ಅಶ್ವತ್ಥಕಟ್ಟೆ
ಯಾವುದೇ ಸರಕಾರವು ಸುಭದ್ರ ಎನಿಸಿಕೊಳ್ಳಬೇಕೆಂದರೆ ಶಾಸಕರ ಸಂಖ್ಯಾಬಲವೆಷ್ಟು ಮುಖ್ಯವೋ, ಪಕ್ಷದೊಳಗಿನ ವಾತಾವರಣವೂ ಅಷ್ಟೇ ಮುಖ್ಯವಾಗುತ್ತದೆ. ಆಂತರಿಕ ಕಿತ್ತಾಟ ಶುರುವಾದರೆ ಸುಭದ್ರ ಸರಕಾರ ಅಥವಾ ಜನಪರ ಸರಕಾರವಾಗಿ ಹೊರ ಹೊಮ್ಮುವುದು ತೀರಾ ಕಷ್ಟ. ಭಾರಿ ಬಹುಮತಕ್ಕಿಂತ ಸರಳ ಬಹುಮತವಿದ್ದರೂ, ಪಕ್ಷದೊಳಗೆ ಎಲ್ಲವೂ ‘ಸರಿಯಾಗಿದ್ದರೆ’ ಸುಗಮ ಸರಕಾರ ಸಾಧ್ಯ ಎನ್ನುವುದಕ್ಕೆ ಹತ್ತಾರು ಉದಾಹರಣೆಗಳಿವೆ.
ಉದಾಹರಣೆಗೆ 2013-18ರವರೆಗೆ ಕರ್ನಾಟಕದಲ್ಲಿದ್ದ ಕಾಂಗ್ರೆಸ್ ಸರಕಾರದಲ್ಲಿ ಈಗಿರುವಷ್ಟು ಶಾಸಕರ ಸಂಖ್ಯಾಬಲವಿರಲಿಲ್ಲ. ಆದರೆ ಅಂದು ಪಕ್ಷದಲ್ಲಿ ಯಾವುದೇ ಆಂತರಿಕ ಸಂಘರ್ಷವಿಲ್ಲ ದಿದ್ದುದರಿಂದ ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವುದಷ್ಟೇ ಅಲ್ಲದೇ, ಹತ್ತಾರು ಜನಪರ ಯೋಜನೆಗಳನ್ನು ನೀಡಿದರು.
ಆದರೆ ಅದಾದ ಬಳಿಕ ಬಂದ ಸಮ್ಮಿಶ್ರ ಸರಕಾರ, ಆಪರೇಷನ್ ಕಮಲದ ಮೂಲಕ ಅಧಿಕಾರದ ಗದ್ದುಗೆ ಏರಿದ ಬಿಜೆಪಿ ಸರಕಾರ ತಮ್ಮ ಆಡಳಿತಾವಧಿಯಲ್ಲಿ ಅಭಿವೃದ್ಧಿ ಯೋಜನೆ, ಸರಕಾರದ ಘೋಷಣೆಗಳಿಗಿಂತ ರಾಜಕೀಯ ಕಾರಣಕ್ಕೆ ಹೆಚ್ಚು ಸದ್ದು ಮಾಡಿದ್ದವು ಎನ್ನುವುದು ವಾಸ್ತವ.
ಸಮ್ಮಿಶ್ರ ಸರಕಾರ ಹಾಗೂ ಬಿಜೆಪಿ ಸರಕಾರದಲ್ಲಿದ್ದ ಗೊಂದಲಗಳಿಗೆ ರೋಸಿಯೇ, 2023ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಬಹುಮತ ನೀಡಿದ್ದರು ಮತದಾರರು. ಆದರೆ ಸರಕಾರವು ಎರಡೂವರೆ ವರ್ಷ ಪೂರೈಸಿದ ದಿನದಿಂದ ಕರ್ನಾಟಕ ಕಾಂಗ್ರೆಸ್‌ನಲ್ಲಿ ಶುರುವಾಗಿರುವ ನಾಯಕತ್ವ ಗೊಂದಲಕ್ಕೆ ಈಗಲೂ ಕೊನೆಯಿಲ್ಲವಾಗಿದ್ದು ಅದು ‘ನಾಳೆ ಬಾ’ ಕಥೆಯಾಗಿದೆ.
ಇದನ್ನೂ ಓದಿ: Ranjith H Ashwath Column: ಶಿಕ್ಷಣದಲ್ಲಿ ಮಾತೃಭಾಷೆ ಕಡ್ಡಾಯ ನಿಜಕ್ಕೂ ಸಾಧ್ಯವೇ ?
ಈ ಗೊಂದಲ ಶುರುವಾದ ಆರಂಭದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ‘ಪಕ್ಷದ ಹೈಕಮಾಂಡ್‌ನ ತೀರ್ಮಾನಕ್ಕೆ ಬದ್ಧ’ ಎನ್ನುವ ಸ್ಪಷ್ಟನೆ ನೀಡಿದ್ದರೂ, ಗೊಂದಲ ಮುಂದುವರಿಯಲು ಹೈಕಮಾಂಡ್‌ನ ವಿಳಂಬ ಧೋರಣೆಯೇ ಕಾರಣ ಎಂದರೆ ತಪ್ಪಾಗುವುದಿಲ್ಲ.
2023ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದ ಡಿಕೆಶಿ ಹಾಗೂ ಸಿದ್ದರಾಮಯ್ಯ ಇಬ್ಬರೂ ತಮ್ಮ ತಮ್ಮ ವಾದವನ್ನು ಈಗಾಗಲೇ ಮಂಡಿಸಿ ಆಗಿದೆ. ಸಿದ್ದರಾಮಯ್ಯ ಅವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ‘ಹೈಕಮಾಂಡ್ ಹೇಳುವ ತನಕ ನಾನೇ ಮುಖ್ಯ ಮಂತ್ರಿ’ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಇಬ್ಬರ ವಾದ, ಇತರೆ ನಾಯಕರಿಂದ ವರದಿ ಪಡೆದು ಕೊಂಡಿರುವ ಪಕ್ಷದ ಹೈಕಮಾಂಡ್ ಈ ವಿಷಯದಲ್ಲಿ ವಹಿಸಿರುವ ದಿವ್ಯಮೌನವೇ ಪಕ್ಷ ದೊಳಗಿನ ಗೊಂದಲವು ದಿನದಿಂದ ದಿನಕ್ಕೆ ದೊಡ್ಡದಾಗಲು ಕಾರಣವಾಗುತ್ತಿದೆ.
ಒಂದೆಡೆ ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನು ಎದುರು ಹಾಕಿಕೊಳ್ಳಲಾಗದೇ, ಡಿ.ಕೆ.ಶಿವಕುಮಾರ್ ಅವರನ್ನು ಒಪ್ಪಿಸಲಾಗದೇ ಅಡಕತ್ತರಿಯಲ್ಲಿ ಸಿಲುಕಿರುವ ಹೈಕಮಾಂಡ್ ನಾಯಕರು ಇದೀಗ ಇಡೀ ಪ್ರಹಸನವನ್ನು ರಾಹುಲ್ ಗಾಂಧಿ ಅವರ ತಲೆ ಮೇಲೆ ಹಾಕಿ ಕೈತೊಳೆದು ಕೊಂಡಿದ್ದಾರೆ. ಈ ಹಿಂದೆ ನಾಯಕತ್ವ ಬದಲಾವಣೆಗೆ ಕೈಹಾಕಿ ಹಲವು ರಾಜ್ಯದಲ್ಲಿ ಕೈಸುಟ್ಟು ಕೊಂಡಿರುವುದರಿಂದ ಕರ್ನಾಟಕದಲ್ಲಿಯೂ ಅಂಥದೇ ರಿಸ್ಕ್ ತೆಗೆದುಕೊಳ್ಳಲು ರಾಹುಲ್ ಹಿಂದೇಟು ಹಾಕುತ್ತಿದ್ದಾರೆ.
ಇನ್ನುಳಿದ ಆರು ತಿಂಗಳಲ್ಲಿ ನೆರೆರಾಜ್ಯ ಕೇರಳ ಸೇರಿ ಪಂಚರಾಜ್ಯದಲ್ಲಿ ಚುನಾವಣೆ ನಡೆಯುತ್ತಿದೆ. ಜತೆಗೆ ಕರ್ನಾಟಕದಲ್ಲಿಯೂ ಸ್ಥಳೀಯ ಸಂಸ್ಥೆ ಚುನಾವಣೆಯಿದೆ. ಹೀಗಿರುವಾಗ, ಅಹಿಂದ ನಾಯಕ ಸಿದ್ದರಾಮಯ್ಯ ಅವರಿಂದ ಸಿಎಂ ಸ್ಥಾನ ಹಿಂಪಡೆದರೆ, ಈ ಐದು ರಾಜ್ಯಗಳ ಚುನಾವಣೆ ಮೇಲೆ ಹೊಡೆತ ಬೀಳುತ್ತದೆ ಎನ್ನುವ ಆತಂಕದಲ್ಲಿದ್ದಾರೆ. ಹಾಗೆಂದು ಡಿ.ಕೆ.ಶಿವಕುಮಾರ್ ಅವರಿಗೆ ‘ಸದ್ಯಕ್ಕೆ ನಾಯಕತ್ವ ಬದಲಾವಣೆಯಿಲ್ಲ’ ಎನ್ನುವ ಸ್ಪಷ್ಟನೆ ನೀಡಿದರೆ, ಡಿಕೆಶಿ ‘ಪರ್ಯಾಯ’ ಆಲೋಚನೆ ಮಾಡಬಹುದು ಎನ್ನುವ ಆತಂಕ ರಾಹುಲ್ ಗಾಂಧಿಯವರಿಗಿದೆ.
ಆ ಕಾರಣಕ್ಕೆ, ಕರ್ನಾಟಕದ ರಾಜಕೀಯ ವಿಷಯವು ಮುನ್ನೆಲೆಗೆ ಬಂದಾಗಲೆಲ್ಲ ಅವರು ‘ಅಂತರ’ ಕಾಯ್ದುಕೊಳ್ಳುತ್ತಿದ್ದಾರೆ. ತಮಿಳುನಾಡಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ್ದ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದ ಡಿ.ಕೆ.ಶಿವಕುಮಾರ್ ನಾಯಕತ್ವ ಬದಲಾವಣೆ ಬಗ್ಗೆ ಸ್ಪಷ್ಟನೆ ಕೇಳಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾ ರಚನೆಗೆ ಮನವಿ ಮಾಡಿದ್ದರು.
ಇಬ್ಬರ ಮನವಿಯನ್ನೂ ತಳ್ಳಿ ಹಾಕಲು ಸಾಧ್ಯವಾಗದೇ ‘ಶೀಘ್ರವಾಗಿ ದೆಹಲಿಯಲ್ಲಿ ಭೇಟಿಯಾ ಗೋಣ’ ಎಂದು ಹೇಳಿ ಬೀಸುವ ದೊಣ್ಣೆಯಿಂದ ಪಾರಾಗಿದ್ದರು ರಾಹುಲ್. ಆದರೆ ಡಿಕೆಶಿ ಅಸ್ಸಾಂ ಚುನಾವಣಾ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದ ವೇಳೆ, ಕರ್ನಾಟಕದ ವಿಷಯ ಪ್ರಸ್ತಾ ಪಿಸಲು ಸಜ್ಜಾಗಿದ್ದರು. ಈ ಕಾರಣಕ್ಕಾಗಿಯೇ ರಾಹುಲ್ ಗಾಂ ಅವರು ಅಸ್ಸಾಂ ಚುನಾವಣಾ ಸಭೆಯಿಂದಲೂ ಅರ್ಧಕ್ಕೆ ನಿರ್ಗಮಿಸಿದ್ದಾರೆ ಎನ್ನುವ ಮಾತುಗಳೂ ಇವೆ.
ಡಿ.ಕೆ.ಶಿವಕುಮಾರ್ ಈ ತಿಂಗಳಲ್ಲಿಯೇ ಎಲ್ಲವೂ ಇತ್ಯರ್ಥವಾಗಬೇಕು ಎನ್ನುವುದಕ್ಕೆ ಕಾರಣವಿದೆ. ಒಂದು ವೇಳೆ ಸಿದ್ದರಾಮಯ್ಯ ಅವರು ಬಜೆಟ್-ಪೂರ್ವ ಸಭೆಗಳನ್ನು ಆರಂಭಿಸಿದರೆ ಅಲ್ಲಿಗೆ ನಾಯಕತ್ವ ಬದಲಾವಣೆಯ ಮಾತಿಗೆ ಪೂರ್ಣವಿರಾಮ ಬೀಳಲಿದೆ. ಇನ್ನು ಬಜೆಟ್ ಮುಗಿದ ಬಳಿಕ ಕೇರಳ ಚುನಾವಣೆ, ಅದಾದ ಬಳಿಕ ಸ್ಥಳೀಯ ಸಂಸ್ಥೆ ಚುನಾವಣೆ, ನವೆಂಬರ್‌ನಲ್ಲಿ ವಿಧಾನಪರಿಷತ್ ಚುನಾವಣೆಯ ಕಾರಣಕ್ಕೆ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ. ಆದ್ದರಿಂದ ಆಗುವುದೇ ನಿದ್ದರೂ ಈಗಲೇ ಆಗಬೇಕು. ಇಲ್ಲದಿದ್ದರೆ ಇನ್ನೊಂದು ವರ್ಷ ಸಾಧ್ಯವಿಲ್ಲ ಎನ್ನುವುದು ಖಚಿತ ವಾಗಿದೆ.
ಹಾಗೆ ನೋಡಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಲಿ, ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಅವರಾಗಲೀ ತಮ್ಮ ತಮ್ಮ ರಾಜಕೀಯ ಹಿತಾಸಕ್ತಿಗೆ ತಮ್ಮದೇ ಆದ ತಂತ್ರಗಾರಿಕೆ ಮಾಡುತ್ತಿದ್ದಾರೆ. ಆದರೆ ಇಬ್ಬರು ಬಲಿಷ್ಠ ನಾಯಕರ ನಡುವೆ ನಡೆಯುತ್ತಿರುವ ಈ ಹಗ್ಗಜಗ್ಗಾಟ ಬಹಿರಂಗಗೊಂಡು ತಿಂಗಳು ಕಳೆದರೂ, ‘ನೋಡೋಣ, ಮಾಡೋಣ’ ಎನ್ನುವ ಮನಸ್ಥಿತಿಗೆ ಹೈಕಮಾಂಡ್ ಜಾರಿರುವುದು ಹಲವು ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗುತ್ತಿದೆ.
ಮೊದಲೇ ಹೇಳಿದಂತೆ, ಇಬ್ಬರಲ್ಲಿ ಯಾರಿಗೆ ನೋವಾದರೂ ಅದರ ಹೊಡೆತ ಸುಭದ್ರವಾಗಿರುವ ಸರಕಾರದ ಮೇಲೆ ಬೀಳಲಿದೆ ಎನ್ನುವ ಆತಂಕ ಒಂದೆಡೆಯಾದರೆ, ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯಲ್ಲಿ ಯಾರಿರಬೇಕೆಂಬ ವಿಷಯದಲ್ಲಿ ಸ್ವತಃ ಹೈಕಮಾಂಡ್ ನಾಯಕರಲ್ಲಿಯೇ ಭಿನ್ನರಾಗ ವಿದೆ. ಈ ಭಿನ್ನತೆ ಸರಿಹೋಗುವ ತನಕ ಯಾವುದೇ ತೀರ್ಮಾನ ಕೈಗೊಂಡರೂ ಅದು ಅಪಾಯದ ಕೂಪವಾಗಿ ಪರಿಣಮಿಸುವುದು ನಿಶ್ಚಿತ ಎನ್ನುವ ಅರಿವು ರಾಹುಲ್ ಗಾಂಧಿ ಅವರಿಗೆ ಇದೆ.
ಇದರೊಂದಿಗೆ ಕಾಂಗ್ರೆಸ್ ಪಾಲಿಗೆ ಉಳಿದಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕ ಪ್ರಮುಖ ರಾಜ್ಯ ವಾಗಿರುವುದರಿಂದ ಇಲ್ಲಿಯೂ ಅದನ್ನು ಹಾಳುಮಾಡಿಕೊಳ್ಳುವುದು ಬೇಡ ಎನ್ನುವ ಆಲೋಚನೆ ರಾಹುಲ್ ಗಾಂಧಿ ಅವರಿಗೆ ಇದೆ.
ಇದಿಷ್ಟೇ ಅಲ್ಲದೆ, ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ಹುದ್ದೆಯಿಂದ ಕೆಳಗಿಳಿಸಿದರೆ ಆಗಬಹುದಾದ ಅನಾಹುತ, ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬೀಳುವ ಹೊಡೆತ ಹಾಗೂ 2028ರ ವಿಧಾನಸಭಾ ಚುನಾವಣೆಯಲ್ಲಿ ಬದಲಾಗಬಹುದಾದ ರಾಜಕೀಯ ಲೆಕ್ಕಾಚಾರ ಗಳನ್ನು ಗಮನದಲ್ಲಿರಿಸಿಕೊಂಡೇ ಎಚ್ಚರಿಕೆಯ ಹೆಜ್ಜೆಯಿಡುವ ತೀರ್ಮಾನಕ್ಕೆ ರಾಹುಲ್ ಗಾಂಧಿ ಬಂದಿದ್ದಾರೆ.
ಹಾಗೆಂದ ಮಾತ್ರಕ್ಕೆ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಲೇಬಾರದು ಎನ್ನುವ ತೀರ್ಮಾನ ರಾಹುಲ್ ಮನಸ್ಸಿನಲ್ಲಿಲ್ಲ. ಆದರೆ ಸಿದ್ದರಾಮಯ್ಯ ಬಳಿಯಿರುವ ಈ ಹುದ್ದೆ ಯನ್ನು ಅವರ ವಿರೋಧ ಕಟ್ಟಿಕೊಂಡು ವರ್ಗಾಯಿಸುವ ಪರಿಸ್ಥಿತಿಯಲ್ಲಿ ಹೈಕಮಾಂಡ್ ಇಲ್ಲ. ಈ ಮಾತನ್ನು ‘ಕಡ್ಡಿ ಮುರಿದಂತೆ’ ಡಿ.ಕೆ.ಶಿವಕುಮಾರ್ ಅವರಿಗೆ ಹೇಳಲು ಸಾಧ್ಯವಾಗದಂಥ ಇಕ್ಕಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಸಿಲುಕಿದೆ.
ಈ ಕಾರಣಕ್ಕಾಗಿಯೇ, ಕರ್ನಾಟಕದ ನಾಯಕತ್ವದ ಗೊಂದಲ ಮುನ್ನೆಲೆಗೆ ಬಂದಾಗಲೆಲ್ಲ, ಒಂದಿಲ್ಲೊಂದು ಕಾರಣ ನೀಡಿ ಸಮಯವನ್ನು ಪಡೆಯುವ ‘ಸೇಫ್ ಗೇಮ್’ ಅನ್ನು ಹೈಕಮಾಂಡ್ ಆಡುತ್ತಿದೆ. ಇನ್ನು ಮುಖ್ಯಮಂತ್ರಿ ಗಾದಿ ಸಿಗುವುದೋ ಇಲ್ಲವೋ ಎನ್ನುವ ಬಗ್ಗೆ ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಿ ‘ಸ್ಪಷ್ಟನೆ’ ಪಡೆದು ಮುಂದಿನ ಆಲೋಚನೆ ಮಾಡಲು ಡಿ.ಕೆ.ಶಿವಕುಮಾರ್ ಕಳೆದ ನಾಲ್ಕು ತಿಂಗಳಿನಿಂದ ಪ್ರಯತ್ನಿಸುತ್ತಿದ್ದರೂ, ಎಐಸಿಸಿ ಪ್ರಧಾನ ಕಾರ್ಯ ದರ್ಶಿ, ರಾಹುಲ್ ನಂಬಿಕಸ್ಥ ಕೆ.ಸಿ.ವೇಣುಗೋಪಾಲ್ ಅವರು ಅದಕ್ಕೆ ಪ್ರತಿಬಾರಿಯೂ ಅವಕಾಶ ನೀಡುತ್ತಿಲ್ಲ.
ಈ ಕಾರಣಕ್ಕಾಗಿಯೇ ಮೊನ್ನೆ ಮೈಸೂರಿಗೆ ರಾಹುಲ್ ಗಾಂಧಿ ಆಗಮಿಸಿದಾಗ, ಹೆಲಿಕಾಪ್ಟರ್‌ನಿಂದ ವಿಶೇಷ ವಿಮಾನ ಹತ್ತುವ ಸಮಯದಲ್ಲಿ ರನ್‌ವೇನಲ್ಲಿಯೇ ನಿಂತು ಪರಿಹಾರಕ್ಕಾಗಿ ‘ಡಿಕೆ’ ಅರ್ಜಿ ಸಲ್ಲಿಸಿದ್ದಾರೆ. ಆ ಕ್ಷಣಕ್ಕೆ ಏನು ಹೇಳಬೇಕೆಂದು ತೋಚದೆ ‘ವಿಲ್ ಕಾಲ್ ಯೂ ಸೂನ್’ ಎಂದು ಹೇಳಿ ವಿಮಾನ ಹತ್ತಿದ್ದಾರೆ ರಾಹುಲ್. ಶೀಘ್ರದಲ್ಲಿಯೇ ದೆಹಲಿಗೆ ಕರೆಸಿಕೊಳ್ಳುವ ಮಾತು ಕೇಳಿದ್ದ ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರಿಗೆ ಇದರಿಂದ ಕೊಂಚ ಮಟ್ಟಿಗೆ ಸಮಾಧಾನವಾಗಿದ್ದರೂ, ಶೀಘ್ರ ಎನ್ನುವುದು ಯಾವಾಗ ಬರಲಿದೆ ಎನ್ನುವ ಸ್ಪಷ್ಟನೆ ಬೇಕಿದೆ.
ಈ ಕಾರಣಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ದೆಹಲಿಯಲ್ಲಿನ ‘ಆಪ್ತ’ರ ಮೂಲಕ ರಾಹುಲ್ ಗಾಂಧಿ ಭೇಟಿಗೆ ಡಿಕೆಶಿ ಪ್ರಯತ್ನಿಸಿದ್ದಾರೆ. ಯಾವಾಗ ಭೇಟಿಗೆ ಅವಕಾಶ ಸಿಗುವುದಿಲ್ಲ ಎನ್ನುವುದು ಖಚಿತವಾಯಿತೋ, ಆಗ ಮಲ್ಲಿಕಾರ್ಜುನ ಖರ್ಗೆ ಅವರ ಮುಂದೆಯೇ ಹೇಳಬೇಕಾದ ವಿಷಯವನ್ನೆಲ್ಲ ಹೇಳಿ ಸ್ಪಷ್ಟನೆ ಕೊಡಿಸುವಂತೆ ಕೇಳಿದ್ದಾರೆ ಎನ್ನುವುದು ದೆಹಲಿ ಮೂಲಗಳ ಮಾತು.
ಡಿ.ಕೆ.ಶಿವಕುಮಾರ್ ಅವರ ಈ ಎಲ್ಲ ಮಾತುಗಳನ್ನು ಸಾವಧಾನವಾಗಿಯೇ ಕೇಳಿಸಿಕೊಂಡ ಖರ್ಗೆ ಯವರು ‘ನಿಮ್ಮೆಲ್ಲ ಮಾತನ್ನು ಗಾಂಧಿ ಕುಟುಂಬಕ್ಕೆ ಮುಟ್ಟಿಸಿ, ಅಲ್ಲಿಂದ ಸಿಗುವ ಉತ್ತರವನ್ನು ನಿಮಗೆ ರವಾನಿಸುವೆ’ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ನಡೆಯುತ್ತಿರುವ ಈ ಕಿತ್ತಾಟದಲ್ಲಿ ಮಧ್ಯಪ್ರವೇಶಿಸಲು ಹೈಕಮಾಂಡ್‌ಗೆ ಇಷ್ಟವಿಲ್ಲ. ಹಾಗೆಂದು, ಈ ಸಮಸ್ಯೆಯನ್ನು ಇಬ್ಬರೂ ಕೂತು ಬಗೆಹರಿಸಿಕೊಳ್ಳುವ ಮನಸ್ಥಿತಿಯೂ ಉಳಿದಿಲ್ಲ. ಆದರೆ ನಾಯಕತ್ವ ವಿಷಯದಲ್ಲಿ ಈ ಗೊಂದಲದಿಂದಾಗಿ, ಕಳೆದ ನಾಲ್ಕು ತಿಂಗಳಿನಿಂದ ರಾಜ್ಯದಲ್ಲಿ ‘ನಾಯಕತ್ವ ಗೊಂದಲ’ ಹೊರತಾಗಿ ಅಭಿವೃದ್ಧಿ ಪರ ಚರ್ಚೆಗಳು ಬಹುತೇಕ ನಿಂತು ಹೋಗಿವೆ.
ಪ್ರತಿಪಕ್ಷ ಬಿಜೆಪಿಯ ಪರಿಸ್ಥಿತಿಯೂ ಭಿನ್ನವಾಗಿರದ ಕಾರಣ ರಾಜಕೀಯವಾಗಿ ಈ ಗೊಂದಲ ಸವಾಲಾಗಿ ಕಾಣುತ್ತಿಲ್ಲ. ಆದರೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರೇ ಹೇಳಿದಂತೆ, ಮುಂದಿನ ಆರು ತಿಂಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೇರಿದಂತೆ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆ ಚುನಾವಣೆಗಳು ಎದುರಾಗಲಿವೆ.
ಅವುಗಳನ್ನು ಗಮನದಲ್ಲಿರಿಸಿಕೊಂಡು, ಮುಖ್ಯಮಂತ್ರಿ ಬದಲಾವಣೆಯ ವಿಷಯದಲ್ಲಿ ಎದ್ದಿರುವ ಗೊಂದಲದ ಬಗ್ಗೆ ‘ಹೌದು’ ಅಥವಾ ‘ಇಲ್ಲ’ ಎನ್ನುವ ಸ್ಪಷ್ಟನೆ ನೀಡುವ ಕೆಲಸವನ್ನು ಹೈಕಮಾಂಡ್ ಮಾಡದೇಹೋದರೆ, ಈ ವಿಷಯವೇ ಚುನಾವಣಾ ಸಮಯದಲ್ಲಿ ಪಕ್ಷವನ್ನು ಪೆಡಂಭೂತವಾಗಿ ಕಾಡುವುದರಲ್ಲಿ ಅನುಮಾನವಿಲ್ಲ.
ರಾಹುಲ್ ಗಾಂಧಿ ಇನ್ನಾದರೂ ತಮ್ಮ ‘ಬ್ಯುಸಿ’ ಸಮಯದಲ್ಲಿ ರಾಜ್ಯ ನಾಯಕರನ್ನು ಕರೆಸಿಕೊಂಡು ಅವರು ಕೇಳುತ್ತಿರುವ ಸ್ಪಷ್ಟನೆಯನ್ನು ಕೊಡಬೇಕಿದೆ. ಇಲ್ಲದೇ ಹೋದರೆ, ಇತರೆ ರಾಜ್ಯಗಳಲ್ಲಿ ‘ಟ್ರೇನ್ ಹೋದ ಮೇಲೆ ಟಿಕೆಟ್’ ತೆಗೆದುಕೊಂಡಿದ್ದಕ್ಕೆ ಆದ ಪರಿಣಾಮವನ್ನು ಕರ್ನಾಟಕದಲ್ಲಿಯೂ ಅನುಭವಿಸಬೇಕಾದ ಅಪಾಯವಿದೆ.