ಸಂಪಾದಕರ ಸದ್ಯಶೋಧನೆ
ಜಗತ್ತಿನಲ್ಲಿ ಎಷ್ಟೋ ವಿಚಿತ್ರ ಕಾಯಿಲೆಗಳಿವೆ. ಆದರೆ ಒಬ್ಬ ವ್ಯಕ್ತಿ ತಾನು ಕಲಿಯದ, ಹೋಗದ ದೇಶದ ಭಾಷೆಯ ಉಚ್ಚಾರಣೆಯಲ್ಲಿ ಮಾತನಾಡತೊಡಗುವುದು ಅತ್ಯಂತ ಅಪರೂಪದ ವಿದ್ಯಮಾನ. ಇದನ್ನು ವೈದ್ಯಕೀಯ ಲೋಕದಲ್ಲಿ ‘ಫಾರಿನ್ ಆಕ್ಸೆಂಟ್ ಸಿಂಡ್ರೋಮ್’ ( FAS ) ಎಂದು ಕರೆಯುತ್ತಾರೆ.
ಇದು ಕೇವಲ ಭಾಷೆಯ ಸಮಸ್ಯೆಯಲ್ಲ, ಬದಲಿಗೆ ಮಿದುಳಿನ ಸಂಕೀರ್ಣ ಕಾರ್ಯ ಚಟುವಟಿಕೆಗೆ ಸಂಬಂಧಿಸಿದ ಒಂದು ಗಂಭೀರ ಸ್ಥಿತಿ. ಏನಿದು ಫಾರಿನ್ ಆಕ್ಸೆಂಟ್ ಸಿಂಡ್ರೋಮ್? ಇದು ಒಂದು ಅಪರೂಪದ ‘ಸ್ಪೀಚ್ ಡಿಸಾರ್ಡರ್’ (ಮಾತಿನ ಅಸ್ವಸ್ಥತೆ). ಇಲ್ಲಿ ವ್ಯಕ್ತಿಯು ತನ್ನ ಮಾತೃಭಾಷೆಯನ್ನೇ ಮಾತನಾಡುತ್ತಿರುತ್ತಾನೆ, ಆದರೆ ಅವನ ಮಾತಿನ ಶೈಲಿ, ಸ್ವರದ ಏರಿಳಿತ ಮತ್ತು ಉಚ್ಚಾರಣೆಗಳು ಸಂಪೂರ್ಣವಾಗಿ ಬದಲಾಗಿರುತ್ತವೆ.
ಕೇಳುಗರಿಗೆ ಆ ವ್ಯಕ್ತಿಯು ಯಾವುದೋ ವಿದೇಶಿ ಮೂಲದವನೆಂದೋ ಅಥವಾ ಹೊಸದಾಗಿ ಆ ಭಾಷೆಯನ್ನು ಕಲಿತವನೆಂದೋ ಭಾಸವಾಗುತ್ತದೆ. ಉದಾಹರಣೆಗೆ, ಅಪ್ಪಟ ಕನ್ನಡ ಮಾತನಾಡುವ ವ್ಯಕ್ತಿಯೊಬ್ಬ ಮಿದುಳಿನ ಪೆಟ್ಟಿನ ನಂತರ ಅಮೆರಿಕನ್ ಇಂಗ್ಲಿಷ್ ಶೈಲಿಯ ಅಥವಾ ಚೈನೀಸ್ ಶೈಲಿಯ ಕನ್ನಡ ಮಾತನಾಡಲು ಶುರು ಮಾಡಬಹುದು.
ಇಲ್ಲಿ ವ್ಯಕ್ತಿಗೆ ತಾನು ವಿದೇಶಿ ಶೈಲಿಯಲ್ಲಿ ಮಾತನಾಡುತ್ತಿದ್ದೇನೆ ಎಂಬ ಅರಿವಿರುವುದಿಲ್ಲ, ಆದರೆ ಕೇಳುವವರಿಗೆ ಆ ಸ್ಪಷ್ಟವಾಗಿ ವ್ಯತ್ಯಾಸ ತಿಳಿಯುತ್ತದೆ. ಈ ಸಿಂಡ್ರೋಮ್ ಮೊಟ್ಟ ಮೊದಲು ಜಗತ್ತಿನ ಗಮನ ಸೆಳೆದಿದ್ದು 1941ರಲ್ಲಿ, ಎರಡನೇ ಮಹಾಯುದ್ಧದ ಸಮಯ ದಲ್ಲಿ.
ಇದನ್ನೂ ಓದಿ: Vishweshwar Bhat Column: ಫ್ಯಾಂಟಮ್ ವೈಬ್ರೇಶನ್ ಸಿಂಡ್ರೋಮ್
ನಾರ್ವೆ ದೇಶದ ಮಹಿಳೆಯೊಬ್ಬಳು ವಾಯುದಾಳಿಯ ವೇಳೆ ಮಿದುಳಿಗೆ ಪೆಟ್ಟು ಮಾಡಿ ಕೊಂಡಳು. ಚೇತರಿಸಿಕೊಂಡ ನಂತರ ಆಕೆ ಜರ್ಮನ್ ಉಚ್ಚಾರಣೆಯಲ್ಲಿ ನಾರ್ವೇಜಿಯನ್ ಭಾಷೆ ಮಾತನಾಡಲು ಶುರು ಮಾಡಿದಳು. ಆಗ ನಾರ್ವೆ ಮತ್ತು ಜರ್ಮನಿ ನಡುವೆ ಯುದ್ಧ ನಡೆಯುತ್ತಿದ್ದ ಕಾರಣ, ಆಕೆಯನ್ನು ‘ಜರ್ಮನ್ ಗೂಢಚಾರಿ’ ಎಂದು ಭಾವಿಸಿ ಸಮಾಜ ದಿಂದ ಬಹಿಷ್ಕರಿಸಲಾಗಿತ್ತು.
ಅಂದಿನಿಂದ ಈ ಸ್ಥಿತಿಯ ಬಗ್ಗೆ ಸಂಶೋಧನೆಗಳು ತೀವ್ರಗೊಂಡವು. ಇದಕ್ಕೆ ಕಾರಣಗಳೇನು? FAS ಸಾಮಾನ್ಯವಾಗಿ ಮಿದುಳಿನ ‘ಬ್ರೋಕಾಸ್ ಏರಿಯಾ’ (Broca's area) ಎಂಬ ಭಾಗಕ್ಕೆ ಹಾನಿಯಾದಾಗ ಸಂಭವಿಸುತ್ತದೆ. ಈ ಭಾಗವು ನಾವು ಮಾತನಾಡುವ ಪದಗಳ ಉಚ್ಚಾರಣೆ ಮತ್ತು ಸ್ವರವನ್ನು ನಿಯಂತ್ರಿಸುತ್ತದೆ.
ಇದಕ್ಕೆ ಪ್ರಮುಖ ಕಾರಣಗಳೆಂದರೆ, ಮಿದುಳಿಗೆ ರಕ್ತ ಸಂಚಾರ ಸ್ಥಗಿತಗೊಂಡಾಗ ಭಾಷಾ ನಿಯಂತ್ರಣದ ಭಾಗಕ್ಕೆ ಹಾನಿಯಾಗಬಹುದು. ಅಪಘಾತ ಅಥವಾ ತಲೆಗೆ ಬಲವಾದ ಪೆಟ್ಟುಬಿzಗ ಹೀಗೆ ಆಗಬಹುದು. ಮಿದುಳಿನ ಒಳಗೆ ಗಡ್ಡೆಗಳಾದಾಗಲೂ ಹೀಗೆ ಆಗಬಹುದು. ಕೆಲವು ಅಪರೂಪದ ಸಂದರ್ಭಗಳಲ್ಲಿ ತೀವ್ರವಾದ ಮಾನಸಿಕ ಆಘಾತ ಅಥವಾ ಖಿನ್ನತೆ ಯಿಂದಲೂ ಈ ರೀತಿ ಆಗಬಹುದು. ಈ ಬದಲಾವಣೆಗಳು ಹೇಗಿರುತ್ತವೆ? FAS ಪೀಡಿತರು ಸ್ವರಾಕ್ಷರಗಳನ್ನು ದೀರ್ಘವಾಗಿ ಎಳೆಯುತ್ತಾರೆ ಅಥವಾ ಅನಗತ್ಯವಾಗಿ ಕಿರಿದಾಗಿಸುತ್ತಾರೆ.
ಪದಗಳ ನಡುವೆ ಅಸಹಜ ವಿರಾಮ ನೀಡುತ್ತಾರೆ. ವಾಕ್ಯದ ಕೊನೆಯಲ್ಲಿ ಸ್ವರದ ಏರಿಳಿತ ಬದಲು ಮಾಡುತ್ತಾರೆ. ಉದಾಹರಣೆಗೆ, ಸಾಮಾನ್ಯ ವಾಕ್ಯವು ಪ್ರಶ್ನೆಯಂತೆ ಕೇಳಿಸುತ್ತದೆ. ಕೆಲವು ಅಕ್ಷರಗಳನ್ನು ಉಚ್ಚರಿಸಲು ಕಷ್ಟಪಡುತ್ತಾರೆ ಅಥವಾ ತಪ್ಪಾಗಿ ಉಚ್ಚರಿಸುತ್ತಾರೆ.
ಇದಕ್ಕೆ ಯಾವುದೇ ನಿರ್ದಿಷ್ಟ ಶಸ್ತ್ರಚಿಕಿತ್ಸೆ ಅಥವಾ ಮಾತ್ರೆಗಳಿಲ್ಲ. ಆದರೆ ಚಿಕಿತ್ಸೆಯು ಹಾನಿಯ ತೀವ್ರತೆಯ ಮೇಲೆ ನಿರ್ಧಾರವಾಗುತ್ತದೆ. ವಾಕ್‌ಶ್ರವಣ ತಜ್ಞರು ರೋಗಿಗೆ ಹಳೆಯ ಉಚ್ಚಾರಣೆಯನ್ನು ಮರಳಿ ಪಡೆಯಲು ತರಬೇತಿ ನೀಡುತ್ತಾರೆ.
ನಾಲಿಗೆಯ ಚಲನೆ ಮತ್ತು ಸ್ವರದ ಮೇಲೆ ಕೆಲಸ ಮಾಡಲಾಗುತ್ತದೆ. FAS ನಿಂದ ಬಳಲು ವವರು ದೈಹಿಕ ನೋವಿಗಿಂತ ಹೆಚ್ಚಾಗಿ ಸಾಮಾಜಿಕ ಮುಜುಗರ ಅನುಭವಿಸುತ್ತಾರೆ. ಜನರು ಅವರನ್ನು ‘ನಟನೆ ಮಾಡುತ್ತಿದ್ದಾರೆ’ ಅಥವಾ ‘ಗಮನ ಸೆಳೆಯಲು ಹೀಗೆ ಮಾಡು ತ್ತಿದ್ದಾರೆ’ ಎಂದು ಕಿಚಾಯಿಸುತ್ತಾರೆ.
ಸ್ವಂತ ಕುಟುಂಬದವರಿಗೂ ಆ ಧ್ವನಿ ಅಪರಿಚಿತವಾಗಿ ಕೇಳಿಸುವುದರಿಂದ ರೋಗಿಯು ಏಕಾಂಗಿತನಕ್ಕೆ ಜಾರುವ ಸಾಧ್ಯತೆ ಇರುತ್ತದೆ. ಈ ಕಾಯಿಲೆ ಇರುವವರ ಬಗ್ಗೆ ಸಹಾನುಭೂತಿ ತೋರಿಸುವುದು ಮತ್ತು ಇದು ನರಮಂಡಲದ ಸಮಸ್ಯೆಯೇ ಹೊರತು ನಟನೆಯಲ್ಲ ಎಂಬು ದನ್ನು ಸಮಾಜ ಅರ್ಥಮಾಡಿಕೊಳ್ಳಬೇಕಿದೆ.
ಜಗತ್ತಿನಲ್ಲಿ ಇದುವರೆಗೆ ಕೇವಲ ನೂರೈವತ್ತು ಪ್ರಕರಣಗಳು ಮಾತ್ರ ಅಧಿಕೃತವಾಗಿ ದಾಖ ಲಾಗಿವೆ. ಇದು ಅತ್ಯಂತ ಅಪರೂಪದ ಸ್ಥಿತಿಯಾಗಿದ್ದರೂ, ವೈದ್ಯಕೀಯ ವಿಜ್ಞಾನಕ್ಕೆ ಮಿದುಳಿನ ಕಾರ್ಯವೈಖರಿಯ ಬಗ್ಗೆ ಹೊಸ ಸವಾಲನ್ನು ಸೃಷ್ಟಿಸಿದೆ.