ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

R T Vittalmurthy Column: ಪರಂ-ಕುಮಾರಸ್ವಾಮಿ ತಾಜ್‌ ಮೀಟಿಂಗ್‌ ರಹಸ್ಯವೇನು ?

ಈ ಮಧ್ಯೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಜೆಡಿಎಸ್ ನಾಯಕ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ಸಂಚಲನ ಮೂಡಿಸಿದೆ. ಬೆಂಗಳೂರಿನ ತಾರಾ ಹೋಟೆಲ್ ಒಂದರಲ್ಲಿ ಕಳೆದ ಶನಿವಾರ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಪರಮೇಶ್ವರ್ 45 ನಿಮಿಷಗಳ ಕಾಲ ರಹಸ್ಯವಾಗಿ ಚರ್ಚಿಸಿದ್ದು ಕೈ ಪಾಳಯದಲ್ಲಿ ಸಂಭವಿಸಲಿರುವ ಅಪಾಯದ ಮುನ್ಸೂಚನೆ ಎಂಬುದು ಮೂಲಗಳ ಅಭಿಪ್ರಾಯ.

ಮೂರ್ತಿಪೂಜೆ

ಕರ್ನಾಟಕ ಸರಕಾರದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ನಿಯೋಗವು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಳೆದ ವಾರ ಭೇಟಿ ಮಾಡಿದೆ. ಈ ಸಂದರ್ಭದಲ್ಲಿ ಸಿಎಂ ಹುದ್ದೆಯ ವಿಷಯದಲ್ಲಿ ನಡೆಯುತ್ತಿರುವ ಹಗ್ಗ ಜಗ್ಗಾಟವೂ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅದು ಪ್ರಸ್ತಾಪಿಸಿದೆ.

ಅಂದ ಹಾಗೆ, “ಸಿಎಂ ಹುದ್ದೆಯ ವಿಷಯದಲ್ಲಿ ನಡೆಯುತ್ತಿರುವ ಹಗ್ಗ ಜಗ್ಗಾಟದಿಂದ ಆಡಳಿತ ಯಂತ್ರದ ಮೇಲೆ ಪ್ರತಿಕೂಲ ಪರಿಣಾಮವಾಗಿದೆ. ಹೀಗಾಗಿ ಮೊದಲು ಈ ವಿಷಯ ದಲ್ಲಿ ಹೈಕಮಾಂಡ್ ಸ್ಪಷ್ಟವಾಗಿ ಮಾತನಾಡಬೇಕು" ಎಂದು ನಿಯೋಗ ವಿವರಿಸಿದಾಗ, “ಈ ವಿಷಯದಲ್ಲಿ ಹೈಕಮಾಂಡ್ ಒಂದು ತೀರ್ಮಾನಕ್ಕೆ ಬಂದಿದೆ. ಸದ್ಯದ ಈ ಕುರಿತು ಮಾತನಾಡಲಿದೆ" ಅಂತ ಖರ್ಗೆ ಹೇಳಿದ್ದಾರೆ.

ಕುತೂಹಲದ ಸಂಗತಿ ಎಂದರೆ ಸತೀಶ್ ಜಾರಕಿಹೊಳಿ ನೇತೃತ್ವದ ನಿಯೋಗ ಖರ್ಗೆ ಯವರನ್ನು ಭೇಟಿ ಮಾಡಿ ಬಂದ ನಂತರ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಾಳಯಗಳಿಗೆ ವ್ಯತಿರಿಕ್ತ ಸಂದೇಶ ರವಾನೆಯಾಗಿದೆ. ಅದರ ಪ್ರಕಾರ, ಕರ್ನಾಟಕದಲ್ಲಿ ಅಧಿಕಾರ ಹಂಚಿಕೆಗಾಗಿ ನಡೆಯುತ್ತಿರುವ ಕದನವು ಏಪ್ರಿಲ್ ಶುರುವಿನಲ್ಲಿ ಬಗೆಹರಿಯಲಿದ್ದು ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಡಲಿದ್ದಾರೆ ಎಂಬ ಮಾತು ಡಿಕೆಶಿ ಪಾಳಯದಿಂದ ಕೇಳಿ ಬರುತ್ತಿದೆ.

ಅಂದ ಹಾಗೆ, ಮಾರ್ಚ್ 6ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಬಜೆಟ್‌ಗೆ ಅನುಮೋದನೆ ದೊರೆಯುವ ತನಕ ಸಿದ್ದರಾಮಯ್ಯ ಅವರನ್ನು ಬದಲಿಸುವುದು ಹೈಕಮಾಂಡ್‌ಗೂ ಕಷ್ಟ. ಹೀಗಾಗಿ ಬಜೆಟ್‌ಗೆ ವಿಧಾನಮಂಡಲದಲ್ಲಿ ಅನುಮೋದನೆ ಪಡೆದ ನಂತರ ಸಿದ್ದರಾಮಯ್ಯ ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.

ಇದನ್ನೂ ಓದಿ: R T Vittalmurthy Column: ಮತ್ತೆ ತಲೆ ಎತ್ತಲಿದೆಯೇ ಪ್ರಗತಿಪರ ದಳ ?

ಹೀಗಾಗಿ ಈಗಲೇ ಅಧಿಕಾರ ಬಿಟ್ಟು ಕೊಡಬೇಕು ಅಂತ ರಬ್ ಮಾಡಿಕೊಳ್ಳುವುದು ಡಿ.ಕೆ.ಶಿವಕುಮಾರ್ ಅವರಿಗೂ ಬೇಕಾಗಿಲ್ಲ. ಆದ್ದರಿಂದ ಅಲ್ಲಿಯವರೆಗೆ ಕಾಯಲು ಅವರು ನಿರ್ಧರಿಸಿದ್ದಾರೆ.

ಇವತ್ತು ಕರ್ನಾಟಕದಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆ ಸಂಘರ್ಷವನ್ನು ಪರಿಹರಿಸಲು ಹೈಕಮಾಂಡ್ ಒಂದು ತೀರ್ಮಾನಕ್ಕೆ ಬಂದಿದೆ ಎಂದು ಖರ್ಗೆಯವರು ಹೇಳಿರುವುದರ ಅರ್ಥ ಇಷ್ಟೇ ಎಂಬುದು ಡಿಕೆಶಿ ಪಾಳಯದ ಮಾತು.

ಹೀಗೆ ಸತೀಶ್ ಜಾರಕಿಹೊಳಿ ನೇತೃತ್ವದ ನಿಯೋಗ ದಿಲ್ಲಿಗೆ ಹೋಗಿ ಬಂದ ನಂತರ ಡಿ.ಕೆ.ಶಿವಕುಮಾರ್ ಅವರ ಪಾಳಯಕ್ಕೆ ಒಂದು ಬಗೆಯ ಸಂದೇಶ ರವಾನೆಯಾಗಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಳಯಕ್ಕೆ ಮತ್ತೊಂದು ಬಗೆಯ ಸಂದೇಶ ರವಾನೆಯಾಗಿದೆ. ಅದರ ಪ್ರಕಾರ, ಪಕ್ಷದ ವರಿಷ್ಠರು ಸದ್ಯದ ಡಿ.ಕೆ.ಶಿವಕುಮಾರ್ ಅವರಿಗೆ ಸ್ಪಷ್ಟ ಸಂದೇಶ ನೀಡಲಿದ್ದಾರಲ್ಲದೆ, ಜೂನ್ ತಿಂಗಳ ತನಕ ಈ ವಿಷಯದಲ್ಲಿ ಏನೂ ಮಾತನಾಡುವಂತಿಲ್ಲ ಎಂದು ಹೇಳಲಿದ್ದಾರೆ.

ಕಾರಣ? ಮಾರ್ಚ್ ತಿಂಗಳಲ್ಲಿ ಬಜೆಟ್ ಅಧಿವೇಶನ ಇದ್ದರೆ, ಏಪ್ರಿಲ್-ಮೇ ತಿಂಗಳಲ್ಲಿ ಐದು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಇದಾದ ನಂತರ ಜೂನ್ ಹೊತ್ತಿಗೆ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮತ್ತು ವಿಧಾನ ಪರಿಷತ್ತಿನ ಹಲವು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.‌

Screenshot_1 ಋ

ಇಂಥ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಮಾತನಾಡಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ. ಹೀಗಾಗಿ ಜೂನ್‌ವರೆಗೆ ನಾಯಕತ್ವದ ವಿಚಾರ ಚರ್ಚೆಗೆ ಬರಬಾರದು ಎಂದು ವರಿಷ್ಠರು ಡಿಕೆಶಿ ಅವರಿಗೆ ಹೇಳಲಿದ್ದಾರೆ ಎಂಬುದು ಸಿದ್ದು ಪಾಳಯದ ಮಾತು. ಅರ್ಥಾತ್, ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿರುವ ಅಧಿಕಾರ ಹಂಚಿಕೆಯ ಜಗ್ಗಾಟಕ್ಕೆ ಬ್ರೇಕ್ ಬೀಳಲಿದೆ ಎಂಬುದು ಸಿದ್ದರಾಮಯ್ಯ ಪಾಳಯದ ವಿಶ್ವಾಸ.

ಗಮನಿಸಬೇಕಾದ ಸಂಗತಿ ಎಂದರೆ ಖರ್ಗೆಯವರ ಮಾತಿನ ನಂತರ ಸಿದ್ದು-ಡಿಕೆಶಿ ಬಣ ಗಳಲ್ಲಿ ಕಾಣಿಸಿಕೊಂಡಿರುವ ನಂಬಿಕೆ ಎಷ್ಟು ಧೃಢವಾಗಿದೆ ಎಂದರೆ ತಮ್ಮ ನಂಬಿಕೆಗೆ ವಿರುದ್ಧವಾಗಿ ಏನೂ ನಡೆಯುವುದಿಲ್ಲ ಎಂಬ ಅತ್ಮವಿಶ್ವಾಸ ವ್ಯಕ್ತವಾಗುತ್ತಿದೆ.

ಆಪ್ತ ಸಚಿವರ ಖಡಕ್ ಸಂದೇಶ?

ಅಂದ ಹಾಗೆ, ಸತೀಶ್ ಜಾರಕಿಹೊಳಿ ನೇತೃತ್ವದ ನಿಯೋಗವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ ನಂತರ ಉಭಯ ಬಣಗಳಲ್ಲಿ ಕಾಣಿಸಿಕೊಂಡ ವಿಶ್ವಾಸದ ಕತೆ ಒಂದೆಡೆಯಾದರೆ, ಮತ್ತೊಂದೆಡೆ ಸಿದ್ದರಾಮಯ್ಯ ಅವರ ಪರಮಾಪ್ತರು ಹೈಕಮಾಂಡ್ ವರಿಷ್ಠರಿಗೆ ಖಡಕ್ಕಾದ ಸಂದೇಶಗಳನ್ನು ರವಾನಿಸುತ್ತಲೇ ಇದ್ದಾರೆ.

ಅವರ ಪ್ರಕಾರ, ಸಿದ್ದರಾಮಯ್ಯ ಅವರನ್ನು ಸಿಎಂ ಹುದ್ದೆಯಿಂದ ಇಳಿಸಿದರೆ ಸರಕಾರ ಉರುಳುವುದು ಖಂಡಿತ. ಇವತ್ತು ಕರ್ನಾಟಕದ ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕಿರುವ ಜನನಾಯಕರೆಂದರೆ ಸಿದ್ದರಾಮಯ್ಯ ಅವರು ಮಾತ್ರ. ಇವತ್ತು ಸಿದ್ದರಾಮಯ್ಯ ಅವರಿಗೆ ತಮ್ಮದೇ ಸಮುದಾಯದ ಸಾಲಿಡ್ಡು ಬೆಂಬಲವಿದೆ. ಅಹಿಂದ ವರ್ಗಗಳ ಶಕ್ತಿ ಇದೆ. ಹೀಗೆ ತಮ್ಮ ಸಮುದಾಯ ಮತ್ತು ಪವರ್‌ಪುಲ್ ಮತ ಬ್ಯಾಂಕಿನ ಬೆಂಬಲ ಹೊಂದಿರುವ ಮತ್ತೊಬ್ಬ ನಾಯಕರು ಕಾಂಗ್ರೆಸ್ ಪಕ್ಷದಲ್ಲಿಲ್ಲ. ಇವತ್ತು ನಾವು ಸೈದ್ಧಾಂತಿಕವಾಗಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ವಿರೋಧಿಸಬಹುದು. ಆದರೆ ಅವರಿಗೆ ತಮ್ಮ ಸಮುದಾಯದ ಬೆಂಬಲವಿದೆಯಲ್ಲದೆ ನಿರ್ದಿಷ್ಟ ಮತಬ್ಯಾಂಕಿನ ಪವರ್ ಇದೆ. ಹೀಗಾಗಿ ಅವರು ಜನನಾಯಕ.

ಇದೇ ರೀತಿ ಬಿಜೆಪಿಯ ಯಡಿಯೂರಪ್ಪನವರಿಗೆ ತಮ್ಮ ಸಮುದಾಯದ ಸಾಲಿಡ್ಡು ಬೆಂಬಲ ವಿದೆ. ಅದೇ ಕಾಲಕ್ಕೆ ಆರೆಸ್ಸೆಸ್‌ನ ಶಕ್ತಿ ಬೆನ್ನಿಗಿದೆ. ಹೀಗಾಗಿ ಅವರೂ ಜನನಾಯಕ. ಹೀಗೆ ಜನನಾಯಕರಾಗಿರುವವರನ್ನು ಅಧಿಕಾರದಲ್ಲಿದ್ದಾಗ ಅಲುಗಾಡಿಸುವುದು ಕಷ್ಟ. ಹಾಗೇ ನಾದರೂ ಮಾಡಿದರೆ ಸರಕಾರ ಉರುಳುತ್ತದೆ ಎಂಬ ಅವರ ಸಂದೇಶ ದಿಲ್ಲಿಯ ಕೈ ನಾಯಕ ರನ್ನು ಕಂಗೆಡಿಸಿದೆ ಮತ್ತು ಇದೇ ಕಾರಣಕ್ಕಾಗಿ ಅವರು ಜೂನ್‌ವರೆಗೆ ಅಧಿಕಾರ ಹಂಚಿಕೆಯ ಮಾತಿಗೆ ಬ್ರೇಕ್ ಹಾಕಲಿದ್ದಾರೆ ಎಂಬುದು ಸಿದ್ದರಾಮಯ್ಯ ಅವರ ಪಾಳಯದ ಮಾತು.

ಡಿಕೆಶಿ ರವಾನಿಸಿದ ಸಂದೇಶ?: ಹೀಗೆ ಸಿದ್ದು ಪಾಳಯದ ಆತ್ಮವಿಶ್ವಾಸಕ್ಕೆ ಒಂದು ಕಾರಣ ವಿದ್ದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಾಳಯಕ್ಕೂ ಒಂದು ಆತ್ಮವಿಶ್ವಾಸವಿದೆ. ಅದರ ಪ್ರಕಾರ, ಕೆಲ ತಿಂಗಳ ಹಿಂದೆ ಡಿ.ಕೆ.ಶಿವಕುಮಾರ್ ಅವರಿಗಿದ್ದ ಶಾಸಕ ಬಲ ಈಗ ಗಣನೀಯವಾಗಿ ಏರಿಕೆಯಾಗಿದೆ. ಅಷ್ಟೇ ಅಲ್ಲ, ಸನ್ನಿವೇಶ ಎದುರಾದರೆ ಪ್ರತಿಪಕ್ಷಗಳ ಪಾಳಯದಿಂದ ಹದಿನೈದರಷ್ಟು ಮಂದಿ ಶಾಸಕರು ಡಿಕೆಶಿ ಜತೆ ಕೈ ಜೋಡಿಸಲು ತಯಾರಿದ್ದಾರೆ.

ಹೀಗೆ ಸ್ವಪಕ್ಷದ ಶಾಸಕರ ಬಲವನ್ನು ಹಿಗ್ಗಿಸಿಕೊಳ್ಳುತ್ತಾ ನಡೆದಿರುವ ಡಿಕೆಶಿ, ಅದೇ ಕಾಲಕ್ಕೆ ವಿಪಕ್ಷಗಳ ಕೋಟೆಗೂ ಲಗ್ಗೆ ಹಾಕುತ್ತಾ ಪವರ್‌ಪುಲ್ಲಾಗಿದ್ದಾರೆ ಎಂಬುದು ವರಿಷ್ಠರಿಗೆ ಮನವರಿಕೆಯಾಗಿದೆ. ಈ ಅಂಶವನ್ನೇ ಮುಂದಿಟ್ಟುಕೊಂಡು ಪ್ರಿಯಾಂಕಾ ಗಾಂಧಿಯವರು ತಮ್ಮ ಸಹೋದರ ರಾಹುಲ್ ಗಾಂಧಿಯವರಿಗೆ ಕನ್ವಿನ್ಸು ಮಾಡಿದ್ದು, ರಾಹುಲ್ ಗಾಂಧಿ ಯವರಿಗೂ ಇದು ಹೌದೆನ್ನಿಸಿದೆ.

ಹೀಗಾಗಿ ಅವರು ಸಿದ್ದರಾಮಯ್ಯ ಅವರನ್ನು ದಿಲ್ಲಿಗೆ ಕರೆಸಿ ಪಟ್ಟ ಬಿಟ್ಟು ಕೊಡುವಂತೆ ಸೂಚಿಸಲಿದ್ದಾರೆ. ಅ ಮೂಲಕ ಏಪ್ರಿಲ್ ಶುರುವಿನಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಯಾಗಲಿದ್ದಾರೆ ಎಂದು ಡಿಕೆಶಿ ಪಾಳಯ ಹೇಳುತ್ತಿದೆ.

ಪರಮೇಶ್ವರ ಚರಿತೆ ಆರಂಭವಾಗಲಿದೆ: ಈ ಮಧ್ಯೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಜೆಡಿಎಸ್ ನಾಯಕ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ಸಂಚಲನ ಮೂಡಿಸಿದೆ. ಬೆಂಗಳೂರಿನ ತಾರಾ ಹೋಟೆಲ್ ಒಂದರಲ್ಲಿ ಕಳೆದ ಶನಿವಾರ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಪರಮೇಶ್ವರ್ 45 ನಿಮಿಷಗಳ ಕಾಲ ರಹಸ್ಯವಾಗಿ ಚರ್ಚಿಸಿದ್ದು ಕೈ ಪಾಳಯದಲ್ಲಿ ಸಂಭವಿಸಲಿರುವ ಅಪಾಯದ ಮುನ್ಸೂಚನೆ ಎಂಬುದು ಮೂಲಗಳ ಅಭಿಪ್ರಾಯ.

ಅಂದ ಹಾಗೆ, ಇವತ್ತು ಸಿಎಂ ಆಗಿರುವ ಸಿದ್ದರಾಮಯ್ಯ ಮತ್ತು ಸಿಎಂ ಹುದ್ದೆ ನನಗೆ ಬೇಕೇ ಬೇಕು ಎಂದು ಪಟ್ಟು ಹಿಡಿದಿರುವ ಡಿಕೆಶಿ ಅವರು ನೇರವಾಗಿ ಕುಮಾರಸ್ವಾಮಿ ಅವರ ವಿರೋಧಿಗಳು. ಇದು ಗೊತ್ತಿದ್ದ ಮೇಲೂ ಕುಮಾರಸ್ವಾಮಿ ಅವರನ್ನು ಪರಮೇಶ್ವರ್ ಭೇಟಿಯಾಗುತ್ತಾರೆ ಎಂದರೆ ನಿರ್ದಿಷ್ಟ ಸಹಾಯವನ್ನು ಅವರು ಕೋರಿದ್ದಾರೆ ಅಂತಲೇ ಅರ್ಥ. ಈ ಸಹಾಯದ ಸ್ವರೂಪ ಏನು? ಎಂಬುದೇ ಸದ್ಯದ ಕುತೂಹಲ.

ಅಂದ ಹಾಗೆ, ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಸಂಘರ್ಷ ತಾರಕಕ್ಕೇರಿ ಸರಕಾರಕ್ಕೆ ಅಪಾಯ ಎದುರಾಗುವ ಲಕ್ಷಣ ಕಂಡರೆ, ಸಿಎಂ ಆಗಿ ಎಮರ್ಜ್ ಆಗಲು ಪರಮೇಶ್ವರ್ ಮುಂದಾಗುವುದು ಗ್ಯಾರಂಟಿ. ಹೀಗಾಗಿ ಅಂಥ ಅಪಾಯದ ಸನ್ನಿವೇಶದಲ್ಲಿ ಜೆಡಿಎಸ್ ಶಾಸಕರ ಬೆಂಬಲ ತಮಗಿರಲಿ ಅಂತ ಪರಮೇಶ್ವರ್ ಅವರು ಕುಮಾರಸ್ವಾಮಿ ಅವರನ್ನು ಕೋರಿದರೇ? ಗೊತ್ತಿಲ್ಲ. ಆದರೆ ಹಾಗೆ ಕೋರಿದರೂ ಕುಮಾರಸ್ವಾಮಿ ಅವರು ಪರಮೇಶ್ವರ್‌ರ ಬೆಂಬಲಕ್ಕೆ ನಿಲ್ಲಲು ಸಾಧ್ಯವಿಲ್ಲ. ಯಾಕೆಂದರೆ ಬಿಜೆಪಿ ಜತೆಗಿನ ಮೈತ್ರಿ ಗಟ್ಟಿಯಾಗಿರು ವಾಗ,ಪರಮೇಶ್ವರ್ ಅವರಿಗೆ ಜೆಡಿಎಸ್ ಶಾಸಕರು ಬೆಂಬಲ ನೀಡುವುದು ಅಸಾಧ್ಯ.

ಹೀಗಾಗಿ ಕುಮಾರಸ್ವಾಮಿ-ಪರಮೇಶ್ವರ್ ಅವರ ಮಧ್ಯೆ ಈ ವಿಷಯದಲ್ಲಿ ಯಾವುದೇ ಒಪ್ಪಂದವಾಗಿರಲು ಸಾಧ್ಯವಿಲ್ಲ. ಅದರೆ ಕಾಂಗ್ರೆಸ್‌ನಲ್ಲಿನ ಬಣ ಸಂಘರ್ಷ ತಾರಕಕ್ಕೇರಿದ ಸಂದರ್ಭದಲ್ಲಿ ಬಿಜೆಪಿಯ ಟಾಪ್ ಲೀಡರುಗಳು ಫೀಲ್ಡಿಗೆ ಎಂಟ್ರಿ ಆಗಬಹುದು.

ಹಾಗೇನಾದರೂ ಅವರು ಎಂಟ್ರಿಯಾದರೆ ಸರಕಾರ ಅಲುಗಾಡಬಹುದು. ಆ ಸಂದರ್ಭದಲ್ಲಿ ಸರಕಾರಕ್ಕೆ ಅಪಾಯವಾಗದಂತೆ ಶಾಸಕ ಬಲವನ್ನು ಹಿಡಿದಿಟ್ಟುಕೊಳ್ಳುವವರು ಬೇಕು. ಹೀಗಾಗಿ ಅಂಥ ಸನ್ನಿವೇಶ ಎದುರಾದರೆ ತಮಗೆ ಬಿಜೆಪಿಯ ಟಾಪ್ ಲೀಡರುಗಳಿಂದ ತೊಂದರೆಯಾಗದಂತೆ ನೋಡಿಕೊಳ್ಳಿ ಅಂತ ಪರಮೇಶ್ವರ್ ಅವರು ಕುಮಾರಸ್ವಾಮಿ ಅವರನ್ನು ಕೋರಿರುವ ಸಾಧ್ಯತೆ ಹೆಚ್ಚು.

ಹಾಗೊಂದು ವೇಳೆ ಈ ವಿಷಯದಲ್ಲಿ ಕುಮಾರಸ್ವಾಮಿ ಅವರು ನೆರವು ನೀಡಿದರೆ, ಬಿಜೆಪಿ ಸುಪ್ರಿಮೋಗಳಿಂದ ಅಪಾಯವಾಗದಂತೆ ನೋಡಿಕೊಂಡರೆ ಬಿಜೆಪಿ-ಜೆಡಿಎಸ್ ಮಿತ್ರಕೂಟದ ಬಗ್ಗೆ ಒಂದು ಪಾಸಿಟಿವ್ ಸಂದೇಶ ರವಾನೆಯಾಗುತ್ತದೆ. ಕರ್ನಾಟಕದಲ್ಲಿ ದಲಿತ ಸಮುದಾಯದ ನಾಯಕರೊಬ್ಬರು ಮುಖ್ಯಮಂತ್ರಿಯಾಗಲು ನೆರವು ಕೊಟ್ಟ ಖ್ಯಾತಿ ದಕ್ಕುತ್ತದೆ.

ಹಾಗಾಗುತ್ತದಾ? ಗೊತ್ತಿಲ್ಲ. ಆದರೆ ಪರಮೇಶ್ವರ್ ಅವರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ನಡೆಸಿದ ಚರ್ಚೆ ಇಂಥ ಸಾಧ್ಯತೆಗಳನ್ನು ಎತ್ತಿ ತೋರಿಸುತ್ತಿರುವುದು ಮಾತ್ರ ನಿಜ.

ಗೌಡರ ನಡೆ ರಾಜ್ಯಸಭೆ ಕಡೆ?: ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ರಾಜ್ಯಸಭೆ ಪ್ರವೇಶಿಸುವ ಗಳಿಗೆ ಹತ್ತಿರವಾಗುತ್ತಿದೆ. ಬಿಜೆಪಿ ಮೂಲಗಳ ಪ್ರಕಾರ, ಜೂನ್ ತಿಂಗಳಲ್ಲಿ ವಿಧಾನಸಭೆಯಿಂದ ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಸದಾನಂದಗೌಡರು ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ವಿಧಾನಸಭೆಯ ಬಲಾಬಲಗಳ ಪ್ರಕಾರ, ಆಡಳಿತಾರೂಢ ಕಾಂಗ್ರೆಸ್ ಮೂರು ಸ್ಥಾನಗಳಲ್ಲಿ ಗೆಲುವು ಗಳಿಸುವ ಶಕ್ತಿ ಹೊಂದಿದ್ದು, ಬಿಜೆಪಿ ಒಂದು ಸ್ಥಾನ ಗೆಲ್ಲುವ ಶಕ್ತಿ ಹೊಂದಿದೆ.

ಅಂದ ಹಾಗೆ, ಸದಾನಂದಗೌಡರು ರಾಜ್ಯಸಭೆ ಪ್ರವೇಶಿಸುವ ವಿಷಯದಲ್ಲಿ ಬಿಜೆಪಿ ಹೈಕಮಾಂಡ್‌ಗಾಗಲೀ, ಮಾಜಿ ಸಿಎಂ ಯಡಿಯೂರಪ್ಪ ಅವರಿಗಾಗಲೀ ತಕರಾರು ಇಲ್ಲ. ಎಷ್ಟೇ ಆದರೂ ಮುಖ್ಯಮಂತ್ರಿಯಾದ ನಾಯಕ. ಅವರು ಹಾಗೇ ಕೂರುವುದು ವರಿಷ್ಠರಿಗೆ ಬೇಕಿಲ್ಲ.

ಇನ್ನು ಸಿಎಂ ಹುದ್ದೆಯಿಂದ ಕೆಳಗಿಳಿದ ನಂತರ ಯಡಿಯೂರಪ್ಪ ಅವರ ವಿರುದ್ದ ಸದಾನಂದಗೌಡರು ಮುನಿಸಿಕೊಂಡಿದ್ದರಾದರೂ ಈಗ ಆ ಮುನಿಸು ಅವರಲ್ಲಿ ಉಳಿದು ಕೊಂಡಿಲ್ಲ. ಹೀಗಾಗಿ ಅವರು ಯಡಿಯೂರಪ್ಪ ಅವರ ಪುತ್ರ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಸಲಹೆ ಕೊಡುತ್ತಾ, ಕರ್ನಾಟಕದ ನೆಲೆಯಲ್ಲಿ ಪಕ್ಷಕ್ಕೆ ಯಡಿಯೂರ ಪ್ಪ ಎಷ್ಟು ಅನಿವಾರ್ಯ ಅಂತ ವರಿಷ್ಠರಿಗೆ ಸಿಗ್ನಲ್ಲು ಕೊಡುತ್ತಾ ಸಂಘಟನೆಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ.

ಇಂಥ ಸದಾನಂದಗೌಡರನ್ನು ರಾಜ್ಯಸಭೆಗೆ ಕಳಿಸುವ ವಿಷಯದಲ್ಲಿ ಈಗ ಯಾರ ತಕರಾರೂ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಸದಾನಂದಗೌಡರು ಕರಾವಳಿ ಕರ್ನಾಟಕ ಭಾಗಕ್ಕೆ ಸೇರಿದವ ರಾದ್ದರಿಂದ, ಅವರಿಗೆ ಅವಕಾಶ ನೀಡುವುದು ಆ ಭಾಗಕ್ಕೆ ನೀಡುವ ಆದ್ಯತೆ ಎಂಬುದು ಎಲ್ಲರ ಲೆಕ್ಕಾಚಾರ. ಎಷ್ಟೇ ಆದರೂ ಕರಾವಳಿ ಕರ್ನಾಟಕ ಎಂದರೆ ರಾಜ್ಯ ಬಿಜೆಪಿಯ ಪಾಲಿಗೆ ಪಿಲ್ಲರ್ ಏರಿಯಾ. ಹೀಗಾಗಿ ಗೌಡರ ನಡೆ ರಾಜ್ಯಸಭೆಯ ಕಡೆ ಎಂಬುದು ದಿನ ಕಳೆದಂತೆ ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ.

ಆರ್‌.ಟಿ. ವಿಠ್ಠಲಮೂರ್ತಿ‌

View all posts by this author