ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishweshwar Bhat Column: ಡೆಡ್‌ ಹಾರ್ಸ್‌ ಥಿಯರಿ ಅಂದರೇನು ?

‘ನೀವು ಏರಿರುವ ಕುದುರೆ ಸತ್ತು ಹೋಗಿದೆ ಎಂದು ನಿಮಗೆ ತಿಳಿದಾಗ, ಅದರಿಂದ ಇಳಿಯುವುದೇ ಅತ್ಯಂತ ಬುದ್ಧಿವಂತಿಕೆಯ ಕೆಲಸ’ ಎಂಬ ಸರಳ ಸತ್ಯದ ಸುತ್ತ ಈ ಸಿದ್ಧಾಂತ ರೂಪಿತವಾಗಿದೆ. ಆದರೆ, ದುರದೃಷ್ಟವಶಾತ್ ಮಾನವ ಸಹಜ ಗುಣ ಮತ್ತು ವ್ಯವಸ್ಥೆಯ ಜಡತ್ವದಿಂದಾಗಿ ನಾವು ಸತ್ತ ಕುದುರೆಯನ್ನು ಜೀವಂತಗೊಳಿಸಲು ಅಥವಾ ಅದು ಇನ್ನೂ ಓಡುತ್ತಿದೆ ಎಂದು ತೋರಿಸಿ ಕೊಳ್ಳಲು ಏನೆಲ್ಲ ಕಸರತ್ತು ಮಾಡುತ್ತೇವೆ ಎಂಬುದನ್ನು ಈ ಸಿದ್ಧಾಂತ ವ್ಯಂಗ್ಯವಾಗಿ ವಿವರಿಸುತ್ತದೆ.

ಸಂಪಾದಕರ ಸದ್ಯಶೋಧನೆ

ಇತ್ತೀಚೆಗೆ ಉದ್ಯಮಿ ಹರ್ಷ ಗೋಯೆಂಕಾ ಅವರು ‘ಡೆಡ್ ಹಾರ್ಸ್ ಥಿಯರಿ’ (Dead Horse Theory) ಅಥವಾ ‘ಸತ್ತ ಕುದುರೆಯ ಸಿದ್ಧಾಂತ’ದ ಬಗ್ಗೆ ಒಂದು ಕಾರ್ಟೂನನ್ನು ಟ್ವೀಟ್ ಮಾಡಿದ್ದರು. ಅದರಲ್ಲಿ ಹೆಚ್ಚಿನ ವಿವರಗಳೇನೂ ಇರಲಿಲ್ಲ. ಇರಲಿ. ಇದು ಆಧುನಿಕ ಮ್ಯಾನೇಜ್ʼಮೆಂಟ್ ಶಾಸ್ತ್ರ, ರಾಜಕೀಯ ಮತ್ತು ಕಾರ್ಪೊರೇಟ್ ಜಗತ್ತಿನಲ್ಲಿ ಬಹಳ ಚರ್ಚಿತವಾಗುವ ಒಂದು ಪರಿಕಲ್ಪನೆ.

‘ನೀವು ಏರಿರುವ ಕುದುರೆ ಸತ್ತು ಹೋಗಿದೆ ಎಂದು ನಿಮಗೆ ತಿಳಿದಾಗ, ಅದರಿಂದ ಇಳಿಯುವುದೇ ಅತ್ಯಂತ ಬುದ್ಧಿವಂತಿಕೆಯ ಕೆಲಸ’ ಎಂಬ ಸರಳ ಸತ್ಯದ ಸುತ್ತ ಈ ಸಿದ್ಧಾಂತ ರೂಪಿತವಾಗಿದೆ. ಆದರೆ, ದುರದೃಷ್ಟವಶಾತ್ ಮಾನವ ಸಹಜ ಗುಣ ಮತ್ತು ವ್ಯವಸ್ಥೆಯ ಜಡತ್ವದಿಂದಾಗಿ ನಾವು ಸತ್ತ ಕುದುರೆಯನ್ನು ಜೀವಂತಗೊಳಿಸಲು ಅಥವಾ ಅದು ಇನ್ನೂ ಓಡುತ್ತಿದೆ ಎಂದು ತೋರಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡುತ್ತೇವೆ ಎಂಬುದನ್ನು ಈ ಸಿದ್ಧಾಂತ ವ್ಯಂಗ್ಯವಾಗಿ ವಿವರಿಸುತ್ತದೆ. ಡಕೋಟಾ ಬುಡಕಟ್ಟಿನ ಅಮೆರಿಕನ್ ಇಂಡಿಯನ್ನರ ಒಂದು ಹಳೆಯ ಗಾದೆಯಿಂದ ಈ ಸಿದ್ಧಾಂತ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತದೆ.

ಇದರ ಸಾರಾಂಶ ಇಷ್ಟು: ‘ಯಾವಾಗ ಕುದುರೆ ಸಾಯುತ್ತದೆಯೋ, ಆಗ ಅದನ್ನು ಬಿಟ್ಟು ಕೆಳಗಿಳಿಯಬೇಕು.’ ವ್ಯಾಪಾರ ಅಥವಾ ವೈಯಕ್ತಿಕ ಜೀವನದಲ್ಲಿ ಒಂದು ಯೋಜನೆ, ತಂತ್ರ ಅಥವಾ ಸಂಬಂಧವು ಸಂಪೂರ್ಣವಾಗಿ ವಿಫಲವಾಗಿದೆ (ಅಥವಾ ಅದರ ಕಾಲ ಮುಗಿದಿದೆ) ಎಂದು ಸಾಬೀತಾದ ಮೇಲೆಯೂ, ನಾವು ಅದನ್ನು ಒಪ್ಪಿಕೊಳ್ಳದೇ ಹಠಕ್ಕೆ ಬಿದ್ದು ಮುಂದು ವರಿಸುವುದನ್ನು ಇದು ಸೂಚಿಸುತ್ತದೆ.

ಇದನ್ನೂ ಓದಿ: Vishweshwar Bhat Column: ಜಗತ್ತಿನ ಅತಿ ಕಡಿಮೆ ಅವಧಿ ಯುದ್ಧ

ಯಾವುದೇ ಒಂದು ಸಂಸ್ಥೆ ಅಥವಾ ವ್ಯಕ್ತಿ ತನ್ನ ತಪ್ಪು ನಿರ್ಧಾರವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದಿದ್ದಾಗ, ಅವರು ‘ಸತ್ತ ಕುದುರೆ’ಯನ್ನು ಓಡಿಸಲು ಕೆಲವು ‘ವೈಜ್ಞಾನಿಕ’ ಮಾರ್ಗ ಗಳನ್ನು ಅನುಸರಿಸುತ್ತಾರೆ. ಉದಾಹರಣೆಗೆ, ಮೊದಲನೆಯದು, ಚಾಟಿಯಿಂದ ಏಟು ನೀಡುವುದು.

ಕುದುರೆ ಸತ್ತಿದೆ ಎಂದು ಗೊತ್ತಿದ್ದರೂ, ಇನ್ನಷ್ಟು ಬಲವಾಗಿ ಚಾಟಿಯಿಂದ ಹೊಡೆದರೆ ಅದು ಎದ್ದು ಓಡಬಹುದು ಎಂಬ ಭ್ರಮೆಯಲ್ಲಿ ಪ್ರಯತ್ನಿಸುವುದು. ಅಂದರೆ ವಿಫಲವಾದ ಯೋಜನೆಗೆ ಮತ್ತಷ್ಟು ಒತ್ತಡ ಹೇರುವುದು. ಎರಡನೆಯದು, ಕುದುರೆ ಯಾಕೆ ಓಡುತ್ತಿಲ್ಲ ಎಂದು ಪರೀಕ್ಷಿಸಲು ತಜ್ಞರ ಸಮಿತಿಯನ್ನು ಅಥವಾ ಕನ್ಸಲ್ಟೆಂಟ್‌ಗಳನ್ನು ನೇಮಿಸುವುದು. ಅವರು ಕುದುರೆ ಸತ್ತಿದೆ ಎಂದು ವರದಿ ನೀಡಿದರೂ, ಆ ವರದಿಯನ್ನು ಮರುಪರಿಶೀಲಿಸಲು ಮತ್ತೊಂದು ಸಮಿತಿ ರಚಿಸುವುದು.

ಮೂರನೆಯದು, ‘ಸತ್ತ ಕುದುರೆಯನ್ನು ಸವಾರಿ ಮಾಡುವುದು ಹೇಗೆ?’ ಎಂಬ ವಿಷಯದ ಬಗ್ಗೆ ಸವಾರರಿಗೆ ವಿಶೇಷ ತರಬೇತಿ ನೀಡುವುದು ಅಥವಾ ಹೊಸ ತಂತ್ರಜ್ಞಾನ ಬಳಸಿ ಕುದುರೆಯನ್ನು ಅಪ್‌ಗ್ರೇಡ್ ಮಾಡಲು ಯತ್ನಿಸುವುದು ಹಾಗೂ ‘ಬೇರೆ ದೇಶಗಳಲ್ಲಿ ಅಥವಾ ಬೇರೆ ಕಂಪನಿಗಳಲ್ಲಿ ಸತ್ತ ಕುದುರೆಗಳು ಇದಕ್ಕಿಂತ ಚೆನ್ನಾಗಿ ಓಡುತ್ತವೆ’ ಎಂದು ಅಂಕಿ-ಅಂಶಗಳನ್ನು ನೀಡಿ ಸಮಾಧಾನಪಟ್ಟುಕೊಳ್ಳುವುದು.

ನಾಲ್ಕನೆಯದು, ಕುದುರೆಯನ್ನು ‘ಸತ್ತಿದೆ’ ಎಂದು ಕರೆಯುವ ಬದಲು, ‘ಇದು ಚಲನರಹಿತ ಸ್ಥಿತಿಯಲ್ಲಿದೆ’ ಅಥವಾ ‘ಇದು ವಿಶ್ರಾಂತಿ ಪಡೆಯುತ್ತಿದೆ’ ಎಂದು ಆಧುನಿಕ ಪದಬಳಕೆ ( Jargon) ಮಾಡುವುದು. ಐದನೆಯದು, ಕುದುರೆ ಸಾಯಲು ಸವಾರನೇ ಕಾರಣ ಎಂದು ಅವನನ್ನು ಕೆಲಸದಿಂದ ತೆಗೆದು ಹಾಕಿ, ಹೊಸ ಸವಾರನನ್ನು ನೇಮಿಸುವುದು. ಕುದುರೆ ಮಾತ್ರ ಬದಲಾಗುವುದಿಲ್ಲ!

ಇಂದು ಅನೇಕ ಕಂಪನಿಗಳು ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳದೇ ಹಳೆಯ ಪದ್ಧತಿಗಳನ್ನೇ ಹಿಡಿದು ಕುಳಿತಿವೆ. ನೋಕಿಯಾ ಅಥವಾ ಕೊಡಾಕ್ ಕಂಪನಿಗಳು ಒಂದು ಕಾಲದಲ್ಲಿ ಮಾರುಕಟ್ಟೆಯ ರಾಜರಾಗಿದ್ದರು. ಆದರೆ ಮಾರುಕಟ್ಟೆಯ ಬದಲಾವಣೆಯನ್ನು ಗಮನಿಸದೇ ತಮ್ಮ ಹಳೆಯ ‘ಕುದುರೆ’ಯನ್ನೇ ನಂಬಿ ಕುಳಿತಿದ್ದರಿಂದ ಅವು ಹಿನ್ನಡೆ ಅನುಭವಿಸಿದವು.

ರಾಜಕೀಯದಲ್ಲೂ ಅಷ್ಟೇ, ಕೆಲವು ಹಳೆಯ ಸಿದ್ಧಾಂತಗಳು ಅಥವಾ ವ್ಯಕ್ತಿಗಳು ಪ್ರಸ್ತುತತೆ ಯನ್ನು ಕಳೆದುಕೊಂಡಿದ್ದರೂ, ಪಕ್ಷಗಳು ಅವುಗಳನ್ನೇ ಹಿಡಿದು ನೇತಾಡುತ್ತಿರುತ್ತವೆ. ಹೊಸ ಬದಲಾವಣೆಗೆ ತೆರೆದುಕೊಳ್ಳುವ ಬದಲು ಸತ್ತ ಕುದುರೆಗೆ ‘ಮೇಕಪ್’ ಮಾಡಿ ಮೆರವಣಿಗೆ ಮಾಡುವುದರಲ್ಲಿ ಕಾಲ ಕಳೆಯುತ್ತವೆ. ಇದಕ್ಕೆ ಕಾರಣಗಳಿಲ್ಲದಿಲ್ಲ.

ಮುಖ್ಯವಾಗಿ, ‘ನಾವು ಈಗಾಗಲೇ ಈ ಯೋಜನೆಗೆ ಸಾಕಷ್ಟು ಹಣ ಮತ್ತು ಸಮಯ ಖರ್ಚು ಮಾಡಿದ್ದೇವೆ, ಈಗ ಬಿಟ್ಟರೆ ಅದೆ ವ್ಯರ್ಥವಾಗುತ್ತದೆ’ ಎಂಬ ಭಯ. ತನ್ನ ನಿರ್ಧಾರ ತಪ್ಪು ಎಂದು ಒಪ್ಪಿಕೊಳ್ಳಲು ನಾಯಕರಿಗೆ ಸಾಧ್ಯವಾಗುವುದಿಲ್ಲ.

ಸತ್ತ ಕುದುರೆಯನ್ನು ಬಿಟ್ಟರೆ ಮುಂದೆ ಏನು? ಹೊಸ ಕುದುರೆ ಸಿಗುತ್ತದೆಯೇ? ಎಂಬ ಆತಂಕ. ‘ಡೆಡ್ ಹಾರ್ಸ್ ಥಿಯರಿ’ ನಮಗೆ ಕಲಿಸುವ ಪಾಠ ಸರಳವಾಗಿದೆ - ಸಮಯಕ್ಕೆ ಸರಿಯಾಗಿ ನಿರ್ಗಮಿಸುವುದು, ಕ್ರಮ ತೆಗೆದುಕೊಳ್ಳುವುದು ಕೂಡ ಒಂದು ಕಲೆ.

ವಿಶ್ವೇಶ್ವರ ಭಟ್‌

View all posts by this author