ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shashidhara Halady Column: ಸುದ್ದಿಯೊಂದು ವೈರಲ್ ಆಗಲು ಏನೇನು ಬೇಕು ?

‘ದಪಂಗ್’ ಎಂದರೆ, ದಪ್ಪನೆಯವನು ಅಥವಾ ಠೊಣಪ ಎಂದರ್ಥವಂತೆ! ಕನ್ನಡದ ದಪ್ಪನೆ ಶಬ್ದಕ್ಕೂ, ಚೀನಾ ದೇಶದ ದಪಂಗ್ ಪದಕ್ಕೂ ಹೋಲಿಕೆ ಕಂಡು, ಮುದಗೊಂಡೆ. ಚೀನಾ ದೇಶದ ಪತ್ರಿಕೆಗಳು ‘ದಪಂಗ್’ ಎಂದು ತುಸು ಅಭಿಮಾನದಿಂದ, ತುಸು ಹಾಸ್ಯದಿಂದ ಕರೆದ ಆ ನಾಯಿ ಯು ಒಂದು ಸಾಹಸಕಾರ್ಯ ಮಾಡಿದೆ. ಅಥವಾ, ಆ ನಾಯಿ ಮಾಡಿದ ಕೆಲಸವನ್ನು 23 ಕೋಟಿ ನೆಟ್ಟಿಗರು ‘ಬಹುದೊಡ್ಡ ಸಾಹಸ’ ಎಂದು ಮೆಚ್ಚಿಕೊಂಡಿದ್ದಾರೆ.

ಶಶಾಂಕಣ

ನಾವಾಡುವ ಭಾಷೆಯು, ಬಹು ಪುರಾತನ ಕಾಲದಲ್ಲೇ ಎಲ್ಲೆಲ್ಲಿಂದಲೋ ಎಲ್ಲೆಲ್ಲಿಗೋ ಪಯಣ ಬೆಳೆಸಿದೆ ಎಂಬ ಮಾತಿದೆ. ಮೆಡಿಟರೇನಿಯನ್ ಸಮುದ್ರದ ಸುತ್ತಮುತ್ತಲಿನ ಭಾಷೆಗೂ, ದಕ್ಷಿಣ ಭಾರತದ ಕನ್ನಡ, ತಮಿಳು ಮೊದಲಾದ ಭಾಷೆಗೂ ಹೋಲಿಕೆ ಇದೆ ಎಂದು ಕೆಲವರು ಸಂಶೋಧನೆ ಮಾಡಿದ್ದಾರೆ.

ಕನ್ನಡ ಮತ್ತು ಮುಂಡಾ ಭಾಷೆಗಳ ನಡುವೆ ಸಾಮ್ಯತೆಗಳಿವೆ. ಅಷ್ಟೇಕೆ, ಹುಡುಕುತ್ತಾ ಹೋದರೆ, ಇಂಗ್ಲಿಷ್‌ಗೂ ಕನ್ನಡಕ್ಕೂ ಹೋಲಿಕೆಯನ್ನು ತಳುಕು ಹಾಕಬಹುದು: ಉದಾ: ಕೊಲೆ/ಕಿಲ್! ಇದನ್ನು ತಮಾಷೆ ಅಂತ ನೀವು ತೆಗೆದುಕೊಂಡರೆ ನನ್ನ ಅಭ್ಯಂತರವಿಲ್ಲ. ಇದನ್ನೇಕೆ ಪ್ರಸ್ತಾಪಿಸಿದೆನೆಂದರೆ, ಚೀನಾ ದೇಶದ ಪತ್ರಿಕೆಗಳು ಒಂದು ನಾಯಿಯನ್ನು ದಪಂಗ್ (ಡಪಂಗ್) ಎಂದು ಹೆಸರಿಸಿವೆ!

‘ದಪಂಗ್’ ಎಂದರೆ, ದಪ್ಪನೆಯವನು ಅಥವಾ ಠೊಣಪ ಎಂದರ್ಥವಂತೆ! ಕನ್ನಡದ ದಪ್ಪನೆ ಶಬ್ದಕ್ಕೂ, ಚೀನಾ ದೇಶದ ದಪಂಗ್ ಪದಕ್ಕೂ ಹೋಲಿಕೆ ಕಂಡು, ಮುದಗೊಂಡೆ. ಚೀನಾ ದೇಶದ ಪತ್ರಿಕೆಗಳು ‘ದಪಂಗ್’ ಎಂದು ತುಸು ಅಭಿಮಾನದಿಂದ, ತುಸು ಹಾಸ್ಯದಿಂದ ಕರೆದ ಆ ನಾಯಿಯು ಒಂದು ಸಾಹಸಕಾರ್ಯ ಮಾಡಿದೆ. ಅಥವಾ, ಆ ನಾಯಿ ಮಾಡಿದ ಕೆಲಸ ವನ್ನು 23 ಕೋಟಿ ನೆಟ್ಟಿಗರು ‘ಬಹುದೊಡ್ಡ ಸಾಹಸ’ ಎಂದು ಮೆಚ್ಚಿಕೊಂಡಿದ್ದಾರೆ.

ನಾವೆಲ್ಲಾ ಜೀವಿಸುತ್ತಿರುವ ಈ ಕಾಲಮಾನವು ಅಂತರ್ಜಾಲ ಯುಗ ತಾನೆ? ಕೆಲವು ವಿಡಿಯೋಗಳು ಅಥವಾ ಸುದ್ದಿಗಳು ವೈರಲ್ ಆದವು ಎಂದರೆ, ಒಮ್ಮೆಗೇ ಲಕ್ಷಗಟ್ಟಲೆ, ಕೋಟಿಗಟ್ಟಲೆ ಜನರು ನೋಡುವುದು, ಕಮೆಂಟ್ ಆಡುವುದು, ಟ್ರೋಲ್ ಮಾಡುವುದು, ಕಾಲೆಳೆಯುವುದು ಇಂದು ಸಾಮಾನ್ಯ ಸುದ್ದಿ.

ಇದನ್ನೂ ಓದಿ: Shishir Hegde Column: ನಾಯಕನನ್ನು ಕೊಲ್ಲುವ ಮೂಲಕ ಈ ಯುದ್ಧ ಶುರುವಾಯಿತಲ್ಲ !

ಚೀನಾ ದೇಶದ ‘ದಪಂಗ್’ ಎಂಬ ನಾಯಿಯು, ನಾಯಕತ್ವ ವಹಿಸಿಕೊಂಡು ತನ್ನ ಆರು ನಾಯಿ ಗೆಳೆಯ-ಗೆಳತಿಯರನ್ನು 17 ಕಿಲೋ ಮೀಟರ್ ದೂರ ನಡೆಸಿಕೊಂಡು ಬಂದು, ಅವರವರ ಊರನ್ನು ಸೇರಿಸಿತಂತೆ. ‘ದಪಂಗ್’ ಎಂಬ ದಪ್ಪ ನಾಯಿ ಮಾಡಿದ, ದೊಡ್ಡ ಕೆಲಸವನ್ನು, ದೊಡ್ಡ ದೇಶವಾದ ಚೀನಾದ ಜನರು, ದೊಡ್ಡದಾಗಿ ಶ್ಲಾಘಿಸಿದ್ದಾರೆ!

ಆಗಿದ್ದಿಷ್ಟೆ- ಮಾರ್ಚ್ 15ರಂದು, ಚೀನಾ ದೇಶದ ಹೆದ್ದಾರಿಯಲ್ಲಿ ಸಾಗುತ್ತಿದ್ದ ಒಬ್ಬ ಸವಾರನು, ರಸ್ತೆ ಪಕ್ಕದಲ್ಲೇ ಗುಂಪಾಗಿ ಸಾಗುತ್ತಿದ್ದ 7 ನಾಯಿಗಳನ್ನು ನೋಡಿದ. ಅವೆಲ್ಲವೂ ಯಾರೋ ಸಾಕಿದ ನಾಯಿಗಳ ರೀತಿ ಇದ್ದವು. ಸಾಕುನಾಯಿಗಳಾಗಿ ಹೆಸರು ಮಾಡಿದ ಜರ್ಮನ್ ಶೆಪರ್ಡ್, ಗೋಲ್ಡನ್ ರಿಟ್ರೀವರ್, ಲ್ಯಾಬ್ರಡಾರ್, ಪೆಕಿನೀಸ್ ಮೊದಲಾದ ತಳಿಗೆ ಸೇರಿದ ಈ ನಾಯಿಗಳು, ರಸ್ತೆಯ ಬದಿಯಲ್ಲಿ, ರಭಸವಾಗಿ ಸಾಗುತ್ತಿದ್ದ ವಾಹನಗಳ ಸದ್ದಿನಲ್ಲಿ, ಒಂದು ದಿಕ್ಕಿಗೆ ಗುಂಪಾಗಿ ಹೋಗುತ್ತಿದ್ದುದನ್ನು ಕಂಡ ಆ ಸವಾರನಿಗೆ ಅಚ್ಚರಿ, ವಿಸ್ಮಯಗಳಾದವು.

ಆ ನಾಯಿಗಳ ಗುಂಪಿನ ನಾಯಕನ ರೀತಿಯಲ್ಲಿ, ಗುಂಡುಗುಂಡಾಗಿದ್ದ ‘ಕೊರ್ಗಿ’ ತಳಿಯ ನಾಯಿಯು ನಡೆಯುತ್ತಿತ್ತು, ಮಾತ್ರವಲ್ಲ, ಆಗಾಗ ಹಿಂದೆ ನೋಡುತ್ತಾ, ತನ್ನ ಗುಂಪಿನ ಸದಸ್ಯರೆಲ್ಲರೂ ಹಿಂಬಾಲಿಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳುತ್ತಿತ್ತು. ಇವೆಲ್ಲಾ ನಾಯಿ ಗಳನ್ನು ಯಾರೋ ಸಾಕಿರಬೇಕು, ತಮ್ಮ ಮನೆಯನ್ನು ಹುಡುಕಿಕೊಂಡು ಅವು ಹೋಗುತ್ತಿರ ಬೇಕು ಎಂದು ಊಹಿಸಿದ ಆ ಸವಾರನು, ಅವುಗಳ ವಿಡಿಯೋ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ.

Screenshot_3 R

ಜತೆಗೆ ಒಂದು ಸಂದೇಶವನ್ನೂ ಸೇರಿಸಿದ: ‘ಈ ನಾಯಿಗಳು ಎಲ್ಲಿಗೋ ಗುಂಪಾಗಿ ಹೋಗು ತ್ತಿವೆ; ನಾನು ಅವುಗಳನ್ನು ತಡೆಯಲು ಯತ್ನಿಸಿದೆ, ಆದರೆ ಅವು ತಮ್ಮ ಗುರಿಯತ್ತ ಸಾಗು ತ್ತಿದ್ದವು. ಯಾರೋ ಸಾಕಿದ ನಾಯಿಗಳಿರಬೇಕು, ಗಮನಿಸಿ’. ಅಷ್ಟೇ, ಆ ವಿಡಿಯೋ ‘ವೈರಲ್’ ಆಯಿತು!

ಈ ವೈರಲ್ ಎಂಬ ಪದ ಬಹಳ ವಿಶಾಲ ಅರ್ಥ ಹೊಂದಿರುವಂಥದ್ದು. ನಿಜಹೇಳ ಬೇಕೆಂದರೆ, ‘ವೈರಲ್ ಆಗುವುದು’ ಎಂಬುದನ್ನು, ಅದರ ಅರ್ಥವನ್ನು ಪದಗಳಲ್ಲಿ ಪರಿಪೂರ್ಣವಾಗಿ ವಿವರಿಸಲು ನನ್ನಿಂದ ಇನ್ನೂ ಸಾಧ್ಯವಾಗಿಲ್ಲ! ಇರಲಿ. ಚೀನಾ ದೇಶವು, ನಮ್ಮ ದೇಶದಂತೆಯೇ ಜನಭರಿತ ದೇಶ.

ನಮ್ಮ ದೇಶದ ರೀತಿಯೇ ಬಹುಮಟ್ಟಿಗೆ ಎಲ್ಲರ ಬಳಿ ಮೊಬೈಲ್, ಸ್ಮಾರ್ಟ್ ಫೋನ್ ಇರುವ ದೇಶ. ಅಂತರ್ಜಾಲ ಬಳಕೆಯ ಕಂಟೆಂಟ್ ಕುರಿತು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಪಡಿಸಲು ಅಲ್ಲಿನ ಸರಕಾರದ ಅಂಕುಶವಿದ್ದರೂ, ನಾಯಿ, ಬೆಕ್ಕು, ಮರ, ಗಿಡ, ಪರ್ವತ, ಮಳೆ, ಹಿಮ ಇಂಥ ಕಂಟೆಂಟ್‌ಗಳನ್ನು ಅಲ್ಲಿನ ಜನ ವ್ಯಾಪಕವಾಗಿ ನೋಡುತ್ತಾರೆ!

ಏಳು ನಾಯಿಗಳು ಗುಂಪಾಗಿ, ಒಗ್ಗಟ್ಟಿನಿಂದ ಹೆದ್ದಾರಿಯ ಬದಿಯಲ್ಲಿ ಸಾಗುತ್ತಿದ್ದ ಆ ಕಿರಿದಾದ ವಿಡಿಯೋ, ವೈರಲ್ ಆಯಿತು. ಕೋಟಿಗಟ್ಟಲೆ ಜನರು ನೋಡಿದರು. ಹಲವರು ಕಮೆಂಟ್ ಮಾಡಿದರು. ಎಷ್ಟೋ ಜನರು, ಆ ನಾಯಿಗಳ ಪಾಡನ್ನು ಕಂಡು ಕನಿಕರ ಪಟ್ಟರು, ಅವುಗಳ ಕುರಿತು ಕರುಣೆ ವ್ಯಕ್ತಪಡಿಸಿದರು.

ಕೆಲವು ಸ್ವಯಂಸೇವಕರು ಅವುಗಳನ್ನು ಅನುಸರಿಸಿದರು, ಅವುಗಳ ಹಿಂದೆ ಡ್ರೋನ್ ಕಳಿಸಿ, ಅವುಗಳ ದಾರಿಯನ್ನು ಗಮನಿಸಿದರು. ಎಲ್ಲರ ಅಭಿಲಾಷೆ ಒಂದೇ- ಅವು ತಮ್ಮ ಮನೆ ಯನ್ನು, ಊರನ್ನು ಸುರಕ್ಷಿತವಾಗಿ ಸೇರಿಕೊಳ್ಳಲಿ ಎಂದು.

ಸಾಕುಪ್ರಾಣಿಗಳ, ಮುದ್ದಿನ ಪ್ರಾಣಿಗಳ ರಸ್ತೆ ಪಯಣವನ್ನು ಕಂಡು ಕನಿಕರ ವ್ಯಕ್ತಪಡಿಸಲು ಹಲವು ಕಾರಣಗಳಿವೆ. ಅವು ಬ್ಯುಸಿಯಾದ ಹೆದ್ದಾರಿಯ ಬದಿಯಲ್ಲೇ ಸಾಗುತ್ತಿದ್ದವು. ಪಕ್ಕ ದಲ್ಲೇ ಶರವೇಗದಿಂದ ಚಲಿಸುತ್ತಿರುವ ಕಾರು, ಟ್ರಕ್‌ಗಳ ಮೆರವಣಿಗೆ. ಇನ್ನೂ ಒಂದು ಕಾರಣವಿದೆ. ಚೀನಾದ ಆ ಭಾಗದಲ್ಲಿ ಇನ್ನೂ ಚಳಿಗಾಲ ಮುಗಿದಿಲ್ಲ. ರಾತ್ರಿ ಹೊತ್ತು ಹಿಮಪಾತ, ತೀವ್ರ ಚಳಿ ಅಲ್ಲಿ ಸಾಮಾನ್ಯ.

ಅಂಥ ವಾತಾವರಣವನ್ನು ಎದುರಿಸಿ, ಈ ನಾಯಿಗಳ ಗುಂಪು, ಬಯಲಿನಲ್ಲೇ ತಮ್ಮಷ್ಟಕ್ಕೆ ತಾವು ಸಾಗುತ್ತಿವೆ ಎಂಬ ಕಾಳಜಿ ನಿಜಕ್ಕೂ ಪ್ರಾಮಾಣಿಕ. ಜತೆಗೆ, ಇನ್ನೊಂದು ಕಳವಳದ ಅಂಶವಿತ್ತು. ಆ 7 ನಾಯಿಗಳ ಗುಂಪಿನ ವಿಡಿಯೋವನ್ನು ಅಪ್ ಲೋಡ್ ಮಾಡಿದ ವ್ಯಕ್ತಿ ಯು, ಸಾಕಷ್ಟು ಸ್ಪಷ್ಟವಾಗಿಯೇ ಅವುಗಳ ನಡೆಯನ್ನು ಚಿತ್ರೀಕರಿಸಿದ್ದ.

ಅವುಗಳಲ್ಲಿ ಒಂದು ನಾಯಿಯು ಸ್ವಲ್ಪ ಗಾಯಗೊಂಡಿತ್ತು. ದಪಂಗ್ ಎಂಬ ಹೆಸರಿನ, ದಪ್ಪನೆ ಕೊರ್ಗಿ ನಾಯಿಯು, ಅದನ್ನು ಗಮನಿಸಿ, ಆ ಗಾಯಾಳು ನಾಯಿಯು ಸಹ ತಮ್ಮ ಜತೆಯಲ್ಲೇ ನಡೆದು ಬರುತ್ತಿದೆ ಎಂದು ಖಚಿತಪಡಿಸಿಕೊಂಡೇ, ಮುಂದೆ ಮುಂದೆ ಸಾಗುತ್ತಿತ್ತು.

ತಂಡದ ಇತರ ನಾಯಿಗಳು ಸಹ, ಗಾಯಾಳು ನಾಯಿಯನ್ನು ಸುತ್ತುವರಿದು, ರಕ್ಷಿಸುವಂಥ ನಡೆ ತೋರುತ್ತಾ, ಅದನ್ನು ಮುಂದೆ ಮುಂದೆ ನಡೆಸುತ್ತಿದ್ದವು. ಈ ವೈರಲ್ ಸ್ಟೋರಿಯ ಕ್ಲೈಮ್ಯಾಕ್ಸ್ ಎಂದರೆ, 2-3 ದಿನಗಳ ನಂತರ, ಈ ಎಲ್ಲಾ ನಾಯಿಗಳೂ 17 ಕಿ.ಮೀ. ದೂರದ ತಮ್ಮ ಹಳ್ಳಿಯನ್ನು ತಲುಪಿವೆ ಎಂಬ ಸುದ್ದಿ! ನಾಯಿಗಳಿಗೆ ಮತ್ತು ಹಲವು ಪ್ರಾಣಿ-ಪಕ್ಷಿ ಗಳಿಗೆ ಒಂದು ವಿಶೇಷ ಶಕ್ತಿಯಿದೆ.

ಅಕಸ್ಮಾತ್ ತಪ್ಪಿಸಿಕೊಂಡಲ್ಲಿ, ಅಥವಾ ಉದ್ದೇಶಪೂರ್ವಕ ವಲಸೆಯಲ್ಲಿ, ತಮ್ಮ ಊರನ್ನು ಅಥವಾ ಒಂದು ನಿರ್ದಿಷ್ಟ ಜಾಗವನ್ನು ಅವು ಪತ್ತೆ ಹಚ್ಚಬಲ್ಲವು. ಈ ಏಳೂ ನಾಯಿಗಳು, ಮೂರು ರಾತ್ರಿ ಕಳೆದ ನಂತರ, ತಮ್ಮ ತಮ್ಮ ಮನೆಗೆ ವಾಪಸಾಗಿದ್ದವು. ಎಲ್ಲವೂ ಒಂದೇ ಗ್ರಾಮದವು,

ಪ್ರತಿದಿನ ತಮ್ಮ ಗ್ರಾಮದಲ್ಲಿ ಓಡಾಡಿಕೊಂಡಿದ್ದವು. ಕ್ಲಿಷ್ಟ ಸನ್ನಿವೇಶದಲ್ಲಿ, ಹಿಮಪಾತ ವಾಗುತ್ತಿದ್ದಂಥ ಚಳಿಯ ರಾತ್ರಿಯಲ್ಲೂ ತಮ್ಮ ಗೆಳೆತನವನ್ನು ಕಾಪಾಡಿಕೊಂಡು, ಎಲ್ಲವೂ ತಮ್ಮ ಹಳ್ಳಿಗೆ ವಾಪಸಾಗಿದ್ದವು.

ದಪಂಗ್ ಎಂಬ ಹೆಸರಿನ ದಪ್ಪನೆಯ ನಾಯಿ ಮತ್ತು ಇತರ ಎರಡು ನಾಯಿಗಳನ್ನು ಒಬ್ಬ ಮಹಿಳೆ ಸಾಕಿದ್ದಳು. ತನ್ನ ನಾಯಿಗಳು ತಪ್ಪಿಸಿಕೊಂಡಿದ್ದು ಗೊತ್ತಾಗಿ, ಆಕೆ ಸುತ್ತಮುತ್ತಲೂ ಹುಡುಕಿದ್ದಳಂತೆ. ಆದರೆ ಮೂರು ದಿನವಾದರೂ ವಾಪಸಾಗದಿದ್ದಾಗ, ಇನ್ನು ಅವುಗಳ ಕಥೆ ಮುಗಿಯಿತು ಎಂದುಕೊಂಡಿದ್ದಳು. ನಾಲ್ಕನೆಯ ದಿನ ದಪಂಗ್ ನಾಯಿಯು ಆಕೆಯ ಮನೆಯ ಮುಂದೆ ಕಾಣಿಸಿಕೊಂಡಾಗ, ಅಚ್ಚರಿ ಮತ್ತು ಸಂತಸದಿಂದ ಅದನ್ನು ಸ್ವಾಗತಿಸಿ ದ್ದಳು. ಆಕೆ ಸಾಕಿದ್ದ ಇನ್ನೆರಡು ನಾಯಿಗಳು ಸಹ, ಹತ್ತಿರದಲ್ಲೇ ಇದ್ದು, ಅವನ್ನು ತನ್ನ ಮನೆಗೆ ಬರಮಾಡಿಕೊಂಡಳಂತೆ.

ಈ ಸುದ್ದಿಯು ಸುಖಾಂತ್ಯವಾಗಿದ್ದು ಒಂದೆಡೆಯಾದರೆ, ಈ ಸುದ್ದಿ ವೈರಲ್ ಆಗಿ ಕೋಟಿ ಗಟ್ಟಲೆ ವೀಕ್ಷಣೆ ಪಡೆಯಲು ಇನ್ನೊಂದು ಸೂಕ್ಷ್ಮವಾದ ಆಯಾಮವೂ ಇದೆ. ಅದೇನೆಂದರೆ, ಈ ನಾಯಿಗಳನ್ನು, ಯಾರೋ ಅಪಹರಿಸಿ, ನಾಯಿಮಾಂಸ ತಯಾರಿಸುವ ರೆಸ್ಟೋರೆಂಟ್‌ ಗಳಿಗೆ ಸಾಗಿಸುತ್ತಿರಬಹುದು ಮತ್ತು ಆ ಪ್ರಯತ್ನ ನಡೆದಿದ್ದಾಗ, ಈ 7 ನಾಯಿಗಳು ತಪ್ಪಿಸಿ ಕೊಂಡು, ತಮ್ಮ ಊರಿಗೆ ವಾಪಸಾದವು ಎಂಬ ಗುಸುಗುಸು.

ಇದನ್ನು ಗುಸುಗುಸು ಎಂದೇಕೆ ಕರೆದೆನೆಂದರೆ, ಯಾರೋ ಒಬ್ಬರು ‘ಆ ನಾಯಿಗಳನ್ನು ಯಾರೋ ಹಿಡಿದು ನಾಯಿಮಾಂಸದ ರೆಸ್ಟೋರೆಂಟ್‌ಗಳಿಗೆ ಸಾಗಿಸಿರಬೇಕು, ಅವು ತಪ್ಪಿಸಿ ಕೊಂಡಿರುವ ಸಾಧ್ಯತೆ ಇದೆ’ ಎಂದು ಕಮೆಂಟ್ ಮಾಡಿದ್ದರು. ಅದನ್ನೇ ಹಲವರು ಮರು ಕಮೆಂಟ್ ಮಾಡಿ, ‘ಏಳು ನಾಯಿಗಳು ರಸ್ತೆ ಬದಿಯಲ್ಲಿ ನಡೆಯುತ್ತಾ ಸಾಗುತ್ತಿದ್ದವು’ ಎಂಬ ವಿಚಾರ ಹಿನ್ನೆಲೆಗೆ ಹೋಗಿ, ‘ನಾಯಿಮಾಂಸದ ಅಂಗಡಿಯಿಂದ ತಪ್ಪಿಸಿಕೊಂಡ ನಾಯಿ ಗಳು?’ ಎಂಬ ಹೆಡಿಂಗ್ ಮುನ್ನೆಲೆಗೆ ಬಂತು.

ನಾಯಿಗಳನ್ನು ಅಪಹರಿಸಿದ್ದನ್ನು, ಅವುಗಳನ್ನು ಟ್ರಕ್ʼಗಳಿಗೆ ತುಂಬಿದ್ದನ್ನು, ಅವು ತಪ್ಪಿಸಿ ಕೊಂಡದ್ದನ್ನು ಯಾರೂ ಖುದ್ದಾಗಿ ನೋಡಿಲ್ಲ, ಬದಲಿಗೆ ಎಲ್ಲವೂ ಊಹೆ ಮತ್ತು ತರ್ಕ ಮಾತ್ರ! ಒಂದು ಸ್ಟೋರಿ ‘ವೈರಲ್’ ಆಗಲು ಇದು ಸಾಕಾಯ್ತು ಅಥವಾ ಬೇಕಾಯ್ತು!

ಇಲ್ಲಿ ಇನ್ನೂ ಒಂದು ಟ್ವಿಸ್ಟ್ ಇದೆ! ಅದೇನೆಂದರೆ, ಚೀನಾ ದೇಶದವರು ನಾಯಿ ಮಾಂಸ ವನ್ನು ತಿನ್ನುತ್ತಾರೆ ಎಂಬ ಸುದ್ದಿ ಅದು. ನಿಜ ಹೇಳಬೇಕೆಂದರೆ, ಚೀನಾದ ಕೆಲವು ಭಾಗ ಗಳಲ್ಲಿ ಅಂಥದೊಂದು ಪದ್ಧತಿ ಇದೆ; ಆದರೆ, ಈ ಆಧುನಿಕ ಯುಗದಲ್ಲಿ ಅದರ ಕುರಿತು ಸಾಕಷ್ಟು ಕಾನೂನುಗಳನ್ನೂ ಅಲ್ಲಿ ಜಾರಿಗೊಳಿಸಲಾಗಿದೆ.

ನಾಯಿಗಳನ್ನು ಕದ್ದು, ಅಂಥ ರೆಸ್ಟೋರೆಂಟ್‌ಗಳಿಗೆ ಮಾರುವುದು ಅಲ್ಲಿ ಕಷ್ಟದ ಕೆಲಸ. ಮಾಡಿದರೆ, ಅದನ್ನು ಅನಽಕೃತವಾಗಿಯೇ ಮಾಡಬೇಕು. ಕಾನೂನು ಬಾಹಿರ ಕೆಲಸಗಳಿಗೆ ಚೀನಾದ ಕಾನೂನು ಬಲು ಬಿಗಿ. ಆದರೂ, ಅಂಥ ರೆಸ್ಟಾರೆಂಟ್‌ಗಳು ಅಲ್ಲಿ ಇವೆಯಂತೆ. ಅಷ್ಟೇಕೆ, ನಮ್ಮ ಬೆಂಗಳೂರಿನಲ್ಲೇ, ಕೆಲವು ವರ್ಷಗಳ ಹಿಂದೆ, ‘ಬೌ ಬೌ ಬಿರಿಯಾನಿ’ಯ ಸುದ್ದಿಯನ್ನು ಕೆಲವು ಟ್ಯಾಬ್ಲಾಯ್ಡ್‌ಗಳು ವರ್ಣರಂಜಿತವಾಗಿ ಬರೆದಿದ್ದು ಇತ್ತಲ್ಲ!

ಚೀನಾದ ಚಳಿಗಾಲದ ರಾತ್ರಿಗಳನ್ನೆದುರಿಸಿ, 17 ಕಿ.ಮೀ. ನಡೆದು ಬಂದ ಆ 7 ನಾಯಿಗಳು, ನಾಲ್ಕು ದಿನಗಳ ನಂತರ ತಮ್ಮ ತಮ್ಮ ಮನೆಯನ್ನು, ಬೀದಿಯನ್ನು ಸೇರಿಕೊಂಡವು ಎಂದು ಖಚಿತವಾದ ನಂತರ, ಇದೀಗ ತುಸು ಹಾಸ್ಯಭರಿತವಾದ, ಆದರ ವಾಸ್ತವಕ್ಕೆ ಹತ್ತಿರವಾದ ಒಂದು ವಿಚಾರ ಬಯಲಾಗಿದೆ. ವಾಸ್ತವಕ್ಕೆ ಹತ್ತಿರ ಎಂದು ಏಕೆ ಹೇಳಿದೆನೆಂದರೆ, ಇಂಥದ್ದು ನಾವೆಲ್ಲಾ, ನಮ್ಮ ರಾಜ್ಯದ ಹಳ್ಳಿಗಳಲ್ಲಿ ನೋಡಿಯೇ ಇರುತ್ತೇವೆ.

ಕರಾವಳಿಯ ನಮ್ಮೂರಿನಲ್ಲಿ ಅದನ್ನು ‘ಕನ್ನೆ ತಿಂಗಳು’ ಎಂದು ಹಾಸ್ಯ ಮಾಡುವುದುಂಟು. ಅದೇನೆಂದರೆ, ನಾಯಿಗಳಿಗೆ ಹೀಟ್ ಬಂದ ಸಮಯದಲ್ಲಿ, ಒಂದು ಅಥವಾ ಎರಡು ಹೆಣ್ಣು ನಾಯಿಗಳ ಹಿಂದೆ, ಹತ್ತರಿಂದ ಇಪ್ಪತ್ತು ಗಂಡು ನಾಯಿಗಳು ನಡೆಯುತ್ತಾ ಸಾಗುವುದು.

ಒಮ್ಮೆ ಬಸ್‌ನಲ್ಲಿ ಬರುತ್ತಾ, 23 ಗಂಡು ನಾಯಿಗಳು ಸಂತಸದಿಂದ ಕುಣಿದಾಡುತ್ತಾ, ಒಂದು ಹೆಣ್ಣು ನಾಯಿಯ ಹಿಂದೆ ಓಡುತ್ತಾ ಸಾಗುತ್ತಿದ್ದನ್ನು ಕಂಡಿದ್ದೆ. ಅಂಥ ಸಂದರ್ಭದಲ್ಲಿ, ಗಂಡು ನಾಯಿಗಳು ಗುಂಪಾಗಿ ಹಲವು ಕಿ.ಮೀ. ದೂರ ಹೋಗುವುದು, ಒಂದೆರಡು ದಿನ ಎಲ್ಲೆಲ್ಲೋ ಓಡಾಡುವುದು ಮಾಮೂಲು.

ಚೀನಾದ ಆ 7 ನಾಯಿಗಳು ಅದೇ ಕೆಲಸವನ್ನು ಮಾಡುತ್ತಿರಬೇಕು ಎಂದು ಈಗ, ಹೆಚ್ಚು ಖಚಿತ ಎನಿಸುವ ಸುದ್ದಿ ಹೊರಬಿದ್ದಿದೆ. ಅವುಗಳಲ್ಲಿ ಒಂದು ಹೆಣ್ಣು ನಾಯಿ ಹೀಟ್‌ಗೆ ಬಂದಿದ್ದು, ಅದರ ಹಿಂದೆಯೇ ಉಳಿದ ನಾಯಿಗಳು 17 ಕಿ.ಮೀ. ಸಾಗಿದ್ದು, ಅವೆಲ್ಲವೂ ನಾಲ್ಕು ದಿನಗಳ ನಂತರ ವಾಪಸಾಗಿವೆ ಎಂದು ಈಗ ಕೆಲವರು ವಿಶ್ಲೇಷಣೆ ಮಾಡುತ್ತಿದ್ದಾರೆ.

ಈಗಿನ ವೈರಲ್ ಯುಗದಲ್ಲಿ, ಯಾವ ಸುದ್ದಿ ಹೆಚ್ಚು ವೈರಲ್ ಅಗುತ್ತದೆ, ಯಾಕೆ ಆಗುತ್ತದೆ, ಆ ರೀತಿ ವೈರಲ್ ಆಗಲು ಕಾರಣಗಳೇನು, ಹಿನ್ನೆಲೆ ಏನು, ಬೇಕೆಂತಲೇ ವೈರಲ್ ಮಾಡುತ್ತಾರಾ ಇವೆಲ್ಲವೂ ಮುಖ್ಯವಾಗುತ್ತವೆ. 7 ನಾಯಿಗಳು 17 ಕಿ.ಮೀ. ನಡೆದದ್ದು, 3 ಅಥವಾ 4 ದಿನ ಆಹಾರವಿಲ್ಲದೇ ರಸ್ತೆಬದಿಯಲ್ಲೇ ಕಳೆದದ್ದು ಎಲ್ಲವೂ ನಿಜ; ಆದರೆ, ಅವೆಲ್ಲವನ್ನೂ ಅಪಹರಿಸಿ, ನಾಯಿಮಾಂಸದ ರೆಸ್ಟೋರೆಂಟ್‌ಗಳಿಗೆ ಸಾಗುವ ಯತ್ನದಲ್ಲಿ ಅವು ತಪ್ಪಿಸಿ ಕೊಂಡಿರಬಹುದು ಎಂಬ ‘ಟಿಪ್ಪಣಿ’ ಮಾತ್ರ ಊಹಾಪೋಹದ್ದು.

ಆದರೆ, ವೈರಲ್ ಆಗಲು ಅಷ್ಟು ಸಾಕಾಯಿತು. ಅದೇನೇ ಇರಲಿ, ದಪಂಗ್ ಎಂಬ ದಪ್ಪ ನಾಯಿಯ ನಾಯಕತ್ವದಲ್ಲಿ, ಏಳೂ ನಾಯಿಗಳು ತಮ್ಮ ಹಳ್ಳಿಗೆ ವಾಪಸಾದವು ಎಂಬ ಸುದ್ದಿ ಮಾತ್ರ, ಎಲ್ಲಾ ಪ್ರಾಣಿಪ್ರಿಯರಿಗೆ, ನಾಯಿಪ್ರಿಯರಿಗೆ ನೆಮ್ಮದಿ ತಂದಿದೆ.

ಶಶಿಧರ ಹಾಲಾಡಿ

View all posts by this author