ವಚನಾಮೃತ
ರವಿ ಹಂಜ್
ಬಿಜ್ಜರಗಿಯವರು ತಮ್ಮ ‘ಕುರುಬರ ಹೆಜ್ಜೆಗಳು’ ಎಂಬ ಕೃತಿಯಲ್ಲಿ, ಬಸವಣ್ಣ ಬ್ರಾಹ್ಮಣ ನಲ್ಲ; ತಂದೆ ಕುರುಬ ಗೌಡ, ತಾಯಿ ಬ್ರಾಹ್ಮಣ ವಿಧವೆ. ಶಿವ ಸ್ವಾಮಿ ಚನ್ನಬಸವಣ್ಣನ ತಂದೆಯಲ್ಲ; ಬಸವಣ್ಣ ವೀರಶೈವ ಧರ್ಮ ಸಂಸ್ಥಾಪಕನಲ್ಲ. (ತಮ್ಮಂತಹ) ಜಾತಿ ಮತ್ತು ಧರ್ಮ ಸಂಕರರಿಗೆ ಸಮಾಜಮಾನ್ಯ ದೊರಕಿಸಲು ಹೋರಾಡಿದವ, ಬಸವ ಎಂಬುದು ಅವನ ಕುಲನಾಮ; ಹೆಸರು ‘ಸಂಗಣ್ಣ’ ಎಂದು ಬಸವಣ್ಣ ಮತ್ತು ಚೆನ್ನಬಸವಣ್ಣರ ವಂಶ ವಾಹಿಯನ್ನು ಕೊಟ್ಟಿದ್ದಾರೆ. ಈ ಸಂಶೋಧನೆಗೆ ಯಾವ ಆಕರಗಳು ಅವರಲ್ಲಿ ವೆಯೋ ಗೊತ್ತಿಲ್ಲ.
ಅಲ್ಲದೆ ತಮ್ಮ ಸಂಶೋಧನೆಯಲ್ಲಿ, ಛತ್ರಪತಿ ಶಿವಾಜಿ ಉಣ್ಣೆ ನೇಕಾರ ಕುಲಕ್ಕೆ ಸೇರಿದವನು. ಅವನ ವಂಶಜರು ಗದಗ ಜಿಲ್ಲೆಯ ಕನ್ನಡಿಗರು; ರಾಮ- ಕೃಷ್ಣ-ಹನುಮ, ಪಾಂಡವ-ಕೌರವ ಮುಂತಾದ ಪೌರಾಣಿಕ ಪುರುಷರ ಮತ್ತು ನಂದ, ಮೌರ್ಯ ಮುಂತಾದ ಪ್ರಾಚೀನ ರಾಜಮನೆತನಗಳ ಕುಲಮೂಲ ಪಶುಪಾಲನೆಯಾಗಿತ್ತು.
ಆದಿಬಣಜಿಗ, ಜೈನ, ಕ್ಷತ್ರಿಯ, ಹಂಡೆ ಕುರುಬ (ಹಂಡೆ ವಜೀರ), ಮರಾಠ, ರೆಡ್ಡಿ, ಜಾಡ, ಒಕ್ಕಲಿಗ, ಲಾಳಗೊಂಡ, ಬೇಡ, ಈಳಿಗ ಮುಂತಾದ ಹಲವಾರು ಜಾತಿಗಳು ಪಶುಪಾಲ ಕರಿಂದಲೇ ಕವಲೊಡೆದಿವೆ. ಪಶುಗಳ ಹಟ್ಟಿ-ದಡ್ಡಿಗಳ ಮುಖಂಡನ ಹೆಸರು ಗೋತ್ರ ಗಳಾದವು ಎಂದು ಎಲ್ಲರನ್ನೂ ಕುರುಬರೆನ್ನುತ್ತಾರೆ!
ಇವರು ಯಾವ ಯಾವ ಪ್ರೇತಾತ್ಮಗಳನ್ನು ಆವಾಹಿಸಿ ಅವುಗಳಿಂದ ಈ ಸತ್ಯವನ್ನು ಬಾಯಿ ಬಿಡಿಸಿದ್ದಾರೋ ಗೊತ್ತಿಲ್ಲ! ನಿಜಕ್ಕೂ ಶ್ರೀಯುತರು ‘ವಸುಧೈವ ಕುರುಂ ಬಕಂ’ನ ಪರಿವ್ರಾ ಜಕ ಪರಿಪಾಲಕರು! ಬಹುಶಃ ಕುರುಕ್ಷೇತ್ರದ ಯುದ್ಧದಲ್ಲಿ ವೀರಮರಣವನ್ನು ಹೊಂದಿದ ಆತ್ಮವೊಂದು, ಕೌರವರು ಮತ್ತು ಪಾಂಡವರು ಕುರುಬರು. ಇವರಿಬ್ಬರೂ ಹೋರಾಡಿದ ಸ್ಥಳವೇ ಕುರುಬರ ಕ್ಷೇತ್ರ. ಹಾಗಾಗಿ ಇದು ಕುರು ಕ್ಷೇತ್ರ ಎಂದು ಬಿಜ್ಜರಗಿಯವರಿಗೆ ಹೇಳಿರಬಹುದು!!
ಇದನ್ನೂ ಓದಿ: Ravi Hunj Column: ರೇವಣಸಿದ್ಧ: ಅಂತೆಕಂತೆಯ ಸಂತೆಗೆ ಸಂಶೋಧನೆ ಎಂಬ ಸೋಗು !
ಆದರೆ ವಾಸ್ತವವಾಗಿ ಮಾನವ ವಿಕಾಸದಲ್ಲಿ ಪಶುಪಾಲನೆಯನ್ನು ದಾಟಿ ಹಿಂದಕ್ಕೆ ಹೋದರೆ ಎಲ್ಲರೂ ಬೇಟೆಗಾರರಾದ ಕಾರಣ ಬೇಡರು ಎಂದರೆ ಅದೂ ಸತ್ಯವೆನಿಸುತ್ತದೆ! ಆದಿ ಮಾನವ ಗುಹೆಗಳಲ್ಲಿ ವಾಸಿಸು ತ್ತಿದ್ದರಿಂದಲೇ ಅಲ್ಲಮನು ಗುಹೇಶ್ವರ ಎಂದಿದ್ದಾನೆ. ಹಾಗಾಗಿ ಎಲ್ಲರೂ ವೀರಶೈವರು ಎಂದರೆ ಅದೂ ಸತ್ಯವೆನಿಸುತ್ತದೆ!!
ಇದಕ್ಕೂ ಹಿಂದೆ ಹೋಗಿ ಚಾರ್ಲ್ಸ್ ಡಾರ್ವಿನ್ ವಿಕಾಸವಾದದಂತೆ ಮಂಗನಿಂದ ಮಾನವ ನೆಂದರೆ, ಅದು ಸತ್ಯವೋ ಸತ್ಯ ಎನಿಸುತ್ತದೆ! ಒಟ್ಟಾರೆ ಇಪ್ಪತ್ತೊಂದನೇ ಶತಮಾನದ ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ ಕರ್ನಾಟಕದ ಸಂಶೋಧನಾ ವಲಯ ಅತ್ಯಂತ ವೇಗವಾಗಿ ಮರಳಿ ಮಂಗಮೂಲಕ್ಕೆ ಹೋಗುತ್ತಿರುವುದು ಅತ್ಯಂತ ಸಂತಸವೋ ಸಂತಸದ ಸಂಗತಿ!
ಈ ಮೂಲಯಾನಕ್ಕೆ ಘನ ಸರಕಾರ ಪ್ರಶಸ್ತಿ ಕೊಟ್ಟಿರುವುದು ಮತ್ತು ನಾಡಿನ ಸಾಕ್ಷಿಪ್ರಜ್ಞೆ ಗಳು ಘನವ್ಯ ಕ್ತಿಯನ್ನು ಆಯ್ಕೆ ಮಾಡಿರುವುದಂತೂ ಸತ್ಯದ ನೆತ್ತಿಯ ಮೇಲ ಣ ಮಕುಟಕ್ಕೆ ಕುಂದಣವನಿಟ್ಟಂತೆ!!! ಇರಲಿ, ಎಲ್ಲ ವಿಡಂಬನೆ ಯಾಚೆಗೆ ರೇವಣಸಿದ್ಧರ ಮೂಲ ಕುರುಬ ರಲ್ಲ ಎಂಬ ಐತಿಹಾಸಿಕ ಕಾರಣಕ್ಕಾಗಿಯೇ ಶೈವ ಪರಂಪರೆಯ ಕುರುಬರು ಕಡೆಗೆ ವೈಷ್ಣವ ಕನಕರನ್ನು ತಮ್ಮ ಐಕಾನ್ ಆಗಿ ಆಯ್ದು ಕೊಂಡಿರುವರು. ಆದರೆ ಕನಕರು ಕುರುಬರೇ? ಸಂಶೋಧಕ ಬಿ.ರಾಜಶೇಖರಪ್ಪನವರು, ಕನಕದಾಸರು ಕುರುಬರಲ್ಲ, ಬೇಡರು ಎಂಬುದು ಉಡುಪಿ ಮಠದ ತಾಳೆಗರಿಯಲ್ಲಿರುವ ಉಲ್ಲೇಖದಿಂದ ಹಾಗೂ ಕಾಗಿನೆಲೆಯ ಬಳಿಯೇ ಇರುವ ಅವರ ವಂಶದವರು ಎನ್ನುವ ಬೇಡ ಕುಲಮೂಲಗಳಿಂದ ಈಗಾಗಲೇ ತಿಳಿದ ಸಂಗತಿ.
ಕನಕದಾಸರು ಬೇಡರಾಗಿದ್ದುದರಿಂದ ಅವರ ಬಾಲ್ಯಕಾಲದ ಅವರ ಮೇಲೆ ವೈಷ್ಣವ ಪ್ರಭಾವವಾಗಿದ್ದು, ಅವರು ವಿಷ್ಣುಭಕ್ತರಾದರು. ಅವರು ಸಾಂಕೇತಿಕವಾಗಿ ರಚಿಸಿದ ‘ನಾವು ಕುರುಬರು’ ಎಂಬ ಕೀರ್ತನೆಯನ್ನು ಇಟ್ಟುಕೊಂಡು, 20ನೇ ಶತಮಾನದ ರಂಭದಿಂದೀಚೆಗೆ, ಕನಕದಾಸರು ಕುರುಬರೆಂದು ಹೇಳುತ್ತಾ ಬಂದು, ಈಗ ಅದನ್ನೇ ಒಪ್ಪಿಕೊಂಡು, ಕುರುಬರು ಕನಕರನ್ನು ಅಪ್ಪಿಕೊಂಡಿದ್ದಾರೆ. ಕುಲಮೂಲಗಳ ವಿಷಯ ಬಂದಾಗ, ರೇವಣಸಿದ್ಧರ ಬಗ್ಗೆ ಹೇಳುತ್ತಾ ಗೊಂದಲ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ನಾನು, ಡಾ.ಎಂ.ಎಂ. ಕಲಬುರ್ಗಿ ಹಾಗೂ ದೇವೇಂದ್ರ ಮಾಧವ ಅವರು ಬರೆದಿದ್ದೇವೆ. ಸಾಧಕರು ಯಾವ ಜಾತಿಯಲ್ಲಿ ಹುಟ್ಟಿದರೂ ಸಾಧಕರೇ.
ಆದರೆ, ಈಗ ಎದ್ದಿರುವ ಪ್ರಶ್ನೆಗಳಿಂದ ಗೊಂದಲ ಉಂಟಾಗಬಾರದು. ವಯಸ್ಸಾ ದವರು ತಮ್ಮ ರೇವಣಸಿದ್ಧ ಪರಂಪರೆಯನ್ನೂ ಆಚರಣೆಗಳನ್ನೂ ಹೇಳುವುದು, ಆಧುನಿಕರು ಕನಕದಾಸರ ಬಗ್ಗೆ ಹೇಳುವುದು- ಇದರಿಂದ ಗೊಂದಲ ಉಂಟಾಗುತ್ತಿದೆ.
ಕುರುಬರು ಮೊದಲೇ ಶೈವಾರಾಧಕರಾಗಿದ್ದರಿಂದ ಮತ್ತು ರೇವಣಸಿದ್ಧರನ್ನು ಲಿಂಗಾಯತ ರು ಕೂಡಾ ತಮ್ಮ ಪೂಜ್ಯರಬ್ಬರೆಂದು ಒಪ್ಪಿಕೊಂಡಿದ್ದರಿಂದ ಸಹಜವಾಗಿಯೇ ಲಿಂಗಾಯತ ಧರ್ಮದ ಪ್ರಭಾವ ಕುರುಬರ ಮೇಲೆ ಆಗಿದೆ. ಪ್ರಾದೇಶಿಕವಾಗಿ ಭಿನ್ನ ಪ್ರಭಾವಗಳೂ ಇರಬಹುದು. ಕನಕದಾಸರು ವೈಷ್ಣವ ಸಂಪ್ರ ದಾಯಕ್ಕೆ ಸೇರಿದ ಬೇಡರೆಂಬುದನ್ನು ಇನ್ನಾದರೂ ಒಪ್ಪಿಕೊಂಡು, ಗೊಂದಲಗಳಿಗೆ ಪೂರ್ಣವಿರಾಮ ಹಾಕುವುದು ಒಳ್ಳೆಯದು ಎಂದಿದ್ದಾರೆ.
ಇದೇ ರೀತಿ ಸಂಶೋಧಕ ಎಂ.ಎಂ. ಕಲಬುರ್ಗಿಯವರು, ಉಡುಪಿ ಮಠದಲ್ಲಿರುವ ತಾಳೆಗರಿ ಯನ್ನು ಸಾಕ್ಷ್ಯ ಮಾಡಿ ‘ಈತ ಬೆಡನಾದ ಕಾರಣ ಬ್ರಾಹ್ಮಣರು ವಳಗೆ ಪೊಗಲಿಕ್ಕೆ ಬಿಡದೆ’ ಎಂದು ದಾಖಲಾಗಿದೆ. ಪ್ರಾಚೀನಕಾಲದಲ್ಲಿ ಲಿಖಿಸು ವಾಗ ದೀರ್ಘವನ್ನು ಪ್ರಸ್ವವಾಗಿಯೇ ಬರೆಯುತ್ತಿದ್ದರಾಗಿ, ಇಲ್ಲಿಯ ‘ಬೆಡ’ ಎಂಬುದರ ನಿಜಪಾಠ ‘ಬೇಡ’. ಈ ಬೆಡ ಎಂಬುದನ್ನು ಜಡ ಎಂದು ತಪ್ಪಾಗಿ ಓದಿದ್ದರು. ಆದರೆ, 35 ವರ್ಷಗಳಷ್ಟು ಹಿಂದೆಯೇ ಇದನ್ನು ತಿದ್ದುಪಡಿ ಮಾಡಿ ‘ಬೇಡ’ ಎಂದು ಓದಿ, ಪ್ರಜಾವಾಣಿ ದಿನಪತ್ರಿಕೆಯಲ್ಲಿ (18.4.1969) ಸತ್ಯನಾರಾಯಣ (ಮೈಸೂರು) ಅವರು ಒಂದು ಲೇಖನವನ್ನು ಬರೆದಿದ್ದರು.
ಕಾಗಿನೆಲೆ ನೆರೆಯ ಹುಲ್ಲೂರ ಗ್ರಾಮದಲ್ಲಿ ಬೇಡ ಜನಾಂಗದ ಕುಟುಂಬಗಳಿದ್ದು, ತಾವು ಕನಕದಾಸನ ವಂಶಸ್ಥರೆಂದು ಹೇಳಿಕೊಳ್ಳುವ ವದಂತಿ ಇನ್ನೂ ಜೀವಂತ ವಾಗಿದೆ. ಇಷ್ಟೆಲ್ಲ ಆಧಾರಗಳಿದ್ದರೂ ಕನಕದಾಸನು ಕುರುಬ ನೆಂದು ಭಾವಿಸಿದುದು ಅನ್ಯಥಾಜ್ಞಾನವೇ ಸರಿ. ಈ ವಾದ ಹುಟ್ಟು ಹಾಕಿದವರು ವಿದ್ವಾಂಸರು.
ಇವರು ಒಮ್ಮೆ ಬೇಡನೆಂದೂ, ಇನ್ನೊಮ್ಮೆ ಕುರುಬನೆಂದೂ ಹೊಣೆಗೇಡಿ ಲೇಖನ ಬರೆಯು ತ್ತ ಹೋದರು, ನಾವು ಕುರುಬರು ನಮ್ಮ ದೇವರು ಬೀರಯ್ಯ ಎಂಬ ಕೀರ್ತನೆಯನ್ನು ಕೆಲವರು ರೂಪಕದಲ್ಲಿ ಬಿಟ್ಟು ವಾಚ್ಯರ್ಥದಲ್ಲಿ ಸ್ವೀಕರಿಸಿದರು. ನಿಜ ಹೇಳುವುದಾದರೆ ಈ ಕೀರ್ತನೆ ಕೊಡೆಕಲ್ಲ ಬಸವಣ್ಣನ ಮಗ ರಾಚಪ್ಪಯ್ಯನದಾಗಿದೆ. (ಈ ರಾಚಪ್ಪಯ್ಯನ ತಮ್ಮ ಸಂಗಪ್ಪಯ್ಯನ ಸಮಾಧಿ ಕಾಗಿನೆಲೆಯಲ್ಲಿದೆ). ಇವೆಲ್ಲ ಕಾರಣಗಳಿಂದಾಗಿ ಸರಳವಾಗಿದ್ದ ವಿಷಯವೊಂದು ಸಮಸ್ಯೆಯ ಕವಲೊಡೆಯಿತು.
ಮೊದ ಮೊದಲು ತೀರ ಸಾಮಾನ್ಯವೆಂಬಂತೆ ಈ ಜಾತಿವಿಚಾರ ವಿದ್ವಾಂಸರ ಮಟ್ಟದಲ್ಲಿ ವ್ಯವಹರಿಸುತ್ತಿತು. ಆದರೆ, ಕುರುಬ ಸಮಾಜ ದವರು ಏಕತೆಗಾಗಿ ಸಂಘಟನೆಯನ್ನು ಬಯಸಿ, ತಮಗಾಗಿ ಇತಿಹಾಸದಲ್ಲಿ ಒಬ್ಬ ಸಾಂಸ್ಕೃತಿಕ ಮಹಾಪುರುಷನನ್ನು ಹುಡುಕ ತೊಡಗಿದ ಪ್ರಸಂಗದಲ್ಲಿ, ವಿದ್ವಾಂಸರ ಅಪಸ್ವರ ಅವರ ಗಮನ ಸೆಳೆಯಿತು. ಈ ಸಂಘಟನೆಯ ನೇತೃತ್ವವನ್ನು ರಾಜಕೀಯ ವ್ಯಕ್ತಿಗಳು ವಹಿಸಿದ್ದರಿಂದ ಕನಕದಾಸರು ಕುರುಬನೆಂಬುದಕ್ಕೆ ಒಮ್ಮೆಲೇ ರೆಕ್ಕೆ ಪುಕ್ಕ ಬಂದು, ಪ್ರಚಾರ ಪಡೆಯತೊಡಗಿತು.
ಇತ್ತೀಚೆಗೆ ಕಾಗಿನೆಲೆಯಲ್ಲಿ ಕುರುಬರು ಕನಕಪೀಠ ಸ್ಥಾಪಿಸುತ್ತಲೇ, ಕುರುಬ ಸಮಾಜದ ಸಾಹಿತಿಗಳೂ ಕನಕದಾಸನಿಗೆ ಕುರು ಬನೆಂಬ ಬಣ್ಣ ಲೇಪಿಸುತ್ತ ನಡೆದರು. ಸಭೆ-ಸಮಾರಂಭ ಗಳಲ್ಲಿ ಮಾತನಾಡಿ, ಗ್ರಾಮ- ನಗರಗಳಲ್ಲಿ ಸ್ಮಾರಕ ಸ್ಥಾಪಿಸಿ ಕುರುಬ ನೆಂಬ ವಾದವನ್ನು ವೇಗದಿಂದ ಪ್ರಚಾರ ಮಾಡಿದರು.
ಸರಕಾರವೂ ಬಹುಜನ ಸಮಾಜವಾದ ಕುರುಬರ ಸಂಪ್ರೀತಿಗಾಗಿ ಕೀರ್ತನೆ, ಸ್ಮರಣಗ್ರಂ ಥಗಳ ಪ್ರಕಟನೆಯಿಂದ ಈ ವಿಷಯಕ್ಕೆ ರಾಜ(ಕಾರಣ) ಮುದ್ರೆ ಯೊತ್ತಿದರು. ವಿಶ್ವವಿದ್ಯಾಲಯ ಗಳಲ್ಲಿ ಕನಕಪೀಠ ಸ್ಥಾಪಿಸುವ ಮೂಲಕ ಈ ವಾದಕ್ಕೆ ವಿದ್ವನ್ಮಾನ್ಯತೆ ಸಿಗುವಂತೆ ಮಾಡಿ ದರು. ಹೀಗೆ ಪ್ರಚಾರ ಪಡೆಯುತ್ತಿದ್ದಂತೆಯೇ ಕನಕದಾಸನು ಕುರುಬನಲ್ಲ ಎಂಬ ಸಣ್ಣಪುಟ್ಟ ಲೇಖನಗಳು ಪ್ರಕಟವಾದವು.
ಇವುಗಳಲ್ಲಿ ದೇವೇಂದ್ರ ಮಾಧವನರ ಅವರು ಬರೆದ ‘ಕನಕದಾಸರು ಬೇಡಜನಾಂಗದವರು’ ಎಂಬ ಪುಸ್ತಕ, ಪ್ರೊ.ಬಿ.ರಾಜಶೇಖರಪ್ಪ ಅವರ ‘ಕನಕದಾಸರು: ಹೊಸ ಚಾರಿತ್ರಿಕ ಸಂಗತಿ ಗಳು’ ಲೇಖನ ಮುಖ್ಯವಾದುವು (ಇತಿಹಾಸ ಕಥನ, ಪು. 231). ಇತ್ತೀಚೆಗೆ ಪಂಡಿತರೊಬ್ಬರು ಕನಕದಾಸನು ಪಂಚಾಳಕುಲದ ವನೆಂದೂ ಬರೆದಿದ್ದಾರೆ (ಕನಕದಾಸಕುಲ- ಸಾಹಿತ್ಯ ಸಂಚಯ (ಡಾ. ರಾಜಶೇಖರ ಬಡಿಗೇರ)ಪು. 22) ಎಂದು ತಮ್ಮ ಮಾರ್ಗ ಸಂಪುಟ ೪ರಲ್ಲಿ ತಿಳಿಸಿದ್ದಾರೆ.
ಸಂಶೋಧಕ ಬಿಜ್ಜರಗಿಯವರು ತಮ್ಮ, ದಾರ್ಶನಿಕ ಕವಿ ಕನಕದಾಸರು ಕೃತಿಯಲ್ಲಿ ಕನಕದಾಸರ ಕುರಿತು, ವಾಯುವ್ಯ ಭಾರತದ ‘ಭೇಢ’ (ಕುರಿ) ಪದವೇ ಇಂದಿನ ಬೇಡ. ಬೇಡರ ಕುಲಕಸಬು ಕುರಿಗಾರಿಕೆಯೇ ಹೊರತು ಬೇಟೆಗಾರಿಕೆಯಲ್ಲ. ಕನಕದಾಸರ ಪೂರ್ವಜರು ಸಂಚಾರಿ ಕುರಿ(ಭೇಢ) ಪಾಲಕರು ಎನ್ನುತ್ತಾರೆ. ಅಂದರೆ ಇವರೂ ಕನಕದಾಸರು ಬೇಡರು ಎಂದೇ ಒಪ್ಪುತ್ತಾರೆ. ಆದರೆ ವಿಚಿತ್ರ ಎನ್ನುವಂತೆ ಉತ್ತರ ಭಾರತದಲ್ಲಿ ಭೇಡ್ ಬಕ್ರಿ ಎನ್ನುವ ಕುರಿ ಆಡು ಎನ್ನುವ ಪದಗಳನ್ನು ಹಿಡಿದು ಬೇಡರು ಕುರುಬರು ಎಂದು ಷರಾ ಬರೆಯು ತ್ತಾರೆ! ಬಹುಶಃ ಇವರ ಇದೇ ತರ್ಕದಲ್ಲಿ ಕುರುಕ್ಷೇತ್ರ ಎನ್ನುವುದು ಕುರುಬರ ಕ್ಷೇತ್ರ. ಅದು ಆಡುಮಾತಿನಲ್ಲಿ ಕುರುಕ್ಷೇತ್ರ ಎಂದಾಗಿದೆ. ಹಾಗಾಗಿಯೇ ಪಾಂಡವರು ಕೌರವರು ಕುರುಬ ರಾಗಿದ್ದರು ಎಂದಿರಬಹುದೇನೋ ಎಂಬ ಅನುಮಾನ ಮೂಡುತ್ತದೆ.
ಇನ್ನು ಎಚ್.ಎಸ್.ಶಿವಪ್ರಕಾಶ್ ಅವರು ಮಂಗಳೂರು ವಿಶ್ವವಿದ್ಯಾಲಯದ ಕನಕ ಪೀಠದ ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ, ರಾಜ್ಯದಲ್ಲಿ ಕನಕ ನಮ್ಮವನು ಎಂದು ಎರಡು ಜಾತಿಯವರು ಕಿತ್ತಾಡಿದ್ದು ಹಳೆ ಕತೆ. ಕನಕ ಬೇಡನೊ, ಕುರುಬನೊ ಎಂಬುದು ಮುಖ್ಯವಲ್ಲ.
ಕನಕರಿಗೆ ರಾಮಾನುಜ ಮತ್ತು ಮಧ್ವರಲ್ಲಿ ಸಾಮರಸ್ಯ ಇತ್ತು. ಆದರೆ, ನಿರ್ದಿಷ್ಟ ಗುರು ಪರಂಪರೆ ಇರಲಿಲ್ಲ. ಮೇಲು ಜಾತಿಯವರು ಕೆಳ ಜಾತಿಯವರನ್ನು ಎಲ್ಲಿ ನಿರ್ಬಂಧಿಸಿದರು ಎಂಬುದಕ್ಕೆ ಇಂತಹ ಬಹಳಷ್ಟು ನಿದರ್ಶನಗಳಿವೆ. ಕನಕರು ಜಾತಿಯನ್ನು ನಿರಾಕರಿಸಿ ದರೂ ಭಾಗವತ ಗೀತೆಗಳ ಬಗ್ಗೆ ಅವರಿಗೆ ಆಸಕ್ತಿ ಇತ್ತು. ಇತರೆ ದಾಸರಂತೆ ಕನಕರಿಗೆ ಗುರುವಿನ ಬಗ್ಗೆ ಸ್ಪಷ್ಟತೆ ಇರಲಿಲ್ಲ.
ಪಂಥಗಳನ್ನು ಸ್ವೀಕರಿಸುವಲ್ಲಿ ಕನಕದಾಸರು ಸಂದಿಗ್ಧತೆ ಎದುರಿಸುತ್ತಾರೆ. ಶಿವ, ವಿಷ್ಣುವಿನ ಬಗ್ಗೆ ಕನಕರೂ ಬರೆಯುತ್ತಾರೆ. ಆದರೆ, ಗ್ರಾಮೀಣ ದೇವತೆಗಳ ಬಗ್ಗೆ ವಿಡಂಬನೆ ಮಾಡು ತ್ತಾರೆ ಎಂದಿದ್ದಾರೆ. ಈ ಎಲ್ಲ ವಾದಗಳನ್ನು ಗಮನಿಸಿ ನೋಡಿದಾಗ ಕನಕರು ಗ್ರಾಮೀಣ ದೇವತೆಗಳನ್ನು ವಿಡಂಬಿಸಿ ರಚಿಸಿದ, ನಾವು ಕುರುಬರು, ನಮ್ಮ ದೇವರು ಬೀರಯ್ಯಕಾವ ನಮ್ಮಜ್ಜ....ಕಾಗಿನೆಲೆಯಾದಿಕೇಶವನ ಮನವೊಲಿಸಿ ಭಜಿಸದ ಮನುಜ ಹುಚ್ಚು ಕುರುಬ.... ಎಂಬ ಕೀರ್ತನೆಯ ಕಾರಣ ಅವರು ಕುರುಬರೇ ಆಗಿಹೋದರು ಎನಿಸುತ್ತದೆ!
ಇದೇ ರೀತಿ, ದಾಸ ದಾಸರ ಮನೆಯ ದಾಸಿಯರ ಮಗ ನಾನುಸಾಸಿರ ನಾಮದೊಡೆಯ ರಂಗಯ್ಯನ ಮನೆಯ ಪಶಂಕುದಾಸರ ಮನೆಯ ಮಂಕುದಾಸನು ನಾನು ಮಂಕುದಾಸನು ನಾನು ಮರುಳುದಾಸ ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ ಬಿಂಕದಿ ಬಾಗಿಲ ಕಾಯ್ವ ಬಡ ದಾಸ ನಾನಯ್ಯ. ಕಾಳಿದಾಸರ ಮನೆಯ ಕೀಳುದಾಸನು ನಾನುಆಳುದಾಸನು ನಾನು ಮೂಳದಾಸ-ಲಾಕ್ಷ ಸಖ ನಿನ್ನ ಭಜಿಪ ಭಕ್ತರ ಮನೆಯಆಳಿನಾಳಿನ ದಾಸ ಅಡಿದಾಸ ನಾನಯ್ಯ. ಹಲವು ದಾಸರ ಮನೆಯ ಹೊಲೆಯ ದಾಸನು ನಾನುಕುಲವಿಲ್ಲದ ದಾಸ ಕುರುಬ ದಾಸಛಲದಿ ನಿನ್ನ ಭಜಿಪರ ಮನೆಯ ಮಾದಿಗ ದಾಸಸಲೆ ಮುಕ್ತಿ ಪಾಲಿಸೆ ನ್ನೊಡೆಯ ಕೇಶವನೆ ಎಂದಂತೆ ಶಂಖು ದಾಸ, ಹೊಲೆಯ ದಾಸ, ಅಥವಾ ನಾಮಧಾರಿ ಒಕ್ಕಲಿಗ ದಾಸ, ಪಿಳ್ಳಂಗೋವಿ ಊದುವ ಗೊಲ್ಲರ ದಾಸ ಮುಂತಾದುದಕ್ಕಿಂತ ಕುಲವಿಲ್ಲದ ದಾಸಶ್ರೇಷ್ಠರನ್ನಾಗಿ ಮಾಡದೆ ಕುಲಕುಲಕುಲವೆಂದು ಬಡಿದಾಡಿ ಕುರುಬರಾಗಿಸಿದ್ದು ಜಾತಿ ಐಕಾನಿನ ಉನ್ಮಾದವೆನಿಸುತ್ತದೆ.
ಬಿಜ್ಜರಗಿಯವರು ಆವಾಹಿಸುವ ಪ್ರೇತಾತ್ಮಗಳ ಚೀರಾಟವೂ ಮತ್ತು ಇಂದಿನ ಅಸ್ಮಿತೆ ಪೀಡಿತರ ಐಕಾನಿ ಸಂಶೋಧನೆಗಳೂ ಕರುನಾಡಿನ ಸಾಂಸ್ಕೃತಿಕ ಸಂಶೋಧನೆಗಳ ಕೃತಕ ಬುದ್ಧಿಮ ತ್ತೆಯು ಬರಲಿರುವ ಕೃತಕ ಬುದ್ಧಿಮತ್ತೆಯ ಕ್ರಾಂತಿಯನ್ನು ಮೀರಿಸಿ ನಾವೇ ಮೊದಲು ಎಂದು ಸವಾಲೊಡ್ಡುತ್ತಿದೆಯೇನೋ ಎಂದೆನಿಸುತ್ತಿದೆ!
ಸತ್ಯಶರಣರ ಗೊತ್ತು ಹೇಳಿ ನಡೆವ ಮಿಥ್ಯ ಜನರುಗಳನೇನೆಂಬೆನಯ್ಯಾ ನಡೆಯೊಂದು ಕಡೆಗೆ ನುಡಿಯೊಂದು ಕಡೆಗೆ ನೋಟವೊಂದು ಕಡೆಗೆ ಮಾಟವೊಂದು ಕಡೆಗೆ ವಂಚನೆಯ ಒಳಗಿಟ್ಟು ಮಿಂಚುತ ಮಾತನಾಡುತ್ತ ಕಾಗೆಯ ಬಳಗದಂತೆ ಕೂಡಿ ಕೂಗಿ ಕಡೆಗೆ ಹೋಗಿ ಬೀಳುವ ಕಪಟಗಳ್ಳರಿಗೆತ್ತಣ ಶರಣಸ್ಥಲವಯ್ಯಾ ಗುರುನಿರಂಜನ ಚನ್ನಬಸವಲಿಂಗಾ. (ವಿ.ಸೂ. ಈ ಲೇಖನದಲ್ಲಿ ವಾಸ್ತವ ಪರಿಸ್ಥಿತಿಯ ಸತ್ಯವನ್ನು ಅತ್ಯಂತ ವ್ಯಂಗ್ಯ ವಿಡಂಬನೆ ಯಿಂದ ಹೇಳಲಾಗಿದೆ. ಸೌಮ್ಯ ಸುಸಂಸ್ಕೃತರಿಗೆ ಇದು ಅವಹೇಳನ ವೆನಿಸಲೂಬಹುದು. ಆದರೆ, ಇದು ಇಂದಿನ ಸಾಕ್ಷಿಪ್ರಜ್ಞೆಗಳು ಹೇಳುವ ದುರಿತ ಕಾಲ! ಇಂತಹ ದುರಿತ ಕಾಲದಲ್ಲಿ ಇಂತಹ ದುರಿತ ಸಂಗತಿಗಳನ್ನು ಇಂತಹ ದುರಿತ ಭಾಷೆಯಲ್ಲಿ ಹೇಳಬೇಕಾದ ಅನಿವಾರ್ಯ ತೆಯ ಜವಾಬ್ದಾರಿ ನನ್ನ ಹೆಗಲೇರಿದೆ. ಅದನ್ನೇ ಓದುಗರ ಮೇಲೆ ವರ್ಗಾಯಿಸುತ್ತಿದ್ದೇನಷ್ಟೇ.)