Roopa Gururaj Column: ಬುದ್ಧನಾಗಬೇಕಾದರೆ ಏನು ಮಾಡಬೇಕು ?
ಮನುಷ್ಯ ಬದುಕಿಗೆ ಬೇಕಾದ ಪ್ರೀತಿ ಪ್ರೇಮ, ಸಹನೆ,ಕರುಣೆ, ಮಮತೆ, ಪ್ರಾಮಾಣಿಕತೆ, ಶಿಸ್ತು ಎಲ್ಲವೂ ನಮ್ಮೊಳಗೆ ಇರುತ್ತದೆ. ಎಂದಿಗೆ ನಾವು ಅದನ್ನು ಕಂಡುಕೊಂಡು ಸಾಕ್ಷಾತ್ಕಾರಗೊಳಿಸಿಕೊಳ್ಳುತ್ತೇವೆಯೋ ಅಂದಿಗೆ ನಾವು ಮತ್ತು ಉತ್ತಮ ಸ್ಥರಕ್ಕೆ ತಲುಪುತ್ತೇವೆ. ಆದ್ದರಿಂದ ಜೀವನದಲ್ಲಿ ನಾವು ಯಾರ್ಯಾರೋ ಆಗುವ ಪ್ರಯತ್ನದಲ್ಲಿ ನಮ್ಮನ್ನೇ ಕಳೆದು ಕೊಳ್ಳುವ ಬದಲು, ನಾವು ನಾವಾಗುವ ಪ್ರಯತ್ನ ಮಾಡಬೇಕು.


ಒಂದೊಳ್ಳೆ ಮಾತು
rgururaj628@gmail.com
ಒಮ್ಮೆ ಒಬ್ಬ ಮನುಷ್ಯ ಝೆನ್ ಮಾಸ್ಟರ್ ಹತ್ತಿರ ಬಂದು ಕೇಳಿ ಕೊಳ್ಳುತ್ತಾನೆ, “ಬುದ್ಧ ನಾಗಬೇಕಾದರೆ ನಾನು ಏನು ಮಾಡಬೇಕು?" ಇಂತಹ ಮಾತೊಂದನ್ನ ಕೇಳುತ್ತಿದ್ದಂತೆಯೇ ಕೆಂಡಾ ಮಂಡಲನಾದ ಝೆನ್ ಮಾಸ್ಟರ್, ಆ ಮನುಷ್ಯನ ಕಪಾಳಕ್ಕೆ ಜೋರಾಗಿ ಬಾರಿಸುತ್ತಾನೆ.
ಮಾಸ್ಟರ್‌ನ ಅನಿರೀಕ್ಷಿತ ವರ್ತನೆಯಿಂದ ಅಪ್ರತಿಭನಾದ ಆ ಮನುಷ್ಯ, ಮಾಸ್ಟರ್‌ನ ಹಿರಿಯ ಶಿಷ್ಯನ ಬಳಿ ಹೋಗಿ ಪ್ರಶ್ನೆ ಮಾಡುತ್ತಾನೆ, “ಎಂತಹ ಮನುಷ್ಯ ಇವನು ? ನಾನೊಂದು ಸರಳ ಪ್ರಶ್ನೆ ಕೇಳಿದೆ.
ಅವನು ಈ ಪರಿ ಸಿಟ್ಟಾಗುವ ಕಾರಣವೇನಿತ್ತು? ಅವನು ಹೊಡೆತಕ್ಕೆ ನನ್ನ ಕೆನ್ನೆ ಇನ್ನೂ ಉರಿಯು ತ್ತಿದೆ. ಬುದ್ಧ ಆಗುವುದು ಹೇಗೆ ಎಂದು ಕೇಳುವುದು ತಪ್ಪಾ? ಇಂಥ ಕ್ರೂರಿ, ಹಿಂಸಾತ್ಮಕ ಮನುಷ್ಯ ಯಾವ ರೀತಿಯ ಝೆನ್ ಮಾಸ್ಟರ್ ?" ಆ ಮನುಷ್ಯನ ಮಾತು ಕೇಳಿ ಮಾಸ್ಟರ್ ನ ಹಿರಿಯ ಶಿಷ್ಯನಿಗೆ ನಗು ಮತ್ತು ಸಿಟ್ಟು ಒಟ್ಟೊಟ್ಟಿಗೆ. “ಮಾಸ್ಟರ್ ನ ಸಹಾನುಭೂತಿ, ಅಂತಃಕರಣ ನಿನಗೆ ಅರ್ಥ ಆಗುತ್ತಿಲ್ಲ.
ನಿನ್ನ ಮೇಲಿನ ಕರುಣೆಯಿಂದಲೇ ಮಾಸ್ಟರ್ ಅಷ್ಟು ಜೋರಾಗಿ ನಿನಗೆ ಹೊಡೆದದ್ದು. ಮಾಸ್ಟರ್‌ಗೆ ತೊಂಭತ್ತು ವರ್ಷ ವಯಸ್ಸು, ನೀನಿನ್ನೂ ಯುವಕ, ಅವನು ನಿನ್ನ ಕಪಾಳಕ್ಕೆ ಹೊಡೆದಾಗ ನಿನ್ನ ಕೆನ್ನೆಗಿಂತ ಹೆಚ್ಚು ಅವನ ಕೈಗಳಿಗೆ ನೋವಾಗಿದೆ. ಮೂರ್ಖ, ಮಾಸ್ಟರ್‌ನ ಅಂತಃಕರಣವನ್ನ ಅರ್ಥ ಮಾಡಿಕೋ, ಇಲ್ಲಿಂದ ವಾಪಸ್ಸಾಗು" ಆ ಯುವಕ ಅಲ್ಲಿಂದ ಜಾಗ ಬಿಟ್ಟು ಕದಲಲಿಲ್ಲ. ಮಾಸ್ಟರ್‌ನ ಹಿರಿಯ ಶಿಷ್ಯನನ್ನು ಮತ್ತೆ ಪ್ರಶ್ನೆ ಮಾಡಿದ.
ಇದನ್ನೂ ಓದಿ: Roopa Gururaj Column: ಕೃಷ್ಣನಿಂದ ಪೂಜಿಸಲ್ಪಡುವ ಭಕ್ತರ ಪಾದ ಧೂಳಿ
“ಆದರೆ ಮಾಸ್ಟರ್ ನ ಇಂಥ ಕ್ರೂರ ವರ್ತನೆಯಲ್ಲಿ ನನಗೆ ಯಾವ ಸಂದೇಶವಿದೆ?" ಮಾಸ್ಟರ್‌ನ ಹಿರಿಯ ಶಿಷ್ಯ ಮತ್ತೆ ತನ್ನ ಮಾತು ಮುಂದುವರೆಸಿದ, “ಮಾಸ್ಟರ್ ನ ಸಂದೇಶ ತುಂಬ ಸರಳ. ಸ್ವತಃ ಬುದ್ಧ ನಿನ್ನ ಬಳಿ ಬಂದು, ಬುದ್ಧ ಆಗುವುದು ಹೇಗೆ ಎಂದು ಪ್ರಶ್ನೆ ಮಾಡಿದರೆ ನಿನಗೆ ಸಿಟ್ಟು ಬರುತ್ತಿರಲಿಲ್ಲವೆ? ನೀನು ಅವನ ಕಪಾಳಕ್ಕೆ ಹೊಡೆದು ನೀನೇ ಬುದ್ಧ ಎಂದು ಅವನಿಗೆ ನೀನು ನೆನಪಿಸುತ್ತಿರಲಿಲ್ಲವೆ? ಮಾಸ್ಟರ್ ನಿನ್ನ ಜೊತೆ ಮಾಡಿದ್ದೂ ಇದನ್ನೇ.
ಗುಲಾಬಿ ತಾನು ಗುಲಾಬಿಯಾಗುವ ಪ್ರಯತ್ನ ಮಾಡಿದರೆ, ಅದರಷ್ಟು ದುಃಖವನ್ನು ಬೇರೆ ಯಾವುದೂ ಅನುಭವಿಸುವುದಿಲ್ಲ. ಅದು ಈಗಾಗಲೇ ಗುಲಾಬಿ, ಅದು ತನ್ನ ಸಹಜ ಸ್ವಭಾವ ಮರೆತಿದೆಯಷ್ಟೇ. ನೆನಪು ಮಾಡಿಕೊಳ್ಳಬೇಕಾದ್ದಷ್ಟೇ ಈಗ ಬೇಕಾಗಿರುವುದು."
ಝೆನ್ ಪ್ರಕಾರ ಮನುಷ್ಯ ವಿಸ್ಮೃತಿಯಲ್ಲಿದ್ದಾನೆ. ಅವನು ತಾನು ಯಾರು ಎನ್ನುವುದನ್ನ ಮರೆತು ಬಿಟ್ಟಿ ದ್ದಾನೆ ಅಷ್ಟೇ. ನೆನಪು ಮಾಡಿಕೊಳ್ಳಬೇಕಾದ್ದಷ್ಟೇ ಈಗಿನ ಅವಶ್ಯಕತೆ. ಈ ವಿಚಾರವನ್ನು ನಾವೆಲ್ಲರೂ ಮತ್ತಷ್ಟು ಆಳವಾಗಿ ಅರ್ಥ ಮಾಡಿಕೊಂಡರೆ ಬಹುಷ್ಯ ನಮಗೆ ಮನುಷ್ಯ ಬದುಕು ಮತ್ತು ಅದರ ಉದ್ದೇಶ ಚೆನ್ನಾಗಿ ಅರ್ಥವಾಗುತ್ತದೆ.
ಸ್ವಭಾವತ: ಮನುಷ್ಯರಾಗಿ ಹುಟ್ಟಿದ ನಾವೆಲ್ಲರೂ ಮಾನವೀಯತೆಯ ಎಲ್ಲಾ ಗುಣಗಳನ್ನು ಹೊಂದಿರುತ್ತವೆ. ಆದರೆ ಅನೇಕ ಸಾಂದರ್ಭಿಕ ಕಾರಣಗಳಿಂದ ಅವು ಮಸುಕಾಗಿರುತ್ತವೆ. ನಮ್ಮ ಜೀವನದ ಗುರಿ ಎಂದರೆ ನಾವು ಯಾರು ಎನ್ನುವುದನ್ನು, ನಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವುದು.
ಮನುಷ್ಯ ಬದುಕಿಗೆ ಬೇಕಾದ ಪ್ರೀತಿ ಪ್ರೇಮ, ಸಹನೆ,ಕರುಣೆ, ಮಮತೆ, ಪ್ರಾಮಾಣಿಕತೆ, ಶಿಸ್ತು ಎಲ್ಲವೂ ನಮ್ಮೊಳಗೆ ಇರುತ್ತದೆ. ಎಂದಿಗೆ ನಾವು ಅದನ್ನು ಕಂಡುಕೊಂಡು ಸಾಕ್ಷಾತ್ಕಾರಗೊಳಿಸಿಕೊಳ್ಳುತ್ತೇವೆ ಯೋ ಅಂದಿಗೆ ನಾವು ಮತ್ತು ಉತ್ತಮ ಸ್ಥರಕ್ಕೆ ತಲುಪುತ್ತೇವೆ. ಆದ್ದರಿಂದ ಜೀವನದಲ್ಲಿ ನಾವು ಯಾರ್ಯಾರೋ ಆಗುವ ಪ್ರಯತ್ನದಲ್ಲಿ ನಮ್ಮನ್ನೇ ಕಳೆದುಕೊಳ್ಳುವ ಬದಲು, ನಾವು ನಾವಾಗುವ ಪ್ರಯತ್ನ ಮಾಡಬೇಕು.
ನಮ್ಮೊಳಗೆ ಇರುವ ಮೂಲ ಗುಣಗಳನ್ನ ಎಂದು ಗುರುತಿಸಿ ಬದುಕಲು ಆರಂಭಿಸುತ್ತೇವೋ ಅಂದಿಗೆ ಸಾರ್ಥಕ ಬದುಕು ನಮ್ಮ ದಾಗುತ್ತದೆ. ನಮ್ಮೊಳಗೆ ಇರುವ ಬುದ್ಧನ ಪರಿಚಯವಾದ ಬೇಕಿದೆ ನಮಗೆ ಹೊಸದಾಗಿ.