ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಧ್ವಜಶಾಸ್ತ್ರ ಎಂದರೇನು ?

ಧ್ವಜಗಳು ಕೇವಲ ಬಟ್ಟೆಯ ತುಂಡುಗಳಲ್ಲ. ಅವು ಒಂದು ರಾಷ್ಟ್ರ, ಸಂಸ್ಕೃತಿ, ಸಮುದಾಯ, ಸಂಸ್ಥೆ ಅಥವಾ ಸಿದ್ಧಾಂತದ ಅಸ್ಮಿತೆ ಹಾಗೂ ಸಾರ್ವಭೌಮತ್ವದ ದ್ಯೋತಕ. ಇಂಥ ಧ್ವಜಗಳ ಆಳವಾದ ಇತಿಹಾಸ ಮತ್ತು ಅವು ಸಮಾಜದಲ್ಲಿ ಮೂಡಿಸುವ ಭಾವನಾತ್ಮಕ ಪ್ರಭಾವವನ್ನು ವೈಜ್ಞಾನಿಕ ನೆಲೆಯಲ್ಲಿ ವಿಶ್ಲೇಷಿಸುವುದೇ ಧ್ವಜಶಾಸ್ತ್ರದ ಪ್ರಮುಖ ಉದ್ದೇಶ.

ಸಂಪಾದಕರ ಸದ್ಯಶೋಧನೆ

ಧ್ವಜಶಾಸ್ತ್ರ (ವೆಕ್ಸಿಲಾಲಜಿ- Vexillology) ಎಂಬ ಒಂದು ಶಾಸ್ತ್ರ ಇದೆ ಗೊತ್ತಾ? ಇದು ಧ್ವಜಗಳ ಇತಿಹಾಸ, ವಿನ್ಯಾಸ, ಸಾಂಕೇತಿಕ ಅರ್ಥ, ಬಳಕೆ ಮತ್ತು ಸಾಮಾಜಿಕ ಮಹತ್ವವನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡುವ ಒಂದು ವಿಶಿಷ್ಟ ಜ್ಞಾನಶಾಖೆಯಾಗಿದೆ. ಲ್ಯಾಟಿನ್ ಭಾಷೆಯ ‘ವೆಕ್ಸಿಲಮ್’ (Vexillum- ಪ್ರಾಚೀನ ರೋಮನ್ ಸೈನ್ಯ ಬಳಸುತ್ತಿದ್ದ ಬಾವುಟ ಅಥವಾ ಬ್ಯಾನರ್) ಮತ್ತು ಗ್ರೀಕ್ ಭಾಷೆಯ ‘ಲೋಗೋಸ್’ (Logos - ಅಧ್ಯಯನ ಅಥವಾ ಶಾಸ್ತ್ರ) ಎಂಬ ಎರಡು ಪದಗಳ ಸಂಯೋಗ ದಿಂದ ಈ ಪದ ರೂಪುಗೊಂಡಿದೆ. ‌

ಧ್ವಜಗಳು ಕೇವಲ ಬಟ್ಟೆಯ ತುಂಡುಗಳಲ್ಲ. ಅವು ಒಂದು ರಾಷ್ಟ್ರ, ಸಂಸ್ಕೃತಿ, ಸಮುದಾಯ, ಸಂಸ್ಥೆ ಅಥವಾ ಸಿದ್ಧಾಂತದ ಅಸ್ಮಿತೆ ಹಾಗೂ ಸಾರ್ವಭೌಮತ್ವದ ದ್ಯೋತಕ. ಇಂಥ ಧ್ವಜಗಳ ಆಳವಾದ ಇತಿಹಾಸ ಮತ್ತು ಅವು ಸಮಾಜದಲ್ಲಿ ಮೂಡಿಸುವ ಭಾವನಾತ್ಮಕ ಪ್ರಭಾವವನ್ನು ವೈಜ್ಞಾನಿಕ ನೆಲೆಯಲ್ಲಿ ವಿಶ್ಲೇಷಿಸುವುದೇ ಧ್ವಜಶಾಸ್ತ್ರದ ಪ್ರಮುಖ ಉದ್ದೇಶ.

ಧ್ವಜಶಾಸ್ತ್ರವು ಪ್ರತ್ಯೇಕ ಅಧ್ಯಯನ ಕ್ಷೇತ್ರವಾಗಿ ಹೊರಹೊಮ್ಮಿದ್ದು ಇಪ್ಪತ್ತನೇ ಶತಮಾನದ ಮಧ್ಯ ಭಾಗದಲ್ಲಿ. ಅಮೆರಿಕದ ಹೆಸರಾಂತ ವಿದ್ವಾಂಸ ಡಾ.ವಿಟ್ನಿ ಸ್ಮಿತ್ ಅವರನ್ನು ‘ಆಧುನಿಕ ಧ್ವಜಶಾಸ್ತ್ರದ ಪಿತಾಮಹ’ ಎಂದು ಪರಿಗಣಿಸಲಾಗುತ್ತದೆ. 1957ರಲ್ಲಿ ಅವರು ‘ವೆಕ್ಸಿಲಾಲಜಿ’ ಎಂಬ ಪದವನ್ನು ಮೊದಲ ಬಾರಿಗೆ ಬಳಕೆಗೆ ತಂದರು. ಅದಕ್ಕೂ ಮೊದಲು ಧ್ವಜಗಳ ಅಧ್ಯಯನವನ್ನು ರಾಜಮನೆತನ ಗಳ ಲಾಂಛನಗಳನ್ನು ಅಧ್ಯಯನ ಮಾಡುವ ‘ಹೆರಾಲ್ಡ್ರಿ’ (Heraldry) ಶಾಸ್ತ್ರದ ಒಂದು ಸಣ್ಣ ಭಾಗವೆಂದಷ್ಟೇ ಭಾವಿಸಲಾಗಿತ್ತು.

ಇದನ್ನೂ ಓದಿ: Vishweshwar Bhat Column: ಪೇಪರ್ ಕ್ಲಿಪ್ ಮ್ಯಾಕ್ಸಿಮೈಜರ್

ವಿಟ್ನಿ ಸ್ಮಿತ್ ಅವರು 1961ರಲ್ಲಿ ‘ದಿ ಫ್ಲ್ಯಾಗ್ ಬುಲೆಟಿನ್’ ಎಂಬ ವಿಶ್ವದ ಮೊಟ್ಟಮೊದಲ ಧ್ವಜಶಾಸ್ತ್ರ ನಿಯತ ಕಾಲಿಕವನ್ನು ಸ್ಥಾಪಿಸಿ, ಜಾಗತಿಕ ಮಟ್ಟದಲ್ಲಿ ವಿದ್ವಾಂಸರು ಧ್ವಜಗಳ ಬಗ್ಗೆ ಸಂಶೋಧನೆ ನಡೆಸಲು ಪ್ರತ್ಯೇಕ ವೇದಿಕೆಯನ್ನು ಸೃಷ್ಟಿಸಿದರು. ಮಾನವ ಇತಿಹಾಸದಲ್ಲಿ ಧ್ವಜಗಳ ಉಗಮ ಅತ್ಯಂತ ರೋಚಕವಾಗಿದೆ.

ಆರಂಭಿಕ ಕಾಲದಲ್ಲಿ, ವಿಶೇಷವಾಗಿ ಪ್ರಾಚೀನ ಈಜಿಪ್ಟ್, ಭಾರತ, ಗ್ರೀಸ್ ಹಾಗೂ ಚೀನಾದಲ್ಲಿ ಯುದ್ಧ ಭೂಮಿಗಳಲ್ಲಿ ಸೈನ್ಯದ ನಾಯಕರನ್ನು ಗುರುತಿಸಲು ಮತ್ತು ಸಂಕೇತಗಳನ್ನು ರವಾನಿಸಲು ಮರದ ಅಥವಾ ಲೋಹದ ಕಂಬಗಳ ತುದಿಗೆ ಚಿಹ್ನೆಗಳನ್ನು ಕೆತ್ತಿ ಕಟ್ಟಲಾಗುತ್ತಿತ್ತು; ಇವುಗಳನ್ನು ‘ವೆಕ್ಸಿಲಾಯ್ಡ್’ ಎನ್ನಲಾಗುತ್ತಿತ್ತು. ‌

ಕ್ರಮೇಣ ಚೀನಾದಲ್ಲಿ ರೇಷ್ಮೆ ಬಟ್ಟೆಯ ಆವಿಷ್ಕಾರವಾದ ನಂತರ, ಹಗುರವಾದ ಬಟ್ಟೆಯ ಮೇಲೆ ಚಿತ್ರಗಳನ್ನು ಬಿಡಿಸಿ ಗಾಳಿಯಲ್ಲಿ ಹಾರಿಸುವ ಪದ್ಧತಿ ಶುರುವಾಯಿತು. ರೋಮನ್ ಸಾಮ್ರಾಜ್ಯವು ಸೈನಿಕ ತುಕಡಿಗಳ ಗುರುತಿಗೆ ಚೌಕಾಕಾರದ ಬಟ್ಟೆಯ ಬಾವುಟಗಳನ್ನು ಬಳಸಿ ಯುರೋಪಿನಾದ್ಯಂತ ವಿಸ್ತರಿಸಿತು. ಮಧ್ಯಕಾಲೀನ ಯುಗದಲ್ಲಿ ಧರ್ಮಯುದ್ಧಗಳು ಮತ್ತು ನೌಕಾಯಾನದ ವಿಸ್ತರಣೆ ಯೊಂದಿಗೆ ಧ್ವಜಗಳು ಸಾಗರದಲ್ಲಿ ಹಡಗುಗಳ ದೇಶವನ್ನು ಗುರುತಿಸುವ ಪ್ರಮುಖ ಸಾಧನಗಳಾಗಿ ಮಾರ್ಪಟ್ಟವು.

ಧ್ವಜಶಾಸ್ತ್ರದಲ್ಲಿ ಧ್ವಜದ ಭಾಗಗಳು ಮತ್ತು ರಚನೆಗೆ ತನ್ನದೇ ಆದ ತಾಂತ್ರಿಕ ಪರಿಭಾಷೆಗಳಿವೆ. ಧ್ವಜವನ್ನು ಕಟ್ಟುವ ಕಂಬವನ್ನು ‘ಫ್ಲ್ಯಾಗ್ ಪೋಲ್’ ಎನ್ನಲಾಗುತ್ತದೆ. ಕಂಬಕ್ಕೆ ಹತ್ತಿರವಿರುವ ಧ್ವಜದ ಎಡಭಾಗ ವನ್ನು ‘ಹಾಯ್ಸ್ಟ್’ ಎಂದೂ, ಗಾಳಿಯಲ್ಲಿ ಹಾರಾಡುವ ಹೊರಭಾಗ ಅಥವಾ ಬಲಭಾಗವನ್ನು ‘ಫ್ಲೈ ’ ಎಂದೂ ಕರೆಯಲಾಗುತ್ತದೆ.

ಧ್ವಜದ ಮೇಲ್ಭಾಗದ ಎಡ ಮೂಲೆಯನ್ನು ‘ಕ್ಯಾಂಟನ್’ ಎಂದು ಕರೆಯಲಾಗಿದ್ದು, ಅಮೆರಿಕದ ಧ್ವಜದ ನಕ್ಷತ್ರಗಳ ಭಾಗ ಅಥವಾ ಬ್ರಿಟನ್ ಧ್ವಜದ ಭಾಗಗಳು ಈ ಜಾಗದಲ್ಲಿರುತ್ತವೆ. ಧ್ವಜದ ಹಿನ್ನೆಲೆ ಬಣ್ಣವನ್ನು ‘ಫೀಲ್ಡ್’ ಎಂದು ಕರೆಯಲಾಗುತ್ತದೆ. ಇದಲ್ಲದೇ, ಧ್ವಜಗಳನ್ನು ಅಡ್ಡಲಾಗಿ ಅಥವಾ ಲಂಬವಾಗಿ ವಿಭಜಿಸುವ ಪಟ್ಟಿಗಳಿಗೆ ‘ಫ್ಯಾಸ್ಸೆಸ್’ ಮತ್ತು ‘ಪೇಲ್ಸ್’ ಎಂಬ ಹೆಸರುಗಳಿವೆ.

ಈ ತಾಂತ್ರಿಕ ವಿವರಗಳು ಧ್ವಜದ ನಿಖರ ಪ್ರಮಾಣವನ್ನು ನಿರ್ಧರಿಸಲು ಅತ್ಯಗತ್ಯ. ಉತ್ತಮ ಧ್ವಜ ವನ್ನು ವಿನ್ಯಾಸ ಗೊಳಿಸುವುದು ಒಂದು ಕಲೆ ಹಾಗೂ ವಿಜ್ಞಾನ. ಉತ್ತರ ಅಮೆರಿಕನ್ ವೆಕ್ಸಿಲಾ ಲಾಜಿಕಲ್ ಅಸೋಸಿಯೇಷನ್ (NAVA) ಧ್ವಜ ರಚನೆಗೆ ಐದು ಮೂಲಭೂತ ತತ್ವಗಳನ್ನು ಪ್ರಕಟಿಸಿದೆ. ಸರಳತೆ- ಮಗುವೂ ಸಹ ನೆನಪಿನಲ್ಲಿಟ್ಟುಕೊಂಡು ಚಿತ್ರ ಬಿಡಿಸುವಷ್ಟು ಧ್ವಜ ಸರಳವಾಗಿರಬೇಕು.

ಅರ್ಥಪೂರ್ಣ ಸಂಕೇತಗಳು- ಧ್ವಜದಲ್ಲಿರುವ ಚಿಹ್ನೆಗಳು ಮತ್ತು ಬಣ್ಣಗಳು ಆ ನಾಡಿನ ಸಂಸ್ಕೃತಿ, ಇತಿಹಾಸ ಅಥವಾ ಆಶಯವನ್ನು ಪ್ರತಿಬಿಂಬಿಸಬೇಕು. ಸೀಮಿತ ಬಣ್ಣಗಳ ಬಳಕೆ- ಎರಡರಿಂದ ಮೂರು ಮೂಲಭೂತ ಬಣ್ಣಗಳನ್ನು ಮಾತ್ರ ಬಳಸುವುದು ಸೂಕ್ತ. ಅಕ್ಷರಗಳು ಮತ್ತು ಸಂಕೀರ್ಣ ಲಾಂಛನಗಳನ್ನು ತಪ್ಪಿಸುವುದು- ಧ್ವಜದ ಮೇಲೆ ಯಾವುದೇ ಬರಹಗಳು, ಹೆಸರುಗಳು ಅಥವಾ ಸೂಕ್ಷ್ಮ ಸೀಲ್‌ಗಳು ಇರಬಾರದು; ಏಕೆಂದರೆ ದೂರದಿಂದ ಅಥವಾ ಗಾಳಿಯಲ್ಲಿ ಹಾರಾಡುವಾಗ ಅಕ್ಷರಗಳನ್ನು ಓದಲು ಸಾಧ್ಯವಿಲ್ಲ. ವಿಶಿಷ್ಟತೆ- ಇನ್ನೊಂದು ಧ್ವಜವನ್ನು ನಕಲು ಮಾಡದೆ ತನ್ನದೇ ಆದ ಸ್ವತಂತ್ರ ಗುರುತನ್ನು ಹೊಂದಿರಬೇಕು.

ವಿಶ್ವೇಶ್ವರ ಭಟ್‌

View all posts by this author