ಅಶ್ವತ್ಥಕಟ್ಟೆ
ಪ್ರಜಾಪ್ರಭುತ್ವ ದೇಶಗಳನ್ನು ಯಾವುದೇ ವ್ಯಕ್ತಿ ಅಥವಾ ಪಕ್ಷಗಳು ಆಳಿದರೂ ಅಂತಿಮವಾಗಿ ಮತದಾರನೇ ಪ್ರಭುವಾಗುತ್ತಾನೆ. ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಮತದಾರ ಯಾರನ್ನು ಆರಿಸುವನೋ ಅವರೇ ದೇಶದ, ರಾಜ್ಯದ ಚುಕ್ಕಾಣಿ ಹಿಡಿಯುತ್ತಾರೆ. ಅಂತಹ ಪ್ರಮುಖ ನಿರ್ಣಯ ಮಾಡುವ ಮತದಾರರ ಹೆಸರಿರುವ ಪಟ್ಟಿ ದೇಶ, ರಾಜ್ಯದ ಪಾಲಿಗೆ ಅತ್ಯಮೂಲ್ಯವೆಂದರೆ ತಪ್ಪಾಗುವುದಿಲ್ಲ. ಈ ಅಮೂಲ್ಯ ಪಟ್ಟಿಯಲ್ಲಿ ಅನರ್ಹ ಹೆಸರುಗಳು ಸೇರಿದಷ್ಟು ಇಡೀ ವ್ಯವಸ್ಥೆಗೆ ಮಾರಕ ಎಂದರೆ ತಪ್ಪಾಗುವುದಿಲ್ಲ. ಮತದಾರರ ಪಟ್ಟಿಯಲ್ಲಿ ಅನರ್ಹರ ಹೆಸರು ಹಲವು ರೀತಿಯಲ್ಲಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ.
ಒಂದು ಮೃತಪಟ್ಟವರ ಹೆಸರನ್ನು ಪಟ್ಟಿಯಿಂದ ತೆಗೆಸದೇ ಹೋಗುವುದು, ಇಲ್ಲವೇ ಒಬ್ಬ ವ್ಯಕ್ತಿ ಒಂದೆರಡು ಊರುಗಳಲ್ಲಿ ಮತದಾನದ ಹಕ್ಕನ್ನು ಪಡೆಯುವುದು, ಇಲ್ಲವೇ ಶಾಶ್ವತ ವಲಸೆ ಹೋದರೂ, ತಮ್ಮ ಹೆಸರನ್ನು ಇಲ್ಲಿಯೇ ಬಿಟ್ಟಿರುವುದು ಒಂದು ಭಾಗ. ಆದರೆ ಇದಕ್ಕಿಂತ ಹೆಚ್ಚು ಆತಂಕಕಾರಿ ವಿಷಯವೆಂದರೆ, ಅಕ್ರಮವಾಗಿ ಮತದಾರರ ಹೆಸರನ್ನು ಪಟ್ಟಿಯಲ್ಲಿ ಸೇರಿಸಿರುವುದು ರಾಜ್ಯ, ದೇಶದ ಸುರಕ್ಷತಾ ದೃಷ್ಟಿಯಿಂದ ಭಾರಿ ಆತಂಕಕಾರಿ ಬೆಳವಣಿಗೆ. ಈ ಕಾರಣಕ್ಕಾಗಿಯೇ ಕೇಂದ್ರ ಚುನಾವಣಾ ಆಯೋಗ ಆಗಾಗ್ಗೆ ಎಸ್‌ಐಆರ್ ಪ್ರಕ್ರಿಯೆಯನ್ನು ನಡೆಸುತ್ತದೆ.
ಭಾರತದಲ್ಲಿ ಈಗಾಗಲೇ ಎರಡು ಹಂತದಲ್ಲಿ ಎಸ್‌ಐಆರ್ ಮುಗಿಸಿ, ಮೂರನೇ ಹಂತವಾಗಿ ಕರ್ನಾಟಕ ಸೇರಿದಂತೆ ಹಲವು ರಾಜ್ಯದಲ್ಲಿ ಕಾರ್ಯಾರಂಭ ವಾಗಿದೆ. ಆದರೆ ಕರ್ನಾಟಕದಲ್ಲಿ ಆಡಳಿತ ಪಕ್ಷದಿಂದ ಬಹುದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗ ದಿದ್ದರೂ, ಆರಂಭಗೊಂಡ ಮೂರನೇ ದಿನಕ್ಕೆ ಪ್ರತಿಪಕ್ಷಗಳಿಂದ ಎಸ್‌ಐಆರ್ ನಡೆಯುತ್ತಿರುವ ರೀತಿಗೆ ಗದ್ದಲ-ಗಲಾಟೆ ಆರಂಭ ವಾಗಿದೆ.
ವಿಶೇಷ ಸಮಗ್ರ ಮತಪಟ್ಟಿ ಪರಿಷ್ಕರಣೆ ಎನ್ನುವುದು ಚುನಾವಣಾ ಆಯೋಗದಿಂದ ಆಗುವ ಕಾರ್ಯ. ಇಂತಿಷ್ಟೇ ವರ್ಷಗಳಿಗೊಮ್ಮೆ ಈ ಪ್ರಕ್ರಿಯೆ ನಡೆಸಬೇಕು ಎನ್ನುವ ಸಾಂವಿಧಾನಿಕ ನಿಯಮವಿಲ್ಲದಾದರೂ, ಚುನಾವಣಾ ಆಯೋಗಕ್ಕೆ ‘ಅಗತ್ಯ’ವೆನಿಸಿದಾಗ ಎಸ್‌ಐಆರ್ ಮಾಡಲು ಅವಕಾಶವಿದೆ. ಈ ಹಿಂದೆ 2003ರಲ್ಲಿ ಸಮಗ್ರ ಪರಿಷ್ಕರಣೆಯನ್ನು ಚುನಾವಣಾ ಆಯೋಗ ಮಾಡಿತ್ತು. ಆದರೆ ಪ್ರತಿ ವರ್ಷ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಚುನಾವಣಾ ಆಯೋಗ ಮಾಡುತ್ತದೆ.
ಇದನ್ನೂ ಓದಿ: Ranjith H Ashwath Column: ಆರ್ಥಿಕ ಸಂಕಷ್ಟ ನಿವಾರಿಸುವುದೇ ಗ್ಯಾರಂಟಿ ಪರಿಷ್ಕರಣೆ ?
ಇದರಲ್ಲಿ, ಹೊಸ ಮತದಾರರ ಸೇರ್ಪಡೆ, ಮೃತಪಟ್ಟವರು, ಬೇರೆಡೆ ಸ್ಥಳಾಂತರವಾಗಿರುವವರ ಹೆಸರನ್ನು ತೆಗೆಯುವ ಪ್ರಕ್ರಿಯೆ ನಡೆಯುತ್ತದೆ. ಆದರೆ ಈ ಪ್ರಕ್ರಿಯೆಯಲ್ಲಿ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡುವುದಿಲ್ಲ. ಆದರೀಗ ನಡೆಸುತ್ತಿರುವ ಎಸ್‌ಐಆರ್ ಸಮಯದಲ್ಲಿ ಬಿಎಲ್‌ಒಗಳು ಮನೆಮನೆಗೆ ತೆರಳಿ ಪರಿಶೀಲನೆ ನಡೆಸುತ್ತಾರೆ. ಚುನಾವಣಾ ಆಯೋಗ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐಆರ್)ಅನ್ನು ಕರ್ನಾಟಕಕ್ಕೂ ಮೊದಲು 10 ರಾಜ್ಯ, ಮೂರು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಸಿತ್ತು. ಆದರೆ ರಾಷ್ಟ್ರಮಟ್ಟದಲ್ಲಿ ಸದ್ದುಮಾಡಿದ್ದು ಮಾತ್ರ ಪಶ್ಚಿಮ ಬಂಗಾಳದಲ್ಲಿ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್, ಎಸ್‌ಐಆರ್ ಪ್ರಕ್ರಿಯೆಯ ನೆಪದಲ್ಲಿ ತಮ್ಮ ಸಾಂಪ್ರದಾಯಿಕ ಮತದಾರರನ್ನು ಪಟ್ಟಿಯನ್ನು ಕೈಬಿಟ್ಟು ಬಿಜೆಪಿಗೆ ಅನುಕೂಲ ಮಾಡಿಕೊಡುವ ದುರುದ್ದೇಶವನ್ನು ಚುನಾವಣಾ ಆಯೋಗ ಹೊಂದಿದೆ ಎಂದು ಆರೋಪಿಸಿತ್ತು.
ಅದರಲ್ಲಿಯೂ ವಿಶೇಷವಾಗಿ ಅಲ್ಪಸಂಖ್ಯಾತರು ಮತ್ತು ಬಿಜೆಪಿಗೆ ಪ್ರಿಯವಲ್ಲದ ಸಮುದಾಯಗಳ ಮತದಾರರಿಗೆ ಈ ಪ್ರಕ್ರಿಯೆಯಿಂದ ಅನ್ಯಾಯಕ್ಕೆ ಒಳಗಾಗಲಿದ್ದಾರೆ ಎನ್ನುವ ಆಕ್ಷೇಪ ವ್ಯಕ್ತಪಡಿಸಿ, ಆರಂಭದಲ್ಲಿ ಇಡೀ ಪ್ರಕ್ರಿಯೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದು ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿತ್ತು. ಆದರೆ ಸುಪ್ರೀಂ ಕೋರ್ಟ್‌ನಲ್ಲಿಯೂ ಟಿಎಂಸಿ ವಾದಕ್ಕೆ ಒಪ್ಪಿಗೆ ಸಿಗದೇ ಹೋಗಿದ್ದರಿಂದ ಅನಿವಾರ್ಯವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಸಲು ಅವಕಾಶ ನೀಡಬೇಕಾಯಿತು. ಇಷ್ಟಾದರೂ ಪಾರದರ್ಶಕವಾಗಿ ಪ್ರಕ್ರಿಯೆ ನಡೆಯುತ್ತಿಲ್ಲ ಎನ್ನುವ ನಿರಂತರ ಆರೋಪದ ಬಳಿಕ ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ.
ಛತ್ತೀಸ್‌ಗಢ ಮತ್ತು ಒರಿಸ್ಸಾದ ಹಿರಿಯ ಅಧಿಕಾರಿಗಳ ಉಸ್ತುವಾರಿಯಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತ್ತು. ಈ ನಡೆಯನ್ನು ಪ್ರಶ್ನಿಸಿ ಪುನಃ ಹೈಕೋಟ್ ಗೆ ಟಿಎಂಸಿ ಅರ್ಜಿ ಸಲ್ಲಿಸಿದ್ದು, ಆಗ ಎಸ್‌ಐಆರ್ ಪ್ರಕ್ರಿಯೆಯು ಪಾರದರ್ಶಕವಾಗಿ ಮತ್ತು ನಿಜವಾದ ಮತದಾರರು ತಮ ಹಕ್ಕನ್ನು ಕಳೆದುಕೊಳ್ಳಬಾರದೆಂಬ ಹಿನ್ನೆಲೆಯಲ್ಲಿ ಆಯೋಗ ನಡೆಸುತ್ತಿರುವ ಈ ಪ್ರಕ್ರಿಯೆಗೆ ಹೊರ ರಾಜ್ಯ ದವರನ್ನು ವೀಕ್ಷಕರನ್ನಾಗಿ ನೇಮಕ ಮಾಡಿಕೊಂಡರೆ ತಪ್ಪೇನಿಲ್ಲ ಎಂದು ಹೇಳಿದ್ದರಿಂದ ಟಿಎಂಸಿ ವಿರೋಧದ ನಡುವೆಯೂ ಹೊರ ರಾಜ್ಯದ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ನಡೆಸಲಾಗಿತ್ತು.
ಇದರ ಫಲವಾಗಿ, ಎಸ್‌ಐಆರ್‌ಗೂ ಮೊದಲು ಪಶ್ಚಿಮ ಬಂಗಾಳದಲ್ಲಿ 7,66,37,529 ಮತದಾರರು ಇದ್ದರೆ, ಎಸ್ ಐಆರ್ ಪ್ರಕ್ರಿಯೆ ಬಳಿಕ 7,04,59,284ಗೆ ಇಳಿಯಿತು. ಬಳಿಕ ಸುಮಾರು 61 ಲಕ್ಷ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಚುನಾವಣಾ ಆಯೋಗ ತೆಗೆದು ಹಾಕಿತ್ತು. ಅಂತಿಮ ಪಟ್ಟಿಯ ವೇಳೆಗೆ ಇದರ ಸಂಖ್ಯೆ 83 ಲಕ್ಷಕ್ಕೆ ಏರಿತ್ತು ಎನ್ನುವುದು ವಾಸ್ತವ. ಅನರ್ಹ, ಮೃತಪಟ್ಟ, ನಕಲಿ ಮತದಾರರನ್ನು ಕೈಬಿಟ್ಟ ಪರಿಣಾಮ ಪಶ್ಚಿಮ ಬಂಗಾಳದಲ್ಲಿ ಶೇ.92ರಷ್ಟು ಮತದಾನ ನಡೆಯಿತು. ಆದರೆ ಈ ಹಿಂದಿನ ವರ್ಷಗಳಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸರಾಸರಿ ಶೇ.66ರಿಂದ 67ರಷ್ಟು ಮತದಾನ ನಡೆಯುತ್ತಿತ್ತು.
ಹೆಚ್ಚುವರಿ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡಿದರು ಎನ್ನುವುದಕ್ಕಿಂತ ಅನರ್ಹ ಮತದಾರರನ್ನು ಕೈಬಿಟ್ಟಿದ್ದರಿಂದ ನೈಜ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ದ್ದರು. ಆದ್ದರಿಂದ ಮತದಾನದ ಪ್ರಮಾಣ ಹೆಚ್ಚಾಯಿತು ಎನ್ನುವುದು ಚುನಾವಣಾ ಆಯೋಗದ ವಾದ. ಆದರೆ ರಾಜಕೀಯವಾಗಿ ಅಕ್ರಮ ಮತದಾರರನ್ನು ಕೈಬಿಟ್ಟಿದ್ದರಿಂದ ಚುನಾ ವಣಾ ಫಲಿತಾಂಶದಲ್ಲಿಯೂ ಏರುಪೇರಾಯಿತು ಎನ್ನುವ ವಾದವನ್ನು ಬಿಜೆಪಿ ಮಂಡಿಸುತ್ತಿದೆ.
ಕೇವಲ ಪಶ್ಚಿಮ ಬಂಗಾಳ ಮಾತ್ರವಲ್ಲದೇ, ಈಗಾಗಲೇ ಎಸ್ ಐಆರ್ ಪ್ರಕ್ರಿಯೆ ಪೂರ್ಣಗೊಂಡಿರುವ ಬಹುತೇಕ ರಾಜ್ಯಗಳಲ್ಲಿ ಭಾರಿ ಪ್ರಮಾಣದಲ್ಲಿ ನಕಲಿ, ಅನರ್ಹ ಮತದಾರರನ್ನು ಕೈಬಿಡಲಾಗಿದೆ. ಚುನಾವಣಾ ಆಯೋಗದ ಮೂಲಗಳ ಪ್ರಕಾರ ಈಗಾಗಲೇ ಎರಡು ಹಂತದಲ್ಲಿ ನಡೆದಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ದೇಶಾದ್ಯಂತ ಸುಮಾರು 5.6 ಕೋಟಿಗೂ ಹೆಚ್ಚು ನಕಲಿ, ಮೃತಪಟ್ಟ ಹಾಗೂ ಕಾಯಂ ವಲಸೆ ಹೋದವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಪ್ರಾಯೋಗಿಕವಾಗಿ ಬಿಹಾರದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯಲ್ಲಿ 47 ಲಕ್ಷ ಮತದಾರರನ್ನು ಕೈಬಿಡಲಾಗಿದೆ. ಎರಡನೇ ಹಂತದಲ್ಲಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 2.05 ಕೋಟಿ ಹೆಸರುಗಳನ್ನು ಹಾಗೂ ಪಶ್ಚಿಮ ಬಂಗಾಳದಲ್ಲಿ 83.86 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಯಿತು. ಇದೇ ರೀತಿ ತಮಿಳುನಾಡಿನಲ್ಲಿ ಸುಮಾರು 74 ಲಕ್ಷ, ಗುಜರಾತ್‌ನಲ್ಲಿ 68 ಲಕ್ಷ, ಮಧ್ಯಪ್ರದೇಶದಲ್ಲಿ 34 ಲಕ್ಷ, ರಾಜಸ್ತಾನದಲ್ಲಿ 31 ಲಕ್ಷ, ಛತ್ತೀಚ್‌ಗಢದಲ್ಲಿ ಸುಮಾರು 25 ಲಕ್ಷ ಹೆಸರನ್ನು ಕೈಬಿಡಲಾಗಿದೆ. ಕೇವಲ ಒಂಬತ್ತು ಲಕ್ಷ ಹೆಸರುಗಳನ್ನು ಕೈಬಿಟ್ಟಿರುವ ಕೇರಳ ಹೆಸರುಗಳನ್ನು ಕೈ ಬಿಟ್ಟ ರಾಜ್ಯಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಮೊದಲೆರಡು ಹಂತದ ಬಳಿಕ ಮೂರನೇ ಹಂತದಲ್ಲಿ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಬಿಜೆಪಿಯೇತರ ಆಡಳಿತವಿರುವ ಇತರೆ ರಾಜ್ಯಗಳಂತೆ, ಆಡಳಿತ ಪಕ್ಷದಿಂದ ಬಹುದೊಡ್ಡ ವಿರೋಧ ಬಾರದಿದ್ದರೂ, ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್‌ನಿಂದಲೇ ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಪ್ರಮುಖವಾಗಿ ಮಸೀದಿ, ಕಲ್ಯಾಣ ಮಂಟಪಗಳಲ್ಲಿ ಸಾಮೂಹಿಕವಾಗಿ ಅರ್ಜಿ ಭರ್ತಿಗೆ ಅವಕಾಶ ನೀಡಿರುವುದು ಇದೀಗ ಪ್ರತಿಪಕ್ಷಗಳ ಅಕ್ಷೇಪಕ್ಕೆ ಕಾರಣವಾಗಿದೆ. ಆದರೆ ಕೇಂದ್ರ ಚುನಾವಣಾ ಆಯೋಗದ ಮೇಲ್ವಿಚಾರಣೆಯಲ್ಲಿ ನಡೆಯುವುದರಿಂದ, ರಾಜ್ಯ ಸರಕಾರ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎನ್ನುವುದು ಕಾಂಗ್ರೆಸ್ ವಾದವಾಗಿದ್ದರೆ, ಚುನಾವಣಾ ಆಯೋಗ ಮೇಲ್ವಿಚಾರಣೆ ಮಾಡಿದರೂ, ಅಧಿಕಾರಿಗಳು ರಾಜ್ಯ ಸರಕಾರದ ಕೈಗೊಂಬೆಯಾಗಿದ್ದಾರೆ ಎನ್ನುವ ಆರೋಪ ಬಿಜೆಪಿ ಯದ್ದಾಗಿದೆ.
ಚುನಾವಣಾ ಆಯೋಗದ ಆದೇಶದ ಪ್ರಕಾರ, ಬಿಎಲ್‌ಒಗಳು ಮನೆ-ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಂದ ಅರ್ಜಿಗಳನ್ನು ಭರ್ತಿ ಮಾಡಿಸಬೇಕು. ಆದರೆ ರಾಮನಗರ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಮೂಹಿಕವಾಗಿ ಈ ಪ್ರಕ್ರಿಯೆ ನಡೆಸಲಾಗಿದೆ ಎನ್ನುವುದಕ್ಕೆ ವಿಡಿಯೊ ಸಾಕ್ಷ್ಯವನ್ನು ಮೈತ್ರಿಪಕ್ಷಗಳು ನೀಡಿವೆ. ಅರ್ಥವಾಗದೇ ಇರುವವರಿಗೆ ಒಂದೇ ಜಾಗದಲ್ಲಿ ಕೂರಿಸಿ ಅರ್ಜಿ ಭರ್ತಿ ಮಾಡಿಸುವುದರಲ್ಲಿ ತಪ್ಪೇನಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆಹರಿಪ್ರಸಾದ್ ಸಮರ್ಥಿಸಿಕೊಂಡಿದ್ದರೆ, ಅಕ್ರಮ ಬಾಂಗ್ಲಾದೇಶಿಗರಿಗೆ ಮತದಾನದ ಹಕ್ಕು ಸಿಗುವಂತೆ ಮಾಡಲು ಈ ರೀತಿ ಸಾಮೂಹಿಕ ಅರ್ಜಿ ಭರ್ತಿ ಮಾಡಿಸುತ್ತಿದ್ದಾರೆ ಎನ್ನುವ ಆರೋಪವನ್ನು ಬಿಜೆಪಿಗರು ಮಾಡಿದ್ದಾರೆ.
ಹಾಗೇ ನೋಡಿದರೆ, ಬಿಜೆಪಿಯೇತರ, ಎನ್‌ಡಿಎ ಮೈತ್ರಿಪಕ್ಷವಲ್ಲದ ಸರಕಾರಗಳಿರುವ ರಾಜ್ಯಗಳಲ್ಲಿ ಎಸ್‌ಐಆರ್ ವಿಷಯದಲ್ಲಿರುವ ತಿಕ್ಕಾಟ, ಅದರಲ್ಲಿಯೂ ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿ ಆಗಿದ್ದ ಗಲಾಟೆಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಾಂಗವಾಗಿಯೇ ಸಾಗುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರವಿದ್ದಾಗ, ಎಸ್‌ಐಆರ್ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ಚಿಂತನೆ ನಡೆಸಿತ್ತು.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಈ ಚಿಂತನೆಯನ್ನು ಕೈಬಿಟ್ಟು ಸರಕಾರವಾಗಿ ಮಾಡಬೇಕಿರುವ ‘ಕರ್ತವ್ಯ’ ನಿಭಾಯಿಸಲು ತೀರ್ಮಾನಿಸಿದ್ದರು. ಆದರೆ ಕಾಂಗ್ರೆಸ್ ಒಲವಿರುವ ಮತದಾರರ ಹೆಸರು ಕೈಬಿಟ್ಟು ಹೋಗದಂತೆ ಪಕ್ಷವಾಗಿ ಮಾಡಬೇಕಾದ ಕಾರ್ಯವನ್ನು ಮಾಡು ವಂತೆ ಸ್ಥಳೀಯ ಶಾಸಕರಿಗೆ ಸೂಚನೆ ನೀಡಿ, ಎಸ್‌ಐಆರ್‌ನಿಂದ ಅರ್ಹರಿಗೆ ಸಮಸ್ಯೆಯಾಗದಂತೆ ಎಚ್ಚರವಹಿಸುವ ಪ್ರಯತ್ನ ನಡೆಯುತ್ತಿದೆ. ಇನ್ನು ಎಸ್‌ಐಆರ್‌ನಲ್ಲಿ ಅರ್ಹ ಮತದಾರರನ್ನು ಕೈಬಿಡುವ ಮೂಲಕ ಬಿಜೆಪಿಗೆ ಚುನಾವಣಾ ಆಯೋಗ ‘ಅನುಕೂಲ’ ಮಾಡಿಕೊಡುವ ಆತಂಕ ವಿರುವುದರಿಂದ ಚಳಿಗಾಲದ ಅಽವೇಶನವನ್ನೇ ಎರಡು ವಾರಗಳ ಮಟ್ಟಿಗೆ ಮುಂದೂಡಿ ಆಗಸ್ಟ್ ನಲ್ಲಿ ನಡೆಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.
2028ರಲ್ಲಿ ಮತ್ತೊಮ್ಮೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಪೂರ್ಣಾವಧಿ ಮುಖ್ಯಮಂತ್ರಿ ಯಾಗುವ ಹಾಗೂ ಕಾಂಗ್ರೆಸ್ ಸರಕಾರವನ್ನು ಮತ್ತೊಮ್ಮೆ ತರುವ ಲೆಕ್ಕಾಚಾರದಲ್ಲಿ ಡಿ. ಕೆ.ಶಿವಕುಮಾರ್ ಅವರಿರುವುದು ಮೊದಲ ದಿನವೇ ಸ್ಪಷ್ಟವಾಗಿದೆ. ಈ ಗೆಲುವಿಗೆ ಬೇಕಾಗಿರುವ ‘ಅಖಾಡ’ವನ್ನು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೊದಲೇ ಸಿದ್ಧಪಡಿಸಿಕೊಂಡು, ದೆಹಲಿ ನಾಯಕರ ಮುಂದೆ ಮಂಡಿಸಿದ್ದಾರೆ.
ರಾಜಕೀಯವಾಗಿ ಮಾಡಬೇಕಾದ ‘ತಂತ್ರಗಾರಿಕೆ’ಯೊಂದಿಗೆ ಕೇಂದ್ರದೊಂದಿಗೆ ಸಂಘರ್ಷಕ್ಕಿಂತ ಹೆಚ್ಚಾಗಿ, ಸಮನ್ವಯತೆಯಿಂದ ಸಾಗೋಣ ಎನ್ನುವ ಆಲೋಚನೆ ಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸರಕಾರ ಉತ್ತಮ ‘ಬಾಂಧ್ಯವ’ಕ್ಕೆ ಬೇಕಿರುವ ಎಲ್ಲ ತಂತ್ರಗಾರಿಕೆಯನ್ನು ಸಿದ್ಧಪಡಿಸಿಕೊಂಡಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ನೀತಿ ಆಯೋಗ ಸಭೆಗಳನ್ನು ಬಹಿಷ್ಕರಿಸಿ, ಪ್ರತಿಭಟನೆ ತೋರಿತ್ತು. ಆದರೆ ಡಿ.ಕೆ.ಶಿವಕುಮಾರ್ ಅವರು, ನೀತಿ ಸಭೆಗೆ ಭಾಗವಹಿಸಿ, ಕರ್ನಾಟಕಕ್ಕೆ ಆಗಬೇಕಿರುವ ಕೆಲಸದ ಪಟ್ಟಿಯನ್ನು ಕೊಟ್ಟು ಬಂದರು. ಇದಾದ ಬಳಿಕ ಇಡೀ ರಾಷ್ಟ್ರಾದ್ಯಂತ ಕಾಂಗ್ರೆಸ್ ವಿರೋಧಿಸು ತ್ತಿರುವ ಎಸ್‌ಐಆರ್ ವಿಷಯದಲ್ಲಿ ರಾಜಕೀಯ ಹೇಳಿಕೆಗಳನ್ನು ನೀಡಿದರೂ, ತಾವೇ ಮೊದಲು ಎಸ್‌ಐಆರ್ ಅರ್ಜಿ ಭರ್ತಿ ಮಾಡುವ ಮೂಲಕ ಎಲ್ಲರೂ ಪ್ರಕ್ರಿಯೆಯನ್ನು ಭಾಗವಹಿಸಿ ಎನ್ನುವ ಸಂದೇಶ ರವಾನಿಸಿದರು. ಈ ಎಲ್ಲದರ ಹೊರತಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದಂತೆ, ‘ಶುದ್ಧ ಮತದಾರರ’ ಪಟ್ಟಿ ಇಂದಿನ ಅಗತ್ಯ. ಇದು ಚುನಾವಣಾ ಆಯೋಗದ ಕರ್ತವ್ಯವೂ ಹೌದು. ಆದರೆ ಈ ಕಾರ್ಯ ಯಶಸ್ವಿಯಾಗಲು ಚುನಾವಣಾ ಆಯೋಗದಿಂದ ಮಾತ್ರವೇ ಸಾಧ್ಯವಿಲ್ಲ.
ಏಕೆಂದರೆ, ಚುನಾವಣಾ ಆಯೋಗ ಇಡೀ ಪ್ರಕ್ರಿಯೆಯ ಮೇಲಸ್ತುವಾರಿ ವಹಿಸಿಕೊಂಡಿದ್ದರೂ, ನಿರ್ವಹಣೆ ಮಾಡುವವರು ಸ್ಥಳೀಯ ಅಧಿಕಾರಿಗಳು. ಅಂದರೆ ರಾಜ್ಯ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು. ಆದ್ದರಿಂದ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲು, ರಾಜ್ಯ ಸರಕಾರದಿಂದಲೂ ಕೆಲ ಸ್ಪಷ್ಟ ಸೂಚನೆಗಳು ಅಗತ್ಯ. ಮನೆಮನೆಗೆ ಹೋಗಿ ಎಸ್‌ಐಆರ್ ಅರ್ಜಿಗಳನ್ನು ನೀಡಿ, ಭರ್ತಿ ಮಾಡಿಸಿಕೊಳ್ಳ ಬೇಕೆಂಬ ಮಾರ್ಗಸೂಚಿ ‘ಆಚೀಚೆ’ಯಾಗಿ ಮಸೀದಿ, ಚೌಲ್ಟ್ರಿಗಳಲ್ಲಿ ಮಾಡುವುದಕ್ಕೆ ಪ್ರೇರಣೆ ನೀಡುವುದು ಸರಿಯಲ್ಲ.
ಮಸೀದಿಯಲ್ಲಿ ಮಾಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದ್ದೂ, ಕೇವಲ ಮಸೀದಿಯಲ್ಲ, ಮಂದಿರ ದಲ್ಲಿ ಈ ರೀತಿ ಮಾಡಿದರೂ ಅದು ತಪ್ಪೇ. ಆದ್ದರಿಂದ ಬಿಎಲ್‌ಒಗಳಿಗೆ ಚುನಾವಣಾ ಆಯೋಗದ ಸೂಚನೆಯ ಹೊರತಾಗಿಯೂ ರಾಜ್ಯ ಸರಕಾರವೂ ಪ್ರಕ್ರಿಯೆ ಲೋಪವಾಗದಂತೆ ಎಚ್ಚರವಹಿಸಲು ಸ್ಥಳೀಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಬೇಕು. ಆಗ ಮಾತ್ರ ಎಲ್ಲರೂ ಬಯಸುತ್ತಿರುವ ‘ಶುದ್ಧ ಮತದಾರರ ಪಟ್ಟಿ’ ಸಿಗಲು ಸಾಧ್ಯ. ಇಲ್ಲದೇ ಹೋದರೆ, ಈ ಹೇಳಿಕೆ-ಪ್ರತಿ ಹೇಳಿಕೆಗಳು ಆಡಳಿತ-ಪ್ರತಿಪಕ್ಷಗಳ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗುವುದೇ ಹೊರತು, ತಾರ್ಕಿಕ ಅಂತ್ಯ ಸಿಗುವುದಿಲ್ಲ.