ಸಂಪಾದಕರ ಸದ್ಯಶೋಧನೆ
ವನ್ಯಜೀವಿಗಳ ಸಂರಕ್ಷಣೆ ಮತ್ತು ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ಪ್ರದೇಶಗಳನ್ನು ‘ಗೇಮ್ ರಿಸರ್ವ್’ (Game Reserve) ಎಂದು ಕರೆಯುತ್ತಾ ರಷ್ಟೇ. ಹೀಗೆ ಕರೆಯಲು ಕಾರಣಗಳೇನು? ಈ ಹೆಸರಿನ ಹಿಂದೆ ಒಂದು ಆಸಕ್ತಿದಾಯಕ ಇತಿಹಾಸ, ಭಾಷಾ ಹಿನ್ನೆಲೆ ಮತ್ತು ವಿಕಾಸದ ಕಥೆಯಿದೆ.
‘ಗೇಮ್’ ಎಂದರೆ ಆಟ ಅಥವಾ ಕ್ರೀಡೆ ಎಂದು ಅರ್ಥ. ಆದರೆ ಹಳೆಯ ಇಂಗ್ಲಿಷ್‌ನಲ್ಲಿ, ವಿಶೇಷವಾಗಿ ಹತ್ತೊಂಬತ್ತನೇ ಮತ್ತು ಇಪ್ಪತ್ತನೇ ಶತಮಾನದ ಆರಂಭದಲ್ಲಿ, ‘ಗೇಮ್’ ಎಂದರೆ ಬೇಟೆಯಾಡಲು ಯೋಗ್ಯವಾದ ವನ್ಯಜೀವಿಗಳು ಅಥವಾ ಪ್ರಾಣಿಗಳು (ಉದಾಹರಣೆಗೆ ಸಿಂಹ, ಚಿರತೆ, ಆನೆ, ಜಿಂಕೆ ಇತ್ಯಾದಿ) ಎಂದರ್ಥವಾಗಿತ್ತು.
ರಾಜರು ಮತ್ತು ಬ್ರಿಟಿಷ್ ಅಧಿಕಾರಿಗಳು ವಿನೋದಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡುವುದನ್ನು ಒಂದು ಕ್ರೀಡೆ (Sport) ಎಂದು ಪರಿಗಣಿಸುತ್ತಿದ್ದರು. ಆ ಕ್ರೀಡೆಗೆ ಬಳಕೆಯಾಗುವ ಪ್ರಾಣಿಗಳನ್ನು ‘ಗೇಮ್’ ಎಂದು ಕರೆಯಲಾಗುತ್ತಿತ್ತು. ‘ರಿಸರ್ವ್’ (Reserve) ಎಂದರೇನು? ‘ರಿಸರ್ವ್’ ಎಂದರೆ ಕಾಯ್ದಿರಿಸಿದ ಅಥವಾ ಸುರಕ್ಷಿತವಾಗಿಟ್ಟ ಪ್ರದೇಶ.
ಇದನ್ನೂ ಓದಿ:Vishweshwar Bhat: ನೂತನ ಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾಗಿ ಶುಭ ಕೋರಿದ ವಿಶ್ವೇಶ್ವರ ಭಟ್
ಆರಂಭಿಕ ದಿನಗಳಲ್ಲಿ, ಶ್ರೀಮಂತರು ಮತ್ತು ಬ್ರಿಟಿಷ್ ಪ್ರಭುಗಳು ತಮ್ಮ ವೈಯಕ್ತಿಕ ಬೇಟೆಯ ಆನಂದಕ್ಕಾಗಿ ನಿರ್ದಿಷ್ಟ ಕಾಡುಗಳನ್ನು ಗುರುತಿಸಿ, ಅಲ್ಲಿ ಸಾಮಾನ್ಯ ಜನರು ಪ್ರವೇಶಿಸದಂತೆ ಅಥವಾ ಬೇಟೆಯಾಡದಂತೆ ಕಾಯ್ದಿರಿಸಿ (Reserved) ಇಡುತ್ತಿದ್ದರು. ಅಂದರೆ, ಭವಿಷ್ಯದ ಬೇಟೆಯ ಆಟಗಳಿಗಾಗಿ ಪ್ರಾಣಿಗಳನ್ನು ಸಂರಕ್ಷಿಸಿಡುವ ಜಾಗವೇ ‘ಗೇಮ್ ರಿಸರ್ವ್’ ಆಯಿತು. ಕಾಲಕ್ರಮೇಣ, ವನ್ಯಜೀವಿಗಳ ಸಂಖ್ಯೆ ತೀವ್ರವಾಗಿ ಕ್ಷೀಣಿಸಿದಾಗ ಈ ಪರಿಕಲ್ಪನೆ ಸಂಪೂರ್ಣವಾಗಿ ಬದಲಾಯಿತು. ಬೇಟೆಯಾಡಲು ಪ್ರಾಣಿಗಳು ಸದಾ ಲಭ್ಯವಿರಲಿ ಎಂಬ ಸ್ವಾರ್ಥಕ್ಕಾಗಿ ಇವುಗಳನ್ನು ಕಾಯ್ದಿರಿಸ ಲಾಗಿತ್ತು.
ಆಧುನಿಕ ಜಗತ್ತಿನಲ್ಲಿ, ಇವು ಪ್ರಾಣಿಗಳನ್ನು ಬೇಟೆಯಾಡುವುದಕ್ಕಲ್ಲ, ಬದಲಿಗೆ ಅವುಗಳನ್ನು ಸಂರಕ್ಷಿಸಲು (Conservation), ಸಂತತಿ ವೃದ್ಧಿಸಲು ಮತ್ತು ಪ್ರವಾಸೋದ್ಯಮಕ್ಕಾಗಿ (Safari) ಬಳಸಲಾಗುವ ಸುರಕ್ಷಿತ ವಲಯಗಳಾಗಿವೆ. ಭಾಷಾಶಾಸ್ತ್ರದ ಪ್ರಕಾರ ಹಳೆಯ ‘ಬೇಟೆಯ ಪ್ರಾಣಿ ಗಳನ್ನು ಕಾಯ್ದಿರಿಸುವ ಜಾಗ’ ಎಂಬ ಅರ್ಥದಿಂದ ಈ ಹೆಸರು ಬಂದಿದ್ದರೂ, ಇಂದಿನ ದಿನಗಳಲ್ಲಿ ಇದು ‘ವನ್ಯಜೀವಿಗಳ ಸುರಕ್ಷಿತ ಧಾಮ’ ಎಂಬ ಅತ್ಯಂತ ಸಕಾರಾತ್ಮಕ ಅರ್ಥದಲ್ಲಿ ಬಳಕೆಯಾಗು ತ್ತಿದೆ.
ದಕ್ಷಿಣ ಆಫ್ರಿಕಾ ಮತ್ತು ಪೂರ್ವ ಆಫ್ರಿಕಾದ ದೇಶಗಳಲ್ಲಿ (ಉದಾಹರಣೆಗೆ ಮಸಾಯಿ ಮಾರಾ, ಕ್ರುಗರ್) ಈ ಹೆಸರನ್ನು ಇಂದಿಗೂ ಹೆಚ್ಚಾಗಿ ಬಳಸಲಾಗುತ್ತದೆ. ಅಂದು ಬೇಟೆಗಾಗಿ ಇವುಗಳನ್ನು ಹುಡುಕಿಕೊಂಡು ಗೇಮ್ ರಿಸರ್ವ್‌ಗಳಿಗೆ ಹೋಗುತ್ತಿದ್ದರು. ಆದರೆ ಇಂದು, ಅದೇ ಗೇಮ್ ರಿಸರ್ವ್ ಗಳಲ್ಲಿ ಈ ಪ್ರಾಣಿಗಳನ್ನು ಕಣ್ಣಾರೆ ಕಂಡು ಕೆಮರಾದಲ್ಲಿ ಸೆರೆ ಹಿಡಿಯಲು (Photo Safari) ಪ್ರವಾಸಿ ಗರು ಜಗತ್ತಿನಾದ್ಯಂತ ಭೇಟಿ ನೀಡುತ್ತಾರೆ.
ಅಂದರೆ, ಬೇಟೆಯ ಜಾಗಗಳು ಈಗ ‘ಕೆಮರಾ ಬೇಟೆ’ಯ ತಾಣಗಳಾಗಿ ಮಾರ್ಪಟ್ಟಿವೆ. ಗೇಮ್ ರಿಸರ್ವ್ ಗಳು ಹೇಗೆ ಕಾರ್ಯನಿರ್ವಹಿಸುತ್ತವೆ? ಇವು ಕೇವಲ ಪ್ರಾಣಿಗಳನ್ನು ಕೂಡಿ ಹಾಕುವ ಜಾಗಗಳಲ್ಲ. ಪ್ರಾಣಿಗಳಿಗೆ ನೈಸರ್ಗಿಕವಾಗಿ ಸಿಗುವ ಆಹಾರ, ನೀರು ಮತ್ತು ವಲಸೆ ಹೋಗುವ ದಾರಿಗಳನ್ನು ಯಾವುದೇ ಮಾನವ ಹಸ್ತಕ್ಷೇಪವಿಲ್ಲದೇ ರಕ್ಷಿಸಲಾಗುತ್ತದೆ.
ಇಂದು ವನ್ಯಜೀವಿಗಳ ದೊಡ್ಡ ಶತ್ರುವೆಂದರೆ ಅಕ್ರಮ ಬೇಟೆಗಾರರು. ಖಡ್ಗಮೃಗದ ಕೊಂಬು, ಆನೆಯ ದಂತಗಳಿಗಾಗಿ ನಡೆಯುವ ಬೇಟೆಯನ್ನು ತಡೆಯಲು ಗೇಮ್ ರಿಸರ್ವ್‌ಗಳು ತಮ್ಮದೇ ಆದ ಆಧುನಿಕ ಶಸ್ತ್ರಸಜ್ಜಿತ ಕಾವಲು ಪಡೆಗಳನ್ನು ಹೊಂದಿರುತ್ತವೆ. ಸ್ಥಳೀಯ ಬುಡಕಟ್ಟು ಅಥವಾ ಗ್ರಾಮೀಣ ಜನರನ್ನು ಈ ರಿಸರ್ವ್‌ಗಳ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳಲಾಗುತ್ತದೆ.
ಪ್ರವಾಸೋದ್ಯಮದಿಂದ ಬರುವ ಆದಾಯದ ಒಂದು ಭಾಗವನ್ನು ಸ್ಥಳೀಯರ ಅಭಿವೃದ್ಧಿಗೆ ಬಳಸುವುದರಿಂದ, ಅವರು ಕೂಡ ಪ್ರಾಣಿಗಳ ರಕ್ಷಣೆಗೆ ಕೈಜೋಡಿಸುತ್ತಾರೆ. ಗೇಮ್ ರಿಸರ್ವ್‌ಗಳ ಬಗ್ಗೆ ಜಾಗತಿಕವಾಗಿ ಒಂದು ದೊಡ್ಡ ಚರ್ಚೆ ನಡೆಯುತ್ತಿರುತ್ತದೆ. ಆಫ್ರಿಕಾದ ಕೆಲವು ಖಾಸಗಿ ಗೇಮ್ ರಿಸರ್ವ್‌ಗಳಲ್ಲಿ ಇಂದಿಗೂ ‘ಟ್ರೋಫಿ ಹಂಟಿಂಗ್’ (ಕಾನೂನುಬದ್ಧ ಮತ್ತು ನಿಯಂತ್ರಿತ ಬೇಟೆ) ಗೆ ಅವಕಾಶವಿದೆ.
ವಯಸ್ಸಾದ ಅಥವಾ ಸಂತಾನೋತ್ಪತ್ತಿ ಸಾಮರ್ಥ್ಯ ಕಳೆದುಕೊಂಡ ಪ್ರಾಣಿಗಳನ್ನು ಬೇಟೆಯಾಡಲು ಶ್ರೀಮಂತ ವಿದೇಶಿ ಪ್ರವಾಸಿಗರಿಗೆ ಭಾರಿ ಮೊತ್ತದ ಶುಲ್ಕ ವಿಧಿಸಿ ಅನುಮತಿ ನೀಡಲಾಗುತ್ತದೆ. ಈ ಮೂಲಕ ಬರುವ ಲಕ್ಷಾಂತರ ಡಾಲರ್ ಹಣವನ್ನು ಇಡೀ ಕಾಡಿನ ಸಂರಕ್ಷಣೆ ಮತ್ತು ಉಳಿದ ಪ್ರಾಣಿ ಗಳ ಆರೈಕೆಗೆ ಬಳಸಲಾಗುತ್ತದೆ. ಪರಿಸರವಾದಿಗಳು ಮತ್ತು ಪ್ರಾಣಿ ಪ್ರೇಮಿಗಳು ಇದನ್ನು ಕಟುವಾಗಿ ವಿರೋಧಿಸುತ್ತಾರೆ. ವಿನೋದಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದನ್ನು ಯಾವುದೇ ರೂಪದಲ್ಲೂ ಒಪ್ಪಲು ಸಾಧ್ಯವಿಲ್ಲ ಎನ್ನುವುದು ಅವರ ವಾದ.