Shishir Hegde Column: ಹಸಿವೆಯಾದಾಗ ನಮಗೇಕೆ ಸಿಟ್ಟು ಬರುತ್ತದೆ ?
ಉಪವಾಸದ ಹೆಸರಿನ ಫಲಾಹಾರದಲ್ಲಿ ಯಾವುದೇ ‘ಫಲ’ವೂ ಇರಲಿಲ್ಲ, ಪ್ರತಿ-ಫಲವೂ ಇರಲಿಲ್ಲ. ಅಂಥ ಉಪವಾಸಗಳು ಅರ್ಥಹೀನವಾಗಿ ರೂಢಿಯಲ್ಲಿ ಮಾತ್ರ ಉಳಿದಿದ್ದವು. ಈ ಗೊಂದು ದಶಕದಿಂದೀಚೆ ಎಲ್ಲ ಫಿಟ್ನೆಸ್ ಪಂಡಿತರು ಉಪವಾಸ ಮಾಡಿ ಎನ್ನುವುದು ಜಾಸ್ತಿ ಆಗಿದೆ. ಜಪಾನಿನ ಯೋಷಿಮೊರಿ ಅಸುಮಿ ಎನ್ನುವ ವಿಜ್ಞಾನಿಗೆ ಉಪವಾಸದ ಪರಿಣಾಮಗಳ ಆವಿಷ್ಕಾರಕ್ಕೆ ನೊಬೆಲ್ ಪ್ರಶಸ್ತಿ ಬಂದ ಮೇಲೆ ಉಪವಾಸ ಎಲ್ಲಿಲ್ಲದ ಜನಪ್ರಿಯತೆ ಪಡೆದಿದೆ

ಅಂಕಣಕಾರ ಶಿಶಿರ್ ಹೆಗಡೆ

ಶಿಶಿರಕಾಲ
shishih@gmail.com
ಚಿಕ್ಕಂದಿನಿಂದಲೂ ಹಬ್ಬ-ಹರಿದಿನ ಏನೇ ಇರಲಿ, ನನಗಂತೂ ಉಪವಾಸ ಮಾಡಿ ಅಭ್ಯಾ ಸವೇ ಇರಲಿಲ್ಲ. ನಮ್ಮೂರಿನ ಉಪವಾಸ ಕ್ರಮವೇ ಬಹಳ ವಿಚಿತ್ರವಿತ್ತು. ಬಹುತೇಕರು ಉಪವಾಸ ಮಾಡುತ್ತೇವೆಂದರೂ ಅವರದು ನಿಜವಾದ ನಿರಾಹಾರವಾಗಿರಲಿಲ್ಲ. ಒಪ್ಪತ್ತಿನ ಉಪವಾಸ ಎಂದು ರಾತ್ರಿಯ ಊಟಕ್ಕೆ ಅಕ್ಕಿ- ಅನ್ನ, ಉದ್ದು ಇವನ್ನು ಹಾಕದ ಎಲ್ಲವನ್ನೂ ತಿನ್ನುತ್ತಿದ್ದರು. ಊಟದ ಬದಲಿಗೆ ತಿಂಡಿ, ಚಪಾತಿ ಇತ್ಯಾದಿ.. ಏಕಾದಶಿ, ಗುರುವಾರ ಇತ್ಯಾದಿ ಉಪವಾಸ ಗಳೆಂದರೆ ನೆನೆಸಿದ ಅವಲಕ್ಕಿಗೆ ಕೆನೆ ಮೊಸರು, ಕಾಯಿತುರಿ, ಮೇಲಿಂದ ಸ್ವಲ್ಪ ಸಕ್ಕರೆ, ಪಕ್ಕ ದಲ್ಲಿ ಉಪ್ಪಿನಕಾಯಿ. ಅದನ್ನು ‘ಫಲಾಹಾರ’ ಎಂದು ಕರೆಯುತ್ತಿದ್ದರು.
ಫಲವೇ ಇರದ ಫಲಾಹಾರದಿಂದ ಯಾವುದೇ ಪ್ರತಿ-ಫಲವಿರಲಿಲ್ಲ. ಯಾವತ್ತೋ ಏನೋ ಕಾರಣಕ್ಕೆ ಶುರು ಮಾಡಿಕೊಂಡ ಉಪವಾಸ ಉದ್ಯಾಪಿಸದೇ ಬಿಡಬಾರದೆಂಬ ನಂಬಿಕೆ ಯಿಂದಾಗಿ ಮುಂದುವರಿಸಿಕೊಂಡು ಹೋದವರೇ ಜಾಸ್ತಿ. ನಿತ್ಯದ ಊಟದ ಪ್ರಮಾಣಕ್ಕೂ ಉಪವಾಸದ ತಿಂಡಿಯ ಪ್ರಮಾಣಕ್ಕೂ ವ್ಯತ್ಯಾಸವಿರಲಿಲ್ಲ.
ಇದನ್ನೂ ಓದಿ: Shishir Hegde Column: ವೃದ್ಧಾಪ್ಯದಲ್ಲಿ ಮನಸ್ಥಿತಿ ಹೇಗಿರುತ್ತದೆಂಬ ಪ್ರಯೋಗ
ಉಪವಾಸದ ಹೆಸರಿನ ಫಲಾಹಾರದಲ್ಲಿ ಯಾವುದೇ ‘ಫಲ’ವೂ ಇರಲಿಲ್ಲ, ಪ್ರತಿ-ಫಲವೂ ಇರಲಿಲ್ಲ. ಅಂಥ ಉಪವಾಸಗಳು ಅರ್ಥಹೀನವಾಗಿ ರೂಢಿಯಲ್ಲಿ ಮಾತ್ರ ಉಳಿದಿದ್ದವು. ಈಗೊಂದು ದಶಕದಿಂದೀಚೆ ಎಲ್ಲ ಫಿಟ್ನೆಸ್ ಪಂಡಿತರು ಉಪವಾಸ ಮಾಡಿ ಎನ್ನುವುದು ಜಾಸ್ತಿ ಆಗಿದೆ. ಜಪಾನಿನ ಯೋಷಿಮೊರಿ ಅಸುಮಿ ಎನ್ನುವ ವಿಜ್ಞಾನಿಗೆ ಉಪವಾಸದ ಪರಿಣಾಮಗಳ ಆವಿಷ್ಕಾರಕ್ಕೆ ನೊಬೆಲ್ ಪ್ರಶಸ್ತಿ ಬಂದ ಮೇಲೆ ಉಪವಾಸ ಎಲ್ಲಿಲ್ಲದ ಜನಪ್ರಿಯತೆ ಪಡೆದಿದೆ.
ಆ ಕಾರಣಕ್ಕೆ, ಪ್ರಯೋಗಾರ್ಥ ಉಪವಾಸ ಶುರುಮಾಡಿದವನು ನಾನು. ಉಪವಾಸ ಎಂದರೆ ನಿರಾಹಾರ, ನೀರೇ ಆಹಾರ. ನೀರನ್ನು ಹೊರತುಪಡಿಸಿ ಇನ್ನೆನ್ನೂ ತಿನ್ನುವಂತಿಲ್ಲ. ಮೊದ ಮೊದಲು ಒಂದೊಪ್ಪತ್ತಿನ ಉಪವಾಸವೇ ಕಷ್ಟವೆನಿಸುತ್ತಿತ್ತು. ಈಗ ಅಭ್ಯಾಸವಾಗಿದೆ. ಆಗೀಗ 72 ಗಂಟೆಗಳವರೆಗೆ ದೀರ್ಘ ಉಪವಾಸ ಮಾಡುವುದಿದೆ.

ನಾನು ದೀರ್ಘ ಉಪವಾಸವನ್ನು ಈ ಲೇಖನದ ಮೂಲಕ ಯಾರಿಗೂ ಶಿಫಾರಸು ಮಾಡು ತ್ತಿಲ್ಲ. ನಿಮ್ಮ ದೇಹಸ್ಥಿತಿಯನ್ನು ಪರಿಗಣಿಸದೇ ಏಕಾಏಕಿ ದೀರ್ಘ ಉಪವಾಸ ಮಾಡುವುದು ಒಳ್ಳೆಯದಲ್ಲ. ಆದರೆ ಆರೋಗ್ಯಕರ ದೇಹ ವ್ಯವಸ್ಥೆ, ವಯಸ್ಸು ಇದ್ದು- ಸರಿಯಾಗಿ, ಜಾಗರೂಕತೆಯಿಂದ ಅಭ್ಯಾಸ ಮಾಡಿಕೊಂಡು ಮಾಡಿದಲ್ಲಿ ದೀರ್ಘ ಉಪವಾಸ ಕೊಡುವ ‘ಕಿಕ್ಕೇ’ ಬೇರೆ. ಅದೊಂದು ಅನನ್ಯ ಅನುಭವ.
ಉಪವಾಸದಲ್ಲಿ ಮೊದಲ ಐದಾರು ತಾಸು ಕಳೆದಾಗ ನಮ್ಮ ಹೊಟ್ಟೆ ತಾಳಹಾಕಲು ಶುರು ಮಾಡುತ್ತದೆ, ಹೊಟ್ಟೆಯಿಂದ ವಿಚಿತ್ರ ಶಬ್ದಗಳು ಬರಲು ಆರಂಭವಾಗುತ್ತವೆ. ಸ್ವಲ್ಪ ಗಟ್ಟಿ ಮನಸ್ಸು ಮಾಡಿಕೊಂಡರೆ ಸುಮಾರು ಎಂಟು ತಾಸಿನವರೆಗಿನ ಉಪವಾಸವನ್ನು ಸುಲಭ ದಲ್ಲಿ ಯಾರು ಬೇಕಾದರೂ ಮಾಡಿಬಿಡಬಹುದು. ಆದರೆ ಉಪವಾಸದ ನಿಜವಾದ ಪರಿಣಾ ಮಗಳು ದೇಹದಲ್ಲಿ ಕಾಣಿಸಿಕೊಳ್ಳುವುದು ಸುಮಾರು 12 ತಾಸು ಕಳೆದ ಮೇಲೆ. 12 ರಿಂದ 24 ತಾಸು ಅತ್ಯಂತ ಕಷ್ಟದ ಸಮಯ. ಆ ಸಮಯದಲ್ಲಿ ದೇಹದಲ್ಲಿ ಗ್ಲೂಕೋಸ್- ಸಕ್ಕರೆಯ ಪ್ರಮಾಣ ತಗ್ಗುತ್ತದೆ. ಜತೆಯಲ್ಲಿ ‘ಮೂಡ್ ಸ್ವಿಂಗ್’ ಶುರುವಾಗುತ್ತದೆ.
ಅನವಶ್ಯಕ ಸಿಟ್ಟು, ಮುಂಗೋಪ, ಕಿರಿಕಿರಿ ಇವೆಲ್ಲ ಅನುಭವಕ್ಕೆ ಬರುವುದು ಈ ಸಮಯ ದಲ್ಲಿ. ದೇಹದ ಆಂತರಿಕ ತೊಳಲಾಟಗಳ ಜತೆಯಲ್ಲಿ ಮಾನಸಿಕ ತೊಳಲಾಟಗಳು ನಮ್ಮ ನ್ನು ವಿನಾಕಾರಣ ಸಿಡುಕುವಂತೆ ಮಾಡುತ್ತವೆ. ಆದರೆ ಒಮ್ಮೆ ಉಪವಾಸದ 24 ಗಂಟೆ ಕಳೆಯಿತೆಂದುಕೊಳ್ಳಿ, ಅನಂತರದ ಉಪವಾಸ ಬಹಳ ಸುಲಭ.
ಉಪವಾಸದಲ್ಲಿ 24 ಗಂಟೆ ಕಳೆಯುವಾಗ ದೇಹ ತನ್ನ ಕೊಬ್ಬನ್ನು ಶಕ್ತಿಗೆ ಬಳಸಿಕೊಳ್ಳಲು ಶುರುಮಾಡುತ್ತದೆ. ಈ ಸ್ಥಿತಿಯನ್ನು Autophagy ಎನ್ನುವುದು. ದೇಹ ರಿಪೇರಿ ಕೆಲಸ ಆರಂಭಿಸುವುದು, ದೇಹದಲ್ಲಿ ಚಿಕ್ಕಪುಟ್ಟ ಊತ, ನೋವು ಇವೆಲ್ಲವೂ ಸರಿಯಾಗುವುದು ಈ ಹಂತದಲ್ಲಿ. ಇದೇ ಸಮಯದಲ್ಲಿ ದೇಹ ತನ್ನ ಸ್ನಾಯುಗಳ ರಕ್ಷಣೆಗೆಂದು ಬೆಳವಣಿಗೆಯ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ.
ಕ್ರಮೇಣ ಅಲ್ಲಿಯವರೆಗೆ ಇದ್ದ ನಿತ್ರಾಣವೆಲ್ಲ ಮರೆಯಾಗಿಬಿಡುತ್ತದೆ. ದೇಹದಲ್ಲಿ ಶಕ್ತಿ ತುಂಬಿದ ಅನುಭವ ಬರುತ್ತದೆ. ಅಲ್ಲಿಂದ ಮುಂದಿನ ಉಪವಾಸ ಬಹಳ ಸುಲಭ. ಹಸಿವೆಯ ಅನುಭವ ಕ್ರಮೇಣ ಮರೆಯಾಗಿ ದೇಹ ಒಂದು ಸಮತೋಲನ ಸ್ಥಿತಿಯನ್ನು ತಲುಪುತ್ತದೆ. ಉಪವಾಸದ 48 ಗಂಟೆ ಕಳೆದ ಮೇಲೆ ಅನುಭವ ಮತ್ತೆ ಬದಲಾಗುತ್ತದೆ.
ದೇಹದೊಳಗಿನ ಶಕ್ತಿ ದುಪ್ಪಟ್ಟಾದ ಅನುಭವ ಅದು. ಆ ಸಮಯದಲ್ಲಿ ನಮ್ಮ ದೇಹ ಹೊಟ್ಟೆಯ ಆಹಾರದ ಬದಲಿಗೆ ಪೂರ್ಣ ಪ್ರಮಾಣದಲ್ಲಿ ಕೊಬ್ಬನ್ನು ಆಹಾರವಾಗಿ ಬಳ ಸಲು ಶುರುಮಾಡುತ್ತದೆ. ಹಾಗಾಗಿ ಹೊಟ್ಟೆಯ ಹಸಿವು ಸಂಪೂರ್ಣ ಮಾಯವಾಗಿ ಬಿಡು ತ್ತದೆ. ಹೊಟ್ಟೆಯ ಪಚನಕ್ರಿಯೆ ನಿಷ್ಕ್ರಿಯವಾಗಿರುತ್ತದೆ.
ಸುಮಾರು 72 ತಾಸು, ಆಹಾರವಿಲ್ಲದೆ ಮೂರು ದಿನ ಕಳೆಯುವಾಗ ದೇಹ ಕೆಲವು ಚಮತ್ಕಾ ರಿಕ ಬದಲಾವಣೆ ಹೊಂದುತ್ತದೆ. ನಮ್ಮ ದೇಹದ ಬಿಳಿ ರಕ್ತಕಣಗಳು ಮರುಹುಟ್ಟು ಪಡೆ ಯುತ್ತವೆ. ದೇಹದ ಪ್ರತಿರಕ್ಷಣಾವ್ಯವಸ್ಥೆ, ರೋಗ ನಿರೋಧಕ ಶಕ್ತಿ ವೃದ್ಧಿಸುವುದು ಈಗ. ಅಷ್ಟೇ ಅಲ್ಲ, ಆಗ ನಮ್ಮ ಸ್ಟೆಮ್ ಸೆಲ್‌ಗಳು ಜಾಗೃತವಾಗುತ್ತವೆ. ನಮ್ಮ ಇನ್ಸುಲಿನ್ ಸೂಕ್ಷ್ಮತೆ ಹೆಚ್ಚುತ್ತಿದೆ ಇತ್ಯಾದಿ. ಇಷ್ಟು ಕಾಲ ಉಪವಾಸ ಮಾಡಿಬಿಟ್ಟರೆ ಇಡೀ ದೇಹ ಹೊಸತೊಂದು ಚೈತನ್ಯ ಪಡೆಯುವುದು ಅನುಭವಕ್ಕೆ ಬರುತ್ತದೆ.
ಯಾವುದೇ ದೀರ್ಘ ಉಪವಾಸದ ನಂತರ ಅದನ್ನು ಮುರಿಯುವುದು (break fast) ಅತ್ಯಂತ ಮಹತ್ವದ್ದು. ಹೆಚ್ಚಿನವರು ಎಡವುದು ಇಲ್ಲಿಯೇ. ದೇಹ ಆಹಾರದ ಬದಲಿಗೆ ಕೊಬ್ಬನ್ನು ಶಕ್ತಿಗೆ ಅವಲಂಬಿಸಿದಾಕ್ಷಣ ಜೀರ್ಣಕ್ಕೆ ಬೇಕಾಗುವ ಆಸಿಡ್‌ಗಳ ಉತ್ಪಾದನೆ ನಿಂತಿರುತ್ತದೆ. ಅದು ನಿಲ್ಲದಿದ್ದಲ್ಲಿ ಉಪವಾಸ ಸಾಧ್ಯವೇ ಇಲ್ಲ. ಏಕೆಂದರೆ ಆಹಾರ ಸೇವಿಸದಾಗಲೂ ಈ ಆಸಿಡ್‌ಗಳು ಉತ್ಪಾದನೆಯಾದರೆ ಅವು ಹೊಟ್ಟೆಯ ಒಳಭಾಗವನ್ನು ಸುಡಬಲ್ಲವು.
ಹಾಗಾಗಿ ಅಸಿಡಿಟಿ ಸಮಸ್ಯೆಯಿರುವವರು ದೀರ್ಘ ಉಪವಾಸವನ್ನು ಏಕಾಏಕಿ ಮಾಡು ವುದು ಒಳ್ಳೆಯದಲ್ಲ. ಇಷ್ಟು ದೀರ್ಘಕಾಲ ಉಪವಾಸ ಮಾಡಿ ಒಮ್ಮೆಲೇ ಆಹಾರವನ್ನು ಸೇವಿಸಿಬಿಟ್ಟರೆ ಅದು ಅಷ್ಟು ಸುಲಭಕ್ಕೆ ಜೀರ್ಣವಾಗುವುದಿಲ್ಲ, ಅಜೀರ್ಣವಾಗಿಬಿಡುತ್ತದೆ. ಈ ಅಜೀರ್ಣ ದೈಹಿಕವಾಗಿ ಸಾಕಷ್ಟು ಸಮಸ್ಯೆಯನ್ನು ತಂದೊಡ್ಡಬಹುದು. ಹಾಗಾದಲ್ಲಿ ಉಪವಾಸದ ಸತ್ಪರಿಣಾಮಕ್ಕಿಂತ ದುಷ್ಪರಿಣಾಮವೇ ಜಾಸ್ತಿಯಾಗಿಬಿಡುತ್ತದೆ.
ಹಾಗಾಗಿ ಮೊದಲು ಸ್ವಲ್ಪ ಹಣ್ಣಿನ ರಸ, ಆನಂತರದಲ್ಲಿ ಮೆದುವಾದ ಆಹಾರ ಇತ್ಯಾದಿ ಸೇವಿಸುತ್ತ ಉಪವಾಸದಿಂದ ನಿಧಾನಕ್ಕೆ ಹೊರಬರಬೇಕು. ಹೊಸ ಜಠರಾಗ್ನಿ ಎರಡು ದಿನದ ಪ್ರಕ್ರಿಯೆ. ನೀರಿಲ್ಲದ ದೀರ್ಘ ಉಪವಾಸ ವರ್ಜ್ಯ. ನೀರು ಕುಡಿಯಲೇಬೇಕು. ಇಪ್ಪತ್ನಾಲ್ಕು ಗಂಟೆಗಿಂತ ಜಾಸ್ತಿ ಉಪವಾಸ ಮಾಡುವಾಗ ಅದಕ್ಕೆ ಬೇಕಾದ ಪೂರಕ ದೈಹಿಕ ಆರೋಗ್ಯ ಇರಲೇಬೇಕು. ಅಷ್ಟೇ ಅಲ್ಲ, ಅಂಥ ಉಪವಾಸ ಮಾಡುವಾಗ ಆಗುವ ದೈಹಿಕ ಏರುಪೇರು ಗಳನ್ನು ವೈಜ್ಞಾನಿಕವಾಗಿ ಸ್ಮಾರ್ಟ್ ವಾಚ್ ಬಳಸಿ ಗಮನಿಸಿದರೆ ಉತ್ತಮ.
ನನ್ನ ಅನುಭವದ ಪ್ರಕಾರ ಉಪವಾಸ ಮಾಡುವುದೆಂದರೆ ಅದು ಎರಡಲಗಿನ ಕತ್ತಿಯ ಮೇಲಿನ ನಡೆ. ದೈಹಿಕ ಏರಿಳಿತವನ್ನು ಸಂಭಾಳಿಸುವುದರ ಜತೆಗೆ ಮಾನಸಿಕ ಏರಿಳಿತ ವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇದರಲ್ಲಿ ಎರಡನೆಯದು ಅತ್ಯಂತ ಕಷ್ಟದ ಕೆಲಸ. ನಮ್ಮ ಇಡೀ ದೇಹ ಹಸಿವಿನಿಂದ ಬಳಲುವಾಗ ಭಾವನೆಗಳ ದೊಂಬರಾಟವೇ ನಡೆಯುತ್ತದೆ. ನಾವು ತಿನ್ನುವಂತೆ ಪ್ರೇರೇಪಿಸುವ ಎಲ್ಲಾ ಒತ್ತಡಗಳು ಆಂತರಿಕವಾಗಿ ಏರ್ಪಾಡಾಗುತ್ತವೆ.
ಆ ಕಾರಣಕ್ಕೆ ಇರಬೇಕು- ಯೋಗ ಸಂಸ್ಕೃತಿಯಲ್ಲಿ ಉಪವಾಸದ ಜತೆಯಲ್ಲಿ ಉಪಾಸನೆಗಳು ಸೇರಿಕೊಂಡದ್ದು. ಹಸಿವಾದಾಗ ಕೋಪ ಬರುವುದು, ನಾವು ಇನ್ನೊಬ್ಬರ ಮೇಲೆ ಸಿಡುಕು ವುದು ಇತ್ಯಾದಿ ಸರ್ವೇಸಾಮಾನ್ಯ. ಆಗೀಗ ಉಪವಾಸ ಮಾಡಿ ಅಭ್ಯಾಸ ಮಾಡಿಕೊಂಡರೂ ನಿತ್ಯ ಬದುಕಿನಲ್ಲಿ ಹಸಿವಾದಾಗ ಮಾನಸಿಕ ಏರಿಳಿತವನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಸುಲಭವಲ್ಲ.
ಈ ಕಿರಿಕಿರಿಯೇ ಆದಿಮಾನವನಿಗೆ ಆಹಾರ ಸಂಗ್ರಹಿಸಿ ಸೇವಿಸುವಂತೆ ಪ್ರೇರೇಪಿಸುತ್ತಿತ್ತು. ಆದರೆ ಈಗ ಹಾಗಲ್ಲ. ಆಹಾರ ನಿರಂತರ ಎದುರಿಗೆ ಇರುವುದರಿಂದ, ಅದನ್ನು ಸೇವಿಸದೇ ತಡೆದುಕೊಳ್ಳುವುದು ಮನಸ್ಸಿಗೆ ಅಷ್ಟು ಸುಲಭವಿಲ್ಲ. ಹಸಿವೆ ನಮ್ಮ ಮನಸ್ಥಿತಿಯನ್ನು, mood ಅನ್ನು ನಿರ್ದೇಶಿಸುತ್ತದೆ ಎಂಬುದು ನಮ್ಮೆಲ್ಲರ ಅನುಭವ. ಹಸಿವೆಯಾದಾಗ ಕೋಪ, ಕಿರಿಕಿರಿ. ಹೊಟ್ಟೆ ತುಂಬಿದಾಕ್ಷಣ ಸಮಾಧಾನ, ಶಾಂತಿ.
ಆಹಾರ ಸೇವನೆ ಮಾತ್ರವಲ್ಲ ನಾವೇನು ತಿನ್ನುತ್ತೇವೆ ಎಂಬುದು ಕೂಡ ನಮ್ಮ ಮನಸ್ಸಿನ ದಿಶೆಯನ್ನು ನಿರ್ದೇಶಿಸುತ್ತವೆ ಎಂಬುದೂ ಅಷ್ಟೇ ಸತ್ಯ. ಉದಾಹರಣೆಗೆ, ಬೆಳಗಿನ ಕಾಫಿ ಅಥವಾ ಚಹಾ ಕುಡಿದರೆ ಮನಸ್ಸು ಅರಳಿದ ಅನುಭವ. ಕೆಫಿನ್ ನಮ್ಮಲ್ಲಿ ಸಹಜ ಹುರು ಪನ್ನು ಹುಟ್ಟುಹಾಕುತ್ತದೆ.
ಅಂತೆಯೇ ಚಿಕ್ಕಮಕ್ಕಳಿಗೆ ಸಕ್ಕರೆ ಅಥವಾ ಚಾಕಲೇಟ್ ಜಾಸ್ತಿ ಕೊಟ್ಟುಬಿಟ್ಟರೆ ಅವು ಜಿಗಿದಾಡುವುದು, ನಿದ್ರೆ ಮಾಡದಿರುವುದು ನೋಡಬಹುದು. ಕೆಲವು ಆಹಾರ ತಿಂದರೆ ಆಲಸ್ಯ ಇತ್ಯಾದಿ. ಇವೆಲ್ಲ ಸುಲಭಗೋಚರ. ಹಿಂದಿನ ವರ್ಷ ಇಂಗ್ಲೆಂಡಿನ ಜೈಲಿನಿಂದ ಹೀಗೊಂದು ಸುದ್ದಿ ಬಂದಿತ್ತು. ಏನೆಂದರೆ, ಈಗೊಂದು ದಶಕದಿಂದ ಇಂಗ್ಲೆಂಡಿನ ಜೈಲು ಗಳಲ್ಲಿ ಖೈದಿಗಳ ಹಿಂಸಾತ್ಮಕ ವರ್ತನೆ ಮಿತಿ ಮೀರಿ ಬಿಟ್ಟಿತ್ತಂತೆ.
ನಿತ್ಯ ಜೈಲಿನಲ್ಲಿ ರಕ್ತಪಾತ-ಹೊಡೆದಾಟ. ಜೈಲನ್ನು ನಿಭಾಯಿಸುವುದೇ ಕಷ್ಟ ಎಂಬ ಸ್ಥಿತಿ. ಇದಕ್ಕೆ ಅಲ್ಲಿನ ಆಕ್ಸ್-ರ್ಡ್ ವಿವಿ ರಿಸರ್ಚ್ ವಿಭಾಗದವರು ಖೈದಿಗಳಿಗೆ Omega 3 Fatty Acid ಪೋಷಕಾಂಶವಿರುವ ಆಹಾರವನ್ನು ಹೆಚ್ಚಿಗೆ ನೀಡುವಂತೆ ಸೂಚಿಸಿದ್ದರು. ಅದರಂತೆ ಕಳೆದ ಎರಡು ವರ್ಷದಿಂದ ಈ ಪೋಷಕಾಂಶವನ್ನು ಅವರಿಗೆಲ್ಲ ಕೊಡಲಾಗುತ್ತಿದೆ. ಪರಿಣಾಮ ಈಗ ಸ್ಪಷ್ಟವಾಗಿದೆ- ಅಲ್ಲಿ ಈಗ ಹಿಂಸಾತ್ಮಕ ವರ್ತನೆಗಳು ಗಣನೀಯ ಶೇ.30ರ ಮಟ್ಟಕ್ಕೆ ಇಳಿದಿವೆ.
ಜೈಲಿನಲ್ಲಿ ಆಹಾರದ ಹೊರತಾಗಿ ಬೇರೇನೂ ಬದಲಾವಣೆ ಮಾಡದ್ದರಿಂದ ಈ ಬದಲಾ ವಣೆಗೆ ಆಹಾರದಲ್ಲಿನ ಆ ಪೋಷಕಾಂಶವೇ ಕಾರಣ ಎಂಬುದು ನಿರ್ವಿವಾದ. ಒಮೆಗಾ 3- ಮೀನು ಅವರನ್ನು ಇನ್ನಷ್ಟು ಶಾಂತವಾಗಿಸಿದೆ. ಇದೇ ರೀತಿ ಅಮೆರಿಕದ ನ್ಯೂಜರ್ಸಿಯ ಜೈಲಿನಲ್ಲಿ ಕಳೆದೆರಡು ವರ್ಷದಿಂದ ಯಾವುದೇ ಕಾರ್ಖಾನೆಯಲ್ಲಿ ತಯಾರಿಸಿದ ಆಹಾರ ನೀಡುವುದನ್ನು ನಿಲ್ಲಿಸಿದ್ದಾರೆ.
ಇದರಿಂದಲೂ ಅಲ್ಲಿನ ಖೈದಿಗಳ ನಡವಳಿಕೆಯಲ್ಲಿ ಬದಲಾವಣೆ ಕಂಡುಕೊಂಡಿದ್ದು ಅದೇ ಕೆಲಸವನ್ನು ಉಳಿದ ಜೈಲುಗಳಲ್ಲೂ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅಂದು ಇಂದು ಇಂಥ ಪ್ರಯೋಗಗಳನ್ನು ಬಿಟ್ಟರೆ ಈ ಬಗ್ಗೆ ಆಧುನಿಕ ವೈಜ್ಞಾನಿಕ (!) ಪುರಾವೆಗಳು ಕಡಿಮೆ. ಆದರೆ ನಾವು ಸೇವಿಸುವ ಆಹಾರಗಳು ನಮ್ಮ ಮಾನಸಿಕ ಸ್ಥಿತಿಯನ್ನು ನಿರ್ದೇಶಿಸು ತ್ತವೆ ಎಂಬುದಂತೂ ನಿರ್ವಿವಾದ.
ಆಹಾರದಲ್ಲಿನ ಸತ್ವ, ರಜಸ್ಸು, ತಮಸ್ಸು ಈ ಗುಣವನ್ನು ಇಂದು ವೈeನಿಕವಾಗಿ ಒಪ್ಪಿಕೊಳ್ಳ ಲಾಗಿದೆ. ನಾವು ಆಹಾರವನ್ನು ಯಾವ ಭಾವದಲ್ಲಿ ತಿನ್ನುತ್ತೇವೆಯೋ ಅದೇ ಭಾವ ನಮ್ಮಲ್ಲಿ ಕೂಡ ಮೂಡುತ್ತದೆ ಎಂಬ ಸಾರ್ವತ್ರಿಕ ನಂಬಿಕೆ ಈಗ ಸಾಬೀತಾದ ವಿಷಯ. ಆಹಾರ ವೆಂದರೆ ಅದೊಂದು ಸಂಬಂಧ. ಹೊರ ಜಗತ್ತಿನ ಭಾಗವೊಂದು ನಮ್ಮ ದೇಹದ ಭಾಗ ವಾಗುವ, ನಾವೇ ಆಗುವ ಪ್ರಕ್ರಿಯೆ.
ಹಾಗಾಗಿಯೇ ಸನಾತನ ಧರ್ಮದಲ್ಲಿ ‘ಅನ್ನ ಬ್ರಹ್ಮ’ ಎನ್ನುವುದು. ಆಹಾರಕ್ಕೆ ಮೊದಲು ನಮಸ್ಕರಿಸಿಯೇ ಸ್ವೀಕರಿಸುವುದು. ಈ ವಿಷಯವೇಕೆ ಹೇಳಿದೆ ಎಂದರೆ ಅಮೆರಿಕದ ಇತ್ತೀಚಿನ ಜನಪ್ರಿಯ ಡಯೆಟಿಷಿಯನ್‌ಗಳೆಲ್ಲ ಪ್ರಜ್ಞಾಪೂರ್ವಕ ಆಹಾರ ಸೇವಿಸಿದರೆ ಆರೋಗ್ಯ ಸಮಸ್ಯೆ ಕಡಿಮೆಯಾಗುತ್ತದೆ ಎಂಬುದನ್ನು ಒಪ್ಪಿ ಪಾಲಿಸುವಂತೆ ನಿರ್ದೇಶಿಸು ತ್ತಾರೆ. Mindful Eating ಈಗಿನ ಜನಪ್ರಿಯ ಟ್ರೆಂಡ್.
ಅದೆಷ್ಟೋ ಲಕ್ಷ ವರ್ಷದಿಂದ ಸುಮಾರು ಇನ್ನೂರು ವರ್ಷದ ಹಿಂದಿನವರೆಗೂ ಮನುಷ್ಯ ರೆಲ್ಲರೂ ಒಂದೋ ಕೃಷಿಕರಾಗಿದ್ದರು, ಬೇಟೆ ಮಾಡುತ್ತಿದ್ದರು ಅಥವಾ ತಾವೇ ಬೆಳೆದ ಬೇಳೆಕಾಳು ಮತ್ತು ಪ್ರಾಣಿಯ ಮಾಂಸವನ್ನು ತಿನ್ನುತ್ತಿದ್ದರು. ಅವರೆಲ್ಲರಿಗೂ ತಾವು ತಿನ್ನು ತ್ತಿರುವ ಆಹಾರದ ಜತೆ ಸಂಬಂಧವೊಂದಿತ್ತು. ಆಹಾರ ಹೇಗೆ, ಎಲ್ಲಿಂದ ಬಂತು ಎನ್ನುವ ಪೂರ್ಣಪ್ರಜ್ಞೆ ಇರುತ್ತಿತ್ತು.
ಅವರಿಗೆಲ್ಲ ಆಹಾರವೆಂದರೆ ಅಮೂಲ್ಯ ಸರಕಾಗಿತ್ತು. ಆದರೆ ಈಗ ಹಾಗಲ್ಲ. ನಾವು ತಿನ್ನುವ ಆಹಾರ ಎಲ್ಲಿ ಹೇಗೆ ಬೆಳೆಯಲ್ಪಡುತ್ತದೆ ಎಂಬ ಕಲ್ಪನೆಯೇ ನಮಗಿಲ್ಲ. ಮಣ್ಣಿನಿಂದ ಅವು ಪ್ಲಾಸ್ಟಿಕ್ ಪ್ಯಾಕೆಟ್ ಆಗಿ ಮನೆಗೆ ಮುಟ್ಟುವಲ್ಲಿಯವರೆಗಿನ ಎಲ್ಲವೂ ಅಜ್ಞಾತ. ಮಾಂಸಾ ಹಾರವು ಕೂಡ ಅಷ್ಟೆ. ಮೊದಲು ಕೃಷಿಕನೇ ಬೆಳೆಸಿದ ಪ್ರಾಣಿಯನ್ನು ಅಥಾವ ಬೇಟೆಯಲ್ಲಿ ಕೊಂದು ಅಪರೂಪಕ್ಕೆ ತಿನ್ನುವುದು ಅಭ್ಯಾಸವಾಗಿತ್ತು. ತೀರಾ ಇತ್ತೀಚಿನವರೆಗೂ ಮಾಂಸಾ ಹಾರ ಎನ್ನುವುದು ಉಪಾಹಾರವಾಗಿತ್ತು.
ಅದು ಮುಖ್ಯ ಆಹಾರದ ಒಂದು ಚಿಕ್ಕ ಭಾಗವಾಗಿತ್ತು. ಅದು ಕೂಡ ವಾರಕ್ಕೊಮ್ಮೆ, ಅಥವಾ ತಿಂಗಳಿಗೊಮ್ಮೆ. ಆದರೆ ಈಗ ಹಾಗಲ್ಲ. ಪ್ರಾಣಿಗಳನ್ನು ಕಾರ್ಖಾನೆಗಳಲ್ಲಿ, ಆಧು ನಿಕ ಕಸಾಯಿಖಾನೆಗಳಲ್ಲಿ ವಧಿಸಿ ಸಂಸ್ಕರಿಸುವುದರಿಂದ ಅಲ್ಲಿನ ಹಿಂಸೆ ಇತ್ಯಾದಿ ಯಾವು ದೂ ಅದನ್ನು ಸೇವಿಸುವವನ ಅನುಭವಕ್ಕೆ ಬರುವುದಿಲ್ಲ.
ಸಸ್ಯಾಹಾರವೇ ಇರಲಿ ಅಥವಾ ಮಾಂಸಾಹಾರವೇ ಇರಲಿ- ಆಧುನಿಕವಾದಂತೆ ಆಹಾರ ದೆಡೆಗಿನ ಕೃತಜ್ಞತಾಭಾವ ನಮ್ಮಲ್ಲಿ ಕಡಿಮೆಯಾಗಿರುವುದು ಈ ಕಾರಣದಿಂದ. ಆಹಾರ ವೆಂದರೆ ನಾಲಿಗೆಯಿಂದ ಗಂಟಲಿಗೆ ಇಳಿಯುವಲ್ಲಿಯವರೆಗಿನ ವ್ಯವಹಾರ ಎಂಬಂತಾಗಿದೆ. ಅದರ ಜತೆಗೆ ಯಥೇಚ್ಛವಿರುವ ಆಹಾರ ಲಭ್ಯತೆಯು ಆಹಾರವನ್ನು ಇನ್ನಷ್ಟು ಅಗ್ಗವಾಗಿ ಸಿದೆ. ಈಗ ರುಚಿ ಮಾತ್ರ ಮಾನದಂಡ.
ಆಹಾರ ಸೇವನೆ, ಊಟ ಎಂದರೆ ಬಹುತೇಕರಿಗೆ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸ. ಚೀಲಕ್ಕೆ ಸಾಮಾನು ತುಂಬಿದಂತೆ. ಜಿಹ್ವಾಚಾಪಲ್ಯ ಅರ್ಹತೆಯ ವಿಚಾರವಾಗಿದೆ. ಊಟಕ್ಕಿಂತ ಮೊದಲು ‘ಅನ್ನ ಬ್ರಹ್ಮ’ನಿಗೆ ಕೈ ಮುಗಿಯುವುದು, ಪ್ರಾರ್ಥಿಸುವುದು ಇತ್ಯಾದಿಯೆಲ್ಲ ಇಂದು ಮೌಢ್ಯವೆಂದು ಕರೆಸಿಕೊಳ್ಳುತ್ತದೆ. ಹಸಿವಾಗಿದೆ ಎಂದು ಅನುಮಾನ ಬಂದರೆ ಸಾಕು, ನಾವು ಸಿಕ್ಕಿದ್ದನ್ನು ತಿನ್ನುತ್ತೇವೆ. ಕ್ರಮೇಣ ಆಹಾರದೆಡೆಗಿನ ಭಾವ, ಆರ್ದ್ರತೆ ನಮ್ಮೆಲ್ಲರ ಆಂತರ್ಯ ಕ್ಕೂ ವಿಸ್ತರಿಸಿದೆ.
ಆಹಾರ ಮತ್ತು ಮಾನಸಿಕ ಸ್ಥಿತಿಯ ನಡುವೆ ನೇರ ಸಂಬಂಧ ಎಳೆಯುವುದು ವೈeನಿಕವಾಗಿ ಸುಲಭವಲ್ಲ. ಏಕೆಂದರೆ ಮಾನಸಿಕ ಸ್ಥಿತಿಯನ್ನು ನಿರ್ದೇಶಿಸುವ ಪೂರ್ವಗ್ರಹ, ನೆನಪು, ನಡವಳಿಕೆ ಇತ್ಯಾದಿಯ ನಡುವೆ ಆಹಾರದ ಕಾರಣ ಪ್ರತ್ಯೇಕಿಸಿ ಹುಡುಕುವುದು ಕಷ್ಟ. ಆಹಾ ರಕ್ಕೂ ನಮ್ಮ ನಡವಳಿಕೆಗೂ ಸಂಬಂಧವೇ ಇಲ್ಲ ಎಂದು ಇಷ್ಟೊಂದು ವರ್ಷಗಳ ಕಾಲ ನಂಬಿದ್ದ ಪಾಶ್ಚಾತ್ಯ ವಿಜ್ಞಾನ ಈಗ ‘ಸಂಬಂಧವಿದೆ, ಆದರೆ ಏನೆಂದು ತಿಳಿಯುತ್ತಿಲ್ಲ’ ಎಂಬ ಹಂತಕ್ಕೆ ಬಂದು ಮುಟ್ಟಿದೆ.
ಅತ್ತ ಈ ಬಗ್ಗೆ ಪುನರ್ ಅವಿಷ್ಕಾರವಾಗುತ್ತಿರುವಾಗ ಸಾಕ್ಷ್ಯಗಳೆಲ್ಲವೂ ಹೇಳುವುದು ಒಂದೇ ಮಾತು. ನಾವು ಏನನ್ನು ಹೇಗೆ, ಎಲ್ಲಿ, ಯಾವ ರೀತಿ ತಿನ್ನುತ್ತೇವೆ ಎಂಬುದು ನಮ್ಮ ಭಾವನೆ, ಆಸಕ್ತಿ, ವಿಚಾರ, ಯೋಚನೆ, ನಾವು ಜಗತ್ತಿನೊಡನೆ ಹೇಗೆ ಸಂವಹಿಸುತ್ತೇವೆ ಎಂಬೆಲ್ಲವನ್ನೂ ನಿರ್ದೇಶಿಸುತ್ತವೆ. ಈ ಸಂಬಂಧವನ್ನು ಸೂಕ್ಷ್ಮದಲ್ಲಿ ವೈಯಕ್ತಿಕವಾಗಿ ಗ್ರಹಿಸಿದರೆ ಅನುಭವಕ್ಕೆ ಬರುತ್ತದೆ.
ಸಾತ್ವಿಕ ಆಹಾರವನ್ನು ಸಮಾಧಾನದಲ್ಲಿ, ಪ್ರೀತಿಯಿಂದ, ಅದರ ಬಗ್ಗೆ ಯೋಚಿಸುತ್ತ, ಸವಿದು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡರೆ ಅದರಿಂದ ದೈಹಿಕ ಆರೋಗ್ಯವಷ್ಟೇ ಅಲ್ಲ ಮಾನಸಿಕ, ಭಾವನಾತ್ಮಕ ಮತ್ತು ಇಂದ್ರಿಯ ಅರಿವಿನ ಆರೋಗ್ಯ ವೃದ್ಧಿಸುತ್ತದೆ. ಇದರ ಪರಿಣಾಮವನ್ನು ನಾವೇ ಕಂಡುಕೊಳ್ಳಬಹುದು. Happy Eating!