ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಫೇಸ್‌ʼಬುಕ್‌ ಪೋಸ್ಟಿಗೆ ನಿರೀಕ್ಷಿತ ಲೈಕ್ಸ್‌, ಕಾಮೆಂಟ್ಸ್‌ ಬರದಿದ್ದರೆ ಏನರ್ಥ ?

ನೀವು ಬಳಸುವ ಹ್ಯಾಶ್‌ಟ್ಯಾಗ್‌ಗಳ ಸರ್ಚ್ ರಿಸಲ್ಟ್‌ಗಳಲ್ಲಿ ನಿಮ್ಮ ಪೋಸ್ಟ್ ಕಾಣಿಸುವುದಿಲ್ಲ. ನಿಮ್ಮನ್ನು ಫಾಲೋ ಮಾಡುವವರಿಗೂ ನಿಮ್ಮ ಹೊಸ ಪೋಸ್ಟ್‌ಗಳ ನೋಟಿಫಿಕೇಶನ್ ಹೋಗುವುದಿಲ್ಲ ಅಥವಾ ಅವರ ಟೈಮ್‌ಲೈನ್ ನಲ್ಲಿ ನಿಮ್ಮ ಪೋಸ್ಟ್ ತೀರಾ ಕೆಳಗೆ ಹೋಗಿ ಬೀಳುತ್ತದೆ. ಸಚ್ ಬಾರ್‌ನಲ್ಲಿ ನಿಮ್ಮ ಯೂಸರ್ ನೇಮ್ ಅನ್ನು ಪೂರ್ತಿಯಾಗಿ ಟೈಪ್ ಮಾಡಿದರೂ ನಿಮ್ಮ ಪ್ರೊಫೈಲ್ ಸುಲಭವಾಗಿ ಪತ್ತೆ ಯಾಗುವುದಿಲ್ಲ.

ಇದೇ ಅಂತರಂಗ ಸುದ್ದಿ

ನೀವು ಬಹಳ ಆಸೆಯಿಂದ, ಸಾಕಷ್ಟು ಲೈಕ್ಸ್, ಕಾಮೆಂಟ್ಸ್ ಬರಬಹುದು, ಷೇರ್ ಆಗಬಹುದು ಎಂಬ ನಿರೀಕ್ಷೆಯಿಂದ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಮಾಡುತ್ತೀರಿ. ಆದರೆ ನಿಮ್ಮ ಪೋಸ್ಟ್‌ಗೆ ಹತ್ತು ಲೈಕ್ಸ್, ಒಂದು ಕಾಮೆಂಟ್ ಕೂಡ ಬಂದಿರುವುದಿಲ್ಲ. ಆಗ ನಿಮಗೆ ಒಂದೆಡೆ ನಿರಾಸೆ, ಇನ್ನೊಂದೆಡೆ ಆಶ್ಚರ್ಯ. ಹೀಗೇಕಾಯ್ತು ಎಂಬ ಬಗೆಹರಿಯದ ಪ್ರಶ್ನೆ ಕಾಡುವುದು ಸಹಜ. ಆದರೆ ನಿರ್ದಿಷ್ಟ ಉತ್ತರ ಮಾತ್ರ ಸಿಗುವುದಿಲ್ಲ. ಸಾಮಾಜಿಕ ಜಾಲತಾಣಗಳ ಜಗತ್ತಿನಲ್ಲಿ ಇದು ಅತ್ಯಂತ ಚರ್ಚಾಸ್ಪದ ಮತ್ತು ನಿಗೂಢ ವಿಷಯ. ಇದನ್ನು ‘ಶ್ಯಾಡೋ ಬ್ಯಾನಿಂಗ್’ (Shadow Banning) ಅಂತಾರೆ. ಸರಳವಾಗಿ ಹೇಳುವುದಾದರೆ, ಇದು ‘ಅಪ್ರತ್ಯಕ್ಷ ನಿಷೇಧ’. ಯಾವುದೇ ಒಂದು ಸಾಮಾಜಿಕ ಮಾಧ್ಯಮ ಸಂಸ್ಥೆಯು (ಉದಾಹರಣೆಗೆ, ಇನ್ಸ್ಟಾ ಗ್ರಾಮ್, ಫೇಸ್‌ಬುಕ್, ಎಕ್ಸ್/ಟ್ವಿಟರ್ ಇತ್ಯಾದಿ) ಒಬ್ಬ ಬಳಕೆದಾರನ ಖಾತೆ ಯನ್ನು ಅಧಿಕೃತವಾಗಿ ಬ್ಲಾಕ್ ಮಾಡುವುದಿಲ್ಲ ಅಥವಾ ಅಮಾನತುಗೊಳಿಸುವುದಿಲ್ಲ.

ಬದಲಿಗೆ, ಆ ಬಳಕೆದಾರ ಪ್ರಕಟಿಸುವ ಪೋಸ್ಟ್‌ಗಳು, ಕಾಮೆಂಟ್‌ಗಳು ಅಥವಾ ವಿಡಿಯೋಗಳು ಇತರ ಯಾವುದೇ ಬಳಕೆದಾರರಿಗೆ ಕಾಣಿಸದಂತೆ ಅಥವಾ ಅತ್ಯಂತ ಕಡಿಮೆ ಜನರಿಗೆ ತಲುಪುವಂತೆ ಅಲ್ಗಾರಿದಂ ಮೂಲಕ ನಿಯಂತ್ರಿಸಲಾಗುತ್ತದೆ. ಇಲ್ಲಿರುವ ಮುಖ್ಯ ತಂತ್ರವೆಂದರೆ, ಪೋಸ್ಟ್ ಮಾಡಿದ ವ್ಯಕ್ತಿಗೆ ತನ್ನ ಖಾತೆ ಎಂದಿನಂತೆ ಕೆಲಸ ಮಾಡುತ್ತಿದೆ ಎಂದೇ ಅನಿಸುತ್ತದೆ. ಆದರೆ ವಾಸ್ತವದಲ್ಲಿ ಅವನ ಪೋಸ್ಟ್‌ಗಳು ಇತರರ ‘ಫೀಡ್’ ಅಥವಾ ಹುಡುಕಾಟದ ಫಲಿತಾಂಶಗಳಲ್ಲಿ (Search Results) ಕಾಣಿಸಿಕೊಳ್ಳುವುದೇ ಇಲ್ಲ.

ನೀವು ಬಳಸುವ ಹ್ಯಾಶ್‌ಟ್ಯಾಗ್‌ಗಳ ಸರ್ಚ್ ರಿಸಲ್ಟ್‌ಗಳಲ್ಲಿ ನಿಮ್ಮ ಪೋಸ್ಟ್ ಕಾಣಿಸುವುದಿಲ್ಲ. ನಿಮ್ಮನ್ನು ಫಾಲೋ ಮಾಡುವವರಿಗೂ ನಿಮ್ಮ ಹೊಸ ಪೋಸ್ಟ್‌ಗಳ ನೋಟಿಫಿಕೇಶನ್ ಹೋಗುವು ದಿಲ್ಲ ಅಥವಾ ಅವರ ಟೈಮ್‌ಲೈನ್ ನಲ್ಲಿ ನಿಮ್ಮ ಪೋಸ್ಟ್ ತೀರಾ ಕೆಳಗೆ ಹೋಗಿ ಬೀಳುತ್ತದೆ. ಸಚ್ ಬಾರ್‌ನಲ್ಲಿ ನಿಮ್ಮ ಯೂಸರ್ ನೇಮ್ ಅನ್ನು ಪೂರ್ತಿಯಾಗಿ ಟೈಪ್ ಮಾಡಿದರೂ ನಿಮ್ಮ ಪ್ರೊಫೈಲ್ ಸುಲಭವಾಗಿ ಪತ್ತೆಯಾಗುವುದಿಲ್ಲ.

ಇದನ್ನೂ ಓದಿ: Vishweshwar Bhat Column: ಲೋಕಭವನಕ್ಕೊಂದು ಶೋಭೆ ನಮ್ಮ ವಿಜಯಶಂಕರ !

ಒಬ್ಬ ಬಳಕೆದಾರನಿಗೆ ತಿಳಿಯದಂತೆ ಅವನ ಖಾತೆಯ ವ್ಯಾಪ್ತಿಯನ್ನು (Reach) ಕುಗ್ಗಿಸುವುದೇ ಶ್ಯಾಡೋ ಬ್ಯಾನ್ನಿಂಗ್. ಸಾಮಾನ್ಯವಾಗಿ ಇನ್ಸ್ಟಾ ಗ್ರಾಮ್, ಫೇಸ್‌ಬುಕ್, ಎಕ್ಸ್/ ಟ್ವಿಟರ್ ಇತ್ಯಾದಿ ಪೈಕಿ ಯಾವುದಾದರೂ ಒಂದು ನಿಮ್ಮ ಖಾತೆಯನ್ನು ನಿಯಮ ಉಲ್ಲಂಘನೆಗಾಗಿ ನಿರ್ಬಂಧಿಸಿದರೆ, ನಿಮಗೆ ಅದರ ನೋಟಿಸ್ ಬರುತ್ತದೆ. ಆದರೆ, ಶ್ಯಾಡೋ ಬ್ಯಾನಿಂಗ್‌ನಲ್ಲಿ ಯಾವುದೇ ನೋಟಿಸ್ ಬರುವುದಿಲ್ಲ.

ಬಳಕೆದಾರನಿಗೆ ತಾನು ‘ಬ್ಯಾನ್’ ಆಗಿದ್ದೇನೆ ಎಂಬ ವಿಷಯವೇ ತಿಳಿಯುವುದಿಲ್ಲ. ಸಾಮಾಜಿಕ ಜಾಲತಾಣಗಳ ಅಲ್ಗಾರಿದಮ್‌ಗಳು ನಿರ್ದಿಷ್ಟ ಖಾತೆಗಳನ್ನು ಗುರುತಿಸಿ ಅವುಗಳ ವಿಸಿಬಿಲಿಟಿಯನ್ನು ಕಡಿಮೆ ಮಾಡುತ್ತವೆ. ನೀವು ಪೋಸ್ಟ್ ಮಾಡಿದಾಗ ಅದು ಅಪ್ಲೋಡ್ ಆಗುತ್ತದೆ, ಆದರೆ ಅದನ್ನು ಇತರರ ‘ಫೀಡ್’ಗೆ ತಲುಪದಂತೆ ಅಲ್ಗಾರಿದಮ್ ತಡೆಯುತ್ತದೆ. ನಿಮ್ಮ ಯೂಸರ್ ನೇಮ್ ಪೂರ್ತಿ ಯಾಗಿ ಟೈಪ್ ಮಾಡಿದರೂ ನಿಮ್ಮ ಪ್ರೊಫೈಲ್ ಬರುವುದಿಲ್ಲ.

ಶ್ಯಾಡೋ ಬ್ಯಾನ್ ಮಾಡಲು ಕಾರಣಗಳೇನು?

ಸಾಮಾಜಿಕ ಮಾಧ್ಯಮ ಸಂಸ್ಥೆಗಳು ತಮ್ಮ ವೇದಿಕೆ ಯನ್ನು ಸುರಕ್ಷಿತವಾಗಿಡಲು ಈ ಕ್ರಮ ಕೈಗೊಳ್ಳುತ್ತವೆ. ಅತಿ ಕಡಿಮೆ ಅವಧಿಯಲ್ಲಿ ನೂರಾರು ಜನರನ್ನು ಫಾಲೋ-ಅನ್ ಫಾಲೋ ಮಾಡುವುದು, ಎಲ್ಲರ ಪೋಸ್ಟ್‌ಗಳಿಗೂ ಒಂದೇ ರೀತಿಯ ಕಾಮೆಂಟ್ ಮಾಡುವುದು ಅಥವಾ ಸ್ವಯಂಚಾಲಿತ ಬಾಟ್ ಗಳನ್ನು (Bots) ಬಳಸುವುದು, ಲೈಕ್ಸ್ ಅಥವಾ ಫಾಲೋವಸ್ ಗಳನ್ನು ಹೆಚ್ಚಿಸಿಕೊಳ್ಳಲು ಆಟೋಮ್ಯಾಟಿಕ್ ಸಾಫ್ಟ್‌ʼವೇರ್ ಅಥವಾ ಬಾಟ್‌ಗಳನ್ನು ಬಳಸುವುದು, ಹಿಂಸಾ ಚಾರ, ಅಶ್ಲೀಲ ಅಥವಾ ಸಮಾಜಕ್ಕೆ ಹಾನಿಕಾರಕವಾದ ವಿಷಯಗಳಿಗೆ ಸಂಬಂಧಿಸಿದ ಹ್ಯಾಶ್‌ಟ್ಯಾಗ್‌ ಗಳನ್ನು ಬಳಸುವುದು...ಹೀಗೆ ಮಾಡಿದರೆ ಶ್ಯಾಡೋ ಬ್ಯಾನ್ ಆಗುವ ಸಾಧ್ಯತೆ ಇರುತ್ತದೆ.

61 R

ಇತರ ಬಳಕೆದಾರರು ನಿಮ್ಮ ಖಾತೆಯ ಅಥವಾ ಪೋಸ್ಟ್‌ಗಳ ವಿರುದ್ಧ ಸತತವಾಗಿ ದೂರು ನೀಡಿದಾಗ, ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಸುಳ್ಳು ಮಾಹಿತಿ ಅಥವಾ ಸಮುದಾಯಗಳ ನಡುವೆ ದ್ವೇಷ ಬಿತ್ತುವ ವಿಷಯಗಳನ್ನು ಹಂಚಿಕೊಂಡಾಗ ಶ್ಯಾಡೋ ಬ್ಯಾನ್ ಆಗುವ ಸಾಧ್ಯತೆ ಇರುತ್ತದೆ.

ಶ್ಯಾಡೋ ಬ್ಯಾನ್ ತಿಳಿಯುವುದು ಹೇಗೆ?

ನಿಮ್ಮ ಖಾತೆಯ ಮೇಲೆ ಈ ಪರಿಣಾಮ ಬೀರಿದೆಯೇ ಎಂದು ತಿಳಿಯಲು ಕೆಲವು ಸುಲಭ ಮಾರ್ಗಗಳಿವೆ. ಹಠಾತ್ತನೆ ನಿಮ್ಮ ಪೋಸ್ಟ್‌ಗಳಿಗೆ ಬರುವ ಲೈಕ್ಸ್ ಮತ್ತು ಕಾಮೆಂಟ್‌ಗಳು ಶೇ.70-80ರಷ್ಟು ಕಡಿಮೆ ಯಾದರೆ, ನೀವು ಬಳಸಿದ ಹ್ಯಾಶ್ ಟ್ಯಾಗ್ ಅನ್ನು ನಿಮ್ಮ ಫಾಲೋವರ್ ಅಲ್ಲದ ಬೇರೊಬ್ಬರ ಮೊಬೈಲ್‌ನಿಂದ ಸರ್ಚ್ ಮಾಡಿ ನೋಡಿದಾಗ ಅಲ್ಲಿ ನಿಮ್ಮ ಪೋಸ್ಟ್ ಕಾಣಿಸದಿದ್ದರೆ, ಇನ್‌ಸ್ಟಾ ಗ್ರಾಮ್ ಬಿಸಿನೆಸ್ ಅಕೌಂಟ್ ನಲ್ಲಿ "Insights' ಚೆಕ್ ಮಾಡಿದಾಗ, ನಿಮ್ಮ ಪೋಸ್ಟ್ ಎಷ್ಟು ಜನರಿಗೆ ತಲುಪಿದೆ ಎಂಬಲ್ಲಿ Non-followers ಸಂಖ್ಯೆ ಶೂನ್ಯವಾಗಿದ್ದರೆ, ನೀವು ಶ್ಯಾಡೋ ಬ್ಯಾನ್ ಆಗಿದ್ದೀರಿ ಎಂದರ್ಥ.

ಹಾಗಾದರೆ ಇದರಿಂದ ಹೊರಬರುವುದು ಹೇಗೆ? ಒಮ್ಮೆ ಶ್ಯಾಡೋ ಬ್ಯಾನ್ ಆದ ಮೇಲೆ ಅದರಿಂದ ಹೊರಬರಲು ಕೆಲವು ದಿನಗಳ ಸಮಯ ಬೇಕು. ಕನಿಷ್ಠ 48 ರಿಂದ 72 ಗಂಟೆಗಳ ಕಾಲ ಆ ಆಪ್ ಅನ್ನು ಬಳಸಬಾರದು. ಯಾವುದೇ ಪೋಸ್ಟ್ ಅಥವಾ ಲೈಕ್ ಮಾಡಬಾರದು. ನಿಮ್ಮ ಖಾತೆಗೆ ಲಿಂಕ್ ಆಗಿರುವ ಥರ್ಡ್ ಪಾರ್ಟಿ ಆಪ್‌ಗಳನ್ನು ತಕ್ಷಣವೇ ತೆಗೆದುಹಾಕಬೇಕು.

ಇತ್ತೀಚಿನ ಪೋಸ್ಟ್‌ಗಳಲ್ಲಿರುವ ಹ್ಯಾಶ್‌ಟ್ಯಾಗ್‌ಗಳನ್ನು ತೆಗೆಯಬೇಕು ಅಥವಾ ಬದಲಾಯಿಸಬೇಕು. ಸೆಟ್ಟಿಂಗ್ಸ್‌ನಲ್ಲಿ ’Report a Problem’ ಮೂಲಕ ನಿಮ್ಮ ಕಂಟೆಂಟ್ ಜನರಿಗೆ ತಲುಪುತ್ತಿಲ್ಲ ಎಂದು ದೂರು ನೀಡಬೇಕು. ಆದರೆ ‘ಶ್ಯಾಡೋ ಬ್ಯಾನ್’ ಎಂಬ ಪದ ಬಳಸಬಾರದು. ಶ್ಯಾಡೋ ಬ್ಯಾನ್ನಿಂಗ್ ಅನ್ನು ರಾಜಕೀಯ ಕಾರಣಗಳಿಗಾಗಿ ಬಳಸಲಾಗುತ್ತಿದೆ ಎಂಬ ದೊಡ್ಡ ದೂರು ಇದೆ. ಮುಖ್ಯವಾಗಿ ವಿವಾದಾತ್ಮಕ ಸತ್ಯಗಳನ್ನು ಹೇಳುವವರನ್ನು ಅಥವಾ ಸರಕಾರದ ವಿರುದ್ಧ ಮಾತನಾಡುವವರನ್ನು ಸದ್ದಿಲ್ಲದೇ ಮೂಲೆಗುಂಪು ಮಾಡಲು ಇದನ್ನು ಅಸ್ತ್ರವಾಗಿ ಬಳಸಲಾಗುತ್ತದೆ ಎಂಬುದು ಅನೇಕರ ವಾದ.

ಇದು ಡಿಜಿಟಲ್ ಜಗತ್ತಿನಲ್ಲಿ ಒಂದು ರೀತಿಯ ‘ಸೆನ್ಸಾರ್‌ಶಿಪ್’ ಇದ್ದಂತೆ. ತಂತ್ರಜ್ಞಾನದ ದೃಷ್ಟಿ ಯಿಂದ ಇದು ಜಾಲತಾಣಗಳನ್ನು ಸ್ಪ್ಯಾಮ್ ಮುಕ್ತವಾಗಿರಿಸಲು ಒಳ್ಳೆಯದು ಎಂದು ಕಂಡು ಬಂದರೂ, ಪಾರದರ್ಶಕತೆಯ ಕೊರತೆಯಿಂದಾಗಿ ಇದು ಬಳಕೆದಾರರಲ್ಲಿ ಆತಂಕ ಮೂಡಿಸುತ್ತದೆ. ಸಾಮಾಜಿಕ ಜಾಲತಾಣಗಳು ಅಧಿಕೃತವಾಗಿ ತಾವೂ ಶ್ಯಾಡೋ ಬ್ಯಾನ್ ಮಾಡುವುದನ್ನು ಒಪ್ಪಿ ಕೊಳ್ಳುವುದಿಲ್ಲವಾದರೂ, ಆರೋಗ್ಯಕರ ಡಿಜಿಟಲ್ ವಾತಾವರಣವನ್ನು ಕಾಪಾಡಲು ಅಲ್ಗಾರಿದಂ ಗಳು ಈ ರಹಸ್ಯ ಅಸವನ್ನು ಬಳಸುತ್ತಲೇ ಇರುತ್ತವೆ. ಗುಣಮಟ್ಟದ ಕಂಟೆಂಟ್ ನೀಡುವುದು ಮತ್ತು ಜಾಲತಾಣದ ನಿಯಮಗಳನ್ನು ಗೌರವಿಸುವುದು ಈ ‘ಶ್ಯಾಡೋ ಬ್ಯಾನಿಂಗ್’ನಿಂದ ತಪ್ಪಿಸಿಕೊಳ್ಳಲು ಇರುವ ಸರಳ ಮಾರ್ಗ.

ಯೂಟ್ಯೂಬ್ ಎಂಬ ಮಹಾವೇದಿಕೆ

ಯೂಟ್ಯೂಬ್ ಇಂದು ಜಗತ್ತಿನ ಅತಿದೊಡ್ಡ ವಿಡಿಯೋ ಹಂಚಿಕೆ ವೇದಿಕೆ. ಪ್ರತಿ ನಿಮಿಷಕ್ಕೆ ಸಾವಿರಾರು ಗಂಟೆಗಳ ಅವಧಿಯ ವಿಡಿಯೋಗಳು ಇಲ್ಲಿ ಅಪ್ಲೋಡ್ ಆಗುತ್ತವೆ. ಇಷ್ಟೊಂದು ಬೃಹತ್ ಪ್ರಮಾಣದ ವಿಷಯಗಳಲ್ಲಿ, ಸಮುದಾಯದ ನಿಯಮಗಳನ್ನು ಮೀರುವ ಅಥವಾ ಅನುಚಿತವಾಗಿ ರುವ ವಿಡಿಯೋಗಳನ್ನು ಪತ್ತೆಹಚ್ಚಿ ಅವುಗಳನ್ನು ನಿಯಂತ್ರಿಸುವುದು ಯೂಟ್ಯೂಬ್‌ಗೆ ಒಂದು ದೊಡ್ಡ ಸವಾಲು. ಆದರೆ ಇದನ್ನು ಅತ್ಯಂತ ಸಮರ್ಥವಾಗಿ ಅದು ಮಾಡುತ್ತಿದೆ.

ಯೂಟ್ಯೂಬ್ ಅನುಚಿತ ವಿಡಿಯೋಗಳನ್ನು ಹೇಗೆ ನಿರ್ವಹಿಸುತ್ತದೆ? ಇದು ನಿಜಕ್ಕೂ ಸೋಜಿಗವೇ. ಯೂಟ್ಯೂಬ್ ತನ್ನ ವೇದಿಕೆಯಲ್ಲಿ ಏನನ್ನು ಹಾಕಬೇಕು ಮತ್ತು ಏನನ್ನು ಹಾಕಬಾರದು ಎಂಬುದಕ್ಕೆ ಸ್ಪಷ್ಟವಾದ ನಿಯಮಗಳನ್ನು ರೂಪಿಸಿದೆ. ಅನುಚಿತ ವಿಡಿಯೋಗಳನ್ನು ಕೆಲವು ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಆ ಪೈಕಿ ಜನರನ್ನು ದಾರಿ ತಪ್ಪಿಸುವ ಅಥವಾ ಹಣ ಲೂಟಿ ಮಾಡುವ ವಿಡಿಯೋಗಳು (ಸ್ಪ್ಯಾಮ್ ಮತ್ತು ವಂಚನೆ), ಮಕ್ಕಳ ಸುರಕ್ಷತೆಗೆ ಧಕ್ಕೆ ತರುವಂಥವು (ಸೂಕ್ಷ್ಮ ವಿಷಯಗಳು), ನಗ್ನತೆ ಅಥವಾ ಲೈಂಗಿಕ ಅಂಶಗಳಿರುವ ವಿಡಿಯೋಗಳು, ಆತ್ಮಹತ್ಯೆ ಪ್ರಚೋದನೆ, ದ್ವೇಷಭಾಷಣ (Hate Speech) ಮತ್ತು ಪ್ರಾಣಿಹಿಂಸೆಯ ವಿಡಿಯೋಗಳು (ಹಿಂಸಾತ್ಮಕ ಅಥವಾ ಅಪಾಯಕಾರಿ), ಸಾರ್ವಜನಿಕ ಆರೋಗ್ಯ ಅಥವಾ ಚುನಾವಣೆ ಯಂಥ ವಿಷಯಗಳ ಬಗ್ಗೆ ಸುಳ್ಳು ಸುದ್ದಿ ಹರಡುವ (ತಪ್ಪು ಮಾಹಿತಿ) ವಿಡಿಯೋಗಳು ಪ್ರಮುಖವಾದವು. ಯೂಟ್ಯೂಬ್ ಬಳಸಿರುವ ಅತಿದೊಡ್ಡ ಅಸ್ತ್ರವೆಂದರೆ ಸ್ವಯಂಚಾಲಿತ ವ್ಯವಸ್ಥೆ.

ಲಕ್ಷಾಂತರ ವಿಡಿಯೋಗಳನ್ನು ಮನುಷ್ಯರು ಕುಳಿತು ಪರಿಶೀಲಿಸುವುದು ಅಸಾಧ್ಯ. ಯೂಟ್ಯೂಬ್‌ನ ಅಲ್ಗಾರಿದಮ್‌ಗಳು ವಿಡಿಯೋ ಅಪ್ಲೋಡ್ ಆದ ತಕ್ಷಣ ಅದನ್ನು ಸ್ಕ್ಯಾನ್ ಮಾಡುತ್ತವೆ. ವಿಡಿಯೋದ ದೃಶ್ಯಗಳು, ಆಡಿಯೋ ಮತ್ತು ಶೀರ್ಷಿಕೆಗಳನ್ನು ವಿಶ್ಲೇಷಿಸಿ, ಅದರಲ್ಲಿ ಹಿಂಸೆ ಅಥವಾ ಅಶ್ಲೀಲತೆ ಇದೆಯೇ ಎಂದು ಪತ್ತೆಹಚ್ಚುತ್ತವೆ. ಶೇ.90ಕ್ಕೂ ಹೆಚ್ಚು ಅನುಚಿತ ವಿಡಿಯೋಗಳನ್ನು ಯಾರೂ ವೀಕ್ಷಿಸುವ ಮೊದಲೇ ಈ ಯಂತ್ರಗಳೇ ಪತ್ತೆಹಚ್ಚಿ ತೆಗೆದುಹಾಕುತ್ತವೆ. ಯಂತ್ರಗಳು ಎಲ್ಲವನ್ನೂ ಪತ್ತೆ ಹಚ್ಚಲು ಸಾಧ್ಯವಾಗದಿzಗ, ಸಾಮಾನ್ಯ ಬಳಕೆದಾರರು ನೆರವಾಗುತ್ತಾರೆ.

ಯಾವುದೇ ವಿಡಿಯೋ ಅನುಚಿತವೆಂದು ಕಂಡುಬಂದಲ್ಲಿ, ಯಾರಾದರೂ ಅದನ್ನು ‘Flag’ ಅಥವಾ ‘ Report’ ಮಾಡಬಹುದು. ಒಮ್ಮೆ ವರದಿಯಾದ ನಂತರ, ಯೂಟ್ಯೂಬ್‌ನ ಪರಿಶೀಲನಾ ತಂಡವು ಆ ವಿಡಿಯೋವನ್ನು ಕೂಲಂಕಷವಾಗಿ ಗಮನಿಸುತ್ತದೆ. ತಂತ್ರeನವು ಕೇವಲ ಸಂಕೇತಗಳನ್ನು ನೀಡುತ್ತದೆ, ಆದರೆ ಸಂದರ್ಭವನ್ನು ಅರ್ಥಮಾಡಿಕೊಳ್ಳಲು ಮನುಷ್ಯರ ಅಗತ್ಯ ಬೇಕು.

ಉದಾಹರಣೆಗೆ, ಒಂದು ವಿಡಿಯೋದಲ್ಲಿ ಹಿಂಸೆ ಇದ್ದರೂ ಅದು ಸುದ್ದಿಗಾಗಿ ಅಥವಾ ಶೈಕ್ಷಣಿಕ ಉದ್ದೇಶಕ್ಕಾಗಿ ಇರಬಹುದು. ಯೂಟ್ಯೂಬ್ ಪ್ರಪಂಚದಾದ್ಯಂತ ಸಾವಿರಾರು ಪರಿಶೀಲಕರನ್ನು ನೇಮಿಸಿಕೊಂಡಿದೆ. ಇವರು ವಿವಿಧ ಭಾಷೆ ಮತ್ತು ಸಂಸ್ಕೃತಿಗಳನ್ನು ಅರ್ಥಮಾಡಿಕೊಂಡು, ವಿಡಿಯೋ ನಿಯಮ ಉಲ್ಲಂಘನೆ ಆಗಿದೆಯಾ ಎಂದು ನಿರ್ಧರಿಸುತ್ತಾರೆ.

ಒಂದು ವಿಡಿಯೋ ಅನುಚಿತವೆಂದು ಸಾಬೀತಾದಾಗ ಯೂಟ್ಯೂಬ್ ಕೆಲವು ಕ್ರಮಗಳನ್ನು ತೆಗೆದು ಕೊಳ್ಳುತ್ತದೆ. ವಿಡಿಯೋ ತೀರಾ ಕೆಟ್ಟದಾಗಿಲ್ಲದಿದ್ದರೂ ಮಕ್ಕಳಿಗೆ ಸೂಕ್ತವಲ್ಲದಿದ್ದರೆ, ಅದನ್ನು ಕೇವಲ 18 ವರ್ಷ ಮೇಲ್ಪಟ್ಟವರು ಮಾತ್ರ ನೋಡುವಂತೆ ಮಾಡಲಾಗುತ್ತದೆ. ವಿಡಿಯೋದಲ್ಲಿ ಜಾಹೀರಾತುಗಳನ್ನು ನಿಲ್ಲಿಸಲಾಗುತ್ತದೆ. ಇದರಿಂದ ಆ ವಿಡಿಯೋ ಮೂಲಕ ಹಣ ಗಳಿಸಲು ಸಾಧ್ಯ ವಾಗುವುದಿಲ್ಲ. ನಿಯಮಗಳನ್ನು ತೀವ್ರವಾಗಿ ಉಲ್ಲಂಘಿಸಿದ್ದರೆ ವಿಡಿಯೋವನ್ನು ಡಿಲೀಟ್ ಮಾಡಲಾಗುತ್ತದೆ. ಯೂಟ್ಯೂಬ್ ಮೊದಲ ಬಾರಿಗೆ ಎಚ್ಚರಿಕೆ ನೀಡುತ್ತದೆ. ನಂತರ ಮೊದಲ ಸ್ಟ್ರೈಕ್ ಇಂದು ಒಂದು ವಾರ ಪೋಸ್ಟ್ ಮಾಡುವುದನ್ನು ನಿಷೇಧಿಸುತ್ತದೆ.

ಎರಡನೇ ಸ್ಟ್ರೈಕ್ ಇಂದು ಎರಡು ವಾರ ನಿಷೇಧ ಮಾಡುತ್ತದೆ. 90 ದಿನಗಳೊಳಗೆ ಮೂರು ಸ್ಟ್ರೈಕ್ ಬಂದರೆ ಆ ಚಾನೆಲ್ ಅನ್ನು ಶಾಶ್ವತವಾಗಿ ಡಿಲೀಟ್ ಮಾಡುತ್ತದೆ. ಯೂಟ್ಯೂಬ್ ಇಂಟೆಲಿಜೆನ್ಸ್ ಡೆಸ್ಕ್ ಎಂಬ ವಿಶೇಷ ವಿಭಾಗವನ್ನು ಹೊಂದಿದೆ. ಜಾಗತಿಕವಾಗಿ ನಡೆಯುವ ಹೊಸ ರೀತಿಯ ವಂಚನೆಗಳು, ಹಾನಿಕಾರಕ ಟ್ರೆಂಡ್ ಗಳು ಮತ್ತು ಸಂಘಟಿತ ಸುಳ್ಳು ಸುದ್ದಿಗಳನ್ನು ಇದು ಪತ್ತೆ ಹಚ್ಚುತ್ತದೆ. ಯೂಟ್ಯೂಬ್ ತನ್ನ ವೇದಿಕೆಯನ್ನು ಸುರಕ್ಷಿತವಾಗಿಡಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮಾನವ ವಿವೇಚನೆಯನ್ನು ಸಮತೋಲನದಲ್ಲಿ ಬಳಸುತ್ತದೆ. ಆದರೂ, ಪ್ರತಿದಿನ ಅಪ್ಲೋಡ್ ಆಗುವ ಬೃಹತ್ ಕಂಟೆಂಟ್ ಮುಂದೆ ಈ ವ್ಯವಸ್ಥೆ ಸದಾ ಜಾಗರೂಕವಾಗಿರಬೇಕಾಗುತ್ತದೆ. ಬಳಕೆ ದಾರರಾಗಿ ನಾವು ಕೂಡ ಅನುಚಿತ ವಿಷಯಗಳನ್ನು ವರದಿ ಮಾಡುವ ಮೂಲಕ ಈ ಡಿಜಿಟಲ್ ಪರಿಸರವನ್ನು ಸ್ವಚ್ಛವಾಗಿಡಲು ನೆರವಾಗಬಹುದು.

ಇನ್ಫಿನಿಟಿ ಸ್ಕ್ರಾಲ್ ಮಹಾತ್ಮೆ

ನಾವು ಟ್ವಿಟರ್, -ಸ್‌ಬುಕ್, ಇನ್ಸ್ಟಾ ಅಥವಾ ಥ್ರೆಡ್ ಅನ್ನು ಸುಮ್ಮನೆ ಸ್ಕ್ರಾಲ್ ಮಾಡುತ್ತಾ ಹೋಗುತ್ತೇವಲ್ಲ, ಅದಕ್ಕೆ ಕೊನೆ ಎಂಬುದೇ ಇಲ್ಲ.

ಎಷ್ಟು ಸ್ಕ್ರಾಲ್ ಮಾಡಿದರೂ ಪಾತಾಳ ತಲುಪುವುದೇ ಇಲ್ಲ. ಇದನ್ನು ‘ಇನ್ಫಿನಿಟಿ ಸ್ಕ್ರಾಲ್’ ಅಂತಾರೆ. ಇದೇನು ಮಹಾ ತಾಂತ್ರಿಕ ಆವಿಷ್ಕಾರವೇನಲ್ಲ. ಆದರೆ ಇದು ಮಾನವ ಇತಿಹಾಸದ ಅತ್ಯಂತ ಯಶಸ್ವಿ ಮತ್ತು ವ್ಯಾಪಕವಾಗಿ ಬಳಕೆಯಾದ ಮನಃಶಾಸ್ತ್ರೀಯ ಬಲೆ’. ಅಮೆರಿಕದ ಕ್ಯಾಲಿ-ರ್ನಿಯಾದ ಆಜಾ ರಾಸ್ಕಿನ್ ಎಂಬ ಕಂಪ್ಯೂಟರ್ ವಿಜ್ಞಾನಿ 2006ರಲ್ಲಿ ‘ಇನಿನಿಟಿ ಸ್ಕ್ರಾಲ್’ ಅನ್ನು ವಿನ್ಯಾಸ ಗೊಳಿಸಿದಾಗ, ಬಳಕೆದಾರರಿಗೆ ಪುಟಗಳನ್ನು ಬದಲಾಯಿಸುವ ತೊಂದರೆ ತಪ್ಪಿಸಿ ಸರಾಗವಾಗಿ ಕಂಟೆಂಟ್ ನೀಡುವ ಸದುದ್ದೇಶ ಹೊಂದಿದ್ದ. ಆದರೆ ಕಾಲಕ್ರಮೇಣ, ಸಾಮಾಜಿಕ ಜಾಲತಾಣಗಳು ಇದನ್ನು ತಮ್ಮ ಅತ್ಯಂತ ಪ್ರಭಾವಶಾಲಿ ಅಸ್ತ್ರವನ್ನಾಗಿ ಮಾಡಿಕೊಂಡವು. ‌

ಹಳೆಯ ತಂತ್ರಜ್ಞಾನದಲ್ಲಿ ಯಾವುದಾದರೂ ವೆಬ್‌ಸೈಟ್ ಅಥವಾ ಆರ್ಟಿಕಲ್ ಓದುವಾಗ ಪುಟದ ಕೊನೆಯಲ್ಲಿ 1,2,3 ಅಥವಾ ’ Next Page’ ಎಂಬ ಆಯ್ಕೆಗಳಿರುತ್ತಿದ್ದವು. ಮನಃ ಶಾಸ್ತ್ರದಲ್ಲಿ ಇದನ್ನು ಸ್ಟಾಪಿಂಗ್ ಕ್ಯೂ’ ಅಥವಾ ನಿಲುಗಡೆಯ ಸಂಕೇತ ಎನ್ನಲಾಗುತ್ತದೆ. ಈ ಬಟನ್ ಎದುರಾದಾಗ ಮನುಷ್ಯನ ತಾರ್ಕಿಕ ಮಿದುಳು ಎಚ್ಚರಗೊಳ್ಳುತ್ತದೆ. ‘ನಾನು ಈಗಾಗಲೇ ಸಾಕಷ್ಟು ಸಮಯ ಕಳೆದಿದ್ದೇನೆ, ಈಗ ಮುಂದಿನ ಪುಟಕ್ಕೆ ಹೋಗಬೇಕೇ ಅಥವಾ ಇಲ್ಲಿಗೇ ನಿಲ್ಲಿಸಬೇಕೇ?’ ಎಂದು ಯೋಚಿಸಿ ನಿರ್ಧಾರ ಕೈಗೊಳ್ಳಲು ಮಿದುಳಿಗೆ ಒಂದು ಕ್ಷಣದ ಕಾಲಾವಕಾಶ ಸಿಗುತ್ತಿತ್ತು. ಆದರೆ ಇನಿನಿಟಿ ಸ್ಕ್ರಾಲ್ ಈ ನಿರ್ಧಾರದ ಬಿಂದುವನ್ನೇ ಸಂಪೂರ್ಣವಾಗಿ ಅಳಿಸಿಹಾಕಿತು.

ಕಂಟೆಂಟ್ ಮುಗಿಯದಂತೆ ಸತತವಾಗಿ ಹರಿದುಬರುವುದರಿಂದ, ಮಿದುಳಿಗೆ ವಿರಾಮ ತೆಗೆದು ಕೊಳ್ಳಲು ಅಥವಾ ಯೋಚಿಸಲು ಯಾವುದೇ ಆಸ್ಪದ ಸಿಗುವುದಿಲ್ಲ. ಪರಿಣಾಮವಾಗಿ, ‘ಇನ್ನೊಂದೇ ಪೋಸ್ಟ್’ ಎಂದುಕೊಳ್ಳುತ್ತಾ ಬಳಕೆದಾರರು ಗಂಟೆಗಟ್ಟಲೆ ಪರದೆಯನ್ನೇ ನೋಡುತ್ತಾ ಕುಳಿತು ಬಿಡುತ್ತಾರೆ.

ಇನಿನಿಟಿ ಸ್ಕ್ರಾಲ್ ಇಷ್ಟೊಂದು ವ್ಯಸನಕಾರಿಯಾಗಲು ಕಾರಣ, ಅದು ಕ್ಯಾಸಿನೋಗಳಲ್ಲಿನ ‘ಸ್ಲಾಟ್ ಮೆಷಿನ್’ ಜೂಜಿನ ತತ್ವದ ಮೇಲೆ ಕೆಲಸ ಮಾಡುತ್ತದೆ. ನೀವು ಹೆಬ್ಬೆರಳಿನಿಂದ ಸ್ಕ್ರಾಲ್ ಮಾಡಿದಾಗ ಮುಂದಿನ ಪೋಸ್ಟ್ ಯಾವುದು ಬರುತ್ತದೆ ಎಂಬುದು ನಿಮಗೆ ತಿಳಿದಿರುವುದಿಲ್ಲ. ಕೆಲವೊಮ್ಮೆ ತೀರಾ ಸಾಧಾರಣ ಪೋಸ್ಟ್ ಇರಬಹುದು. ಇನ್ನು ಕೆಲವು ಬಾರಿ ನಿಮಗೆ ಅತ್ಯಂತ ಇಷ್ಟವಾಗುವ ವಿಡಿಯೋ ಅಥವಾ ಮೀಮ್ ಇರಬಹುದು. ಮುಂದಿನ ಸ್ಕ್ರಾಲ್‌ನಲ್ಲಿ ನಮಗೆ ಲಭಿಸಬಹುದಾದ ಈ ‘ನಿರೀಕ್ಷಿತ ಬಹುಮಾನ’ ಮಿದುಳಿನಲ್ಲಿ ಅತ್ಯಧಿಕ ಮಟ್ಟದ ಡೋಪಮೈನ್ ಅನ್ನು ಬಿಡುಗಡೆ ಮಾಡುತ್ತದೆ.

ಹೀಗಾಗಿ, ಮುಂದಿನದು ಇನ್ನಷ್ಟು ಸ್ವಾರಸ್ಯಕರವಾಗಿರಬಹುದು ಎಂಬ ಭ್ರಮೆಯ ಮನುಷ್ಯ ಸ್ಕ್ರಾಲ್ ಮಾಡುತ್ತಲೇ ಹೋಗುತ್ತಾನೆ. ಇನ್ಸ್ಟಾಗ್ರಾಮ್ ರೀಲ್ಲ್ಸ್ ಅಥವಾ ಯೂಟ್ಯೂಬ್ ಶಾರ್ಟ್ಸ್ ಇಂದು ಇಷ್ಟೊಂದು ಯಶಸ್ವಿಯಾಗಿರುವುದರ ಹಿಂದೆ ಇದೇ ತಂತ್ರಜ್ಞಾನದ ಪ್ರಮುಖ ಪಾತ್ರವಿದೆ. ಸ್ವತಃ ಈ ವೈಶಿಷ್ಟ್ಯವನ್ನು ರೂಪಿಸಿದ ಆಜಾ ರಾಸ್ಕಿನ್ ನಂತರದ ದಿನಗಳಲ್ಲಿ ತಾಂತ್ರಿಕ ಜಗತ್ತಿನ ನೈತಿಕತೆಯ ಬಗ್ಗೆ ದೊಡ್ಡ ಧ್ವನಿಯೆತ್ತಿದ.

ತಾನು ಮಾನವನ ಉತ್ಪಾದಕತೆಯನ್ನು ಹೆಚ್ಚಿಸಲು ತಂದ ಸರಳ ಆಲೋಚನೆಯನ್ನು, ಟೆಕ್ ಕಂಪನಿಗಳು ಜನರ ಗಮನವನ್ನು ಸೆರೆಹಿಡಿದು ಲಾಭ ಮಾಡಲು ಬಳಸಿಕೊಂಡಿದ್ದನ್ನು ಕಂಡು ಆತ ಆಘಾತಕ್ಕೊಳಗಾದ. ‘ನಮ್ಮ ಮಿದುಳಿನ ದೌರ್ಬಲ್ಯ ಗಳನ್ನು ಬಳಸಿಕೊಂಡು ನಮ್ಮನ್ನು ದಿನವಿಡೀ ಪರದೆಗೆ ಅಂಟಿಕೊಳ್ಳುವಂತೆ ಮಾಡುವ ಇಂಥ ತಂತ್ರಜ್ಞಾನಗಳು ಅಕ್ಷರಶಃ ಡಿಜಿಟಲ್ ಕೊಕೇನ್‌ ನಂತೆ ಕೆಲಸ ಮಾಡುತ್ತವೆ.

ನಾನು ಮಾನ ವಕುಲಕ್ಕೆ ಮಾಡಿದ ದೊಡ್ಡ ದ್ರೋಹ ಇದು. ಇದಕ್ಕಾಗಿ ನನಗೆ ವಿಷಾದವಿದೆ’ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ. ನಿಜಕ್ಕೂ ಇನಿನಿಟಿ ಸ್ಕ್ರಾಲ್ ಎಂಬುದು ಡಿಜಿಟಲ್ ಯುಗದ ಅತ್ಯಂತ ಅಪಾಯಕಾರಿ ಭ್ರಮೆ. ಯಾವುದೇ ಪರಿಶ್ರಮವಿಲ್ಲದೆ ನಿರಂತರವಾಗಿ ಸಿಗುವ ಕಂಟೆಂಟ್ ನಮಗೆ ಸುಲಭ ಎನಿಸಿದರೂ, ಅದು ನಮ್ಮ ಆಲೋಚನಾ ಶಕ್ತಿ ಮತ್ತು ಸಮಯವನ್ನು ಅತ್ಯಂತ ವ್ಯವಸ್ಥಿತ ವಾಗಿ ಕದಿಯುತ್ತಿದೆ.

ಡಿಜಿಟಲ್ ಮಾಧ್ಯಮಗಳನ್ನು ಬಳಸುವಾಗ ನಾವೇ ಸ್ವತಃ ಜಾಗೃತರಾಗಿ, ನಿಗದಿತ ಸಮಯದ ನಂತರ ಆಪ್‌ಗಳನ್ನು ಮುಚ್ಚುವ ಸ್ವಯಂ-ನಿಯಂತ್ರಣ ರೂಢಿಸಿಕೊಳ್ಳುವುದು ಇಂದಿನ ಅತ್ಯಗತ್ಯವಾಗಿದೆ.

ಡಿಜಿಟಲ್ ಕಣ್ಗಾವಲು

ನಾವು ಯಾವುದೇ ಸಾಮಾಜಿಕ ಜಾಲತಾಣಕ್ಕೆ ಹಣ ನೀಡುವುದಿಲ್ಲ, ಎಲ್ಲವೂ ಉಚಿತ ತಾನೇ? ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಪ್ರಸಿದ್ಧ ಗಾದೆಯಿದೆ - ‘ಯಾವಾಗ ಉತ್ಪನ್ನ ಉಚಿತವಾಗಿರು ತ್ತದೆಯೋ, ಆಗ ನೀವೇ ಆ ಉತ್ಪನ್ನವಾಗಿರುತ್ತೀರಿ’ (If the product is free, you are the product).

ಸಾಮಾಜಿಕ ಜಾಲತಾಣಗಳು ನಮ್ಮ ವೈಯಕ್ತಿಕ ಮಾಹಿತಿ, ನಮ್ಮ ಆಸಕ್ತಿಗಳು, ನಾವು ಎಲ್ಲಿದ್ದೇವೆ, ಯಾವ ಫೋನ್ ಬಳಸುತ್ತಿದ್ದೇವೆ ಎಂಬ ಡಾಟಾವನ್ನು ಜಾಹೀರಾತು ಸಂಸ್ಥೆಗಳಿಗೆ ಮಾರಾಟ ಮಾಡುತ್ತವೆ. ನಿಮ್ಮ ಇನ್‌ಬಾಕ್ಸ್‌ನಲ್ಲಿ ನೀವು ಸ್ನೇಹಿತರೊಂದಿಗೆ ‘ನಾಳೆ ಊರಿಗೆ ಹೋಗಬೇಕು, ಬ್ಯಾಗ್ ಖರೀದಿಸಬೇಕು’ ಎಂದು ಚಾಟ್ ಮಾಡಿದರೆ, ಮುಂದಿನ ಐದು ನಿಮಿಷಗಳಲ್ಲಿ ನಿಮ್ಮ ಫೇಸ್‌ಬುಕ್ ಅಥವಾ ಇನ್ಸ್ಟಾಗ್ರಾಮ್‌ನಲ್ಲಿ ಟ್ರಾವೆಲ್ ಬ್ಯಾಗ್‌ಗಳ ಜಾಹೀರಾತು ಪ್ರತ್ಯಕ್ಷವಾಗುತ್ತದೆ. ಇದು ಕಾಕತಾಳೀಯವಲ್ಲ, ಕೃತಕ ಬುದ್ಧಿಮತ್ತೆಯ ನಿರಂತರ ಕಣ್ಗಾವಲು!

ವಿಶ್ವೇಶ್ವರ ಭಟ್‌

View all posts by this author