ವಿದೇಶವಾಸಿ
dhyapaa@gmail.com
ನಮ್ಮಲ್ಲಿ ಒಂದು ವರ್ಗದ ಜನರಿದ್ದಾರೆ. ಅವರು ಯಾವುದೋ ಬ್ಯಾಂಕಿನಿಂದ ಕ್ರೆಡಿಟ್ ಕಾರ್ಡ್ ಪಡೆದುಕೊಂಡರು ಅಂದುಕೊಳ್ಳಿ, ವಿಮಾನ ಪ್ರಯಾಣ ಮಾಡುವಾಗ ಲಾಂಜಿನ ಪ್ರವೇಶ ದ್ವಾರದ ಬಳಿ ಹೋಗಿ ಕಾರ್ಡನ್ನು ತೆಗೆದು ಇಡುತ್ತಾರೆ. ಅಲ್ಲಿಯ ಉದ್ಯೋಗಿ ‘ಈ ಕಾರ್ಡ್ ನಡೆಯುವುದಿಲ್ಲ, ಲಾಂಜ್ ಒಳಗೆ ಹೋಗಬಹುದು, ಆದರೆ ಹತ್ತೋ ಇಪ್ಪತ್ತೋ ಡಾಲರ್ ಕೊಡಬೇಕಾಗುತ್ತದೆ’ ಎಂದಾಗ ವಾದಕ್ಕಿಳಿಯುತ್ತಾರೆ.
ಇಲ್ಲಪ್ಪ ಇಲ್ಲ, ಸಾಧ್ಯವೇ ಇಲ್ಲ. ಇಂಥ ಜನರನ್ನು ಸಹಿಸಿಕೊಳ್ಳುವುದು ಮಾತ್ರ ಸಾಧ್ಯವಿಲ್ಲ. ಇವರೇನು ತಿಳಿದು ಮಾಡುತ್ತಾರೋ ಅಥವಾ ತಿಳಿಯದೆ ಮಾಡುತ್ತಾರೋ ಒಂದೂ ಅರ್ಥ ವಾಗುವುದಿಲ್ಲ. ಹೇಗೇ ಮಾಡಿದರೂ ಅದು ಸರಿಯಲ್ಲ. ಕಳೆದ ಇಪ್ಪತ್ತು-ಇಪ್ಪತ್ತೈದು ವರ್ಷಗಳ ಹಿಂದೆ ಹೀಗಿರಲಿಲ್ಲ.
ಇದು ಇತ್ತೀಚಿಗಿನ ಟ್ರೆಂಡ್. ತಾಳ್ಮೆ, ಸಹನೆ ಶಿಸ್ತುಗಳೆಲ್ಲ ಇವರ ಡಿಕ್ಷ್‌ನರಿಯ ಇಲ್ಲ. ಅಥವಾ ಇವರೆಲ್ಲ ಬರಗಾಲ ಪ್ರದೇಶದಿಂದ ಬಂದವರು, ತೀರಾ ಬರಗೆಟ್ಟು ಹೋದವರು. ನಿಜ ಹೇಳುತ್ತೇನೆ, ಭಿಕ್ಷುಕರೂ ಈ ರೀತಿ ವರ್ತಿಸುವುದಿಲ್ಲ. ನೀವು ಭಿಕ್ಷೆ ಹಾಕಿದರೆ ನಿಮ್ಮ ಎದುರಿಗೇ ನಿಂತು ತಿನ್ನುವುದಿಲ್ಲ. ಭಿಕ್ಷೆ ಪಡೆದು ಬೇರೆ ಯಾವುದೋ ಒಂದು ಜಾಗಕ್ಕೆ ಹೋಗಿ ಕುಳಿತು ತಿನ್ನುತ್ತಾರೆ. ಅದಲ್ಲದಿದ್ದರೆ ಅವರು ಮಾನಸಿಕ ಅಸ್ವಸ್ಥರೇ ಆಗಿರಬೇಕು.
ನಾನು ಈಗ ಹೇಳಲು ಹೊರಟಿರುವುದು ವಿಮಾನ ನಿಲ್ದಾಣದ ಒಳಗೆ ಇರುವ ಲಾಂಜಿಗೆ ಬರುವ ಜನರ ಕುರಿತು. ಎಲ್ಲರೂ ಅಲ್ಲದಿದ್ದರೂ ಇಂಥವರ ಸಂಖ್ಯೆ ಸಾಕಷ್ಟು ಇದೆ ಎಂದೇ ಹೇಳಬಹುದು. ಒಮ್ಮೆ ಅಬುಧಾಬಿಯ ವಿಮಾನ ನಿಲ್ದಾಣದ ಲಾಂಜಿನಲ್ಲಿ ಕುಳಿತುಕೊಂಡಿದ್ದೆ. ನೋಡಿದರೆ ಸುಮಾರು ನಲವತ್ತರಿಂದ ನಲವತ್ತೈದು ವರ್ಷದವನಂತೆ ಕಾಣುತ್ತಿದ್ದ ವ್ಯಕ್ತಿಯೊಬ್ಬ ಒಳಗೆ ಬಂದ. ಅವನೊಂದಿಗೆ ಅಂದಾಜು ಹದಿನಾಲ್ಕೋ-ಹದಿನೈದೋ ವರ್ಷದ ಒಬ್ಬ ಹುಡುಗನೂ ಬಂದಿದ್ದ. ಇಬ್ಬರೂ ನನ್ನ ಪಕ್ಕದ ಟೇಬಲ್‌ನ ಕುಳಿತರು.
ಇದನ್ನೂ ಓದಿ: Kiran Upadhyay Column: ದಯಾಮಯಿ ದೇವರೇ, ಈ ದೇಶಕ್ಕೆ ದಯಮಾಡಿ ಆನೆ ಕೊಡು...
ಅವರು ಧರಿಸಿದ ಉಡುಪು ನೋಡಿದರೆ, ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದವರಿರಬೇಕು. ತಿಂಡಿ ತಿಂದು ತಮಗೆ ಬೇಕಾದ ಜ್ಯೂಸ್ ಕುಡಿದು ಇಬ್ಬರೂ ಹೊರಗೆ ಹೋದರು. ಐದೇ ನಿಮಿಷದ ಅವಧಿ ಯಲ್ಲಿ ಅದೇ ವ್ಯಕ್ತಿ ಇನ್ನೊಬ್ಬ ಹತ್ತೋ-ಹನ್ನೊಂದೋ ವರ್ಷದ ಹುಡುಗನೊಂದಿಗೆ ಬಂದ. ಪುನಃ ಲಾಂಜಿನಲ್ಲಿರುವ ತಿಂಡಿ ತಿನಿಸುಗಳ ಸೇವನೆ ಆಯಿತು. ಅವನನ್ನು ಹೊರಗೆ ಬಿಟ್ಟು, ಐದೇ ನಿಮಿಷದಲ್ಲಿ ಮತ್ತೊಬ್ಬ ಹುಡುಗನೊಂದಿಗೆ ಒಳಗೆ ಬಂದ. ಈ ಬಾರಿ ಜತೆಯಲ್ಲಿ ಬಂದ ಹುಡುಗನಿಗೆ ಆರೋ-ಏಳೋ ವರ್ಷ ವಯಸ್ಸಿರಬಹುದು.
ಅವನಿಗೂ ತಿಂಡಿ ತಿನ್ನಿಸಿ, ಹೊರಗಡೆ ಬಿಟ್ಟು, ಮೂರೋ-ನಾಲ್ಕೋ ವರ್ಷದ ಇನ್ನೊಬ್ಬನ ಬಾಲಕ ನನ್ನು ಕರೆದುಕೊಂಡು ಬಂದ. ನಾನು ನೋಡುತ್ತಲೇ ಇದ್ದೆ. ಆದರೆ ಏನೆಂದು ಅರ್ಥ ವಾಗುತ್ತಿರ ಲಿಲ್ಲ. ಸ್ವಲ್ಪ ಹೊತ್ತಿನ ನಂತರ ಆತನನ್ನೂ ಬಿಟ್ಟು ಒಬ್ಬ ಮಹಿಳೆಯೊಂದಿಗೆ ಒಳಗೆ ಬಂದು ಕುಳಿತು ತಿಂಡಿ ತಿನ್ನುತ್ತಿರುವಾಗ ಲಾಂಜಿನ ರಿಸೆಪ್ಷನಿಸ್ಟ್ ಆತನ ಬಳಿ ಬಂದು, “ನೀವು ಎಷ್ಟು ಜನರನ್ನು ಒಳಗೆ ಕರೆದುಕೊಂಡು ಬಂದಿದ್ದೀರಾ?" ಎಂದು ಪ್ರಶ್ನಿಸಿದಳು.
ಮೊದಲು ಆತ ಪ್ರಶ್ನೆ ಅರ್ಥವಾಗದವನಂತೆ ನಟಿಸಿದ. ರಿಸೆಪ್ಷನಿಸ್ಟ್ ಬಿಡಲಿಲ್ಲ. ಅವನ ಭಾಷೆ ಅರ್ಥವಾಗುವ ತನ್ನ ಮೇಲಿನ ಅಧಿಕಾರಿಯನ್ನು ಕರೆದು ಏನಾಯಿತು ಎಂದು ವಿವರಿಸಿದಳು. ಅಧಿಕಾರಿ ಅವನ ಭಾಷೆಯಲ್ಲಿ ಪ್ರಶ್ನಿಸಿದ. ಆತ, “ಇವಳು ನನ್ನ ಹೆಂಡತಿ, ಮೊದಲು ನನ್ನ ಜತೆ ಬಂದು ಹೋದವರು ನನ್ನ ಮಕ್ಕಳು. ನನ್ನದೇ ಹೆಂಡತಿ-ಮಕ್ಕಳನ್ನು ಕರೆದುಕೊಂಡು ಬಂದರೆ ತಪ್ಪೇನು?" ಎಂದು ಕೇಳಿದ.
ಆಗ ಲಾಂಜ್ ಅಧಿಕಾರಿ, “ನಿಮ್ಮ ಕಾರ್ಡ್ ಪ್ರಕಾರ, ಲಾಂಜ್‌ಗೆ ಪ್ರವೇಶ ಇರುವುದು ನಿಮಗೆ ಮತ್ತು ನಿಮ್ಮ ಜತೆ ಒಬ್ಬ ಅತಿಥಿಗೆ ಮಾತ್ರ. ಆದರೆ ನೀವು ಈಗಾಗಲೇ ಐದು ಜನರನ್ನು ಕರೆದುಕೊಂಡು ಬಂದಿದ್ದೀರಿ. ಇದು ನಿಯಮದ ವಿರುದ್ಧ. ಪ್ರತಿಯೊಬ್ಬ ಹೆಚ್ಚಿನ ಅತಿಥಿಗೆ ನಾವು ಇಪ್ಪತ್ತು ಡಾಲರ್ ಚಾರ್ಜ್ ಮಾಡುತ್ತೇವೆ. ನೀವು ಎಷ್ಟು ಜನರನ್ನು ಕರೆದುಕೊಂಡು ಬಂದಿದ್ದೀರಿ ಎಂದು ನಾವು ಲೆಕ್ಕ ಇಟ್ಟಿಲ್ಲ.
ಆದರೆ ನೀವು ಈಗಾಗಲೇ ಒಬ್ಬರಾದ ಮೇಲೆ ಒಬ್ಬರಂತೆ ಬಹಳಷ್ಟು ಜನ ಮಕ್ಕಳನ್ನು ಕರೆದು ಕೊಂಡು ಬಂದಿದ್ದೀರಿ. ಇದು ಸರಿಯಲ್ಲ" ಎಂದರು. ಆತ ಅಧಿಕಾರಿಯೊಡನೆ ವಾದಕ್ಕಿಳಿದ. ಆಗ ಅಧಿಕಾರಿ, “ನೀವು ವಾದವನ್ನೇ ಮಾಡುವುದಾದರೆ, ನಮ್ಮಲ್ಲಿ ಸಿಸಿಟಿವಿ ಕ್ಯಾಮೆರಾ ಇದೆ. ನಾವು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ, ದಾಖಲೆ ನೀಡುತ್ತೇವೆ. ಅದರಿಂದ ನಿಮಗೇ ತೊಂದರೆ. ಸುಮ್ಮನೆ ವಾದ ಮಾಡಬೇಡಿ, ತಪ್ಪು ಒಪ್ಪಿಕೊಳ್ಳಿ. ಇನ್ನು ಮುಂದೆ ಹೀಗೆ ಮಾಡಬೇಡಿ" ಎಂದು ಹೇಳಿದಾಗ ಆತ ಒಪ್ಪಿಕೊಂಡು ಹೊರಗೆ ನಡೆದ.
ನಿಜ, ಕೆಲವು ಬ್ಯಾಂಕಿನವರು ಕ್ರೆಡಿಟ್ ಕಾರ್ಡ್ ಹೊಂದಿದವರಿಗೆ ಮಾತ್ರವಲ್ಲ, ಅವರ ಜತೆ ಇನ್ನೊಬ್ಬ ಅತಿಥಿಗೂ ಈ ಅವಕಾಶವನ್ನು ಒದಗಿಸಿಕೊಡುತ್ತಾರೆ. ಗಂಡ-ಹೆಂಡತಿ, ಒಂದೇ ಕಂಪನಿಯ ಇಬ್ಬರು ಸಹೋದ್ಯೋಗಿಗಳು ಅಥವಾ ಇಬ್ಬರು ಉದ್ಯಮಿಗಳು ಒಟ್ಟಿಗೇ ಪ್ರಯಾಣಿಸುವಾಗ ಒಬ್ಬರನ್ನು ಬಿಟ್ಟು ಇನ್ನೊ ಬ್ಬರು ಒಳಗೆ ಕುಳಿತುಕೊಳ್ಳಲಾಗುವುದಿಲ್ಲ ಎಂಬ ಕಾರಣಕ್ಕೋ, ವಿಮಾನ ನಿಲ್ದಾಣದ ಗೌಜಿನಿಂದ ದೂರ, ಸ್ವಲ್ಪ ಸಮಾಧಾನದಲ್ಲಿ ಕುಳಿತು ಊಟ-ತಿಂಡಿ ಮುಗಿಸಲೆಂದೋ, ವಿಮಾನ ಹೊರಡುವುದಕ್ಕೂ ಮೊದಲು ಮುಂದಿನ ಮೀಟಿಂಗಿಗೆ ತಯಾರಿ ನಡೆಸಲೆಂದೋ ಈ ಅವಕಾಶ ಕಲ್ಪಿಸಿಕೊಡುವುದಿದೆ.
ಅಷ್ಟಕ್ಕೂ ಈ ಲಾಂಜುಗಳು ಇರುವುದೇ ಪ್ರಯಾಣದ ಪೂರ್ವಸಿದ್ಧತೆ ಮಾಡಿಕೊಳ್ಳುವುದಕ್ಕೆ. ಆದರೆ ಇದನ್ನು ದುರ್ಬಳಕೆ ಮಾಡಿಕೊಳ್ಳುವುದು ತೀರಾ ಅಸಹ್ಯ. ಆ ಕ್ಷಣದಲ್ಲಿ ನನಗನಿಸಿದ್ದೇನೆಂದರೆ, ಆ ವ್ಯಕ್ತಿ ತನ್ನ ಮಕ್ಕಳನ್ನೇ ಕರೆದುಕೊಂಡು ಬಂದಿರಬಹುದು. ಆದರೆ ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ವನ್ನು ಆತ ಕೊಟ್ಟ ಹಾಗಾಯಿತು? ಮಕ್ಕಳು ಅಪ್ಪನಿಂದ ಏನು ಕಲಿತಂತಾಯಿತು? ಅವರು ಬೆಳೆದು ದೊಡ್ಡವರಾದ ಮೇಲೆ ಯಾವ ರೀತಿಯ ಪ್ರಜೆಗಳಾಗಬಹುದು? ನಮ್ಮಲ್ಲಿ ಇನ್ನೂ ಒಂದು ವರ್ಗದ ಜನರಿದ್ದಾರೆ.
ಅವರು ಯಾವುದೋ ಬ್ಯಾಂಕಿನಿಂದ ಕ್ರೆಡಿಟ್ ಕಾರ್ಡ್ ಪಡೆದುಕೊಂಡರು ಅಂದುಕೊಳ್ಳಿ. ಅವರು ವಿಮಾನ ಪ್ರಯಾಣ ಮಾಡುವಾಗ ಸೀದಾ ಲಾಂಜಿನ ಪ್ರವೇಶ ದ್ವಾರದ ಬಳಿ ಹೋಗಿ ತಮ್ಮ ಕಾರ್ಡನ್ನು ತೆಗೆದು ಇಡುತ್ತಾರೆ. ಅಲ್ಲಿಯ ಉದ್ಯೋಗಿ “ಈ ಕಾರ್ಡ್ ನಡೆಯುವುದಿಲ್ಲ, ಲಾಂಜ್ ಒಳಗೆ ಹೋಗಬಹುದು, ಆದರೆ ಹತ್ತೋ ಇಪ್ಪತ್ತೋ ಡಾಲರ್ ಕೊಡಬೇಕಾಗುತ್ತದೆ" ಎಂದು ಹೇಳಿದಾಗ ಅವರೊಂದಿಗೆ ವಾದಕ್ಕಿಳಿಯುತ್ತಾರೆ.
“ಕ್ರೆಡಿಟ್ ಕಾರ್ಡ್ ಇದ್ದವರಿಗೆ ಲಾಂಜಿನಲ್ಲಿ ಉಚಿತ ಪ್ರವೇಶ ಇರುತ್ತದೆ, ನೀವು ಯಾಕೆ ನಮ್ಮನ್ನು ಒಳಗೆ ಬಿಡುವುದಿಲ್ಲ? ನಮಗೆ ಬ್ಯಾಂಕಿನವರು ಕ್ರೆಡಿಟ್ ಕಾರ್ಡ್ ಕೊಡುವಾಗ ಲಾಂಜ್ ಆಕ್ಸೆಸ್ ಇದೆ ಎಂದು ಹೇಳಿದ್ದಾರೆ" ಎಂದು ವಾದ ಮಾಡುತ್ತಿರುತ್ತಾರೆ.
ನಾನು ಕಂಡಂತೆ, ಈ ರೀತಿ ವಾದ ಮಾಡುವವರಲ್ಲಿ ನೂರಕ್ಕೆ ತೊಂಬತ್ತರಷ್ಟು ಭಾರತೀಯರೇ ಇರುತ್ತಾರೆ. ಅವರ ಬಳಿ ಕಾರ್ಡ್ ಇರುವುದು ನಿಜವಾದರೂ, ಲಾಂಜ್ ಪ್ರವೇಶ ನಿಷೇಧಕ್ಕೆ ಪ್ರಮುಖ ವಾಗಿ ಎರಡು ಕಾರಣಗಳಿರುತ್ತವೆ. ಪಡೆದದ್ದು ಕ್ರೆಡಿಟ್ ಕಾರ್ಡೇ ಆದರೂ ಅದರ ಎರಡು ವಿಧ ವಿರುತ್ತದೆ. ಒಂದು, ಸೀದಾ ಸಾದಾ ಕ್ರೆಡಿಟ್ ಕಾರ್ಡ್. ಇನ್ನೊಂದು ಲಾಂಜಿಗೆ ಪ್ರವೇಶ ಇರುವ ಕ್ರೆಡಿಟ್ ಕಾರ್ಡ್. ಲಾಂಜ್ ಆಕ್ಸೆಸ್ ಇರುವ ಕ್ರೆಡಿಟ್ ಕಾರ್ಡಿಗೆ ವಾರ್ಷಿಕ ಶುಲ್ಕ ಸ್ವಲ್ಪ ಹೆಚ್ಚಾಗಿರುತ್ತದೆ.
ಕೆಲವೊಮ್ಮೆ ಅದರೊಂದಿಗೆ ಹೆಲ್ತ್ ಇನ್ಷೂರೆನ್ಸ್, ಅಪಘಾತ ವಿಮೆ ಇತ್ಯಾದಿ ಇತರೆಗಳೂ ಸೇರಿ ಕೊಂಡಿರುತ್ತವೆ. ಎರಡನೆಯದ್ದಕ್ಕೆ ವಾರ್ಷಿಕ ಶುಲ್ಕ ಹೆಚ್ಚಾಗಿರುತ್ತದೆ. ನಾವು ಯಾವುದನ್ನು ಆರಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಲಾಂಜ್ ಪ್ರವೇಶ ನಿರ್ಧಾರವಾಗುತ್ತದೆ. ಎರಡನೆಯ ಕಾರಣ, ಎಲ್ಲ ಕ್ರೆಡಿಟ್ ಕಾರ್ಡುಗಳೂ ಎಲ್ಲಾ ಲಾಂಜುಗಳಲ್ಲೂ ನಡೆಯುವುದಿಲ್ಲ.
ಕೆಲವು ನಿರ್ದಿಷ್ಟ ಲಾಂಜುಗಳಿಗೆ ಸೀಮಿತವಾಗಿರುತ್ತವೆ. ಒಂದೇ ವಿಮಾನ ನಿಲ್ದಾಣದಲ್ಲಿ ನಾಲ್ಕೋ- ಐದೋ ಲಾಂಜ್ ಇರುವುದನ್ನು ನಾವು ನೋಡುತ್ತೇವೆ. ಒಂದೇ ಕಾರ್ಡ್ ಹಿಡಿದುಕೊಂಡು ಎಲ್ಲಾ ಲಾಂಜುಗಳ ಒಳಗೆ ಹೋಗಲು ಸಾಧ್ಯವಿಲ್ಲ. ನಾವು ಯಾವ ಕಾರ್ಡ್ ಹೊಂದಿದ್ದೇವೆ ಎನ್ನುವುದರ ಮೇಲೆ ಪ್ರವೇಶ ಸಾಧ್ಯವೋ ಇಲ್ಲವೋ ಎಂಬುದು ನಿರ್ಧಾರವಾಗುತ್ತದೆ.
ಕೆಲವು ಲಾಂಜುಗಳಲ್ಲಿ ಯಾವ ಕಾರ್ಡುಗಳೂ ನಡೆಯುವುದಿಲ್ಲ. ಉದಾಹರಣೆಗೆ, ಏರ್‌ಲೈನ್ಸ್ ಲಾಂಜುಗಳು. ಆಯಾ ಸಂಸ್ಥೆಗೆ ಸಂಬಂಧಿಸಿದ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಖರೀದಿಸಿ ಪ್ರಯಾಣಿಸುವವರಿಗೆ ಮಾತ್ರ ಒಳಗೆ ಪ್ರವೇಶವಿರುತ್ತದೆ. ಆದ್ದರಿಂದ ಒಮ್ಮೆ ಲಾಂಜಿನ ಪ್ರವೇಶ ದ್ವಾರ ದಲ್ಲಿರುವವರು ಕಾರ್ಡು ನಡೆಯುವುದಿಲ್ಲ ಎಂದರೆ, ವ್ಯಥಾ ತರ್ಕದಿಂದ ಯಾವ ಪ್ರಯೋಜನ ವೂ ಆಗುವುದಿಲ್ಲ.
ಇಂಥವರಿಗೆ ಅವರ ಸಮಯದ ಜತೆಗೆ, ಸರತಿಯಲ್ಲಿ ಕಾಯುತ್ತಿರುವವರ ಸಮಯ ಹಾಳು ಮಾಡಿದ್ದಷ್ಟೇ ಲಾಭ! ಇನ್ನು, ಲಾಂಜಿನ ಒಳಗೆ ಬಂದರೆ ಬಹುತೇಕ ಎಲ್ಲಾ ಲಾಂಜುಗಳಲ್ಲಿಯೂ ಊಟ, ತಿಂಡಿ, ಜ್ಯೂಸ್, ಸಲಾಡ್, ಸ್ವೀಟ್ ಎಲ್ಲವೂ ಇರುತ್ತದೆ. ಬಹುತೇಕ ಲಾಂಜುಗಳಲ್ಲಿ ಮದ್ಯ ವನ್ನೂ ಸರಬರಾಜು ಮಾಡುತ್ತಾರೆ. ಮೊದಲೆಲ್ಲ ಕೆಲವು ಲಾಂಜುಗಳಲ್ಲಿ ಮದ್ಯ ಪೂರೈಸುವುದಕ್ಕೆ ಮಿತಿ ಇರಲಿಲ್ಲ.
ತೃಷೆ ತೀರುವವರೆಗೂ ಕುಡಿಯಬಹುದಾಗಿತ್ತು. ಇತ್ತೀಚೆಗೆ ಬಹುತೇಕ ಲಾಂಜುಗಳಲ್ಲಿ ಇದಕ್ಕೆ ಕಡಿವಾಣ ಹಾಕಿ, ಒಂದು ಮಿತಿಯಲ್ಲಿಯೇ ಸರಬರಾಜು ಮಾಡುತ್ತಾರೆ. ಪುಕ್ಕಟೆ ಸಿಕ್ಕಿದೆ ಎಂದು ಅತಿಯಾಗಿ ಕುಡಿದು ವಿಮಾನ ತಪ್ಪಿಸಿಕೊಂಡಿದ್ದವರೂ ಇದ್ದಾರೆ ಎನ್ನುವುದು ಕಡಿವಾಣಕ್ಕೆ ಒಂದು ಕಾರಣವಾಗಿರಬಹುದೇ? ಗೊತ್ತಿಲ್ಲ.
ಸಾಮಾನ್ಯವಾಗಿ ಎಲ್ಲ ಲಾಂಜುಗಳಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಾಯಂಕಾಲ, ರಾತ್ರಿ, ಹೀಗೆ ಕಾಲಕ್ಕೆ ತಕ್ಕಂತೆ ಆಹಾರವನ್ನೂ ಬದಲಾಯಿಸುತ್ತಿರುತ್ತಾರೆ. ಅವನ್ನೆಲ್ಲ ಒಂದುಕಡೆ ನೀಟಾಗಿ ಹೊಂದಿಸಿ ಇಟ್ಟಿರುತ್ತಾರೆ. ನಮ್ಮ ಮನೆಯ ಕಾರ್ಯಗಳಲ್ಲಿ ಹೊಂದಿಸಿ ಇಡುವಂತೆ (ಬಫೆ) ಲಾಂಜಿನಲ್ಲೂ ಇಟ್ಟಿರುತ್ತಾರೆ. ಅಲ್ಲಿ ಎಷ್ಟು ಬೇಕಾದರೂ ತಿನ್ನಬಹುದು, ಯಾರೂ ಏನೂ ಕೇಳುವುದಿಲ್ಲ, ಹೇಳುವು ದಿಲ್ಲ.
ಹಾಗೆಯೇ ಕುಳಿತು ತಿನ್ನುವುದಕ್ಕೆ ಒಂದು ನಿರ್ದಿಷ್ಟವಾದ ಸ್ಥಳವನ್ನೂ, ನಂತರ ಆರಾಮದಿಂದ ಕುಳಿತುಕೊಳ್ಳುವುದಕ್ಕೋ, ಕೆಲಸ ಮಾಡುವುದಕ್ಕೋ, ಮಲಗುವುದಕ್ಕೋ ಒಂದು ಜಾಗವನ್ನು ನಿಗದಿ ಮಾಡಿರುತ್ತಾರೆ. ಲೆಕ್ಕದಂತೆ ಊಟ-ತಿಂಡಿ ಬಡಿಸಿಕೊಂಡು, ಅದನ್ನು ತಿನ್ನಲು ನಿಗದಿಪಡಿಸಿದ ಜಾಗ ದಲ್ಲಿ ಕುಳಿತು ತಿನ್ನಬೇಕು. ಅದು ನಿಯಮ ಅನ್ನುವುದಕ್ಕಿಂತಲೂ, ಅದೊಂದು ಶಿಸ್ತು.
ಆದರೆ ಇತ್ತೀಚೆಗೆ ಲಾಂಜಿನಲ್ಲಿ ಊಟ ಇಟ್ಟ ಸ್ಥಳದ ನಿಂತು ತಿನ್ನುವವರ ಸಂಖ್ಯೆ ಹೆಚ್ಚುತ್ತಿದೆ. ಅದೂ ಹೇಗೆ ಎಂದರೆ, ಪ್ಲೇಟಿನಲ್ಲಿ ಊಟ ಬಡಿಸಿಕೊಳ್ಳಲೂ ಪುರುಸೊತ್ತಿಲ್ಲ, ಅ ತಿನ್ನಲು ಆರಂಭಿಸುತ್ತಾರೆ. ಅನ್ನ- ಪದಾರ್ಥದ ಬಳಿ ತಲುಪುವುದಕ್ಕೂ ಮುಂಚೆ, ಮೊದಲು ತಾಟಿನಲ್ಲಿ ಹಾಕಿಕೊಂಡಿದ್ದ ಸಲಾಡ್ ಖಾಲಿ ಆಗಬೇಕು ಎಂದು ಆಣೆ ಮಾಡಿದವರಂತೆ ತಿನ್ನುತ್ತಲೇ ಮುಂದೆ ನಡೆಯುತ್ತಾರೆ.
ಅಂಥವರನ್ನು ನೋಡಿದಾಗ ಮಾತ್ರ ತೀರಾ ಅಸಹ್ಯ ಎನಿಸುತ್ತದೆ ಏಕೆಂದರೆ, ತಿನ್ನುವಾಗ ಎದರೂ ಅವರು ತಿನ್ನುತ್ತಿದ್ದ ತಟ್ಟೆಯಿಂದ ಬಫೆಯಲ್ಲಿಟ್ಟಿರುವ ಆಹಾರ ಪದಾರ್ಥದಲ್ಲಿ ಬಿದ್ದರೆ ಏನು ಮಾಡುವುದು? ಅಂಥವರಿಗೆ ಕುಳಿತುಕೊಳ್ಳಲು ಏನಾದರೂ ತೊಂದರೆ ಇರಬಹುದು, ಆರೋಗ್ಯದ ಸಮಸ್ಯೆ ಇದ್ದಿರಬಹುದು, ಸೊಂಟದ ಮೂಳೆ ಬಗ್ಗುವುದಿಲ್ಲ ಎಂದೇ ಇಟ್ಟುಕೊಳ್ಳೋಣ. ಅಂಥವರು ನಿಂತೇ ತಿನ್ನಲಿ, ಅಭ್ಯಂತರವಿಲ್ಲ. ಆದರೆ ಸ್ವಲ್ಪ ದೂರ ನಿಂತು ತಿನ್ನಬೇಕು. ಆಹಾರವನ್ನು ಬಡಿಸಿ ಕೊಳ್ಳುವಾಗ ತಿನ್ನುವುದು ಬಿಡಿ, ಯಾರೊಂದಿಗೂ ಮಾತನ್ನೂ ಆಡಬಾರದು.
ಫೋನಿನಲ್ಲಿಯೂ ಮಾತಾಡಬಾರದು. ಏಕೆಂದರೆ ಅಂಥ ಸಂದರ್ಭದಲ್ಲಿ, ನೂರಾರು ಜನರು ಊಟ ಮಾಡುವ ಆಹಾರ ಪದಾರ್ಥದಲ್ಲಿ ನಮ್ಮ ಉಗುಳು ಬೀಳುವ ಸಾಧ್ಯತೆ ಇರುತ್ತದೆ. ಶುಚಿತ್ವ ಅಥವಾ ನೂರಾರು ಜನರ ಆರೋಗ್ಯದ ಬಗ್ಗೆ ಕಾಳಜಿ ಇರುವ ಯಾವ ವ್ಯಕ್ತಿಯೂ ಆಹಾರ ಬಡಿಸಿಕೊಂಡು ಅಲ್ಲಿಯೇ ನಿಂತು ತಿನ್ನುವುದಿಲ್ಲ. ಈ ಮಾತು ಕೇವಲ ವಿಮಾನ ನಿಲ್ದಾಣದ ಒಳಗಿರುವ ಲಾಂಜಿಗಷ್ಟೇ ಸೀಮಿತವಲ್ಲ, ನಮ್ಮ ಮನೆಯ ಕಾರ್ಯಗಳಲ್ಲಿ ಅಥವಾ ಇನ್ಯಾವುದೇ ಸಾರ್ವಜನಿಕ ಸಭೆಯ ಬಫೆ ಊಟಕ್ಕೆ ಬಂದು, ಊಟ ಇಟ್ಟಲ್ಲಿಯೇ ನಿಂತು ತಿನ್ನುವವರಿಗೂ ಅನ್ವಯಿಸುತ್ತದೆ.
ಲಾಂಜಿನಲ್ಲಿ ಕೆಲವರು ಅಷ್ಟಕ್ಕೇ ನಿಲ್ಲಿಸುವುದಿಲ್ಲ. ಅಲ್ಲಿ ನೀರಿನ ಬಾಟಲ್, ಜ್ಯೂಸಿನ ಟೆಟ್ರಾ ಪ್ಯಾಕ್, ಪೆಪ್ಸಿ, ಕೋಲಾ ಇತ್ಯಾದಿಗಳು ಯಥೇಚ್ಛವಾಗಿರುತ್ತವೆ. ಅದೆಲ್ಲ ಅಲ್ಲಿಯೇ ಕುಡಿಯುವುದಕ್ಕೆ ಇರುವಂಥದ್ದು. ಕೆಲವರು ಅದನ್ನೂ ತಮ್ಮ ಬ್ಯಾಗಿನೊಳಗೆ ತುಂಬಿಸಿಕೊಳ್ಳುತ್ತಾರೆ. ಬೆಂಗಳೂರಿನ ಒಂದು ಪ್ರತಿಷ್ಠಿತ ಲಾಂಜಿನಲ್ಲಿ ಏನಿಲ್ಲವೆಂದರೂ ಹತ್ತು ಕೋಕೋ ಕೋಲಾ ಕ್ಯಾನನ್ನು ಚೀಲ ದೊಳಗೆ ತುಂಬಿಕೊಂಡ ವ್ಯಕ್ತಿಯನ್ನು ನಾನು ಕಣ್ಣಾರೆ ನೋಡಿದ್ದೇನೆ.
ನಿಜವಾಗಿಯೂ ಇಂಥವರು ಗಲೀಜು ಜನವೇ ಹೊರತು ಲಾಂಜಿಗೆ ಯೋಗ್ಯರಾದ ಜನ ಅಲ್ಲ. ಹಾಗಾದರೆ ಇದಕ್ಕೆ ಯಾರು ಕಡಿವಾಣ ಹಾಕಬೇಕು? ಲಾಂಜಿನವರಂತೂ ಸಾಧ್ಯವಾದಷ್ಟು ಹೇಳು ತ್ತಾರೆ. ಆದರೆ ಅವರಿಗೂ ಒಂದು ಮಿತಿಯಿದೆ. ಕ್ರೆಡಿಟ್ ಕಾರ್ಡ್ ಕೊಡುವ ಬ್ಯಾಂಕುಗಳು ಪರಿಶೀಲಿಸ ಬೇಕೇ? ಆ ಸಾಧ್ಯತೆಗಳೂ ಕಡಿಮೆಯೇ. ಬ್ಯಾಂಕಿಗೆ ಬರುವ ಗ್ರಾಹಕ ಲಾಂಜಿನಲ್ಲಿ ಹೇಗೆ ವರ್ತಿಸುತ್ತಾನೆ ಎಂದು ಅವರಿಗಾದರೂ ಹೇಗೆ ತಿಳಿಯಬೇಕು? ಲಾಂಜಿಗೆ ಹೋಗುವ ಜನರೇ ಇದನ್ನು ತಿಳಿದುಕೊಳ್ಳ ಬೇಕು ಅಷ್ಟೇ.
1939ರಲ್ಲಿ ಅಮೆರಿಕನ್ ಏರ್‌ಲೈನ್ಸ್ ಅಧ್ಯಕ್ಷ ಸಿ.ಆರ್.ಸ್ಮಿಥ್ ಲಾಂಜ್ ಸಂಸ್ಕೃತಿಗೆ ಅಡಿಗಲ್ಲು ಹಾಕಿ ದನಂತೆ. ನ್ಯೂಯಾರ್ಕ್ ನಗರದ ಲಾಗಾರ್ಡಿಯಾ ಏರ್‌ಪೋರ್ಟ್‌ನಲ್ಲಿ ಅಂದು ‘ಅಡ್ಮೆ ರಲ್ ಲಾಂಜ್’ ಆರಂಭಗೊಂಡಿತ್ತು. ಅದರ ಮೂಲ ಉದ್ದೇಶ, ತಮ್ಮ ಏರ್‌ಲೈನ್ಸ್‌ನಲ್ಲಿ ಪ್ರಯಾಣಿಸುವ ಗಣ್ಯರು ಹಾರಾಟಕ್ಕಿಂತ ಮೊದಲು ಕುಳಿತುಕೊಳ್ಳಲು, ರಿಲ್ಯಾಕ್ಸ್ ಆಗಲು ಅಥವಾ ಸಿದ್ಧತೆ ಮಾಡಿಕೊಳ್ಳಲು ವ್ಯವಸ್ಥೆ ಮಾಡಿಕೊಡುವುದಾಗಿತ್ತು.
ಕ್ರಮೇಣ ಇದರ ರೂಪ ಬದಲಾಯಿತು. ಸ್ಮಿಥ್ ಈಗೇನಾದರೂ ಲಾಂಜಿಗೆ ಬಂದು ನೋಡಿದರೆ, ಅಲ್ಲಿಯೇ ಹಗ್ಗ ಹಾಕಿಕೊಳ್ಳುವಂತಾಗಿದೆ. ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗಬೇಕು. ಆದರೆ ಆ ಬದಲಾವಣೆ ಒಳ್ಳೆಯದಾಗಿರಬೇಕು. ಅದಿಲ್ಲವಾದರೆ ಮುಂದೊಂದು ದಿನ ಇಂಥವರನ್ನು ಸಹಿಸಿ ಕೊಳ್ಳಲಾಗದೇ ಲಾಂಜುಗಳನ್ನೇ ಮುಚ್ಚುವ ಪರಿಸ್ಥಿತಿ ಬರುತ್ತದೆ.