಾರಣದಲ್ಲಿ ಯಶಸ್ವಿಯಾಗಿ, ಈಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೇರಿದ್ದಾರೆ.

ಗೃಹ ಸಚಿವ ಅಮಿತ್ ಶಾ ಅವರ ಪುತ್ರ ರಾಜಕಾರಣದಲ್ಲಿ ಇರದಿರಬಹುದು; ಆದರೆ, ಅವರು ರಾಜಕೀಯ ವ್ಯವಸ್ಥೆಯೊಂದಿಗೆ ತಳುಕು ಹಾಕಿಕೊಂಡಿರುವ ಬಿಸಿಸಿಐ ಅಧ್ಯಕ್ಷರಾಗಿ, ಐಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವುದು ಉಲ್ಲೇಖಾರ್ಹ.

ಕರ್ನಾಟಕದಲ್ಲಿ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ ಕೂಡ ಬಿ.ಎಸ್. ಯಡಿಯೂ ರಪ್ಪ ನವರ ಕಾರಣದಿಂದಲೇ ರಾಜಕಾರಣದಲ್ಲಿ ಸ್ಥಾನಮಾನ ಪಡೆದುಕೊಂಡಿದ್ದಾರೆ ಮತ್ತು ಈಗ ಸ್ವಂತ ವರ್ಚಸ್ಸು ಬೆಳೆಸಿಕೊಂಡಿದ್ದಾರೆ. ರಾಜಕಾರಣದಲ್ಲಿ ನೇತಾಗಳು ಮಾತನಾಡಿದ್ದೇ ನಡೆಯುತ್ತದೆ ಎಂದೇನಲ್ಲ.

ಕಾರ್ಯಕರ್ತರಲ್ಲಿ ಹುಮ್ಮಸ್ಸು-ಉತ್ಸಾಹ ಹೆಚ್ಚಿಸಲು ಜನಸಭೆಗಳಲ್ಲಿ ಪರಿವಾರವಾದದ ವಿರುದ್ಧ ಗುಡುಗಿ ಭಾಷಣ ಮಾಡುತ್ತಾರೆ. ಪೊಲಿಟಿಕಲ್ ನರೇಟಿವ್ ಸೆಟ್ ಮಾಡಲು ಇದು ಸಹಕಾರಿ. ಇಂದು ನರೇಟಿವ್‌ಗಳ ಮೇಲೆಯೇ ರಾಜಕಾರಣ ನಡೆಯುತ್ತಿರುವುದರಿಂದ ಸತ್ಯ ಕಳೆದುಹೋಗುತ್ತಿದ್ದು, ಸುಳ್ಳುಗಳೇ ವಿಜೃಂಭಿಸುತ್ತಿವೆ.

‘ವಂಶವಾದ ಇಲ್ಲದ ರಾಜಕಾರಣ ಮಾಡುತ್ತೇವೆ’ ಎನ್ನುತ್ತಲೇ ಅದಕ್ಕೆ ಮಣೆ ಹಾಕುವ ಅನಿವಾರ್ಯ ರಾಜಕೀಯ ವ್ಯವಸ್ಥೆಗೆ ನಾವು ಹೊಂದಿಕೊಂಡುಬಿಟ್ಟಿದ್ದೇವೆ. ಅಜಿತ್ ಪವಾರ್ ಪತ್ನಿ ಸುನೇತ್ರ ಪವಾರ್ ಸಕ್ರಿಯ ರಾಜಕಾರಣಿಯಾಗಿರಲಿಲ್ಲ. ಡಿಸಿಎಂ ಸ್ಥಾನ ನಿರ್ವಹಿಸುವ ಸಾಮರ್ಥ್ಯ ಇದೆಯೋ ಇಲ್ಲವೋ ಎಂಬುದು ಆಗ ಮುಖ್ಯವಾಗಿರಲಿಲ್ಲ. ಅಜಿತ್ ಪವಾರ್ ಸಾವಿನಿಂದುಂಟಾದ ದುಃಖದ ಪರಿಸ್ಥಿತಿಯಲ್ಲಿ ಅವರ ಪತ್ನಿಯನ್ನೇ ಡಿಸಿಎಂ ಸ್ಥಾನಕ್ಕೆ ಆಯ್ಕೆ ಮಾಡುವುದು ಆ ಕ್ಷಣಕ್ಕೆ ರಾಜಕೀಯವಾಗಿ ಸೂಕ್ತ ನಿರ್ಧಾರ ವಾಗಿತ್ತು ಮತ್ತು ಅಜಿತ್ ಪವಾರ್ ಕುಟುಂಬದ ಹಿಡಿತ ಇಲ್ಲದಿದ್ದರೆ ಎನ್ʼಸಿಪಿ ಹೋಳಾಗ ಬಹುದು ಎಂಬ ಆತಂಕವೂ ಇದ್ದುದರಿಂದ ಸುನೇತ್ರರಿಗೆ ಜವಾಬ್ದಾರಿ ನೀಡಲಾಯ್ತು.

ಹಾಗಂತ, ಮುಂದಿನ ಅವಧಿಯಲ್ಲೂ (ಎನ್‌ಡಿಎ ಗೆದ್ದರೆ) ಅವರಿಗೆ ಡಿಸಿಎಂ ಸ್ಥಾನ ಸಿಗುತ್ತದೆ ಎಂಬ ಖಾತರಿ ಇಲ್ಲ. ಅದು ಅವರ ರಾಜಕೀಯ ಸಾಮರ್ಥ್ಯ ಹಾಗೂ ವರ್ಚಸ್ಸು ರೂಪಿಸಿ ಕೊಳ್ಳುವುದರ ಮೇಲೆ ಅವಲಂಬಿತವಾಗಿದೆ.

ಆಂಧ್ರಪ್ರದೇಶದಲ್ಲಿ ವೈ.ಎಸ್.ರಾಜಶೇಖರ ರೆಡ್ಡಿಯವರ ಹಠಾತ್ ಸಾವಿನ ನಂತರ ಖಾಲಿ ಯಾಗಿದ್ದ ಸ್ಥಾನವನ್ನು ಅವರ ಪುತ್ರ ಜಗನ್ ರೆಡ್ಡಿ ತುಂಬಿದರು. ಜನರೂ ಜಗನ್ ರೆಡ್ಡಿ ರಾಜಕೀಯ ಪ್ರವೇಶ ಒಪ್ಪಿಕೊಂಡು, ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿಯೂ ಆಯ್ಕೆ ಮಾಡಿದರು. ಆಂಧ್ರದ ಹಾಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಮ್ಮ ಪುತ್ರ ನಾರಾ ಲೋಕೇಶ್‌ರನ್ನು ಉತ್ತರಾಧಿಕಾರಿಯಾಗಿ ಸಿದ್ಧಪಡಿಸಿದ್ದು, ಜನಬೆಂಬಲ ವೂ ವ್ಯಾಪಕವಾಗಿದೆ.

ಉತ್ತರಾಧಿಕಾರಿಯನ್ನು ಮೊದಲೇ ಸಿದ್ಧಪಡಿಸದಿದ್ದರೆ ಏನಾಗುತ್ತದೆ ಎನ್ನಲು ತಮಿಳು ನಾಡಿನ ಎಐಎಡಿಎಂಕೆ ಉದಾಹರಣೆಯಾಗಬಲ್ಲದು. ಜೆ.ಜಯಲಲಿತಾ ನಂತರ ಯಾರು ಎಂಬ ಪ್ರಶ್ನೆಗೆ ಅವರ ಸಾವಿನ ನಂತರವೂ ಉತ್ತರ ಇರಲಿಲ್ಲ. ಹಿರಿಯ ನಾಯಕರಾದ ಪನ್ನೀರ್ ಸೆಲ್ವಂ ಮತ್ತು ಪಳನಿ ಸ್ವಾಮಿ ‘ನಾ ಮುಂದು ತಾ ಮುಂದು’ ಎಂದು ಕಿತ್ತಾಡಿದರು.

ಬಹುಶಃ ಜಯಲಲಿತಾ ತಮ್ಮ ಕುಟುಂಬದಿಂದಲೇ ಒಬ್ಬರನ್ನು ಉತ್ತರಾಧಿಕಾರಿಯನ್ನಾಗಿ ಮೊದಲೇ ಆಯ್ಕೆ ಮಾಡಿದ್ದರೆ ಎಐಎಡಿಎಂಕೆ ಈ ಪರಿಯ ಬಿಕ್ಕಟ್ಟನ್ನು ಎದುರಿಸುತ್ತಿರ ಲಿಲ್ಲವೇನೋ. ಇಂಥ ವ್ಯವಸ್ಥೆ ಅನಿವಾರ್ಯ ಎಂದೇನಲ್ಲ. ಆದರೆ, ಕುಟುಂಬದ ನಿಯಂತ್ರಣ ತಪ್ಪಿದಾಗ ನಾಯಕತ್ವದ ಪ್ರಶ್ನೆ ಉದ್ಭವಿಸಿ ಪಕ್ಷ ಹೋಳಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ.

ಒಡಿಶಾದಲ್ಲಿ ಬಿಜೆಡಿ ನಾಯಕ ನವೀನ್ ಪಟ್ನಾಯಕ್ ನಂತರ ಯಾರು ಎಂಬ ಪ್ರಶ್ನೆಗೆ ಈಗಲೂ ಉತ್ತರವಿಲ್ಲ. ಕಾಂಗ್ರೆಸ್‌ಗೆ ಕೂಡ ಗಾಂಧಿ ಕುಟುಂಬದ ಹಿಡಿತದಲ್ಲಿರುವುದು ಅನಿವಾರ್ಯ. ಇಲ್ಲವಾದಲ್ಲಿ ಪಕ್ಷ ಹೋಳಾಗುವುದು ಖಚಿತ ಎನ್ನುವುದು ಕಾಂಗ್ರೆಸ್ಸಿಗರಿಗೂ ಗೊತ್ತಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕೂಡ ಭವಿಷ್ಯದಲ್ಲಿ ತಮ್ಮ ಸೋದರ ಸಂಬಂಧಿ ಅಭಿಷೇಕ್ ಬ್ಯಾನರ್ಜಿಗೆ ಅಧಿಕಾರ ನೀಡುವುದು ನಿಶ್ಚಿತ.

ಅದೇ ಕಾರಣಕ್ಕೆ ಪಕ್ಷದ ಬಹುತೇಕ ವ್ಯವಹಾರಗಳನ್ನು ಸಚಿವ ಅಭಿಷೇಕ್ ಬ್ಯಾನರ್ಜಿಯೇ ನೋಡಿಕೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಎಸ್‌ಪಿಯ ಮಾಯಾವತಿ ಕೂಡ ಸೋದರಳಿಯ ಆಕಾಶ್ ಆನಂದ್‌ರನ್ನು ಸಜ್ಜುಗೊಳಿಸುತ್ತಿದ್ದಾರೆ.

ಎಲ್ಲಿಯವರೆಗೆ ಪಕ್ಷದ ಬೆಂಬಲಿಗರು, ಮತದಾರರು ಇವರನ್ನು ತಿರಸ್ಕರಿಸುವುದಿಲ್ಲವೋ ಅಲ್ಲಿಯವರೆಗೆ ಈ ವ್ಯವಸ್ಥೆ ಮುಂದುವರಿಯುತ್ತಲೇ ಇರುತ್ತದೆ. ಬಿಹಾರದಲ್ಲಿ ಲಾಲೂ ಯಾದವರ ಆರ್‌ಜೆಡಿ, ಚಿರಾಗ್ ಪಾಸ್ವಾನ್‌ರ ಎಲ್‌ಜೆಪಿ, ಈಗ ನಿತೀಶ್ ಕುಮಾರ್ ಬಳಿಕ ನಿಶಾಂತ್ ಪ್ರವೇಶಿಸಿರುವ ಜೆಡಿಯು, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಮಾಯಾ ವತಿಯವರ ಬಿಎಸ್‌ಪಿ, ಜಾರ್ಖಂಡ್‌ನಲ್ಲಿ ಸೊರೇನ್ ಕುಟುಂಬದ ಜೆಎಂಎಂ, ಕರ್ನಾಟಕ ದಲ್ಲಿ ಜೆಡಿಎಸ್ ಹೀಗೆ ಪಕ್ಷಗಳ ಅಸ್ತಿತ್ವವು ಕುಟುಂಬಗಳ ಮೇಲೆಯೇ ನಿರ್ಭರ ವಾಗಿರುವುದರಿಂದ ಕುಟುಂಬ ಪ್ರಾಬಲ್ಯವನ್ನು ಭಾರತದ ರಾಜಕಾರಣದಿಂದ ದೂರ ವಿಡುವುದು ಅಸಾಧ್ಯ.

ದೇಶದ ಬಹುಪಾಲು ಪ್ರಾದೇಶಿಕ ಪಕ್ಷಗಳನ್ನು ಕುಟುಂಬಗಳೇ ನಡೆಸುತ್ತಿವೆ. ರಾಷ್ಟೀಯ ಪಕ್ಷಗಳಿಗೂ ನಿರ್ದಿಷ್ಟ ರಾಜ್ಯ (ಕರ್ನಾಟಕ ಬಿಜೆಪಿ) ಹಾಗೂ ಕ್ಷೇತ್ರಗಳಲ್ಲಿ ಕುಟುಂಬಗಳ ಪ್ರಭಾವ-ಸಾಮರ್ಥ್ಯ-ಆರ್ಥಿಕ ಶಕ್ತಿಯನ್ನು ಮೀರಿ ರಾಜಕಾರಣ ಮಾಡಲು ಸಾಧ್ಯವಾಗದ ಕಾರಣ, ಸೋಲು-ಗೆಲುವು ಏನೇ ಇರಲಿ, ಸಮರ್ಥ್ ಶಾಮನೂರು ಅಂಥವರಿಗೆ ಟಿಕೆಟ್ ನೀಡುವುದು ಅನಿವಾರ್ಯವಾಗುತ್ತದೆ.

ಕೆ. ರಾಘವ ಶರ್ಮ ನಿಡ್ಲೆ

View all posts by this author