ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ದಯಾಮಯಿ ದೇವರೇ, ಈ ದೇಶಕ್ಕೆ ದಯಮಾಡಿ ಆನೆ ಕೊಡು...

ಒಂದು ಕಾಲದಲ್ಲಿ ಸಾವಿರಕ್ಕೂ ಹೆಚ್ಚು ಆನೆಯನ್ನು ಹೊಂದಿದ್ದ ವಿಯೆಟ್ನಾಂ ನಲ್ಲಿ ಇಂದು ಕೇವಲ ಒಂದು ನೂರು ಆನೆ ಮಾತ್ರ ಉಳಿದುಕೊಂಡಿವೆ. ಥಾಯ್ಲೆಂಡ್‌ನಲ್ಲಿ ಆನೆಗಳ ಸಂಖ್ಯೆ ಇಳಿದಿದೆ, ಕಾಂಬೋ ಡಿಯಾ, ಮ್ಯಾನ್ಮಾರ್‌ನಂಥ ದಟ್ಟ ಅಡವಿ ಇರುವ ದೇಶಗಳಲ್ಲೂ ಆನೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಲಾವೋಸ್ ದೇಶದ ಕಥೆಯಂತೂ ಇನ್ನೂ ಚಿಂತಾಜನಕ ವಾಗಿದೆ.

ದಯಾಮಯಿ ದೇವರೇ, ಈ ದೇಶಕ್ಕೆ ದಯಮಾಡಿ ಆನೆ ಕೊಡು...

-

ವಿದೇಶವಾಸಿ

dhyapaa@gmail.com

ಲಾವೋಸ್ ಇಂದಿಗೂ ತನ್ನ ಸಂಪ್ರದಾಯ ಉಳಿಸಿಕೊಂಡ ನಾಡು. ಆ ಕಾರಣದಿಂದ ಆನೆ ಗಳು ಹೆಚ್ಚು ಮಹತ್ವ ಪಡೆಯುತ್ತವೆ. ಭಾರತದಲ್ಲಿ ಗೋವಿಗೆ ಇರುವ ಸ್ಥಾನ ಅಲ್ಲಿ ಆನೆಗಿದೆ. ಆ ದೇಶದಲ್ಲಿ 2-3 ರಾಷ್ಟ್ರೀಯ ಹೆದ್ದಾರಿಯನ್ನು ಬಿಟ್ಟರೆ, ರಸ್ತೆಯ ಸುವ್ಯವಸ್ಥೆಯೂ ಇಲ್ಲ. ಬಹುತೇಕ ರಸ್ತೆಗಳು ಕಿರಿದಾದದ್ದು, ಇಕ್ಕಟ್ಟಾದದ್ದು. ವಿಶಾಲವಾದ ರಸ್ತೆಗಳನ್ನು ಮಾಡುವ ಭೂಪ್ರದೇಶವೂ ಅದಲ್ಲ. ಏಕೆಂದರೆ ಬಹುತೇಕ ಭೂಮಿ ಕಾಡು, ಗುಡ್ಡಗಳಿಂದಲೇ ತುಂಬಿ ಕೊಂಡಿದೆ. ಮರವನ್ನೋ, ಗುಡ್ಡ ವನ್ನೋ ಕಡಿದು ರಸ್ತೆ ನಿರ್ಮಿಸುವುದು ತುಂಬಾ ಕಷ್ಟದ ಕೆಲಸವಂತೂ ಹೌದು. ಆದ್ದರಿಂದ ಅನಿವಾರ್ಯಕ್ಕೆ ಎಷ್ಟು ಬೇಕೋ ಅಷ್ಟು ರಸ್ತೆಯನ್ನು ಆ ದೇಶ ನಿರ್ಮಿಸಿಕೊಂಡಿದೆ.

ನೀವು ದೇವರ ಸಮ್ಮುಖದಲ್ಲಿ ನಿಂತು ಮತ್ತೇನನ್ನೂ ಬೇಡಿಕೊಳ್ಳಬೇಡಿ, ದೇವರೇ ನನಗೆ ‘ಆನೆ’ ಕೊಡು ಎಂದು ಕೇಳಿಕೊಳ್ಳಿ". ಇದು ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವ ಮಾತು. ಇಲ್ಲಿ ಆನೆ ಎಂದರೆ ಗಜ ಅಲ್ಲ, ‘ಆರೋಗ್ಯ’ ಮತ್ತು ‘ನೆಮ್ಮದಿ’. ಆರೋಗ್ಯದಿಂದ ‘ಆ’, ನೆಮ್ಮದಿಯಿಂದ ‘ನೆ’ ಆರಿಸಿಕೊಂಡು ಜೋಡಿಸಿ ರಚಿಸಿದ ‘ಆನೆ’.

ಮನುಷ್ಯನಿಗಾದರೆ ಇದು ಸರಿ, ಆರೋಗ್ಯ ಮತ್ತು ನೆಮ್ಮದಿಗಿಂತ ಹೆಚ್ಚೇನು ಬೇಕು? ಮನುಷ್ಯನಾಗಿ ದೇವರಲ್ಲಿ ಆನೆ ಬೇಡುವುದು ಒಂದು ಕಡೆಯಾದರೆ, ದೇಶವಾಗಿ ಆನೆ ಬೇಡುವುದು ಮತ್ತೊಂದು ಕಡೆ. ಅದರಲ್ಲೂ ಕಾಂಬೋಡಿಯಾ, ಲಾವೋಸ್, ವಿಯೆಟ್ನಾಂ, ಥಾಯ್ಲೆಂಡ್‌ನಂಥ ದೇಶಗಳು ನಿಜವಾ ಗಿಯೂ ದೇವರಲ್ಲಿ ‘ಆನೆ ಕೊಡು’ ಎಂದೂ, ಮನುಷ್ಯನಲ್ಲಿ ‘ಆನೆಯನ್ನು ಉಳಿಸಿಕೊಡು’ ಎಂದೂ ಬೇಡಿಕೊಳ್ಳುವಂತಾಗಿದೆ.

ವರದಿಯ ಪ್ರಕಾರ, ಒಂದು ಕಾಲದಲ್ಲಿ ಸಾವಿರಕ್ಕೂ ಹೆಚ್ಚು ಆನೆಯನ್ನು ಹೊಂದಿದ್ದ ವಿಯೆಟ್ನಾಂ ನಲ್ಲಿ ಇಂದು ಕೇವಲ ಒಂದು ನೂರು ಆನೆ ಮಾತ್ರ ಉಳಿದುಕೊಂಡಿವೆ. ಥಾಯ್ಲೆಂಡ್‌ನಲ್ಲಿ ಆನೆಗಳ ಸಂಖ್ಯೆ ಇಳಿದಿದೆ, ಕಾಂಬೋಡಿಯಾ, ಮ್ಯಾನ್ಮಾರ್‌ನಂಥ ದಟ್ಟ ಅಡವಿ ಇರುವ ದೇಶಗಳಲ್ಲೂ ಆನೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಲಾವೋಸ್ ದೇಶದ ಕಥೆಯಂತೂ ಇನ್ನೂ ಚಿಂತಾಜನಕ ವಾಗಿದೆ.

ಒಂದು ಕಾಲದಲ್ಲಿ ಲಾವೋಸ್ ದೇಶವನ್ನು ’ Land of Million Elephants (ಹತ್ತು ಲಕ್ಷ ಆನೆಗಳ ಭೂಮಿ) ಎಂದು ಕರೆಯುತ್ತಿದ್ದರು. ಆ ಕಾಲದಲ್ಲಿ ಲಾವೋಸ್‌ನಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಆನೆ ಗಳಿದ್ದವಂತೆ. ಈಗ ಆ ಸಂಖ್ಯೆ ಒಂದು ಸಾವಿರಕ್ಕಿಂತಲೂ ಕೆಳಗೆ ಇಳಿದಿದೆ. ಹಾಗೆ ನೋಡಲು ಹೋದರೆ ಈಗ ಭೂಮಿಯ ಮೇಲೆ ಯಾವ ದೇಶದಲ್ಲಿಯೂ ಹತ್ತು ಲಕ್ಷ ಆನೆಗಳಿಲ್ಲ.

ಇದನ್ನೂ ಓದಿ: Kiran Upadhyay Column: ಬಾಳಬುತ್ತಿ ಕಟ್ಟಿಕೊಡುವ ಗುರುವಿಗೊಂದು ನಮನ

ಇಂದು ಅತಿ ಹೆಚ್ಚು ಆನೆಗಳನ್ನು ಹೊಂದಿದ ದೇಶವೆಂದರೆ ಆಫ್ರಿಕಾ ಖಂಡದ ಬೋಟ್ಸ್‌ವಾನಾ. ನಾಲ್ಕು ವರ್ಷದ ಹಿಂದಿನ ಗಣತಿಯ ಪ್ರಕಾರ, ಆ ದೇಶದಲ್ಲಿ ಒಂದು ಲಕ್ಷ ಮೂವತ್ತು ಸಾವಿರ ಆನೆಗಳಿವೆಯಂತೆ. ನಂತರದ ಸ್ಥಾನದಲ್ಲಿ ಒಂದು ಲಕ್ಷ ಆನೆಗಳನ್ನು ಹೊಂದಿರುವ ಜಿಂಬಾಬ್ವೆ ನಿಲ್ಲುತ್ತದೆ. ನಾಲ್ಕು ವರ್ಷದ ಹಿಂದಿನ ಗಣತಿಯಂತೆ, ಹದಿನೇಳು ಸಾವಿರ ಆನೆಗಳಿರುವ ಭಾರತ ಎಂಟನೆಯ ಸ್ಥಾನದಲ್ಲಿದೆ. ಅದರ ನಂತರ ಭಾರತದಲ್ಲಿ ಗಣತಿ ನಡೆದಂತಿಲ್ಲ.

ಇಲ್ಲಿ ಜನಗಣತಿಗೇ ಗತಿಯಿಲ್ಲ, ಇನ್ನು ಗಜಗಣತಿ ಯಾರಿಗೆ ಬೇಕು? ಇರಲಿ, ಇತ್ತೀಚಿಗೆ ಲಾವೋಸ್ ದೇಶಕ್ಕೆ ಹೋಗುವಾಗಲೇ ಅಲ್ಲಿರುವ ಆನೆಗಳನ್ನು ನೋಡಬೇಕು, ಅವುಗಳ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕೆಂಬ ಕುತೂಹಲವಿತ್ತು. ಆಗಲೇ ಹೇಳಿದಂತೆ, ಹತ್ತು ಲಕ್ಷ ಆನೆಗಳ ನೆಲ ಇಂದು ಆನೆಗಳಿಲ್ಲದೆ ಬರಡಾಗುತ್ತಿದೆ ಅಂದರೆ ನಂಬಲು ಕಷ್ಟವಾಗಿತ್ತು.

ಕಾರಣ, ಲಾವೋಸ್‌ನ ಅರ್ಧದಷ್ಟು ಭೂಭಾಗ ಅರಣ್ಯ ಪ್ರದೇಶ. ದಟ್ಟವಾದ ಅಡವಿಗಳಿದ್ದಲ್ಲಿ ಆನೆಗಳು ಇರಲೇಬೇಕು. ಅದೂ ಅಲ್ಲದೆ ಲಾವೋಸ್‌ನ ಅರಣ್ಯದಲ್ಲಿ ಆನೆಗಳನ್ನು ಬೇಟೆಯಾಡಿ ಕೊಲ್ಲುವಂಥ, ತಿನ್ನುವಂಥ ಯಾವುದೇ ಪ್ರಾಣಿಗಳೂ ಸದ್ಯಕ್ಕಂತೂ ಇಲ್ಲ. ಒಂದು ವರದಿಯ ಪ್ರಕಾರ ಲಾವೋಸ್‌ನ ಪ್ರಾಣಿ ಸಂಗ್ರಹಾಲಯದಲ್ಲಿ ಬಿಟ್ಟರೆ, ಅಡವಿಯಲ್ಲಿ ಒಂದೇ ಒಂದು ಹುಲಿಯೂ ಇಲ್ಲ.

2013ರಲ್ಲಿಯೇ ಲಾವೋಸ್ ನ ಅಡವಿಯಲ್ಲಿ ಕೊನೆಯ ಹುಲಿ ಕೊನೆಯುಸಿರೆಳೆಯಿತು ಎಂಬ ವರದಿಯಿದೆ. ಹಾಗೆಯೇ ಸಿಂಹವನ್ನು ಕೂಡ 2019ರಲ್ಲಿ ದಕ್ಷಿಣ ಆಫ್ರಿಕಾದಿಂದ ತರಿಸಿಕೊಂಡಿದ್ದಾರೆ. ಸಿಂಹಗಳ ಸಂತತಿಯನ್ನು ಪುನಃ ಬೆಳೆಸಬೇಕು, ಲಾವೋಸ್‌ನ ಅಡವಿಯಲ್ಲಿ ಸಿಂಹಗಳನ್ನು ಮರು ಸ್ಥಾಪಿಸಬೇಕು ಎಂಬ ನಿಟ್ಟಿನಲ್ಲಿ ಐದು ಹೆಣ್ಣು, ಐದು ಗಂಡು ಸಿಂಹವನ್ನು ತಂದು ಸಂತಾನಾಭಿ ವೃದ್ಧಿಯ ಪ್ರಯತ್ನ ನಡೆಯುತ್ತಿದೆ.

ಕಳೆದ ಐದು ವರ್ಷದಲ್ಲಿ ಅದು ಎಷ್ಟರಮಟ್ಟಿಗೆ ಫಲಕಾರಿಯಾಗಿದೆಯೋ ಗೊತ್ತಿಲ್ಲ. ಒಂದು ವೇಳೆ ಅವು ಇದ್ದಿದ್ದರೂ ಅವು ಆನೆಗಳ ತಂಟೆಗೆ ಹೋಗುವುದು ಕಡಿಮೆ. ಹಾಗಾದರೆ ಆನೆಗಳ ಸಂತತಿ ಕ್ಷೀಣಿಸಲು ಕಾರಣವಾದರೂ ಏನು ಎಂದು ಹುಡುಕುತ್ತಾ ಹೊರಟರೆ ಮೋಟಾಮೋಟಿ ಕಾಣುವುದು ಅರಣ್ಯನಾಶ ಒಂದೇ.

ಹೇಳಬೇಕು ಎಂದರೆ, ಲಾವೋಸ್ ಇಂದಿಗೂ ತನ್ನ ಸಂಪ್ರದಾಯ ಉಳಿಸಿಕೊಂಡ ನಾಡು. ಆ ಕಾರಣ ದಿಂದ ಆನೆಗಳು ಹೆಚ್ಚು ಮಹತ್ವ ಪಡೆಯುತ್ತವೆ. ಭಾರತದಲ್ಲಿ ಗೋವಿಗೆ ಇರುವ ಸ್ಥಾನ ಅಲ್ಲಿ ಆನೆಗಿದೆ. ಆ ದೇಶದಲ್ಲಿ 2-3 ರಾಷ್ಟ್ರೀಯ ಹೆದ್ದಾರಿಯನ್ನು ಬಿಟ್ಟರೆ, ರಸ್ತೆಯ ಸುವ್ಯವಸ್ಥೆಯೂ ಇಲ್ಲ. ಬಹುತೇಕ ರಸ್ತೆಗಳು ಕಿರಿದಾದದ್ದು, ಇಕ್ಕಟ್ಟಾದದ್ದು.

ವಿಶಾಲವಾದ ರಸ್ತೆಗಳನ್ನು ಮಾಡುವ ಭೂಪ್ರದೇಶವೂ ಅದಲ್ಲ. ಏಕೆಂದರೆ ಬಹುತೇಕ ಭೂಮಿ ಕಾಡು, ಗುಡ್ಡಗಳಿಂದಲೇ ತುಂಬಿಕೊಂಡಿದೆ. ಮರವನ್ನೋ, ಗುಡ್ಡವನ್ನೋ ಕಡಿದು ರಸ್ತೆ ನಿರ್ಮಿಸು ವುದು ತುಂಬಾ ಕಷ್ಟದ ಕೆಲಸವಂತೂ ಹೌದು. ಆದ್ದರಿಂದ ಅನಿವಾರ್ಯಕ್ಕೆ ಎಷ್ಟು ಬೇಕೋ ಅಷ್ಟು ರಸ್ತೆಯನ್ನು ಆ ದೇಶ ನಿರ್ಮಿಸಿಕೊಂಡಿದೆ.

ಇನ್ನು, ದೊಡ್ಡ ಅಣೆಕಟ್ಟಾಗಲಿ, ವಿದ್ಯುತ್ ಉತ್ಪಾದನಾ ಘಟಕಗಳಾಗಲಿ, ಹೇಳಿಕೊಳ್ಳುವಂಥ ದೊಡ್ದ ಕಾರ್ಖಾನೆಯಾಗಲಿ ಯಾವುದೂ ಇಲ್ಲ. ಆದರೂ ಆನೆಗಳ ಸಂಖ್ಯೆ ಘಟಿಸಲು ಅರಣ್ಯ ನಾಶವೇ ಮೂಲ ಕಾರಣ ಎಂದು ಹೇಳಲಾಗುತ್ತಿದೆ. ಅಲ್ಲದೆ, ಕೆಲವು ವರ್ಷಗಳ ಹಿಂದಿನವರೆಗೂ ಅಲ್ಲಿಯೂ ಆನೆಯ ಶಿಕಾರಿ ನಡೆಯುತ್ತಿತ್ತಂತೆ.

ದಂತಚೋರರು ಯಾವ ದೇಶದಲ್ಲಿ ಇಲ್ಲ ಹೇಳಿ? ಇತ್ತೀಚಿನ ವರ್ಷಗಳಲ್ಲಿ ಆನೆಯ ಶಿಕಾರಿಗೆ ಅಲ್ಲಿಯ ಸರಕಾರ ಸಂಪೂರ್ಣ ಕಡಿವಾಣ ಹಾಕಿದೆ. ಇರಲಿ, ಲಾವೋಸ್‌ನಲ್ಲಿ ನನ್ನ ಗಜದರ್ಶನದ ಸಂಕಲ್ಪ ಈಡೇರಿತು. ನಾನು ಪೂರ್ವ ನಿರ್ಧರಿತ (ಪ್ಯಾಕೇಜ್ ಟೂರ್) ಪ್ರವಾಸ ಹೋಗುವುದು ತೀರಾ ಎಂದರೆ ತೀರಾ ಕಡಿಮೆ. ಅಲ್ಲಿಯೂ ಅಷ್ಟೇ, ಯಾವುದೂ ನಿರ್ದಿಷ್ಟವಾಗಿರಲಿಲ್ಲ, ನಿರ್ಧಾರವಾಗಿರಲಿಲ್ಲ.

ಆದರೆ ಆನೆಗಳನ್ನು ನೋಡಲಿಕ್ಕೆ ಒಬ್ಬನೇ ಹೋಗಲು ಸಾಧ್ಯವಿರಲಿಲ್ಲ. ಆ ವಿಷಯದಲ್ಲಿ ರಿಸ್ಕ್‌ ತೆಗೆದುಕೊಳ್ಳುವಂತಿರಲಿಲ್ಲ. ಆದ್ದರಿಂದ ಒಂದು ಮಿನಿ ಬಸ್‌ನಲ್ಲಿ ಒಬ್ಬ ಗೈಡ್, 10-12 ಜನರನ್ನು ಕೂಡಿಕೊಂಡು ಆನೆ ಇರುವ ಸ್ಥಳಕ್ಕೆ ಹೊರಟೆ. ನಾವು ಉಳಿದುಕೊಂಡಿದ್ದ ಲುವಾಂಗ್ ಪ್ರಬಾಂಗ್ ಪಟ್ಟಣದಿಂದ ಆನೆ ಶಿಬಿರ ತಲುಪಿ, ಸುತ್ತಲೂ ನೋಡಿದರೆ ಒಂದು ಅಪರೂಪದ ಅನುಭವ. ಅಲ್ಲಿ ಆನೆಗಳು ಆರಾಮದಲ್ಲಿ ಆಚೆ-ಈಚೆ ಓಡಾಡುತ್ತಿದ್ದವು.

ಅವುಗಳ ಕಾಲಿಗೆ ಸರಪಳಿ ಇರಲಿಲ್ಲ, ಹಗ್ಗ ಕಟ್ಟಿರಲಿಲ್ಲ, ಕಿವಿಗಳಿಗೆ ಅಂಕುಶ ನೇತು ಹಾಕಿರಲಿಲ್ಲ. ಕೆಲವು ಆನೆಗಳ ಪಕ್ಕದಲ್ಲಿ ಮಾವುತರೂ ಇರಲಿಲ್ಲ. ಅಲ್ಲಿ ಒಂದೊಂದು ಆನೆಗೂ ಒಬ್ಬರೋ-ಇಬ್ಬರೋ ಮಾವುತರು ನೇಮಕವಾಗಿದ್ದರು. ಆದರೆ ಅದು ಊಟದ ಸಮಯವಾದದ್ದರಿಂದ ಕೆಲವು ಮಾವುತರು ಬಂದ ಪ್ರವಾಸಿಗರಿಗೆ ಊಟ ಬಡಿಸುವುದರಲ್ಲಿ ನಿರತರಾಗಿದ್ದರು.

ವಿಶೇಷವೆಂದರೆ, ಯಾವುದೇ ಬಂಧ, ನಿರ್ಬಂಧವೂ ಇಲ್ಲದ ಆನೆಗಳ ಪಕ್ಕದಲ್ಲಿ ಪ್ರವಾಸಿಗರು ಸುಳಿದಾಡುತ್ತಿದ್ದರೆ ಅವು ಏನೂ ಮಾಡುತ್ತಿರಲಿಲ್ಲ. ನಾನು ಮಾವುತ ಇದ್ದ ಆನೆಯ ಬಳಿಗೆ ಹೋಗಿದ್ದೆ. ಆನೆಯ ಗಾತ್ರಕ್ಕೆ ಭಯಪಡುತ್ತಿದ್ದ ನಾನು ಲಾವೋಸ್‌ನ ಆನೆಗಳ ಬಗ್ಗೆ ಒದಿ, ಕೇಳಿದ್ದ ರಿಂದಲೋ ಏನೋ, ಅಲ್ಲಿಯ ಆನೆಯ ಪಕ್ಕದಲ್ಲಿ ನಿಂತಾಗ ಭಯವಾಗಲಿಲ್ಲ.

ಲಾವೋಸ್‌ನಲ್ಲಿ ಆನೆಗಳು ಮನುಷ್ಯರ ಜತೆ ಮನುಷ್ಯರಾಗಿಯೇ ಇರುತ್ತವೆ, ಮಾನವಸ್ನೇಹಿಯಾಗಿ ವರ್ತಿಸುತ್ತವೆ ಎಂದು ಕೇಳಿದ್ದು ನೂರಕ್ಕೆ ನೂರರಷ್ಟು ಸತ್ಯ ಎಂದೆನಿಸಿತು. ಆದರೂ ಇನ್ನಷ್ಟು ವಿಷಯಗಳನ್ನು ತಿಳಿದುಕೊಳ್ಳಲು ನನಗೆ ಮಾವುತ ಬೇಕಾಗಿತ್ತು. ನಾವು ಹೋದ ಸ್ಥಳದಲ್ಲಿ ಆನೆಗಳು ಸ್ವಚ್ಛಂದವಾಗಿ ಓಡಾಡುತ್ತಿದ್ದವು. ಅಲ್ಲಿಯೇ ನಮಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಊಟಕ್ಕೂ ಮೊದಲು ಸಮಯಾವಕಾಶ ಇದ್ದದ್ದರಿಂದ ಆನೆಯ ಬಳಿ ಹೊರಟೆ. ನಾನು ಮಾತನಾಡು ವುದಕ್ಕಿಂತ ಮುಂಚೆಯೇ ಮಾವುತ ನನ್ನ ಕೈಯಲ್ಲಿ ಕಬ್ಬು ಕೊಟ್ಟು, “ಆನೆಗೆ ತಿನ್ನಿಸಿ" ಎಂದ. ಮೊದಲು ಮಾತಾಡಿ ಆಮೇಲೆ ಆನೆಗೆ ತಿನ್ನಿಸುತ್ತೇನೆ ಎಂದರೂ ಕೇಳಲಿಲ್ಲ. ಅವನ ಮಾತಿಗೆ ಒಪ್ಪಿ ನಾನು ಆನೆಗೆ ಕಬ್ಬು, ಬಾಳೆಹಣ್ಣು ತಿನ್ನಿಸುತ್ತಿರುವಾಗ ಆತ ಆನೆಯನ್ನು ಮುಟ್ಟುವಂತೆ ಹೇಳಿದ.

ನಿಧಾನಕ್ಕೆ ಸೊಂಡಿಲು ಮುಟ್ಟಿದೆ. “ಇನ್ನೂ ಹತ್ತಿರ ಹೋಗಿ, ಕಿವಿಯ ಹಿಂಭಾಗವನ್ನು ನೆವರಿಸಿ" ಎಂದ. ಆಜ್ಞಾಧಾರಿಯಾದೆ. ಒಂದೆರಡು ನಿಮಿಷ ಅದರ ಜತೆಗಿದ್ದು ಮೈ ನೇವರಿಸಿ, ಫೋಟೋ ಕ್ಲಿಕ್ಕಿಸಿಕೊಂಡು ತಿರುಗಿ ಬಂದಾಗ ಮಾವುತನೇ ಮಾತು ಆರಂಭಿಸಿದ್ದ.

“ನಿಮ್ಮಲ್ಲಿ ಸಾಕಷ್ಟು ಪ್ರಶ್ನೆಗಳಿವೆ ಎಂಬುದು ಗೊತ್ತು. ಆದರೆ ನೀವು ಆನೆಯನ್ನು ಮುಟ್ಟಿ, ಸಂವಹನ ನಡೆಸಿ, ಸಾಮೀಪ್ಯವನ್ನು ಅನುಭವಿಸಿದ ನಂತರ ನಿಮ್ಮ ಭಾವನೆಗಳು ಬದಲಾಗುತ್ತವೆ. ಆನೆಯ ಬಗ್ಗೆ ಇರುವ ಭಯ ಸ್ವಲ್ಪಮಟ್ಟಿಗಾದರೂ ದೂರವಾಯಿತಲ್ಲ?" ಎಂದ. ಅದು ನಿಜ ಎಂದೆನಿಸಿತು.

ಎಷ್ಟೋ ಬಾರಿ ನಾವು ಭಯದಿಂದ ಎಷ್ಟೋ ವಸ್ತುಗಳ, ವಿಷಯಗಳ ಹತ್ತಿರವೇ ಹೋಗುವುದಿಲ್ಲ. ಒಮ್ಮೆ ಅದರ ಕುರಿತಾಗಿ ತಿಳಿದುಕೊಂಡರೆ ನಮ್ಮ ಭಯ ತಕ್ಕಮಟ್ಟಿಗೆ ನಿವಾರಣೆಯಾಗುತ್ತದೆ. ಮಾವುತ ಮಾತು ಮುಂದುವರಿಸಿದ್ದ, “ಮನುಷ್ಯನಿಗೆ ಬಹಳ ಹತ್ತಿರವಾದ ಪ್ರಾಣಿಗಳು ಎಂದರೆ ಹಸು, ನಾಯಿ ಮತ್ತು ಆನೆ. ಇವೆಲ್ಲವೂ ಮನುಷ್ಯನ ಮಾತನ್ನು, ಭಾವನೆಯನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲವು.

ಇದರಲ್ಲಿ ಹಸು ಮತ್ತು ನಾಯಿ ಸಾಕುಪ್ರಾಣಿಗಳು. ಅಡವಿಯಲ್ಲಿರುವ ಪ್ರಾಣಿಗಳಲ್ಲಿ ಮನುಷ್ಯನಿಗೆ ತೀರಾ ಹತ್ತಿರವಾದ, ಮನುಷ್ಯನ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಏಕೈಕ ಪ್ರಾಣಿ ಆನೆ. ಮಂಗಗಳು ಅರ್ಧ ಮನುಷ್ಯರೇ ಆಗಿರುವುದರಿಂದ ಅವುಗಳನ್ನು ಈ ಜಾತಿಗೆ ಸೇರಿಸುವುದು ಬೇಡ" ಎಂದ.

“ಇಲ್ಲಿ ಸುಮಾರು ಆನೆಗಳಿವೆ. ನನ್ನ ಕಣ್ಣಿಗೆ ಎಲ್ಲವೂ ಒಂದೇ ರೀತಿ ಕಾಣುತ್ತಿವೆ. ಪ್ರತಿ ಆನೆಗೂ ಮಾವುತರಿದ್ದಾರೆ. ಯಾವ ಆನೆಯ ಮಾವುತ ಯಾರು ಎಂದು ಹೇಗೆ ಗುರುತು ಹಿಡಿಯುತ್ತೀರಿ?" ಎಂದು ಕೇಳಿದೆ. ಅದಕ್ಕೆ, “ಇಲ್ಲಿಯ ಸರಕಾರ ಪ್ರತಿಯೊಂದು ಆನೆಗೂ ಗುರುತಿನ ಚೀಟಿ ನೀಡಿದೆ. ನೀವು ಬೇಕಾದರೆ ಅದನ್ನು ‘ಆನೆಗಳ ಪಾಸ್‌ಪೋರ್ಟ್’ ಎಂದು ಹೇಳಬಹುದು.

ಅಧಿಕಾರಿಗಳು ಬಂದಾಗ ನಾವು ಆ ಗುರುತಿನ ಚೀಟಿಯನ್ನು ತೋರಿಸಬೇಕಾಗುತ್ತದೆ. ಆದರೆ, ನಮಗೆ ನಮ್ಮ ಆನೆಯನ್ನು ಗುರುತಿಸಲು ಯಾವುದೇ ಕಷ್ಟವಿಲ್ಲ. ಅವಳಿ-ತ್ರಿವಳಿ ಮಕ್ಕಳಾದರೂ ತಾಯಿ-ತಂದೆ ಅವರನ್ನು ಹೇಗೆ ಗುರುತಿಸುತ್ತಾರೋ ಹಾಗೆ ನಮ್ಮ ಆನೆಯನ್ನು ನಾವು ಗುರುತಿಸುತ್ತೇವೆ. ಅಷ್ಟೇ ಅಲ್ಲ, ಆನೆಗಳೇ ನಮ್ಮ ಗುರುತು ಹಿಡಿಯುತ್ತವೆ.

ನಾನು ಕಳೆದ 25 ವರ್ಷದಿಂದ ಇದೇ ಆನೆಯ ಜತೆ ಇದ್ದೇನೆ. ಈ ಆನೆ ನನ್ನ ಕಣ್ಣ ಮುಂದೆಯೇ ಹುಟ್ಟಿದೆ. ನಾನೇ ಅದನ್ನು ಬೆಳೆಸಿದ್ದೇನೆ. ಈ ಆನೆಯನ್ನು ಬೆಳೆಸುವಾಗ ಒಂದು ದಿನವೂ, ಒಂದೇ ಒಂದು ಪೆಟ್ಟನ್ನೂ ಕೊಟ್ಟಿಲ್ಲ. ಅದನ್ನು ಕಟ್ಟಿಹಾಕಲಿಲ್ಲ. ಬಾಲ್ಯದಲ್ಲಿ ಅದು ಮಾಡಿದ ಪುಂಡಾಟ ಗಳನ್ನು ಸಹಿಸಿಕೊಂಡಿದ್ದೇನೆ. ಈಗ ನನಗಿಂತಲೂ ದೊಡ್ಡದಾಗಿ ಬೆಳೆದ ಈ ಆನೆ ನಾನು ಹೇಳಿ ದಂತೆಯೇ ಕೇಳುತ್ತದೆ. ನನ್ನ ಯಾವ ಮಾತನ್ನೂ ಮೀರುವುದಿಲ್ಲ. ಅದಕ್ಕೆ ನನ್ನ ನಗು, ಸಂತೋಷ ಅರ್ಥವಾಗುತ್ತದೆ. ನನ್ನ ಬೇಸರವೂ ಅರ್ಥವಾಗುತ್ತದೆ.

ನನಗೂ ಅಷ್ಟೇ, ಅದರ ಭಾವನೆ, ಭಾಷೆ ಅರ್ಥಮಾಡಿಕೊಳ್ಳಲು ಅದರ ಎರಡು ಕಣ್ಣುಗಳೇ ಸಾಕು" ಎಂದು ಆತ ಹೇಳುವಾಗ ನನ್ನ ಕಣ್ಣುಗಳು ತೇವವಾಗಿದ್ದವು. ನನಗೆ ಆಶ್ಚರ್ಯ ಎನಿಸಿದ್ದು, ತನ್ನ ಜೀವನದ 25 ವರ್ಷವನ್ನು ಈತ ಒಂದೇ ಪ್ರಾಣಿಯೊಂದಿಗೆ, ಒಂದೇ ಕೆಲಸ ಮಾಡಿಕೊಂಡು ಕಳೆದಿದ್ದಾನೆ. ಆತನನ್ನು ನೋಡಿದರೆ ಆತ ಸಂಬಳಕ್ಕಾಗಿ ಕೆಲಸ ಮಾಡುತ್ತಿದ್ದಾನೆ ಎಂದಾಗಲಿ, ಆನೆಯ ಕೆಲಸ ಮಾಡಿ ಆತ ಸುಸ್ತಾಗಿದ್ದಾನೆ ಎಂದಾಗಲಿ, ಕೆಲಸ ಬೇಸರ ತರಿಸಿದೆ ಎಂದಾಗಲಿ ಅನ್ನಿಸಲೇ ಇಲ್ಲ.

ತನ್ನ 15-20ನೇ ವರ್ಷಕ್ಕೆ ಆತ ಈ ಕೆಲಸ ಆರಂಭಿಸಿರಬಹುದು. ಹೆಚ್ಚೆಂದರೆ ಆತ ಇನ್ನೂ 25 ವರ್ಷ ಬದುಕಿರಬಹುದು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಕೇಳಿದೆ, “ಇನ್ನು ಎಷ್ಟು ವರ್ಷ ಇದೇ ಕೆಲಸ ಮಾಡಬೇಕೆಂದಿರುವೆ? ನಿನಗೆ ಬೇರೆ ಏನಾದರೂ ಮಾಡಬೇಕು, ನಿವೃತ್ತ ಜೀವನ ಸಾಗಿಸಬೇಕು ಎಂಬ ಆಸೆಯಿಲ್ಲವೇ?". ಆತ ಹೃದಯಾಳದಿಂದ ಹೇಳಿದನೋ, ತಮಾಷೆಗಾಗಿ ಹೇಳಿದನೋ, “ನಾನು ಈ ಆನೆಯನ್ನು ನನ್ನ ಹೆಂಡತಿ ಮತ್ತು ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆ.

ನಾನು ಬದುಕಿರುವವರೆಗೂ ಇದೇ ಕೆಲಸ ಮಾಡುತ್ತೇನೆ. ಇದೇ ಆನೆಯೊಂದಿಗೆ ಬದುಕುತ್ತೇನೆ. ಇದು ನನ್ನ ಮನೆಯವರಿಗೂ ತಿಳಿದಿರುವ ಸತ್ಯ". ಆತನ ಮಾತು ತಮಾಷೆ ಎಂದು ಅನ್ನಿಸಲಿಲ್ಲ. ಕೊನೆಯ ಪ್ರಶ್ನೆ ಎಂಬಂತೆ ಆತನನ್ನು ಕೇಳಿದೆ, “ನಿನಗೆ ಯಾವಾಗಲೂ ಬೇಸರವೇ ಆಗುವುದಿಲ್ಲವೇ?". ಆತ ನನ್ನ ಕಿವಿಯಲ್ಲಿ ಪಿಸುಗುಟ್ಟಿದ.

“ಆನೆಯ ಬೆನ್ನಿನ ಮೇಲೆ ಭಾರ ಹೊರಿಸಿದಾಗ, ಮನುಷ್ಯರು ಸವಾರಿ ಮಾಡುವಾಗ ಬೇಸರವಾಗುತ್ತದೆ. ಆನೆ ಎಷ್ಟೇ ಶಕ್ತಿಯುತವಾದ ಪ್ರಾಣಿಯಾದರೂ, ತನ್ನ ಬಲದಿಂದ ದೊಡ್ಡ ದೊಡ್ಡ ಮರಗಳನ್ನೇ ಬುಡಮೇಲು ಮಾಡುವ ತಾಕತ್ತಿದ್ದರೂ ಅದರ ಬೆನ್ನು ಭಾರ ಹೊರಲು ಯೋಗ್ಯವಾದದ್ದಲ್ಲ. ಅದರ ಕಾಲಿಗೆ ವಜ್ಜೆ ಕಟ್ಟಿ ಎಳೆಸಬಹುದು, ಸೊಂಡಲಿನಲ್ಲಿ ತಾಕತ್ತು ಇರುವಷ್ಟನ್ನು ಎತ್ತಿ ಸಾಗಿಸಬಹುದು. ಆದರೆ ಕತ್ತೆಯಂತೆ ಆನೆಯ ಬೆನ್ನಿನ ಮೇಲೆ ಭಾರ ಹೊರಿಸಬಾರದು" ಎಂದ.

“ಸರಿ, ಆದರೆ ಕುದುರೆ, ಒಂಟೆ ಸವಾರಿ ಮಾಡಿದಂತೆ ಆನೆ ಸವಾರಿಯನ್ನೂ ಮನುಷ್ಯರು ಅದರಲ್ಲೂ ಮಕ್ಕಳು ಇಷ್ಟಪಡುತ್ತಾರಲ್ಲ? ಅಷ್ಟಕ್ಕೂ ಆ ಗಾತ್ರದ ಪ್ರಾಣಿಯ ಮೇಲೆ 50-60 ಕಿಲೋ ತೂಗುವ ಒಬ್ಬ ಮನುಷ್ಯ ಕುಳಿತರೆ ಆನೆಗೆ ತೊಂದರೆಯಾಗಲಿಕ್ಕಿಲ್ಲ. ನಮ್ಮ ಮೈ ಮೇಲೆ ಸೊಳ್ಳೆ ಕುಳಿತಂತೆ ಆಗಬಹುದು. ಆನೆ ಸವಾರಿಯಿಂದ ಮಕ್ಕಳು ಖುಷಿಪಟ್ಟುಕೊಳ್ಳುತ್ತಾರಲ್ಲ?" ಎಂದೆ.

ಮಾವುತ ಹೇಳಿದ, “ಮನುಷ್ಯರಿಗೆ ಖುಷಿಯಾಗಬಹುದು, ಆನೆಗಲ್ಲ. ನೀವೇ ಹೇಳಿದಂತೆ ಮನುಷ್ಯ ಆನೆಯ ಮುಂದೆ ಸೊಳ್ಳೆಯಂತಿರಬಹುದು. ಮನುಷ್ಯನ ಮೈಮೇಲೆ ಸೊಳ್ಳೆ ಬಂದು ಕುಳಿತಾಗ ಮನುಷ್ಯ ಏನು ಮಾಡುತ್ತಾನೆ? ಅದು ಸೊಳ್ಳೆಯ ಮರಿಯೋ, ಸಣ್ಣದೋ ದೊಡ್ಡದೋ ಎಂದು ನೋಡುವುದಿಲ್ಲ. ಸೊಳ್ಳೆಯಾದರೂ ಕಚ್ಚುತ್ತದೆ ಎಂದುಕೊಳ್ಳಿ.

ನೊಣ ಬಂದು ಕುಳಿತಾಗಲೂ, ಕಚ್ಚದ ಇರುವೆ ಮೈಮೇಲೆ ಹತ್ತಿದಾಗಲೂ ಮನುಷ್ಯ ಮೈಕೊಡವಿ ಕೊಳ್ಳುವುದಿಲ್ಲವೇ? ಪ್ರತಿಯೊಂದು ಪ್ರಾಣಿಗೂ ಅದರದ್ದೇ ಆದ ಒಂದು ವಲಯ ಇರುತ್ತದೆ. ಯಾವುದೇ ಪ್ರಾಣಿಯಾದರೂ ಕೆಲವನ್ನು ಇಷ್ಟಪಡುತ್ತವೆ, ಕೆಲವನ್ನು ಇಲ್ಲ. ಅವುಗಳಿಗೆ ಮಾತು ಬರುವುದಿಲ್ಲ ಎಂಬ ಮಾತ್ರಕ್ಕೆ, ಅವು ಸುಮ್ಮನಿರುತ್ತವೆ ಎಂಬ ಕಾರಣಕ್ಕೆ ಅವು ಅದನ್ನು ಇಷ್ಟ ಪಡುತ್ತವೆ ಎಂದಲ್ಲ.

ನಿಜವಾಗಿಯೂ ಪ್ರೀತಿಯಿದ್ದರೆ, ನೀವು ಅದರ ಮೈ ನೇವರಿಸಿ, ಅಪ್ಪಿಕೊಳ್ಳಿ, ಅದರೊಂದಿಗೆ ಮಾತ ನಾಡಿ. ವಾರವೋ, ತಿಂಗಳೋ ಇದ್ದು ಅದರ ಭಾವನೆಯನ್ನು, ಭಾಷೆಯನ್ನು ಕಲಿತುಕೊಳ್ಳಿ. ಆಗ ನಿಮಗೆ ಒಂದು ಫೋಟೋಕ್ಕಾಗಿ ಅದರ ಮೇಲೆ ಹತ್ತಿ ಕುಳಿತುಕೊಂಡದ್ದಕ್ಕಿಂತ ಹೆಚ್ಚು ಖುಷಿಯಾ ಗುತ್ತದೆ".

ನನ್ನಲ್ಲಿ ಮಾತಿರಲಿಲ್ಲ ಅವನ ಕೈಗೆ ಸ್ವಲ್ಪ ಹಣ ಇಡಲು ಹೋದೆ. ಆತ ಎರಡು ಹೆಜ್ಜೆ ಹಿಂದೆ ಹೋಗಿ ಹೇಳಿದ, “ನಿಮಗೆ ಏನೇ ಕೊಡಬೇಕೆಂದಿದ್ದರೂ ಡಬ್ಬದಲ್ಲಿ ಹಾಕಿ. ಅದು ಆನೆಗಳ ಉಪಚಾರಕ್ಕೆ, ರಕ್ಷಣೆಗೆ ಬಳಕೆಯಾಗುತ್ತದೆ. ನನಗೆ ಹಣ ಬೇಡ" ಎಂದು ಒಂದು ಡಬ್ಬ ತೋರಿಸಿದ. ನಾನು ಡಬ್ಬದಲ್ಲಿ ಹಣ ಹಾಕುವಾಗ ಆತನದ್ದೇ ಭಾಷೆಯಲ್ಲಿ ಆನೆ ಕಡೆ ತಿರುಗಿ ಏನೋ ಹೇಳಿದ. ಅದು ಸೊಂಡಲು ಎತ್ತಿ ಅದರದ್ದೇ ಭಾಷೆಯಲ್ಲಿ ಏನೋ ಹೇಳಿತು. ನನಗೆ ಭಾಷೆ ಅರ್ಥವಾಗಲಿಲ್ಲ, ಭಾವನೆ ಅರ್ಥವಾಗಿತ್ತು. ಲಾವೋಸ್ ದೇಶದ ಜನರ ಮನವೂ ತಿಳಿದಿತ್ತು. ಮನಸ್ಸಿನಲ್ಲಿಯೇ ಕೇಳಿಕೊಂಡೆ, “ದೇವರೇ, ಲಾವೋಸ್ ದೇಶಕ್ಕೆ ಎರಡೂ ‘ಆನೆ’ ಕೊಡು".