ಸಂಪಾದಕರ ಸದ್ಯಶೋಧನೆ
ಇತ್ತೀಚೆಗೆ ನಾನು ಬಿಬಿಸಿ ಸಂದರ್ಶನವೊಂದನ್ನು ನೋಡುತ್ತಿದ್ದೆ. ಸಂದರ್ಶಕಿ ನಿಮಗೆ ‘ದ ಲಾಸ್ಟ್ ಮೀಟಿಂಗ್ ಥಿಯರಿ’ಯಲ್ಲಿ ನಂಬಿಕೆ ಇದೆಯೇ?’ ಎಂಬ ಪ್ರಶ್ನೆಗೆ ತಾನು ಊಹಾತ್ಮಕ ವಾದ ಪ್ರಶ್ನೆಗೆ ಉತ್ತರ ನೀಡುವುದಿಲ್ಲ ಎಂದು, ‘ಮುಂದಿನ ಪ್ರಶ್ನೆ ಕೇಳಿ’ ಎಂದುಬಿಟ್ಟ.
ಹಾಗಾದರೆ ‘ದ ಲಾಸ್ಟ್ ಮೀಟಿಂಗ್ ಥಿಯರಿ’ ಎಂದರೇನು? ಇದು ಜೀವನದ ಅತ್ಯಂತ ಗಹನ ವಾದ, ಭಾವನಾತ್ಮಕವಾದ ಮತ್ತು ಅಷ್ಟೇ ಕಟುವಾದ ಸತ್ಯವನ್ನು ಸಾರುವ ಒಂದು ಪರಿ ಕಲ್ಪನೆ. ಇದು ಯಾವುದೇ ವಿಜ್ಞಾನದ ಪ್ರಯೋಗಾಲಯದಲ್ಲಿ ಸಾಬೀತಾದ ಸಿದ್ಧಾಂತವಲ್ಲ, ಬದಲಿಗೆ ಮನುಷ್ಯನ ಸಂಬಂಧಗಳು, ಸಮಯದ ಅನಿಶ್ಚಿತತೆ ಮತ್ತು ಮರಣದ ಅನಿವಾರ್ಯತೆಯ ಸುತ್ತ ಹೆಣೆಯಲಾದ ಒಂದು ಜೀವನ ದರ್ಶನ ಎನ್ನಬಹುದು.
ಈ ಸಿದ್ಧಾಂತದ ಸಾರಾಂಶ ಇಷ್ಟೇ - ‘ನಾವು ಒಬ್ಬ ವ್ಯಕ್ತಿಯನ್ನು ಭೇಟಿಯಾದಾಗ ಅಥವಾ ಮಾತಾಡಿಸಿದಾಗ, ಅದು ನಮ್ಮಿಬ್ಬರ ನಡುವಿನ ಕೊನೆಯ ಭೇಟಿಯಾಗಿರಬಹುದು ಎಂಬ ಅರಿವು ನಮಗಿರುವುದಿಲ್ಲ’. ನಾವೆಲ್ಲರೂ ನಾಳೆಯ ಬಗ್ಗೆ ನೂರಾರು ಯೋಜನೆಗಳನ್ನು ಹಾಕಿಕೊಳ್ಳುತ್ತೇವೆ.
ಇದನ್ನೂ ಓದಿ: Vishweshwar Bhat Column: ‘ಗ್ರೇ ಎಮರ್ಜೆನ್ಸಿ’ ಎಂದರೇನು ?
ಮುಂದಿನ ವಾರ ಸಿಗೋಣ, ಮುಂದಿನ ತಿಂಗಳು ಪ್ರವಾಸ ಹೋಗೋಣ, ನಿವೃತ್ತಿಯ ನಂತರ ಸಮಯ ಕಳೆಯೋಣ ಎಂದು ಮಾತು ಕೊಡುತ್ತೇವೆ. ಆದರೆ ಕಾಲಚಕ್ರದ ಗತಿ ಯಾರ ಅರಿವಿಗೂ ಬರುವುದಿಲ್ಲ. ‘ದ ಲಾಸ್ಟ್ ಮೀಟಿಂಗ್ ಥಿಯರಿ’ ಹೇಳುವುದೇನೆಂದರೆ, ಪ್ರತಿ ಯೊಂದು ಭೇಟಿಯ ಹಿಂದೆ ಒಂದು ‘ಕೊನೆಯ ಬಾರಿ’ ಎಂಬುದು ಅಡಗಿರುತ್ತದೆ. ಒಬ್ಬ ಸ್ನೇಹಿತನಿಗೆ ‘ಟಾಟಾ’ ಹೇಳಿ ಕಳುಹಿಸುವಾಗ, ತಂದೆ-ತಾಯಿಯ ಆಶೀರ್ವಾದ ಪಡೆದು ಮನೆಯಿಂದ ಹೊರಡುವಾಗ ಅಥವಾ ಸಂಗಾತಿಯೊಡನೆ ಜಗಳವಾಡಿ ಆಚೆ ಹೋಗುವಾಗ-ಅದೇ ನಮ್ಮ ಕೊನೆಯ ಭೇಟಿಯಾಗಬಹುದು ಎಂಬ ಸಣ್ಣ ಸುಳಿವು ನಮಗಿದ್ದರೆ ನಮ್ಮ ವರ್ತನೆ ಹೇಗಿರುತ್ತಿತ್ತು? ಖಂಡಿತವಾಗಿಯೂ ಅದು ಪ್ರೀತಿ ಮತ್ತು ಗೌರವದಿಂದ ಕೂಡಿರು ತ್ತಿತ್ತು. ಆದರೆ ಪ್ರಕೃತಿಯ ನಿಯಮದಂತೆ ಆ ‘ಕೊನೆಯ ಕ್ಷಣ’ ನಮಗೆ ನಿಗೂಢವಾಗಿಯೇ ಉಳಿಯುತ್ತದೆ.
ಹಲವು ಬಾರಿ ನಾವು ಪ್ರೀತಿ ಪಾತ್ರರ ಜತೆ ಸಣ್ಣಪುಟ್ಟ ಕಾರಣಕ್ಕೆ ಜಗಳವಾಡುತ್ತೇವೆ, ಅಹಂಕಾರದಿಂದ ಮಾತು ನಿಲ್ಲಿಸುತ್ತೇವೆ ಅಥವಾ ‘ಅವರಿಗೆ ಅಹಂಕಾರ ಜಾಸ್ತಿ, ಅವರೇ ಬಂದು ಮಾತನಾಡಿಸಲಿ’ ಎಂದು ಕಾಯುತ್ತಾ ವರ್ಷಗಳನ್ನು ಕಳೆಯುತ್ತೇವೆ. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಆ ವ್ಯಕ್ತಿ ಇಲ್ಲ ಎಂಬ ಸುದ್ದಿ ಬಂದಾಗ, ನಮ್ಮಲ್ಲಿ ಉಳಿಯು ವುದು ಕೇವಲ ‘ಪಶ್ಚಾತ್ತಾಪ’ ಮಾತ್ರ. ‘ಛೇ, ಅಂದು ಅಷ್ಟು ಕೆಟ್ಟದಾಗಿ ಮಾತನಾಡಬಾರ ದಿತ್ತು’, ‘ಒಂದು ಬಾರಿ ಕ್ಷಮೆ ಕೇಳಿದ್ದರೆ ಆಗುತ್ತಿತ್ತು’, ‘ಕೊನೆಯ ಬಾರಿ ಅವರನ್ನು ನೋಡುವ ಅವಕಾಶವೂ ಸಿಗಲಿಲ್ಲವಲ್ಲ’ ಎಂಬ ಹಳಹಳಿ ಈ ಸಿದ್ಧಾಂತದ ಕಟು ವಾಸ್ತವ.
ನಾವು ಪ್ರೀತಿಸುವವರನ್ನು ಕಳೆದುಕೊಂಡಾಗ ನಮಗೆ ನೋವಾಗುವುದು ಅವರು ದೂರಾ ದರು ಎಂದಲ್ಲ, ಬದಲಿಗೆ ಅವರಿಗೆ ಹೇಳಬೇಕಾದ ಪ್ರೀತಿಯ ಮಾತುಗಳನ್ನು ಹೇಳಲು ನಮಗೆ ಸಮಯ ಸಿಗಲಿಲ್ಲ ಎಂಬ ಕಾರಣಕ್ಕೆ. ಈ ಥಿಯರಿಯು ನಮಗೆ ‘ವರ್ತಮಾನ’ದಲ್ಲಿ ಬದುಕಲು ಕಲಿಸುತ್ತದೆ. ನಾವು ಯಾರಿಗಾದರೂ ಸಮಯ ನೀಡುತ್ತಿದ್ದೇವೆ ಎಂದರೆ ನಮ್ಮ ಜೀವನದ ಒಂದು ಭಾಗವನ್ನೇ ಅವರಿಗೆ ನೀಡುತ್ತಿದ್ದೇವೆ ಎಂದರ್ಥ.
ಫೋನ್ ನೋಡುತ್ತಾ ಮಾತಾಡುವುದು, ಅನ್ಯಮನಸ್ಕರಾಗಿರುವುದು ಅಥವಾ ಬೇರೆಯವರ ಉಪಸ್ಥಿತಿಯನ್ನು ಕಡೆಗಣಿಸುವುದು-ಇವೆಲ್ಲವೂ ಆ ಕ್ಷಣದ ಪಾವಿತ್ರ್ಯವನ್ನು ಹಾಳು ಮಾಡು ತ್ತವೆ. ಒಂದು ವೇಳೆ ಇಂದು ನಾನು ಈ ವ್ಯಕ್ತಿಯನ್ನು ಕೊನೆಯ ಬಾರಿಗೆ ನೋಡು ತ್ತಿದ್ದೇನೆ ಎಂದು ಭಾವಿಸಿದರೆ, ನಾವು ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತೇವೆ, ಅವರ ಮಾತು ಗಳನ್ನು ಶ್ರದ್ಧೆಯಿಂದ ಕೇಳಿಸಿಕೊಳ್ಳುತ್ತೇವೆ ಮತ್ತು ಆ ಕ್ಷಣವನ್ನು ಸ್ಮರಣೀಯವಾಗಿಸಲು ಪ್ರಯತ್ನಿಸುತ್ತೇವೆ.
ಈ ‘ಕೊನೆಯ ಭೇಟಿಯ ಪ್ರಜ್ಞೆ’ ನಮ್ಮನ್ನು ಹೆಚ್ಚು ಮಾನವೀಯವಾಗಿಸುತ್ತದೆ. ಇಂದಿನ ತಾಂತ್ರಿಕ ಜಗತ್ತಿನಲ್ಲಿ ನಾವು ಸಾವಿರಾರು ಕಿಮೀ ದೂರದಲ್ಲಿರುವವರ ಜತೆ ವಿಡಿಯೋ ಕಾಲ್ ಮಾಡುತ್ತೇವೆ. ಆದರೆ ಆ ಭೌತಿಕ ಸ್ಪರ್ಶ ಮತ್ತು ಸಾಮೀಪ್ಯದ ಬೆಲೆ ನಮಗೆ ತಿಳಿಯುತ್ತಿಲ್ಲ. ಮೆಸೇಜ್ʼಗಳಲ್ಲಿ ಕಿತ್ತಾಡುವುದು ಸುಲಭ, ಆದರೆ ಆ ಮೆಸೇಜ್ ಕಳುಹಿಸಿದ ವ್ಯಕ್ತಿ ಮುಂದಿನ ಕ್ಷಣ ಇರುತ್ತಾರೋ ಇಲ್ಲವೋ ಎಂಬ ಅರಿವು ನಮಗಿರುವುದಿಲ್ಲ.
ಅನೇಕ ಬಾರಿ ‘Last Seen’ ಎಂಬುದು ಕೇವಲ ವಾಟ್ಸಾಪ್ ಸ್ಟೇಟಸ್ ಆಗಿರದೇ, ಆ ವ್ಯಕ್ತಿಯ ಜೀವನದ ಕೊನೆಯ ಕುರುಹೂ ಆಗಿರಬಹುದು. ಈ ಸಿದ್ಧಾಂತದಿಂದ ನಾವು ಕಲಿಯಬೇಕಾದ ಪಾಠಗಳೇನು? ‘ದ ಲಾಸ್ಟ್ ಮೀಟಿಂಗ್ ಥಿಯರಿ’ ನಮ್ಮನ್ನು ಭಯಪಡಿಸಲು ಇರುವಂಥ ದ್ದಲ್ಲ, ಬದಲಿಗೆ ನಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಲು ಇರುವಂಥದ್ದು. ಯಾರ ಮೇಲಾದರೂ ಕೋಪವಿದ್ದರೆ ಅದನ್ನು ಅಂದೇ ಮರೆತುಬಿಡಿ. ಅಹಂಕಾರಕ್ಕಿಂತ ಸಂಬಂಧ ದೊಡ್ಡದು. ಯಾರನ್ನಾದರೂ ಭೇಟಿಯಾದಾಗ ನಿಮ್ಮ ಪೂರ್ಣ ಗಮನ ಅವರ ಮೇಲಿರಲಿ. ಮನೆಯಿಂದ ಹೊರಡುವಾಗ ಅಥವಾ ಫೋನ್ ಕಟ್ ಮಾಡುವಾಗ ಆಡುವ ಕೊನೆಯ ಮಾತು ಹಿತವಾಗಿರಲಿ.