ಮನಿ ಮೈಂಡೆಡ್
ಸಂಶೋಧನೆ ಮಾತ್ರವಲ್ಲದೆ ಸಂಶೋಧಿಸಿದ್ದನ್ನು ಅನುಷ್ಠಾನಗೊಳಿಸುವುದರಲ್ಲಿ ಭಾರತದ ಬಲವಿದೆ. ಇಷ್ಟೊಂದು ಜನಸಂಖ್ಯೆ ಇರುವ ದೇಶದಲ್ಲಿ ತಂತ್ರಜ್ಞಾನದ ಪ್ರಸರಣ ಎಂದರೆ ವಿಜ್ಞಾನ ಮಾತ್ರವಲ್ಲ, ಇಲ್ಲಿ ಕಲೆ ಮತ್ತು ವಿಜ್ಞಾನದ ಸಂಗಮ ಇದೆ. ಇದರಲ್ಲಿ ಸಂಸ್ಥೆಗಳು, ಮಾತುಕತೆಗಳು, ನೀತಿ ನಿರೂಪಣೆಗಳು, ಹಳೆಯ ವ್ಯವಸ್ಥೆಯ ಜತೆಗೆ ಡೀಲ್, ಹೊಸಬರೊಡನೆ ಸಂಧಾನ, ಇಡಿಯಾಗಿ ವಿಶ್ವಾಸ ವೃದ್ಧಿ ಎಲ್ಲವೂ ಇವೆ.
ರಾಮಾಯಣ- ಮಹಾಭಾರತ ಮಹಾ ಕಾವ್ಯಗಳು ಈ ದೇಶದ ಮೂಲಧಾತುಗಳು. ಇವುಗಳು ಈಗ ಎಲ್ಲೆಡೆಯೂ ಕೃತಕ ಬುದ್ಧಿಮತ್ತೆಯ (ಎಐ) ಕ್ರಾಂತಿಯ ಪರಿಣಾಮಗಳದ್ದೇ ಚರ್ಚೆ! ಇದೊಂದು ಸಂಕ್ರಮಣ ಕಾಲಘಟ್ಟವೇ ಸರಿ. ಪ್ರತಿಯೊಂದು ಕೈಗಾರಿಕಾ ಕ್ರಾಂತಿ ಸಂಭವಿಸಿದಾಗಲೂ ಅನೇಕ ಉದ್ಯೋಗಗಳು ನಾಶವಾಗುತ್ತವೆ, ಜತೆಗೆ ಹೊಸ ಹುದ್ದೆಗಳೂ ಸೃಷ್ಟಿಯಾಗುತ್ತವೆ. ಆದರೆ ಅವುಗಳಿಗೆ ಬೇಕಾದ ಕೌಶಲವನ್ನು ಗಳಿಸಿಕೊಳ್ಳಬೇಕು. ಇಲ್ಲದಿದ್ದರೆ ಉಳಿಗಾಲವಿಲ್ಲ.
ಇದನ್ನು ‘ಟ್ಯಾಲೆಂಟ್ ಟ್ರಾನ್ಸ್ʼಫಾರ್ಮೇಶನ್’ ಎಂದು ಕರೆಯುತ್ತಾರೆ ಇನ್ಫೋಸಿಸ್‌ನ ಸಹ ಸಂಸ್ಥಾಪಕರಾದ ನಂದನ್ ನಿಲೇಕಣಿ.ಭಾರತದ ಆಧಾರ್ ಮತ್ತು ಯುಪಿಐ ವಿಶ್ವ ವಿಖ್ಯಾತ. ಅವುಗಳ ಯಶಸ್ಸಿನ ಹಿಂದಿನ ರೂವಾರಿಯಾಗಿರುವ ನಂದನ್ ನಿಲೇಕಣಿಯವರ ಮಾತು ಗಳಿಗೆ ಹೆಚ್ಚು ತೂಕವಿದೆ.
ಕಾರ್ಯಕ್ರಮವೊಂದರಲ್ಲಿ ಅವರು ಎಐ ಪರಿಣಾಮವಾಗಿ ವೇಗವಾಗಿ ನಶಿಸಿ ಹೋಗುತ್ತಿರುವ ಐಟಿ ಜಾಬ್ಸ್ ಮತ್ತು ಹೊಸ ಐಟಿ ಹುದ್ದೆಗಳನ್ನು ಬಹಳ ಸ್ಪಷ್ಟವಾಗಿ ಪಟ್ಟಿ ಮಾಡಿದ್ದಾರೆ. ಅವುಗಳನ್ನು ನೋಡೋಣ.
ಐಟಿ ಕ್ಷೇತ್ರದಲ್ಲಿ ಎಐ ಪರಿಣಾಮ ಮೌಂಟ್-ಎಂಡ್ ವೆಬ್ ಡೆವಲಪರ್ಸ್, ಕ್ಯೂಎ ಟೆಸ್ಟರ್ಸ್, ಐಟಿ ಸಪೋರ್ಟ್ ಸ್ಪೆಷಲಿಸ್ಟ್, ಬ್ಲಾಕ್ ಚೈನ್ ಡೆವಲಪರ್ಸ್ ಉದ್ಯೋಗಗಳು ವೇಗವಾಗಿ ನಶಿಸುತ್ತಿವೆ. ಆದರೆ ಹೊಸ ಉದ್ಯೋಗಗಳೂ ಬರುತ್ತಿವೆ. ಅವುಗಳೆಂದರೆ- ಡೇಟಾ ಅನ್ನೊ ಟೇಟರ್, ಎಐ ಎಂಜಿನಿಯರ್, ಎಐ ಫಾರೆನ್ಸಿಕ್ ಅನಲಿ, ಫಾರ್ವರ್ಡ್ ಡಿಪ್ಲಾಯ್ಡ್ ಎಂಜಿನಿ ಯರ್ಸ್ ಮತ್ತು ಎಐ ಲೀಡ್ಸ್. ಈ ಪರಿವರ್ತನೆಯಿಂದ ಐಟಿ ಕ್ಷೇತ್ರದಲ್ಲಿ ಕೋಟ್ಯಂತರ ಹೊಸ ಹುದ್ದೆಗಳು ಸೃಷ್ಟಿಯಾಗಲಿವೆ ಎಂದು ನಿಲೇಕಣಿಯವರು ಹೇಳಿದ್ದಾರೆ. ಇಲ್ಲಿ ಸಮಾಧಾನಕರ ಸಂಗತಿ ಏನೆಂದರೆ, ‘ಎಐ’ನಿಂದ ಸೃಷ್ಟಿಯಾಗಲಿರುವ ಹೊಸ ಹುದ್ದೆಗಳು ವೈವಿಧ್ಯಮಯ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು.
ಇದನ್ನೂ ಓದಿ: Keshava Prasad B Column: ವರ್ಷದೊಳಗೆ ಸಾಫ್ಟ್ʼವೇರ್ ಎಂಜಿನಿಯರ್ʼಗಳು ಕಣ್ಮರೆ ?!
ಆದರೆ “ಎಐ ಅರ್ಥವಾಗುವುದಿಲ್ಲ, ಅದು ಹಿಡಿಸುವುದಿಲ್ಲ, ನಾನು ಹಳೆಯ ಕೆಲಸವನ್ನೇ ಮಾಡೋದು" ಎನ್ನುವವರಿಗೆ, ಹೊಸ ಪಾತ್ರಗಳಿಗೆ ಮಾನಸಿಕವಾಗಿ ಸಜ್ಜಾಗದಿರುವವರಿಗೆ ಎಐ ಅಲೆಯಲ್ಲಿ ಉಳಿದುಕೊಳ್ಳುವುದು ಕಷ್ಟವಾದೀತು. ಹೊಸ ಬದಲಾವಣೆಯನ್ನು ಕಲಿತುಕೊಂಡು ಸ್ವೀಕರಿಸುವುದು ಮುಖ್ಯ.
ಹೀಗಾಗಿ ಐಟಿ ಕಂಪನಿಗಳು ಎಐ ತಂತ್ರಜ್ಞಾನಕ್ಕೆ ತಮ್ಮ ಉದ್ಯೋಗಿಗಳನ್ನು ಹೇಗೆ ಸಜ್ಜು ಗೊಳಿಸುತ್ತವೆ? ಟೆಕ್ಕಿಗಳು ಹೇಗೆ ಹೊಸ ಕೌಶಲವನ್ನು ಅಳವಡಿಸಿಕೊಳ್ಳುತ್ತಾರೆ ಎಂಬುದು ಎಲ್ಲ ಐಟಿ ಕಂಪನಿಗಳಿಗೆ ಸವಾಲಾಗಲಿದೆ. ಭವಿಷ್ಯದಲ್ಲಿ ಐಟಿ ನೇಮಕಾತಿ ಪ್ರಕ್ರಿಯೆ, ತರಬೇತಿ, ಹುದ್ದೆಯ ನಿಗದಿ ಎಲ್ಲವೂ ಬದಲಾಗಲಿದೆ. ವಾಸ್ತವವಾಗಿ ಗ್ರೀನ್ ಫೀಲ್ಡ್ ಎಐ ಡೆವಲಪ್‌ಮೆಂಟ್, ಬ್ರೌನ್ ಫೀಲ್ಡ್‌ಗಿಂತ ಹೆಚ್ಚು ಸುಲಭ ಎನ್ನುತ್ತಾರೆ ನಿಲೇಕಣಿ!
“ನಾನೊಂದು ಎಐ ಟೂಲ್ ಅನ್ನು ಒಂದು ಮಗುವಿಗೆ ಕೊಟ್ಟು, ಮಿಲಿಯನ್ ಸಾಲುಗಟ್ಟಲೆ ಕೋಡ್‌ಗಳನ್ನು ಬರೆಸಬ. ಪ್ರಶ್ನೆ ಇದಲ್ಲ! ಏನಿದು ಗ್ರೀನ್ ಫೀಲ್ಡ್-ಬ್ರೌನ್ ಫೀಲ್ಡ್? ಗ್ರೀನ್ ಫೀಲ್ಡ್ ಎಂದರೆ ಹೊಸತಾಗಿ ಎಐ ಸಿಸ್ಟಮ್ ಅನ್ನು ಕಟ್ಟುವುದು. ಯಾವುದೇ ನಿರ್ಬಂಧ ವಿಲ್ಲದೆ ಸ್ಕ್ರಾಚ್‌ನಿಂದ ನಿರ್ಮಿಸುವುದು.
ಇಲ್ಲಿ ಹಳೆಯ ಭಾರಗಳು ಇರುವುದಿಲ್ಲ. ಆದರೆ ಬ್ರೌನ್ ಫೀಲ್ಡ್ ಎಐ ಡೆವಲಪ್ʼಮೆಂಟ್ ಎಂದರೆ ಈಗಾಗಲೇ ಇರುವ ವ್ಯವಸ್ಥೆಗೆ ಆಧುನಿಕ ಎಐ, ಮಷಿನ್ ಲರ್ನಿಂಗ್, ಆಟೊಮೇಶನ್ ಅನ್ನು ಸಂಯೋಜಿಸುವುದು. ಇದು ಸುಲಭದ ಮಾತಲ್ಲ, ಆದರೂ ಬ್ರೌನ್‌ಫೀಲ್ಡ್ ಸಿಸ್ಟಮ್ ಅನ್ನು ಉಳಿಸಿಕೊಂಡು ಬೆಳೆಸುವುದರಲ್ಲಿಯೇ ನಿಜವಾದ ಉದ್ಯಮಶೀಲತೆ ಇದೆ" ಎನ್ನುತ್ತಾರೆ ನಿಲೇಕಣಿ.
ಏಕೆ? ಅವರು ವಿವರಿಸುತ್ತಾರೆ- “ನೋಡಿ, ಐಟಿ ಕಂಪನಿಗಳು ಟ್ರಿಲಿಯನ್ ಡಾಲರ್‌ಗಟ್ಟಲೆ ಬಂಡವಾಳವನ್ನು ತಮ್ಮ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡಿವೆ. ಟೆಕ್ನಿಕಲ್ ಡೆಟ್‌ಗಳಿವೆ. ಹಳೆಯ ಸಿಸ್ಟಮ್ʼಗಳನ್ನುಬದಲಿಸುವುದು ಸುಲಭವಲ್ಲ. ವ್ಯಕ್ತಿಗತ ಟಾಸ್ಕ್‌ಗಿಂತ ಕಂಪನಿ ಗಳಲ್ಲಿ ತರಬೇಕಾಗಿರುವ ಬದಲಾವಣೆಗಳು ಸಂಕೀರ್ಣವಾಗಿವೆ".
ಎಐ ಅನುಷ್ಠಾನದಲ್ಲಿ ಅತ್ಯಂತ ಫೋಕಸ್ ಅಗತ್ಯ. ಕಂಪನಿಗಳಲ್ಲಿ ನಕಲಿ ಉತ್ಪಾದಕತೆ ಯೂ ಆಗಬಹುದು. ಉದಾಹರಣೆಗೆ ಒಬ್ಬಾತ ಎರಡು ಪ್ಯಾರಾಗ್ರಾಫ್ ಇ-ಮೇಲ್ ಬರೆದು ಎಐಗೆ ಕೊಟ್ಟು 10 ಪ್ಯಾರಾಗ್ರಾಫ್ʼಗೆ ಎಳೆದು ಪ್ರಭಾವಿತಗೊಳಿಸಲು ಯತ್ನಿಸಬಹುದು.
ಮತ್ತೊಬ್ಬ 10 ಪ್ಯಾರಾಗ್ರಾಫ್ ಅನ್ನು ಐಐ ಮೂಲಕ ಎರಡು ಪ್ಯಾರಾಗ್ರಾಫ್ʼಗೆ ಇಳಿಸ ಬಹುದು. ಇದರಿಂದ ಏನು ಪ್ರಯೋಜನ ಬಂತು? ಆದ್ದರಿಂದ ಎಐ ಬಳಕೆ, ಹೂಡಿಕೆಯಿಂದ ನಿಜವಾಗಿಯೂ ಉತ್ಪಾದಕತೆಯನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ನೋಡಿ ಕೊಳ್ಳುವುದು ಮುಖ್ಯ.
ಭಾರತದ ಬಲ ಯಾವುದೆಂದರೆ ಸಂಶೋಧನೆ ಮಾತ್ರವಲ್ಲ, ಸಂಶೋಧಿಸಿದ್ದನ್ನು ಅನುಷ್ಠಾನಗೊಳಿಸುವುದರಲ್ಲಿ, ಸಾರ್ವತ್ರಿಕವಾಗಿ ಪ್ರಸರಣ ಮಾಡುವುದರಲ್ಲಿ ಭಾರತ ಅದ್ಭುತ ಯಶಸ್ಸು ಗಳಿಸಿದೆ. ಇಷ್ಟೊಂದು ಜನಸಂಖ್ಯೆ ಇರುವ ದೇಶದಲ್ಲಿ ತಂತ್ರಜ್ಞಾನದ ಪ್ರಸರಣ ಎಂದರೆ ಕೇವಲ ವಿಜ್ಞಾನ ಮಾತ್ರವಲ್ಲ, ಇಲ್ಲಿ ಕಲೆ ಮತ್ತು ವಿಜ್ಞಾನದ ಸಂಗಮ ಇದೆ.
ಇದರಲ್ಲಿ ಸಂಸ್ಥೆಗಳು, ಮಾತುಕತೆಗಳು, ನೀತಿ ನಿರೂಪಣೆಗಳು, ಹಳೆಯ ವ್ಯವಸ್ಥೆಯ ಜತೆಗೆ ಡೀಲ್, ಹೊಸಬರೊಡನೆ ಸಂಧಾನ, ಇಡಿಯಾಗಿ ವಿಶ್ವಾಸ ವೃದ್ಧಿ ಎಲ್ಲವೂ ಇದೆ. ಹೇಗೆ ಆಧಾರ್ ಮತ್ತು ಯುಪಿಐ ಅಳವಡಿಕೆಯಲ್ಲಿ ಭಾರತ ಯಶಸ್ವಿಯಾಗಿದೆಯೋ, ಅದೇ ರೀತಿ ಎಐ ಕ್ಷೇತ್ರದಲ್ಲಿ ಯಶಸ್ಸು ಗಳಿಸಬೇಕಾಗಿದೆ.
ಶಿಕ್ಷಣ, ಆರೋಗ್ಯ ಮತ್ತು ಕೃಷಿಯಲ್ಲಿ ಎಐ ಹೆಚ್ಚಿನ ಪರಿಣಾಮ ಬೀರುವಂತೆ ನೋಡಿ ಕೊಳ್ಳಬೇಕಾಗಿದೆ. ಎಐನಿಂದ ಡೀಪ್ ಫೇಕ್ ಆಗಬಾರದು. ಎಐ ಜನರಿಗೋಸ್ಕರ ಇರಬೇಕು. ಬಳಕೆದಾರರ ಸ್ನೇಹಿಯಾಗಿ ಇದು ಆರಂಭವಾಗಬೇಕು ಹಾಗೂ ಜನಜೀವನದ ಗುಣಮಟ್ಟ ವನ್ನು ವೃದ್ಧಿಸಬೇಕು. ದೇಶದ ಆರ್ಥಿಕ ಬೆಳವಣಿಗೆಗೆ ಎಐನಿಂದ 25 ಪರ್ಸೆಂಟ್ ಪಾಲು ಸಿಗಲಿದೆ ಎಂಬ ಅಂದಾಜು ಇದೆ.
ನನ್ನ ಪ್ರಕಾರ 10 ಪರ್ಸೆಂಟ್ ಸಿಕ್ಕಿದರೂ ಒಳ್ಳೆಯದೇ ಎಂದು ವಿವರಿಸುತ್ತಾರೆ ನಿಲೇಕಣಿ. ಹೀಗಿದ್ದರೂ, ಐಟಿ ಸೇವೆಗಳನ್ನು ಒದಗಿಸುವ ಕಂಪನಿಗಳಿಗೆ ಈ ಬದಲಾವಣೆ ಒಳ್ಳೆಯದೇ. ಏಕೆಂದರೆ ಕಾರ್ಪೊರೇಟ್ ವಲಯದ ಕಂಪನಿಗಳಿಗೆ ಎಐ ವ್ಯವಸ್ಥೆಯನ್ನು ಜಾರಿಗೊಳಿಸಲು ಐಟಿ ಪಾಲುದಾರರ ಅಗತ್ಯ ಇರುತ್ತದೆ. ಈ ಸಲ ಎಐ ಕೇವಲ ಟೆಕ್ನಾಲಜಿಯಾಗಿಲ್ಲ.
ಬಿಸಿನೆಸ್ ನಿರ್ವಹಣೆಯನ್ನು ಆಮೂಲಾಗ್ರವಾಗಿ ಬದಲಿಸಲಿದೆ. ಹಳೆಯ ಸಿಸ್ಟಮ್‌ಗಳನ್ನು ಕಂಪನಿಗಳು ಬದಲಾಯಿಸಬೇಕಾಗುತ್ತದೆ. ಸ್ವತಃ ಎಐ ಆಧುನಿಕತೆಗೆ ತಕ್ಕಂತಿರುವ ಟೂಲ್ ಗಳನ್ನು ಕಂಪನಿಗಳಿಗೆ ಒದಗಿಸಬೇಕಾಗುತ್ತದೆ. ಈ ಹಿಂದಿನ ಯಾವುದೇ ತಂತ್ರಜ್ಞಾನಕ್ಕಿಂತ ವೇಗವಾಗಿ ಎಐ ಪರಿವರ್ತನೆ ಜರುಗುತ್ತಿದೆ. ಇಂಟರ್‌ನೆಟ್ ಮತ್ತು ಸ್ಮಾರ್ಟ್ ಫೋನ್ʼ ಗಳಿಂದಾಗಿ ಎಐ ವೇಗವಾಗಿ ಹರಡುತ್ತಿದೆ. ವಿತರಣೆ ಸುಲಭವಾಗಿದೆ.
ಚಾಟ್ ಜಿಪಿಟಿ, ಜೆಮಿನಿಯಂಥ ಟೂಲ್‌ಗಳು ಈ ಹಿಂದಿನ ಮೂಲಸೌಕರ್ಯ ವ್ಯವಸ್ಥೆಯಲ್ಲಿ ಬಂದಿರುವುದರಿಂದ ವೇಗವಾಗಿ ಪ್ರಸರಣವಾಗುತ್ತಿವೆ. ಸಾಂಪ್ರದಾಯಿಕ ಕ್ಯೂಎ ಟೆಸ್ಟಿಂಗ್ ಮತ್ತು ಡೆವಲಪ್‌ಮೆಂಟ್ ಮತ್ತಷ್ಟು ವಿಕಾಸವಾಗಲಿದೆ.
ಜಾಗತಿಕ ತಂತ್ರಜ್ಞಾನ ದಿಗ್ಗಜ ಕಂಪನಿಗಳು ಭಾರತದಲ್ಲಿ ದೊಡ್ಡ ಮೊತ್ತದಲ್ಲಿ ಎಐ ಟೆಕ್ನಾ ಲಜಿಗೆ ಬಂಡವಾಳ ಹೂಡಿಕೆ ಮಾಡುತ್ತಿವೆ. ಗೂಗಲ್, ಎನ್ವಿಡಿಯಾ, ಮೈಕ್ರೊಸಾಫ್ಟ್ ಮೊದಲಾದ ಕಂಪನಿಗಳು ಈಗಾಗಲೇ ಐಟಿ ಮೂಲಸೌಕರ್ಯ, ವೈಜ್ಞಾನಿಕ ಸಂಶೋಧನೆ, ಕ್ಲೌಡ್ ಟೆಕ್ನಾಲಜಿಗೆ ಭಾರಿ ಹೂಡಿಕೆ ಮಾಡುವುದಾಗಿ ಘೋಷಿಸಿವೆ.
ಇಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ಭಾರತದಲ್ಲಿ ಎಐಗೆ 200 ಶತಕೋಟಿ ಡಾಲರ್ (18 ಲಕ್ಷ ಕೋಟಿ ರುಪಾಯಿ) ಹೂಡಿಕೆಯನ್ನು ನಿರೀಕ್ಷಿಸಲಾಗಿದೆ. ಗೂಗಲ್ ಮತ್ತು ಆಲ್ಫಾʼಬೆಟ್ ಸಿಇಒ ಸುಂದರ್ ಪಿಚೈ ಅವರು ಭಾರತದ ಎಐ ಭವಿಷ್ಯಕ್ಕೆ ಮಾರ್ಗಸೂಚಿಯನ್ನು ತಯಾರಿಸಿದ್ದಾರೆ.
ಮೂಲಸೌಕರ್ಯಕ್ಕೆ ಹೊಸ ಹೂಡಿಕೆ, ಕೌಶಲ ವೃದ್ಧಿ, ವಿಶಾಖಪಟ್ಟಣಂನಲ್ಲಿ ಎಐ ಹಬ್ ಹೊಸ ಅಧ್ಯಾಯಕ್ಕೆ ಮುನ್ನುಡಿಯಾಗಿವೆ. ಭಾರತ-ಅಮೆರಿಕ ನಡುಗೆ ಗೂಗಲ್ ಹೊಸ ಕನೆಕ್ಟ್ ಆಗಲಿದೆ. ಸಾಗರದಾಳದಲ್ಲಿ ಫೈಬರ್- ಆಪ್ಟಿಕ್ ಕೇಬಲ್ ಜಾಲಗಳು ಗ್ಲೋಬಲ್ ಇಂಟರ್‌ನೆಟ್ ಮತ್ತು ಎಐ ಬೆಳವಣಿಗೆಗೆ ಅನುಕೂಲಕರವಾಗಲಿದೆ.
ಭೂ ಖಂಡಗಳ ನಡುವೆ ಡೇಟಾ ಮೂವ್‌ಮೆಂಟ್‌ಗೆ ಹಾದಿ ಸುಗಮವಾಗಲಿದೆ. ಇ-ಮೇಲ್ ನಿಂದ ವಿಡಿಯೊ ಕಾಲ್ ತನಕ ಎಲ್ಲ ಅಂತಾರಾಷ್ಟ್ರೀಯ ಇಂಟರ್‌ನೆಟ್ ಟ್ರಾಫಿಕ್ ಈ ಕೇಬಲ್ ಜಾಲದ ಮೂಲಕ ಸಾಗಲಿದೆ. ಇದು ಅಮೆರಿಕ-ಭಾರತ ಮಾತ್ರವಲ್ಲದೆ, ಸಿಂಗಾಪುರ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾವನ್ನೂ ಕನೆಕ್ಟ್ ಮಾಡಲಿರುವುದು ವಿಶೇಷ.
ನಾಲ್ಕು ಭೂಖಂಡಗಳನ್ನು ಈ ಜಾಲ ಸಂಪರ್ಕಿಸಲಿದೆ. ವಿಶಾಖಪಟ್ಟಣದ ವೈಜಾಗ್‌ನಿಂದ ದಕ್ಷಿಣ ಆಫ್ರಿಕಾ ಮತ್ತು ಸಿಂಗಾಪುರಕ್ಕೆ ನೇರವಾಗಿ ಫೈಬರ್ ಕೇಬಲ್ ಜಾಲದ ಸಂಪರ್ಕ ವಾಗಲಿದೆ. ದೇಶದಲ್ಲಿ ಅಗ್ಗ ಮತ್ತು ವೇಗದ ಇಂಟರ್‌ನೆಟ್ ಮತ್ತು ಎಐ ಅಭಿವೃದ್ಧಿಗೆ ಇದು ನಿರ್ಣಾಯಕವಾಗಲಿದೆ.
ಗೂಗಲ್ ಮಾತ್ರವಲ್ಲ, ಎನ್ವಿಡಿಯಾ ಇಲ್ಲಿನ ಎಐ ಕಂಪನಿಗಳ ಜತೆಗೆ ಪಾಲುದಾರಿಕೆ ಮಾಡಿಕೊಳ್ಳಲಿವೆ. ಮೈಕ್ರೊಸಾಫ್ಟ್ 50 ಶತಕೋಟಿ ಡಾಲರ್ ಹೂಡಿಕೆ ಮಾಡಲಿದೆ. ಯೊಟ್ಟಾ, ಲಾರ್ಸನ್ ಆಂಡ್ ಟೂಬ್ರೊ ಮತ್ತು ಇ೨ಇ ನೆಟ್ ವರ್ಕ್ ‘ಎಐ ಫ್ಯಾಕ್ಟರಿ’ಗಳನ್ನು ನಿರ್ಮಿಸ ಲಿವೆ. ಅದಾನಿ ಗ್ರೂಪ್ ದೇಶೀಯ ಎಐ ಡೇಟಾ ಮೂಲಸೌಕರ್ಯ ಅಭಿವೃದ್ಧಿಗೆ 100 ಶತಕೋಟಿ ಡಾಲರ್ ಹೂಡಿಕೆಗೆ ಮುಂದಾಗಿದೆ.
ಕೇಂದ್ರ ಸರಕಾರ ಕೂಡ ಕ್ಲೌಡ್ ಕಂಪನಿಗಳಿಗೆ 20 ವರ್ಷಗಳ ಟ್ಯಾಕ್ಸ್ ಹಾಲಿಡೇ ಸೌಕರ್ಯ ನೀಡಲಿದೆ. ಜಾಗತಿಕ ಕಂಪನಿಗಳಿಗೆ ಭಾರತದಲ್ಲಿ ದೀರ್ಘಾವಧಿಯ ಹೂಡಿಕೆ ಮಾಡಲು ಇದರಿಂದ ಉತ್ತೇಜನ ಲಭಿಸಿದಂತಾಗಿದೆ.
ಮೈಕ್ರೊಸಾಫ್ಟ್ʼನ ಬ್ರಾಡ್ ಸ್ಮಿತ್ ಹೀಗೆನ್ನುತ್ತಾರೆ- “ಭಾರತವು ಎಐ ಮೂಲಸೌಕರ್ಯಕ್ಕೆ ಭಾರಿ ಹೂಡಿಕೆ ಮಾಡುತ್ತಿರುವುದರಿಂದ ಮತ್ತು ಜಾಗತಿಕ ಟೆಕ್ ಕಂಪನಿಗಳು ಇದರಲ್ಲಿ ಕೈಜೋಡಿ ಸುತ್ತಿರುವುದರಿಂದ ದೇಶಗಳ ನಡುವಣ ಅಂತರವೂ ಕಡಿಮೆಯಾಗಲಿದೆ".
ಭಾರತದಲ್ಲಿರುವ ಯುವಜನರ ದೊಡ್ಡ ಸಂಖ್ಯೆ, ಹೆಚ್ಚುತ್ತಿರುವ ಡಿಜಿಟಲೀಕರಣ, ಎಐ ಮತ್ತು ಕ್ಲೌಡ್ʼಗೆ ಹೆಚ್ಚುತ್ತಿರುವ ಬೇಡಿಕೆ, ವೆಚ್ಚದಲ್ಲಿ ಉಳಿತಾಯ, ವಿಶಾಲವಾದ ಮಾರು ಕಟ್ಟೆಯ ಹಿನ್ನೆಲೆಯಲ್ಲಿ ಗೂಗಲ, ಮೈಕ್ರೊಸಾಫ್ಟ್, ಅಮೆಜಾನ್ ಇತ್ಯಾದಿ ಕಂಪನಿಗಳು ಇಲ್ಲಿ ವ್ಯಾಪಕವಾಗಿ ಬಂಡವಾಳ ಹೂಡುತ್ತಿವೆ.
ಕೇಂದ್ರದಲ್ಲಿ ಉದ್ಯಮಸ್ನೇಹಿ, ಸ್ಥಿರ ಸರಕಾರ ಅಸ್ತಿತ್ವದಲ್ಲಿರುವುದೂ ಪ್ಲಸ್ ಪಾಯಿಂಟ್. ಇದೆಲ್ಲದರ ಪರಿಣಾಮ ಭಾರತವು ಇವತ್ತು ಡೇಟಾ ಸೆಂಟರ್‌ಗಳಿಗೆ ಜಾಗತಿಕ ಹಾಟ್‌ಸ್ಪಾಟ್ ಆಗಿ ಹೊರಹೊಮ್ಮಿದೆ. ಡೆಲಾಯಿಟ್ ವರದಿಯ ಪ್ರಕಾರ ಮಹಾರಾಷ್ಟ್ರ, ಉತ್ತರಪ್ರದೇಶ, ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಮುಂದಿನ 4 ವರ್ಷಗಳಲ್ಲಿ ಡೇಟಾ ಸೆಂಟರ್‌ಗಳಿಗೆ 200 ಶತಕೋಟಿ ಡಾಲರ್ ಹೂಡಿಕೆಯಾಗಲಿದೆ.
ಭಾರತವು ವಿಶ್ವದ ಡೇಟಾ ವೆಚ್ಚದಲ್ಲಿ 20 ಪರ್ಸೆಂಟ್ ಪಾಲು ವಹಿಸುತ್ತಿದೆ. ಆದರೆ ಜಾಗತಿಕ ಡೇಟಾ ಸೆಂಟರ್ʼಗಳಲ್ಲಿ 5 ಪರ್ಸೆಂಟ್ ಮಾತ್ರ ಇಲ್ಲಿದೆ. ಆದರೆ ಮುಂಬರುವ ವರ್ಷಗಳಲ್ಲಿ ಇದು ಗಣನೀಯವಾಗಿ ಹೆಚ್ಚಲಿರುವುದರಿಂದ ಆರ್ಥಿಕ ಬೆಳವಣಿಗೆಗೂ ಕಾರಣವಾಗಲಿದೆ ಎಂಬುದು ಗಮನಾರ್ಹ.