ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಅಮೆರಿಕ ಮತ್ತು ಇರಾನ್‌ ಯುದ್ಧಕ್ಕೂ, ಬಿಯರ್‌ ಬಾಟಲಿಗೂ ಏನು ಸಂಬಂಧ ?

ಗಾಜಿನ ತಯಾರಿಕೆಗೆ ಹೆಚ್ಚಿನ ಪ್ರಮಾಣದ ಶಾಖದ ಅವಶ್ಯಕತೆಯಿದೆ. ಅನಿಲದ ಪೂರೈಕೆ ಯಲ್ಲಿ ವ್ಯತ್ಯಯವಾದರೆ ಗಾಜಿನ ಬೆಲೆ ಏರುತ್ತದೆ. ಅಚ್ಚರಿಯ ವಿಷಯವೆಂದರೆ, ಶೇ.80ರಷ್ಟು ಗ್ರಾಹಕರು ಕ್ಯಾನ್‌ಗಳಿಗಿಂತ ಗಾಜಿನ ಬಾಟಲಿಗಳನ್ನೇ ಇಷ್ಟಪಡುತ್ತಾರೆ. ಆದರೆ ಈ ‘ಗಾಜಿನ ಬಿಕ್ಕಟ್ಟು’ ನಮಗೆ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸುವಂತೆ ಮಾಡಿದೆ.

ಇದೇ ಅಂತರಂಗ ಸುದ್ದಿ

ಬಿಯರ್ ಉದ್ಯಮ ಮತ್ತು ಪರಿಸರ ಸ್ನೇಹಿ ಪ್ಯಾಕೇಜಿಂಗ್ ವಿಷಯದಲ್ಲಿ ಅಲ್ಯೂ ಮಿನಿಯಂ ಕ್ಯಾನ್‌ಗಳು ಮತ್ತು ಗಾಜಿನ ಬಾಟಲಿಗಳ ನಡುವಿನ ಹೋಲಿಕೆ ಅತ್ಯಂತ ತಾರ್ಕಿಕವಾಗಿದೆ. ಭಾರತದ ಸಂದರ್ಭದಲ್ಲಿ ಇದು ಕೇವಲ ಪ್ಯಾಕೇಜಿಂಗ್ ಬದಲಾ ವಣೆಯಲ್ಲ, ಬದಲಿಗೆ ಆರ್ಥಿಕ ಮತ್ತು ಪರಿಸರ ಹಿತದೃಷ್ಟಿಯಿಂದ ಇಡಬೇಕಾದ ದೊಡ್ಡ ಹೆಜ್ಜೆಯಾಗಿದೆ. ಪ್ಯಾಕೇಜಿಂಗ್ ಲಾಜಿಸ್ಟಿಕ್ಸ್ ದೃಷ್ಟಿಯಿಂದ ತೂಕವು ಪ್ರಮುಖ ಪಾತ್ರ ವಹಿಸುತ್ತದೆ. 330 ಮಿ.ಲೀ ಸಾಮರ್ಥ್ಯದ ಗಾಜಿನ ಬಾಟಲಿ ಯು 200 ಗ್ರಾಂ ತೂಗಿದರೆ, ಕ್ಯಾನ್ ಕೇವಲ 11 ಗ್ರಾಂ ತೂಗುತ್ತದೆ.

ಅಮೆರಿಕ ಮತ್ತು ಇರಾನ್ ಯುದ್ಧಕ್ಕೂ, ಬಿಯರ್ ಬಾಟಲಿಗೂ ಏನು ಸಂಬಂಧವಿದೆಯಾ ಎಂದು ಕೇಳಿದರೆ, ಉತ್ತರ ಖಂಡಿತವಾಗಿಯೂ ಸಂಬಂಧವಿದೆ. ಅಚ್ಚರಿ ಎನಿಸಬಹುದು, ಅಮೆರಿಕ-ಇರಾನ್ ಯುದ್ಧದ ನಂತರ, ಸುಮಾರು ಹದಿನೆಂಟು ಬಿಯರ್ ಕಂಪನಿಗಳು ಗಾಜಿನ ಬಾಟಲಿ ಬದಲು, ಕ್ಯಾನ್‌ಗೆ ಶಿಫ್ಟ್ ಆಗಲು ನಿರ್ಧರಿಸಿವೆಯಂತೆ. ಇದಕ್ಕೆ ಕಾರಣ‌ ವೇನು? ಅಮೆರಿಕ ಮತ್ತು ಇರಾನ್ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಯ ಮೇಲೆ ಒತ್ತಡ ಉಂಟಾಯಿತಷ್ಟೆ. ಅದರ ನೇರ ಪರಿಣಾಮ ನಿಮ್ಮ ಕೈಯಲ್ಲಿರುವ ಬಿಯರ್ ಬಾಟಲಿ ಯ ಮೇಲೆ ಆಗಿದೆ. ಬಿಯರ್ ಅರಬ್ ರಾಷ್ಟ್ರಗಳಿಂದ ಬರುವುದಿಲ್ಲ ನಿಜ, ಆದರೆ ಗಾಜಿನ ಬಾಟಲಿಗಳನ್ನು ತಯಾರಿಸಲು ಬೇಕಾದ ಕುಲುಮೆಗಳನ್ನು (Furnaces) ಉರಿಸಲು ಬೇಕಾದ ನೈಸರ್ಗಿಕ ಅನಿಲ (Natural Gas) ವಿದೇಶಗಳಿಂದ ಆಮದಾಗುತ್ತದೆ.

ಗಾಜಿನ ತಯಾರಿಕೆಗೆ ಹೆಚ್ಚಿನ ಪ್ರಮಾಣದ ಶಾಖದ ಅವಶ್ಯಕತೆಯಿದೆ. ಅನಿಲದ ಪೂರೈಕೆ ಯಲ್ಲಿ ವ್ಯತ್ಯಯವಾದರೆ ಗಾಜಿನ ಬೆಲೆ ಏರುತ್ತದೆ. ಅಚ್ಚರಿಯ ವಿಷಯವೆಂದರೆ, ಶೇ.80ರಷ್ಟು ಗ್ರಾಹಕರು ಕ್ಯಾನ್‌ಗಳಿಗಿಂತ ಗಾಜಿನ ಬಾಟಲಿಗಳನ್ನೇ ಇಷ್ಟಪಡುತ್ತಾರೆ. ಆದರೆ ಈ ‘ಗಾಜಿನ ಬಿಕ್ಕಟ್ಟು’ ನಮಗೆ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸುವಂತೆ ಮಾಡಿದೆ.

ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ, ಮನುಕುಲ ಎದುರಿಸಿದ ಬೃಹತ್ ಬಿಕ್ಕಟ್ಟು ಗಳೇ ಹೊಸ ಯುಗದ ತಂತ್ರಜ್ಞಾನಕ್ಕೆ ನಾಂದಿ ಹಾಡಿರುವುದು ಸ್ಪಷ್ಟವಾಗುತ್ತದೆ. 1942ರಲ್ಲಿ ಜಪಾನ್ ಆಗ್ನೇಯ ಏಷ್ಯಾವನ್ನು ವಶಪಡಿಸಿಕೊಂಡಾಗ ಎದುರಾದ ರಬ್ಬರ್ ಕೊರತೆ ಕೇವಲ ಒಂದು ಉದ್ಯಮದ ಸಮಸ್ಯೆಯಾಗಿರಲಿಲ್ಲ, ಅದು ಜಾಗತಿಕ ಸಾರಿಗೆ ಮತ್ತು ರಕ್ಷಣಾ ವ್ಯವಸ್ಥೆಯನ್ನೇ ಸ್ತಬ್ಧಗೊಳಿಸುವ ಭೀತಿ ಹುಟ್ಟಿಸಿತ್ತು. ಆದರೆ, ಈ ‘ಅನಿವಾರ್ಯತೆ’ ಯೇ ವಿಜ್ಞಾನಿಗಳನ್ನು ಪ್ರಯೋಗಶಾಲೆಗೆ ನೂಕಿತು.

ನೈಸರ್ಗಿಕ ರಬ್ಬರ್‌ಗೆ ಪರ್ಯಾಯವಾಗಿ ಸಂಶ್ಲೇಷಿತ ರಬ್ಬರ್ (Synthetic Rubber) ಜನಿಸಿದ್ದು ಇದೇ ಕಾರಣಕ್ಕೆ. ಇಂದು ನಾವು ಬಳಸುವ ರಬ್ಬರ್‌ನಲ್ಲಿ ಹೆಚ್ಚಿನಂಶ ಇದೇ ಆಗಿದೆ. ಅಷ್ಟೇ ಅಲ್ಲದೆ, ಅಂದು ಸಂಶೋಧಿಸಿದ ರಷ್ಯನ್ ಡ್ಯಾಂಡೆಲಿಯನ್ ಮತ್ತು ಗ್ವಾಯುಲ್ ಸಸ್ಯಗಳ ಬಳಕೆ ಇಂದು ‘ಪರಿಸರ ಸ್ನೇಹಿ’ ತಂತ್ರಜ್ಞಾನವಾಗಿ ಮರುಜನ್ಮ ಪಡೆದಿದೆ. ಗಂಟೆಗೆ 305 ಕಿಮೀ ವೇಗದಲ್ಲಿ ಓಡುವ ’ಇಂಡಿಕಾರ್’ ರೇಸಿಂಗ್ ಟೈರ್‌ಗಳಲ್ಲಿ ಗ್ವಾಯುಲ್ ಬಳಕೆಯಾಗು ತ್ತಿರುವುದು, ಹಳೆಯ ಬಿಕ್ಕಟ್ಟಿನ ಪರಿಹಾರವು ಇಂದಿನ ಅತ್ಯಾಧುನಿಕ ತಂತ್ರಜ್ಞಾನ ಕ್ಕಿಂತಲೂ ಶ್ರೇಷ್ಠವಾಗಿರಬಲ್ಲದು ಎಂಬುದಕ್ಕೆ ಸಾಕ್ಷಿ.

ಇದನ್ನೂ ಓದಿ: Vishweshwar Bhat Column: ಪುಸ್ತಕವನ್ನು ಓದುವುದು ಹೇಗೆ ?

ಯಾವುದೇ ವ್ಯವಸ್ಥೆಯು ಸುಗಮವಾಗಿ ಸಾಗುತ್ತಿರುವಾಗ ನಾವು ಹೊಸ ಹಾದಿ ಹುಡುಕುವು ದಿಲ್ಲ. ಆದರೆ ಬಿಕ್ಕಟ್ಟು ಎದುರಾದಾಗ, ಅಸ್ತಿತ್ವ ಉಳಿಸಿಕೊಳ್ಳಲು ಹಳೆಯ ಪದ್ಧತಿಗಳನ್ನು ಮೀರಿ ಯೋಚಿಸುತ್ತೇವೆ. ಹೀಗೆ ಹುಟ್ಟುವ ತಂತ್ರಜ್ಞಾನವು ಕೇವಲ ತಾತ್ಕಾಲಿಕ ಪರಿಹಾರ ವಾಗದೆ, ಭವಿಷ್ಯದ ಹೊಸ ಮಾನದಂಡವಾಗಿ (Standard) ಬದಲಾಗುತ್ತದೆ.

ಸವಾಲುಗಳು ಸೃಷ್ಟಿಸುವ ಒತ್ತಡವೇ ಮನುಷ್ಯನ ಸೃಜನಶೀಲತೆಯನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಬಿಯರ್ ಉದ್ಯಮ ಮತ್ತು ಪರಿಸರ ಸ್ನೇಹಿ ಪ್ಯಾಕೇಜಿಂಗ್ ವಿಷಯದಲ್ಲಿ ಅಲ್ಯೂಮಿನಿಯಂ ಕ್ಯಾನ್‌ಗಳು ಮತ್ತು ಗಾಜಿನ ಬಾಟಲಿಗಳ ನಡುವಿನ ಹೋಲಿಕೆ ಅತ್ಯಂತ ತಾರ್ಕಿಕವಾಗಿದೆ.

ಭಾರತದ ಸಂದರ್ಭದಲ್ಲಿ ಇದು ಕೇವಲ ಪ್ಯಾಕೇಜಿಂಗ್ ಬದಲಾವಣೆಯಲ್ಲ, ಬದಲಿಗೆ ಆರ್ಥಿಕ ಮತ್ತು ಪರಿಸರ ಹಿತದೃಷ್ಟಿಯಿಂದ ಇಡಬೇಕಾದ ದೊಡ್ಡ ಹೆಜ್ಜೆಯಾಗಿದೆ. ಪ್ಯಾಕೇಜಿಂಗ್ ಲಾಜಿಸ್ಟಿಕ್ಸ್‌ (Logistics) ದೃಷ್ಟಿಯಿಂದ ತೂಕವು ಪ್ರಮುಖ ಪಾತ್ರ ವಹಿಸುತ್ತದೆ.

330 ಮಿ.ಲೀ ಸಾಮರ್ಥ್ಯದ ಗಾಜಿನ ಬಾಟಲಿಯು 200 ಗ್ರಾಂ ತೂಗಿದರೆ, ಅಲ್ಯೂಮಿನಿಯಂ ಕ್ಯಾನ್ ಕೇವಲ 11 ಗ್ರಾಂ ತೂಗುತ್ತದೆ. ಅಂದರೆ, ಅಷ್ಟೇ ಪ್ರಮಾಣದ ಬಿಯರ್ ಸಾಗಿಸಲು ಗಾಜಿನ ಬಾಟಲಿಗಳು 18 ಪಟ್ಟು ಹೆಚ್ಚು ತೂಕವನ್ನು ಸೃಷ್ಟಿಸುತ್ತವೆ.

ಸಾರಿಗೆಯ ಸಮಯದಲ್ಲಿ ಈ ಹೆಚ್ಚುವರಿ ತೂಕವನ್ನು ಹೊತ್ತೊಯ್ಯಲು ವಾಹನಗಳಿಗೆ ಹೆಚ್ಚಿನ ಇಂಧನ ಬೇಕು. ಇದರ ಪರಿಣಾಮ, ಕಾರ್ಬನ್ ಹೊರಸೂಸುವಿಕೆ (Carbon Emission) ಹೆಚ್ಚಾಗುತ್ತದೆ. ಅಲ್ಯೂಮಿನಿಯಂ ಕ್ಯಾನ್‌ಗಳನ್ನು ಬಳಸುವುದರಿಂದ ಸಾರಿಗೆ ವೆಚ್ಚ (Freight Cost) ಗಣನೀಯವಾಗಿ ಕಡಿಮೆಯಾಗುವುದಲ್ಲದೇ, ಒಂದೇ ಟ್ರಕ್‌ನಲ್ಲಿ ಹೆಚ್ಚಿನ ಪ್ರಮಾಣದ ಉತ್ಪನ್ನಗಳನ್ನು ಸಾಗಿಸಲು ಸಾಧ್ಯವಾಗುತ್ತದೆ.

Beer bottle

ಗ್ರಾಹಕರ ದೃಷ್ಟಿಕೋನದಿಂದಲೂ ಕ್ಯಾನ್‌ಗಳು ಹೆಚ್ಚು ಅನುಕೂಲಕರ. ಅಲ್ಯೂಮಿನಿಯಂ ಲೋಹವು ಉತ್ತಮ ಶಾಖ ವಾಹಕವಾಗಿರುವುದರಿಂದ, ಕ್ಯಾನ್‌ಗಳಲ್ಲಿರುವ ಬಿಯರ್ ಗಾಜಿನ ಬಾಟಲಿಗಳಿಗಿಂತ ವೇಗವಾಗಿ ತಣ್ಣಗಾಗುತ್ತದೆ. ಸೂರ್ಯನ ಯುವಿ (UV) ಕಿರಣಗಳು ಬಿಯರ್‌ ನ ರುಚಿಯನ್ನು ಹಾಳು ಮಾಡುತ್ತವೆ. ಗಾಜಿನ ಬಾಟಲಿಗಳಿಗಿಂತ ಕ್ಯಾನ್‌ಗಳು ಬೆಳಕನ್ನು ಸಂಪೂರ್ಣವಾಗಿ ತಡೆಯುವುದರಿಂದ ಬಿಯರ್‌ನ ತಾಜಾತನ ದೀರ್ಘಕಾಲ ಉಳಿಯುತ್ತದೆ.

ಗಾಜಿನಂತೆ ಇವು ಒಡೆಯುವ ಭಯವಿಲ್ಲದ ಕಾರಣ, ಪಾರ್ಟಿ ಅಥವಾ ಪ್ರವಾಸಗಳ ಸಮಯ ದಲ್ಲಿ ಸಾಗಿಸುವುದು ಸುಲಭ. ಅಲ್ಯೂಮಿನಿಯಂ ಅನ್ನು ನೂರಕ್ಕೆ ನೂರು ಪ್ರತಿಶತ ಮರು ಬಳಕೆ (Recycle) ಮಾಡಬಹುದು. ವಿಶೇಷವೆಂದರೆ, ಬಾಟಲಿಗಳನ್ನು ಮರುಬಳಕೆ ಮಾಡಲು ತೊಳೆಯುವಾಗ ಅಪಾರ ಪ್ರಮಾಣದ ರಾಸಾಯನಿಕ ಮತ್ತು ನೀರು ಪೋಲಾ ಗುತ್ತದೆ. ಆದರೆ ಕ್ಯಾನ್‌ಗಳನ್ನು ಕರಗಿಸಿ ಹೊಸ ಕ್ಯಾನ್‌ಗಳನ್ನಾಗಿ ಮಾಡುವುದು ಅತ್ಯಂತ ಸರಳ.

ಭಾರತವು ಜಗತ್ತಿನ ಅಲ್ಯೂಮಿನಿಯಂ ಉತ್ಪಾದನೆಯಲ್ಲಿ ಎರಡನೇ ದೊಡ್ಡ ರಾಷ್ಟ್ರ ವಾಗಿದೆ. ನಮ್ಮ ಹೇರಳವಾಗಿ ಸಿಗುವ ಈ ಸಂಪನ್ಮೂಲವನ್ನು ಬಳಸುವುದರಿಂದ ದೇಶೀಯ ಉತ್ಪಾದನಾ ವಲಯಕ್ಕೆ (Manufacturing Sector) ದೊಡ್ಡ ಉತ್ತೇಜನ ಸಿಗುತ್ತದೆ. ಗಾಜಿನ ಕಚ್ಚಾವಸ್ತುಗಳ ಮೇಲಿನ ಅವಲಂಬನೆ ತಗ್ಗಿ, ಭಾರತವು ಪ್ಯಾಕೇಜಿಂಗ್ ಸ್ವಾವಲಂಬನೆಯತ್ತ ಹೆಜ್ಜೆ ಇಡಬಹುದು.

ಆರಂಭದಲ್ಲಿ ಅಲ್ಯೂಮಿನಿಯಂ ತಯಾರಿಕೆಗೆ ಹೆಚ್ಚಿನ ವಿದ್ಯುತ್ ಬೇಕಾದರೂ, ಅದರ ಸುದೀರ್ಘ ಮರುಬಳಕೆಯ ಚಕ್ರ (Recycling Lifecycle) ಮತ್ತು ಕಡಿಮೆ ಸಾರಿಗೆ ವೆಚ್ಚವು ದೀರ್ಘಾವಧಿಯಲ್ಲಿ ಪರಿಸರ ಹಾಗೂ ಆರ್ಥಿಕತೆ ಎರಡಕ್ಕೂ ಲಾಭದಾಯಕವಾಗಿದೆ.

ಆದ್ದರಿಂದ, ಭಾರತೀಯ ಮಾರುಕಟ್ಟೆಯು ಕ್ಯಾನ್ಗಳ ಕಡೆಗೆ ಮುಖ ಮಾಡುವುದು ಜಾಣತನದ ಕ್ರಮವೇ. ಇದನ್ನು ಒಂದು ರೀತಿಯಲ್ಲಿ ‘ಸಂಕಷ್ಟದ ಬಾಟಲಿಯೊಳಗಿನ ಪರಿಹಾರದ ಸಂದೇಶ’ ಇಂದು ಅಂದುಕೊಳ್ಳಬಹುದು. ಮಾನವ ಇತಿಹಾಸವನ್ನು ಗಮನಿಸಿ ದರೆ, ಅತ್ಯುತ್ತಮ ಆವಿಷ್ಕಾರಗಳು ತೀವ್ರ ಸಂಕಷ್ಟದ ಕಾಲದ ಜನ್ಮತಾಳಿವೆ. ಹಳೆಯ ಹಾದಿಗಳು ಮುಚ್ಚಿ ಹೋದಾಗ, ಲಭ್ಯವಿರುವ ಸೀಮಿತ ಸಂಪನ್ಮೂಲಗಳನ್ನು ಬಳಸಿ ಕೊಂಡು ಹೊಸ ದಾರಿ ಕಂಡುಕೊಳ್ಳುವ ಅನಿವಾರ್ಯತೆ ನಮಗೆ ಎದುರಾಗುತ್ತದೆ.

vv

ಈ ಅನಿವಾರ್ಯತೆಯೇ ಮನುಷ್ಯನ ಸೃಜನಶೀಲತೆಯನ್ನು ಜಾಗೃತಗೊಳಿಸುತ್ತದೆ. ಜಾಗತಿಕ ಯುದ್ಧಗಳು, ಸಾಂಕ್ರಾಮಿಕ ರೋಗಗಳು ಅಥವಾ ಕಚ್ಚಾವಸ್ತುಗಳ ತೀವ್ರ ಕೊರತೆಯ ಸಂದರ್ಭಗಳ ಜಗತ್ತು ತಾಂತ್ರಿಕವಾಗಿ ಮತ್ತು ವೈಜ್ಞಾನಿಕವಾಗಿ ದೊಡ್ಡ ಜಿಗಿತವನ್ನು ಕಂಡಿದೆ.

ಯಾವುದೇ ಬಿಕ್ಕಟ್ಟು ಎದುರಾದಾಗ ಸಾಮಾನ್ಯವಾಗಿ ಎರಡು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ - ಮೊದಲನೆಯದು, ಹಳಹಳಿಕೆ. ಅಂದರೆ ಹಳೆಯ ಸೌಕರ್ಯಗಳು ಕೈತಪ್ಪಿ ಹೋದವಲ್ಲ ಎಂದು ಕೊರಗುವುದು ಮತ್ತು ಪರಿಸ್ಥಿತಿಯನ್ನು ದೂಷಿಸುವುದು ಹಾಗೂ ಎರಡನೆಯದು, ಅನ್ವೇಷಣೆ. ಅಂದರೆ ಲಭ್ಯವಿರುವ ಸಂಪನ್ಮೂಲಗಳ ಪರ್ಯಾಯ ಮಾರ್ಗ ವನ್ನು ಹುಡುಕಲು ಯೋಚಿಸುವುದು. ನಿಜವಾದ ಪ್ರಗತಿ ಸಾಧಿಸಲು ಎರಡನೇ ದೃಷ್ಟಿಕೋನ ಅತ್ಯಗತ್ಯ. ಸಮಸ್ಯೆ ಎದುರಾದಾಗ ಹಳೆಯ ವ್ಯವಸ್ಥೆಯನ್ನೇ ಮರಳಿ ತರಲು ಹೆಣಗಾಡುವ ಬದಲು, ’ಇದಕ್ಕಿಂತ ಉತ್ತಮವಾದದ್ದನ್ನು ಸೃಷ್ಟಿಸಲು ಈ ಪರಿಸ್ಥಿತಿ ನಮಗೆ ನೀಡುತ್ತಿರುವ ಅವಕಾಶವೇನು?’ ಎಂದು ಯೋಚಿಸಬೇಕು.

ಇದು ಉದ್ಯಮ, ವಿಜ್ಞಾನ ಮಾತ್ರವಲ್ಲದೇ ವೈಯಕ್ತಿಕ ಜೀವನಕ್ಕೂ ಅನ್ವಯಿಸುತ್ತದೆ. ಗಾಜಿನ ಬಾಟಲಿಗಳ ಸಾಗಣೆ ವೆಚ್ಚ ಮತ್ತು ನಿರ್ವಹಣೆ ದುಬಾರಿಯಾದರೂ, ಕಂಪನಿಗಳು ಇಂದಿಗೂ ಅವುಗಳನ್ನು ಸಂಪೂರ್ಣವಾಗಿ ಕೈಬಿಡದಿರಲು ಮುಖ್ಯ ಕಾರಣ ‘ಗ್ರಾಹಕ ಮನೋವಿಜ್ಞಾನ’ ( Consumer Psychology) ಮತ್ತು ‘ದೃಶ್ಯ ಪ್ರಚೋದನೆ’ (Visual Stimulus). ಮನುಷ್ಯನಿಗೆ ದೃಷ್ಟಿ ಎಂಬುದು ಅತ್ಯಂತ ಪ್ರಭಾವಶಾಲಿ ಜ್ಞಾನೇಂದ್ರಿಯ.

ಅಲ್ಯೂಮಿನಿಯಂ ಕ್ಯಾನ್‌ಗಳು ಒಳಗೆ ಏನಿದೆ ಎಂಬುದನ್ನು ಸಂಪೂರ್ಣವಾಗಿ ಮುಚ್ಚಿಡು ತ್ತವೆ. ಆದರೆ ಪಾರದರ್ಶಕ ಅಥವಾ ಅರೆಪಾರದರ್ಶಕ (ಕಂದು/ಹಸಿರು) ಗಾಜಿನ ಬಾಟಲಿ ಯಲ್ಲಿ ದ್ರವದ ಬಣ್ಣ, ಅದರ ಸಾಂದ್ರತೆ ಮತ್ತು ಒಳಗಿನ ಸಣ್ಣ ಗುಳ್ಳೆಗಳು ಹೊರಗಿನಿಂದಲೇ ಕಣ್ಣಿಗೆ ಕಾಣಿಸುತ್ತವೆ. ಈ ದೃಶ್ಯವು ಗ್ರಾಹಕರಲ್ಲಿ ತಕ್ಷಣದ ಹಂಬಲವನ್ನು (Urge) ಅಥವಾ ಆಕರ್ಷಣೆಯನ್ನು ಸೃಷ್ಟಿಸುತ್ತದೆ. ವಿಶೇಷವಾಗಿ ಕಣ್ಣಿಗೆ ಕಾಣುವ ದ್ರವವು ಖರೀದಿಸುವ ನಿರ್ಧಾರವನ್ನು ಪ್ರಚೋದಿಸುತ್ತದೆ.

ಅಷ್ಟೇ ಅಲ್ಲ, ಜಾಗತಿಕವಾಗಿ ಗ್ರಾಹಕರಲ್ಲಿ ‘ಗಾಜಿನ ಬಾಟಲಿಯಲ್ಲಿರುವುದು ಪ್ರೀಮಿಯಂ ಮತ್ತು ಹೆಚ್ಚು ಅಧಿಕೃತ’ ಎಂಬ ಸಾಂಪ್ರದಾಯಿಕ ನಂಬಿಕೆಯಿದೆ. ಕ್ಯಾನ್‌ಗಳು ಕೇವಲ ಅನುಕೂಲತೆಯನ್ನು ಪ್ರತಿನಿಧಿಸಿದರೆ, ಬಾಟಲಿಗಳು ಒಂದು ರೀತಿಯ ಗಾಂಭೀರ್ಯ ಮತ್ತು ಬ್ರ್ಯಾಂಡ್ ಮೌಲ್ಯವನ್ನು(Brand Value) ಬಿಂಬಿಸುತ್ತವೆ.

ಹೀಗಾಗಿ, ಕೇವಲ ದಕ್ಷತೆಯನ್ನಷ್ಟೇ ನಂಬದೇ, ಗ್ರಾಹಕರ ಭಾವನೆ ಮತ್ತು ಕಣ್ಣಿನ ಆಕರ್ಷಣೆ ಯನ್ನು ಉಳಿಸಿಕೊಳ್ಳಲು ಕಂಪನಿಗಳು ಬಾಟಲಿಗಳ ಬಳಕೆಯನ್ನು ಮುಂದು ವರಿಸಿದ್ದವು. ಇಂದು ಜಗತ್ತು ಎದುರಿಸುತ್ತಿರುವ ಹವಾಮಾನ ವೈಪರೀತ್ಯ, ಇಂಧನ ಕೊರತೆಯಂಥ ಬಿಕ್ಕಟ್ಟುಗಳೇ ನಮ್ಮನ್ನು ನವೀಕರಿಸಬಹುದಾದ ಇಂಧನ (Renewable Energy) ಮತ್ತು ಸುಸ್ಥಿರ ಜೀವನಶೈಲಿಯತ್ತ ಮುನ್ನಡೆಸುತ್ತಿವೆ.

ಬಿಕ್ಕಟ್ಟುಗಳು ನಮಗೆ ಎದುರಾಗುವ ಗೋಡೆಗಳಲ್ಲ, ಅವು ನಮ್ಮನ್ನು ಹೊಸ ದಿಕ್ಕಿನತ್ತ ತಿರುಗಿಸುವ ಸೂಚನಾ ಫಲಕಗಳು. ಸಮಸ್ಯೆಯ ತೀವ್ರತೆಗೆ ಧೃತಿಗೆಡದೇ, ಲಭ್ಯವಿರುವ ಸಂಪನ್ಮೂಲಗಳನ್ನು ಸೃಜನಾತ್ಮಕವಾಗಿ ಬಳಸುವ ದೃಷ್ಟಿಕೋನ ನಮ್ಮದಾದಾಗ, ಪ್ರತಿ ಯೊಂದು ಸಂಕಷ್ಟವೂ ಒಂದು ಹೊಸ ಆವಿಷ್ಕಾರಕ್ಕೆ ಹೆಬ್ಬಾಗಿಲಾಗುವುದರಲ್ಲಿ ಸಂದೇಹ ವಿಲ್ಲ ಎಂಬುದನ್ನು ಬಿಯರ್ ಬಾಟಲಿ ತೋರಿಸಿಕೊಟ್ಟಿದೆ.

ಭಗವಾನ್ ದಾದಾ - ಶೋಲಾ ಜೋ ಭಡ್ಕೆ

ಇತ್ತೀಚೆಗೆ ಖ್ಯಾತ ನಟ ದಿವಂಗತ ದೇವಾನಂದ ಅವರ ಆತ್ಮಕಥೆಯನ್ನು ಓದುತ್ತಿದ್ದೆ. ಅದರಲ್ಲಿ ಅವರು ಭಗವಾನ್ ದಾದಾ ಅವರ ’ಅಲ್ಬೇಲಾ’ (1951) ಚಿತ್ರದ ’ಶೋಲಾ ಜೋ ಭಡ್ಕೆ’ ಹಾಡು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೇಗೆ ಒಂದು ಮೈಲಿಗಲ್ಲು ಎಂಬಂತೆ ಪರಿಗಣಿಸಲಾಗುತ್ತದೆ ಎಂಬುದನ್ನು ಪ್ರಸ್ತಾಪಿಸಿದ್ದಾರೆ.

‘ಶೋಲಾ ಜೋ ಭಡ್ಕೆ’ ಹಾಡನ್ನು ಚಿತ್ರೀಕರಿಸುವ ಸಮಯದಲ್ಲಿ ಭಗವಾನ್ ದಾದಾ ಅವರಿಗೆ ಯಾವುದೇ ವೃತ್ತಿಪರ ನೃತ್ಯಗಾರರು ಸಿಗಲಿಲ್ಲ. ಸೋಲೊಪ್ಪದ ಅವರು, ತಮ್ಮ ಚಿತ್ರಗಳಲ್ಲಿ ಸಾಹಸ ದೃಶ್ಯಗಳಲ್ಲಿ ನಟಿಸುತ್ತಿದ್ದ ಕುಸ್ತಿಪಟುಗಳು ಮತ್ತು ಸ್ಟಂಟ್‌ಮನ್‌ಗಳನ್ನು ಕರೆ ತಂದು ಅವರಿಗೆ ನೃತ್ಯ ತರಬೇತಿ ನೀಡಿ ಈ ಹಾಡಿನಲ್ಲಿ ಬಳಸಿಕೊಂಡರು. ಆ ಪೈಲ್ವಾನರ ವಿಶಿಷ್ಟ ಲಯಬದ್ಧ ಚಲನೆಯೇ ಈ ಹಾಡಿಗೆ ಒಂದು ವಿಭಿನ್ನ ಮೆರುಗನ್ನು ನೀಡಿತು.

ಕೈಗಳನ್ನು ವೃತ್ತಾಕಾರವಾಗಿ ತಿರುಗಿಸುತ್ತಾ ಭಗವಾನ್ ದಾದ ಹಾಕುತ್ತಿದ್ದ ಆ ವಿಶಿಷ್ಟ ನೃತ್ಯದ ಹೆಜ್ಜೆಗಳು ಇಂದಿಗೂ ಪ್ರಸಿದ್ಧ. ಸ್ವತಃ ಬಾಲಿವುಡ್ ಶೆಹೆನ್ಶಾ ಅಮಿತಾಬ್ ಬಚ್ಚನ್ ಅವರು ಹಲವು ಬಾರಿ ’ನನ್ನ ನೃತ್ಯ ಶೈಲಿಗೆ ಭಗವಾನ್ ದಾದಾ ಅವರೇ ಸ್ಪೂರ್ತಿ’ ಎಂದು ಬಹಿರಂಗ ವಾಗಿ ಒಪ್ಪಿಕೊಂಡಿದ್ದಾರೆ. ಇಂದಿಗೂ ಅನೇಕ ನಟರು ಆ ಶೈಲಿಯನ್ನು ಅನುಕರಿಸುತ್ತಾರೆ.

ಈ ಹಾಡು ಬಿಡುಗಡೆಯಾದಾಗ ಪ್ರೇಕ್ಷಕರು ಎಷ್ಟು ರೋಮಾಂಚನಗೊಂಡಿದ್ದರೆಂದರೆ, ತೆರೆಯ ಮೇಲೆ ಹಾಡು ಬರುತ್ತಿದ್ದಂತೆ ಥಿಯೇಟರ್‌ನಲ್ಲಿ ನಾಣ್ಯಗಳನ್ನು ಎಸೆದು ಸಂಭ್ರಮಿ ಸುತ್ತಿದ್ದರು. ಪ್ರತಿದಿನ ಆಟ ಮುಗಿದ ನಂತರ ಚಿತ್ರಮಂದಿರ ಶುಚಿಗೊಳಿಸುವ ಸಿಬ್ಬಂದಿ ಆ ನಾಣ್ಯಗಳನ್ನೆಲ್ಲ ಆಯ್ದು ಸಂಗ್ರಹಿಸುತ್ತಿದ್ದರು. ಆ ಹಣ ಎಷ್ಟು ದೊಡ್ಡ ಮಟ್ಟದಲ್ಲಿರು ತ್ತಿತ್ತೆಂದರೆ, ಸಿಬ್ಬಂದಿಗಳು ಭಗವಾನ್ ದಾದಾ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದರಂತೆ.

‘ಅಲ್ಬೇಲಾ’ ಚಿತ್ರನಿರ್ಮಾಣ ಸಮಯದಲ್ಲಿ ಭಗವಾನ್ ದಾದಾ ಅವರು ಸ್ಟಂಟ್ ಚಿತ್ರಗಳ ನಟ ಎಂಬ ಕಾರಣಕ್ಕೆ ಆಗಿನ ಕಾಲದ ಯಾವುದೇ ಪ್ರಮುಖ ನಟಿಯರು ಅವರೊಂದಿಗೆ ನಟಿಸಲು ಒಪ್ಪುತ್ತಿರಲಿಲ್ಲ. ಅಂಥ ಸಂಕಷ್ಟದ ಸಮಯದಲ್ಲಿ ಖ್ಯಾತ ನಟಿ ಗೀತಾ ಬಾಲಿ ಅವರು ಈ ಚಿತ್ರಕ್ಕೆ ಸಹಿ ಹಾಕಿ ಬೆಂಬಲವಾಗಿ ನಿಂತರು. ಅವರ ನಟನೆ ಮತ್ತು ನೃತ್ಯ ಚಿತ್ರದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಭಗವಾನ್ ದಾದಾ ಮೊದಲು ಕೇವಲ ‘ಬಿ-ಗ್ರೇಡ್’ ಆಕ್ಷನ್ ಮತ್ತು ಸ್ಟಂಟ್ ಚಿತ್ರಗಳನ್ನು ಮಾಡುತ್ತಿದ್ದರು. ಆದರೆ ಅವರ ಆತ್ಮೀಯ ಗೆಳೆಯ ರಾಜ್ ಕಪೂರ್ ಅವರು ಭಗವಾನ್ ಅವರಿಗೆ ’ಒಂದು ಸಾಮಾಜಿಕ ಕಳಕಳಿಯ ಸಂಗೀತಮಯ ಚಿತ್ರ ಮಾಡು ಎಂದು ಸಲಹೆ ನೀಡಿದರು. ಆ ಸಲಹೆಯ ಫಲವಾಗಿ ಮೂಡಿ ಬಂದಿದ್ದೇ ‘ಅಲ್ಬೇಲಾ’. ಇದು 1951ರ ಸಾಲಿನ ಮೂರನೇ ಅತಿ ದೊಡ್ಡ ಹಿಟ್ ಚಿತ್ರವಾಗಿ ದಾಖಲೆ ಬರೆಯಿತು.

ಈ ಚಿತ್ರದ ಯಶಸ್ಸಿನಲ್ಲಿ ಸಂಗೀತ ನಿರ್ದೇಶಕ ಸಿ.ರಾಮಚಂದ್ರ ಪಾತ್ರ ಬಹಳ ದೊಡ್ಡದು. ‘ಶೋಲಾ ಜೋ ಭಡ್ಕೆ’ ಹಾಡಿನಲ್ಲಿ ಅವರು ಅಂದಿನ ಕಾಲಕ್ಕೆ ಅತ್ಯಂತ ಹೊಸದಾದ ’ವೆಸ್ಟರ್ನ್ ಬಿಟ್ಸ್’ ಮತ್ತು ಲಯವನ್ನು ಬಳಸಿದ್ದರು. ವಿಶೇಷವೆಂದರೆ, ಈ ಹಾಡನ್ನು ಅವರು ಕೇವಲ ಒಂದು ರಾತ್ರಿಯಲ್ಲಿ ಸಂಯೋಜಿಸಿದ್ದರು. ಚಿತ್ರದ ಮತ್ತೊಂದು ಜನಪ್ರಿಯ ಹಾಡು ’ಧೀರೆ ಸೆ ಆಜಾ ರಿ ಅಖಿಯೋನ್ ಮೇ’ ಇಂದಿಗೂ ಅತ್ಯುತ್ತಮ ಲಾಲಿ ಹಾಡುಗಳಲ್ಲಿ ಒಂದಾಗಿದೆ.

ಭಗವಾನ್ ದಾದಾ ಅವರ ನಿಜವಾದ ಹೆಸರು ಭಗವಾನ್ ಆಭಾಜಿ ಪಾಲ್ಕರ್. ಚಿತ್ರರಂಗಕ್ಕೆ ಬರುವ ಮೊದಲು ಅವರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅಲ್ಲಿ ಸಿಗು ತ್ತಿದ್ದ ಬಿಡುವಿನ ವೇಳೆಯಲ್ಲಿ ಕುಸ್ತಿ ಕಲಿಯುತ್ತಿದ್ದರು. ಆ ದೈಹಿಕ ಶಕ್ತಿ ಮತ್ತು ಶ್ರಮವೇ ಅವರು ಸ್ಟಂಟ್ ಚಿತ್ರಗಳಲ್ಲಿ ಮಿಂಚಲು ನೆರವಾಯಿತು. ’ಅಲ್ಬೇಲಾ’ ಮೂಲಕ ಅವರು ಒಬ್ಬ ಸಾಧಾರಣ ಸ್ಟಂಟ್ ಮ್ಯಾನ್ ಕೂಡ ದೊಡ್ಡ ಮಟ್ಟದ ಸೋಷಿಯಲ್ ಡ್ರಾಮಾ ನಿರ್ದೇಶಿಸಬಹುದು ಎಂದು ಸಾಬೀತುಪಡಿಸಿದರು.

‘ಅಲ್ಬೇಲಾ’ ಚಿತ್ರದ ಭರ್ಜರಿ ಯಶಸ್ಸಿನ ನಂತರ ಭಗವಾನ್ ದಾದಾ ಜೀವನವೇ ಬದಲಾ ಯಿತು. ಆ ಕಾಲದ ಅವರು ಮುಂಬೈನ ಜುಹು ಸಮುದ್ರ ತೀರದಲ್ಲಿ 25 ಕೋಣೆಗಳ ಭವ್ಯ ಬಂಗಲೆ ಹೊಂದಿದ್ದರು ಮತ್ತು ಪ್ರತಿದಿನಕ್ಕೆ ಒಂದರಂತೆ ಬಳಸಲು ಏಳು ಅತ್ಯಾಧುನಿಕ ಕಾರುಗಳನ್ನು ಇಟ್ಟುಕೊಂಡಿದ್ದರು. ಆ ಕಾಲದ ಅತಿ ಶ್ರೀಮಂತ ತಾರೆಗಳಲ್ಲಿ ಅವರೂ ಒಬ್ಬರಾಗಿದ್ದರು. ಗೀತಾ ಬಾಲಿ ಅಂದಿನ ದೊಡ್ಡ ತಾರೆಯಾಗಿದ್ದರೂ, ಭಗವಾನ್ ದಾದಾ ಅವರಂಥ ಸಣ್ಣ ಮಟ್ಟದ ನಟನಿಗೆ ಗೌರವ ನೀಡಿ, ಚಿತ್ರದ ಸೆಟ್‌ನಲ್ಲಿ ಸಾಮಾನ್ಯರಂತೆ ಬೆರೆಯುತ್ತಿದ್ದರು.

’ಶೋಲಾ ಜೋ ಭಡ್ಕೆ’ ಚಿತ್ರೀಕರಣದ ಸಮಯದಲ್ಲಿ ಆ ಪೈಲ್ವಾನರ ಜತೆ ಹೆಜ್ಜೆ ಹಾಕಲು ಅವರು ತೋರಿದ ಉತ್ಸಾಹವೇ ಆ ಹಾಡು ಅಷ್ಟು ನೈಜವಾಗಿ ಮೂಡಿ ಬರಲು ಕಾರಣ ವಾಯಿತು. ದುರದೃಷ್ಟವಶಾತ್, ನಂತರದ ದಿನಗಳಲ್ಲಿ ಅವರ ಚಿತ್ರಗಳು ಸೋಲನ್ನು ಅನುಭವಿಸಿದವು. ತಮ್ಮ ಸಂಪತ್ತನ್ನೆಲ್ಲ ಕಳೆದುಕೊಂಡು ಅವರು ಅಂತಿಮವಾಗಿ ಮುಂಬೈ ನ ಒಂದು ಸಣ್ಣ ಛಾಳದಲ್ಲಿ ವಾಸಿಸುತ್ತಿದ್ದರು.

ಕಾರುಗಳೆಲ್ಲ ಮಾರಾಟವಾಗಿ ಹೋದವು. ಆದರೂ, ಇಂದಿಗೂ ಬಾಲಿವುಡ್‌ನ ಯಾವುದೇ ನಟ ‘ಕಾಮಿಡಿ ಡಾನ್ಸ್’ ಮಾಡಬೇಕೆಂದರೆ ಮೊದಲು ನೆನಪಿಸಿಕೊಳ್ಳುವುದು ಭಗವಾನ್ ದಾದಾ ಅವರನ್ನೇ.

ಫಿಲಿಫೈನ್ಸ್‌ʼನಲ್ಲಿ ಕಂಡಿದ್ದು

ನಾನು ಇತ್ತೀಚೆಗೆ ಫಿಲಿಪೈ ಹೋದಾಗ ಅಲ್ಲಿನ ಏಂಜಲೀಸ್ ನಗರಕ್ಕೆ ಹೋಗಿದ್ದೆ. ಅಲ್ಲಿನ ಬಡಾವಣೆಯೊಂದರ ಹೋಟೆಲಿನಲ್ಲಿ ಉಳಿದುಕೊಂಡಾಗ, ಸಾಯಂಕಾಲ ವಾಕ್ ಮಾಡು ವಾಗ ಒಂದು ಮನೆ ಮುಂದಿನ ಗೇಟ್‌ಗೆ, ನಮ್ಮಲ್ಲಿ ನೇತು ಹಾಕುವಂತೆ, ಒಂದು ಫಲಕವನ್ನು ನೇತು ಹಾಕಿದ್ದನ್ನು ಕಂಡೆ. ಆದರೆ ನಮ್ಮಲ್ಲಿನ ಫಲಕಕ್ಕಿಂತ ಅದು ತುಸು ಭಿನ್ನವಾಗಿತ್ತು. ಅದರ ಮೇಲೆ ಹೀಗೆ ಬರೆದಿತ್ತು - ‘ನಾಯಿ ತುಂಬಾ ಸೌಮ್ಯವಾಗಿದೆ, ಆದರೆ ಅದರ ಮಾಲೀಕನ ಬಗ್ಗೆ ಜಾಗ್ರತೆ ವಹಿಸಿ!’ (The dog is friendly, but beware of the owner!) ಫಿಲಿಫೈನ್ಸ್‌ನ ಜನರು ಮೂಲತಃ ತಮಾಷೆ ಪ್ರಿಯರು.

ಅಪರಿಚಿತರು ಅಥವಾ ಮಾರಾಟಗಾರರು ಅನಗತ್ಯವಾಗಿ ಮನೆಗೆ ಬರುವುದನ್ನು ತಡೆಯಲು ಮಾಲೀಕರು ಕಂಡುಕೊಂಡ ವಿನೂತನ ಮಾರ್ಗ ಇದು. ‘ನಾನು ನಾಯಿಗಿಂತ ಭಯಂಕರ’ ಎಂದು ಪರೋಕ್ಷವಾಗಿ ಹೇಳುವ ಮೂಲಕ ಜನರನ್ನು ನಗಿಸುತ್ತಲೇ ದೂರವಿಡುತ್ತಾರೆ. ಅಲ್ಲಿನ ಜನರು ತಮ್ಮ ಸಾಕುಪ್ರಾಣಿಗಳನ್ನು ಅತಿಯಾಗಿ ಪ್ರೀತಿಸುತ್ತಾರೆ. ತನ್ನ ನಾಯಿ ಯಾರಿಗೂ ಕಚ್ಚುವುದಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಲೇ, ತನ್ನ ಖಾಸಗಿತನವನ್ನು ರಕ್ಷಿಸಿ ಕೊಳ್ಳುವ ಕಲೆ ಇದು. ಈ ಫಲಕವನ್ನು ನೋಡಿದ ಪ್ರವಾಸಿಗರು ಹೆದರುವ ಬದಲು ಅಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವುದು ಹೆಚ್ಚು! ಇದು ಆ ಮನೆಯ ಮಾಲೀಕ ಮತ್ತು ಹಾದಿ ಹೋಕರ ನಡುವೆ ಒಂದು ಮೌನ ಸಂವಾದವನ್ನು ಏರ್ಪಡಿಸುತ್ತದೆ.

ಕೇವಲ ಮನೆಗಳ ಮುಂದೆ ಮಾತ್ರವಲ್ಲ, ಮನಿಲಾದ ಜನಪ್ರಿಯ ವಾಹನವಾದ ’ಜೀಪ್ನಿ’ ( Jeepney) ಗಳ ಮೇಲೂ, ನಮ್ಮಲ್ಲಿ ಆಟೊಗಳ ಮೇಲೆ ಬರೆದಂತೆ, ಇಂಥ ತಮಾಷೆಯ ಸಾಲುಗಳನ್ನು ಕಾಣಬಹುದು. ಉದಾಹರಣೆಗೆ, ದೇವರು ನಗುವವರನ್ನು ಪ್ರೀತಿಸುತ್ತಾನೆ, ಆದರೆ ಸಾಲ ಮರುಪಾವತಿಸುವವರನ್ನು ಹೆಚ್ಚು ಪ್ರೀತಿಸುತ್ತಾನೆ!, ಇದು ಜೀಪ್ನಿ ಅಷ್ಟೇ, ರಾಕೆಟ್ ಅಲ್ಲ! ದಯವಿಟ್ಟು ಅವಸರ ಮಾಡಬೇಡಿ, ಸುಂದರಿಯರಿಗೆ ಮಾತ್ರ ಮುಂಭಾಗದ ಸೀಟು ಮೀಸಲು, ಉಳಿದವರು ಹಿಂದೆ ಕುಳಿತುಕೊಳ್ಳಿ, ಚಾಲಕನಿಗೆ ಮದುವೆಯಾಗಿದೆ, ಆದರೆ ಪ್ರೀತಿ ಮಾಡಲು ಇನ್ನೂ ತಯಾರಿದ್ದನೆ, ನಿಮ್ಮ ಪ್ರೀತಿ ಕಳೆದು ಹೋದರೆ ತಲೆಕೆಡಿಸಿಕೊಳ್ಳಿ, ಜೀಪ್ನಿ ಮಿಸ್ ಆದರೆ ಮುಂದಿನ ಹತ್ತು ನಿಮಿಷದಲ್ಲಿ ಇನ್ನೊಂದು ಬರುತ್ತದೆ, ಪ್ರಯಾಣಿಕರು ಇಲ್ಲಿ ದೇವರಿಗಿಂತ ಹೆಚ್ಚಾಗಿ ಚಾಲಕನನ್ನು ನಂಬಬೇಕು.

ವಿಶ್ವೇಶ್ವರ ಭಟ್‌

View all posts by this author