ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishweshwar Bhat Column: ಹವಾನ ಸಿಂಡ್ರೋಮ್‌ ಎಂದರೇನು ?

ನೀವು ‘ಹವಾನಾ ಸಿಂಡ್ರೋಮ್’ ಬಗ್ಗೆ ಕೇಳಿದ್ದೀರಾ? ಇದು ಇಪ್ಪತ್ತೊಂದನೇ ಶತಮಾನದ ಅತ್ಯಂತ ನಿಗೂಢ ರಾಜತಾಂತ್ರಿಕ ಮತ್ತು ವೈದ್ಯಕೀಯ ರಹಸ್ಯಗಳಲ್ಲಿ ಒಂದಾಗಿದೆ. ಇದು ಕೇವಲ ಒಂದು ಆರೋಗ್ಯ ಸಮಸ್ಯೆಯಾಗಿ ಉಳಿಯದೇ, ಅಮೆರಿಕ, ರಷ್ಯಾ ಮತ್ತು ಚೀನಾದಂಥ ಬಲಿಷ್ಠ ರಾಷ್ಟ್ರಗಳ ನಡುವಿನ ಶೀತಲ ಸಮರದ ಹೊಸ ಆಯಾಮವಾಗಿ ಮಾರ್ಪಟ್ಟಿದೆ.

ಸಂಪಾದಕರ ಸದ್ಯಶೋಧನೆ

ನೀವು ‘ಹವಾನಾ ಸಿಂಡ್ರೋಮ್’ ಬಗ್ಗೆ ಕೇಳಿದ್ದೀರಾ? ಇದು ಇಪ್ಪತ್ತೊಂದನೇ ಶತಮಾನದ ಅತ್ಯಂತ ನಿಗೂಢ ರಾಜತಾಂತ್ರಿಕ ಮತ್ತು ವೈದ್ಯಕೀಯ ರಹಸ್ಯಗಳಲ್ಲಿ ಒಂದಾಗಿದೆ. ಇದು ಕೇವಲ ಒಂದು ಆರೋಗ್ಯ ಸಮಸ್ಯೆಯಾಗಿ ಉಳಿಯದೇ, ಅಮೆರಿಕ, ರಷ್ಯಾ ಮತ್ತು ಚೀನಾದಂಥ ಬಲಿಷ್ಠ ರಾಷ್ಟ್ರಗಳ ನಡುವಿನ ಶೀತಲ ಸಮರದ ಹೊಸ ಆಯಾಮವಾಗಿ ಮಾರ್ಪಟ್ಟಿದೆ.

ಇದರ ಹೆಸರು ಕ್ಯೂಬಾದ ರಾಜಧಾನಿ ‘ಹವಾನಾ’ ನಗರದಿಂದ ಬಂದಿದೆ. 2016ರಲ್ಲಿ ಹವಾನಾ ದಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಚಿತ್ರವಾದ ದೈಹಿಕ ಲಕ್ಷಣಗಳನ್ನು ಅನುಭವಿಸಲು ಪ್ರಾರಂಭಿಸಿದರು. ಅಧಿಕಾರಿಗಳು ವರದಿ ಮಾಡಿದಂತೆ, ಅವರಿಗೆ ಇದ್ದಕ್ಕಿದ್ದಂತೆ ಕಿವಿ ಚುಚ್ಚುವಂಥ ತೀವ್ರವಾದ ಶಬ್ದ ಕೇಳಿಸುವುದು, ತಲೆಯಲ್ಲಿ ವಿಪರೀತ ಒತ್ತಡ ಅಥವಾ ಯಾವುದೋ ಅದೃಶ್ಯ ಕಿರಣಗಳು ತಮ್ಮನ್ನು ತಾಕಿದ ಅನುಭವವಾಗುತ್ತಿತ್ತು. ಅಂದಿನಿಂದ ಈ ರೋಗಲಕ್ಷಣಗಳನ್ನು ‘ಹವಾನಾ ಸಿಂಡ್ರೋಮ್’ ಎಂದು ಕರೆಯಲಾಗುತ್ತಿದೆ.

ಇದರ ಪ್ರಮುಖ ಲಕ್ಷಣಗಳೇನು? ಬಾಧಿತ ವ್ಯಕ್ತಿಗಳಲ್ಲಿ ತೀವ್ರವಾದ ಕರ್ಕಶ ಶಬ್ದ ಅಥವಾ ಗುಂಯ್ ಎಂಬ ಶಬ್ದ ಕೇಳಿಸುವುದು, ತಲೆ ಸುತ್ತು ಬರುವುದು ಮತ್ತು ನಡೆಯುವಾಗ ಸಮತೋಲನ ಕಳೆದು ಕೊಳ್ಳು‌ವುದು, ತೀವ್ರವಾದ ತಲೆನೋವು, ಮರೆವು (Memory Loss) ಮತ್ತು ಏಕಾಗ್ರತೆಯ ಕೊರತೆ ಕಾಣಿಸಿ ಕೊಳ್ಳುವುದು ಹಾಗೂ ವಿಪರೀತ ಆಯಾಸ ಮತ್ತು ನಿದ್ರೆ ಬರದೇ ಇರುವುದು. ಕೆಲವರಲ್ಲಿ ಮಿದುಳಿನ ಮೇಲೆ ಶಾಶ್ವತವಾದ ಹಾನಿಯಾದ ಲಕ್ಷಣಗಳು ಕಂಡುಬಂದಿವೆ ಎಂದು ಕೆಲವು ವೈದ್ಯಕೀಯ ವರದಿಗಳು ತಿಳಿಸಿವೆ.

ಇದನ್ನೂ ಓದಿ: Vishweshwar Bhat Column: ಯಾರು ಈ ಸದಾನಂದನ್‌ ಮಾಸ್ಟರ್‌ ?

ಹವಾನಾದಲ್ಲಿ ಆರಂಭವಾದ ಈ ಸಮಸ್ಯೆ ಕೇವಲ ಕ್ಯೂಬಾಗೆ ಸೀಮಿತವಾಗಲಿಲ್ಲ. ನಂತರದ ವರ್ಷಗಳಲ್ಲಿ ಇದು ಪ್ರಪಂಚದಾದ್ಯಂತ ಹರಡಿತು. 2018ರಲ್ಲಿ ಚೀನಾದ ಗುವಾಂಗ್ಝೌನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಅಧಿಕಾರಿಗಳಲ್ಲಿ ಇದೇ ಲಕ್ಷಣಗಳು ಕಂಡವು.

ಯುರೋಪಿನ ವಿವಿಧ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕದ ಗುಪ್ತಚರ ಅಧಿಕಾರಿಗಳು ( CIA ) ಈ ಸಮಸ್ಯೆಗೆ ಒಳಗಾದರು. 2021ರಲ್ಲಿ ದೆಹಲಿಗೆ ಭೇಟಿ ನೀಡಿದ್ದ ಅಮೆರಿಕದ ಅಧಿಕಾರಿಯೊಬ್ಬ ರಲ್ಲಿ ಹವಾನಾ ಸಿಂಡ್ರೋಮ್ ಲಕ್ಷಣಗಳು ಕಂಡುಬಂದಿದ್ದು ಭಾರತದಲ್ಲೂ ಚರ್ಚೆಗೆ ಕಾರಣ ವಾಗಿತ್ತು.

ಹವಾನಾ ಸಿಂಡ್ರೋಮ್‌ಗೆ ನಿಖರವಾದ ಕಾರಣವೇನು ಎಂಬ ಬಗ್ಗೆ ಇಂದಿಗೂ ಒಮ್ಮತದ ಅಭಿಪ್ರಾಯವಿಲ್ಲ. ಆದರೆ ಇದಕ್ಕೆ ಪ್ರಮುಖವಾಗಿ ಮೂರು ಸಿದ್ಧಾಂತಗಳನ್ನು ನೀಡಲಾಗಿದೆ- ಮೊದಲನೆಯದು, ಮೈಕ್ರೋವೇವ್ ಅಥವಾ ಸೋನಿಕ್ ಅಟ್ಯಾಕ್ (Directed Energy Weapons). ಅಮೆರಿಕದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಪ್ರಕಾರ, ಈ ಲಕ್ಷಣಗಳಿಗೆ ‘ನಿರ್ದೇಶಿತ ಮೈಕ್ರೋ ವೇವ್ ಶಕ್ತಿ’ ಕಾರಣವಾಗಿರಬಹುದು. ‌

ಶತ್ರುದೇಶಗಳು ರಹಸ್ಯವಾಗಿ ರೇಡಿಯೋ ಫ್ರೀಕ್ವೆನ್ಸಿ ಶಕ್ತಿಯನ್ನು ಬಳಸಿ ಅಧಿಕಾರಿಗಳ ಮಿದುಳಿನ ಮೇಲೆ ದಾಳಿ ಮಾಡುತ್ತಿರಬಹುದು ಎಂಬುದು ಬಲವಾದ ಶಂಕೆ. ಎರಡನೆಯದು, ಸಾಮೂಹಿಕ ಹಿಸ್ಟೀರಿಯಾ (Mass Psychogenic Illness). ಕೆಲವು ಮನೋವಿಜ್ಞಾನಿಗಳ ಪ್ರಕಾರ, ಇದು ದೈಹಿಕ ದಾಳಿಯಲ್ಲ.

ಬದಲಿಗೆ, ಅತಿಯಾದ ಒತ್ತಡದ ವಾತಾವರಣದಲ್ಲಿ ಕೆಲಸ ಮಾಡುವ ಅಧಿಕಾರಿಗಳಲ್ಲಿ ಕಂಡು ಬರುವ ಒಂದು ರೀತಿಯ ಮಾನಸಿಕ ಭ್ರಮೆ ಅಥವಾ ‘ಸೈಕೋಜೆನಿಕ್’ ಕಾಯಿಲೆ. ಒಬ್ಬರಿಗೆ ಲಕ್ಷಣಗಳು ಕಂಡಾಗ, ಭಯದಿಂದ ಇತರರಿಗೂ ಅಂಥದ್ದೇ ಅನುಭವವಾಗುವುದು ಇದರ ಲಕ್ಷಣ. ಮೂರನೆ ಯದು, ಕಣಜಗಳ ಸದ್ದು.

ಆರಂಭಿಕ ತನಿಖೆಯಲ್ಲಿ ಹವಾನಾದಲ್ಲಿ ಕೇಳಿಬಂದ ಸದ್ದು ಒಂದು ವಿಧದ ಕಣಜಗಳ ಕೂಗು ಇರಬಹುದು ಎಂಬ ವಾದವೂ ಕೇಳಿಬಂದಿತ್ತು. ಆದರೆ ಇದು ತೀವ್ರವಾದ ದೈಹಿಕ ಹಾನಿಯನ್ನು ವಿವರಿಸಲು ವಿಫಲವಾಯಿತು. ಹವಾನಾ ಸಿಂಡ್ರೋಮ್ ಅಮೆರಿಕ ಮತ್ತು ರಷ್ಯಾದ ನಡುವಿನ ರಾಜತಾಂತ್ರಿಕ ಬಿಕ್ಕಟ್ಟನ್ನು ಹೆಚ್ಚಿಸಿತು.

ಅಮೆರಿಕದ ಗುಪ್ತಚರ ಸಂಸ್ಥೆಗಳು ರಷ್ಯಾದ ‘ಜಿಆರ್ʼಯು’ ಎಂಬ ಮಿಲಿಟರಿ ಗುಪ್ತಚರ ಘಟಕವು ಈ ‘ಅದೃಶ್ಯ ಅಸ್ತ್ರ’ಗಳನ್ನು ಬಳಸುತ್ತಿದೆ ಎಂದು ಆರೋಪಿಸಿದವು. ಆದರೆ ರಷ್ಯಾ ಈ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿತು.

ವಿಶ್ವೇಶ್ವರ ಭಟ್‌

View all posts by this author