Mohan Vishwa Column: ವಿದ್ಯಾವಂತರು ಭಯೋತ್ಪಾದಕರಾದರೆ ಕಥೆ ಏನು ?
ಕಟ್ಟರ್ ಮೂಲಭೂತವಾದಿ ವಿಷಯಗಳ ಆಧಾರದ ಮೇಲೆ ನಡೆಯುತ್ತಿರುವ ಸಂಘಟಿತ ಕಾರ್ಯವೇ ಭಯೋತ್ಪಾದನೆ. ಐಸಿಸ್‌ನಂಥ ಘೋರ ಉಗ್ರ ಸಂಘಟನೆಯಲ್ಲಿದ್ದ ಬಹುತೇಕ ಯುವಕರು ಉನ್ನತ ವ್ಯಾಸಾಂಗ ಮಾಡಿದವರು. ಅಮೆರಿಕ, ಲಂಡನ್, ಜರ್ಮನಿ, ಇಟಲಿ, ಆಫ್ರಿಕಾ ದೇಶಗಳ ಯುವಕರು ಐಸಿಸ್‌ನಲ್ಲಿದ್ದರು.
-
ವೀಕೆಂಡ್ ವಿತ್ ಮೋಹನ್
ಕಾಶ್ಮೀರದಲ್ಲಿ ಯುವಕನೊಬ್ಬ ಗೋಡೆಯ ಮೇಲೆ ಪೋಸ್ಟರ್ ಅಂಟಿಸುತ್ತಿದ್ದ ವಿಚಾರದಲ್ಲಿ ಅನುಮಾನಗೊಂಡ ಪೊಲೀಸರು, ಅದರ ಜಾಡನ್ನು ಹಿಡಿದು ದೆಹಲಿ ಮತ್ತು ಹರಿಯಾಣ ದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಹರಿಯಾಣದ ಫರೀದಾಬಾದ್ ನಗರದ ಅಲ್ ಫಲಾ ವೈದ್ಯಕೀಯ ಕಾಲೇಜಿನ ತುರ್ತು ಚಿಕಿತ್ಸಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ವೈದ್ಯ ಮುಜಮಿಲ್ ಅಹ್ಮದ್ ಭಯೋತ್ಪಾದಕ ಕೃತ್ಯದಲ್ಲಿ ಸಿಕ್ಕಿಬಿದ್ದ.
ಈತ 3000 ಕೆ.ಜಿ.ಗೂ ಅಧಿಕ ಅಮೋನಿಯಂ ನೈಟ್ರೇಟ್, ಎಕೆ -56 ರೈಫಲ್, ಜೀವಂತ ಗುಂಡುಗಳನ್ನು ಸಂಗ್ರಹಿಸಿದ್ದನ್ನು ವಿಶೇಷ ತನಿಖಾ ಸಂಸ್ಥೆ ಪತ್ತೆ ಹಚ್ಚಿ ದೇಶದಲ್ಲಿ ನಡೆಯಬಹುದಾಗಿದ್ದ ದೊಡ್ಡದೊಂದು ಅನಾಹುತವನ್ನು ತಪ್ಪಿಸಿತ್ತು. ವೃತ್ತಿಯಲ್ಲಿ ವೈದ್ಯನಾಗಿದ್ದ ಈತನ ಜತೆ ದೊಡ್ಡದೊಂದು ತಂಡ ಕಾರ್ಯಾಚರಣೆ ನಡೆಸುತ್ತಿತ್ತು.
ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಈ ತಂಡ ಸಿದ್ಧವಿತ್ತೆಂಬ ಮಾಹಿತಿ ಹೊರಬೀಳುತ್ತಿದೆ. ಪೊಲೀಸರು ಈತನನ್ನು ವಶಕ್ಕೆ ಪಡೆದ ಮರುದಿನ ದೆಹಲಿಯ ಕೆಂಪು ಕೋಟೆಯ ಬಳಿ ಕಾರಿನಲ್ಲಿ ಬಾಂಬ್ ಸ್ಪೋಟಗೊಂಡು ೯ ಜನ ಬಲಿಯಾದರು.
ಈ ಸ್ಪೋಟದ ತನಿಖೆಯನ್ನು ಬೆನ್ನಟ್ಟಿದ ಪೊಲೀಸರಿಗೆ ಸಿಕ್ಕಿಬಿದ್ದ ಮತ್ತೊಬ್ಬ ಭಯೋತ್ಪಾ ದಕಿ ಲಖನೌ ನಗರದ ವೈದ್ಯೆ ಶಾಹೀನ್ ಶಾಹೀದ್. ನಿಷೇಧಿತ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಜತೆ ಈಕೆಯ ನಿರಂತರ ಸಂಪರ್ಕ ವಿತ್ತೆಂಬ ವಿಷಯ ಹೊರಬಿದ್ದಿದೆ.
ಇದನ್ನೂ ಓದಿ: Mohan Vishwa Column: ಡಾ.ಸ್ವಾಮಿನಾಥನ್ ಮತ್ತು ನರೇಂದ್ರ ಮೋದಿ
ದೆಹಲಿ ಬಾಂಬ್ ಸ್ಪೋಟ ತನಿಖೆಯಲ್ಲಿ ಸಿಕ್ಕಿರುವ ಉಗ್ರರ ಹಿನ್ನಲೆಯನ್ನು ಗಮನಿಸಿದ ನಂತರ ದೇಶದಲ್ಲಿ ‘ವೈಟ್‌ಕಾಲರ್ ಭಯೋತ್ಪಾದನೆ’ ಕುರಿತಾದ ಚರ್ಚೆಗಳು ಎಡೆ ಪ್ರಾರಂಭ ವಾಗಿವೆ. ಜಗತ್ತಿನ ಅನೇಕ ಭಯೋತ್ಪಾದಕ ಸಂಘಟನೆಗಳ ಸಂಸ್ಥಾಪಕರು, ಸದಸ್ಯರು, ಮುಖ್ಯಸ್ಥರು ಉತ್ತಮ ವಿದ್ಯಾಭ್ಯಾಸದ ಹಿನ್ನೆಲೆಯಿಂದ ಬಂದವರಾಗಿರುವ ಅನೇಕ ಉದಾಹರಣೆಗಳಿವೆ.
ಕಟ್ಟರ್ ಮೂಲಭೂತವಾದಿ ವಿಷಯಗಳ ಆಧಾರದ ಮೇಲೆ ನಡೆಯುತ್ತಿರುವ ಸಂಘಟಿತ ಕಾರ್ಯವೇ ಭಯೋತ್ಪಾದನೆ. ಐಸಿಸ್‌ನಂಥ ಘೋರ ಉಗ್ರ ಸಂಘಟನೆಯಲ್ಲಿದ್ದ ಬಹುತೇಕ ಯುವಕರು ಉನ್ನತ ವ್ಯಾಸಾಂಗ ಮಾಡಿದವರು. ಅಮೆರಿಕ, ಲಂಡನ್, ಜರ್ಮನಿ, ಇಟಲಿ, ಆಫ್ರಿಕಾ ದೇಶಗಳ ಯುವಕರು ಐಸಿಸ್‌ನಲ್ಲಿದ್ದರು.
ಇರಾಕ್ ಹಾಗೂ ಸಿರಿಯಾ ದೇಶಗಳಲ್ಲಿ ನೆಲೆಯೂರಿದ್ದ ಐಸಿಸ್ ಸಂಘಟನೆಯಲ್ಲಿ ಸ್ಥಳೀಯರ ಸಂಖ್ಯೆ ಕಡಿಮೆಯಿತ್ತು. ಬಹುತೇಕ ವಿದ್ಯಾವಂತ ಯುವಕರು ಇತರ ದೇಶ ಗಳಿಂದ ಬಂದು ಐಸಿಸ್ ಉಗ್ರ ಸಂಘಟನೆಯ ಸದಸ್ಯರಾಗಿದ್ದರು.
ಜಗತ್ತಿಗೆ ಉಗ್ರವಾದವನ್ನು ಆಳವಾಗಿ ಪಸರಿಸಿದ ಒಸಾಮಾ ಬಿನ್ ಲಾಡೆನ್ ಒಬ್ಬ ಸಿವಿಲ್ ಎಂಜಿನಿಯರ್. ಆತ ಬಿಲಿಯನ್‌ಗಟ್ಟಲೆ ಹಣವನ್ನು ಸೌದಿ ಅರೇಬಿಯಾದಲ್ಲಿ ಕಟ್ಟಡ ಕಾಮಗಾರಿಯ ವ್ಯವಹಾರದಲ್ಲಿ ಗಳಿಸಿದ್ದ. ಕೆಲವು ವರದಿಗಳ ಪ್ರಕಾರ ಈತ ಒಬ್ಬ ಮ್ಯಾನೇಜ್‌ಮೆಂಟ್ ಪದವೀಧರನೂ ಆಗಿದ್ದನಂತೆ. ಒಳ್ಳೆಯ ವಿದ್ಯಾವಂತನಾಗಿದ್ದ ಲಾಡೆನ್ ಜಗತ್ತಿನ ಮೋ ವಾಂಟೆಡ್ ಉಗ್ರನಾಗಿದ್ದ.
ಪಾಕಿಸ್ತಾನವು ಲಾಡೆನ್ ಪರವಾಗಿ, ಆತ ಸಾಯುವವರೆಗೂ ನಿಂತಿತ್ತು. ಒಂದು ಕಾಲದಲ್ಲಿ ಅಮೆರಿಕದ ಸಹಾಯದಿಂದ ಬೆಳೆದಿದ್ದ ವ್ಯಕ್ತಿ ಜಗತ್ತಿನ ಮೋ ವಾಂಟೆಡ್ ಉಗ್ರಗಾಮಿ ಯಾಗಿದ್ದ. ಅಮೆರಿಕವು ಲಾಡೆನ್ ವಿರುದ್ಧ ತಿರುಗಿ ಬಿದ್ದಾಗ, ಆತ ಅಲ್ ಖೈದಾ ಉಗ್ರ ಸಂಘಟನೆಯನ್ನು ಕಟ್ಟಿದ.
ಈ ಸಂಘಟನೆಯ ಮೂಲಕ ಜಗತ್ತಿನಾದ್ಯಂತ ಹಲವು ವಿದ್ಯಾವಂತ ಮುಸ್ಲಿಂ ಯುವಕರನ್ನು ತನ್ನೆಡೆಗೆ ಸೆಳೆದುಕೊಂಡ. ಮೂಲತಃ ಎಂಜಿನಿಯರ್ ಪದವೀಧರನಾಗಿದ್ದ ಲಾಡೆನ್, ಸ್ವತಃ ಬಾಂಬುಗಳನ್ನು ತಯಾರಿಸುತ್ತಿದ್ದ. ಜಗತ್ತಿನ ಮೂಲೆ ಮೂಲೆಗಳಲ್ಲಿ ಉಗ್ರ ಕೃತ್ಯಗಳನ್ನು ಮಾಡಿಸಿದ. ನ್ಯೂಯಾರ್ಕ್ ನಗರದ ಅವಳಿ ಕಟ್ಟಡಗಳ ಮೇಲೆ ವಿಮಾನಗಳ ದಾಳಿ ಮಾಡಿಸುವ ಮೂಲಕ ಅಟ್ಟಹಾಸ ಮೆರೆದ.
2000ನೇ ಇಸವಿಯ ಸೆಪ್ಟೆಂಬರ್ ೧೧ರಂದು ನಡೆದ ಈ ದಾಳಿಯ ಪ್ರಮುಖ ಸಂಚುಕೋರ ನಾಗಿದ್ದ ಅಲ್ ಖೈದಾ ಉಗ್ರ ಸಂಘಟನೆಯ ಸದಸ್ಯ ಖಾಲಿದ್ ಶೇಖ್ ಮೊಹಮ್ಮದ್ ಅಮೆರಿಕ ದೇಶದ ಉತ್ತರ ಕರೋಲಿನಾ ರಾಜ್ಯದ ವಿಶ್ವವಿದ್ಯಾಲಯದಲ್ಲಿ 1986ರಲ್ಲಿ ಉನ್ನತ ಮಟ್ಟದ ಪದವಿಯನ್ನು ಪಡೆದಿದ್ದ. ಸಾಮಾನ್ಯವಾಗಿ ಅವಿದ್ಯಾವಂತನೊಬ್ಬ ಮಾತ್ರ ಉಗ್ರ ಕೃತ್ಯ ವನ್ನು ಮಾಡಬಲ್ಲನೆಂದು ಅಂದುಕೊಂಡಿರುತ್ತೇವೆ. ಆದರೆ ಜಾಗತಿಕ ಭಯೋತ್ಪಾದಕ ಸಂಘಟನೆಯಲ್ಲಿ ಖಾಲಿದ್ ಶೇಖ್ ಮೊಹಮ್ಮದ್ ತರಹದ ನೂರಾರು ಜನರು ಸಿಗುತ್ತಾರೆ.
1993ರ ಮುಂಬೈ ಸರಣಿ ಸ್ಪೋಟದ ರೂವಾರಿಗಳು ಸಹ ವಿದ್ಯಾವಂತರೇ. ದೂರದ ದುಬೈ ನಲ್ಲಿ ಕುಳಿತು ಮುಂಬೈನಲ್ಲಿ ಸರಣಿ ಸ್ಪೋಟ ನಡೆಸಿದ ದಾವೂದ್ ಭಂಟ ಅಬು ಸಲೀಂ ಪದವಿ ಪೂರ್ವ ಶಿಕ್ಷಣ ಮುಗಿಸಿದ್ದವನು. ಮುಸಲ್ಮಾನ್ ಯುವಕರ ತಲೆಯಲ್ಲಿ ಬಾಬ್ರಿ ಮಸೀದಿ ವಿಚಾರಗಳನ್ನು ತುಂಬಿ ಮುಂಬೈ ನಗರದಲ್ಲಿ ಸರಣಿ ಸ್ಪೋಟ ನಡೆಸಲು ಯೋಜನೆ ರೂಪಿಸಿದವನಿವನು.
ಮುಂಬೈ ಸರಣಿ ಸ್ಪೋಟದ ಮತ್ತೊಬ್ಬ ಪ್ರಮುಖ ಆರೋಪಿ ಯಾಕುಬ್ ಮೆಮೊನ್ ಒಬ್ಬ ಚಾರ್ಟರ್ಡ್ ಅಕೌಂಟೆಂಟ್. ಹಣಕಾಸಿನ ಪದವಿಗಳಲ್ಲಿ ಅತಿ ಉನ್ನತವಾದ ಪದವಿ ಯೆಂದರೆ ಚಾರ್ಟರ್ಡ್ ಅಕೌಂಟೆನ್ಸಿ. ಈ ಪರೀಕ್ಷೆಯನ್ನು ಬರೆಯಲು ಹಲವರು ಇಂದಿಗೂ ಹೆದರುತ್ತಾರೆ. ಇಷ್ಟೊಂದು ಕಷ್ಟದ ಪರೀಕ್ಷೆಯನ್ನು ಬರೆದು ಪದವಿಯನ್ನು ಪಡೆದ ಯಾಕುಬ್, ಮುಂಬೈ ನಗರದ ಪ್ರಮುಖ ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಪೋಟ ನಡೆಸಿದ್ದ ನೆಂದರೆ ಆತನ ಮನಸ್ಥಿತಿ ಯಾವ ಮಟ್ಟದ್ದೆಂದು ತಿಳಿಯುತ್ತದೆ.
ಹಿಂದೂ ಧರ್ಮದ ದೇವಸ್ಥಾನಗಳ ಮೇಲಾದ ದಾಳಿಯ ಸೇಡನ್ನು ವಿದ್ಯಾವಂತ ಹಿಂದೂ ವೊಬ್ಬ ಎಂದೂ ಉಗ್ರ ಚಟುವಟಿಗಳ ಮೂಲಕ, ಜನರನ್ನು ಕೊಂದು ತೀರಿಸಿಕೊಂಡ ಉದಾಹರಣೆಯಿಲ್ಲ. 2015ರ ಆಸುಪಾಸಿನಲ್ಲಿ ಒಂದು ಸಂಶೋಧನೆಯನ್ನು ಮಾಡಲಾ ಗಿತ್ತು. ಈ ಸಂಶೋಧನೆಯ ಪ್ರಕಾರ ಐಸಿಸ್ ಉಗ್ರ ತಂಡಕ್ಕೆ ಸೇರುವ ಉಗ್ರಗಾಮಿಗಳಲ್ಲಿ ಶೇ. 69ರಷ್ಟು ಮಂದಿ, ಕಡಿಮೆಯೆಂದರೂ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿ ಬಂದವರು.
ಯುರೋಪಿನ ಹಲವು ರಾಷ್ಟ್ರಗಳಿಂದ ಯುವಕ-ಯುವತಿಯರು ಐಸಿಸ್ ಸೇರಿದ್ದರು. ಅವರ‍್ಯಾರಿಗೂ ಮನೆಯಲ್ಲಿ ತೊಂದರೆಯಿರಲಿಲ್ಲ, ಅವರು ಉತ್ತಮ ಕುಟುಂಬದಿಂದ ಬಂದವರಾಗಿದ್ದರು. ಐಸಿಸ್ ನಿಯಂತ್ರಿತ ಪ್ರದೇಶಗಳಲ್ಲಿದ್ದ ಹಲವು ಉಗ್ರರನ್ನು ಸಂದರ್ಶನ ನಡೆಸಿದಾಗ ಈ ಸತ್ಯ ಹೊರಬಿದ್ದಿತ್ತು. ಅವರ ಪಾಸ್‌ಪೋರ್ಟ್, ಹುಟ್ಟಿದ ದೇಶ, ಓದಿದ ದೇಶ, ಕೆಲಸ ಮಾಡುತ್ತಿದ್ದ ಸ್ಥಳಗಳು, ಅವರ ವಿದ್ಯಾಭ್ಯಾಸ, ಮದುವೆಯ ವಿವರಗಳು ಎಲ್ಲವನ್ನೂ ತುಲನೆ ಮಾಡಿ ಸಂಶೋಧನೆಯನ್ನು ನಡೆಸಲಾಗಿತ್ತು.
ಇಷ್ಟೆ ವಿದ್ಯಾವಂತರಾಗಿದ್ದರೂ ಐಸಿಸ್‌ನಲ್ಲಿ ಆತ್ಮಾಹುತಿ ಬಾಂಬರ್‌ಗಳಾಗಲು ತಯಾರಾ ಗಿರುವುದಾಗಿ ಅವರು ಹೇಳಿದ್ದರು. ಪಾಶ್ಚಿಮಾತ್ಯ ರಾಷ್ಟ್ರಗಳ ಮುಸ್ಲಿಂ ಯುವಕರು ಮಾತ್ರ ವಲ್ಲದೆ ಉತ್ತರ ಆಫ್ರಿಕಾ ಹಾಗು ಕೊಲ್ಲಿ ರಾಷ್ಟ್ರಗಳಿಂದ ಬಂದಿದ್ದ ಯುವಕರು ಸಹ ಉತ್ತಮ ವಿದ್ಯಾಭ್ಯಾಸ ಹೊಂದ್ದಿದವರಾಗಿದ್ದರು. ಮಧ್ಯಪ್ರಾಚ್ಯದಲ್ಲಿನ ಪ್ಯಾಲೆಸ್ತೀನ್ ನಗರಕ್ಕೊಮ್ಮೆ ಹೊಕ್ಕರೆ ಅದೆಷ್ಟು ವಿದ್ಯಾವಂತ ಯುವಕರು ಇಸ್ರೇಲಿನ ವಿರುದ್ಧ ದಾಳಿ ನಡೆಸಲು ಸಿದ್ಧರಿದ್ದಾರೆಂದು ತಿಳಿಯುತ್ತದೆ.
ದೆಹಲಿಯ ಸಂಸತ್ ಭವನದ ಮೇಲಿನ ದಾಳಿಯ ರೂವಾರಿ ಅಫ್ಜಲ್ ಗುರುವನ್ನು ನೇಣಿಗೆ ಹಾಕಿದ ನಂತರ ಕಾಶ್ಮೀರದಲ್ಲಿ ಹಲವು ವಿದ್ಯಾವಂತ ಯುವಕರನ್ನು ಉಗ್ರ ಸಂಘಟನೆಗಳಿಗೆ ಬಳಸಿಕೊಳ್ಳಲಾಗುತ್ತಿತ್ತು. ಭಾರತೀಯ ಸೈನಿಕರ ಗುಂಡಿಗೆ ಬಲಿಯಾಗುವ ಹಲವು ಉಗ್ರಗಾಮಿಗಳು ಕಾಶ್ಮೀರದಲ್ಲಿ ಪದವಿ ಪಡೆದವರಾಗಿದ್ದರು. ಅಫ್ಜಲ್ ಗುರು ಒಬ್ಬ ವೈದ್ಯಕೀಯ ವಿಭಾಗದ ವಿದ್ಯಾರ್ಥಿಯಾಗಿದ್ದ, ಮೊದಲನೇ ವರ್ಷದ ತರಗತಿಗಳನ್ನು ಪೂರ್ಣಗೊಳಿಸಿದ್ದ.
ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಬಸವನಗುಡಿಯಲ್ಲಿ ಸೆರೆ ಸಿಕ್ಕ ಉಗ್ರನು ರಾಮಯ್ಯ ಕಾಲೇಜಿನಲ್ಲಿ ವೈದ್ಯನಾಗಿದ್ದ. ಈತನು ಐಸಿಸ್ ಉಗ್ರರಿಗೆ ವೈದ್ಯಕೀಯ ವಿಚಾರದಲ್ಲಿ ಸಹಾಯ ಮಾಡುತ್ತಿದ್ದನೆಂಬ ಆತಂಕಕಾರಿ ಅಂಶವು ಬೆಳಕಿಗೆ ಬಂದಿತ್ತು.
ಐಸಿಸ್ ಸಂಸ್ಥಾಪಕ ಅಲ್ ಬಗ್ದಾದಿಯು ಇಸ್ಲಾಮಿಕ್ ಧರ್ಮದಲ್ಲಿ ಅತ್ಯುನ್ನತ ಪದವಿಯನ್ನು ಸಂಪಾದಿಸಿದ್ದ. ಪದವಿಯ ಜತೆಗೆ ಈತ ಬಾಗ್ದಾದ್ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್ ಅನ್ನೂ ಪಡೆದಿದ್ದ, ಮನುಷ್ಯತ್ವವನ್ನು ಮರೆತು ಸಾವಿರಾರು ಜನರನ್ನು ಕೊಲ್ಲಲು ಉಗ್ರರಿಗೆ ಪ್ರೇರಣೆಯನ್ನು ನೀಡುತ್ತಿದ್ದ.
ಸಿರಿಯಾ ದೇಶದಲ್ಲಿದ್ದ ಐತಿಹಾಸಿಕ ಪಲ್ಮೇರಾ ನಗರದ ಹಳೆಯ ಅವಶೇಷಗಳನ್ನು ಸರ್ವ ನಾಶ ಮಾಡುವ ಮೂಲಕ ಸಾವಿರಾರು ವರ್ಷಗಳ ಇತಿಹಾಸವನ್ನು ಐಸಿಸ್ ಉಗ್ರರು ಅಳಿಸಿ ಹಾಕಿದ್ದರು. ಅಲ್ ಬಗ್ದಾದಿ, ಒಸಾಮಾ ಬಿನ್ ಲಾಡೆನ್‌ನನ್ನು ತನ್ನ ಗುರುವಿನ ರೀತಿಯಲ್ಲಿ ನೋಡುತ್ತಿದ್ದ. ಅವನಿಗಿಂತಲೂ ಅಮಾನುಷವಾಗಿ ಜಗತ್ತಿನಾದ್ಯಂತ ಉಗ್ರ ಚಟುವಟಿಕೆ ಗಳನ್ನು ನಡೆಸುವ ಸಲುವಾಗಿ ಐಸಿಸ್ ಅನ್ನು ಪ್ರಾರಂಭಿಸಿದ್ದ. ಇವರ ಕಥೆ ಇಲ್ಲಿಗೇ ಮುಗಿಯುವುದಿಲ್ಲ.
ಒಸಾಮಾನ ನಂತರ ಅಲ್ ಖೈದಾ ಉಗ್ರ ಚಟುವಟಿಕೆಗಳ ಜವಾಬ್ದಾರಿಯನ್ನು ವಹಿಸಿ ಕೊಂಡಂಥ ಜವಾಹಿರಿ, ಶಸ್ತ್ರಚಿಕಿತ್ಸೆ ಮಾಡುವ ವೈದ್ಯನಾಗಿದ್ದ. ಒಂದು ಅಂದಾಜಿನ ಪ್ರಕಾರ ಶೇ.35ರಷ್ಟು ಅಲ್ ಖೈದಾ ಉಗ್ರರು ಕಾಲೇಜು ಶಿಕ್ಷಣವನ್ನು ಮುಗಿಸಿದ್ದಾರೆ.
ನೂತನವಾಗಿ ಸೇರುತ್ತಿದ್ದವರಿಗೆ ಕೆಲವು ವಿಭಾಗಗಳಲ್ಲಿ ಉತ್ತಮ ಅನುಭವವಿರಬೇಕೆಂಬ ನಿಯಮವಿರುತ್ತಿತ್ತು. ಪಾಕಿಸ್ತಾನದ ಕುಖ್ಯಾತ ಉಗ್ರ ಸಂಘಟನೆ ಲಷ್ಕರ್ -ಎ-ತೈಬಾ ಎಂಜಿನಿ ಯರ್‌ಗಳು, ವೈದ್ಯರು, ತಂತ್ರಜ್ಞಾನದಲ್ಲಿ ಪರಿಣತಿಯಿರುವ ಸದಸ್ಯರನ್ನು ಹೊಂದಿದೆ. ಈ ಸಂಘಟನೆಯ ಸಹ-ಸಂಸ್ಥಾಪಕ ಮೋಸ್ಟ್ ವಾಂಟೆಡ್ ಉಗ್ರಗಾಮಿ ಹಫೀಜ್ ಸಯೀದ್ ಪಂಜಾಬ್ ವಿಶ್ವವಿದ್ಯಾಲಯದಿಂದ ಎರಡು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾನೆ.
ಅವಿದ್ಯಾವಂತರು ಮಾತ್ರ ಉಗ್ರವಾದದಲ್ಲಿದ್ದರೆಂಬುದು ಸುಳ್ಳು, ಲಖನೌನಲ್ಲಿ ಸಿಕ್ಕಿ ಬಿದ್ದಿರುವ ಶಾಹೀನ್, ವೈದ್ಯಕೀಯ ಪದವಿಯು ಜತೆಗೆ ಸ್ಥಳೀಯ ಯುಪಿಎಸ್‌ಸಿ ಪರೀಕ್ಷೆ ಯನ್ನೂ ಬರೆದು ಉತ್ತೀರ್ಣರಾಗಿದ್ದರೆಂದು ಮಾಧ್ಯಮಗಳು ಹೇಳುತ್ತಿವೆ.
ಅವಿದ್ಯಾವಂತ ಉಗ್ರರಿಗಿಂತಲೂ ವಿದ್ಯಾವಂತ ಉಗ್ರರು ಅಪಾಯಕಾರಿ ಎಂಬುದಕ್ಕೆ ಜಗತ್ತಿನಲ್ಲಿ ಅನೇಕ ಉದಾಹರಣೆಗಳಿವೆ. ಉಗ್ರವಾದಕ್ಕೆ ಕಟ್ಟುಬಿದ್ದು ಉಗ್ರ ಸಂಘಟನೆಯನ್ನು ಸೇರುವ ವಿದ್ಯಾವಂತ ಯುವಕರ ಸಂಖ್ಯೆ ಹೆಚ್ಚಾಗುತ್ತಿರುವುದು ಆರೋಗ್ಯಕರ ಬೆಳವಣಿಗೆ ಯಲ್ಲ.