ಸಂಪಾದಕರ ಸದ್ಯಶೋಧನೆ
ಇತ್ತೀಚಿನ ವರ್ಷಗಳಲ್ಲಿ ಜನರಿಗೆ ನೆಟ್ ವರ್ಕಿಂಗ್ ಬಹಳ ಚಾಲ್ತಿಯಲ್ಲಿರುವ ಪದ. ಅನೇಕರಿಗೆ ನೆಟ್ ವರ್ಕಿಂಗ್ ಬಗ್ಗೆ ಅಪಾರ ಆಸಕ್ತಿ. ನೆಟ್ ವರ್ಕಿಂಗ್ ಎನ್ನುವುದು ಕೇವಲ ನಾವು ಎಷ್ಟು ಜನರನ್ನು ಭೇಟಿಯಾಗುತ್ತೇವೆ ಎನ್ನುವುದಲ್ಲ, ಬದಲಿಗೆ ಎಷ್ಟು ಜನರಿಗೆ ನಮ್ಮ ಬಗ್ಗೆ ಮತ್ತು ನಮ್ಮ ಸಾಮರ್ಥ್ಯದ ಬಗ್ಗೆ ತಿಳಿದಿದೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ.
Networking is not about who you know, it's about who knows you ಎಂಬ ಈ ಜನಪ್ರಿಯ ಮಾತನ್ನು ಅರ್ಥ ಮಾಡಿಕೊಂಡವರು ಕಮ್ಮಿ. ನಾವು ನೂರಾರು ಗಣ್ಯ ವ್ಯಕ್ತಿಗಳ ಫೋನ್ ನಂಬರ್ ಹೊಂದಿರಬಹುದು ಅಥವಾ ಅವರೊಂದಿಗೆ ಫೋಟೋ ತೆಗೆಸಿಕೊಂಡಿರ ಬಹುದು.
ಆದರೆ, ನಮಗೆ ಯಾವುದಾದರೂ ತುರ್ತು ಕೆಲಸ ಬಂದಾಗ ಅಥವಾ ಒಂದು ಅವಕಾಶದ ಅಗತ್ಯವಿದ್ದಾಗ ಅವರು ನಮ್ಮನ್ನು ನೆನಪಿಸಿಕೊಳ್ಳುತ್ತಾರೆಯೇ? ಎಂಬುದು ಮುಖ್ಯ. ನಮಗೆ ಯಾರು ಗೊತ್ತು ಎನ್ನುವುದಕ್ಕಿಂತ, ಅವರಿಗೆ ನಾವು ಯಾರು ಎಂದು ತಿಳಿದಿದೆಯೇ? ಎನ್ನುವುದು ನೆಟ್ ವರ್ಕಿಂಗ್‌ನ ನಿಜವಾದ ಯಶಸ್ಸು.
ಇದನ್ನೂ ಓದಿ: Vishweshwar Bhat Column: ಲಗೇಜ್ ನಿರ್ವಹಣೆ
ನೀವು ಒಂದು ಕ್ಷೇತ್ರದಲ್ಲಿ ನೈಪುಣ್ಯ ಹೊಂದಿದ್ದೀರಿ ಎಂದು ಜನರಿಗೆ ತಿಳಿದಾಗ ಮಾತ್ರ ಅವರು ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ. ಉದಾಹರಣೆಗೆ, ನೀವು ಒಬ್ಬ ಉತ್ತಮ ಗ್ರಾಫಿಕ್ ಡಿಸೈನರ್ ಆಗಿದ್ದರೆ, ಮಾರುಕಟ್ಟೆಯಲ್ಲಿ ಯಾರಿಗಾದರೂ ಡಿಸೈನ್ ಕೆಲಸ ಬೇಕಾ ದಾಗ ತಕ್ಷಣ ನಿಮ್ಮ ಹೆಸರು ಅವರ ನೆನಪಿಗೆ ಬರಬೇಕು.
ನಿಮ್ಮ ಕೆಲಸದ ಗುಣಮಟ್ಟ ಮತ್ತು ನಿಮ್ಮ ವ್ಯಕ್ತಿತ್ವವೇ ನಿಮ್ಮನ್ನು ಇತರರಿಗೆ ಪರಿಚಯಿಸು ತ್ತದೆ. ಜನರು ನಮ್ಮನ್ನು ನೆನಪಿಟ್ಟುಕೊಳ್ಳಬೇಕಾದರೆ ನಾವು ಅವರ ಜೀವನಕ್ಕೆ ಅಥವಾ ಕೆಲಸಕ್ಕೆ ಏನಾದರೂ ಮೌಲ್ಯವನ್ನು ನೀಡಬೇಕು. ಸುಮ್ಮನೆ ಹಾಯ, ಹಲೋ ಹೇಳುವು ದರಿಂದ ನೆಟ್ ವರ್ಕಿಂಗ್ ಬೆಳೆಯುವುದಿಲ್ಲ.
ಬದಲಿಗೆ ಇತರರಿಗೆ ಸಹಾಯ ಮಾಡುವುದು, ನಿಮ್ಮ ಜ್ಞಾನವನ್ನು ಹಂಚಿಕೊಳ್ಳುವುದು, ಸರಿಯಾದ ಸಮಯದಲ್ಲಿ ಸರಿಯಾದ ಸಲಹೆ ನೀಡುವುದು.. ಈ ರೀತಿ ನೀವು ಇತರರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆಯಬಹುದು. ‘ಯಾರು ನಿಮ್ಮನ್ನು ಬಲ್ಲರು’ ಎಂಬುದು ನಿಮ್ಮ ವಿಶ್ವಾಸಾರ್ಹತೆ ಮೇಲೆ ನಿಂತಿದೆ.
ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮತ್ತು ನಿಮ್ಮ ಮಾತು ಉಳಿಸಿಕೊಂಡರೆ, ನಿಮ್ಮ ನೆಟ್‌ವರ್ಕ್‌ನಲ್ಲಿರುವವರು ನಿಮ್ಮ ಹೆಸರನ್ನು ಇತರರಿಗೆ ಶಿಫಾರಸು ಮಾಡುತ್ತಾರೆ. ಒಬ್ಬರಿಂದ ಒಬ್ಬರಿಗೆ ಹರಡುವ ನಿಮ್ಮ ಒಳ್ಳೆಯ ಹೆಸರೇ ಅತ್ಯಂತ ದೊಡ್ಡ ನೆಟ್ ವರ್ಕಿಂಗ್ ಶಕ್ತಿ.
‘ಪರಿಚಯಗಳ ಸಂಗ್ರಹಕ್ಕಿಂತ ಪ್ರಭಾವದ ಸೃಷ್ಟಿ’ ಮುಖ್ಯ. ನೀವು ಯಾರನ್ನೋ ಬಲ್ಲೆ ಎಂದು ಹೆಮ್ಮೆಪಡುವುದಕ್ಕಿಂತ, ಸಮಾಜ ಅಥವಾ ನಿಮ್ಮ ವೃತ್ತಿಕ್ಷೇತ್ರ ನಿಮ್ಮನ್ನು ಒಬ್ಬ ದಕ್ಷ ಮತ್ತು ನಂಬಿಕಸ್ಥ ವ್ಯಕ್ತಿಯಾಗಿ ಗುರುತಿಸುವಂತೆ ಮಾಡುವುದೇ ನಿಜವಾದ ನೆಟ್ ವರ್ಕಿಂಗ್. ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಬೇಕಾದರೆ, ನೀವು ಯಾರೆಂದು ಜಗತ್ತಿಗೆ ತಿಳಿದಿರಬೇಕು.
ನಮ್ಮ ಫೋನ್‌ನಲ್ಲಿ ಸಾವಿರಾರು ಕಾಂಟ್ಯಾಕ್ಟ್ ಗಳಿರಬಹುದು, ಆದರೆ ಸಂಕಷ್ಟದ ಸಮಯ ದಲ್ಲಿ ಅಥವಾ ಹೊಸ ಉದ್ಯಮ ಆರಂಭಿಸುವಾಗ ಎಷ್ಟು ಜನ ನಮಗಾಗಿ ನಿಲ್ಲುತ್ತಾರೆ ಎಂಬುದು ಮುಖ್ಯ. ಸಾವಿರ ಜನರಿಗೆ ನಿಮ್ಮ ಮುಖ ತಿಳಿದಿರುವುದಕ್ಕಿಂತ, ಹತ್ತು ಜನರಿಗೆ ನಿಮ್ಮ ಶಕ್ತಿ ಮತ್ತು ಬದ್ಧತೆ ತಿಳಿದಿರುವುದು ಹೆಚ್ಚು ಪ್ರಯೋಜನಕಾರಿ.
ಬಲವಾದ ನೆಟ್ ವರ್ಕಿಂಗ್ ಎಂದರೆ ಸಂಖ್ಯೆಯನ್ನು ಹೆಚ್ಚಿಸುವುದಲ್ಲ, ಬದಲಿಗೆ ಗಾಢವಾದ ಸಂಬಂಧಗಳನ್ನು ಬೆಳೆಸುವುದು. ಯಾರೋ ಒಬ್ಬರು ಇನ್ನೊಬ್ಬರ ಮುಂದೆ ನಿಮ್ಮ ಬಗ್ಗೆ ಮಾತನಾಡುವಾಗ,‘ಅವರು ಈ ಕೆಲಸಕ್ಕೆ ಅತ್ಯಂತ ಸೂಕ್ತ ವ್ಯಕ್ತಿ’ ಎಂದು ಹೇಳಿದರೆ, ಅದು ನೀವು ಗಳಿಸಿದ ಅತಿದೊಡ್ಡ ಆಸ್ತಿ. ನೀವು ಇಲ್ಲದಿದ್ದಾಗಲೂ ನಿಮ್ಮ ಪರವಾಗಿ ನಿಮ್ಮ ಕೆಲಸ ಅಥವಾ ವ್ಯಕ್ತಿತ್ವ ಮಾತನಾಡಬೇಕು.
’Who knows you’ ಎಂಬುದು ಇಲ್ಲಿ ನಿಮ್ಮ ಖ್ಯಾತಿ ಆಗಿ ಬದಲಾಗುತ್ತದೆ. ಬಲವಾದ ನೆಟ್ ವರ್ಕ್ ಕೇವಲ ಪಡೆಯುವುದರ ಬಗ್ಗೆ ಇರುವುದಿಲ್ಲ, ಅದು ಕೊಡುವುದರ ಬಗ್ಗೆಯೂ ಇರುತ್ತದೆ. ಇತರರಿಗೆ ಸಹಾಯ ಮಾಡುವ ಗುಣ ನಿಮ್ಮಲ್ಲಿದ್ದರೆ, ಜನರು ನಿಮ್ಮನ್ನು ಕೃತಜ್ಞತೆ ಯಿಂದ ನೆನಪಿಟ್ಟುಕೊಳ್ಳುತ್ತಾರೆ. ಜನರು ತಮ್ಮನ್ನು ಯಾರು ಬೆಳೆಸಿದರೋ ಅಥವಾ ಯಾರಿಂದ ತಾವು ಉಪಕೃತರಾದರೋ ಅವರನ್ನು ಎಂದಿಗೂ ಮರೆಯುವುದಿಲ್ಲ.
ನಿಮ್ಮ ಜ್ಞಾನ ನಿಮ್ಮನ್ನು ದಾರಿಯವರೆಗೆ ಕರೆದುಕೊಂಡು ಹೋದರೆ, ನಿಮ್ಮನ್ನು ಬಲ್ಲವರು ಮತ್ತು ನಿಮ್ಮನ್ನು ಗೌರವಿಸುವವರು ನಿಮ್ಮನ್ನು ಗುರಿಯವರೆಗೆ ತಲುಪಿಸುತ್ತಾರೆ. ನಿಮ್ಮ ನೆಟ್‌ವರ್ಕ್ ನಿಮ್ಮ ‘ನೆಟ್ ವರ್ತ್’ ಇದ್ದಂತೆ!