ಎದ್ದಾಗ ಹಾಸಿಗೆಯ ಪಕ್ಕ ನೂರು ಅಪರಿಚಿತರು ನಿಂತಿದ್ದರೆ ?
ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳುವುದು ಹೇಗೆ? ಈ ಪ್ರಶ್ನೆಗೆ ‘ಬೇಗ ಮಲಗುವುದು’ ಎನ್ನು ವುದು ನೇರ ಉತ್ತರ. ನಿಗದಿತ ಸಮಯಕ್ಕೆ ಮಲಗಲು ಹೋಗುವುದು, ಮಲಗುವುದಕ್ಕಿಂತ ಒಂದು ಗಂಟೆ ಮೊದ ಲು ಯಾವುದೇ ಸ್ಕ್ರೀನ್ (ಮೊಬೈಲ, ಟಿವಿ) ನೋಡದಿರುವುದು, ಲಘು ರಾತ್ರಿಯೂಟ, ಖುಷಿಯ ಮನಸ್ಸಿ ನೊಂದಿಗೆ ಮಲಗಲು ಹೋಗುವುದು- ಇವು ಉತ್ತಮ ನಿದ್ರೆಗೆ ಕೆಲವು ಸುಲಭೋ ಪಾಯಗಳು. ನಮ್ಮ ದೇಹದೊಳಗಿನ ಗಡಿಯಾರ (Circadian Rhythm) ಸರಿಹೊಂದಲಿಕ್ಕೆ ಮೂರರಿಂದ ಆರು ದಿನ ಬೇಕಾಗುತ್ತದೆಯಂತೆ.

ಅಂಕಣಕಾರ ಶಿಶಿರ್ ಹೆಗಡೆ

ಶಿಶಿರಕಾಲ
ಮುಲ್ಲಾ ನಸ್ರುದ್ದೀನನ ಎಲ್ಲಾ ಕಥೆಗಳು ಅವನದೇ ಕಥೆಗಳೆಂದೇನಲ್ಲ. ಯಾರ‍್ಯಾರೋ ಅವನ ಹೆಸರಿನೊಂದಿಗೆ ತಮ್ಮ ಕಥೆಗಳನ್ನು ಸೇರಿಸಿದ್ದೇ ಜಾಸ್ತಿ. ಅದೇ ಕಾರಣಕ್ಕೆ ಮುಲ್ಲಾ ಕಥೆಗಳು ಇಂದಿ ಗೂ ನವ್ಯರೂಪಗಳಲ್ಲಿ ಪ್ರಸ್ತುತವಾಗಿವೆ. ಅಂಥದ್ದೇ ಒಂದು ಚಿಕ್ಕ ಕಥೆ. ಒಮ್ಮೆ ಮುಲ್ಲಾ ನಸ್ರು ದ್ದೀನನ ಬಳಿ ಊರಿನವನೊಬ್ಬ ಬಂದು “ಮುಲ್ಲಾ ನೀನು ಮಾರ್ನಿಂಗ್ ಪರ್ಸನ್. ನಿತ್ಯ ಅದೆಷ್ಟು ಬೇಗ ಎದ್ದುಬಿಡುತ್ತೀಯ! ನನಗೂ ನಿನ್ನಂತೆ ನಿತ್ಯ ಬೇಗ ಏಳಬೇಕೆಂಬ ಆಸೆ. ಬೇಗ ಏಳುವುದರಿಂದ ಆಗುವ ಲಾಭಗಳ ಬಗ್ಗೆ ನನಗೆ ಗೊತ್ತು. ಆದರೆ ಜಪ್ಪಯ್ಯ ಅಂದರೂ ಬೆಳಗ್ಗೆ ಬೇಗ ಎದ್ದೇಳಲಿಕ್ಕೆ ಮಾತ್ರ ಸಾಧ್ಯವಾಗುತ್ತಲೇ ಇಲ್ಲ" ಎಂದ. ಅದಕ್ಕೆ ಮುಲ್ಲಾ “ನೀನು ಒಂದು ಕೆಲಸ ಮಾಡಬೇಕು. ನಿತ್ಯ ಕೋಳಿ ಕೂಗುತ್ತದೆಯಲ್ಲ, ಆಗಲೇ ಎದ್ದು ಕೂತುಬಿಡಬೇಕು!" ಎಂದ.
ಆಗ ಊರಿನವ, “ಮು, ನಾನು ಅದನ್ನೂ ಪ್ರಯತ್ನಿಸಿದೆ. ಪ್ರತಿ ಬಾರಿ ಕೋಳಿ ಕೂಗಿದಾಗಲೂ, ‘ಇನ್ನೊಮ್ಮೆ ಕೂಗಿದಾಗ ಎದ್ದರಾಯ್ತು’ ಎಂದುಕೊಳ್ಳುತ್ತೇನೆ. ಹೀಗೆಯೇ ಮುಂದುವರಿದು, ನಂತರ ಕೋಳಿಯೇ ನಿದ್ರೆಗೆ ಜಾರಿದರೂ ನಾನಂತೂ ಎದ್ದಿರುವುದಿಲ್ಲ! ಮು, ನನಗೆ ಇವತ್ತು ನಿನ್ನ ಸೀಕ್ರೆಟ್ ಹೇಳಲೇಬೇಕು. ನಿನಗೆ ಅಷ್ಟು ಬೇಗ ಹೇಗೆ ಎಚ್ಚರವಾಗುತ್ತದೆ?" ಎಂದು ಕೇಳಿದ.
ಇದನ್ನೂ ಓದಿ: Shishir Hegde Column: ಹಸಿವೆಯಾದಾಗ ನಮಗೇಕೆ ಸಿಟ್ಟು ಬರುತ್ತದೆ ?
ಅದಕ್ಕೆ ಮುಲ್ಲಾ “ನನ್ನದು ಬಹಳ ಸಿಂಪಲ್ ಉಪಾಯ. ನಿತ್ಯ ಬೆಳಗ್ಗೆ ಕೋಳಿ ಕೂಗಿದಾಕ್ಷಣ ನನ್ನ ಹೆಂಡತಿಯ ಮುಖ ನೆನಪು ಮಾಡಿಕೊಳ್ಳುತ್ತೇನೆ. ಆಗಲೂ ಎಚ್ಚರವಾಗಿಲ್ಲ ಎಂದರೆ ಹೆಂಡತಿಯ ಚಾದರ ಸರಿಸಿ ಮುಖ ನೋಡುತ್ತೇನೆ. ಆಗ ಅವಳಿಗೆ ಎಚ್ಚರವಾಗಿಬಿಡುತ್ತದೆ. ಎಬ್ಬಿಸಿದ ಕೋಪಕ್ಕೆ ಅವಳು ಕೂಗಿದಾಗ ಇಡೀ ಮನೆಯವರೆಲ್ಲ ಎದ್ದು ಕೂರುತ್ತಾರೆ. ಅದಾದ ಮೇಲೆ ನನಗಂತೂ ಮತ್ತೆ ನಿದ್ರೆ ಬರುವುದಿಲ್ಲ!!" ಎಂದ.
ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳುವುದು ಹೇಗೆ? ಈ ಪ್ರಶ್ನೆಗೆ ‘ಬೇಗ ಮಲಗುವುದು’ ಎನ್ನು ವುದು ನೇರ ಉತ್ತರ. ನಿಗದಿತ ಸಮಯಕ್ಕೆ ಮಲಗಲು ಹೋಗುವುದು, ಮಲಗುವುದಕ್ಕಿಂತ ಒಂದು ಗಂಟೆ ಮೊದಲು ಯಾವುದೇ ಸ್ಕ್ರೀನ್ (ಮೊಬೈಲ, ಟಿವಿ) ನೋಡದಿರುವುದು, ಲಘು ರಾತ್ರಿಯೂಟ, ಖುಷಿಯ ಮನಸ್ಸಿನೊಂದಿಗೆ ಮಲಗಲು ಹೋಗುವುದು- ಇವು ಉತ್ತಮ ನಿದ್ರೆಗೆ ಕೆಲವು ಸುಲಭೋ ಪಾಯಗಳು. ನಮ್ಮ ದೇಹದೊಳಗಿನ ಗಡಿಯಾರ ( Circadian Rhythm) ಸರಿಹೊಂದಲಿಕ್ಕೆ ಮೂರರಿಂದ ಆರು ದಿನ ಬೇಕಾಗುತ್ತದೆಯಂತೆ.
ಹಾಗಾಗಿ ಐದಾರು ದಿನ ನಿಗದಿತ ಸಮಯಕ್ಕೆ ಮಲಗಿ ಒತ್ತಾಯದಿಂದಲಾದರೂ ಎದ್ದರೆ ಬೇಗ ಏಳುವುದನ್ನು ರೂಢಿಸಿಕೊಳ್ಳಬಹುದು. ದೇಹ ಸರಿಯಿದ್ದರೆ ಈ ಬದಲಾವಣೆ ದೇಹಕ್ಕೆ ಕಷ್ಟವೇ ಅಲ್ಲ. ಇಚ್ಛೆ ಗಟ್ಟಿಯಿರಬೇಕಷ್ಟೆ. ಆದರೆ ಇಂದಿನ ವಿಷಯ ಅದಲ್ಲ. ವಿಷಯ ಬೆಳಗ್ಗೆ ಎದ್ದೇಳುವ ಪ್ರಕ್ರಿ ಯೆಯ ಬಗ್ಗೆ. ಮೇಲೆ ಹೇಳಿದ ಮು ನಸ್ರುದ್ದೀನ್ ಕಥೆಗೂ ಇಂದಿನ ನಮ್ಮೆಲ್ಲರ ಪರಿಸ್ಥಿತಿಗೂ ಜಾಸ್ತಿ ವ್ಯತ್ಯಾಸವೇನೂ ಇದ್ದಂತಿಲ್ಲ.
ಇತ್ತೀಚೆಗೆ ‘ಇಂಡಿಯಾ ಟುಡೇ’ ಒಂದು ವರದಿಯನ್ನು ಪ್ರಕಟಿಸಿತ್ತು. ಮೆಟಾ (ಫೇಸ್‌ಬುಕ್) ಮಾಹಿತಿ ಯ ಸಹಭಾಗಿ ತ್ವದಲ್ಲಿ ಪ್ರಕಟಿಸಿದ ವರದಿ ಅದು. ಇದರ ಪ್ರಕಾರ ಭಾರತದಲ್ಲಿ ಸ್ಮಾರ್ಟ್ ಫೋನ್ ಹೊಂದಿರುವವರಲ್ಲಿ ಶೇ.92ರಷ್ಟು ಮಂದಿ ಬೆಳಗ್ಗೆ ಎದ್ದ 5 ನಿಮಿಷದೊಳಗೆ ಮೊಬೈಲ್ ಎತ್ತಿಕೊ ಳ್ಳುತ್ತಾರಂತೆ. ಅವರಲ್ಲಿ ಶೇ.84ರಷ್ಟು ಮಂದಿ ಅಲಾರ್ಮ್ ಆದ 6 ನಿಮಿಷದೊಳಗೆ ಸೋಷಿಯಲ್ ಮೀಡಿಯಾ ಒಳಹೊಕ್ಕುತ್ತಾರಂತೆ.
ಬೆಳಗಿನ ಆರದಿಂದ ಎಂಟು- ಭಾರತದ ಸೋಷಿಯಲ್ ಮೀಡಿಯಾ ಪ್ರೈಮ್ ಟೈಂ. ಇದು ಒಂದಿಬ್ಬ ರದ್ದಲ್ಲ, ಸಾರ್ವತ್ರಿಕ. ಎಲ್ಲರ ಕಥೆ. ಇಲ್ಲಿ ಸೋಷಿಯಲ್ ಮೀಡಿಯಾದ ಬಗೆಗಿನ ಪುಕಾರನ್ನು ಹೇಳುವುದು ಉದ್ದೇಶವಲ್ಲ. ಪ್ರತೀ ಬೆಳಗಿಗೂ ಒಂದು ತಾಜಾತನವಿರುತ್ತದೆ ಎನ್ನುವುದು ನಮ್ಮೆಲ್ಲರ ಅನುಭವ. ಬೆಳಗಿನ ಸೂರ್ಯರಶ್ಮಿ, ತಂಪಾದ ಗಾಳಿ ಇವೆಲ್ಲ ಸರಿ. ಅವನ್ನೂ ಮೀರಿದ ಬೆಳಗಿನ ಮುಗ್ಧತೆ ಇರುವುದು ಮನಸ್ಸಿನಲ್ಲಿ. ಮುಂಜಾವು ಎಂದರೆ ದೇಹ, ಮನಸ್ಸು ಮತ್ತು ಮಿದುಳಿನ ಸಮಸ್ಥಿತಿ.
ರಾತ್ರಿಯಿಂದ ಬೆಳಗಾಗುವುದರೊಳಗೆ ನಮ್ಮ ದೇಹ ಪುನರುತ್ತೇಜನಗೊಳ್ಳುವುದರ ಜತೆಗೆ ನಮ್ಮ ನೆನಪುಗಳು ಮಾನಸಿಕವಾಗಿ ಜೋಡಿಸಲ್ಪಡುವ ಕ್ರಿಯೆಯಾಗುತ್ತದೆ. ಹಿಂದಿನ ರಾತ್ರಿ ನಾವು ನಡೆದು ಕೊಂಡ ರೀತಿ ಮಾರನೆಯ ದಿನ ಬೆಳಗ್ಗೆ ಪಶ್ಚಾತ್ತಾಪಕ್ಕೆ ಹೊರಳುವುದಕ್ಕೆ ಈ ನಿದ್ರಾ ಪ್ರಕ್ರಿಯೆ ಯಿಂದಾದ ಪಕ್ವತೆ ಕಾರಣ. ಅಂಥ ತಾಜಾ ಮನಸ್ಸಿನ ಸಮಯದಲ್ಲಿ, ಅದರಲ್ಲಿಯೂ ಇನ್ನೂ ಹಾಸಿಗೆಯಲ್ಲಿ ಇರುವಾಗಲೇ ಸೋಷಿಯಲ್ ಮೀಡಿಯಾ ತೆರೆಯುವುದೆಂದರೆ 150 ಮಂದಿಯನ್ನು ಬೆಡ್‌ರೂಮ್ ಒಳಕ್ಕೆ ಬಿಟ್ಟುಕೊಂಡಂತೆ.
ಜತೆಯಲ್ಲಿ ಅದೆ ರಾತ್ರಿ ನಡೆದುಹೋದ ಏನೋ ಒಂದು ದುರ್ಘಟನೆ, ಉದ್ವೇಗ ಹೆಚ್ಚಿಸುವ ರಾಜ ಕಾರಣಿಗಳ ಮಾತುಗಳು, ಜಾರಿಬಿದ್ದ ನಟಿ, ಹುಚ್ಚರಂತೆ ಏನೇನೋ ಮಾಡುವ ಚೈನೀಸ್ ಮೀಮ್ ಇತ್ಯಾದಿ ಇತ್ಯಾದಿ. ಇಷ್ಟು ಸಾಕು, ನಿನ್ನೆ ರಾತ್ರಿ ಮಲಗುವ ಮೊದಲು ಸೋಷಿಯಲ್ ಮೀಡಿಯಾದಲ್ಲಿ ಕಂಡ ದೊಂಬರಾಟದ ಜಗತ್ತಿಗೆ, ಆ ನಿನ್ನೆಯ ಉದ್ವೇಗಕ್ಕೆ ಇಡೀ ದೇಹ, ಮಿದುಳು ಮತ್ತು ಮನಸ್ಸು ತಯಾರಾಗಿಬಿಡುತ್ತದೆ.
ಹದಿನಾಲ್ಕರಿಂದ ಹದಿನೆಂಟು ನಿಮಿಷದ ಸೋಷಿಯಲ್ ಮೀಡಿಯಾ ಬಳಕೆ ಬೆಳಗಿನ ಕಾಫಿಯಷ್ಟೇ ನಮ್ಮನ್ನು ಜಾಗೃತವಾಗಿಸುತ್ತದಂತೆ. ಒಳ್ಳೆಯದೇ ಅಲ್ಲವೇ? ಆದರೆ ಇಂದು ಸಮಸ್ಯೆ ಇದೆ. ಕಾಫಿ ಕುಡಿದರೆ ಕೆಫಿನ್‌ನಿಂದಾಗಿ ಎಚ್ಚರ ಮಾತ್ರ ಆಗುತ್ತದೆ. ಆದರೆ ಸೋಷಿಯಲ್ ಮೀಡಿಯಾ ಹಾಗಲ್ಲ- ಅದು ಕೆಲವೇ ನಿಮಿಷದಲ್ಲಿ ಸಿಟ್ಟು, ಬೇಸರ, ಖುಷಿ, ಹತಾಶೆ, ಆಶ್ಚರ್ಯ, ಆತಂಕ ಹೀಗೆ ತರಹೇವಾರಿ ಸತ್ವ, ರಜ, ತಮ ಭಾವವನ್ನು ಬೇಕಾಬಿಟ್ಟಿ ಸೃಷ್ಟಿಸಿ ಮನಸ್ಸನ್ನು ಕಲಕಿಬಿಡುತ್ತದೆ.
ಸೋಷಿಯಲ್ ಮೀಡಿಯಾದ ಆಂತರಿಕ ಲೆಕ್ಕಾಚಾರವೇ ಹಾಗೆ. ಅದು ಕೆಲಸ ಮಾಡುವುದೇ ಹಾಗೆ. ಅದಕ್ಕೆ ಇದು ನಿಮ್ಮ ಬೆಳಗು, ಇದು ನಿಮ್ಮ ರಾತ್ರಿ ಎಂಬ ಪರಿಗಣನೆ ಇಲ್ಲ. ನಿನ್ನೆ ರಾತ್ರಿಯ ಯಥಾ ಮಾನಸಿಕ ಸ್ಥಿತಿಗೆ ನಿಮ್ಮನ್ನು ಒಯ್ಯಲು ಅದಕ್ಕೆ ಕೆಲವೇ ನಿಮಿಷ ಸಾಕು. ಇದು ದಿನದ ಮುಂದಿನ ಸಮಯದ ಮೇಲೆ ನೇರ ಪರಿಣಾಮ ಬೀರುತ್ತದೆ, ಅನುಮಾನವೇ ಬೇಡ.
ಬೆಳಗಿನ ನಮ್ಮ ದಿನಚರಿ ಹೇಗಿರಬೇಕೆಂಬುದರ ಬಗ್ಗೆ ವೇದ ಸಂಸ್ಕೃತಿಯಲ್ಲಿ ಬಹಳ ಕಡೆ ಸ್ಪಷ್ಟ ನಿರೂಪಣೆ ಇದೆ. ಯಜುರ್ವೇದದಲ್ಲಿ, ತೈತ್ತರೀಯ ಉಪನಿಷತ್ತಿನಲ್ಲಿ (2.1.1), ಗರುಡ ಪುರಾಣದಲ್ಲಿ, ಸುಶ್ರುತ ಸಂಹಿತೆಯಲ್ಲಿ ಎಲ್ಲದರಲ್ಲೂ ಬೆಳಗಿನ ಕ್ರಮದ ಬಗ್ಗೆ ವಿವರಣೆಗಳಿವೆ. ಆ ಪ್ರಕಾರ ಬ್ರಹ್ಮ ಮುಹೂರ್ತದಲ್ಲಿ, ಅಂದರೆ ಸೂರ್ಯೋದಯಕ್ಕಿಂತ ಒಂದೂವರೆ ತಾಸು ಮೊದಲು ಏಳುವುದು ಪ್ರಶಸ್ತ.
ಎದ್ದಾಕ್ಷಣ ಮೊದಲು ‘ಕರಾಗ್ರೇ ವಸತೇ ಲಕ್ಷ್ಮೀ’, ‘ಸಮುದ್ರವಸನೇ ದೇವಿ’ ಇವೆರಡು ಶ್ಲೋಕ ಜಪ ಇಂದಿಗೂ ಕೆಲವರ ರೂಢಿಯಲ್ಲಿ ಉಳಿದುಕೊಂಡಿದೆ. ಆನಂತರ ಉಷಾಪಾನ- ನೀರು ಕುಡಿಯು ವುದು. ನಂತರದ್ದು ಸೂರ್ಯಪ್ರಣಾಮ, ಧ್ಯಾನ, ಸ್ನಾನ ಮತ್ತು ಶುದ್ಧಿ. ಅದಾದ ಮೇಲೆ ಉಳಿದ ನಿತ್ಯಕರ್ಮಗಳು. ಆಂಡ್ರ್ಯೂ ಡೇವಿಡ್ ಹ್ಯೂಬರ್ಮನ್- ಸ್ಟ್ಯಾನ್ ಫೋರ್ಡ್ ಯೂನಿವರ್ಸಿಟಿಯ ಪ್ರೊಫೆಸರ್ ಮತ್ತು ನ್ಯೂರೋಸೈಂಟಿ (ನರಕ್ಕೆ ಸಂಬಂಧಿಸಿದ ವಿಜ್ಞಾನಿ). ಇಂದಿನ ವೈಜ್ಞಾನಿಕ ಮಾಹಿತಿ, ಪ್ರಯೋಗಗಳನ್ನು ಆಧರಿಸಿ ನಿದ್ರೆಯ ಬಗ್ಗೆ ಮಾತನಾಡಬಲ್ಲ ಜನಪ್ರಿಯ ವಾಗ್ಮಿ.
ಇಂಟರ್ನೆಟ್‌ನಲ್ಲಿ ಆತನ ಭಾಷಣಗಳು ಮಿಲಿಯನ್‌ಗಟ್ಟಲೆ ನೋಡಲ್ಪಡುತ್ತವೆ. ಆತನ ಪ್ರಕಾರ ಬೆಳಗಿನ ಮೊದಲ ಎರಡು ಗಂಟೆ ಸೋಷಿಯಲ್ ಮೀಡಿಯಾ ಬಿಡಿ, ಮೊಬೈಲ್ ಮುಟ್ಟುವುದೇ ನಿಷಿದ್ಧ. ಹೆಚ್ಚೆಂದರೆ, ಏನಾದರೂ ತುರ್ತುಸ್ಥಿತಿ ಇದೆಯೋ ಎಂದಷ್ಟೇ ಒಂದು ನಿಮಿಷ ನೋಡಿ ಪಕ್ಕಕ್ಕಿಟ್ಟುಬಿಡಬೇಕು. ಪಾಯಖಾನೆಗೆ ಮೊಬೈಲ್ ಹೋಗುವಂತಿಲ್ಲ.
ನ್ಯೂರೋ ಸೈಂಟಿಗಳ ಪ್ರಕಾರ ಬೆಳಗಿನ ದಿನಚರಿಯಲ್ಲಿ ಅಲಾರ್ಮ್ ಕೊಟ್ಟು ಏಳುವುದು ಮೊದ ಲನೆಯ ತಪ್ಪು. ಬೆಳಗಿನ ಗಾಢ ನಿದ್ರೆಯಲ್ಲಿರುವಾಗ ದೇಹ ಎಚ್ಚರವಾಗಲು ಇನ್ನೂ ತಯಾರಾಗಿ ರುವುದಿಲ್ಲ. ಹಾಗಿರುವಾಗ ಎಚ್ಚರಿಕೆಯ ಗಂಟೆಯಂತೆ ಅಲಾರ್ಮ್ ಹೊಡೆದುಕೊಂಡಾಗ ಅದನ್ನು ದೇಹವು ‘ಏನೋ ಒಂದು ಅಪಾಯಕಾರಿ ಶಬ್ದ’ ಎಂದೇ ಪರಿಗಣಿಸಿ, ಆಂತರಿಕವಾಗಿ ಪ್ರತಿಕ್ರಿಯಿಸು ವುದು.
ಇದರಿಂದ ಎದೆಬಡಿತ ಅರೆಕ್ಷಣದಲ್ಲಿ ಏರಿಕೆಯಾಗುತ್ತದೆ. ಜತೆಯಲ್ಲಿ ಕಾರ್ಟಿಸೋಲ (ಒತ್ತಡದ ಸಮಯದಲ್ಲಿ ಬಿಡುಗಡೆಯಾಗುವ ಹಾರ್ಮೋನ್) ಮತ್ತು ಅಡ್ರಿನಾಲಿನ್ ಬಿಡುಗಡೆಯಾಗುತ್ತವೆ. ಜತೆಯಲ್ಲಿ ಇನ್ನೊಂದಿಷ್ಟು ಒತ್ತಡ, ಉದ್ವೇಗ ಹೆಚ್ಚಿಸುವ ಜೈವಿಕ ರಾಸಾಯನಿಕಗಳು. ನಿದ್ರೆಯಿಂದೇ ಳುವ ಪ್ರಕ್ರಿಯೆಯ ಬಗ್ಗೆ ಇಂದಿನ ವಿಜ್ಞಾನ ಹೇಳುವುದು ಇಷ್ಟು. ಆರರಿಂದ ಎಂಟು ದಿನ ಅಭ್ಯಾಸ ಮಾಡಿ ಕ್ರಮೇಣ ಅಲಾರ್ಮ್ ಇಲ್ಲದೆಯೇ ಏಳುವುದನ್ನು ಅಭ್ಯಾಸಮಾಡಿಕೊಳ್ಳಬಹುದು.
ಏಳುವ ನಿರ್ದಿಷ್ಟ ಸಮಯ ಗೊತ್ತುಮಾಡಿಕೊಂಡ ನಂತರ ಅಲಾರ್ಮ್ ಆ ಸಮಯದಿಂದ ಹತ್ತು ನಿಮಿಷ ನಂತರಕ್ಕೆ ಇಟ್ಟುಕೊಳ್ಳಬೇಕು, ಸಹಜ ಎಚ್ಚರವಾಗದಿದ್ದಲ್ಲಿ ಪ್ರಯೋಜನಕ್ಕೆ ಬರುವಂತೆ. ಒಟ್ಟಾರೆ ಬೆಳಗ್ಗೆ ಏಳುವುದು ಸ್ವಾಭಾವಿಕವಾಗಿರಬೇಕು. ಸೂರ್ಯೋದಯಕ್ಕಿಂತ ಒಂದೂವರೆ ಗಂಟೆ ಮೊದಲು ಏಳುವುದು ಉತ್ತಮ ಎನ್ನುವುದು ಇಲ್ಲಿಯೂ ಸಾರ್ವತ್ರಿಕ ಒಪ್ಪಿತ ವಿಷಯ.
ಎದ್ದು ಶೌಚಕ್ಕಿಂತ ಮೊದಲು Gratitude Practice (ಕೃತಜ್ಞತಾ ಭಾವದ ಅಭ್ಯಾಸ) ಹೊಂದ ಬೇಕು ಎನ್ನುತ್ತದೆ ಆಧುನಿಕ ನ್ಯೂರೋ ಸೈ. ಅಂದರೆ, ನಮ್ಮ ವೈಯಕ್ತಿಕ ಅಸ್ತಿತ್ವಕ್ಕೆ ಕಾರಣವಾದ ವಿಚಾರ ಗಳ ಬಗ್ಗೆ ಧನ್ಯತಾಭಾವದಿಂದ ಯೋಚಿಸುವುದು. ಇಲ್ಲಿ ವೇದ ವಿಜ್ಞಾನ ಮತ್ತು ಇಂದಿನ ವಿಜ್ಞಾನದ ನೇರ ಹೋಲಿಕೆಯನ್ನು ಸ್ಪಷ್ಟವಾಗಿ ಕಾಣಬಹುದು.
‘ಕರಾಗ್ರೇ ವಸತೇ ಲಕ್ಷ್ಮೀ’ ಎನ್ನುವಾಗ ಲಕ್ಷ್ಮಿ, ಸರಸ್ವತಿ ಮತ್ತು ಗೌರಿಯನ್ನು ನೆನೆಯುವುದೆಂದರೆ ಸಂಪತ್ತು, ಜ್ಞಾನ ಮತ್ತು ಶಕ್ತಿಯನ್ನು ಧನ್ಯತಾಪೂರ್ವಕವಾಗಿ ನೆನಪಿಸಿಕೊಳ್ಳುವುದು. ಇನ್ನು ‘ಸಮುದ್ರವಸನೇ ದೇವಿ’ ಎಂದರೆ ಅದು ಭೂಮಿಯ- ನಮ್ಮ ಪೂರ್ಣ ಇರುವಿಕೆಯ ಬಗ್ಗೆ ಧನ್ಯತಾ ಭಾವ ಹೊಂದುವುದು. ಹೋಲಿಕೆ ಇಲ್ಲಿಗೇ ನಿಲ್ಲುವುದಿಲ್ಲ.
ಮುಂದಿನ ಹಂತ Hydration- ಇಲ್ಲಿ ಉಷಾಪಾನ. ಅದಾದ ನಂತರ ಧ್ಯಾನ, ವ್ಯಾಯಾಮ. ಇಷ್ಟಾದ ನಂತರ Sun Exposure - ದೇಹವನ್ನು ಸೂರ್ಯಪ್ರಣಾಮಕ್ಕೆ ಒಡ್ಡಿಕೊಳ್ಳುವಿಕೆ. ವಿeನದ ಪ್ರಕಾರ ಬೆಳಗಿನ ಹತ್ತು ಗಂಟೆಯೊಳಗಿನ ಸೂರ್ಯನ ಬೆಳಕು ವಿಟಮಿನ್ ‘ಡಿ’ ಸಂಶ್ಲೇಷಣೆಗೆ ಅತ್ಯುತ್ತಮ. ಬೆಳಗಿನ ಸೂರ್ಯನ ಕಿರಣ ನೇರವಾಗಿಯೇ ದೇಹದ ಮೇಲೆ ಬೀಳಬೇಕೆಂದಿಲ್ಲ, ಬೆಳಗಿನ ಬೆಳಕು ಬಿದ್ದರೂ ಸಾಕು.
ಸೂರ್ಯನ ಬೆಳಕಿಗೆ ತೆರೆದುಕೊಳ್ಳುವುದರಿಂದ ದೇಹದಲ್ಲಿ ಸೆರಟೋನಿನ್ ಬಿಡುಗಡೆ ಹೆಚ್ಚುತ್ತದೆ ಇತ್ಯಾದಿ. ಸೆರಟೋನಿನ್ ಒಂದು ನರಪ್ರೇಕ್ಷಕ. ಮನಸ್ಥಿತಿಯನ್ನು ಸ್ಥಿರಗೊಳಿಸಲು ಮತ್ತು ಯೋಗ ಕ್ಷೇಮದ ಭಾವನೆಗಳನ್ನು ಉತ್ತೇಜಿಸಲು ಇದು ಅತ್ಯವಶ್ಯ. ಅದುವೇ ಯೋಗ ಸಂಸ್ಕೃತಿಯ ಸೂರ್ಯ ಪ್ರಣಾಮ. ಹೀಗೆ ವೇದವಿಜ್ಞಾನ ಹೇಳುವ ಬೆಳಗ್ಗೆ ಎದ್ದೇಳುವ ಕ್ರಮ ಮತ್ತು ಇಂದಿನ ವಿಜ್ಞಾನ ಸಮರ್ಥಿಸಿ ಹೇಳುವ ವಿಚಾರ ಎರಡೂ ಥೇಟ್ ಒಂದೇ ಇದೆ ಎಂಬುದು ಸ್ಪಷ್ಟ.
ಒಂದು ವೇಳೆ, ವೇದವಿeನದ ಕಾಲದಲ್ಲಿ ಸೋಷಿಯಲ್ ಮೀಡಿಯಾ ಇದ್ದಿದ್ದರೆ ‘ಮಧ್ಯಾಹ್ನದವರೆಗೂ ಸೋಷಿಯಲ್ ಮೀಡಿಯಾ ನಿಷಿದ್ಧ’ ಎಂದು ವೇದೋಪನಿಷತ್ತುಗಳಲ್ಲಿಯೂ ಇರುತ್ತಿತ್ತೇನೋ?! ಮೊಬೈಲ್, ಸೋಷಿಯಲ್ ಮೀಡಿಯಾ ಇವನ್ನೆಲ್ಲ ಬಳಸದೆ ಬೆಳಗಿನ ಒಂದೆರಡು ಗಂಟೆ ಕಳೆಯು ವುದು ತೀರಾ ಅಪ್ರಾಯೋಗಿಕ ಎಂದು ಅನಿಸುವುದು ಸಹಜ.
ಮೊಬೈಲ್ ವಿಷಯದಲ್ಲಿ ನಮಗರಿವಿಲ್ಲದಂತೆ ನಮ್ಮ ಮೇಲೆ ಒಂದಿಷ್ಟು ನಿರ್ಬಂಧವನ್ನು ಹೇರಿ ಕೊಂಡಿರುತ್ತೇವೆ. ಮೆಸೇಜ್ ಮಾಡಿದಾಕ್ಷಣ ಪ್ರತಿಕ್ರಿಯಿಸಬೇಕು, ಕರೆ ಮಾಡಿದಾಗಲೆಲ್ಲ ಎತ್ತಬೇಕು, ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದಾಕ್ಷಣ ಓದಿ ಲೈಕ್ ಒತ್ತಬೇಕು ಇತ್ಯಾದಿ. ಈ ನಮ್ಮ ಮೊಬೈಲ್ ಸಂವಹನದ ರೀತಿ ಮತ್ತು ವೇಗ ನಮ್ಮ ವ್ಯಕ್ತಿತ್ವದ ಭಾಗವೇ ಆದಂತೆ. ನಾವೇ ಮಾಡಿಕೊಂಡ ಅಭ್ಯಾಸ ಮೀರುವುದು ನಮ್ಮಿಂದ ಸಾಧ್ಯವೇ ಇಲ್ಲವೆಂದೆನಿಸುವುದು ಸಹಜ.
ನಾವೇ ಸೃಷ್ಟಿಸಿದ ನಿರೀಕ್ಷೆಗಳನ್ನು ಮೀರುವುದನ್ನು ನಮ್ಮ ಸುತ್ತಲಿನವರೂ ಅಷ್ಟು ಸುಲಭಕ್ಕೆ ಸಹಿಸುವುದಿಲ್ಲ. ಜತೆಯಲ್ಲಿ ಮೊಬೈಲ್‌ನ ‘ಟಿಂಗ್’ ಶಬ್ದಕ್ಕೆ, ನೋಟಿಫಿಕೇಶನ್‌ಗೆ ಜಾಡ್ಯ ಬೆಳೆಸಿ ಕೊಳ್ಳುವುದು ಸುಲಭ ಸಾಧ್ಯವಲ್ಲ. ಅದರಲ್ಲಿಯೂ ರಾತ್ರಿ ಮೊಬೈಲ್ ಪಕ್ಕಕ್ಕಿಟ್ಟು ಬೆಳಗ್ಗೆಯಾಗು ವಲ್ಲಿಯವರೆಗೆ Fear of Missing Out (FOMO)- ಏನೋ ನನಗೆ ತಪ್ಪಿಹೋಗಿಬಿಡುತ್ತದೆ ಎಂಬ ಆತಂಕ. ಜತೆಯಲ್ಲಿ ಕೆಲಸಕ್ಕೆ ಸಂಬಂಧಿಸಿದ ಸಂವಹನಗಳು.
ಈಗೀಗ ಕರ್ನಾಟಕ ಸರಕಾರಿ ವ್ಯವಸ್ಥೆಯಂತೂ ಮುಕ್ಕಾಲು ಭಾಗ ವಾಟ್ಸಾಪ್‌ನಲ್ಲಿಯೇ ನಡೆಯು ತ್ತದೆ. ಹೊತ್ತುಗೊತ್ತಿಲ್ಲದ ಸಮಯದಲ್ಲಿ ಸರಕಾರಿ ನೋಟಿಸ್, ನಿರ್ದೇಶನಗಳನ್ನು ಅಧಿಕಾರಿಗಳು ವಾಟ್ಸಾಪ್ ಮಾಡುತ್ತಾರೆ ಮತ್ತು ಪ್ರತ್ಯುತ್ತರವನ್ನು ವಾಟ್ಸಾಪ್‌ನಲ್ಲಿಯೇ ತಕ್ಷಣ ನಿರೀಕ್ಷಿಸುತ್ತಾರೆ ಎಂಬ ಪುಕಾರಿದೆ. ಇದು ಇಲಾಖೆಗೆ ಸುಲಭವಾದರೂ ಸರಕಾರಿ ನೌಕರರಿಗೆ ವೈಯಕ್ತಿಕ ಸಮಯ ಎಂಬುದೇ ಇಲ್ಲದಂತಾಗಿದೆ.
ಖಾಸಗಿ ವ್ಯವಸ್ಥೆಯೂ ಇದಕ್ಕೆ ಹೊರತಲ್ಲ. ಆದರೆ ಖಾಸಗಿ ವ್ಯವಸ್ಥೆಯಲ್ಲಿ ಅದನ್ನು ನಿರ್ಲಕ್ಷಿಸುವ ಅವಕಾಶ ಹೆಚ್ಚು. ಹೀಗಿರುವ ವ್ಯವಸ್ಥೆಯಲ್ಲಿ ದಿನದ ಮೊದಲೆರಡು ತಾಸು ಮೊಬೈಲ್ ಹಿಡಿಯದೇ ಇರುವುದು ಬಹಳ ಕಷ್ಟ. ಆದರೆ, ಎಲ್ಲವೂ ನಿರ್ಧರಿತವಾಗುವುದು ನಾವು ನಮ್ಮ ಸುತ್ತಲಿನವರಲ್ಲಿ, ಸಮಾಜದಲ್ಲಿ ನಮ್ಮ ಬಗ್ಗೆ ಯಾವ ರೀತಿಯ ನಿರೀಕ್ಷೆ ಬೆಳೆಸಿಟ್ಟುಕೊಂಡಿದ್ದೇವೆ ಎಂಬುದರ ಮೇಲೆ. ಒಬ್ಬ ವ್ಯಕ್ತಿ ಬೆಳಗ್ಗೆ ಒಂಬತ್ತರವರೆಗೆ ಫೋನ್ ಕರೆ ಎತ್ತುವುದೇ ಇಲ್ಲ, ಮೆಸೇಜುಗಳಿಗೆ ತಕ್ಷಣ ಸ್ಪಂದಿ ಸುವುದೇ ಇಲ್ಲ, ಸೋಷಿಯಲ್ ಮೀಡಿಯಾದ ಕಾಮೆಂಟಿಗೆ ನಾಲ್ಕು ದಿನವಾದರೂ ಉತ್ತರಿಸುವುದಿಲ್ಲ ಎಂದಾದರೆ ಇಡೀ ಸುತ್ತಲಿನ ವ್ಯವಸ್ಥೆ ಅದಕ್ಕನುಗುಣವಾಗಿ ಬದಲಾಗುತ್ತದೆ.
ನಿಧಾನಕ್ಕೆ ನಮ್ಮ ಮೇಲಿನ ನಿರೀಕ್ಷೆಗಳನ್ನು ಸರಿಪಡಿಸಿಕೊಂಡರೆ, ಅಭ್ಯಾಸ ಮಾಡಿಸಿದರೆ, ಕ್ರಮೇಣ ಎಲ್ಲರಿಗೂ ಅಭ್ಯಾಸವಾಗುತ್ತದೆ. ಆಗ ಈ ಬೆಳಗಿನ ಮೊಬೈಲ್ ನೋಡುವ ಧಾವಂತ ಕ್ರಮೇಣ ಕಡಿಮೆ ಯಾಗುತ್ತಾ ಹೋಗುತ್ತದೆ. ಇಂಥ ಕೆಲವು ವಿಷಯಗಳನ್ನು ಗುರುತಿಸಿ, ಗ್ರಹಿಸಿ ಸ್ವಲ್ಪ ಪ್ರಯತ್ನಪಟ್ಟರೆ ಏನೋ ಒಂದು ದಾರಿ ಸಿಗುತ್ತದೆ, ಬದಲಿಸಿಕೊಂಡುಬಿಡಬಹುದು.
ದಿನದ ಬೆಳಗಿನ ಮೊದಲ ಎರಡು ಗಂಟೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಂತ ಮಹತ್ವದ್ದು. ಇದಕ್ಕೆ ‘ಸಾಕ್ಷ್ಯಗಳೇನು’ ಎಂದು ಕೇಳಬಾರದಷ್ಟು ಸಾಕ್ಷ್ಯಗಳು ಈಗ ನಮ್ಮ ಮುಂದಿವೆ. ಆಧುನಿಕವೋ, ವೇದಕಾಲವೋ, ವಿಜ್ಞಾನ ಎಂದಿಗೂ ವಿeನವೇ. ಎಲ್ಲವೂ ಆಯಾ ಕಾಲಕ್ಕೆ ಸತ್ಯ ವಾಗಿದ್ದವು.
ಆದರೆ ಬಹುತೇಕ ವೇದeನವು ಇಂದಿಗೂ ಪ್ರಸ್ತುತವಾಗಿರುವುದು ಕಂಡಾಗ ಖುಷಿ, ಹೆಮ್ಮೆ ಸಹಜ. ಆದರೆ “ಓಹ್, ಇದೆಲ್ಲ ನಮ್ಮ ಪೂರ್ವಜರಿಗೆ ಗೊತ್ತಿದ್ದ ವಿಷಯವೇ ಆಗಿತ್ತು, ಪಾಶ್ಚಾತ್ಯ ವಿeನ ಪೊಳ್ಳು" ಎಂಬಿತ್ಯಾದಿ ಅನವಶ್ಯ ಮಾತನಾಡಿಕೊಂಡು ಕೂತರೆ ಅದರಿಂದ ವೈಯಕ್ತಿಕವಾಗಿ ಎಂಟಾಣೆ ಪ್ರಯೋಜನವಿಲ್ಲ.
ಲಾಭವಾಗುವುದು ಪಾಲಿಸಿದಾಗ. ಬೆಳಗಿನ ದಿನಚರಿಯಲ್ಲಿ ನಿಯತತೆ ತಂದರೆ ಅದಕ್ಕನುಗುಣವಾಗಿ ದೇಹ, ಮನಸ್ಸು ಆ ದಿನಕ್ಕೆ ತಯಾರಾಗುತ್ತವೆ. ಅದು ಬಿಟ್ಟು ಬೇಕಾಬಿಟ್ಟಿಯಾದರೆ ಎಚ್ಚರಗೊಂಡ ಕೆಲವೇ ನಿಮಿಷದಲ್ಲಿ ಮನಸ್ಸು ಸಾರ್ವಜನಿಕ ಶೌಚಾಲಯವಾಗಿಬಿಡುತ್ತದೆ. ಇವತ್ತು ಎನ್ನುವುದೇ ಬದುಕು ಎಂದಾದರೆ ಅದು ಶುರುವಾಗುವುದು ಬೆಳಗ್ಗೆ. ಬ್ರಾಹ್ಮೀ ಮುಹೂರ್ತದಲ್ಲಿ ನಮ್ಮ ಜತೆ ನಾವಿರುವ ಖುಷಿಯನ್ನು ಅನುಭವಿಸಲು ಯಾವುದೇ ವಿಜ್ಞಾನದ ಪುರಾವೆ, ಸಬೂತು ಬೇಕಾಗಿಯೇ ಇಲ್ಲ. ಗುಡ್ಡದಾಚೆಯ ಚಂದ ನೋಡಬೇಕೆಂದರೆ ಗುಡ್ಡ ಹತ್ತಲು ಮನಸ್ಸು ಮಾಡಬೇಕು. ಶುಭದಿನ.