ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ವಿಜಿಗೀಷು ಪ್ರವೃತ್ತಿ ಎಂದರೇನು ?

ರಾಜಕಾರಣಿಗಳನ್ನು ಬಿಡಿ, ಸಾಹಿತಿಗಳು, ವಿದ್ವಾಂಸರು ಸಹ ಸಾಮಾನ್ಯವಾಗಿ ಯಾರೂ ಆ ಪದವನ್ನು ಬಳಸುವುದಿಲ್ಲ. ಹೀಗಾಗಿ ಜೋಶಿಯವರ ಬಾಯಿಂದ ಆ ಪದ ಬಂದಾಗ ನನಗೆ ಅದು ವಿಶೇಷ ಎನಿಸಿತು. ‘ವಿಜಿಗೀಷು’ ಎಂಬುದು ಸಂಸ್ಕೃತ ಮೂಲದ ಅತ್ಯಂತ ಶಕ್ತಿಯುತ ವಾದ ಪದಗುಚ್ಛ.

ಸಂಪಾದಕರ ಸದ್ಯಶೋಧನೆ

ಕೆಲವು ತಿಂಗಳುಗಳ ಹಿಂದೆ, ಹಮಾಸ್ ಉಗ್ರರ ದಾಳಿಯಲ್ಲಿ ಬದುಕುಳಿದ ಇಸ್ರೇಲಿಗಳು ಹೇಳಿದ ಕತೆಗಳನ್ನೊಳಗೊಂಡ, ನಾನು ಅನುವಾದಿಸಿದ, ‘ಬದುಕುಳಿದವರು ಕಂಡಂತೆ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಮಾತಾ ಡುತ್ತಾ, ‘ಇಸ್ರೇಲಿಗಳು ಇಂದಿಗೂ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡಿದ್ದರೆ ಅದಕ್ಕೆ ಅವರ ‘ವಿಜಿಗೀಷು ಪ್ರವೃತ್ತಿ’ಯೇ ಕಾರಣ’ ಎಂದು ಹೇಳಿದರು.

ತಮ್ಮ ಮಾತಿನಲ್ಲಿ ನಾಲ್ಕೆ ದು ಸಲ ಅವರು ‘ವಿಜಿಗೀಷು ಪ್ರವೃತ್ತಿ’ ಎಂಬ ಪದಪುಂಜವನ್ನು ಬಳಸಿದರು. ನಾನು ಈ ಪದವನ್ನು ಪ್ರೊ.ಕೆ.ಎಸ್.ನಾರಾಯಣಾಚಾರ್ಯರರು ಬಳಸಿದ್ದನ್ನು ಕೇಳಿದ್ದೆ. ರಾಜಕಾರಣಿಯೊಬ್ಬರ ಬಾಯಿಯಿಂದ ಈ ಪದವನ್ನು ಕೇಳಿದ್ದು ಅದೇ ಮೊದಲು. ಮರುದಿನ ನಾನು ಪ್ರಲ್ಹಾದ ಜೋಶಿ ಅವರಿಗೆ ಫೋನ್ ಮಾಡಿ, ‘ನಿಮ್ಮ ಭಾಷಣದಲ್ಲಿ ‘ವಿಜಿಗೀಷು ಪ್ರವೃತ್ತಿ’ ಎಂಬ ಪದವನ್ನು ಬಳಸಿದ್ದು ನನಗೆ ಬಹಳ ಖುಷಿಕೊಟ್ಟಿತು’ ಎಂದು ಹೇಳಿದೆ.

ರಾಜಕಾರಣಿಗಳನ್ನು ಬಿಡಿ, ಸಾಹಿತಿಗಳು, ವಿದ್ವಾಂಸರು ಸಹ ಸಾಮಾನ್ಯವಾಗಿ ಯಾರೂ ಆ ಪದವನ್ನು ಬಳಸುವುದಿಲ್ಲ. ಹೀಗಾಗಿ ಜೋಶಿಯವರ ಬಾಯಿಂದ ಆ ಪದ ಬಂದಾಗ ನನಗೆ ಅದು ವಿಶೇಷ ಎನಿಸಿತು. ‘ವಿಜಿಗೀಷು’ ಎಂಬುದು ಸಂಸ್ಕೃತ ಮೂಲದ ಅತ್ಯಂತ ಶಕ್ತಿಯುತ ವಾದ ಪದಗುಚ್ಛ.

ಇದನ್ನೂ ಓದಿ: Vishweshwar Bhat Column: ಗ್ರಾಹಕರ ಮನಸ್ಸು

ಆಡಳಿತ, ರಾಜಕೀಯ, ಯುದ್ಧನೀತಿ ಹಾಗೂ ವ್ಯಕ್ತಿತ್ವ ವಿಕಸನದಲ್ಲಿ ಈ ಪದಕ್ಕೆ ವಿಶೇಷ ಸ್ಥಾನವಿದೆ. ‘ವಿಜೇತುಮ್ ಇಚ್ಛುಃ ಇತಿ ವಿಜಿಗೀಷುಃ’ ಎಂದರೆ‘ವಿಜಯವನ್ನು ಸಾಧಿಸಲೇಬೇಕು ಎಂದು ತೀವ್ರವಾಗಿ ಹಂಬಲಿಸುವವನು’ ಅಥವಾ ‘ಜಯಶಾಲಿಯಾಗುವ ಮಹದಾಸೆ ಉಳ್ಳವನು’ ಎಂದರ್ಥ. ಇನ್ನು ಪ್ರವೃತ್ತಿ ಎಂದರೆ ಸ್ವಭಾವ, ಗುಣ, ಅಥವಾ ನಡೆದುಕೊಳ್ಳುವ ರೀತಿ. ಆದ್ದರಿಂದ, ವಿಜಿಗೀಷು ಪ್ರವೃತ್ತಿ ಎಂದರೆ ಯಾವುದೇ ಸವಾಲಿನ, ಕಠಿಣ ಪರಿಸ್ಥಿತಿ ಯಲ್ಲಿ ಎದುರಾಳಿಯನ್ನು ಸದೆಬಡಿದು, ತಾನು ಅಂದುಕೊಂಡ ಗುರಿಯಲ್ಲಿ ಅಂತಿಮ ಗೆಲುವನ್ನು ಪಡೆಯಲೇಬೇಕು ಎಂಬ ಛಲ ಮತ್ತು ಸಾಹಸ ಮನೋಭಾವ ಹೊಂದುವುದು.

ಭಾರತೀಯ ರಾಜತಾಂತ್ರಿಕ ಇತಿಹಾಸದಲ್ಲಿ ಈ ಪದಕ್ಕೆ ರಾಜಕೀಯ ಆಯಾಮ ನೀಡಿದವರು ಮಹಾeನಿ ಕೌಟಿಲ್ಯ (ಚಾಣಕ್ಯ). ತನ್ನ ಪ್ರಸಿದ್ಧ ಗ್ರಂಥ ‘ಅರ್ಥಶಾಸ್ತ್ರ’ದ ‘ಮಂಡಲ ಸಿದ್ಧಾಂತ’ದಲ್ಲಿ ಕೌಟಿಲ್ಯನು ಒಬ್ಬ ಆದರ್ಶ ರಾಜನಿಗೆ ಇರಬೇಕಾದ ಮುಖ್ಯ ಗುಣವನ್ನು ವಿವರಿಸುವಾಗ ‘ವಿಜಿಗೀಷು’ ಪದವನ್ನು ಬಳಸುತ್ತಾನೆ.

ಕೌಟಿಲ್ಯನ ಪ್ರಕಾರ, ಸಾಮ್ರಾಜ್ಯವನ್ನು ವಿಸ್ತರಿಸಲು, ಪ್ರಜೆಗಳನ್ನು ರಕ್ಷಿಸಲು ಮತ್ತು ಶತ್ರು ಗಳನ್ನು ಸದೆಬಡಿಯಲು ಬಯಸುವ ಕೇಂದ್ರ ರಾಜನೇ ‘ವಿಜಿಗೀಷು’. ಆತನ ಸುತ್ತಮುತ್ತಲಿನ ರಾಜ್ಯಗಳು ಮಿತ್ರ ಅಥವಾ ಶತ್ರುಗಳಾಗಿರುತ್ತಾರೆ. ಆದರೆ ವಿಜಿಗೀಷು ಆದವನು ತನ್ನ ಬುದ್ಧಿಬಲ, ಬಾಹುಬಲ ಮತ್ತು ಚತುರೋಪಾಯಗಳಿಂದ (ಸಾಮ, ದಾನ, ಭೇದ, ದಂಡ) ಎಲ್ಲರನ್ನೂ ಗೆದ್ದು ಸಾರ್ವಭೌಮನಾಗುತ್ತಾನೆ.

ಒಬ್ಬ ವ್ಯಕ್ತಿ ಅಥವಾ ನಾಯಕನಲ್ಲಿ ವಿಜಿಗೀಷು ಪ್ರವೃತ್ತಿ ಇದೆ ಎಂದರೆ ಅವನಲ್ಲಿ ಕೆಲವು ಗುಣಗಳು ಎದ್ದು ಕಾಣುತ್ತವೆ. ಆ ಪೈಕಿ ಅಚಲವಾದ ಮಹತ್ವಾಕಾಂಕ್ಷೆ, ಸೋಲೊಪ್ಪದ ಮನೋಭಾವ, ಸ್ಪರ್ಧಾತ್ಮಕ ಮನೋಭಾವ, ಕಾರ್ಯತತ್ಪರತೆ ಮತ್ತು ಶೌರ್ಯ ಪ್ರಮುಖ ವಾದವು.

ಸಾಮಾನ್ಯ ಜನರು ಸಣ್ಣ ಸೋಲು ಅಥವಾ ಅಡೆತಡೆಗಳು ಬಂದಾಗ ಧೃತಿಗೆಟ್ಟು ಕುಳಿತು ಕೊಳ್ಳುತ್ತಾರೆ. ಆದರೆ ವಿಜಿಗೀಷು ಪ್ರವೃತ್ತಿಯವರು ಸೋಲನ್ನು ಕೇವಲ ಒಂದು ತಾತ್ಕಾಲಿಕ ಘಟನೆ ಎಂದು ಭಾವಿಸುತ್ತಾರೆ. ಬಿದ್ದಷ್ಟೂ ವೇಗವಾಗಿ ಪುಟಿಯುವ ಗುಣ ಇವರದ್ದಾಗಿ ರುತ್ತದೆ. ಇವರು ಪರಿಸ್ಥಿತಿ ತಮಗೆ ಪೂರಕವಾಗುವವರೆಗೆ ಕಾಯುವುದಿಲ್ಲ. ಬದಲಿಗೆ ತಾವೇ ಪರಿಸ್ಥಿತಿಯನ್ನು ಸೃಷ್ಟಿಸುತ್ತಾರೆ ಅಥವಾ ತಮಗೆ ಅನುಕೂಲವಾಗುವಂತೆ ತಿರುಗಿಸಿ ಕೊಳ್ಳುತ್ತಾರೆ.

ಇವರ ನಿಘಂಟಿನಲ್ಲಿ ‘ಅಸಾಧ್ಯ’ ಎಂಬ ಪದವೇ ಇರುವುದಿಲ್ಲ. ಇವರಿಗೆ ಕೇವಲ ‘ಬದುಕುಳಿ ಯುವುದು’ ಮುಖ್ಯವಲ್ಲ, ಬದಲಿಗೆ ಆಯಾ ಕ್ಷೇತ್ರದಲ್ಲಿ ‘ಅಗ್ರಸ್ಥಾನ’ ಪಡೆಯುವುದು ಮುಖ್ಯ ವಾಗಿರುತ್ತದೆ. ಮಧ್ಯಮ ದರ್ಜೆಯ ಯಶಸ್ಸು ಇವರ ಹಸಿವನ್ನು ನೀಗಿಸುವುದಿಲ್ಲ.

ವಿಜಿಗೀಷು ಪ್ರವೃತ್ತಿ ಪ್ರಗತಿಗೆ ಪೂರಕವಾಗಿದ್ದರೂ, ಅದು ಮಿತಿ ಮೀರಬಾರದು. ಗೆಲುವಿನ ಹಪಾಹಪಿಯಲ್ಲಿ ಅಹಂಕಾರ ತಲೆಗೇರಬಾರದು. ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇ ಬೇಕು ಎನ್ನುವ ಧಾವಂತದಲ್ಲಿ ನೈತಿಕತೆಯನ್ನು ಮರೆಯಬಾರದು. ಕೌಟಿಲ್ಯನೂ ಕೂಡ ಧರ್ಮವಿಜಯಕ್ಕೇ ಆದ್ಯತೆ ನೀಡಿದ್ದಾನೆಯೇ ಹೊರತು ಅಧರ್ಮಕ್ಕಲ್ಲ.

ವಿಜಿಗೀಷು ಪ್ರವೃತ್ತಿ ಎಂದರೆ ಕೇವಲ ಯುದ್ಧ ಹೂಡುವುದಲ್ಲ. ಅದು ತನ್ನ ಮಿತಿಗಳನ್ನು ಮೀರಿ ಬೆಳೆಯುವ, ಸವಾಲುಗಳನ್ನು ಸದೆಬಡಿಯುವ ಮತ್ತು ಬದುಕಿನ ಪ್ರತಿ ಹಂತದಲ್ಲೂ ವಿಜಯಶಾಲಿಯಾಗಿ ಹೊರಹೊಮ್ಮುವ ಶ್ರೇಷ್ಠ ಮಾನಸಿಕ ಶಕ್ತಿಯಾಗಿದೆ.

ವಿಶ್ವೇಶ್ವರ ಭಟ್‌

View all posts by this author