Lokesh Kaayarga Column: ಸೇನೆಯ ಜತೆಗೆ ನಾವೂ ಸಮರ ಸನ್ನದ್ಧರಾಗಬೇಕಿದೆ !
ವಿಶ್ವದ 30ಕ್ಕೂ ಹೆಚ್ಚು ದೇಶಗಳಲ್ಲಿ ಮಿಲಿಟರಿ ಶಿಕ್ಷಣ ಕಡ್ಡಾಯವಿದೆ. 150 ಕೋಟಿ ಜನಸಂಖ್ಯೆಯ ಭಾರತದಲ್ಲಿ ಇದು ಸಾಧ್ಯವೂ ಇಲ್ಲ. ಇದರ ಅಗತ್ಯವೂ ಇಲ್ಲ. ಆದರೆ ಯುದ್ಧ, ಅಗ್ನಿ ಅವಘಡ, ಪ್ರಾಕೃತಿಕ ದುರಂತಗಳಂತಹ ತುರ್ತು ಸಂದರ್ಭಗಳಲ್ಲಿ ನಾವು ಹೇಗೆ ನಡೆದುಕೊಳ್ಳಬೇಕೆಂಬ ಪ್ರಾಥಮಿಕ ತಿಳಿವಳಿಕೆ ಎಲ್ಲರಿಗೂ ಅಗತ್ಯ. ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಮಕ್ಕಳನ್ನು ನೀಟ್, ಜೆಇಇ, ಸಿಇಟಿಗೆ ತಯಾರಿ ಮಾಡುವ ಭರದಲ್ಲಿ ಆಪತ್ಕಾಲದ ಶಿಕ್ಷಣ ನಮಗೆ ಗೌಣವಾಗಿದೆ. ಹೀಗಾಗಿ ಈ ದೇಶದಲ್ಲಿ ವರ್ಷವೊಂದಕ್ಕೆ 30 ಸಾವಿರಕ್ಕಿಂತ ಹೆಚ್ಚು ಮಂದಿ ನೀರಲ್ಲಿ ಮುಳುಗಿ ಸಾಯುತ್ತಾರೆ. ಅಲ್ಪ ಸ್ವಲ್ಪ ಈಜು ಗೊತ್ತಿದ್ದರೂ ಇವರಲ್ಲಿ ಹೆಚ್ಚಿನವರು ಬದುಕುಳಿಯಬಹುದು. ಯುದ್ಧ ಕಾರ್ಮೋಡ ಕವಿದಿರುವ ಈ ಹೊತ್ತಲ್ಲಿ ನಮ್ಮ ಶಿಕ್ಷಣ ಮತ್ತು ಬದುಕಿನ ಆದ್ಯತೆಗಳ ಬಗ್ಗೆಯೂ ಪುನರಾವಲೋಕನ ನಡೆಯಬೇಕಿದೆ.


ಲೋಕಮತ
kaayarga@gmail.com
ಸುಮಾರು 54 ವರ್ಷಗಳ ಬಳಿಕ ದೇಶದಲ್ಲಿ ಮತ್ತೊಮ್ಮೆ ಯುದ್ಧದ ಸೈರನ್ ಮೊಳಗಿದೆ. ಪಹಲ್ಗಾಮ್ ಘಟನೆ ಬಳಿಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲೇಬೇಕೆಂಬ ಜನಾಗ್ರಹಕ್ಕೆ ಮಣಿದು ಸರಕಾರವು ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಯುದ್ಧಕ್ಕೆ ಪೂರ್ವಭಾವಿಯಾಗಿ ಮೇ7ರಂದು ದೇಶಾದ್ಯಂತ ಅಣಕು ತಾಲೀಮು ನಡೆಸಲು ಕೇಂದ್ರ ಸರಕಾರ ಸೂಚನೆ ನೀಡಿದೆ. ಆದರೆ ಯುವ ಪೀಳಿಗೆಯ ಬಹುತೇಕರಿಗೆ ಮಾಕ್ ಡ್ರಿಲ್ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಅದರಲ್ಲೂ ಸೇನೆ ಮತ್ತು ಯುದ್ಧದ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದ ದಕ್ಷಿಣ ಭಾರತೀಯರಿಗೆ ಈ ಸಿದ್ಧತೆಯ ಬಗ್ಗೆ ಗೊಂದಲವಿದೆ. ನಮ್ಮ ಶಾಲಾ-ಕಾಲೇಜುಗಳಲ್ಲಿ ಕೂಡ ಯುದ್ಧದ ಸನ್ನಿವೇಶಗಳಲ್ಲಿ ನಾಗರಿಕರಾದ ನಮ್ಮ ನಡೆ ಹೇಗಿರಬೇಕೆಂದು ಎಂದೂ ಪಾಠ ಹೇಳಿ ಕೊಟ್ಟಿಲ್ಲ. ಈಗ ಯುದ್ಧ ಕಾಲದಲ್ಲಿ ಪೂರ್ವ ಸಿದ್ಧತೆಯ ಬಗ್ಗೆ ತಿಳಿಯಲು ಮುಂದಾಗಿದ್ದೇವೆ. ಇದು ಅಣಕು ಪ್ರದರ್ಶನ ಎಂದು ಕಡೆಗಣಿಸದೆ, ನೈಜ ಯುದ್ಧಕ್ಕೆ ಪೂರ್ವ ತಯಾರಿ ಎಂದೇ ಭಾವಿಸಿ ಸಮರ ಸನ್ನದ್ಧರಾಗಬೇಕಿದೆ.
ಪಾಕಿಸ್ತಾನದೊಂದಿಗೆ ಯುದ್ಧದ ಮಾತು ಬಂದಾಗ ಇಸ್ರೇಲ್ ಎಂಬ ಪುಟ್ಟ ದೇಶವನ್ನು ಆಗಾಗ ನೆನಪಿಸಿಕೊಳ್ಳಲಾಗುತ್ತದೆ. ಶತ್ರು ದೇಶಗಳಿಂದಲೇ ಸುತ್ತುವರಿದ ರಾಷ್ಟ್ರವೊಂದು ಉಗ್ರರೊಂದಿಗಿನ ಸಂಘರ್ಷದ ಮಧ್ಯೆಯೇ ಹಲವು ಅರಬ್ ರಾಷ್ಟ್ರಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ, ಪ್ರತಿದಾಳಿಯನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಪಡೆದಿರುವುದು ಅಸಾಮಾನ್ಯ ಎಂದು ವಿಶ್ಲೇಷಿಸ ಲಾಗುತ್ತದೆ. ಆದರೆ ಇಸ್ರೇಲ್ ಪ್ರಜೆಗಳಿಗೆ ಯುದ್ಧ ಸಿದ್ಧತೆಯ ಬಗ್ಗೆ ಹೇಳಿಕೊಡಬೇಕಾದ ಅಗತ್ಯವಿಲ್ಲ. ಅಲ್ಲಿ 18ರಿಂದ 26ನೇ ವಯಸ್ಸಿನೊಳಗೆ ಹೆಣ್ಣು- ಗಂಡೆಂಬ ಭೇದವಿಲ್ಲದೆ ಎಲ್ಲ ನಾಗರಿಕರಿಗೂ ಮಿಲಿಟರಿ ಸೇವೆ ಕಡ್ಡಾಯ. ಪುರುಷರು 3 ವರ್ಷ, ಮಹಿಳೆಯರು ಎರಡು ವರ್ಷ ಸೇನೆಯಲ್ಲಿ ಸಲ್ಲಿಸುವುದು ಕಡ್ಡಾಯವಾಗಿರುವುದರಿಂದ ಬಹುತೇಕರ ಮನೆಗಳು ಹಾಲಿ- ಮಾಜಿ ಯೋಧ ರಿಂದಲೇ ತುಂಬಿರುತ್ತವೆ. ಅವರಿಗೆ ಯುದ್ಧ ಸಿದ್ಧತೆಯ ಬಗ್ಗೆಯಾಗಲಿ, ಯುದ್ಧದ ಸಂದರ್ಭಗಳಲ್ಲಿ ಏನು ಮಾಡಬೇಕೆಂದಾಗಲಿ ಹೇಳಿ ಕೊಡಬೇಕಾದ ಅಗತ್ಯವಿಲ್ಲ.
ಇಸ್ರೇಲ್ ಎಂಬ ರಾಷ್ಟ್ರ ಅಸ್ತಿತ್ವಕ್ಕೆ ಬಂದ ಬಳಿಕ ಆ ರಾಷ್ಟ್ರದ ಮೇಲೆ ಎಷ್ಟು ಬಾರಿ ಆಕ್ರಮಣ ಗಳಾಗಿವೆ. ಸ್ವತ: ಇಸ್ರೇಲ್ ಎಷ್ಟು ಬಾರಿ ದಂಡೆತ್ತಿ ಹೋಗಿದೆ ಎನ್ನುವುದು ಆ ದೇಶದ ಪ್ರಜೆಗಳಿಗೂ ಲೆಕ್ಕವಿರಲಿಕ್ಕಿಲ್ಲ. ಆದರೆ ನಮ್ಮದು ಭಿನ್ನ ಪರಿಸ್ಥಿತಿ. ಕಳೆದ 5 ದಶಕಗಳಲ್ಲಿ ಅದೆಷ್ಟೇ ಪ್ರಚೋದನೆಗಳಿ ದ್ದರೂ ಕಾರ್ಗಿಲ್ ಯುದ್ಧ ಹೊರತುಪಡಿಸಿ ದೊಡ್ಡ ಪ್ರಮಾಣದಲ್ಲಿ ಶತ್ರುಗಳ ಮೇಲೆ ಯುದ್ಧ ಸಾರಿಲ್ಲ. ನಮ್ಮ ಸೈನಿಕರು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಯುದ್ಧದಂತಹ ಸನ್ನಿವೇಶ ಗಳಲ್ಲಿಯೇ ಕಾರ್ಯಾಚರಿಸುತ್ತಾ ಬಂದಿದ್ದಾರೆ. ಪಾಕಿಸ್ತಾನ, ಚೀನಾ ಮತ್ತು ಬಾಂಗ್ಲಾ ಗಡಿಗಳಲ್ಲಿ ಆಗಾಗ ಗುಂಡಿನ ಚಕಮಕಿಗೆ ಪ್ರತ್ಯುತ್ತರ ನೀಡುತ್ತಾ ಬಂದಿದ್ದಾರೆ. ಆದರೆ ಪೂರ್ಣ ಪ್ರಮಾಣದ ಯುದ್ಧದ ಸನ್ನಿವೇಶವೇ ಬೇರೆ. ಇಲ್ಲಿ ಸೈನಿಕರು ಮಾತ್ರವಲ್ಲ ನಾಗರಿಕರೂ ಕೂಡ ಯೋಧರಂತೆ ಯಾವುದೇ ಸಂಭಾವ್ಯ ಪರಿಸ್ಥಿತಿ ಎದುರಿಸಲು ಸಜ್ಜಾಗಿರಲೇಬೇಕು.
ಇದನ್ನೂ ಓದಿ: Lokesh Kayarga Column: ದಾಳಿ, ನಮ್ಮ ಬೆಡ್ ರೂಮ್‌ನಲ್ಲೂ ಆಗಬಹುದು !
ಪಾಕಿಸ್ತಾನ ಮತ್ತು ಚೀನಾದೊಂದಿಗಿನ ಈ ಹಿಂದಿನ ಯುದ್ಧದ ಸಂದರ್ಭಗಳಲ್ಲೂ ದಕ್ಷಿಣ ಭಾರತಕ್ಕೆ ಯುದ್ಧದ ಭೀತಿ ಇರಲಿಲ್ಲ. ದಕ್ಷಿಣದ ಸೈನಿಕರು ಯುದ್ಧದಲ್ಲಿ ಭಾಗವಹಿಸಿ ಪ್ರಾಣ ತೆತ್ತಿದ್ದರೂ, ಇಲ್ಲಿನ ನಾಗರಿಕರಿಗೆ, ನಾಗರಿಕ ನೆಲೆಗಳಿಗೆ ಯಾವುದೇ ಬೆದರಿಕೆ ಇರಲಿಲ್ಲ. ಆದರೆ ಈಗ ಪಾಕ್ ಇಲ್ಲವೇ ಚೀನಾ ಜೊತೆಗೆ ಯುದ್ಧ ನಡೆಸುವ ಅನಿವಾರ‌್ಯತೆ ಬಂದರೆ ಅದು ಉತ್ತರ ಭಾರತ ಮಾತ್ರವಲ್ಲ, ಭಾರತದ ವ್ಯಾಪ್ತಿಯನ್ನೂ ಮೀರಿ ಪರಿಣಾಮ ಬೀರುವುದು ಖಚಿತ. ಐದು ಸಾವಿರ ಕಿ.ಮೀ. ತನಕ ಸಾಗಬಲ್ಲ ಖಂಡಾಂತರ ಕ್ಷಿಪಣಿಗಳ ಬಲ ಹೊಂದಿರುವ ಭಾರತವು ಚೀನಾ ಇಲ್ಲವೇ ಪಾಕಿಸ್ತಾನದ ಯಾವುದೇ ಭಾಗದ ಮೇಲೆ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಚೀನಾ ಮತ್ತು ಪಾಕಿಸ್ತಾನದ ಬಳಿಯೂ ಇಂಥದ್ದೇ ಕ್ಷಿಪಣಿಗಳಿವೆ. ಶತ್ರು ದೇಶದ ಕ್ಷಿಪಣಿಗಳನ್ನು ಪತ್ತೆ ಹಚ್ಚಿ ಹೊಡೆದುರುಳಿಸುವ ವೈಮಾನಿಕ ರಕ್ಷಣಾ ವ್ಯವಸ್ಥೆ ( ಅಡ್ವಾನ್ಸ್‌ಡ್ ಏರ್‌ಡಿಫೆನ್ಸ್ ಸಿಸ್ಟಮ್) ನಮ್ಮಲ್ಲಿದ್ದರೂ ಶತ್ರುವಿನ ಸಾಮರ್ಥ್ಯವನ್ನು ನಾವು ಕೀಳಂದಾಜಿಸುವಂತಿಲ್ಲ.
ನಮ್ಮ ದೇಶದ ರಕ್ಷಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿರುವ ಹೆಚ್ಚಿನ ಸಂಸ್ಥೆಗಳು ಬೆಂಗಳೂರಿನಲ್ಲಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಇಸ್ರೋ, ಡಿಆರ್‌ಡಿಒ, ಎಚ್‌ಎಎಲ್, ಎನ್‌ಎಎಲ್, ಬಿಇಎಲ್, ಬೆಮೆಲ್ ಮತ್ತಿತರ ಸಂಸ್ಥೆಗಳಲ್ಲದೆ ಭಾರತದ ಬಹುತೇಕ ಐಟಿ ದಿಗ್ಗಜ ಸಂಸ್ಥೆಗಳು ಬೆಂಗಳೂರಿನಲ್ಲಿವೆ. ಕೈಗಾ ನಮ್ಮ ನೌಕಾಪಡೆಯ ಅತ್ಯಂತ ಪ್ರಮುಖ ಮತ್ತು ಆಯಕಟ್ಟಿನ ನೆಲೆಯಾಗಿದೆ. ಶತ್ರು ರಾಷ್ಟ್ರಗಳು ಖಂಡಿತವಾಗಿಯೂ ಇಂತಹ ನೆಲೆಗಳ ಮೇಲೆ ಕಣ್ಣಿಟ್ಟಿರುತ್ತವೆ. ಹೀಗಾಗಿ ಯುದ್ಧ ಸನ್ನಿವೇಶ ನಿರ್ಮಾಣವಾದರೆ ಸಂಭಾವ್ಯ ದಾಳಿಯನ್ನು ಎದುರಿಸಲು ಇಲ್ಲಿನ ನಾಗರಿಕರೂ ಸಿದ್ಧರಾಗಬೇಕಾಗುತ್ತದೆ.
ಆಪತ್ಕಾಲದ ತರಬೇತಿ ಕೊರತೆ
ದುರದೃಷ್ಟವಶಾತ್, ನಮ್ಮಲ್ಲಿ ಬಹುತೇಕರಿಗೆ ಯುದ್ಧ ಮಾತ್ರವಲ್ಲ ಆಪತ್ಕಾಲದಲ್ಲಿ ಎದುರಾಗುವ ಸವಾಲುಗಳನ್ನು ಹೇಗೆ ಎದುರಿಸಬೇಕೆಂಬ ಪ್ರಾಥಮಿಕ ಜ್ಞಾನವೂ ಇಲ್ಲ. ಬೆಂಕಿ ಅನಾಹುತ, ಅಪಘಾತ, ನೆರೆ, ಗುಡ್ಡ ಕುಸಿತದಂತಹ ಪ್ರಾಕೃತಿಕ ದುರಂತಗಳು ಘಟಿಸಿದಾಗ ಅದನ್ನು ಹೇಗೆ ಎದುರಿಸಬೇಕು, ಹೇಗೆ ನಡೆದುಕೊಳ್ಳಬೇಕು, ರಕ್ಷಣೆಯ ತಂತ್ರಗಳು ಹೇಗಿರಬೇಕೆಂಬ ಕನಿಷ್ಠ ಪ್ರಜ್ಞೆಯೂ ನಮಗಿಲ್ಲ. ಈ ಕಾರಣಕ್ಕಾಗಿಯೇ ಪ್ರಾಕೃತಿಕ ದುರಂತ, ಅಗ್ನಿ ಅವಘಡಗಳು ಘಟಿಸಿದಾಗ ನಮ್ಮಲ್ಲಿ ಆಗುವಷ್ಟು ಸಾವು-ನೋವು ಬೇರೆಲ್ಲೂ ಆಗುವುದಿಲ್ಲ. ನಮ್ಮಲ್ಲಿ ವರ್ಷವೊಂದಕ್ಕೆ 30 ಸಾವಿರಕ್ಕೂ ಹೆಚ್ಚು ಮಂದಿ ನೀರಲ್ಲಿ ಮುಳುಗಿ ಸಾಯುತ್ತಾರೆ. ವಿಶ್ವದ ಬೇರಾವ ರಾಷ್ಟ್ರದಲ್ಲೂ ಇಷ್ಟೊಂದು ಪ್ರಮಾಣದಲ್ಲಿ ಜನರು ಜಲಸಮಾಧಿಯಾಗುವುದಿಲ್ಲ. ಬಾಲ್ಯದಲ್ಲಿ ಸ್ವಲ್ವವಾದರೂ ಈಜು ಕಲಿತಿದ್ದರೆ ಇವರಲ್ಲಿ ಬಹುತೇಕರು ಬದುಕುಳಿಯುತ್ತಿದ್ದರು ಎನ್ನುವುದು ಕಟು ಸತ್ಯ.

ನಮ್ಮ ಮಕ್ಕಳನ್ನು ಎಂಜಿನಿಯರುಗಳನ್ನಾಗಿ, ವೈದ್ಯರನ್ನಾಗಿ ರೂಪಿಸುವ ಧಾವಂತದಲ್ಲಿ ಅವರಿಗೆ ಆಪತ್ಕಾಲದಲ್ಲಿ ಬದುಕುವ ಮತ್ತು ಬದುಕಿಸಲು ಬೇಕಾದ ಯಾವ ವಿದ್ಯೆಯನ್ನೂ ನಾವು ಹೇಳಿ ಕೊಡುತ್ತಿಲ್ಲ. ನಮ್ಮ ಶಿಕ್ಷಣ ಸಂಸ್ಥೆಗಳೂ ಕಲಿಸುತ್ತಿಲ್ಲ. ಈ ಸಂಬಂಧ ನೀತಿ ನಿಯಮಗಳನ್ನು ರೂಪಿಸಬೇಕಾದ ಸರಕಾರ ಪರಿಶಿಷ್ಟರಿಗೆ ಬೇರೆ, ಹಿಂದುಳಿದವರಿಗೆ ಬೇರೆ, ಮುಸ್ಲಿಮರಿಗೆ ಬೇರೆ, ಮುಸ್ಲಿಂ ಹೆಣ್ಣು ಮಕ್ಕಳಿಗೆ ಬೇರೆ..ಹೀಗೆ ಜಾತಿ,ಮತ, ಲಿಂಗದ ಆಧಾರದಲ್ಲಿ ಪ್ರತ್ಯೇಕಿಸಿ ಶಿಕ್ಷಣ ಕೊಡಲು ಹೊರಟಿದೆ.
ಯುದ್ಧಕ್ಕೂ ಶಿಕ್ಷಣ ನೀತಿಗೂ ಏನು ಸಂಬಂಧ ಎಂದು ನೀವು ಕೇಳಬಹುದು. ನಮ್ಮ ಕಿಸೆ ತುಂಬುವ ವಿದ್ಯೆಯ ಜತೆ ಬದುಕಿನಲ್ಲಿ ಅನಿವಾರ‌್ಯ ಆಗಬಹುದಾದ ಒಂದಷ್ಟು ವಿದ್ಯೆ ಎಲ್ಲರಿಗೂ ಅಗತ್ಯ. ಕನ್ನಡದ ರಿಯಾಲಿಟಿ ಶೋವೊಂದರಲ್ಲಿ ಸ್ಪರ್ಧಿಯೊಬ್ಬಳು ನಿತ್ಯ ಬಳಕೆಯ ತರಕಾರಿಗಳ ಹೆಸರು ಹೇಳಲು ಪರದಾಡುತ್ತಿದ್ದರೆ, ಉಳಿದವರು ನಗುತ್ತಿದ್ದರು. ಇದು ನಗುವುದಕ್ಕಿಂತ ನಾಚಿಕೆಪಟ್ಟು ಕೊಳ್ಳುವ ವಿಷಯ. ಬದುಕಿನಲ್ಲಿ ಯಾವುದೋ ಸಂದರ್ಭದಲ್ಲಿ ನಮ್ಮ ಅಡುಗೆ ನಾವೇ ಮಾಡಿ ಕೊಳ್ಳುವ ಸಂದರ್ಭ ಎದುರಾಗಬಹುದು. ನಾವಿರುವ ಕಟ್ಟಡಕ್ಕೆ ಬೆಂಕಿ ಬಿದ್ದು ಸ್ವಯಂ ರಕ್ಷಣೆ ಮಾಡಿಕೊಳ್ಳುವ ಪರಿಸ್ಥಿತಿ ಬರಬಹುದು. ನೀರಿನ ರಭಸಕ್ಕೆ ಸಿಲುಕಿ ಈಜಿ ದಡ ಸೇರಬೇಕಾದ ಅನಿವಾರ‌್ಯತೆ ಬರಬಹುದು. ಪ್ರಾಣಘಾತಕವಾದ ಯಾವುದೋ ಜಂತು, ಹುಳ ಕಚ್ಚಿದಾಗ ನಾವೇ ಪ್ರಥಮ ಚಿಕಿತ್ಸೆ ಮಾಡಿಕೊಳ್ಳಬೇಕಾಗಬಹುದು. ಆದರೆ ನಮ್ಮ ಸದ್ಯದ ನಮ್ಮ ಶಿಕ್ಷಣ ವ್ಯಾಪಾರ ‘ಓದು ಮತ್ತು ನೌಕರಿ ಗಿಟ್ಟಿಸು’ ಎಂಬ ಒಂದಂಶದ ಸೂತ್ರಕ್ಕೆ ಜೋತು ಬಿದ್ದಿದೆ. ನಮ್ಮಲ್ಲಿರುವ ಕಂದಕಗಳನ್ನು ಮುಚ್ಚಬೇಕಾದ ಶಿಕ್ಷಣ ಇನ್ನಷ್ಟು ಕಂದಕಗಳನ್ನು ಸೃಷ್ಟಿಸಿ ಸಮಾಜವನ್ನು ಮತ್ತಷ್ಟೂ ಹೋಳುಗಳನ್ನಾಗಿ ಮಾಡಲು ಹೊರಟಿದೆ.
ಭಾರತದಂತಹ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಾಗರಿಕರೆಲ್ಲರಿಗೂ ಮಿಲಿಟರಿ ಶಿಕ್ಷಣ ನೀಡಲು ಸಾಧ್ಯವಿಲ್ಲ. ಅದರ ಅಗತ್ಯವೂ ಇಲ್ಲ. ಆದರೆ ದೇಶಕ್ಕೆ ಅಥವಾ ಸ್ವಂತಕ್ಕೆ ಆಪತ್ತು ಎದುರಾದರೆ ಅದನ್ನು ಎದುರಿಸಲು ಬೇಕಾದ ಸಾಮಾನ್ಯ ಜ್ಞಾನ ಮತ್ತು ತಿಳಿವಳಿಕೆ ಎಲ್ಲರಿಗೂ ಅಗತ್ಯ. ಈ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಅವರ ಶೈಕ್ಷಣಿಕ ಕಲಿಕೆಯ ಭಾಗವಾಗಿಯೇ ಕಲಿಸಿಕೊಡುವುದು ಕೂಡ ಅಷ್ಟೇ ಅಗತ್ಯ. ಮುಂದೊಂದು ದಿನ ಇಸ್ರೇಲ್ ನಂತೆ ಭಾರತವೂ ಸದಾ ಯುದ್ಧ ಸನ್ನದ್ಧ ಸ್ಥಿತಿಯಲ್ಲಿರಬೇಕಾದ ಪರಿಸ್ಥಿತಿ ಬರಬಹುದು. ಇಂತಹ ಸನ್ನಿವೇಶಕ್ಕೆ ದೇಶವನ್ನು ಸಜ್ಜುಗೊಳಿಸಬೇಕಾದ ಹೊಣೆ ಕೂಡ ನಮ್ಮದೇ.
ಮುಳುವಾದ ವೃತ್ತಿಪರ ಶಿಕ್ಷಣ
ನಮ್ಮ ಮಕ್ಕಳನ್ನು ವೃತ್ತಿಪರ ಶಿಕ್ಷಣಕ್ಕೆ ಸಜ್ಜುಗೊಳಿಸುವ ಭರದಲ್ಲಿ ನಾವು ಏನೆಲ್ಲಾ ಕಳೆದು ಕೊಳ್ಳುತ್ತಿದ್ದೇವೆ ಎಂದು ಯೋಚಿಸಿದರೆ ಮನಸ್ಸು ಭಾರವಾಗುತ್ತದೆ. ಮೊದಲು ಶಿಕ್ಷಣದ ಜತೆಗೆ ಕ್ರೀಡೆ, ಹಾಡು,ನೃತ್ಯ, ಎನ್‌ಸಿಸಿ, ಎನ್ನೆಸ್ಸೆಸ್, ಸ್ಕೌಟ್ಸ್ ಮತ್ತಿತರ ಪಠ್ಯೇತರ ಶಿಕ್ಷಣ ಜತೆಯಾಗಿಯೇ ಸಾಗುತ್ತಿತ್ತು. ಪಿಯುಸಿ ಅಥವಾ ಡಿಗ್ರಿ ಹಂತದಲ್ಲೂ ಪಠ್ಯೇತರ ಶಿಕ್ಷಣಕ್ಕೆ ಯಾವ ಕಡಿವಾಣವೂ ಇರಲಿಲ್ಲ. ಈಗ ಮಗ ಇಲ್ಲವೇ ಮಗಳು ಒಂಬತ್ತನೇ ಕ್ಲಾಸ್ ತೇರ್ಗಡೆಯಾಗುವುದೇ ತಡ. ಎಲ್ಲವೂ ಬಂದ್. ಶೇ 90 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದು 10ನೇ ಕ್ಲಾಸ್ ತೇರ್ಗಡೆಯಾಗುವುದು ಜೀವನದ ಪರಮ ಧ್ಯೇಯ ಎಂದು ಪೋಷಕರು ಮತ್ತು ಶಿಕ್ಷಕರು ಮಕ್ಕಳನ್ನು ಮಾನಸಿಕವಾಗಿ ಸಜ್ಜುಗೊಳಿಸುತ್ತಾರೆ. ಎಸ್ಸೆಸ್ಸೆಲ್ಸಿ ದಾಟಿದರೆ ಪಿಯು ಹಂತದಲ್ಲೂ ಓದುವುದೊಂದೇ ಗುರಿ. ಮುಂದೆ ಈ ಮಕ್ಕಳು ವೃತ್ತಿಪರ ಶಿಕ್ಷಣಕ್ಕೆಂದು ಪರವೂರು, ಪಟ್ಟಣ, ಇನ್ನಾವುದೋ ರಾಜ್ಯದ ನಗರ ಸೇರಿದರೆ ಅಲ್ಲೂ ಓದಿ, ಓದಿ ನೌಕರಿ ಹಿಡಿಯುವುದೊಂದೇ ಧ್ಯೇಯ ಮಂತ್ರ.
ಇದರ ನಡುವೆ ಈ ಮಕ್ಕಳ ವಿಶೇಷ ಪ್ರತಿಭೆಗಳು, ಅವರು ತಿಳಿದುಕೊಳ್ಳಲೇಬೇಕಿದ್ದ ಸಾಮಾನ್ಯ ಸಂಗತಿಗಳು, ಬಂಧುಗಳು, ನೆರೆಹೊರೆಯವರು, ಸಾರ್ವಜನಿಕರೊಂದಿಗಿನ ಒಡನಾಟ ಎಲ್ಲವೂ ಮರೆಯಾಗುತ್ತಿವೆ. ನಮ್ಮ ಮಕ್ಕಳನ್ನು ಯಾವ ರೀತಿಯ ಕಂಫರ್ಟ್ ಝೋನ್‌ನಲ್ಲಿ ಬೆಳೆಸುತ್ತಿದ್ದೇವೆ ಎಂದರೆ, ಫಾರ್ಮ್ ಕೋಳಿಗಳನ್ನು ಸಾಕುವುದಕ್ಕೂ, ನಾವು ಮಕ್ಕಳನ್ನು ಬೆಳೆಸುತ್ತಿರುವ ವಿಧಾನಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಬಯಲಿಗೆ ಬಿಟ್ಟರೆ ಫಾರ್ಮ್ ಕೋಳಿಗಳಿಗೆ ನಾಟಿ ಕೋಳಿಗಳಂತೆ ಓಡಲು, ಹಾರಲು ಬರುವುದಿಲ್ಲ.
ಉದ್ಯೋಗ ಹಿಡಿದು ಸಾರ್ವಜನಿಕ ಬದುಕಿಗೆ ತೆರೆದುಕೊಂಡ ಬಳಿಕ ನಮ್ಮ ಮಕ್ಕಳೂ ಇದೇ ರೀತಿಯ ಸಂಕಷ್ಟ ಎದುರಿಸುತ್ತಿದ್ದಾರೆ. ಇಂದು ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನ ಸವಾಲುಗಳನ್ನು ಎದುರಿಸಲಾಗದೆ ಅದೆಷ್ಟೋ ಎಳೆಯರು ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾರೆ. ಬದುಕಿನಲ್ಲಿ ಬರುವ ಅನಿರೀಕ್ಷಿತ ಸವಾಲುಗಳನ್ನು ಎದುರಿಸಲು ಸಜ್ಜಾಗಿರುವಂತೆ ಇವರನ್ನು ಬಾಲ್ಯದಲ್ಲಿಯೇ ಸಜ್ಜುಗೊಳಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಾವು ಕಷ್ಟಪಟ್ಟು ಕಾರು ಖರೀದಿಸುವುದು ಎಷ್ಟು ಮುಖ್ಯವೋ, ಪಂಕ್ಚರ್ ಆದಾಗ ಸ್ಟೆಪ್ನಿ ಬದಲಿಸಲು ಗೊತ್ತಿರುವುದು ಅಷ್ಟೇ ಮುಖ್ಯ.
ದೇಶದ ರಕ್ಷಣೆಯ ವಿಚಾರದಲ್ಲೂ ಈ ಮಾತು ನಿಜ. ನಮ್ಮ ಸೇನೆ ಬಲಿಷ್ಠವಾಗಿರಬಹುದು. ಅತ್ಯಾ ಧುನಿಕ ಶಸ್ತ್ರಾಸ್ತ, ರಕ್ಷಣಾ ಉಪಕರಣಗಳಿರಬಹುದು. ಆದರೆ ಯುದ್ಧದ ಸಂದರ್ಭಗಳಲ್ಲಿ ನಾಗರಿಕ ರಾಗಿ ನಾವು ವಹಿಸಬೇಕಾದ ಎಚ್ಚರಿಕೆ, ಮಾಡಬೇಕಾದ, ಮಾಡಬಾರದ ಕೆಲಸಗಳ ಬಗ್ಗೆ ಒಂದಷ್ಟು ಪೂರ್ವ ತರಬೇತಿ ಅಗತ್ಯ. ಜಪಾನಿಗರ ಶಿಸ್ತು, ದೇಶಪ್ರೇಮ, ಇಸ್ರೇಲಿಗರ ಯುದ್ಧ ಸನ್ನದ್ಧತೆಯ ಬಗ್ಗೆ ಮಾತನಾಡುತ್ತಿದ್ದ ನಾವು ಈಗ ಇವರಂತೆ ದೇಶಕ್ಕೆ ಎದುರಾಗಬಹುದಾದ ಗಂಡಾಂತರವನ್ನು ಎದುರಿಸಲು ಸರ್ವಸನ್ನದ್ಧರಾಗಬೇಕಿದೆ. ಅನಿವಾರ‌್ಯವಾದರೆ ಯಾವ ಸಂದರ್ಭವನ್ನಾದರೂ ಎದುರಿಸಲು ಸಜ್ಜಾಗಬೇಕಿದೆ.
ಯುದ್ಧ ಕಾರ್ಮೋಡದ ಈ ಸಂದರ್ಭ ನಮ್ಮ ಆತ್ಮಾವಲೋಕನಕ್ಕೂ ಅವಕಾಶ ಮಾಡಿ ಕೊಟ್ಟಿದೆ. ನಮ್ಮ ಮಕ್ಕಳ ಬೌದ್ಧಿಕ ವಿಕಸನದ ಜತೆ ದೈಹಿಕ ದೃಢತೆಗೂ ಒತ್ತು ನೀಡಬೇಕಾಗಿದೆ. ಸೆಮಿಸ್ಟರ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಜತೆಗೆ ಶಾಲೆ ಮತ್ತು ಕಾಲೇಜು ಮಟ್ಟದಲ್ಲಿ ಎನ್‌ಸಿಸಿ, ಸ್ಕೌಟ್ಸ್ ಸೇರಲು ಉತ್ತೇಜನ ನೀಡಬೇಕಾಗಿದೆ. ಈ ಹಂತದಲ್ಲಾದರೂ ಯುದ್ಧದಂತಹ ತುರ್ತು ಸಂದರ್ಭಗಳಲ್ಲಿ ನಾಗರಿಕರಾಗಿ ನಾವು ನಿರ್ವಹಿಸಬೇಕಾದ ಕರ್ತವ್ಯಗಳನ್ನು, ಆಪತ್ಕಾಲದ ವಿದ್ಯೆಗಳನ್ನು ಮನದಟ್ಟು ಮಾಡಿಕೊಡಬೇಕಿದೆ.