ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಕೀನ್ಯಾದ ಓಟಗಾರರ, ಎಸ್ತೋನಿಯಾ ಟೆಕ್ಕಿಗಳ ರಹಸ್ಯವೇನು?

ಜಗತ್ತಿನಾದ್ಯಂತ ನಡೆಯುವ ಪ್ರತಿಷ್ಠಿತ ಮ್ಯಾರಥಾನ್ ಮತ್ತು ದೀರ್ಘದೂರ ಓಟದ ಸ್ಪರ್ಧೆಗಳನ್ನು ಗಮನಿಸಿದರೆ, ಕೀನ್ಯಾದ ಅದರಲ್ಲೂ ನಿರ್ದಿಷ್ಟವಾಗಿ 'ಕಲೆಂಜಿನ್' (Kalenjin) ಸಮುದಾಯದ ಅಥ್ಲೀಟ್‌ಗಳದ್ದೇ ಪೂರ್ಣ ಆಧಿಪತ್ಯ. ಅವರು ಜಗತ್ತಿನ ಬೇರೆಲ್ಲ ದೇಶಗಳ ಓಟಗಾರರಿಗಿಂತ ಮ್ಯಾರಥಾನ್ ನಲ್ಲಿ ಮುಂದಿದ್ದಾರೆ.

ನೂರೆಂಟು ವಿಶ್ವ

ಇತ್ತೀಚೆಗೆ ಅಮೆರಿಕದ ಡ್ಯೂಕ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿರುವ ಅನಿರುದ್ಧ ಕೃಷ್ಣ ಅವರು ಬರೆದ Why Kenyans Win Marathons and Estonians Build Unicorns ಪುಸ್ತಕವನ್ನು ಓದುತ್ತಿದ್ದೆ. ಒಂದು ದೇಶದ ಭೌಗೋಳಿಕತೆ, ಸಂಸ್ಕೃತಿ ಮತ್ತು ಆದ್ಯತೆಗಳು ಹೇಗೆ ನಿರ್ದಿಷ್ಟ ಕ್ಷೇತ್ರ ದಲ್ಲಿ ಜಾಗತಿಕ ಶ್ರೇಷ್ಠತೆಯನ್ನು ತಂದುಕೊಡುತ್ತವೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.

ಜಗತ್ತಿನಾದ್ಯಂತ ನಡೆಯುವ ಪ್ರತಿಷ್ಠಿತ ಮ್ಯಾರಥಾನ್ ಮತ್ತು ದೀರ್ಘದೂರ ಓಟದ ಸ್ಪರ್ಧೆಗಳನ್ನು ಗಮನಿಸಿದರೆ, ಕೀನ್ಯಾದ ಅದರಲ್ಲೂ ನಿರ್ದಿಷ್ಟವಾಗಿ 'ಕಲೆಂಜಿನ್' (Kalenjin) ಸಮುದಾಯದ ಅಥ್ಲೀಟ್‌ಗಳದ್ದೇ ಪೂರ್ಣ ಆಧಿಪತ್ಯ. ಅವರು ಜಗತ್ತಿನ ಬೇರೆಲ್ಲ ದೇಶಗಳ ಓಟಗಾರರಿಗಿಂತ ಮ್ಯಾರಥಾನ್ ನಲ್ಲಿ ಮುಂದಿದ್ದಾರೆ.

ಬೋಸ್ಟನ್, ಲಂಡನ್, ಬರ್ಲಿನ್ ಹಾಗೂ ನ್ಯೂಯಾರ್ಕ್‌ನಂಥ ವಿಶ್ವವಿಖ್ಯಾತ ಮ್ಯಾರಥಾನ್‌ಗಳಲ್ಲಿ ಸೃಷ್ಟಿಯಾದ ಬಹುತೇಕ ವಿಶ್ವ ದಾಖಲೆಗಳು ಕೀನ್ಯಾದ ಓಟಗಾರರ ಹೆಸರಿನಲ್ಲೇ ಇವೆ. ಕೇವಲ ಕೆಲವೇ ಲಕ್ಷ ಜನಸಂಖ್ಯೆ ಹೊಂದಿರುವ ಒಂದು ಸಣ್ಣ ಪ್ರದೇಶವು ದಶಕಗಳಿಂದ ಜಾಗತಿಕ ಅಥ್ಲೆಟಿಕ್ಸ್ ರಂಗವನ್ನು ಆಳುತ್ತಿರುವುದು ಕೇವಲ ಕಾಕತಾಳೀಯವಲ್ಲ. ಇದರ ಹಿಂದೆ ಭೌಗೋಳಿಕ ಪರಿಸರ, ಶಾರೀರಿಕ ಅನುಕೂಲ, ಕಠಿಣ ತರಬೇತಿ, ಬಡತನದಿಂದ ಹೊರಬರುವ ತೀವ್ರ ಹಂಬಲ ಮತ್ತು ಸಾಮಾಜಿಕ ಬೆಂಬಲ ವ್ಯವಸ್ಥೆಗಳ ಅಪೂರ್ವ ಸಂಗಮವಿದೆ. ಮ್ಯಾರಥಾನ್ ಕ್ರೀಡೆಯಲ್ಲಿ ಅವರು ಈ ಸಾಧನೆ ಮಾಡಲು ಯಾವುದೋ ಬಲವಾದ ಕಾರಣಗಳು ಇದ್ದಿರಲೇಬೇಕು.

ಕೀನ್ಯಾದ ಮ್ಯಾರಥಾನ್ ಸಾಧಕರ ಹುಟ್ಟಿನ ಸ್ಥಳ ಹೆಚ್ಚಾಗಿ 'ರಿಫ್ಟ್ ವ್ಯಾಲಿ' ಪ್ರಾಂತ್ಯ, ಅದರಲ್ಲೂ ನಿರ್ದಿಷ್ಟ ವಾಗಿ 'ಇಟಿನ್' ಮತ್ತು 'ಎಲ್ಡೋರೆಟ್' ಎಂಬ ನಗರಗಳು. ಈ ಪ್ರದೇಶಗಳು ಸಮುದ್ರ ಮಟ್ಟದಿಂದ ಸುಮಾರು 7,000 ದಿಂದ 8,000 ಅಡಿಗಳಷ್ಟು ಎತ್ತರದಲ್ಲಿವೆ. ಇಂಥ ಎತ್ತರದಲ್ಲಿ ಗಾಳಿ ಯಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಿರುತ್ತದೆ (ಹೈಪೊಕ್ಸಿಯಾ).

ಇದನ್ನೂ ಓದಿ: Vishweshwar Bhat Column: ಮೇರಿ ರೋಚ್ ಕುರಿತು

ಇಲ್ಲಿ ನಿರಂತರವಾಗಿ ವಾಸಿಸುವ ಮತ್ತು ತರಬೇತಿ ಪಡೆಯುವ ಕ್ರೀಡಾಪಟುಗಳ ದೇಹವು ನೈಸರ್ಗಿಕ ವಾಗಿಯೇ ಹೆಚ್ಚಿನ ಕೆಂಪು ರಕ್ತಕಣಗಳನ್ನು ಮತ್ತು ಹಿಮೋಗ್ಲೋಬಿನ್ ಉತ್ಪಾದಿಸುತ್ತದೆ. ಇವರು ಸಮುದ್ರ ಮಟ್ಟದ ತಗ್ಗಿನ ನಗರಗಳಲ್ಲಿ (ಉದಾಹರಣೆಗೆ ಲಂಡನ್ ಅಥವಾ ಬರ್ಲಿನ್) ಸ್ಪರ್ಧಿಸಿದಾಗ, ಅವರ ಶ್ವಾಸಕೋಶ ಮತ್ತು ರಕ್ತಪರಿಚಲನಾ ವ್ಯವಸ್ಥೆಯು ಅತ್ಯಂತ ಸುಲಭವಾಗಿ ಆಮ್ಲಜನಕವನ್ನು ಪೂರೈಸಿ, ಸುಲಭವಾಗಿ ಆಯಾಸಗೊಳ್ಳದಂತೆ ಕಾಯುತ್ತದೆ.

ವಿಜ್ಞಾನಿಗಳು ಮತ್ತು ಶರೀರ ಶಾಸ್ತ್ರಜ್ಞರ ಪ್ರಕಾರ, ಕಲೆಂಜಿನ್ ಸಮುದಾಯದವರ ಶಾರೀರಿಕ ರಚನೆ ಯು ದೀರ್ಘದೂರ ಓಟಕ್ಕೆ ಅತ್ಯಂತ ಸೂಕ್ತವಾಗಿದೆ. ಅವರ ತೊಡೆ ಮತ್ತು ಕಾಲಿನ ಹಿಂಭಾಗ ಅತ್ಯಂತ ತೆಳ್ಳಗಿರುತ್ತವೆ. ಉದ್ದನೆಯ ಪಾದಗಳು ಅವರ ವಿಶೇಷ. ಕಾಲಿನ ಕೆಳಭಾಗದಲ್ಲಿ ತೂಕ ಕಡಿಮೆಯಿದ್ದಷ್ಟೂ, ಪ್ರತಿಯೊಂದು ಹೆಜ್ಜೆಯನ್ನು ಮುಂದಿಡಲು ಬಳಸುವ ಶಕ್ತಿಯ ಪ್ರಮಾಣ ಕಡಿಮೆಯಾಗುತ್ತದೆ. ಉದ್ದನೆಯ ಪಾದಗಳು ಪ್ರತಿಯೊಂದು ಹೆಜ್ಜೆಯಲ್ಲೂ ನೈಸರ್ಗಿಕ 'ಸ್ಪ್ರಿಂಗ್' ಥರ ಕೆಲಸ ಮಾಡಿ, ಕಡಿಮೆ ಆಯಾಸದಲ್ಲಿ ಹೆಚ್ಚಿನ ದೂರವನ್ನು ಕ್ರಮಿಸಲು ನೆರವಾಗುತ್ತದೆ.

ಕೀನ್ಯಾದ ಗ್ರಾಮೀಣ ಭಾಗಗಳಲ್ಲಿ ಸಾರಿಗೆ ಸೌಲಭ್ಯಗಳು ತೀರಾ ಕಡಿಮೆ. ಬಾಲಕರಾಗಿದ್ದಾಗ ನಿತ್ಯ ಶಾಲೆಗೆ ಹೋಗಲು ದಿನಕ್ಕೆ ಹತ್ತರಿಂದ ಹದಿನೈದು ಕಿಮೀ ಓಡುವ ಅಥವಾ ನಡೆಯುವ ಅಭ್ಯಾಸ ವಿರುತ್ತದೆ. ಚಿಕ್ಕಂದಿನಿಂದಲೇ ಬರಿಗಾಲಿನಲ್ಲಿ ಓಡುವುದರಿಂದ ಅವರ ಪಾದಗಳ ಸ್ನಾಯುಗಳು ಬಲಗೊಳ್ಳುತ್ತವೆ. ಅಲ್ಲದೆ, ಹಿಮ್ಮಡಿಯ ಬದಲು ಪಾದದ ಮುಂಭಾಗವನ್ನು ನೆಲಕ್ಕೆ ಲ್ಯಾಂಡ್ ಮಾಡುವ ಸರಿಯಾದ ರನ್ನಿಂಗ್ ಟೆಕ್ನಿಕ್ ಬಾಲ್ಯದಲ್ಲೇ ಮೈಗೂಡುತ್ತದೆ.

61 ok

ಇದು ವಯಸ್ಕರಾದಾಗ ಗಾಯಗಳಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಕೀನ್ಯಾದಲ್ಲಿ ಓಟ ಎಂಬುದು ಕೇವಲ ಕ್ರೀಡೆಯಲ್ಲ; ಅದು ಬಡತನದಿಂದ ಮುಕ್ತಿ ಪಡೆದು, ತಮ್ಮ ಕುಟುಂಬದ ಜೀವನಮಟ್ಟವನ್ನು ಸುಧಾರಿಸಲು ಇರುವ ಅತ್ಯಂತ ಪ್ರಮುಖ ಮಾರ್ಗ. ಒಂದು ಪ್ರಮುಖ ಜಾಗತಿಕ ಮ್ಯಾರಥಾನ್ ಗೆದ್ದರೆ ಸಿಗುವ ಬಹುಮಾನದ ಹಣವು ಕೀನ್ಯಾದಲ್ಲಿ ಜೀವಮಾನದ ಆಸ್ತಿಯಿದ್ದಂತೆ. ಆ ಹಣದಿಂದ ಅವರು ಭೂಮಿ ಖರೀದಿಸಬಹುದು, ಮನೆ ಕಟ್ಟಿಸಬಹುದು ಅಥವಾ ಉದ್ಯಮ ಪ್ರಾರಂಭಿಸಬಹುದು.

ಕಿಪ್‌ಚೋಗೆ ಕೀನೋ, ಪಾಲ್ ಟೆರ್ಗಾಟ್ ಮತ್ತು ಎಲಿಯುಡ್ ಕಿಪ್‌ಚೋಗೆ (ಮ್ಯಾರಥಾನ್‌ನಲ್ಲಿ ಎರಡು ಗಂಟೆಗಿಂತ ಕಡಿಮೆ ಸಮಯದಲ್ಲಿ ಓಡಿದ ವಿಶ್ವದ ಏಕೈಕ ವ್ಯಕ್ತಿ) ಅವರಂಥ ದಿಗ್ಗಜರು ಅದೇ ಹಳ್ಳಿಗಳಿಂದ ಬಂದವರು. ತಮ್ಮದೇ ಓಣಿಯಲ್ಲಿ ಬೆಳೆದ ವ್ಯಕ್ತಿ ವಿಶ್ವಪ್ರಸಿದ್ಧನಾಗಿ ಶ್ರೀಮಂತನಾಗುವು ದನ್ನು ಕಣ್ಣಾರೆ ನೋಡುವ ಯುವಕರಿಗೆ 'ನಾನೂ ಇದನ್ನು ಸಾಧಿಸಬಲ್ಲೆ' ಎಂಬ ದೃಢ ನಂಬಿಕೆ ಬರುತ್ತದೆ.

ಇಟಿನ್‌ನ ತರಬೇತಿ ಶಿಬಿರಗಳು ದೈಹಿಕ ಶ್ರಮ ಮತ್ತು ಶಿಸ್ತಿಗೆ ಹೆಸರಾಗಿವೆ. ಇಲ್ಲಿ ವಿಶ್ವದಾಖಲೆ ಬರೆದ ಅಥ್ಲೀಟ್‌ಗಳು ಮತ್ತು ಹೊಸಬರು ಒಟ್ಟಿಗೇ ತರಬೇತಿ ಪಡೆಯುತ್ತಾರೆ. ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ತರಬೇತಿ ಪ್ರಾರಂಭವಾಗುತ್ತದೆ. ಯಾವುದೇ ಆಧುನಿಕ ಐಷಾರಾಮಿ ಸೌಲಭ್ಯಗಳಿಲ್ಲದೇ, ಅತ್ಯಂತ ಸರಳ ಆಹಾರ (ಉದಾಹರಣೆಗೆ 'ಉಗಾಲಿ' ಎಂಬ ಜೋಳದ ಹಿಟ್ಟಿನ ಖಾದ್ಯ, ತರಕಾರಿ, ಹಾలు) ಸೇವಿಸುತ್ತಾ, ಕಠಿಣ ಪರಿಶ್ರಮ ಪಡುತ್ತಾರೆ. ನೂರಾರು ಉತ್ತಮ ಓಟಗಾರರು ಒಟ್ಟಿಗೆ ಓಡುವಾಗ 'ಪೀರ್ ಪ್ರೆಷರ್' (Peer Pressure) ಹೆಚ್ಚಾಗಿ, ಪ್ರತಿಯೊಬ್ಬರೂ ತಮ್ಮ ಗರಿಷ್ಠ ಕ್ಷಮತೆಯನ್ನು ತಲುಪಲು ಸಾಧ್ಯವಾಗುತ್ತದೆ.

ಕೀನ್ಯಾದವರ ಮ್ಯಾರಥಾನ್ ಯಶಸ್ಸಿಗೆ ಯಾವುದೇ ಒಂದೇ ರಹಸ್ಯವಿಲ್ಲ. ಅದು ಪ್ರಕೃತಿ ನೀಡಿದ ಭೌಗೋಳಿಕ ಕೊಡುಗೆ (ಸಮುದ್ರ ಮಟ್ಟದಿಂದ ಎತ್ತರ), ಶಾರೀರಿಕ ಪ್ರಕ್ರಿಯೆ, ಬಾಲ್ಯದಿಂದಲೇ ಬೆಳೆದು ಬಂದ ನೈಸರ್ಗಿಕ ಶ್ರಮ ಮತ್ತು ಬಡತನವನ್ನು ಗೆಲ್ಲಲೇಬೇಕೆಂಬ ತೀವ್ರ ಆಕಾಂಕ್ಷೆಯ ಫಲಿತಾಂಶ ಕೂಡ ಕಾರಣ ವಾಗಿದೆ. ಈ ಎಲ್ಲ ಅಂಶಗಳು ಒಂದೆಡೆ ಸಂಗಮಿಸಿರುವುದರಿ೦ದಲೇ ಕೀನ್ಯಾದ ಓಟಗಾರರು ಜಾಗತಿಕ ಮ್ಯಾರಥಾನ್ ಟ್ರ್ಯಾಕ್‌ಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ. ಕೀನ್ಯಾದ ಓಟಗಾರರು ಮ್ಯಾರಥಾನ್ ನಲ್ಲಿ ಅಪೂರ್ವ ಸಾಧನೆ ಮಾಡಿದ್ದರೆ ಅದು ಕೇವಲ ಕಾಕತಾಳೀಯ ವಲ್ಲ.

ಅದೇ ರೀತಿ ಎಸ್ತೋನಿಯನ್ ರು ಯುನಿಕಾರ್ನ್ (ಒಂದು ಬಿಲಿಯನ್ ಡಾಲರ್ ಅಂದರೆ ಸುಮಾರು 8,300 ಕೋಟಿ ರುಪಾಯಿಗೂ ಹೆಚ್ಚಿನ ಮೌಲ್ಯದ ನವೋದ್ಯಮಗಳು) ಗಳನ್ನು ಸ್ಥಾಪಿಸುವುದರಲ್ಲಿ ಮಹಾ ನಿಷ್ಣಾತರು. ಕೇವಲ 13 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಎಸ್ತೋನಿಯಾ, ತಲಾ ಆದಾಯ ಹಾಗೂ ತಲಾ ಜನಸಂಖ್ಯೆಯ ಆಧಾರದಲ್ಲಿ ಜಗತ್ತಿನಲ್ಲೇ ಅತ್ಯಂತ ಹೆಚ್ಚು 'ಯೂನಿ ಕಾರ್ನ್' ಕಂಪನಿಗಳನ್ನು ಸೃಷ್ಟಿಸಿದ ದೇಶವಾಗಿ ಹೊರಹೊಮ್ಮಿದೆ.

ಸ್ಕೈಪ್, ಬೋಲ್ಟ್, ವೈಸ್ (Wise - ಈ ಮೊದಲು TransferWise), ಪೈಪ್‌ಡ್ರೈವ್, ಜೆನ್‌ಡೆಸ್ಕ್ ನಂಥ ಜಾಗತಿಕ ತಂತ್ರಜ್ಞಾನ ದೈತ್ಯರು ಈ ಪುಟ್ಟ ದೇಶದ ತಂತ್ರಜ್ಞರ ಬುದ್ಧಿಮತ್ತೆಯಿಂದ ರೂಪುಗೊಂಡ ವರು. ಯಾವುದೇ ಬೃಹತ್ ಕೈಗಾರಿಕಾ ತಳಹದಿ ಇಲ್ಲದ, ಭೌಗೋಳಿಕವಾಗಿ ಅತ್ಯಂತ ಸಣ್ಣದಾದ ದೇಶವೊಂದು ಜಾಗತಿಕ ಟೆಕ್ ಭೂಪಟದಲ್ಲಿ ಇಷ್ಟೊಂದು ಪ್ರಭಾವಶಾಲಿಯಾಗಿ ಬೆಳೆದದ್ದು ಹೇಗೆ? ಇದರ ಹಿಂದೆ ಅತ್ಯಂತ ದೀರ್ಘ ದೃಷ್ಟಿಯ ಆಡಳಿತ, ದೂರದರ್ಶಿ ಯೋಜನೆಗಳು, ಶಿಕ್ಷಣ ಕ್ರಾಂತಿ ಮತ್ತು ಸಾಹಸಿ ಉದ್ಯಮಶೀಲತೆಯ ವಿಶಿಷ್ಟ ಇತಿಹಾಸವಿದೆ.

1991ರಲ್ಲಿ ಸೋವಿಯತ್ ಒಕ್ಕೂಟ ಪತನಗೊಂಡಾಗ ಎಸ್ತೋನಿಯಾಗೆ ಸ್ವಾತಂತ್ರ್ಯ ಸಿಕ್ಕಿತು. ಆದರೆ, ಸ್ವಾತಂತ್ರ್ಯ ಸಿಕ್ಕ ಹೊಸತರಲ್ಲಿ ದೇಶದ ಆರ್ಥಿಕ ಸ್ಥಿತಿ ಶೋಚನೀಯವಾಗಿತ್ತು. ಅಲ್ಲಿ ಯಾವುದೇ ಬೃಹತ್ ನೈಸರ್ಗಿಕ ಸಂಪನ್ಮೂಲಗಳಿರಲಿಲ್ಲ (ಉದಾಹರಣೆಗೆ ತೈಲ ಅಥವಾ ಖನಿಜಗಳು) ಮತ್ತು ಸಾಂಪ್ರದಾಯಿಕ ಕಾರ್ಖಾನೆಗಳ ಮೂಲಸೌಕರ್ಯವೂ ಇರಲಿಲ್ಲ.

ಆ ಸಮಯದಲ್ಲಿ ದೇಶದ ನಾಯಕರು ಮತ್ತು ಯುವ ರಾಜಕಾರಣಿಗಳು (ಅಂದಿನ ಪ್ರಧಾನಿ ಮಾರ್ಟ್ ಲಾರ್ ಸೇರಿದಂತೆ) ಒಂದು ದಿಟ್ಟ ನಿರ್ಧಾರ ತಳೆದರು. ಸಾಂಪ್ರದಾಯಿಕ ಅಭಿವೃದ್ಧಿಯ ಹಂತ ಗಳನ್ನು ಒಂದೊಂದಾಗಿ ದಾಟುವ ಬದಲು, ನೇರವಾಗಿ ಮುಂಬರುವ ಡಿಜಿಟಲ್ ಯುಗಕ್ಕೆ ಜಿಗಿಯುವ (Leapfrogging) ನಿರ್ಧಾರ ಮಾಡಿದರು. ಹಳೆಯ ಕಾಗದಪತ್ರಗಳ ಆಡಳಿತ ವ್ಯವಸ್ಥೆ ಯನ್ನು ಬದಿಗೊತ್ತಿ, ಇಡೀ ದೇಶವನ್ನು ಇಂಟರ್ನೆಟ್ ಮಯಗೊಳಿಸಲು ತೀರ್ಮಾನಿಸಿದರು.

1996ರಲ್ಲಿ ಎಸ್ಟೋನಿಯಾ ಸರಕಾರವು 'ಟೈಗರ್ ಲೀಪ್' ಎಂಬ ಕ್ರಾಂತಿಕಾರಿ ಯೋಜನೆಯನ್ನು ಜಾರಿಗೆ ತಂದಿತು. ದೇಶದ ಪ್ರತಿಯೊಂದು ಶಾಲೆಯಲ್ಲೂ ಕಂಪ್ಯೂಟರ್ ಲ್ಯಾಬ್‌ಗಳನ್ನು ಸ್ಥಾಪಿಸಿ, ಶೇ.ನೂರರಷ್ಟು ಶಾಲೆಗಳಿಗೆ ಇಂಟರ್ನೆಟ್ ಸಂಪರ್ಕ ಕಲ್ಪಿಸಲಾಯಿತು. ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳಿಗೆ ಕಂಪ್ಯೂಟರ್ ಸಾಕ್ಷರತೆ, ಪ್ರೋಗ್ರಾಮಿಂಗ್ ಮತ್ತು ಕೋಡಿಂಗ್ ಬೋಧಿಸುವುದನ್ನು ಕಡ್ಡಾಯಗೊಳಿಸಲಾಯಿತು.

ಏಳು-ಎಂಟು ವರ್ಷದ ಮಕ್ಕಳಿಗೆ ಲಾಜಿಕ್ ಮತ್ತು ಕೋಡಿಂಗ್ ಕಲ್ಪನೆಗಳನ್ನು ಆಟದ ಮೂಲಕ ಕಲಿಸಲಾಯಿತು. 2000ರ ದಶಕದ ವೇಳೆಗೆ ಎಸ್ತೋನಿಯಾದ ಯುವಜನತೆಯ ಇಡೀ ಪೀಳಿಗೆಯೇ ಡಿಜಿಟಲ್ ತಂತ್ರಜ್ಞಾನದಲ್ಲಿ ಅತ್ಯಂತ ಪರಿಣತರಾಗಿ ಬೆಳೆದುನಿಂತಿತು. 2003ರಲ್ಲಿ ಎಸ್ತೋನಿಯಾದ ತಂತ್ರಜ್ಞರಾದ ಜಾನ್ ತಾಲಿನ್, ಪ್ರಿಟ್ ಕಾಸೇಸಾಲು ಮತ್ತು ಆತಿ ಹೇನ್ಲಾ ಅವರು ವಿದೇಶಿ ಪಾಲುದಾರ ರೊಂದಿಗೆ ಸೇರಿ ಸ್ಕೈಪ್ (Skype) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದರು.

ಇಂಟರ್ನೆಟ್ ಮೂಲಕ ಉಚಿತ ವಾಯ್ಸ್/ವಿಡಿಯೋ ಕಾಲ್ ಮಾಡುವ ಸ್ಕೈಪ್, ಜಗತ್ತಿನಾದ್ಯಂತ ಸಂವೇದನೆ ಸೃಷ್ಟಿಸಿತು. 2005ರಲ್ಲಿ 'ಈಬೇ' (eBay) ಕಂಪನಿಯು ಸ್ಕೈಪ್ ಅನ್ನು 2.6 ಶತಕೋಟಿ ಡಾಲರ್‌ಗೆ ಖರೀದಿಸಿತು. ಇದರಿಂದಾಗಿ ಎಸ್ತೋನಿಯಾದ ಸ್ಥಳೀಯ ಎಂಜಿನಿಯರ್‌ಗಳು ಮತ್ತು ಆರಂಭಿಕ ನೌಕರರು ಹಠಾತ್ತಾಗಿ ಅಪಾರ ಸಂಪತ್ತನ್ನು ಗಳಿಸಿದರು. ಈ ಹಣವನ್ನು ಅವರು ಸುಮ್ಮನೆ ಇಟ್ಟುಕೊಳ್ಳಲಿಲ್ಲ. ಅದನ್ನು ಮತ್ತೆ ಸ್ಥಳೀಯ ಹೊಸ ಉದ್ಯಮಗಳಿಗೆ (ಸ್ಟಾರ್ಟ್ ಅಪ್) ಹೂಡಿಕೆ ಮಾಡಿದರು.

ಸ್ಕೈಪ್‌ನಲ್ಲಿ ಕೆಲಸ ಮಾಡಿದ ಅನುಭವ ಮತ್ತು ಹಣದಿಂದಾಗಿ 'ವೈಸ್', 'ಬೋಲ್ಟ್' ನಂಥ ಹೊಸ ಯೂನಿಕಾರ್ನ್‌ಗಳು ಜನ್ಮತಾಳಿದವು. ಇದನ್ನು ತಂತ್ರಜ್ಞಾನ ಲೋಕದಲ್ಲಿ "ಸ್ಕೈಪ್ ಮಾಫಿಯಾ ಇಫೆಕ್ಟ್" ಎಂದು ಕರೆಯಲಾಗು ತ್ತದೆ. ಇದು ಎಸ್ತೋನಿಯಾದಲ್ಲಿ ಪ್ರಬಲ 'ಸ್ಟಾರ್ಟ್‌ಅಪ್ ಇಕೋ ಸಿಸ್ಟಮ್' ಅನ್ನು ಸೃಷ್ಟಿಸಿತು.

ಎಸ್ತೋನಿಯಾ ಸರಕಾರವೇ ತಂತ್ರಜ್ಞಾನದ ಅತಿ ದೊಡ್ಡ ಗ್ರಾಹಕ ಮತ್ತು ಪ್ರೋತ್ಸಾಹಕವಾಗಿ ಬದಲಾಯಿತು. ನಾಗರಿಕರ ಹುಟ್ಟು-ಸಾವಿನ ನೋಂದಣಿ, ವೋಟಿಂಗ್ (e-Voting), ತೆರಿಗೆ ಪಾವತಿ (e-Tax), ಮತ್ತು ವೈದ್ಯಕೀಯ ದಾಖಲೆಗಳೆಲ್ಲವೂ ಡಿಜಿಟಲ್ ರೂಪದಲ್ಲಿವೆ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಡಿಜಿಟಲ್ ಐಡೆಂಟಿಟಿ ನೀಡಲಾಗಿದೆ. ಎಸ್ತೋನಿಯಾದಲ್ಲಿ ಹೊಸ ಕಂಪನಿ ಯೊಂದನ್ನು ನೋಂದಾಯಿಸಲು ಕೇವಲ ಐದು ನಿಮಿಷಗಳು ಸಾಕು!

ಯಾವುದೇ ಸರಕಾರಿ ಕಚೇರಿಗೆ ಅಲೆಯುವ ಅಗತ್ಯವಿಲ್ಲ. 2014ರಲ್ಲಿ ಎಸ್ಟೋನಿಯಾ ವಿಶ್ವದಲ್ಲೇ ಮೊದಲ ಬಾರಿಗೆ 'ಇ-ರೆಸಿಡೆನ್ಸಿ' ಯೋಜನೆಯನ್ನು ತಂದಿತು. ಇದರ ಮೂಲಕ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಉದ್ಯಮಿಯೂ ಎಸ್ತೋನಿಯಾಗೆ ಭೇಟಿ ನೀಡದೆಯೇ ಅಲ್ಲಿ ಡಿಜಿಟಲ್ ನಿವಾಸಿ ಯಾಗಿ ತಜ್ಞ ಉದ್ಯಮವನ್ನು (Digital Business) ಸ್ಥಾಪಿಸಿ, ಯುರೋಪಿಯನ್ ಯೂನಿಯನ್ ಮಾರ್ಕೆಟ್‌ನಲ್ಲಿ ವ್ಯಾಪಾರ ಮಾಡಬಹುದು.

ಎಸ್ತೋನಿಯಾದ ಒಟ್ಟು ಜನಸಂಖ್ಯೆ ಕೇವಲ ಹದಿಮೂರು ಲಕ್ಷ ಇರುವುದರಿಂದ, ಅಲ್ಲಿ ರೂಪು ಗೊಳ್ಳುವ ಯಾವುದೇ ಆ್ಯಪ್ ಅಥವಾ ನವೋದ್ಯಮವು ಕೇವಲ ಸ್ಥಳೀಯ ಮಾರುಕಟ್ಟೆ ಯನ್ನು ನೆಚ್ಚಿಕೊಳ್ಳಲು ಸಾಧ್ಯವಿಲ್ಲ. ಅಲ್ಲಿನ ಉದ್ಯಮಿಗಳು ಮೊದಲ ದಿನದಿಂದಲೇ ತಮ್ಮ ಉತ್ಪನ್ನವನ್ನು ಜಾಗತಿಕ ಮಾರುಕಟ್ಟೆಗೆ ತಕ್ಕಂತೆ ವಿನ್ಯಾಸಗೊಳಿಸುತ್ತಾರೆ. ಈ 'ಗ್ಲೋಬಲ್' ಮಾನಸಿಕತೆಯೇ ಅವರ ಶೀಘ್ರ ಬೆಳವಣಿಗೆಗೆ ಪ್ರಮುಖ ಕಾರಣ.

ಎಸ್ತೋನಿಯಾದ ಕಥೆಯು ಜಗತ್ತಿಗೆ ನೀಡುವ ದೊಡ್ಡ ಸಂದೇಶವೆಂದರೆ - ಯೂನಿಕಾರ್ನ್‌ಗಳನ್ನು ಅಥವಾ ತಂತ್ರಜ್ಞಾನ ಕ್ರಾಂತಿಯನ್ನು ಸೃಷ್ಟಿಸಲು ದೇಶದ ಗಾತ್ರ ಅಥವಾ ಭೌಗೋಳಿಕ ಸಂಪನ್ಮೂಲ ಮುಖ್ಯವಲ್ಲ. ಬದಲಿಗೆ ಆಡಳಿತ ಗಾರರ ದೀರ್ಘದೃಷ್ಟಿ, ಶಿಕ್ಷಣದಲ್ಲಾದ ಹೂಡಿಕೆ ಮತ್ತು ಉದ್ಯಮ ಸ್ನೇಹಿ ಡಿಜಿಟಲ್ ವಾತಾವರಣ ಮುಖ್ಯ. ಪುಟ್ಟ ದೇಶವೊಂದು ಡಿಜಿಟಲ್ ಆಡಳಿತ ಮತ್ತು ಸಾಹಸಿ ಮನೋಭಾವದಿಂದ ಇಡೀ ಜಗತ್ತನ್ನೇ ಹೇಗೆ ಪ್ರಭಾವಿಸಬಹುದು ಎಂಬುದಕ್ಕೆ ಎಸ್ತೋನಿಯಾ ಅತ್ಯುತ್ತಮ ಉದಾಹರಣೆಯಾಗಿದೆ.

ಆಫ್ರಿಕಾ ಖಂಡದ ಸಾಹಿತ್ಯಿಕ ನಾಯಕತ್ವ ನೈಜೀರಿಯಾದ್ದು ಎಂದರೆ ತಪ್ಪಾಗಲಾರದು. ಕಥನ ಕೌಶಲ ಮತ್ತು ಸಾಹಿತ್ಯಿಕ ವೈಭವದಲ್ಲಿ ನೈಜೀರಿಯಾ ಅಸಾಧಾರಣ ಪ್ರಗತಿ ಸಾಧಿಸಲು ಸಹ ಏನೋ ಪ್ರಬಲ ಕಾರಣವಿದ್ದಿರಲೇಬೇಕು. ಚಿನುವಾ ಅಚೆಬೆ, ವೊಲೆ ಸೊಯಿಂಕಾ (ಆಫ್ರಿಕಾದ ಮೊದಲ ನೊಬೆಲ್ ಸಾಹಿತ್ಯ ಪುರಸ್ಕೃತ), ಬೆನ್ ಓಕ್ರಿ, ಚಿಮಾಮಂದ ನ್ಗೋಜಿ ಅಡಿಚಿ ಅವರಂಥ ಪ್ರಪಂಚ ಪ್ರಸಿದ್ಧ ಬರಹಗಾರರನ್ನು ಈ ದೇಶ ನೀಡಿದೆ. ನೈಜೀರಿಯಾದ ಯೊರುಬಾ, ಇಗ್ಬೋ ಮತ್ತು ಹೌಸಾ ಮುಂತಾದ ವೈವಿಧ್ಯಮಯ ಸಮುದಾಯಗಳಲ್ಲಿ ಕಥೆ ಹೇಳುವುದು, ಗಾದೆ ಮಾತುಗಳು, ಜಾನಪದ ಕಾವ್ಯಗಳು ದಿನನಿತ್ಯದ ಸಂವಹನದ ಭಾಗವಾಗಿವೆ. ಲಿಖಿತ ಸಾಹಿತ್ಯ ಬರುವುದಕ್ಕೂ ಮುನ್ನವೇ ಅಲ್ಲಿ ಸಾಂಸ್ಕೃತಿಕವಾಗಿ ಕಥನ ಕಲೆಯು ಆಳವಾಗಿ ಬೇರೂರಿದೆ.

ನೈಜೀರಿಯಾದ ವಸಾಹತುಶಾಹಿ ಇತಿಹಾಸ, ತದನಂತರದ ಮಿಲಿಟರಿ ಆಡಳಿತ, ಆಂತರಿಕ ಸಂಘರ್ಷ ಗಳು, ಭ್ರಷ್ಟಾಚಾರ ಮತ್ತು ಸಾಂಸ್ಕೃತಿಕ ಜಡತ್ವದ ವಿರುದ್ಧದ ಹೋರಾಟಗಳು ಬರಹಗಾರರಿಗೆ ಅಗಾಧವಾದ ಸರಕನ್ನು ಒದಗಿಸಿದವು. ಸಮಾಜದ ಸಂಕೀರ್ಣತೆ ಮತ್ತು ನೋವುಗಳು ಅಲ್ಲಿನ ಸಾಹಿತ್ಯಕ್ಕೆ ತೀವ್ರತೆ ಹಾಗೂ ಜಾಗತಿಕ ಸಾಂಗತ್ಯವನ್ನು ನೀಡಿದವು.

ನೈಜೀರಿಯನ್ ಬರಹಗಾರರು ಇಂಗ್ಲಿಷ್ ಭಾಷೆಯನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ, ಸ್ಥಳೀಯ ನುಡಿಗಟ್ಟುಗಳು, ಶೈಲಿ ಮತ್ತು 'ಪಿಡ್ಜಿನ್' (Pidgin) ಸಂಸ್ಕೃತಿಯೊಂದಿಗೆ ಸಮ್ಮಿಲನಗೊಳಿಸಿ ಹೊಸ ಜೀವ ನೀಡಿದರು. ಚಿನುವಾ ಅಚೆಬೆಯವರ 'ಥಿಂಗ್ಸ್ ಫಾಲ್ ಅಪಾರ್ಟ್' ಕಾದಂಬರಿ ಆಫ್ರಿಕನ್ ದೃಷ್ಟಿಕೋನದಿಂದ ಜಗತ್ತಿಗೆ ವಸಾಹತುಶಾಹಿಯ ಪ್ರಭಾವವನ್ನು ಮನಮುಟ್ಟು ವಂತೆ ತಿಳಿಸಿ ಕೊಟ್ಟಿತು. ವೊಲೆ ಸೊಯಿಂಕಾ ಮತ್ತು ಅಚೆಬೆಯವರ ಯಶಸ್ಸು ಮುಂದಿನ ಪೀಳಿಗೆಯ ಬರಹ ಗಾರರಿಗೆ (ಉದಾಹರಣೆಗೆ ಚಿಮಾಮಂದ ಅಡಿಚಿ) ದೊಡ್ಡ ಪ್ರೇರಣೆಯಾಯಿತು. ಇದು ಸಾಹಿತ್ಯ ಕ್ಷೇತ್ರಕ್ಕೆ ನಿರಂತರವಾಗಿ ಹೊಸ ಪ್ರತಿಭೆಗಳನ್ನು ತಂದುಕೊಡುತ್ತಿದೆ.

ಗಮನಿಸಿದ್ದೀರಾ, ಲ್ಯಾಟಿನ್ ಅಮೆರಿಕದ ವೆನೆಜುವೆಲಾ ದೇಶವು ರಾಜಕೀಯ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದರೂ, ಶಾಸ್ತ್ರೀಯ ಸಂಗೀತ ರಂಗದಲ್ಲಿ ಜಗತ್ತಿಗೇ ಮಾದರಿಯಾದ ಪ್ರತಿಭೆಗಳನ್ನು ನೀಡಿದೆ. ಗುಸ್ಟಾವೊ ದುಡಾಮೆಲ್ ಅವರಂಥ ವಿಶ್ವವಿಖ್ಯಾತ ನಿರ್ದೇಶಕರು ಹಾಗೂ ಸಿಮೋನ್ ಬೊಲಿವರ್ ಸಿಂಫನಿ ಆರ್ಕೆಸ್ಟ್ರಾ ಇದಕ್ಕೆ ಉಜ್ವಲ ಉದಾಹರಣೆ. 1975ರಲ್ಲಿ ಜೋಸ್ ಆಂಟೋನಿಯೊ ಅಬ್ರೂ ಎಂಬ ಸಂಗೀತಗಾರ ಮತ್ತು ಅರ್ಥಶಾಸ್ತ್ರಜ್ಞ 'ಎಲ್ ಸಿಸ್ಟೆಮಾ' ಎಂಬ ಕ್ರಾಂತಿಕಾರಿ ಕಾರ್ಯಕ್ರಮವನ್ನು ಪ್ರಾರಂಭಿಸಿದ. ಇದು ಕೇವಲ ಸಂಗೀತ ಶಿಕ್ಷಣವಲ್ಲ, ಬದಲಿಗೆ ಸಾಮಾಜಿಕ ಪರಿವರ್ತನೆಯ ಸಾಧನ.

ಬಡತನ, ಬೀದಿ ಅಪರಾಧಗಳು ಮತ್ತು ಗ್ಯಾಂಗ್ ಹಿಂಸಾಚಾರದಿಂದ ಯುವಜನರನ್ನು ದೂರವಿಡಲು ಈ ಯೋಜನೆಯನ್ನು ಬಳಸಲಾಯಿತು. ನಿರ್ಗತಿಕ ಕುಟುಂಬಗಳ ಮಕ್ಕಳಿಗೆ ಉಚಿತವಾಗಿ ಸಂಗೀತ ವಾದ್ಯ ಗಳನ್ನು ನೀಡಿ, ಅವರನ್ನು ಆರ್ಕೆಸ್ಟ್ರಾ ತರಬೇತಿಗೆ ಸೇರಿಸಲಾಯಿತು. ಎಲ್ ಸಿಸ್ಟೆಮಾ ವ್ಯವಸ್ಥೆಯಲ್ಲಿ ಮಕ್ಕಳು ಒಬ್ಬಂಟಿಯಾಗಿ ಅಭ್ಯಾಸ ಮಾಡುವುದಕ್ಕಿಂತ ಹೆಚ್ಚಾಗಿ ಆರಂಭದಿಂದಲೇ ಗುಂಪಿನಲ್ಲಿ (ಆರ್ಕೆಸ್ಟ್ರ) ನುಡಿಸುವುದನ್ನು ಕಲಿಯುತ್ತಾರೆ.

ಇದರಿಂದ ಪರಸ್ಪರ ಸಹಕಾರ, ಶಿಸ್ತು, ಏಕಾಗ್ರತೆ ಮತ್ತು ಆತ್ಮವಿಶ್ವಾಸ ಬೆಳೆಯುತ್ತದೆ. ಸರಕಾರಗಳು ಬದಲಾದರೂ ಈ ಯೋಜನೆಗೆ ಬೆಂಬಲ ಸಿಕ್ಕಿತು. ಇಂದು ವೆನೆಜುವೆಲಾದ ಲಕ್ಷಾಂತರ ಮಕ್ಕಳು ಶಾಸ್ತ್ರೀಯ ಸಂಗೀತದ ವಾತಾವರಣದಲ್ಲೇ ಬೆಳೆಯುತ್ತಿದ್ದಾರೆ. ಈ ಬೃಹತ್ ತಳಹದಿಯಿಂದಾಗಿ ಜಾಗತಿಕ ಮಟ್ಟದ ಶ್ರೇಷ್ಠ ಸಂಗೀತಗಾರರು ಸಹಜವಾಗಿಯೇ ಹೊರ ಹೊಮ್ಮುತ್ತಿದ್ದಾರೆ.

ಒಂದು ಸಮಾಜವು ಯಾವ ಕ್ಷೇತ್ರಕ್ಕೆ ಗರಿಷ್ಠ ಗೌರವ ಮತ್ತು ಆದ್ಯತೆ ನೀಡುತ್ತದೆಯೋ, ಆ ಕ್ಷೇತ್ರದಲ್ಲಿ ಪ್ರತಿಭೆಗಳು ಹೆಮ್ಮರವಾಗುತ್ತವೆ. ಕೀನ್ಯಾದಲ್ಲಿ ಓಟಗಾರನಿಗೆ, ನೈಜೀರಿಯಾದಲ್ಲಿ ಬರಹಗಾರನಿಗೆ, ಎಸ್ತೋನಿಯಾದಲ್ಲಿ ತಂತ್ರಜ್ಞನಿಗೆ ಸಿಗುವ ಸಾಮಾಜಿಕ ಮನ್ನಣೆ ಅಪಾರ. ಒಬ್ಬ ವ್ಯಕ್ತಿಯ ಯಶಸ್ಸು ನೂರು ಜನರಲ್ಲಿ ಭರವಸೆ ಹುಟ್ಟಿಸುತ್ತದೆ.

'ನಮ್ಮ ಮೂಲದವರೇ ಇದನ್ನು ಸಾಧಿಸಿರುವಾಗ, ನನಗೇಕೆ ಸಾಧ್ಯವಿಲ್ಲ?' ಎಂಬ ಚಿಂತನೆ ಹೊಸ ಪೀಳಿಗೆಯನ್ನು ಹುಟ್ಟುಹಾಕುತ್ತದೆ. ಹೀಗಾಗಿ, ಜಗತ್ತಿನ ಯಾವುದೇ ಮೂಲೆಯಲ್ಲಿ ಒಂದು ನಿರ್ದಿಷ್ಟ ಚಟುವಟಿಕೆಯಲ್ಲಿ ಶ್ರೇಷ್ಠತೆ ಕಂಡುಬಂದರೆ, ಅದು ಕೇವಲ ವೈಯಕ್ತಿಕ ಸಾಮರ್ಥ್ಯವಲ್ಲ, ಬದಲಿಗೆ ಪರಿಸರ, ಸಂಸ್ಕೃತಿ, ಅವಕಾಶ ಮತ್ತು ವ್ಯವಸ್ಥೆಗಳು ಒಂದೆಡೆ ಸಂಗಮಿಸಿದಾಗ ರೂಪುಗೊಳ್ಳುವ ಅದ್ಭುತ ಫಲಿತಾಂಶವಾಗಿದೆ.

ವಿಶ್ವೇಶ್ವರ ಭಟ್‌

View all posts by this author