ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishweshwar Bhat Column: ಈಗಿನ ಯುದ್ದದಲ್ಲಿ ಇಸ್ರೇಲಿನಿಂದ ಭಾರತ ಏನು ಕಲಿಯಬಹುದು ?

ಇದು ಆಧುನಿಕ ಯುದ್ಧತಂತ್ರದ ಅತ್ಯಂತ ಶಕ್ತಿಶಾಲಿ ಅಸ್ತ್ರ. ಈ ಮೊದಲು ಯುದ್ಧಗಳು ಜಗತಿನಲ್ಲಿ ಗಡಿಯಲ್ಲಿ ನಡೆಯುತ್ತಿದ್ದವು. ಆದರೆ ಈಗ ಯುದ್ಧಗಳು ಕಂಪ್ಯೂಟರ್ ಪರದೆ ಮೇಲೆ, ಕೆಲವೇ ಜನರ ಮಿದುಳಿನ ಆಲೋಚನೆಗಳಲ್ಲಿ ನಡೆಯುತ್ತಿವೆ. ಈಗಿನ ಯುದ್ಧದಲ್ಲಿ ಸೈಬರ್ ತಂತ್ರಜ್ಞಾನ ಮತ್ತು ಮಾನವ ಗುಪ್ತಚರ ಶಕ್ತಿಯ ಸಮ್ಮಿಲನ ಎದ್ದು ಕಾಣುತ್ತಿದೆ.

ನೂರೆಂಟು ವಿಶ್ವ

ಅಮೆರಿಕ-ಇಸ್ರೇಲ್ ಸೇರಿ ಇರಾನ್ ಮೇಲೆ ನಡೆಸಿದ ಸರಣಿ ದಾಳಿಗಳ ಬಗ್ಗೆ ಬಂದಿರುವ ವಿಶ್ಲೇಷಣೆಗಳು ಬಿದ್ದ ಬಾಂಬ, ಹಾರಿದ ಮಿಸೈಲ್ʼಗಳಿಗಿಂತ ಜಾಸ್ತಿ. ಯುದ್ಧರಂಗದಿಂದ ಕ್ಷಣಕ್ಷಣಕ್ಕೆ ವಿಚಿತ್ರ ಮಾಹಿತಿ ಬರುತ್ತಿವೆ. ಅದನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ, ತಮ್ಮದೇ ಆದ ಬಗೆಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ.

ಎರಡು ವರ್ಷಗಳ ಕಾಲ ನಡೆದ ಇಸ್ರೇಲ್-ಹಮಾಸ್ ಯುದ್ಧವೇ ಇರಬಹುದು, ಈಗ ನಡೆಯುತ್ತಿರುವ ಯುದ್ಧವೇ ಇರಬಹುದು, ಇವು ಒಂದು ಸಂಗತಿಯನ್ನು ಸ್ಪಷ್ಟಪಡಿಸಿದೆ. ಅದೇನೆಂದರೆ, ಆಧುನಿಕ ಯುದ್ಧತಂತ್ರವು ಕೇವಲ ಕ್ಷಿಪಣಿ ಅಥವಾ ಡ್ರೋನ್‌ಗಳ ಮೇಲೆ ನಿಂತಿಲ್ಲ, ಬದಲಿಗೆ ಅದು ‘ಮಾಹಿತಿ’ ಮತ್ತು ಸೈಬರ್-ಹ್ಯೂಮಿಂಟ್ ( Cyber-HUMINT - ಸೈಬರ್ ಹ್ಯೂಮನ್ ಇಂಟೆಲಿಜೆನ್ಸ್) ಮೇಲೆ ನಿಂತಿದೆ. ‌

ಇದು ಆಧುನಿಕ ಯುದ್ಧತಂತ್ರದ ಅತ್ಯಂತ ಶಕ್ತಿಶಾಲಿ ಅಸ್ತ್ರ. ಈ ಮೊದಲು ಯುದ್ಧಗಳು ಜಗತಿನಲ್ಲಿ ಗಡಿಯಲ್ಲಿ ನಡೆಯುತ್ತಿದ್ದವು. ಆದರೆ ಈಗ ಯುದ್ಧಗಳು ಕಂಪ್ಯೂಟರ್ ಪರದೆ ಮೇಲೆ, ಕೆಲವೇ ಜನರ ಮಿದುಳಿನ ಆಲೋಚನೆಗಳಲ್ಲಿ ನಡೆಯುತ್ತಿವೆ. ಈಗಿನ ಯುದ್ಧದಲ್ಲಿ ಸೈಬರ್ ತಂತ್ರಜ್ಞಾನ ಮತ್ತು ಮಾನವ ಗುಪ್ತಚರ ಶಕ್ತಿಯ ಸಮ್ಮಿಲನ ಎದ್ದು ಕಾಣುತ್ತಿದೆ. ಇದರಲ್ಲಿ ಇಸ್ರೇಲ್ ಅಸಾಧಾರಣ ಶ್ರೇಷ್ಠತೆಯನ್ನು ಸಾಧಿಸಿರುವುದು ವಾಸ್ತವ. ಇರಾನ್ ಮೇಲೆ ದಾಳಿ ನಡೆಸಿದ ಮೊದಲ ದಿನವೇ, ರಹಸ್ಯ ತಾಣದಲ್ಲಿದ್ದರೂ, ಯಾರಿಂದಲೂ ಭೇದಿಸಲಾಗದಷ್ಟು ಸುಭದ್ರವಾಗಿದ್ದರೂ ಅಧ್ಯಕ್ಷ ಖಮೇನಿಯನ್ನು ಹತ್ಯೆ ಮಾಡುವಲ್ಲಿ ಅದು ಯಶಸ್ಸನ್ನು ಸಾಧಿಸಿದ್ದು ಅಸಾಮಾನ್ಯವೇ ಸರಿ.

ಸಾಂಪ್ರದಾಯಿಕ ಗುಪ್ತಚರ ವ್ಯವಸ್ಥೆಯಲ್ಲಿ, ಒಬ್ಬ ‘ಮೋಲ್’ (Mole) ಅಥವಾ ಗೂಢಚರ ನನ್ನು ಶತ್ರುವಿನ ದೇಶಕ್ಕೆ ಕಳುಹಿಸಿ ಮಾಹಿತಿ ಪಡೆಯಲಾಗುತ್ತಿತ್ತು. ಆದರೆ ಸೈಬರ್-ಹ್ಯೂಮಿಂಟ್‌ನಲ್ಲಿ, ಒಬ್ಬ ಅಧಿಕಾರಿ ತನ್ನ ಮನೆಯಲ್ಲಿ ಕುಳಿತುಕೊಂಡೇ ಶತ್ರುದೇಶದ ಸೈಬರ್ ಸೆಲ್‌ಗಳೊಳಗೆ ವರ್ಚುವಲ್ ಆಗಿ ನುಸುಳುತ್ತಾನೆ.

ಇಸ್ರೇಲ್‌ನ ‘ಯುನಿಟ್ 8200’ ಇದರಲ್ಲಿ ನಿಸ್ಸೀಮ. ಅವರು ಕೇವಲ ಇಮೇಲ್ʼಗಳನ್ನು ಹ್ಯಾಕ್ ಮಾಡುವುದಿಲ್ಲ, ಬದಲಾಗಿ ಶತ್ರು ನಾಯಕರ ಡಿಜಿಟಲ್ ನಡವಳಿಕೆಯನ್ನು ಅಭ್ಯಾಸ ಮಾಡಿ, ಅವರ ಮುಂದಿನ ಹೆಜ್ಜೆ ಏನಾಗಿರಬಹುದು ಎಂಬ ‘ಸೈಕಲಾಜಿಕಲ್ ಪ್ರೊಫೈಲಿಂಗ್’ ಮಾಡುತ್ತಾರೆ. ಇದು ಶತ್ರುದೇಶದ ನಾಯಕ ಮತ್ತು ಸಂಬಂಧಪಟ್ಟ ಗಣ್ಯ ವ್ಯಕ್ತಿಗಳ ವರ್ತನೆ, ಆಲೋಚನಾ ಕ್ರಮ ಮತ್ತು ಲಭ್ಯವಿರುವ ದತ್ತಾಂಶಗಳ ಆಧಾರದ ಮೇಲೆ ಅವರ ವ್ಯಕ್ತಿತ್ವದ ಚಿತ್ರಣವನ್ನು ಸಿದ್ಧಪಡಿಸುವ ಒಂದು ಅತ್ಯಾಧುನಿಕ ವೈಜ್ಞಾನಿಕ ವಿಧಾನ.

ಇದನ್ನೂ ಓದಿ: Vishweshwar Bhat Column: ನ್ಯಾಯಾಧೀಶನ ಮಾತು ʼಶಾಸನʼವಾಗಬೇಕೇ ಹೊರತು ʼಹರಿಕಥೆʼ ಆಗಬಾರದು !

ಗುಪ್ತಚರ ಇಲಾಖೆಗಳು ಮತ್ತು ಭದ್ರತಾ ಸಂಸ್ಥೆಗಳಲ್ಲಿ ಇದು ಒಂದು ಶಕ್ತಿಶಾಲಿ ಅಸ್ತ್ರವಾಗಿ ಬಳಕೆಯಾಗುತ್ತದೆ. ಶತ್ರುದೇಶದ ನಾಯಕ ನಿರ್ದಿಷ್ಟ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸ ಬಹುದು ಎಂದು ಊಹಿಸುವುದು ಅತ್ಯಂತ ನಿರ್ಣಾಯಕ. ಉದಾಹರಣೆಗೆ, ಶತ್ರುದೇಶದ ನಾಯಕನಿಗೆ ಒತ್ತಡ ಹೇರಿದಾಗ ಅವನು ಯುದ್ಧ ಘೋಷಿಸುತ್ತಾನೋ ಅಥವಾ ಮಾತುಕತೆಗೆ ಬರುತ್ತಾನೋ ಎಂಬುದನ್ನು ಈ ಮೂಲಕ ತಿಳಿಯಬಹುದು.

ವಿದೇಶಿ ರಾಜತಾಂತ್ರಿಕರು ಅಥವಾ ಸೇನಾ ಮುಖ್ಯಸ್ಥರ ಭಾಷಣಗಳು, ಸಾರ್ವಜನಿಕ ನಡವಳಿಕೆ ಮತ್ತು ಹಿಂದಿನ ನಿರ್ಧಾರಗಳನ್ನು ಅಭ್ಯಾಸ ಮಾಡಿ ಅವರ ದೌರ್ಬಲ್ಯ ಮತ್ತು ಶಕ್ತಿಯನ್ನು ಪತ್ತೆಹಚ್ಚಬಹುದು. ಇಂದು ‘ಸೈಬರ್-ಹ್ಯೂಮಿಂಟ್’ ಯುಗದಲ್ಲಿ, ಶತ್ರುಗಳ ಡಿಜಿಟಲ್ ಹೆಜ್ಜೆಗುರುತುಗಳ (ಇಮೇಲ, ಸಾಮಾಜಿಕ ಜಾಲತಾಣದ ಪೋಸ್ಟ್, ಖರೀದಿಸುವ ವಸ್ತುಗಳು) ಮೂಲಕ ಅವರ ಪ್ರೊಫೈಲಿಂಗ್ ಮಾಡಲಾಗುತ್ತದೆ. ‌

ಒಬ್ಬ ಉನ್ನತ ಅಧಿಕಾರಿಯ ವ್ಯಸನಗಳು ಅಥವಾ ಭಯಗಳು ಏನು ಎಂಬುದು ತಿಳಿದರೆ, ಅವನನ್ನು ಬ್ಲ್ಯಾಕ್‌ಮೇಲ್ ಮಾಡಲು ಅಥವಾ ಹನಿ-ಟ್ರ್ಯಾಪ್ ಮಾಡಲು ‘ಸೈಕಲಾಜಿಕಲ್ ಪ್ರೊಫೈಲಿಂಗ್’ ಅಡಿಪಾಯವಾಗುತ್ತದೆ. ಇದು ಮನುಷ್ಯನ ಮಿದುಳನ್ನು ಒಂದು ಭದ್ರ ಕೋಟೆಯಂತೆ ಪರಿಗಣಿಸಿ, ಅದಕ್ಕೆ ಸರಿಯಾದ ಕೀಲಿ ಕೈಯನ್ನು ಹುಡುಕುವ ತಂತ್ರ. ಇದನ್ನು ಇಸ್ರೇಲ್ ಒಂದು ಉತ್ಕೃಷ್ಟ ಕಲೆಯಾಗಿ ಕರಗತ ಮಾಡಿಕೊಂಡಿದೆ.

ಈ ಹಿನ್ನೆಲೆಯಲ್ಲಿ ತನ್ನ ಭದ್ರತೆಯ ದೃಷ್ಟಿಕೋನದಿಂದ ಭಾರತ, ಇಸ್ರೇಲ್‌ನ ಈ ಮಾದರಿ ಯಿಂದ ಕಲಿಯಬೇಕಾದ ಅಗತ್ಯ ಎದ್ದು ಕಾಣುತ್ತಿದೆ. ಟೆಕ್ನಾಲಜಿಗಿಂತಲೂ ಮಿಗಿಲಾದುದು ಹ್ಯೂಮಿಂಟ್ ಎಂಬುದನ್ನು ಇಸ್ರೇಲ್ ಈ ಯುದ್ಧದಲ್ಲಿ ತೋರಿಸಿಕೊಟ್ಟಿದೆ.

ಸ್ಯಾಟಲೈಟ್‌ಗಳು ಒಂದು ಕಟ್ಟಡದ ಮೇಲ್ಚಾವಣಿಯನ್ನು ತೋರಿಸಬಲ್ಲವು, ಆದರೆ ಆ ಕಟ್ಟಡದ ಒಳಗಿನ ಕೋಣೆಯಲ್ಲಿ ಯಾರು ಕುಳಿತಿದ್ದಾರೆ ಮತ್ತು ಅವರ ಮುಂದಿನ ಯೋಜನೆ ಏನು ಎಂಬುದು ತಿಳಿಯುವುದು ಸೈಬರ್-ಹ್ಯೂಮಿಂಟ್‌ಗೆ ಮಾತ್ರ ಸಾಧ್ಯ.

ಇಸ್ರೇಲಿನ ಗುಪ್ತಚರ ದಳವಾದ ಮೊಸಾದ್, ಇರಾನ್‌ನ ಪರಮಾಣು ದಾಖಲೆಗಳನ್ನು ಕಳವು ಮಾಡಿzಗಲಿ ಅಥವಾ ಉನ್ನತ ನಾಯಕರ ನಿಖರವಾದ ಸ್ಥಳವನ್ನು ಪತ್ತೆಹಚ್ಚುವುದಾಗಲಿ, ಇದು ಕೇವಲ ಕಂಪ್ಯೂಟರ್ ಹ್ಯಾಕಿಂಗ್ ಅಲ್ಲ. ಇದು ಶತ್ರುವಿನ ಅತ್ಯಂತ ಆಪ್ತ ವಲಯ ದೊಳಗೆ ನುಸುಳಿರುವ ‘ಮೋಲ್’ (Moles) ಅಥವಾ ಗೂಢಚರರ ಸಾಮರ್ಥ್ಯ.

ಭಾರತವು ಇಂದು ‘ಮಾಹಿತಿ ಯುದ್ಧ’ದ (Information Warfare) ದೊಡ್ಡ ಟಾರ್ಗೆಟ್ ಆಗಿದೆ. ಗಡಿಯಾಚೆಗಿನ ಶತ್ರುಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿ ಭಾರತದ ಆಂತರಿಕ ಶಾಂತಿಯನ್ನು ಕದಡಲು, ಸುಳ್ಳು ಸುದ್ದಿಗಳನ್ನು (Fake News) ಹರಡಲು ದೊಡ್ಡ ಮಟ್ಟದ ಸೈಬರ್ ಸೈನ್ಯವನ್ನೇ ಕಟ್ಟಿದ್ದಾರೆ.

Screenshot_2 ಋ

ಕೇವಲ ಅಲ್ಗಾರಿದಮ್‌ಗಳಿಂದ ಸುಳ್ಳು ಸುದ್ದಿಯನ್ನು ತಡೆಯಲು ಸಾಧ್ಯವಿಲ್ಲ. ನಮಗೆ ಶತ್ರುವಿನ ಸೈಬರ್ ಗುಂಪುಗಳ ಒಳಗೆ ಕುಳಿತು, ‘ಮುಂದಿನ ವಾರ ಯಾವ ಸುಳ್ಳು ಸುದ್ದಿ ಯನ್ನು ಹರಡಲು ಅವರು ಸಂಚು ರೂಪಿಸುತ್ತಿzರೆ’ ಎಂಬ ಮಾಹಿತಿಯನ್ನು ಮುಂಚಿತವಾಗಿ ನೀಡುವ ‘ಡಿಜಿಟಲ್ ಚೇಲಾ’ಗಳು ಬೇಕು. ಕಾಶ್ಮೀರ ವಿಷಯವಾಗಲಿ ಅಥವಾ ಭಾರತದ ಆರ್ಥಿಕತೆಯ ಬಗ್ಗೆಯಾಗಲಿ ವಿದೇಶಿ ನೆಲದಿಂದ ಹರಡುವ ಪ್ರೊಪಗಾಂಡಾವನ್ನು ಹತ್ತಿಕ್ಕಲು, ಶತ್ರುವಿನ ನೆಟ್ವರ್ಕ್ ಒಳಗೆ ನುಸುಳಿ ಅವರ ವ್ಯವಸ್ಥೆಯನ್ನು ಒಳಗಿನಿಂದಲೇ ಅಸ್ಥಿರಗೊಳಿಸುವ ತಂತ್ರಗಾರಿಕೆ ನಮಗೆ ಬೇಕಿದೆ.

ಭಾರತದ ಸೈಬರ್ ಸೆಲ್‌ಗಳು ತಾಂತ್ರಿಕವಾಗಿ ಪ್ರಬಲವಾಗಿವೆ, ಆದರೆ ಅದಕ್ಕೆ ಮಾನವ ಗುಪ್ತಚರದ (ಹ್ಯೂಮಿಂಟ್) ಸ್ಪರ್ಶ ಸಿಕ್ಕಾಗ ಮಾತ್ರ ಅದು ಸಂಪೂರ್ಣವಾಗುತ್ತದೆ. ಶತ್ರು ದೇಶದ ಹ್ಯಾಕರ್ ಒಬ್ಬನ ಮನವೊಲಿಸಿ ಅಥವಾ ಅವನನ್ನು ‘ಹನಿ ಟ್ರ್ಯಾಪ್’ ಮೂಲಕ ನಮ್ಮ ಪರವಾಗಿ ಕೆಲಸ ಮಾಡುವಂತೆ ಮಾಡುವುದು ಈ ತಂತ್ರದ ಭಾಗ.

ಭವಿಷ್ಯದಲ್ಲಿ ಯಾವ ದೇಶದ ಬಳಿ ಅತಿ ಹೆಚ್ಚು ಡೇಟಾ ಇರುತ್ತದೆಯೋ ಆ ದೇಶ ಗೆಲ್ಲುವು ದಿಲ್ಲ, ಬದಲಾಗಿ ಆ ಡೇಟಾವನ್ನು ವಿಶ್ಲೇಷಿಸಿ ಶತ್ರುವಿನ ಮನಸ್ಥಿತಿಯನ್ನು ಅರಿಯುವ ‘ಹ್ಯೂಮನ್ ಇಂಟೆಲಿಜೆನ್ಸ್’ ಯಾರ ಬಳಿ ಇರುತ್ತದೆಯೋ ಅವರೇ ಗೆಲ್ಲುತ್ತಾರೆ. ‌

ತಂತ್ರಜ್ಞಾನವು ನಮಗೆ ಶತ್ರುವಿನ ಸ್ಥಾನವನ್ನು ತೋರಿಸಬಹುದು, ಆದರೆ ಆತನ ‘ಉದ್ದೇಶ’ ವನ್ನು ತಿಳಿಯಲು ಮಾನವ ಜಾಲಗಳು ಬೇಕು. ತಾಂತ್ರಿಕವಾಗಿ ನಾವು ಎಷ್ಟೇ ಮುಂದುವರಿ ದಿದ್ದರೂ, ಗಡಿಯಾಚೆಗಿನ ಮಾಹಿತಿಯನ್ನು ಸಂಗ್ರಹಿಸಲು ಆ ಮಣ್ಣಿನ ವಾಸನೆ ಬಲ್ಲ ಮನುಷ್ಯರು ಬೇಕು.

ಪಾಕಿಸ್ತಾನದ ಬಲೂಚಿಸ್ತಾನ್ ಅಥವಾ ಗಡಿ ಪ್ರಾಂತ್ಯಗಳಲ್ಲಿ ಬಳಸುವ ಪಸ್ತೋ, ಸಿಂಧಿ ಅಥವಾ ಸ್ಥಳೀಯ ಉರ್ದು ಉಪಭಾಷೆಗಳಲ್ಲಿ ನಿಷ್ಣಾತರಾದ ಅಧಿಕಾರಿಗಳು ಬೇಕು. ಶತ್ರು ವಿನ ನಡುವೆ ಒಬ್ಬನಾಗಿ ಬೆರೆತುಹೋಗಬೇಕಾದರೆ ಕೇವಲ ಭಾಷೆ ಸಾಕಾಗುವುದಿಲ್ಲ, ಅವರ ಉಡುಗೆ-ತೊಡುಗೆ, ಧಾರ್ಮಿಕ ಆಚರಣೆಗಳು ಮತ್ತು ಸಾಮಾಜಿಕ ರೂಢಿಗಳ ಬಗ್ಗೆ ಆಳವಾದ ಜ್ಞಾನವಿರಬೇಕು.

ಇಸ್ರೇಲ್‌ನ ‘ಎಲಿ ಕೊಹೆನ್’ ಸಿರಿಯಾದ ಸರಕಾರದ ಉನ್ನತ ಮಟ್ಟದವರೆಗೆ ತಲುಪಿದಂತೆ, ಭಾರತಕ್ಕೆ ಶತ್ರುರಾಷ್ಟ್ರದ ಸೈನ್ಯ ಮತ್ತು ಸರಕಾರದ ಆಳವಾದ ನಿರ್ಧಾರಗಳನ್ನು ತಿಳಿಸುವ ‘ಡೀಪ್-ಕವರ್’ ಏಜೆಂಟ್‌ಗಳ ಅವಶ್ಯಕತೆಯಿದೆ. ತಂತ್ರಜ್ಞಾನವು ಎನ್‌ಕ್ರಿಪ್ಟ್ ಮಾಡಲಾದ ಸಂದೇಶಗಳನ್ನು ಭೇದಿಸಬಹುದು. ಆದರೆ ಮುಚ್ಚಿದ ಬಾಗಿಲಿನ ಹಿಂದೆ ನಡೆಯುವ ಗುಪ್ತ ಸಭೆಗಳ ಮಾಹಿತಿಯನ್ನು ಕೇವಲ ಇಂಥ ಮಾನವ ಜಾಲಗಳು ಮಾತ್ರ ನೀಡಬಲ್ಲವು.

ಇಸ್ರೇಲ್ ಸುತ್ತಲೂ ಶತ್ರುರಾಷ್ಟ್ರಗಳಿರುವಂತೆ, ಭಾರತವೂ ಅಂಥ ಸವಾಲುಗಳನ್ನು ಎದುರಿಸುತ್ತಿದೆ. ಪಾಕಿಸ್ತಾನದ ವಿಷಯದಲ್ಲಿ ನಮಗೆ ಬೇಕಿರುವುದು ಕೇವಲ ಸೈನ್ಯದ ಚಲನವಲನದ ಮಾಹಿತಿಯಲ್ಲ, ಬದಲಾಗಿ ಅಲ್ಲಿನ ‘ಐಎಸ್‌ಐ’ ಯಾವ ಭಯೋತ್ಪಾದಕ ಗುಂಪಿಗೆ ಹಣ ನೀಡುತ್ತಿದೆ, ಯಾರಿಂದ ಗುಟ್ಟಾಗಿ ಶಸಾಸಗಳನ್ನು ಪಡೆಯುತ್ತಿದೆ ಮತ್ತು ಯಾವ ನಗರವನ್ನು ಗುರಿಯಾಗಿಸಲು ಸಂಚು ರೂಪಿಸುತ್ತಿದೆ ಎಂಬ ಮುನ್ಸೂಚನೆ.

ಇತ್ತೀಚಿನ ಬಾಂಗ್ಲಾದೇಶದ ಬದಲಾದ ರಾಜಕೀಯ ಪರಿಸ್ಥಿತಿಯು ಭಾರತದ ಈಶಾನ್ಯ ರಾಜ್ಯಗಳ ಭದ್ರತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಅಲ್ಲಿನ ಕಟ್ಟರ್‌ವಾದಿ ಸಂಘಟನೆ ಗಳು ಭಾರತದ ವಿರುದ್ಧ ಸಂಘಟಿತವಾಗದಂತೆ ತಡೆಯಲು ನಮಗೆ ಅಲ್ಲಿನ ಸ್ಥಳೀಯ ರಾಜಕೀಯ ಮತ್ತು ನಾಗರಿಕ ಸಮಾಜದೊಳಗೆ ಬಲಿಷ್ಠ ಗುಪ್ತಚರ ಜಾಲ ಅನಿವಾರ್ಯ ವಾಗಿದೆ.

ಭಯೋತ್ಪಾದನೆಯು ಈಗ ಸಂಘಟಿತ ರೂಪದಿಂದ ಬದಲಾಗಿ ವೈಯಕ್ತಿಕ ದಾಳಿಗಳ (Lone Wolf) ರೂಪ ಪಡೆಯುತ್ತಿದೆ. ಶತ್ರು ರಾಷ್ಟ್ರದ ರಕ್ಷಣಾ ಇಲಾಖೆಯ ಫೈಲ್ʼಗಳು ಚಲಿಸುವ ಮೊದಲೇ ನಮಗೆ ಮಾಹಿತಿ ಸಿಗಬೇಕಾದರೆ, ಆ ದೇಶದ ನಿರ್ಧಾರ ತೆಗೆದುಕೊಳ್ಳುವ ‘ಮೇಜಿನ’ ಹತ್ತಿರ ನಮ್ಮ ಕಿವಿಗಳಿರಬೇಕು.

ಇಂದು ಸ್ಲೀಪರ್ ಸೆಲ್‌ಗಳು ಕೇವಲ ಗನ್ ಹಿಡಿಯುವುದಿಲ್ಲ, ಅವರು ಇಂಟರ್ನೆಟ್ ಮೂಲಕ ಯುವಕರನ್ನು ದಿಕ್ಕು ತಪ್ಪಿಸುತ್ತಾರೆ. ಇದನ್ನು ಹತ್ತಿಕ್ಕಲು ತಾಂತ್ರಿಕ ನಿಗಾದ ಜತೆಗೆ, ಅಂಥ ಗುಂಪುಗಳೊಳಗೆ ನುಸುಳಿರುವ ‘ಡಿಜಿಟಲ್ ಚೇಲಾ’ಗಳ ಮೂಲಕ ಒಳಗಿನಿಂದಲೇ ವಿಧ್ವಂಸಕ ಕೃತ್ಯಗಳನ್ನು ವಿಫಲಗೊಳಿಸಬೇಕು.

ಭಾರತದ ಭದ್ರತೆಯು ಕೇವಲ NTRO (The National Technical Research Organisation) ಅಥವಾ ಸ್ಯಾಟಲೈಟ್‌ಗಳ ಮೇಲೆ ನಿಂತಿಲ್ಲ. ಅದು ಗಡಿಯಾಚೆ ತನ್ನ ಜೀವವನ್ನೇ ಪಣಕ್ಕಿಟ್ಟು ಮಾಹಿತಿ ಕಲೆಹಾಕುವ, ಶತ್ರುವಿನ ಭಾಷೆಯ ಮಾತಾಡಿ ಅವನನ್ನು ಸೋಲಿಸುವ ‘ಅನಾಮ ಧೇಯ ಭಾರತೀಯರ’ ಶಕ್ತಿಯ ಮೇಲೆ ನಿಂತಿದೆ.

ಯಾವುದೇ ಭಯೋತ್ಪಾದನಾ ಜಾಲ ಅಥವಾ ಶತ್ರುರಾಷ್ಟ್ರದ ಕಾರ್ಯಾಚರಣೆ ನಡೆಯು ವುದು ಹಣದ ಬಲದಿಂದ. ಇಸ್ರೇಲ್ ‘ಹಾರ್ಪೂನ್’ (Harpoon) ಎಂಬ ವಿಶೇಷ ಘಟಕದ ಮೂಲಕ ಶತ್ರುಗಳ ಹಣಕಾಸಿನ ಮೂಲವನ್ನೇ (Money Laundering Funding) ಗುರಿಯಾ ಗಿಸುತ್ತದೆ. ಭಾರತವು ಕೇವಲ ಗಡಿಯಲ್ಲಿ ಸೈನಿಕರನ್ನು ನಿಯೋಜಿಸಿ ದರೆ ಸಾಲದು, ಬದಲಿಗೆ ಹವಾಲಾ ದಂಧೆ ಮತ್ತು ವಿದೇಶಿ ನೆಲದಿಂದ ಭಾರತದ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಯತ್ನಿಸುವ ಜಾಲಗಳ ಮೇಲೆ ‘ಹ್ಯೂಮನ್ ಅಸೆಟ್ಸ್’ ಮೂಲಕ ನಿಗಾ ಇಡಬೇಕು.

ಶತ್ರುವಿನ ಜೇಬನ್ನು ಖಾಲಿ ಮಾಡಿದರೆ ಅವನ ಆಯುಧ ತಾನಾಗಿಯೇ ಕೆಳಗೆ ಬೀಳುತ್ತದೆ. ಗುಪ್ತಚರ ಕಾರ್ಯಾಚರಣೆಯ ಅತಿದೊಡ್ಡ ಯಶಸ್ಸೆಂದರೆ ಆ ಕೆಲಸವನ್ನು ನಾವು ಮಾಡಿ ದ್ದೇವೆ ಎಂದು ಯಾರಿಗೂ ತಿಳಿಯದಂತೆ ಮಾಡುವುದು. ಇಸ್ರೇಲ್‌ನಲ್ಲಿ ಪ್ರತಿಯೊಬ್ಬ ನಾಗರಿಕನೂ ಒಂದು ರೀತಿಯಲ್ಲಿ ಸೈನಿಕ ಅಥವಾ ಗುಪ್ತಚರ ಎನ್ನಬಹುದು. ಅಲ್ಲಿನ ರಕ್ಷಣಾ ಸಂಸ್ಕೃತಿ ಅಂಥದ್ದು.

ಇದು ಭಾರತಕ್ಕೆ ಪಾಠವಾಗಬೇಕು. ಭಾರತದಂಥ ವಿಶಾಲ ದೇಶದಲ್ಲಿ ಕೇವಲ RAW ಅಥವಾ IB ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಕರಾವಳಿ ತೀರದ ಮೀನುಗಾರರಿಂದ ಹಿಡಿದು ಗಡಿಗ್ರಾಮಗಳ ನಿವಾಸಿಗಳವರೆಗೆ ಎಲ್ಲರನ್ನೂ ‘ರಾಷ್ಟ್ರೀಯ ಭದ್ರತೆಯ ಕಣ್ಣು’ಗಳಾಗಿ ಪರಿವರ್ತಿಸುವ ‘ಕಮ್ಯುನಿಟಿ ಇಂಟೆಲಿಜೆನ್ಸ್’ ವ್ಯವಸ್ಥೆ ಬಲಗೊಳ್ಳಬೇಕು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಮೊದಲು ಮಾಹಿತಿ ನೀಡಿದ್ದು ಒಬ್ಬ ಕುರಿಗಾಹಿ ಎಂಬುದು ಗೊತ್ತಿದ್ದಿರ ಬಹುದು. ಯಾರು ಮೊದಲು ನೋಡುತ್ತಾರೋ, ಸರಿಯಾಗಿ ಊಹಿಸುತ್ತಾರೋ, ಅವರೇ ಗೆಲ್ಲುತ್ತಾರೆ.

ಈಗಿನ ಯುದ್ಧವು ರಣಭೂಮಿಯಲ್ಲಿ ನಡೆಯುವ ಮೊದಲೇ ಶತ್ರುವಿನ ಮಿದುಳಿನಲ್ಲಿ ಮತ್ತು ಅವನ ಸಭೆಯ ಮೇಜಿನ ಮೇಲೆ ನಿರ್ಧಾರವಾಗಿರುತ್ತದೆ. ‘ಪ್ರಿವೆಂಟಿವ್ ಸ್ಟ್ರೈಕ್’ ಅಥವಾ ‘ಪೂರ್ವಭಾವಿ ದಾಳಿ’ಯಲ್ಲಿ ಇಸ್ರೇಲ್ ಎತ್ತಿದ ಕೈ. ಇದರ ಮೂಲಮಂತ್ರ ‘ಅಪಾಯ‌ ವು ನಿಮ್ಮನ್ನು ಹುಡುಕಿಕೊಂಡು ಬರುವವರೆಗೆ ಕಾಯಬೇಡಿ, ಬದಲಾಗಿ ಅಪಾಯದ ಮೂಲವನ್ನೇ ಹುಡುಕಿ ಮುಗಿಸಿ’ ಎನ್ನುವುದಾಗಿದೆ.

ಇಸ್ರೇಲ್ ಅನ್ನು ನಾಶಪಡಿಸಲು ಸಂಚು ರೂಪಿಸುತ್ತಿರುವ ಯಾವುದೇ ನೆರೆರಾಷ್ಟ್ರವು ‘ಸಂಹಾರಕ ಅಸ್ತ್ರ’ಗಳನ್ನು (ಪರಮಾಣು ಅಥವಾ ರಾಸಾಯನಿಕ ಶಸ್ತ್ರಾಸ್ತ್ರ) ಪಡೆಯಲು ಇಸ್ರೇಲ್ ಬಿಡುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ, ಇಸ್ರೇಲ್ 1981ರಲ್ಲಿ ಇರಾಕ್‌ನ ‘ಓಸಿರಾಕ್’ ಪರಮಾಣು ರಿಯಾಕ್ಟರ್ ಮತ್ತು 2007ರಲ್ಲಿ ಸಿರಿಯಾದ ‘ಅಲ್-ಕಿಬಾರ್’ಪರಮಾಣು ಕೇಂದ್ರದ ಮೇಲೆ ದಾಳಿ ಮಾಡಿ ಅವುಗಳನ್ನು ಧೂಳೀಪಟ ಮಾಡಿತ್ತು.

ಶತ್ರುವು ಬಲಶಾಲಿಯಾಗುವ ಮೊದಲೇ ಅವನ ಶಕ್ತಿಯನ್ನು ಕುಂದಿಸುವುದು ಇದರ ಉದ್ದೇಶ. ಇಸ್ರೇಲ್ ತನ್ನ ಗಡಿಯೊಳಗೆ ಯುದ್ಧ ನಡೆಯುವುದನ್ನು ಇಷ್ಟಪಡುವುದಿಲ್ಲ. ಏಕೆಂದರೆ ಇಸ್ರೇಲ್ ಭೌಗೋಳಿಕವಾಗಿ ಅತ್ಯಂತ ಚಿಕ್ಕ ದೇಶ. ಒಮ್ಮೆ ಶತ್ರುಸೈನ್ಯ ಒಳಗೆ ನುಗ್ಗಿದರೆ ದೇಶದ ಅಸ್ತಿತ್ವಕ್ಕೆ ಅಪಾಯ. ಆದ್ದರಿಂದ, ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್, ಶತ್ರುರಾಷ್ಟ್ರಗಳ ಒಳಗೆ ನುಸುಳಿ, ಅಲ್ಲಿನ ಭಯೋತ್ಪಾದನಾ ನಾಯಕರನ್ನು ಅಥವಾ ಅಪಾಯಕಾರಿ ವಿಜ್ಞಾನಿಗಳನ್ನು ಅವರ ಮನೆಯ ಗುರಿಯಾಗಿಸುತ್ತದೆ.

ಅಪಾಯವು ಚಿಗುರುವ ಹಂತದಲ್ಲಿರುವಾಗಲೇ ಅದನ್ನು ಚಿವುಟಿ ಹಾಕುವುದು ಇಸ್ರೇಲ್‌ನ ತಂತ್ರ. ಈ ನೀತಿಯು ಶತ್ರುಗಳಲ್ಲಿ ಭಯವನ್ನು ಹುಟ್ಟಿಸುತ್ತದೆ. ‘ನಾವು ಸಂಚು ರೂಪಿಸಿದರೆ ಇಸ್ರೇಲ್ ನಮ್ಮನ್ನು ಬಿಡುವುದಿಲ್ಲ’ ಎಂಬ ಸಂದೇಶವನ್ನು ಇದು ರವಾನಿಸುತ್ತದೆ. ಇದು ಕೇವಲ ದೈಹಿಕ ದಾಳಿಯಲ್ಲ, ಬದಲಾಗಿ ಶತ್ರುವಿನ ಮಿದುಳಿನ ಮೇಲೆ ನಡೆಸುವ ದಾಳಿ.

ಭಾರತ ಸಹ ಇತ್ತೀಚಿನ ವರ್ಷಗಳಲ್ಲಿ ಈ ಇಸ್ರೇಲ್ ಮಾದರಿಯನ್ನು ಅಳವಡಿಸಿಕೊಳ್ಳುತ್ತಿದೆ. ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಾಕೋಟ್ ದಾಳಿ ಇದಕ್ಕೆ ಉತ್ತಮ ನಿದರ್ಶನ. ಭಯೋತ್ಪಾದ‌ ಕರು ಭಾರತದೊಳಗೆ ಬಂದು ದಾಳಿ ಮಾಡುವವರೆಗೆ ಕಾಯುವ ಬದಲು, ಗಡಿಯಾಚೆ ಹೋಗಿ ಅವರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿದ್ದು ಈ ‘ಪೂರ್ವಭಾವಿ’ ನೀತಿಯ ಭಾಗವೇ ಆಗಿದೆ.

ಇಸ್ರೇಲ್‌ನ ಈ ನೀತಿಯು ‘ಆಕ್ರಮಣವೇ ಅತ್ಯುತ್ತಮ ರಕ್ಷಣೆ’ ಎಂಬ ತತ್ವದ ಮೇಲೆ ನಿಂತಿದೆ. ಶಾಂತಿ ನೆಲೆಸಬೇಕಾದರೆ ಶಕ್ತಿ ಪ್ರದರ್ಶನ ಅನಿವಾರ್ಯ ಎಂಬ ಕಹಿಸತ್ಯ ಇದರಲ್ಲಿ ಅಡಗಿದೆ. ಇಸ್ರೇಲಿನ ದೊಡ್ಡ ಶಕ್ತಿಯಿರುವುದು ‘ಸ್ಪೈ ಕ್ರಾಫ್ಟ್’ ಅಥವಾ ಗುಪ್ತಚರ ಕಲೆ. ಅದು ಒಂದು ತಪಸ್ಸಿನಂತೆ ಒಬ್ಬ ‘ಮೋಲ’ ಅಥವಾ ಡೀಪ್-ಕವರ್ ಏಜೆಂಟ್ ಅನ್ನು ಸೃಷ್ಟಿಸುವ ರೀತಿ.

ಒಬ್ಬ ಅಧಿಕಾರಿಯನ್ನು ಶತ್ರುರಾಷ್ಟ್ರದೊಳಗೆ ಕಳುಹಿಸುವ ಮೊದಲು, ಆತನಿಗೆ ಹೊಸ ಗುರುತು, ಹೊಸ ಇತಿಹಾಸ ಮತ್ತು ಹೊಸ ಸಂಸ್ಕೃತಿಯನ್ನು ನೀಡಲಾಗುತ್ತದೆ. ಈ ವ್ಯಕ್ತಿ ಶತ್ರುವ್ಯವಸ್ಥೆಯೊಳಗೆ ಸಣ್ಣ ನೌಕರಿಯಿಂದ ಸೇರಿ, ಉನ್ನತ ಅಧಿಕಾರಿಯ ಮಟ್ಟಕ್ಕೆ ಏರಲು 10 ರಿಂದ 15 ವರ್ಷಗಳ ತಾಳ್ಮೆ ಬೇಕು. ಇವರು ವರ್ಷಗಟ್ಟಲೆ ಯಾವುದೇ ಕಾರ್ಯಾಚರಣೆ ಮಾಡದೆ ಸಾಮಾನ್ಯ ನಾಗರಿಕರಂತೆ ಬದುಕುತ್ತಾರೆ.

ಸರಿಯಾದ ಸಮಯ ಬಂದಾಗ ಮಾತ್ರ ಇವರನ್ನು ಸಕ್ರಿಯಗೊಳಿಸಲಾಗುತ್ತದೆ. ಇಲ್ಲಿ ವೇಗಕ್ಕಿಂತ ‘ನಿಖರತೆ’ ಮುಖ್ಯ. ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿರುವ ಸಿಸಿಟಿವಿ ಕೆಮರಾ‌ ಗಳನ್ನು ತನಗೆ ಬೇಕಾದ ಮಾಹಿತಿ ಪಡೆಯುವ ಸಾಧನವಾಗಿ ಬಳಸಿಕೊಂಡಿದ್ದು ಇಸ್ರೇಲಿನ ಜಾಣ್ಮೆ.

ಗುಪ್ತಚರ ಅಧಿಕಾರಿಯ ಅತಿದೊಡ್ಡ ಯಶಸ್ಸೆಂದರೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಖಾತ್ರಿಪಡಿಸುವುದು. ಒಂದು ನಗರದಲ್ಲಿ ಬಾಂಬ್ ಸ್ಫೋಟವಾಗದಂತೆ ತಡೆದರೆ, ಆ ಸುದ್ದಿ ಮಾಧ್ಯಮಗಳಲ್ಲಿ ಬರುವುದಿಲ್ಲ. ಏನೂ ನಡೆಯದಿದ್ದಾಗ ಜನರು ‘ನಮ್ಮ ಗುಪ್ತಚರ ಇಲಾಖೆ ಮಲಗಿದೆಯೇ?’ ಎಂದು ಪ್ರಶ್ನಿಸುತ್ತಾರೆ. ಆದರೆ, ಆ ಶಾಂತಿಯ ಹಿಂದೆ ಅಧಿಕಾರಿಗಳ ನೂರಾರು ನಿದ್ದೆಯಿಲ್ಲದ ರಾತ್ರಿಗಳ ಶ್ರಮವಿರುತ್ತದೆ.

ಕಾರ್ಯಾಚರಣೆಯ ಸಮಯದಲ್ಲಿ ಒಬ್ಬ ಅಧಿಕಾರಿ ಶತ್ರುದೇಶದಲ್ಲಿ ಸಿಕ್ಕಿಬಿದ್ದರೆ, ಸ್ವಂತ ದೇಶವೇ ಆತನನ್ನು ‘ನಮ್ಮವನಲ್ಲ’ ಎಂದು ನಿರಾಕರಿಸಬೇಕಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಯಾವುದೇ ಮೆಡಲ್ ಅಥವಾ ಗೌರವವಿಲ್ಲದೆ ಮಣ್ಣಾಗುವ ತ್ಯಾಗ ಮನೋಭಾವ ಬೇಕಾಗು ತ್ತದೆ. ಇದರಲ್ಲಿ ಇಸ್ರೇಲಿಗಳನ್ನು ಮೀರಿಸುವವರು ಯಾರೂ ಇಲ್ಲ. ಶತ್ರುಗಳ ನಡುವೆ ಪ್ರತಿದಿನ ಸುಳ್ಳಿನ ಕವಚ ತೊಟ್ಟು ಬದುಕುವುದು ಮತ್ತು ಸಿಕ್ಕಿಬೀಳುವ ಭಯವನ್ನು ಗೆಲ್ಲು ವುದು ಸುಲಭದ ಮಾತಲ್ಲ.

ನೈಜ ಜಗತ್ತಿನ ‘ಧುರಂಧರ’ರು ತೆರೆಯ ಮೇಲೆ ಬರುವುದಿಲ್ಲ, ಏಕೆಂದರೆ ಅವರು ತೆರೆಯ ಹಿಂದೆ ಇದ್ದರೆ ಮಾತ್ರ ರಾಷ್ಟ್ರ ಸುರಕ್ಷಿತವಾಗಿರುತ್ತದೆ. ಹೀಗಾಗಿ ಇಸ್ರೇಲ್ ಶತ್ರುಗಳಿಂದ ಸುತ್ತುವರಿದಿದ್ದರೂ ಭದ್ರವಾಗಿದೆ. ಭಾರತಕ್ಕೆ ಇದು ಪಾಠವಾಗಬೇಕು. ಹೊಸ ಭಾರತದ ಭದ್ರತಾ ಸಿದ್ಧಾಂತ ಸ್ಪಷ್ಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಭಾರತದ ರಕ್ಷಣಾ ನೀತಿಯು ‘ಪ್ರತಿರೋಧ’ದಿಂದ (Defensive) ‘ಸಕ್ರಿಯ ಆಕ್ರಮಣಕಾರಿ’ ( Offensive-Defense) ಸ್ಥಿತಿಗೆ ಬದಲಾಗಿದೆ.

ಅಜಿತ್ ದೋವಲ್ ನಾಯಕತ್ವವು ಹ್ಯೂಮಿಂಟ್ ಮತ್ತು ತಂತ್ರಜ್ಞಾನವನ್ನು ಬೆಸೆಯುವಲ್ಲಿ ದೊಡ್ಡ ಪಾತ್ರ ವಹಿಸಿದೆ. ಗಡಿಯಾಚೆಗಿನ ಕಾರ್ಯಾಚರಣೆಗಳನ್ನು ಬೆಂಬಲಿಸುವ ರಾಜಕೀಯ ಇಚ್ಛಾಶಕ್ತಿ ಇಂದು ಭಾರತಕ್ಕಿದೆ. ಬಜೆಟ್‌ನಲ್ಲಿ ಗುಪ್ತಚರ ಇಲಾಖೆಗಳಿಗೆ ನೀಡುವ ಹಣವು ಖರ್ಚಲ್ಲ, ಅದು ಒಂದು ಹೂಡಿಕೆ ಎಂಬ ಭಾವನೆ ಬಲವಾಗುತ್ತಿದೆ.

ರಾಷ್ಟ್ರೀಯ ಭದ್ರತೆಯನ್ನು ಗಟ್ಟಿಗೊಳಿಸಲು ಕೇವಲ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದರೆ ಸಾಲದು, ಅದರ ಜತೆಗೆ ಶತ್ರುವಿನ ಭಾಷೆಯ ಮರ್ಮ ಮತ್ತು ಇಲಾಖೆಗಳ ನಡುವಿನ ಸಮನ್ವಯ ಅತ್ಯಗತ್ಯ. ಗುಪ್ತಚರ ಕಾರ್ಯಾಚರಣೆಯಲ್ಲಿ ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ, ಅದು ಒಂದು ಆಯುಧ.

ಪಸ್ತೋ, ಪರ್ಷಿಯನ್, ಚೈನೀಸ್ (ಮ್ಯಾಂಡರಿನ್) ಮತ್ತು ಅರೇಬಿಕ್ ಭಾಷೆಗಳಲ್ಲಿ ನಿಷ್ಣಾತ ರಾದ ಅಧಿಕಾರಿಗಳು ಇದ್ದಾಗ ಮಾತ್ರ, ಶತ್ರುರಾಷ್ಟ್ರಗಳ ರೇಡಿಯೋ ಸಂದೇಶಗಳು, ರಹಸ್ಯ ಪತ್ರಗಳು ಮತ್ತು ಸಾಮಾಜಿಕ ಜಾಲತಾಣದ ಸಂಕೇತಗಳನ್ನು ನಿಖರವಾಗಿ ಅರ್ಥೈಸಲು ಸಾಧ್ಯ.

ಭಾಷೆ ತಿಳಿದ ಅಧಿಕಾರಿಗಳು ಶತ್ರುಗಳ ಸಂಸ್ಕೃತಿ ಮತ್ತು ಆಲೋಚನಾ ಕ್ರಮವನ್ನು ಗ್ರಹಿಸ ಬಲ್ಲರು. ಇದು ಶತ್ರುವು ಬಳಸುವ ಕೋಡ್ ವರ್ಡ್‌ಗಳನ್ನು ಭೇದಿಸಲು ನೆರವಾಗುತ್ತದೆ. 26/11ರ ಮುಂಬೈ ದಾಳಿಯ ನಂತರ ‘ಮಲ್ಟಿ ಏಜೆನ್ಸಿ ಸೆಂಟರ್’ (MAC) ಬಲಗೊಂಡಿದೆ ಯಾದರೂ, ಇಸ್ರೇಲ್ ನಂತೆ ಎಲ್ಲ ವಿಭಾಗಗಳು ಒಂದೇ ಮಿದುಳಿನಂತೆ ಕೆಲಸಮಾಡುವ ಹಂತಕ್ಕೆ ನಾವು ತಲುಪಬೇಕಿದೆ.

ಭಾರತವು ಶಾಂತಿಪ್ರಿಯ ದೇಶವಾಗಿರಬಹುದು, ಆದರೆ ಆ ಶಾಂತಿಯನ್ನು ಕಾಪಾಡಿಕೊಳ್ಳಲು ಶತ್ರುವಿನ ರಕ್ತನಾಳದೊಳಗೆ ಕಣ್ಣು ಮತ್ತು ಕಿವಿಗಳನ್ನು ಹೊಂದಿರಬೇಕಾದದ್ದು ಅನಿವಾರ್ಯ. ಗುಪ್ತಚರ ಎಂಬುದು ಕೇವಲ ಒಂದು ಇಲಾಖೆಯಲ್ಲ, ಅದು ರಾಷ್ಟ್ರದ ಅಸ್ತಿತ್ವದ ಭದ್ರ ಬುನಾದಿ. ಈ ಎಲ್ಲ ದೃಷ್ಟಿಯಿಂದ ಈಗ ನಡೆಯುತ್ತಿರುವ ಯುದ್ಧ ಭಾರತಕ್ಕೆ ಒಂದು ದೊಡ್ಡ ಪಾಠವೂ ಹೌದು.

ವಿಶ್ವೇಶ್ವರ ಭಟ್‌

View all posts by this author