ತಿಳಿರುತೋರಣ
ಅಸತೋ ಮಾ ಸದ್ಗಮಯ. ತಮಸೋ ಮಾ ಜ್ಯೋತಿರ್ಗಮಯ. ಮೃತ್ಯೋರ್ಮಾ ಅಮೃತಂ ಗಮಯ. ಓಂ ಶಾಂತಿಃ ಶಾಂತಿಃ ಶಾಂತಿಃ. ಭಾರತೀಯರಿಗೆ, ಅದರಲ್ಲೂ ಹಿಂದೂ ಧರ್ಮದವರಿಗೆ ಅತಿಪವಿತ್ರವೆನಿಸುವ ಶಾಂತಿ ಮಂತ್ರವಿದು. ಅತ್ಯಂತ ಪ್ರಾಚೀನ ಮತ್ತು ಪ್ರಮುಖ ಉಪನಿಷತ್ತು ಗಳಲ್ಲಿ ಒಂದಾದ ಬೃಹದಾರಣ್ಯಕ ಉಪನಿಷತ್ತು ಇದರ ಮೂಲ.
“ಓ ದೈವಿಕ ಶಕ್ತಿಯೇ, ದಯವಿಟ್ಟು ನನ್ನನ್ನು ಪ್ರಪಂಚದ ಭ್ರಮೆಗಳಿಂದ ಶಾಶ್ವತ ಸತ್ಯದ ಕಡೆಗೆ ನಡೆಸು. ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನವೆಂಬ ಬೆಳಕಿನೆಡೆಗೆ ಸಾಗಿಸು. ಸಂಸಾರ ಬಂಧನ ಮತ್ತು ಸಾವೆಂಬ ಸಂಕಷ್ಟಗಳಿಂದ ಮೋಕ್ಷ, ಅಮೃತತ್ವ, ಅಥವಾ ಚಿರಶಾಂತಿಯೆಡೆಗೆ ಕೊಂಡೊ ಯ್ಯು" ಎಂಬ ಮಹೋನ್ನತ ಚಿಂತನೆ ಇದರಲ್ಲಿ ವ್ಯಕ್ತವಾಗಿರುವುದು.
ಸಾಧಕನು ತನ್ನದೇ ಆಧ್ಯಾತ್ಮಿಕ ಉನ್ನತಿಗಾಗಿ ಪ್ರಾರ್ಥನೆಯಂತೆ ಪಠಿಸುವ ಇಂತಹವನ್ನು ‘ಅಭ್ಯಾ ರೋಹ’ ಮಂತ್ರಗಳು ಎನ್ನಲಾಗುತ್ತದೆ. ಯಾವುದೇ ನಿರ್ದಿಷ್ಟ ದೇವತೆಯನ್ನು ಹೆಸರಿಸದೆ, ಇಡೀ ಬ್ರಹ್ಮಾಂಡದ ಸಾರ್ವತ್ರಿಕ ಚೈತನ್ಯ ಅಥವಾ ಜ್ಞಾನವನ್ನು ಪ್ರಾರ್ಥಿಸುವುದರಿಂದ ಜಗತ್ತಿನಾದ್ಯಂತ ಮಾನ್ಯತೆ, ಪ್ರಸ್ತುತತೆ ಮತ್ತು ಅದರಿಂದಾಗಿ ಜನಮನ್ನಣೆ ಇವುಗಳಿಗರುತ್ತದೆ.
ಇದನ್ನೂ ಓದಿ: Srivathsa Joshi Column: ಮಂದಾಕ್ರಾಂತಂ ವನಿತೆಯರಿಗೇ ಮೀಸಲಾದಂಥ ತಂತ್ರಂ...
ಒಂದು ಚಿಕ್ಕ ನಿದರ್ಶನವೆಂದರೆ, 2003ರಲ್ಲಿ ಬಿಡುಗಡೆಯಾಗಿದ್ದ ‘ಮ್ಯಾಟ್ರಿಕ್ಸ್ ರಿವೊಲ್ಯುಷನ್’ ಹಾಲಿವುಡ್ ಚಿತ್ರದಲ್ಲಿ ಇದೇ ‘ಅಸತೋ ಮಾ ಸದ್ಗಮಯ...’ ಮಂತ್ರವನ್ನು ಅಳವಡಿಸಿಕೊಂಡಿದ್ದರು!ಪ್ರಾಪಂಚಿಕ ಭ್ರಮೆಗಳು, ಶಾಶ್ವತ ಸತ್ಯ, ಅಜ್ಞಾನವೆಂಬ ತಮಸ, ಜ್ಞಾನವೆಂಬ ಜ್ಯೋತಿ, ನಶ್ವರ ಜೀವನ, ಮೃತ್ಯು, ಮೋಕ್ಷ, ಚಿರಶಾಂತಿ- ಇವೆಲ್ಲ ದೊಡ್ಡದೊಡ್ಡ ಪದಪುಂಜಗಳು.
ಘನಗಂಭೀರ ಸಂಕೀರ್ಣ ವಿಚಾರಗಳು. ನಮ್ಮಂಥ ಪಾಮರರ ಚಿಂತನೆಗೆ ಸುಲಭವಾಗಿ ನಿಲುಕದವು. ಅಂದಮಾತ್ರಕ್ಕೇ ಇದೆಲ್ಲ ನಮ್ಮಿಂದ ಆಗುವಂಥದ್ದಲ್ಲ ಎಂದು ಬಿಟ್ಟುಬಿಡುವುದಲ್ಲ. ನಮಗೆ ಅರ್ಥ ವಾಗಬಲ್ಲ, ನಮ್ಮ ಚಿಂತನೆಗೆ ಎಟುಕಬಲ್ಲ, ಪ್ರಾಮಾಣಿಕ ಪ್ರಯತ್ನವನ್ನೂ ಮಾಡಬಲ್ಲ ರೀತಿಯಲ್ಲಿ ಯೂ ಈ ಕಾನ್ಸೆಪ್ಟನ್ನು ತೆಗೆದುಕೊಳ್ಳುವುದಕ್ಕಾಗುತ್ತದೆ.
ಉದಾಹರಣೆಗೆ ‘ಸೋಮಾರಿತನದಿಂದ ಚಟುವಟಿಕೆಯೆಡೆಗೆ ನಡೆಸು...’,‘ಸದಾ ಮೂಗಿನ ತುದಿಯಲ್ಲಿ ಕೋಪದ ಸ್ಥಿತಿಯಿಂದ ಮಂದಹಾಸದ ಮೆಲು ಮಾತಿನತ್ತ ನಡೆಸು...’, ‘ಹೊಟ್ಟೆಬಾಕತನದಿಂದ ಮಿತಾ ಹಾರದೆಡೆಗೆ ನಡೆಸು...’, ‘ಎಲ್ಲ ಕಡೆ ಲೇಟ್ ಲತೀಫ್ ಅಂತನಿಸೋದಕ್ಕಿಂತ ಅರ್ಲೀ ಬರ್ಡ್ ಆಗುವ ಚುರುಕುತನ ದಯಪಾಲಿಸು...’ ಎಂದು ಮುಂತಾಗಿ.
ಅಂತಿಮ ಗುರಿ ಒಳ್ಳೆಯ ಮನುಷ್ಯನಾಗುವುದೇ. ವ್ಯಕ್ತಿತ್ವವನ್ನು ಬೆಳಗಿಸಿಕೊಳ್ಳುವುದೇ. ಸದ್ಗುಣಗಳುಳ್ಳ ಸತ್ಪ್ರಜೆಯಾಗುವುದೇ. ಹೆಜ್ಜೆಗಳು ಪುಟ್ಟ ಪುಟ್ಟವು ಅಂತಷ್ಟೇ. ಹಾಗೆ ಆ ರೀತಿಯದೇ ಒಂದು ತಮಾಷೆ ಥಿಯರಿ ‘ಡಬ್ಲ್ಯೂದಿಂದ ಜಿ ಯೆಡೆಗೆ ನಡೆಸೆನ್ನನು’ ಎಂಬ ಪ್ರಾರ್ಥನೆ. ಥಟ್ಟನೆ ಏನಿದೆಂದು ತಲೆಬುಡ ತಿಳಿಯಲಿಕ್ಕಿಲ್ಲ.
ಇಂಗ್ಲಿಷ್ ವರ್ಣಮಾಲೆಯ ಎರಡು ಅಕ್ಷರಗಳನ್ನಷ್ಟೇ ಬಳಸಿ ಕೆಟ್ಟದು ಮತ್ತು ಒಳ್ಳೆಯದರ ವಿಂಗ ಡಣೆ. ಕೆಟ್ಟದು ಕಳೆದು ಒಳ್ಳೆಯದು ಬೆಳಗಲೆಂಬ ಆಶಯ. ಇಲ್ಲಿ ಡಬ್ಲ್ಯೂ ಎಂದರೆ worst . ಜಿ ಎಂದರೆ Great. ತಮಾಷೆ ಎನಿಸಬಹುದಾದ ಥಿಯರಿ ಆದ್ದರಿಂದ ತಮಾಷೆಯಾಗಿಯೇ ಕಾಡು ಹರಟೆ ಯೋಪಾದಿಯಲ್ಲಿ ಇದರ ವಿವರಣೆ.ಮೊದಲಿಗೆ, ಜಿ ಯಾಕೆ ಗ್ರೇಟ್ ಎಂದು ನೋಡೋಣ.
ಸರಿಸುಮಾರು 2010ರಲ್ಲಿ ತುಂಬ ಜನಪ್ರಿಯವಾಗಿದ್ದ, ಐಡಿಯಾ ಸೆಲ್ಯುಲರ್ ಎಂಬೊಂದು ಸಿಮ್ ಕಾರ್ಡ್ ಕಂಪನಿಯ ಜಾಹಿರಾತು, ಅಭಿಷೇಕ್ ಬಚ್ಚನ್ ರೂಪದರ್ಶಿಯಾಗಿದ್ದದ್ದು ನಿಮಗೆ ನೆನಪಿ ರಲೂಬಹುದು. ಸರಕಾರ ಮತ್ತು ಸಾರ್ವಜನಿಕರ ನಡುವೆ ದ್ವಿಮುಖ ಸಂಪರ್ಕದ ಕಲ್ಪನೆ ಯನ್ನು ಬಿತ್ತುವ ಜಾಹಿರಾತು ಅದು.
‘ವಾಟೆನ್ ಐಡಿಯಾ ಸರ್ ಜೀ!’ ಎಂದು ಅದರ ಟ್ಯಾಗ್‌ಲೈನ್. ನನಗದರಲ್ಲಿ ಆಕರ್ಷಕವಾಗಿ ಕಂಡಿದ್ದು ‘ಸರ್ ಜೀ ಎಂಬ ಸಂಬೋಧನೆ.’ ಉತ್ತರ ಭಾರತೀಯರು, ಹಿಂದಿ ಮಾತನಾಡುವವರು, ಗೌರವಸೂಚಕವಾಗಿ ನಾಮಪದಗಳಿಗೆ ಮತ್ತು ಕೆಲವೊಮ್ಮೆ ಕ್ರಿಯಾಪದದ ಕೊನೆಗೂ ‘ಜೀ’ ಸೇರಿಸು ವುದು ಗೊತ್ತಿದ್ದದ್ದೇ. ಅನಿಲ್‌ಕಪೂರನ ರಾಮ್ ಲಖನ್ ಚಿತ್ರದ ಹಾಡು ಇದೆಯಲ್ಲ ‘ಏಜೀ ಓಜೀ ಲೋಜೀ ಸುನೋಜೀ ಮೈ ಹೂಂ ಮನ್ಮೋಜೀ... ಕರ್‌ತಾ ಹೂಂ ಮೈ ಜೋ ವೋ ತುಮ್ ಭೀ ಕರೋ ಜೀ...’? ಹಿಂದಿಯಲ್ಲಿ ಈ ಪರಿಯ ಜಿಯಾಲಜಿಯಿಂದಾಗಿಯೇ ಸೋನಿಯಾಜೀ, ಲಾಲೂಜೀ, ಆಡ್ವಾಣಿ ಜೀ, ಅಟಲ್‌ಜೀ, ನೇತಾಜೀ ಯಿಂದ ಹಿಡಿದು ಪಂಡಿತ್‌ಜೀ, ಕಿಶೋರ್‌ಜೀ, ಲತಾಜೀ, ಗಾಂಧಿಜೀ, ಮೋದಿಜೀ, ಹನುಮಾನ್‌ಜೀ, ಶ್ರೀರಾಮಜೀ ವರೆಗೆ ಎಲ್ಲರ ತಲೆಯ ಮೇಲೂ ಜೀ ಮುಕುಟ ಮೆರೆಯು ತ್ತದೆ.
ಜೀ ಗೌರವಕ್ಕೆ ಸಂಬಂಧಿಸಿದಂತೆಯೇ ನನಗೊಂದು ಸ್ವಾರಸ್ಯಕರ, ವ್ಯಕ್ತಿಗತ ಪ್ರಸಂಗವೂ ನೆನಪಾಗು ತ್ತಿದೆ. ಪ್ರಸಕ್ತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ದಾವಣಗೆರೆಯ ಬಿಡಿ ಟಿ ಕಾಲೇಜಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾಗ ನನ್ನ ಸಹಪಾಠಿ. ಆದರೆ, ಎಂಜಿನಿಯರಿಂಗ್ ವಿದ್ಯಾಭ್ಯಾಸ ಆದಮೇಲೆ ನಾವು ಮುಖತಃ ಭೇಟಿಯಾದದ್ದೇ ಇಲ್ಲ.
2009ರಲ್ಲಿ ಚಿತ್ರದುರ್ಗ ಕ್ಷೇತ್ರದ ಸಂಸದನಾಗಿ ಆಯ್ಕೆಯಾದ ಜನಾರ್ದನ ಸ್ವಾಮಿ ಬಿಡಿಟಿ ಕಾಲೇಜಲ್ಲಿ ನಮಗಿಂತ ಒಂದು ವರ್ಷ ಜ್ಯೂನಿಯರ್. ಆತ ಇಲ್ಲಿ ಅಮೆರಿಕದಲ್ಲಿದ್ದಾಗಲೂ, ಮುಂದೆ ಸಂಸದ ನಾಗಿದ್ದಾಗಲೂ, ಆಮೇಲೆ ಮಾಜಿ ಸಂಸದ ಆದಾಗಲೂ ಅನೇಕ ಸಲ ಮುಖತಃ ಭೇಟಿ ಸಾಧ್ಯವಾಗಿದೆ.
ಸುಮಾರು 2007ರಲ್ಲಿರಬೇಕು ಒಮ್ಮೆ ಜನಾರ್ದನ ಸ್ವಾಮಿ ಭೇಟಿಯಾಗಿದ್ದಾಗ ನಮ್ಮ ಉಭಯ ಕುಶಲೋಪರಿ ಮಾತುಕತೆಯಲ್ಲಿ ಸಂತೋಷ್ ಹೆಸರೂ ಬಂದಿತ್ತು. ಆಗತಾನೆ ಸಂತೋಷ್ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಗಳಲ್ಲೊಬ್ಬರಾಗಿ ನೇಮಕಗೊಂಡಿದ್ದರು. ‘ಈಗ ನಮ್ಮ ಸಂತೋಷ್ ಬರೀ ಸಂತೋಷ್ ಅಲ್ಲ, ಸಂತೋಷ್ ಜೀ!
ಯಡ್ಯೂರಪ್ಪನವರು ಕೂಡ ಸಂತೋಷ್ ಜೀ ಎಂದೇ ಸಂಬೋಧಿಸುತ್ತಾರೆ!’ ಎಂದು ಜನಾರ್ದನ ಸ್ವಾಮಿ ಅಭಿಮಾನದಿಂದ ಹೇಳಿದ್ದು ನಿನ್ನೆಮೊನ್ನೆಯೋ ಎಂಬಷ್ಟು ಚೆನ್ನಾಗಿ ನನಗೆ ನೆನಪಿದೆ. ಫೇಸ್‌ಬುಕ್‌ನಲ್ಲಿ ಫ್ರೆಂಡ್‌ಲಿಸ್ಟ್‌ನಲ್ಲಿರುವ ಸಂತೋಷ್‌ಗೆ ಅಪರೂಪಕ್ಕೊಮ್ಮೆ ಮೆಸೇಜು ಕಳಿಸುವಾಗ ‘ಆತ್ಮೀಯ ಸಂತೋಷ್’ ಎಂದೇ ಸಂಬೋಧಿಸುವುದನ್ನು ನಾನೇನೂ ಬದಲಿಸಲಿಲ್ಲ. ಆದರೆ, 2020 ರಲ್ಲಿ ಒಮ್ಮೆ ಒಂದು ಮೆಸೇಜಿನಲ್ಲಿ ‘ಸಂತೋಷ್‌ಜೀ, ನಮಸ್ಕಾರ’ ಎಂದು ಬರೆದೆ.
ಉದ್ದೇಶಪೂರ್ವಕ ಅಂತೇನಲ್ಲ, ಅರಿವಿಲ್ಲದೇ ಹಾಗೆ ಟೈಪ್ ಆಗಿತ್ತು. ಅದನ್ನು ಗಮನಿಸಿದ ಸಂತೋಷ್ ನನ್ನನ್ನು ತರಾಟೆಗೆ ತಗೊಂಡದ್ದೂ ಆಯ್ತು ‘ಜೀ’ ಸೇರಿಸಿದ್ದೇಕೆಂದು ಕೇಳುತ್ತ. ಅಂದ ಹಾಗೆ ಮೊನ್ನೆ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವದ ಆಹ್ವಾನಪತ್ರಿಕೆ ಯಲ್ಲೂ ಸಂತೋಷ್ ಹೆಸರು ‘ಸಂತೋಷ್ ಜೀ’ ಎಂದೇ ಇದ್ದದ್ದು ನಮಗೆಲ್ಲ ಖುಷಿಯೇ.
ತಾತ್ಪರ್ಯ ಇಷ್ಟೇ. ಉತ್ತರ ಭಾರತದಲ್ಲಿ ‘ಜೀ’ ಸೇರಿಸುವುದು ಗೌರವದ ಸಂಕೇತ. ಅದರ ಹಿಂದಿರುವ ಗ್ರೇಟ್‌ನೆಸ್ ಈಸ್ ಅಂಡರ್ಸ್ಟುಡ್. ಅದೇರೀತಿ ದಕ್ಷಿಣ ಭಾರತದಲ್ಲಿ ‘ಸರ್’ ಬಳಕೆ ಹೆಚ್ಚು. ಹಾಗಿರು ವಾಗ ‘ಸರ್ ಜೀ’ಯನ್ನು ಏನೆಂದು ಅರ್ಥೈಸಿಕೊಳ್ಳಬೇಕು? ಪ್ಯಾನ್- ಇಂಡಿಯಾ ಗೌರವ ಎಂದೇ? ಅಥವಾ ಐಡಿಯಾ ಕೊಟ್ಟಿದ್ದಕ್ಕೆ ಡಬಲ್ ಗೌರವ, ವೆಸ್ಟ್ ಮತ್ತು ಈಸ್ಟ್ ಸೇರಿ ಬೆಸ್ಟ್ ಎನಿಸುವ ಮಿಶ್ರತಳಿ ಗೌರವ ಎಂದೇ? ನನಗನಿಸುತ್ತದೆ ಐಡಿಯಾ ಸೆಲ್ಯುಲರ್ ಜಾಹಿರಾತಿನಲ್ಲಿದ್ದ ‘ಸರ್ ಜೀ’ ಬರೀ ಗೌರವದ ಉಪಾಧಿ ಅಲ್ಲ.
ಒಬ್ಬ ಕ್ರಿಯಾಶೀಲ, ಸಂಪನ್ಮೂಲ, ಪ್ರಭಾವಿ, ಸ್ನೇಹಪರ, ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ವಾಸ್ತವ ವಾದಿ- ಇವೆಲ್ಲವೂ ಆಗಿರುವ ವ್ಯಕ್ತಿಯನ್ನು ಸಂಬೋಧಿಸುವುದಕ್ಕೆ ಬಳಸುವ ಪದ. ವಾಸ್ತವವಾದಿ ಯೆಂದರೆ, ಸುರಂಗದೊಳಗಿನ ಕತ್ತಲೆಗೆ ಹೆದರಿಕೊಳ್ಳುವ ನಿರಾಶಾವಾದಿಯಲ್ಲ; ಸುರಂಗದ ಕೊನೆಗೆ ಬೆಳಕು ಸಿಕ್ಕೇ ಸಿಗುತ್ತದೆ ಎಂಬ ಆಶಾವಾದಕ್ಕಷ್ಟೇ ಜೋತು ಬೀಳುವವನೂ ಅಲ್ಲ; ಸುರಂಗವೂ ಇದೆ, ಅದರೊಳಗೆ ಕತ್ತಲೆಯೂ ಇರುತ್ತದೆ, ಕೊನೆಗೆ ಬೆಳಕೂ ಸಿಗುತ್ತದೆ ಎಂಬ ಸಮಗ್ರ ಚಿತ್ರಣದ ಅರಿವುಳ್ಳ ವನು.
ಸರ್ ಜೀ ಎನಿಸಿಕೊಳ್ಳುವವನ ಮುಖ್ಯ ಲಕ್ಷಣವದು. ಅಂತಹ ಸರ್ ಜೀ ಗಳು ಕೆಲವರಾದರೂ ನಮ್ಮ ನಡುವೆ ಇರುತ್ತಾರೆನ್ನುವುದೇ ಹೆಮ್ಮೆಪಡಬೇಕಾದ ಸಂಗತಿ. ಅಂಥವರೇ ನಮಗೆ ಆದರ್ಶರಾಗಬೇಕು. ಹಾಗೆಯೇ ಆ ಜಾಹೀರಾತಿನ ಸರಳ ಸಂದೇಶ- An idea can change lives ಎಂಬುದನ್ನೇ ತೆಗೆದು ಕೊಂಡರೂ ಅದರಲ್ಲೊಂದು ಒಳ್ಳೆಯ ತಿರುಳು ಇದ್ದುದನ್ನು ಒಪ್ಪಬೇಕು.
ಒಂದು ಒಳ್ಳೆಯ ಆಲೋಚನೆ, ಒಂದು ಒಳ್ಳೆಯ ಉಪಾಯ, ಅಷ್ಟೇ ಒಳ್ಳೆಯ ಮನಸ್ಸಿನಿಂದ ಎಲ್ಲರೂ ಒಟ್ಟಾಗಿ ಅನುಷ್ಠಾನಕ್ಕೆ ತಂದರೆ, ಜೀವನವನ್ನು ಮತ್ತು ಇಡೀ ಜೀವಜಗತ್ತನ್ನು ಏಕೆ ಪ್ರಫುಲ್ಲವಾಗಿ ಸದು? ಹಿಂದಿ ಭಾಷೆಯ ಜೀ ಬಳಿಕ ಈಗ ಇಂಗ್ಲಿಷ್ ಜಿ ಯನ್ನುನೋಡೋಣ. ವರ್ಣಮಾಲೆಯ ಏಳನೆಯ ಅಕ್ಷರ. ಅಂಥಿಂಥದಲ್ಲ ಅತ್ಯಂತ ಗುರುತರವಾದ ಅಕ್ಷರ. ಏಕೆ ಗೊತ್ತೇ? ಸಮಸ್ತ ಭೂ ಮಂಡಲದ ಗುರುತ್ವಾಕರ್ಷಣ ಶಕ್ತಿಯ ಸಂಕೇತಾಕ್ಷರವದು! ಹಾಗೆಯೇ ಎ8, ಎ20 ಮುಂತಾಗಿ ಪ್ರಬಲ ರಾಷ್ಟ್ರಗಳ ಒಕ್ಕೂಟಗಳನ್ನು ಗುರುತಿಸುವುದರಿಂದಲೂ ಜಿ ಅಕ್ಷರದ ಗತ್ತು ಗೈರತ್ತು ಘನತರ ವಾಗಿದೆ.
ಹಾಗೆಯೇ ದೂರಸಂಪರ್ಕ ಕ್ಷೇತ್ರದಲ್ಲಿ ಒಂದೊಮ್ಮೆ 2ಎ ಹಗರಣವಾಗಿತ್ತಾದರೂ ಈಗ ತಂತ್ರಜ್ಞಾನ ಮುಂದುವರಿದು 5ಎ ವರೆಗೂ ಬಂದಿರುವುದು, ಅದರ ಪ್ರಯೋಜನಗಳು ಜನಸಾಮಾನ್ಯರಿಗೂ ಲಭ್ಯವಾಗಿರುವುದು ಹೆಮ್ಮೆಯ ಸಂಗತಿಯೇ.
ಇನ್ನು, ಉಚ್ಚಾರದ ವಿಷಯಕ್ಕೆ ಬಂದರೆ ಜಿ ಅಕ್ಷರದ್ದು ಕೆಲವೊಮ್ಮೆ ಗಕಾರವಾಗಿಯೂ, ಕೆಲವೊಮ್ಮೆ ಜಕಾರವಾಗಿಯೂ ಉಚ್ಚಾರ. ಗಕಾರವೆಂದರೆ Get, Goal, Bargain, Forgive ಮುಂತಾದ ಪದಗಳಲ್ಲಿನ ಜಿ. ಅದನ್ನು Hard g ಎನ್ನುತ್ತಾರೆ. ಜಕಾರವೆಂದರೆ Gaint, Margin, Surgeon, Large ಮುಂತಾದ ಪದಗಳಲ್ಲಿನ ಜಿ. ಅದನ್ನು Soft g ಎನ್ನುತ್ತಾರೆ.
ಈ ಸಾಫ್ಟ್-ಹಾರ್ಡ್ ಜಿ ಗಳ ವ್ಯತ್ಯಾಸಕ್ಕೆ ನಿರ್ದಿಷ್ಟ ನಿಯಮಗಳಿಲ್ಲ. ಹಾಗಾಗಿ ತಪ್ಪು ಉಚ್ಚಾರ ಸಾಮಾನ್ಯ. ಹಿಂದೊಮ್ಮೆ ಯಡ್ಯೂರಪ್ಪನವರಿಗೆ ‘ಗೌಡಾ’ ಗೌನು ತೊಡಿಸಿ ಸುದ್ದಿಯಾಗಿದ್ದ Saginaw ವಿಶ್ವವಿದ್ಯಾಲಯದ ಹೆಸರನ್ನು ಆಗ ಕನ್ನಡ ಪತ್ರಿಕೆಗಳು ಸ್ಯಾಜಿನಾವ್ ಎಂದೇ ಬರೆದಿದ್ದವು. ಇಲ್ಲಿ ಅಮೆರಿಕದಲ್ಲಿ ಅದರ ಉಚ್ಚಾರ ‘ಸೆಗಿನಾ’ ಎಂದು!
ಇಂಥ ಕನ್ಯೂಷನ್‌ಗಳು ಸಾಲದೆಂಬಂತೆ ಕೆಲವೊಮ್ಮೆ ಜಿ ಗೆ ಉಚ್ಚಾರವೇ ಇರುವುದಿಲ್ಲ, ಸೈಲೆಂಟಾ ಗುತ್ತದೆ. ಉದಾಹರಣೆಗೆ Sign, Foreign, Campaign, Night, Through ಮುಂತಾದ ಪದ ಗಳು. ಅಂತೂ ಉಚ್ಚಾರದ ವಿಷಯದಲ್ಲೂ ಜಿ ಯದು ಸ್ವಲ್ಪ ವಿವಿತ್ರ ನಮೂನೆಯ ಉಚ್ಚತನವೇ. ಜಿ ಅಕ್ಷರದ್ದು ಇನ್ನೂ ಒಂದು ವೈಶಿಷ್ಟ್ಯ ಅಥವಾ ಅನನ್ಯತೆ ಬೇಕಿದ್ದರೆ ಇದನ್ನು ಗಮನಿಸಿ: ಗ್ರೆಗೋರಿ ಯನ್ ಕ್ಯಾಲೆಂಡರ್ ವರ್ಷದ ಹನ್ನೆರಡು ತಿಂಗಳುಗಳ ಹೆಸರಿನ ಪಟ್ಟಿ ಮಾಡಿ. ಯಾವುದರಲ್ಲಿ ಜಿ ಬಂದಿದೆಯೆಂದು ನೋಡಿ. ಆಗಸ್ಟ್‌ನಲ್ಲಿ ಮಾತ್ರ ಜಿ ಕಾಣಿಸಿಕೊಳ್ಳುವುದು!
ಅಷ್ಟಾಗಿ, August ಎಂಬ ಪದದ ಅರ್ಥವೇನು? Majestic, Impressive, and Inspiring reverence or admiration . ನಮ್ಮ ಈ ಥಿಯರಿ ಯ ಮಟ್ಟಿಗಾದರೂ ಅದು ಜಿ ಅಕ್ಷರದಿಂದಲೇ ಬಂದಿದ್ದೆಂದು ತಿಳಿದುಕೊಳ್ಳಲಿಕ್ಕೆ ಅಡ್ಡಿಯೇನಿಲ್ಲ. ಇನ್ನೊಂದು ಮರೆಯಬಾರದ ಗ್ರೇಟ್‌ನೆಸ್ ಪಾರ್ಲೆ-ಜಿ ಬಿಸ್ಕೇಟ್ ಹೆಸರಿಂದಾಗಿ ಬಂದದ್ದು.
ಪ್ರಪಂಚದಲ್ಲಿ ಅತಿಹೆಚ್ಚು ಮಾರಾಟವಾಗುವ ಬಿಸ್ಕೇಟ್ʼಗಳೆಂದರೆ ಪಾರ್ಲೆ-ಜಿ. ಪ್ರತಿದಿನ ಸುಮಾರು 40 ಕೋಟಿಯಷ್ಟು ಬಿಸ್ಕೇಟ್ಗಳ ಉತ್ಪಾದನೆ! ಒಟ್ಟಿನಲ್ಲಿ ಹಿಂದಿಯಲ್ಲಾದರೂ ಇಂಗ್ಲಿಷ್‌ನಲ್ಲಾದರೂ ಜಿ ಅಂದರೆ ಗ್ರೇಟ್ ಎನ್ನುವುದಕ್ಕೆ ಇಷ್ಟು ಸಮರ್ಥನೆ ಸಾಕೆಂದುಕೊಳ್ಳುತ್ತೇನೆ. ಆಗಲೇ ಹೇಳಿದಂತೆ ಡಬ್ಲ್ಯೂ ಎಂದರೆ Worst. ಇದಕ್ಕೂ ಜಿ ಯಂತೆಯೇ ಬೇರೆಬೇರೆ ರೀತಿಯಲ್ಲಿ ಸೋದಾಹರಣ ಬಣ್ಣ ಕಟ್ಟಬಹುದು. ಸದ್ಯದ ಮಟ್ಟಿಗೆ ಇರಾನ್-ಇಸ್ರೇಲ್ (ಮತ್ತು ಹಿಂದಿನಿಂದ ಕುಮ್ಮಕ್ಕು ಕೊಡಲಿಕ್ಕೆ ಅಮೆರಿಕ) ನಡುವೆ ನಡೆಯುತ್ತಿರುವ ‘ವಾರ್’ಗಿಂತ ಬೇರೆ ಉದಾಹರಣೆ ಬೇಕಿಲ್ಲ.
ಅಮೆರಿಕಾಧ್ಯಕ್ಷ ಜಗಮೊಂಡ ಟ್ರಂಪನ ಅಟಾ ಟೋಪ ಅವಾಂತರಗಳಿಂದಾದ ಕೆಟ್ಟ ಪರಿಸ್ಥಿತಿ. ಹತ್ತಿಪ್ಪತ್ತು ವರ್ಷಗಳ ಹಿಂದೆ ಜಾರ್ಜ್ ಡಬ್ಲ್ಯೂ ಬುಷ್ ಅಮೆರಿಕಾಧ್ಯಕ್ಷನಾಗಿದ್ದಾಗ ಆತನನ್ನೂ ಅಮೆರಿಕನ್ನರೇ ಕೆಟ್ಟವನೆಂದು ಬಿಂಬಿಸಿದ್ದುಂಟು. ಆತನ ಹೆಸರಲ್ಲೇ ಡಬ್ಲ್ಯೂ ಇರುವುದರಿಂದ ಅದು ಸರಿಯಾಗಿ ಹೊಂದುತ್ತಿತ್ತು ಕೂಡ.
ಷೇರು ಮಾರುಕಟ್ಟೆ ಕುಸಿದಾಗ ‘ವಾಲ್ ಸ್ಟ್ರೀಟ್’ ಸಹ ಡಬ್ಲ್ಯೂ ಎಂದೆನಿಸಿಕೊಳ್ಳುವುದುಂಟು. ಹಿಮಪಾತ ಮತ್ತು ಕೊರೆಯುವ ಚಳಿಯಲ್ಲಿ ಇಲ್ಲಿನ ‘ವಿಂಟರ್ ವೆದರ್’ ಸಹ ಡಬ್ಲ್ಯೂನೇ. 2019ರಲ್ಲಿ ‘ವುಹಾನ್ ವೈರಸ್ ಜಗತ್ತಿಗೆಲ್ಲ ಡಬ್ಲ್ಯೂ ಆಗಿದ್ದನ್ನು ಮರೆಯಲುಂಟೇ?’ಈಗೊಂದು ಮುಖ್ಯ ಮಾತು. ಈ ಥಿಯರಿ ನಿಮಗೆ ಸುಲಭವಾಗಿ ಅರ್ಥವಾಗಬೇಕೆಂಬ ದೃಷ್ಟಿಯಿಂದಷ್ಟೇ ಸ್ಪೆಲ್ಲಿಂಗ್‌ನಲ್ಲೂ ಜಿ ಎಂದು ಬರುವ ವಿಷಯಗಳನ್ನು ಜಿ ಯ ಗ್ರೇಟ್‌ನೆಸ್‌ಗೂ, ಡಬ್ಲ್ಯೂ ಎಂದು ಬರುವ ವಿಷಯಗಳನ್ನು ಡಬ್ಲ್ಯೂನ ವರ್ಸ್ಟ್‌ನೆಸ್‌ಗೂ ಬಳಸಿಕೊಂಡೆ.
ಆದರೆ, ನಿಜಜೀವನದಲ್ಲಿ ಹಾಗಲ್ಲ. ಸ್ಪೆಲ್ಲಿಂಗ್‌ನ ಪರಿಗಣನೆಯೆಲ್ಲ ಏನೂ ಇಲ್ಲ. ಸರಳ ದ್ವಿಮಾನ ಪದ್ಧತಿ. ಒಳ್ಳೆಯದು ಎಂದೆನಿಸುವುದೆಲ್ಲವೂ ಜಿ. ಕೆಟ್ಟದು ಎಂದೆನಿಸುವುದೆಲ್ಲವೂ ಡಬ್ಲ್ಯೂ. ಅದು ಬೇಕಿದ್ದರೆ ನಮ್ಮದೇ ಒಂದು ನಡತೆಯೋ, ಯಾವುದೋ ಸಂದರ್ಭದಲ್ಲಿ ಆಡಿದ ಮಾತೋ ಇರಬಹುದು ಕೆಟ್ಟದಾದರೆ ಅದು ಕೆಟ್ಟದೇ. ನಮ್ಮದೆಂದ ಮಾತ್ರಕ್ಕೆ ಅದನ್ನು ಜಿ ಎನ್ನಲಾಗದು. ಅದೇರೀತಿ ನಮಗೆ ಅಷ್ಟೇನೂ ಹಿಡಿಸದಿದ್ದವರು, ಅಥವಾ ಪರಿಚಯವೇ ಇಲ್ಲದವರು ಕೂಡ ಏನೋ ಒಂದು ಒಳ್ಳೆಯ ಕೆಲಸ ಮಾಡಿದರೆ ಅದು ಪಕ್ಕಾ ಜಿ. ಅದನ್ನು ಡಬ್ಲ್ಯೂ ಎನ್ನಲಿಕ್ಕಿಲ್ಲ.
ಅಷ್ಟರ ಮಟ್ಟಿಗೆ ನಿಸ್ಪೃಹತೆ ನಿರಪೇಕ್ಷತೆ ನಿಷ್ಪಕ್ಷಪಾತ ಬೇಕು ವಿಂಗಡಣೆಯಲ್ಲಿ. ವಸ್ತು, ವಿಚಾರ, ವ್ಯಕ್ತಿ, ವಾಸಸ್ಥಾನ ಯಾವುದನ್ನೇ ಆದರೂ ನಮ್ಮನಮ್ಮ ವಿವೇಚನೆಯಂತೆ ಜಿ ಅಥವಾ ಡಬ್ಲ್ಯೂ ಎಂದು ಗುರುತಿಸಲಿಕ್ಕಾಗುತ್ತದೆ. ಅಂತಿಮವಾಗಿ ಸಾಧ್ಯವಾದಷ್ಟೂ ಮಟ್ಟಿಗೆ ಡಬ್ಲ್ಯೂ ದಿಂದ ದೂರ ಸರಿದು ಜಿ ಯತ್ತ ಕ್ರಮಿಸುವ ಧ್ಯೇಯವನ್ನಿಟ್ಟುಕೊಳ್ಳಬೇಕು.
ತನ್ಮೂಲಕ ಜೀವನದಲ್ಲಿ ಸಾರ್ಥಕ್ಯ ಕಂಡುಕೊಳ್ಳಬೇಕು. ಅಂದಹಾಗೆ ಈ ಜಿ-ಡಬ್ಲ್ಯೂ ವಿಂಗಡಣೆ ಯನ್ನು ನಾನು ಕಲಿತುಕೊಂಡಿದ್ದು ಸಂಬಂಧದಲ್ಲಿ ನನ್ನ ದಾಯಾದಿಯೂ ಅದಕ್ಕಿಂತ ಹೆಚ್ಚಾಗಿ ನನ್ನೊಬ್ಬ ಹಿರಿಯ ಹಿತೈಷಿ ಮತ್ತು ಮಾರ್ಗದರ್ಶಿಯೂ ಆಗಿರುವ ಡಾ.ಎಂ.ಪ್ರಭಾಕರ ಜೋಶಿ ಯವರಿಂದ. ಅವರ ವಿದ್ವತ್ಪೂರ್ಣ ಹಾಸ್ಯಸ್ವಭಾವ, ಚತುರ ವಾಕ್ಪಟುತ್ವಗಳನ್ನೆಲ್ಲ ಹತ್ತಿರದಿಂದ ತಿಳಿಯುವ, ಸವಿಯುವ ಭಾಗ್ಯ ನಮ್ಮ ಕುಟುಂಬದ್ದು. ಅವರು ದೈನಂದಿನ ಸಂಭಾಷ ಣೆಯಲ್ಲೇ ಡಬ್ಲ್ಯೂ-ಜಿ ಥಿಯರಿಯನ್ನು ತುರುಕಿಸಬಲ್ಲರು.
ಮೊದಲೆಲ್ಲ ಇಂಟರ್ನೆಟ್ ಅಂದರೆ ನನಗೆ ತೀರ ಅಲರ್ಜಿಯಿತ್ತು, ಅದರಲ್ಲಿ ಒಂದಲ್ಲ ಎರಡಲ್ಲ ಮೂರು ಡಬ್ಲ್ಯೂಗಳು! ಆದರೆ, ಈಗ ದೂರದ ಅಮೆರಿಕದಲ್ಲಿರುವ ಮಕ್ಕಳೊಂದಿಗೆ ವ್ಯವಹರಿಸಲು ಅವರ ಜಿ-ಮೇಲ್ ವಿಳಾಸ ಇಲ್ಲದೆ ಆಗೋದಿಲ್ಲ. ‘ಅಂತೂ ಇಂಟರ್‌ನೆಟ್ಟೂ ಡಬ್ಲ್ಯೂ ಇದ್ದದ್ದು ಜಿ ಆಯ್ತು!’ ಎನ್ನುವರು.
‘ಊರಿಗೆ ಹೋಗುವುದಕ್ಕೆ ಮಂಗಳೂರು ಬಸ್‌ನಿಲ್ದಾಣದಲ್ಲಿ ಕಾಯುತ್ತಿದ್ದೆ. ಕುದುರೆಮುಖಕ್ಕೆ ಹೋಗುವ ಯುನೈಟೆಡ್ ರೋಡ್ʼ ವೇಸ್ ಎಂಬ ಖಾಸಗಿ ಬಸ್ ಬಂತು. ಬಸ್ಸಿನ ಹಿಂಬದಿಯಲ್ಲಿ ದೊಡ್ಡಕ್ಷರಗಳಲ್ಲಿ U.R.W ಎಂದು ಬರೆದಿತ್ತು. ಎಲಾ ಇವನ, ನನ್ನನ್ನೇ ಡಬ್ಲ್ಯೂ ಎಂದಿತಲ್ಲ ಈ ಬಸ್ಸು!’ ಎಂದು ಬಾಯ್ತುಂಬ ನಗುವರು.
ವಿವರಣೆ ಪರಿಣಾಮಕಾರಿಯಾಗುವಂತೆ ಮಾತನಾಡುವಾಗ ಕೈಬೆರಳುಗಳಿಂದಲೇ ಡಬ್ಲ್ಯು ಅಥವಾ ಜಿ ಅಕ್ಷರಾಕೃತಿಯ ಸಂಕೇತ ಭಾಷೆಯನ್ನೂ ಬಳಸುವರು. ಅವರ ಮಾತುಗಳನ್ನು ಆಲಿಸುವುದೇ ಚಂದ, ಮಾತಾಡುವಾಗಿನ ಹಾವಭಾವ ಅಭಿನಯಗಳನ್ನು ನೋಡುವುದು ಇನ್ನೂ ಚಂದ. ಸರಿ. ಈಗ ನೀವು ಇಂದಿನ ತಿಳಿರು ತೋರಣ ಅಂಕಣಬರಹವನ್ನು ಜಿ ಎನ್ನಬೇಕೆಂದೇನಿಲ್ಲ.
ಡಬ್ಲ್ಯೂ ಎಂದರೂ ನನಗೆ ಎಳ್ಳಷ್ಟೂ ಬೇಸರವೇನಿಲ್ಲ. ಏಕೆಂದರೆ ಈ ಡಬ್ಲ್ಯೂ-ಜಿ ಥಿಯರಿಯು ಗಾಂಧಿಜೀಯವರ ‘ಮೂರು ಮಂಗ’ಗಳಂತಲ್ಲ. ಅವೇನೋ “ಕೆಟ್ಟದ್ದನ್ನು ನೋಡಲಾರೆ, ಕೆಟ್ಟದ್ದನ್ನು ಕೇಳಲಾರೆ, ಕೆಟ್ಟದ್ದನ್ನು ಮಾತಾಡಲಾರೆ" ಎನ್ನುತ್ತವೆ. ಇದು ಹಾಗಲ್ಲ. ಕೆಟ್ಟದ್ದನ್ನು ಒಂದೊಮ್ಮೆಗೆ ಸ್ವೀಕರಿಸಿಯೂ ಮುಂದೆ ಅದರಲ್ಲಿ ಒಳ್ಳೆಯತನವನ್ನು ನಿರೀಕ್ಷಿಸುತ್ತದೆ.
ಕೆಟ್ಟದಾಗಿರುವುದು ಕೂಡ ಮುಂದೊಂದು ದಿನ ಒಳ್ಳೆಯದಾಗಬಹುದು ಎಂಬ ಆಶಾವಾದವನ್ನು ವ್ಯಕ್ತಪಡಿಸುತ್ತದೆ. ಫಾರ್ ಎ ಸಿಂಪಲ್ ಎಕ್ಸಾಂಪಲ್, ಮಾನ್ಯ ‘ಜಿ’ ಪರಮೇಶ್ವರ ಈ ಹಿಂದೆ ಗೃಹ ಸಚಿವರಾಗಿದ್ದಾಗ ಜಿ ಅಂದರೆ ‘ಗೊತ್ತಿಲ್ಲ’ ಎಂಬುದೇ ಆಗಿತ್ತು. ಹಾಗಿರುತ್ತಿತ್ತು ಅವರ ಮಾತಿನ ವರಸೆ.
ಎಂಥದೇ ಗಂಭೀರ ಕಾನೂನು-ಶಿಸ್ತು ಪಾಲನೆಯ ವಿಷಯದಲ್ಲಿ ಪ್ರಶ್ನೆ ಕೇಳಿದರೂ ‘ಗೊತ್ತಿಲ್ಲ!’ ಈಗ ಉಪ ಮುಖ್ಯಮಂತ್ರಿಯಾದ ಮೇಲೆ ‘ಘನಂದಾರಿ’ ಕೆಲಸವನ್ನೇನಾದರೂ ಕರ್ನಾಟಕದ ಒಳಿತಿಗೆ ಮಾಡುತ್ತಾರೋ ಕಾದುನೋಡಬೇಕಿದೆ.